ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Unforgettable 2020; ವಿಶ್ವವನ್ನು ನಲುಗಿಸಿದ ಪ್ರಾಕೃತಿಕ ವಿಕೋಪಗಳು

|
Google Oneindia Kannada News

ಕೊರೊನಾ ವೈರಸ್ ಆತಂಕದಲ್ಲೇ ಆರಂಭವಾದ 2020ರ ವರ್ಷವನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಅದರ ಪರಿಣಾಮ ಇಡೀ ವಿಶ್ವವನ್ನು ಆವರಿಸಿದೆ. ಈ ನಡುವೆ 2020ರ ವರ್ಷ ಎಷ್ಟೋ ಪ್ರಾಕೃತಿಕ ವಿಕೋಪಗಳನ್ನೂ ಕಂಡಿದೆ. ಅದೆಷ್ಟೋ ಜನರ ನೆಮ್ಮದಿ ಕಸಿದಿದೆ. ಭೂಕಂಪ, ಪ್ರವಾಹ, ಕಾಡ್ಗಿಚ್ಚು, ಚಂಡಮಾರುತ, ಅತಿವೃಷ್ಟಿ, ಮಿಡತೆಗಳ ಹಾವಳಿ... ಇವೆಲ್ಲವೂ ಜನರ ಬದುಕನ್ನೇ ತಲ್ಲಣಕ್ಕೆ ದೂಡಿವೆ.

ಇವೆಲ್ಲವನ್ನೂ ಮೀರಿ ಇದೀಗ ವರ್ಷದ ಅಂಚಿಗೆ ಬಂದು ನಿಂತಿದ್ದೇವೆ. 2021 ಅನ್ನು ಸ್ವಾಗತಿಸುವ ಈ ಹೊತ್ತಿನಲ್ಲಿ, 2020ರಲ್ಲಿ ಜಗತ್ತಿನಲ್ಲಿ ಏನೇನೆಲ್ಲಾ ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ ಎಂಬುದನ್ನು ಮೆಲುಕು ಹಾಕುವುದೂ ಮುಖ್ಯವಾಗಿದೆ. 2020ರಲ್ಲಿ ವಿಶ್ವದಲ್ಲಿ ಸಂಭವಿಸಿದ ಹತ್ತು ಪ್ರಮುಖ ಪ್ರಾಕೃತಿಕ ವಿಕೋಪಗಳ ವಿವರ ಇಲ್ಲಿದೆ...

 ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚು

ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಂಡ ಭೀಕರ ಕಾಡ್ಗಿಚ್ಚು

2019-20ರ ನಡುವೆ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆರಂಭವಾಗಿತ್ತು. ಸುದೀರ್ಘ ಬರ ಆವರಿಸಿದ್ದ ಪ್ರದೇಶದಲ್ಲಿ 2019ರ ಅಕ್ಟೋಬರ್ ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಕೆಲವು ತಿಂಗಳವರೆಗೂ ಮುಂದುವರೆದಿತ್ತು. ಕ್ಷಣ ಕ್ಷಣಕ್ಕೂ ಬೆಂಕಿ ಆವರಿಸುತ್ತಲೇ ಹೋಯಿತು. ಈ ಕಾರಣಕ್ಕೆ ಕ್ವೀನ್ಸ್ ಲ್ಯಾಂಡ್ ಹಾಗೂ ಉತ್ತರ ವೇಲ್ಸ್ ನಲ್ಲಿ ಮೊದಲು ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬೆಂಕಿ ನಿಲ್ಲುವ ಯಾವ ಸೂಚನೆಯೂ ಕಾಣದೇ ಇತರೆ ಪ್ರದೇಶಗಳಿಗೂ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಇದನ್ನು "ಬ್ಲಾಕ್ ಸಮ್ಮರ್" ಎಂದೂ ಕರೆಯಲಾಯಿತು. ಆಸ್ಟ್ರೇಲಿಯಾದ ಈ ಕಾಡ್ಗಿಚ್ಚು ಅತಿ ದೊಡ್ಡ ಪ್ರಾಕೃತಿಕ ವಿಕೋಪ ಎನಿಸಿಕೊಂಡಿತು. 18 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಕರಕಲಾಗಿ ಸುಮಾರು 9000 ಕಟ್ಟಡಗಳು ಹಾಗೂ ಮನೆಗಳು ನಾಶವಾದವು. ಘಟನೆಯಲ್ಲಿ 400 ಸಾವುಗಳು ಸಂಭವಿಸಿದವು.

