ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ವರ್ಷ, 156 ಕೋಟಿ ಡೋಸ್‌: ದೇಶದ ಅತೀ ದೊಡ್ಡ ಲಸಿಕೆ ಅಭಿಯಾನದ ಮೆಲುಕು ಹಾಕೋಣ ಬನ್ನಿ...

|
Google Oneindia Kannada News

ಭಾರತದ ಅತೀ ದೊಡ್ಡ ಲಸಿಕೆ ಅಭಿಯಾನ ಕೋವಿಡ್‌ ವ್ಯಾಕ್ಸಿನೇಷನ್ ಡ್ರೈವ್‌ಗೆ ಭಾನುವಾರ ಒಂದು ವರ್ಷ ಪೂರ್ಣವಾಗಿದೆ. ಈ ಮಹತ್ವಾಕಾಂಕ್ಷೆಯ ಕೋವಿಡ್‌ ಲಸಿಕಾ ಅಭಿಯಾನದಲ್ಲಿ ಭಾರತವು 156 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಜನರಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಒಂದು ವರ್ಷಗಳ ಹಿಂದೆ ಈ ದಿನದಂದು ಭಾರತದಲ್ಲಿ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮೊದಲ ಡೋಸ್‌ ಲಸಿಕೆಯನ್ನು ನೀಡುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈಗ ಭಾರತದಲ್ಲಿ 156 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಶನಿವಾರದಂದು ದೇಶದಲ್ಲಿ ಒಟ್ಟು 156.37 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಈವರೆಗೆ ವಯಸ್ಕ ಜನಸಂಖ್ಯೆಯ ಶೇಕಡಾ 70 ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಅಂದರೆ ವಯಸ್ಕ ಜನಸಂಖ್ಯೆಯ 65 ಕೋಟಿಗೂ ಹೆಚ್ಚು ಫಲಾನುಭವಿಗಳು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಕಳೆದ ವರ್ಷದಲ್ಲಿ, ಭಾರತವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಭಾರತವು 1.38 ಶತಕೋಟಿ ಜನಸಂಖ್ಯೆಗೆ ಲಸಿಕೆ ಹಾಕುವ ಪ್ರಯತ್ನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. ಲಸಿಕೆ ಕೊರತೆ, ಲಸಿಕೆ ಪಡೆಯಲು ಜನರಲ್ಲಿ ಹಿಂಜರಿಕೆ ಮೊದಲಾದ ಕಾರಣದಿಂದಾಗಿ ಲಸಿಕೆ ಅಭಿಯಾನವಾದ ಕೊಂಚ ದಿನದಲ್ಲೆ ಅಭಿಯಾನಕ್ಕೆ ಅಡೆತಡೆ ಉಂಟಾಗಿತ್ತು. ಆದರೆ ಎಲ್ಲಾ ಅಡೆತಡೆಗಳನ್ನು ಭಾರತ ಎದುರಿಸಿದೆ. ಪ್ರಸ್ತುತ 'ಮುನ್ನೆಚ್ಚರಿಕೆ' ಡೋಸ್' ಅನ್ನು ನೀಡುವ ಮೂಲಲ ಕೊರೊನಾ ವೈರಸ್‌ನ ಹೊಸ ರೂಪಾಂತರಗಳನ್ನು ಎದುರಿಸಲು ಭಾರತ ಮುಂದಾಗಿದೆ. ಜನವರಿ 3, 2022 ರಂದು, ಭಾರತವು 15 ಮತ್ತು 17 ರ ನಡುವಿನ ಹದಿಹರೆಯದವರಿಗೆ ಕೋವಿಡ್‌ ಲಸಿಕೆ ನೀಡಿಕೆಯನ್ನು ಆರಂಭ ಮಾಡಿದೆ. ಹಾಗಾದರೆ ಭಾರತದ ಅತೀ ದೊಡ್ಡ ಲಸಿಕೆ ಮೈಲಿಗಲ್ಲಿನ ಒಂದು ವರ್ಷದ ಅವಧಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಮುಂದೆ ಓದಿ...

