keyboard_backspace

ಫಾಸ್ಟ್ಯಾಗ್ ಇಲ್ಲ ಅಂದ್ರೆ ದಂಡ ಹಾಕಲಿಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ!

Google Oneindia Kannada News

ಬೆಂಗಳೂರು, ಫೆಬ್ರವರಿ 21: ಫಾಸ್ಟ್ಯಾಗ್ ಎಂಬುದು ಖಾಸಗಿ ಕಂಪನಿಗಳ ಕ್ರಿಮಿನಲ್ ‍ಷಡ್ಯಂತ್ರ..! ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಟಟ್ಟು ದಂಡ ಎಂಬುದು ದಂಡದ ಹೆಸರಿನಲ್ಲಿ ಮಾಡುತ್ತಿರುವ ದಂಧೆ..! ವಾಸ್ತವದಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ದಂಡ ಹಾಕಲಿಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ! ಸಂವಿಧಾನದತ್ತವಾಗಿ ಪ್ರಜೆಗಳಿಗೆ ಸಿಕ್ಕಿರುವ ಮೂಲಭೂತ ಹಕ್ಕುಗಳ ದಮನ. ಇದರ ವಿರುದ್ಧ ಜನರು ಧ್ವನಿಯೆತ್ತದಿದ್ದರೆ ಭವಿಷ್ಯದ ದಿನಗಳು ಇನ್ನೂ ಕರಾಳವಾಗಲಿವೆ..!

ಫಾಸ್ಟ್ಯಾಗ್ ಕಡ್ಡಾಯ, ಫಾಸ್ಟ್ಯಾಗ್ ಇಲ್ಲದಿದ್ದರೆ ದಂಡ ವಿಧಿಸುತ್ತಿರುವ ಖಾಸಗಿ ಕಂಪನಿಗಳ ನೀತಿ, ಅವುಗಳ ಪರ ನಿಂತಿರುವ ಸರ್ಕಾರದ ನಿಲುವಿನ ಬಗ್ಗೆ ಕಾನೂನು ತಜ್ಞರು ವ್ಯಕ್ತಪಡಿಸಿದ ಕಳವಳಕಾರಿ ಮಾತುಗಳಿವು. ದೇಶದೆಲ್ಲೆಡೆ ಫೆ. 15 ರಿಂದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇದರಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು ಎಲ್ಲಾ ಮಾಧ್ಯಮಗಳಲ್ಲಿ ವರದಿ ಆಯಿತು. ಆದರೆ ಫಾಸ್ಟ್ಯಾಗ್ ಕಡ್ಡಾಯ, ಇಲ್ಲದಿದ್ದರೆ ದಂಡ ಹಾಕುತ್ತೇವೆ ಎಂಬುದರ ಬಗ್ಗೆ ಕಾನೂನು ತಜ್ಞರು ಇದೀಗ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಉಡುಪಿ; ಫಾಸ್ಟ್‌ ಟ್ಯಾಗ್ ವಿನಾಯಿತಿ ರದ್ದು ಭೀತಿ, ಹೋರಾಟದ ಕಾವು! ಉಡುಪಿ; ಫಾಸ್ಟ್‌ ಟ್ಯಾಗ್ ವಿನಾಯಿತಿ ರದ್ದು ಭೀತಿ, ಹೋರಾಟದ ಕಾವು!