 ಇಂಡೋನೇಷ್ಯಾದಲ್ಲಿ ಪ್ರವಾಹ ಪರಿಸ್ಥಿತಿ

ಇಂಡೋನೇಷ್ಯಾದಲ್ಲಿ ಪ್ರವಾಹ ಪರಿಸ್ಥಿತಿ

ವರ್ಷದ ಮೊದಲ ತಿಂಗಳಲ್ಲೇ ಇದ್ದಕ್ಕಿದ್ದಂತೆ ಇಂಡೋನೇಷ್ಯಾದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ನದಿಗಳು ಉಕ್ಕಿ ಹರಿಯಲು ಆರಂಭಿಸಿದ್ದವು. ಇಡೀ ದೇಶವೇ ಮಳೆಯಲ್ಲಿ ನಲುವಂತಾಯಿತು. ಜಕರ್ತಾ ಸೇರಿದಂತೆ ಇನ್ನಷ್ಟು ಪ್ರದೇಶಗಳು ಸಂಪೂರ್ಣ ಜಲಾವೃತವಾದವು. 4 ಲಕ್ಷಕ್ಕೂ ಅಧಿಕ ಜನ ಪ್ರವಾಹದಿಂದ ನಿರ್ವಸತಿಗರಾದರು. ಘಟನೆಯಲ್ಲಿ 66 ಮಂದಿ ಸಾವನ್ನಪ್ಪಿ, ಭೂಕುಸಿತ ಸಂಭವಿಸಿತ್ತು. ಚೇತರಿಸಿಕೊಳ್ಳಲು ಅಸಾಧ್ಯ ಎನಿಸುವಷ್ಟು ಹಾನಿ ಸಂಭವಿಸಿತ್ತು.

 ಕೊರೊನಾ ವೈರಸ್ ಭೀತಿಯಲ್ಲೇ ಶುರುವಾದ ವರ್ಷ

ಕೊರೊನಾ ವೈರಸ್ ಭೀತಿಯಲ್ಲೇ ಶುರುವಾದ ವರ್ಷ

ಹಿಂದೆಂದೂ ಕೇಳರಿಯದ ಹೊಸ ಸಮಸ್ಯೆ, ವೈದ್ಯಕೀಯ ಲೋಕಕ್ಕೇ ಸವಾಲಾಗಿ ನಿಂತದ್ದು ಕೊರೊನಾ ವೈರಸ್. ಡಿಸೆಂಬರ್ 2019ರ ಅಂಚಿನಲ್ಲಿ ಚೀನಾದ ವುಹಾನ್ ನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಆದರೆ ಈ ಚಿಕ್ಕ ವೈರಸ್ ಈ ಮಟ್ಟಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ಯಾರೂ ಊಹಿಸಿರಲಿಲ್ಲ. ಜನವರಿ 11ರಂದು ಚೀನಾದಲ್ಲಿ ಮೊದಲ ಕೊರೊನಾ ವೈರಸ್ ಸಾವಿನ ಪ್ರಕರಣ ವರದಿಯಾಗಿ, 11ನೇ ಮಾರ್ಚ್ ಅಷ್ಟೊತ್ತಿಗೆ ಇಡೀ ಜಗತ್ತಿಗೇ ಇದು ಮಾರಕವಾಗುವ ಸೂಚನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿತ್ತು. ಇದೀಗ ಕೊರೊನಾ ವೈರಸ್ ಲಸಿಕೆಯನ್ನು ಜಗತ್ತು ಎದುರು ನೋಡುತ್ತಿದೆ.