 ಕೋವಿಡ್‌ ಲಸಿಕೆ: ಭಾರತದ ಶಕ್ತಿ ಪ್ರದರ್ಶನ

ಕೋವಿಡ್‌ ಲಸಿಕೆ: ಭಾರತದ ಶಕ್ತಿ ಪ್ರದರ್ಶನ

ಭಾರತದ ನಾಗರಿಕ ಸಚಿವಾಲಯದ ಪ್ಲಾಟ್‌ಫಾರ್ಮ್, MyGovIndia, ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಭಾರತದ ಲಸಿಕೆ ಅಭಿಯಾನದ ಬಗ್ಗೆ ಉಲ್ಲೇಖ ಮಾಡಿದೆ. ಈ ಮೂಲಕ ಭಾರತದ ಒಂದು ವರ್ಷದ ಲಸಿಕೆ ಮೈಲಿಗಲ್ಲಿನ ಹರ್ಷ ವ್ಯಕ್ತಪಡಿಸಿದೆ. "ನಮ್ಮ ವ್ಯಾಕ್ಸಿನೇಷನ್ ಡ್ರೈವ್ ಟೀಮ್ ಇಂಡಿಯಾದ ಶಕ್ತಿಯನ್ನು ತೋರಿಸಿದೆ. ಇಂದು, ನಾವು ವಿಶ್ವದ ಅತೀ ದೊಡ್ಡ ಕೋವಿಡ್‌ ಲಸಿಕೆ ಅಭಿಯಾನದ ಒಂದು ವರ್ಷ ಆಚರಣೆಯನ್ನು ಮಾಡುತ್ತಿದ್ದೇವೆ. ಈವರೆಗೆ ಭಾರತದಲ್ಲಿ ನಾವು 1.3 ಶತಕೋಟಿ ಜನರನ್ನು ಸಾಮಾನ್ಯ ಗುರಿಗಾಗಿ ಒಂದುಗೂಡಿಸಿದ್ದೇವೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ," ಎಂದು ತಿಳಿಸಿದ್ದಾರೆ.

ಒಂದು ವರ್ಷದ ಮೈಲಿಗಲ್ಲು

ಜನವರಿ 16, 2021: ಭಾರತವು ತನ್ನ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮೊದಲ ಕೋವಿಡ್‌ ಲಸಿಕೆ ನೀಡಿಕೆ ಆರಂಭ ಮಾಡಿದೆ. ಸೀರಮ್ ಇನ್‌ಸ್ಟಿಟ್ಯೂಟ್-ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ಲಸಿಕೆ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ ನೀಡಿಕೆ ಮೂಲಕ ಭಾರತದ ಲಸಿಕೆ ಅಭಿಯಾನ ಆರಂಭವಾಗಿದೆ.
ಫೆಬ್ರವರಿ 19, 2021: ಭಾರತವು ಒಂದು ಕೋಟಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 1, 2021: ಭಾರತವು ತನ್ನ ಹಿರಿಯ ನಾಗರಿಕರಿಗೆ ಮತ್ತು 45 ಮತ್ತು 60 ರ ನಡುವಿನ ಬೇರೆ ರೋಗಗಳು ಇರುವ ಜನರಿಗೆ ಕೋವಿಡ್‌ ಲಸಿಕೆ ನೀಡಿಕೆಯನ್ನು ಆರಂಭ ಮಾಡಿದೆ. ಈ ಮೂಲಕ ಭಾರತ ಎರಡನೇ ಹಂತದ ಕೋವಿಡ್‌ ಲಸಿಕೆ ನೀಡಿಕೆ ಕಾರ್ಯಕ್ಕೆ ಚಾಲನೆ ನೀಡಿದೆ. ಈ ವೇಳೆಯಲ್ಲೇ CoWIN ಪೋರ್ಟಲ್ ಮೂಲಕ ವ್ಯಾಕ್ಸಿನೇಷನ್ ನೋಂದಣಿ ಪ್ರಾರಂಭ ಮಾಡಲಾಗಿದೆ.
ಏಪ್ರಿಲ್ 1, 2021: ಕೋವಿಡ್‌ ಲಸಿಕೆಯನ್ನು 45 ಮತ್ತು 60 ರ ನಡುವಿನ ವಯಸ್ಸಿನ ಎಲ್ಲರಿಗೂ ಆರಂಭ ಮಾಡಲಾಗಿದೆ.
ಮೇ 1, 2021: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರಿಗೂ ಕೋವಿಡ್‌ ಲಸಿಕೆ ನೀಡಿಕೆ ಆರಂಭ ಮಾಡಲಾಗಿದೆ.
ಜೂನ್ 21, 2021: ಕೇಂದ್ರ ಸರ್ಕಾರವು ಉಚಿತ ಲಸಿಕೆಯನ್ನು ಘೋಷಣೆ ಮಾಡಿದೆ.
ನವೆಂಬರ್ 3, 2021: ಸರ್ಕಾರವು ಮನೆ-ಮನೆಗೆ ತೆರಳಿ ಲಸಿಕೆ ನೀಡಿಕೆ ಅಭಿಯಾನ 'ಹರ್ ಘರ್ ದಸ್ತಕ್' ಅನ್ನು ಆರಂಭ ಮಾಡಿದೆ.
ಜನವರಿ 3, 2022: 15 ರಿಂದ 17 ವರ್ಷದೊಳಗಿನ ಯುವ ವಯಸ್ಕರಿಗೆ ಲಸಿಕೆ ನೀಡಿಕೆಯನ್ನು ಆರಂಭ ಮಾಡಲಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಈ ಅರ್ಹ ವಯಸ್ಸಿನ ಹದಿಹರೆಯದವರಿಗೆ ಈಗಾಗಲೇ 3.3 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಅಂದರೆ ಈ 15 ರಿಂದ 17 ವರ್ಷದೊಳಗಿನ ಜನಸಂಖ್ಯೆಯ ಶೇಕಡಾ 45 ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ.
ಜನವರಿ 10, 2022: ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಹಾಗೂ ಸಹ-ಅಸ್ವಸ್ಥ್ಯ (co-morbid) ಹೊಂದಿರುವ ಹಿರಿಯ ನಾಗರಿಕರಿಗೆ 'ಮುನ್ನೆಚ್ಚರಿಕೆ' ಅಥವಾ ಬೂಸ್ಟರ್ ಶಾಟ್‌ ನೀಡಿಕೆ ಆರಂಭ ಮಾಡಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಇದುವರೆಗೆ 43 ಲಕ್ಷಕ್ಕೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.