ದೇಶದೆಲ್ಲಡೆ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. ಇದಕ್ಕೆ ನೀಡಿದ್ದ ಗಡುಗು ಮುಗಿಯುತ್ತಿದ್ದಂತೆ, ನಗದು ಪಾವತಿ ಮಾಡಿದವರಿಗೆ ದುಪ್ಪಟ್ಟು ಶುಲ್ಕ ವಿಧಿಸಿ ದಂಡವನ್ನು ಸಂಗ್ರಹಿಸಿದರು. ದಂಡ ಹಾಕುವ ಅಧಿಕಾರ ಖಾಸಗಿ ಕಂಪನಿಗಳಿಗೆ ಇಲ್ಲ. ನ್ಯಾಯಾಲಯಗಳು, ಅರೆ ನ್ಯಾಯಾಲಯಗಳು ಇಲ್ಲವೇ CRPC ಅಡಿ ರೂಪಿಸಿದ ವಿಶೇಷ ಕಾಯ್ದೆಗಳ ಅಡಿ ಮಾತ್ರ ದಂಡ ವಿಧಿಸಬಹುದು. ಆದರೆ, ಇದ್ಯಾವುದೂ ಇಲ್ಲದೇ ದೇಶದಲ್ಲೆಡೆ ಫಾಸ್ಟ್ಯಾಗ್ ಗಡುವು ಹೆಸರಿನಲ್ಲಿ ದಂಡದ ರೂಪದಲ್ಲಿ ವಸೂಲಿ ಮಾಡಿದ್ದು ಅಕ್ಷರಶಃ ದಂಧೆ ಎಂಬ ಸಂಗತಿಯನ್ನು ಕಾನೂನು ತಜ್ಞರು ಹೊರ ಹಾಕಿದ್ದಾರೆ.

ಫೆ. 15 ಕ್ಕೆ ಫಾಸ್ಟ್ಯಾಗ್ ಮಾಡಿಸಲು ಗಡುವು ನೀಡಲಾಗಿತ್ತು. ಆದರೆ ಬಹುತೇಕರು ಮಾಡಿಸಿರಲಿಲ್ಲ. ಅಂದು ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಸಾರ್ವಜನಿಕರು ಮಾನಸಿಕ ಹಿಂಸೆ ಅನುಭವಿಸಿದರು. ಆರ್ಥೀಕ ನಷ್ಟಕ್ಕೆ ಒಳಗಾದರು. ಇಷ್ಟಾಗಿಯೂ ಮೇಲುಗೈ ಸಾಧಿಸಿದ್ದು ಖಾಸಗಿ ಕಾರ್ಪೋರೇಟ್ ಕಂಪನಿಗಳೇ. ಜನರ ನೋವಿಗಾಗಲೀ, ಸಂವಿಧಾನದ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಇದಕ್ಕೆ ಕಡಿವಾಣ ಹಾಕದಿದ್ದರೆ, ಭವಿಷ್ಯದಲ್ಲಿ ಖಾಸಗಿ ಕಂಪನಿಗಳ ಏಕ ಚಕ್ರಾಧಿಪತ್ಯ, ದಬ್ಬಾಳಿಕೆ, ಸರ್ವಾಧಿಕಾರಿ ಧೋರಣೆ ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ ಎಂದು ಹಿರಿಯ ನ್ಯಾಯವಾದಿ ಎಸ್. ಶಂಕರಪ್ಪ "ಒನ್ ಇಂಡಿಯಾ ಕನ್ನಡ' ಜತೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೆದ್ದಾರಿಗಳಲ್ಲಿ ಹಗಲು ದರೋಡೆ: ತೈಲ ಬೆಲೆ ಏರಿಕೆಯ ನಡುವೆ ಫಾಸ್ಟ್ಯಾಗ್ ಹೆಸರಿನಲ್ಲೂ ಬರೆ!ಹೆದ್ದಾರಿಗಳಲ್ಲಿ ಹಗಲು ದರೋಡೆ: ತೈಲ ಬೆಲೆ ಏರಿಕೆಯ ನಡುವೆ ಫಾಸ್ಟ್ಯಾಗ್ ಹೆಸರಿನಲ್ಲೂ ಬರೆ!