 ಫಿಲಿಪ್ಪೀನ್ಸ್ ನ ಜ್ವಾಲಾಮುಖಿ

ಫಿಲಿಪ್ಪೀನ್ಸ್ ನ ಜ್ವಾಲಾಮುಖಿ

ಸುಮಾರು 20 ಜ್ವಾಲಾಮುಖಿಗಳನ್ನು ಒಳಗೊಂಡಿರುವ ಫಿಲಿಪ್ಪೀನ್ಸ್ ಅಪಾಯದ ಅಂಚಿನಲ್ಲಿಯೇ ಇದೆ. ಆದರೆ ಜನವರಿಯಲ್ಲಿ ಉಕ್ಕಿದ ತಾಲ್ ಜ್ವಾಲಾಮುಖಿ ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀರಿತ್ತು. 43 ವರ್ಷಗಳ ನಂತರ ಕಾಣಿಸಿಕೊಂಡ ತಾಲ್ ಜ್ವಾಲಾಮುಖಿ 12ನೇ ಜನವರಿಯಂದು ಸ್ಫೋಟಗೊಂಡಿತು. ಇದರಿಂದ 3,00,000 ಮಂದಿ ಸ್ಥಳಾಂತರಗೊಳ್ಳುವಂತೆ ಆಯಿತು. ಇದುವರೆಗೂ ಫಿಲಿಪೀನ್ಸ್ ನಲ್ಲಿ ಜ್ಞಾಲಾಮುಖಿ ಆಧಾರಿತ 2000 ಭೂಕಂಪ ಸಂಭವಿಸಿದ್ದು, ಅದರಲ್ಲಿ 176 ಭೂಕಂಪ ಅನುಭವಕ್ಕೆ ಬಂದಿದೆ. ಫಿಲಿಪ್ಪೀನ್ಸ್ ನಲ್ಲಿ ಇನ್ನೂ ಈ ಹಾನಿಯಿಂದ ಜನರು ಹೊರ ಬರಲು ಸಾಧ್ಯವಾಗಿಲ್ಲ.

 ಚೀನಾ, ಭಾರತ, ಇರಾನ್, ರಷ್ಯಾ, ಟರ್ಕಿಯಲ್ಲಿ ಭೂಕಂಪ

ಚೀನಾ, ಭಾರತ, ಇರಾನ್, ರಷ್ಯಾ, ಟರ್ಕಿಯಲ್ಲಿ ಭೂಕಂಪ

ಹಲವು ಕಡೆ ಸಂಭವಿಸಿದ ಭೂಕಂಪದಿಂದ ಎಷ್ಟೋ ಕಷ್ಟಕರ ಸಂದರ್ಭಗಳನ್ನು ಜನರು ಎದುರಿಸಬೇಕಾಯಿತು. ಚೀನಾ, ಭಾರತ, ಇರಾನ್, ರಷ್ಯಾ, ಟರ್ಕಿಯಲ್ಲಿ ಸಾಲು ಸಾಲು ಭೂಕಂಪ ಸಂಭವಿಸಿತ್ತು. ಈ ವರ್ಷ ಇಡೀ ವಿಶ್ವದಲ್ಲಿ 45 ಪ್ರಮುಖ ಭೂಕಂಪಗಳು ಸಂಭವಿಸಿವೆ. ಜಮೈಕ ಮತ್ತು ರಷ್ಯಾದಲ್ಲಿ ದೊಡ್ಡ ಮಟ್ಟದಲ್ಲಿ ಭೂಕಂಪವಾಗಿದೆ. ಮೆಕ್ಸಿಕೋದಲ್ಲಿ ಭೂಕಂಪದಿಂದ ಹತ್ತು ಮಂದಿ ಸಾವನ್ನಪ್ಪಿದ್ದರೆ, 30 ಕಟ್ಟಡಗಳು ಹಾನಿಯಾಗಿದ್ದವು. ಟರ್ಕಿಯಲ್ಲಿ 116 ಮಂದಿ ಸಾವನ್ನಪ್ಪಿ, 1.035 ಮಂದಿ ಗಾಯಗೊಂಡಿದ್ದರು.