ಭಾರತದ ಕೋವಿಡ್‌ ಲಸಿಕೆ ನೀಡಿಕೆಯ ಅಂಕಿಅಂಶ

ಭಾರತವು ಇಲ್ಲಿಯವರೆಗೆ 156 ಕೋಟಿಗೂ ಹೆಚ್ಚು ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಲಸಿಕೆ ಫಲಾನುಭವಿಗಳ ಪೈಕಿ ಶೇಕಡ 70 ರಷ್ಟು ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಆದಾಗ್ಯೂ, ಭಾರತವು ಇನ್ನೂ 100 ಪ್ರತಿಶತ ಮೊದಲ ಡೋಸ್ ವ್ಯಾಪ್ತಿಯ ಗುರಿಯನ್ನು ತಲುಪಿಲ್ಲ. ಇಲ್ಲಿಯವರೆಗೆ, ಲಸಿಕೆ ಫಲಾನುಭವಿಗಳ ಪೈಕಿ ಶೇಕಡ 92ರಷ್ಟು ಜನಸಂಖ್ಯೆ ಮಾತ್ರ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 90,68,44,414 ಮಂದಿ ಮೊದಲ ಡೋಸ್ ಮತ್ತು 65,51,95,703 ಮಂದಿ ಎರಡನೇ ಡೋಸ್ ಅನ್ನು ಪಡೆದಿದ್ದಾರೆ. ಇನ್ನು ಸರ್ಕಾರದ ಅಂಕಿ ಅಂಶಗಳ ಪ್ರಕಾರ...
* ಮಹಿಳೆಯರಿಗೆ 76 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
* ಗ್ರಾಮೀಣ ಪ್ರದೇಶಗಳ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ 99 ಕೋಟಿಗೂ ಹೆಚ್ಚು ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
* 3.69 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಮಂಗಳಮುಖಿಯರಿಗೆ (transgender) ನೀಡಲಾಗಿದೆ.
* ಜೈಲು ಕೈದಿಗಳಿಗೆ 6 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
* ಬುಡಕಟ್ಟು ಸಮುದಾಯ ಅಧಿಕವಾಗಿರುವ ಜಿಲ್ಲೆಗಳಲ್ಲಿ 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ.
* ಹೆಚ್ಚಾಗಿ ಜನರು ಮನೆಯ ಸಮೀಪದಲ್ಲಿರುವ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಈ ರೀತಿಯಾಗಿ 40 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