ಜನರಿಗೆ ಮಾನಸಿಕ ಚಿತ್ರ ಹಿಂಸೆ:

ಜನರಿಗೆ ಮಾನಸಿಕ ಚಿತ್ರ ಹಿಂಸೆ:

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಕೊಟ್ಟಿದೆ. ವರ್ಷಗಳ ಕಾಲ ಟೋಲ್ ಶುಲ್ಕ ವಸೂಲಿಗೆ ಅವಕಾಶ ನೀಡಿರುವ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಅದರಲ್ಲೂ ಫಾಸ್ಟ್ಯಾಗ್ ಕಡ್ಡಾಯ ಎಂಬುದು ಜನರ ಮೂಲ ಭೂತ ಹಕ್ಕುಗಳ ಉಲ್ಲಂಘನೆ. ಟೋಲ್ ಶುಲ್ಕ ಫಿಕ್ಸ್ ಮಾಡಿದರು ಅಂದ ಮೇಲೆ, ಅದನ್ನು ಜನರು ಫಾಸ್ಟ್ಯಾಗ್ ಮೂಲಕವೇ ಕಟ್ಟಬೇಕೆಂಬ ನಿಯಮ ವಿಲ್ಲ. ಜನರ ಒಳಿತಿಗಾಗಿ ಫಾಸ್ಟ್ಯಾಗ್ ಮಾಡಿದ್ದರೆ, ಮಾಡಿಸದ ಒಂದು ವರ್ಗಕ್ಕೆ ನಗದು ಪಾವತಿಸಿ ಹೋಗಲು ಅವಕಾಶ ಕೊಡುವುದು ಸಂವಿಧಾನದ ಸಮಾನತೆಯ ಹಕ್ಕಿಗೆ ಸಂಬಂಧಿಸುತ್ತದೆ. ಜನರ ಆಶೋತ್ತರಗಳನ್ನು ಗಾಳಿಗೆ ತೂರಿ ಫಾಸ್ಟ್ಯಾಗ್ ಮಾಡಲಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದಂಡ ವಿಧಿಸಬೇಕಾದರೆ, ಸಿಆರ್ ಪಿಸಿ ಪ್ರಕಾರ ಒಂದು ಕಾಯ್ದೆಯನ್ನು ರೂಪಿಸಿ ಅದಕ್ಕೆ ಸಂಸತ್ತು ಅನುಮೋದನೆ ಕೊಟ್ಟು ಜಾರಿ ಮಾಡಬೇಕು. ಫಾಸ್ಟ್ಯಾಗ್ ಮಾಡಿಸುವ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಮಾಡಿಸದಿದ್ದರೆ ಯಾವ ಕಾಯ್ದೆ, ಯಾವ ಸೆಕ್ಷನ್ ಅಡಿ ದಂಡ ಪಾವತಿಸಬೇಕು ಎಂಬುದನ್ನು ಹೇಳಿದೆ ? ಇಲ್ಲ. ಇದು ಖಾಸಗಿ ಕಂಪನಿಗಳ ಕ್ರಿಮಿನಲ್ ಷಡ್ಯಂತ್ರ ಎಂದು ಹಿರಿಯ ವಕೀಲ ವಿ. ಶಂಕರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ಫಾಸ್ಟ್ಯಾಗ್ ದಂಡ ಅಲ್ಲ ಅದು ದಂಧೆ :

ಫಾಸ್ಟ್ಯಾಗ್ ದಂಡ ಅಲ್ಲ ಅದು ದಂಧೆ :