 ಮರುಭೂಮಿ ಮಿಡತೆಗಳ ಹಾವಳಿ

ಮರುಭೂಮಿ ಮಿಡತೆಗಳ ಹಾವಳಿ

ವರ್ಷದ ಮಧ್ಯಭಾಗಕ್ಕೆ ಬರುತ್ತಿದ್ದಂತೆ ಮರುಭೂಮಿ ಮಿಡತೆಗಳ ಕಾಟ ಆರಂಭವಾಯಿತು. ಏಷ್ಯಾ, ಪೂರ್ವ ಆಫ್ರಿಕಾ, ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಭಾರೀ ಪೆಟ್ಟು ನೀಡುವ ಸೂಚನೆಯನ್ನೂ ನೀಡಿತ್ತು. ಕೆಲವೇ ಸೆಕೆಂಡುಗಳಲ್ಲಿ ಇಡೀ ಬೆಳೆಯನ್ನೇ ತಿಂದುಮುಗಿಸಬಲ್ಲ ಈ ಮಿಡತೆಗಳು ರೈತರಿಗೆ ಆತಂಕವನ್ನು ತಂದಿದ್ದವು. 26 ವರ್ಷದ ನಂತರ ಈ ರೀತಿಯ ಮಿಡತೆ ದಾಳಿ ನಡೆದಿತ್ತು. ವಾತಾವರಣದಲ್ಲಿನ ಬದಲಾವಣೆಯೇ ಇದ್ದಕ್ಕಿದ್ದಂತೆ ಮಿಡತೆಗಳು ಹೆಚ್ಚಲು ಕಾರಣವಾಗಿತ್ತು. ಭಾರತದಲ್ಲಿ ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಇದರ ದಾಳಿಯ ಪರಿಣಾಮ ಕಂಡುಬಂದಿತ್ತು.

 ಅಂಫಾನ್ ಚಂಡಮಾರುತ

ಅಂಫಾನ್ ಚಂಡಮಾರುತ

ಭಾರತ, ಬಾಂಗ್ಲಾದೇಶವನ್ನು ನಲುಗಿಸಿದ ಅತಿ ಶಕ್ತಿಶಾಲಿ ಚಂಡಮಾರುತ ಅಂಫಾನ್ ಆಗಿತ್ತು. 1999ರ ನಂತರ ಕಾಣಿಸಿಕೊಂಡ ಅತಿ ಶಕ್ತಿಶಾಲಿ ಚಂಡಮಾರುತ ಎನಿಸಿಕೊಂಡಿತ್ತು. ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡು ಹೆಚ್ಚಿನ ಮಟ್ಟದಲ್ಲಿ ಆಸ್ತಿಪಾಸ್ತಿ ಹಾನಿ ಸಂಭವಿಸಿತ್ತು. ಅಂಫಾನ್ ಚಂಡಮಾರುತದಿಂದಾಗಿ 86 ಮಂದಿ ಸಾವನ್ನಪ್ಪಿದರು. ಪಶ್ಚಿಮ ಬಂಗಾಳದಲ್ಲಿ 1,02,422 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು.

ಭೀಕರ ಅಮೆಜಾನ್ ಕಾಡ್ಗಿಚ್ಚು

ಭೀಕರ ಅಮೆಜಾನ್ ಕಾಡ್ಗಿಚ್ಚು

ಬ್ರೆಜಿಲ್ ನ ಅಮೇಜಾನ್ ಅರಣ್ಯದಲ್ಲಿ ಸೆಪ್ಟೆಂಬರ್ ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ನೋಡನೋಡುತ್ತಿದ್ದಂತೆ ಇಡೀ ಅರಣ್ಯವನ್ನು ಆವರಿಸಿತ್ತು. ಜಗತ್ತಿನ ಅತಿ ದೊಡ್ಡ ಹಾಗೂ ವೈವಿಧ್ಯವನ್ನು ಒಳಗೊಂಡಿರುವ ವಿಸ್ಮಯಕಾರಿ ಅಮೇಜಾನ್ ಕಾಡಿನಲ್ಲಿ ಮುಗಿಲು ಮುಟ್ಟುವಂತಹ ಬೆಂಕಿಯ ಜ್ವಾಲೆಗಳು ಎದ್ದಿದ್ದವು. ಅಪಾರ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿ ಜಗತ್ತಿಗೆ ಆಶ್ರಯ ನೀಡಿರುವ ಅಮೇಜಾನ್ ಅರಣ್ಯ ಹೊತ್ತಿ ಉರಿದಿದ್ದು, ಸಾವಿರಾರು ಎಕರೆ ಕಾಡು ಬೆಂಕಿಯ ಜ್ವಾಲೆಗೆ ಸುಟ್ಟು ಭಸ್ಮವಾಗಿತ್ತು.