 ಭಾರತದಲ್ಲಿ ಕೋವಿಡ್ ಲಸಿಕೆಗಳು

ಭಾರತದಲ್ಲಿ ಕೋವಿಡ್ ಲಸಿಕೆಗಳು

ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ 'ಮೇಡ್ ಇನ್ ಇಂಡಿಯಾ' ಕೋವಾಕ್ಸಿನ್‌ಗೆ 'ತುರ್ತು ಬಳಕೆಯ ಅಧಿಕಾರವನ್ನು ಜನವರಿ 2, 2021ರಲ್ಲಿ ನೀಡಲಾಗಿದೆ. ಈ ಬಳಿಕ ಭಾರತದಲ್ಲಿ ಈವರೆಗೆ ಸುಮಾರು ಆರು ಕೋವಿಡ್-19 ಲಸಿಕೆಗಳನ್ನು ಅನುಮೋದಿಸಲಾಗಿದೆ. ಇವುಗಳ ಪೈಕಿ ಝೈಡಸ್ ಕ್ಯಾಡಿಲಾದ ZyCoV-D ಕೂಡಾ ಒಂದಾಗಿದೆ. ಇದು ಮೊದಲ ಸೂಜಿರಹಿತ ಕೋವಿಡ್‌ ಲಸಿಕೆಯಾಗಿದೆ. ಇನ್ನು ಸೀರಮ್ ಇನ್‌ಸ್ಟಿಟ್ಯೂಟ್‌ನ ಎರಡನೇ ಕೋವಿಡ್‌ ಲಸಿಕೆ ಕೋವೊವಾಕ್ಸ್, ಬಯೋಲಾಜಿಕಲ್ ಇನ ಕಾರ್ಬೆವಾಕ್ಸ್, ರಷ್ಯಾದ ಸ್ಪುಟ್ನಿಕ್ ವಿ, ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್‌ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಇದು ಏಕ ಡೋಸ್‌ ಲಸಿಕೆಯಾಗಿದೆ. ಕೋವಿಶೀಲ್ಡ್‌ ಹಾಗೂ ಕೋವಾಕ್ಸಿನ್‌ ಕಳೆದ ವರ್ಷ ಒಟ್ಟಿಗೆ ಲಸಿಕೆ ಅಭಿಯಾನಕ್ಕೆ ಧುಮುಕಿದೆ. ZyCoV-D, ಅನುಮೋದಿಸಲ್ಪಟ್ಟಿದ್ದರೂ, ಭಾರತದ ಕೋವಿಡ್‌ ಲಸಿಕೆ ಅಭಿಯಾನದ ಎರಡನೇ ವರ್ಷಕ್ಕೆ ಪ್ರವೇಶ ಮಾಡುತ್ತಿದ್ದರೂ ಅದನ್ನು ಇನ್ನೂ ಬಳಕೆ ಮಾಡಲಾಗಿಲ್ಲ. ನವೆಂಬರ್ 2021 ರಲ್ಲಿ, ಕೋವಾಕ್ಸಿನ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗಾಗಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಇದು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅನುಮೋದನೆಯನ್ನು ಪಡೆದ ವಿಶ್ವದ ಎಂಟನೇ ಲಸಿಕೆ ಆಗಿದೆ. ಭಾರತದಲ್ಲಿ ಸದ್ಯಕ್ಕೆ ಮಕ್ಕಳಿಗೆ ನೀಡಲಾಗುತ್ತಿರುವ ಏಕೈಕ ಲಸಿಕೆ ಕೋವಾಕ್ಸಿನ್ ಆಗಿದೆ. (ಒನ್‌ಇಂಡಿಯಾ ಸುದ್ದಿ)

Recommended Video

Virat Kohli ನಿರ್ಧಾರದಿಂದ ಆಘಾತಗೊಂಡ Rohit Sharma ಹೇಳಿದ್ದೇನು? | Oneindia Kannada

English summary
1 Year, 156 Cr Covid Shots: Here's Recap of India's Largest Vaccine Drive In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X