ಬ್ರೆಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಬೊಲಿವಿಯಾ ಮತ್ತು ಸುರಿನೇಮ್ ದೇಶಗಳಲ್ಲಿ ಹರಡಿಕೊಂಡಿರುವ ಅಮೇಜಾನ್ ಕಾಡಿನಲ್ಲಿ ಉಂಟಾಗಿರುವ ಕಾಳ್ಗಿಚ್ಚು ಭಾರಿ ಪ್ರಮಾಣದ ಅನಾಹುತವನ್ನೇ ಸೃಷ್ಟಿಸಿತ್ತು.

105 ಸಾವಿಗೆ ಕಾರಣವಾದ ಅಸ್ಸಾಂ ಪ್ರವಾಹ

105 ಸಾವಿಗೆ ಕಾರಣವಾದ ಅಸ್ಸಾಂ ಪ್ರವಾಹ

ಜುಲೈ ತಿಂಗಳಿನಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹ 1,981,801 ಜನರ ಜೀವನವನ್ನು ಬೀದಿಗೆ ತಂದಿದೆ. 105 ಮಂದಿ ಈ ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ. ಕಾಜಿರಂಗ ನ್ಯಾಷನಲ್ ಪಾರ್ಕ್ ನಲ್ಲಿ 137 ಪ್ರಾಣಿಗಳು ಪ್ರವಾಹದಿಂದ ಸಾವನ್ನಪ್ಪಿದ್ದವು. ಅಸ್ಸಾಂನ 128 ಹಳ್ಳಿಗಳು, 5 ಜಿಲ್ಲೆಗಳು ಸಂಪೂರ್ಣ ಜಲಾವೃತವಾಗಿ ಅಧಿಕ ಹಾನಿಗೆ ಕಾರಣವಾಗಿತ್ತು.

ಅಂಟಾರ್ಟಿಕಾದಲ್ಲಿ ಹಸಿರು ಹಿಮ

ಅಂಟಾರ್ಟಿಕಾದಲ್ಲಿ ಹಸಿರು ಹಿಮ

ಅಂಟಾರ್ಟಿಕಾ ಎಂದಾಕ್ಷಣ ಹಿಮದ ರಾಶಿಯ ಚಿತ್ರಣ ಕಣ್ಣ ಮುಂದೆ ಹಾದುಹೋಗುತ್ತದೆ. ಆದರೆ ವಾತಾವರಣ ಬದಲಾವಣೆ ಹಾಗೂ ಹಿಮದ ಪಾಚಿಯ ಕಾರಣದಿಂದ ಅಂಟಾರ್ಟಿಕ ಹಸಿರು ಬಣ್ಣಕ್ಕೆ ತಿರುಗುತ್ತಿತ್ತು. ಇದರಿಂದ ಉಷ್ಣತೆ ಹೆಚ್ಚಿ ಹಿಮ ಕರಗುವಂತೆ ಮಾಡಿತ್ತು. ಇದು ಪರಿಸರ ತಜ್ಞರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ವಿಕೋಪದ ಸೂಚನೆಯನ್ನು ನೀಡಿತ್ತು. ಆದರೆ ಸ್ವಲ್ಪ ದಿನಗಳಲ್ಲಿ ಈ ಪರಿಸ್ಥಿತಿ ತಂತಾನೇ ನಿಯಂತ್ರಣಕ್ಕೆ ಬಂದಿತ್ತು.

English summary
2020 saw many natural disasters around the world. Starting from coronavirus, so many disasters affected people's life very badly. Here is a list of those natural disaster of 2020 around the world
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X