ನಾನು ಏರ್‌ಪೋರ್ಟ್ ನಿಂದ ಬೆಂಗಳೂರಿಗೆ ಬರಲಿಕ್ಕೆ ದೇವನಹಳ್ಳಿ ಟೋಲ್ ಬಳಿ 95 ರೂ. ಪಾವತಿಸಿದೆ. ಫಾಸ್ಟ್ಯಾಗ್ ಇಲ್ಲ ಎಂಬ ಕಾರಣಕ್ಕೆ 180 ರೂ. ವಸೂಲಿ ಮಾಡಿದರು. ಇದು ದಂಡ ಅಲ್ಲ ದಂಧೆ. ದಂಡ ವಸೂಲಿ ಅಧಿಕಾರ ರಸ್ತೆ ನಿರ್ಮಾಣ ಕಂಪನಿಗಳಿಗೂ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಇಲ್ಲ. ಇವರೇ ಮಾಡಿಕೊಂಡಿರುವ ರೂಲ್. ಇದರಿಂದ ಜನ ಸಾಮಾನ್ಯರು ಮಾನಸಿಕ ಹಿಂಸೆ ಅನುಭವಿಸುವ ಜತಗೆ ಆರ್ಥಿಕ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ವಿಪರ್ಯಾಸ ಎಂದರೆ ರಾಜ್ಯದಲ್ಲಿ ರಾಜ್ಯ ಹೆದ್ದಾರಿಗಳು, ಜಿಲ್ಲಾ ಹೆದ್ದಾರಿಗಳಲ್ಲಿ ಟೋಲ್ ವಸೂಲಿ ಬಾಜಿ ಶುರುವಾಗಿದೆ. ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಲಂಚಕ್ಕಾಗಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯದಲ್ಲಿ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದ ದಿನಗಳು ಕರಾಳವಾಗಲಿವೆ. ಖಾಸಗಿಯವರ ಸರ್ವಾಧಿಕಾರತ್ವ ಅಸ್ತಿತ್ವಕ್ಕೆ ಬರಲಿದೆ. ಅಮೇಲೆ ಅವರು ಹೇಳಿದ್ದೇ ಕಾನೂನು, ಫಿಕ್ಸ್ ಮಾಡಿದ್ದೇ ರೇಟ್. ಹೆಸರಿಗೆ ಮಾತ್ರ ಗಣತಂತ್ರ ವ್ಯವಸ್ಥೆ ಇರಲಿದೆ. ಈಗಿನ ಆಡಳಿತ ರೂಢ ಸರ್ಕಾರಗಳು ಎಲ್ಲವನ್ನೂ ಖಾಸಗಿಯವರ ಕೈಗಿಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಫಾಸ್ಟ್ಯಾಗ್ ಕಡ್ಡಾಯ, ಹಾಗೂ ನಗದು ಪಾವತಿಸಿ ರಸ್ತೆ ಬಳಕೆಗೆ ಅವಕಾಶ ಇಲ್ಲದಂತೆ ಮಾಡಿರುವ ಬಗ್ಗೆ ಜನರ ಹೋರಾಟ ಅಗತ್ಯವಿದೆ ಎಂದು ಹಿರಿಯ ವಕೀಲ ಶಂಕರಪ್ಪ ತಿಳಿಸಿದರು.

ಟೋಲ್ ಸಂಸ್ಕೃತಿಯೇ ಸರಿಯಲ್ಲ:

ಟೋಲ್ ಸಂಸ್ಕೃತಿಯೇ ಸರಿಯಲ್ಲ:

ಭಾರತ ದಂತಹ ದೊಡ್ಡ ರಾಷ್ಟ್ರಗಳಿಗೆ ಹೆದ್ದಾರಿಗಳು ಅತ್ಯಗತ್ಯ. ರಸ್ತೆ ನಿರ್ಮಾಣ ಮಾಡಿ ಅವನ್ನು ನಿರ್ವಹಣೆ ಮಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದರ ಹಿಂದೆ ಖಾಸಗಿಯವರ ಲಾಭಕೋರತನ , ಅಧಿಕಾರಿಗಳ ಅಕ್ರಮ ಗಳಿಕೆ, ಜನ ಪ್ರತಿನಿಧಿಗಳ ಕಮೀಷನ್ ಹಿತಾಸಕ್ತಿ ಬಿಟ್ಟರೆ ಬೇರೇನೂ ಇಲ್ಲ. ಐದು ನೂರು ಕೋಟಿ ರೂಪಾಯಿ ವೆಚ್ಚ ಮಾಡಿ ಒಂದು ರಸ್ತೆ ನಿರ್ಮಾಣ ಮಾಡಲಾರದಂತಹ ಅಸಹಾಯಕ ಸ್ಥಿತಿಗೆ ಸರ್ಕಾರಗಳು ತಲುಪಿವೆಯಾ ಎಂಬ ಪ್ರಶ್ನೆ ಕಾಡುತ್ತದೆ. ಫಾಸ್ಟ್ಯಾಗ್ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತೆ. ಹಣ ಕೊಟ್ಟು ಕ್ಯೂ ನಿಲ್ಲುವ ಬದಲು ಬೇಗ ಹೋಗಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ಫಾಸ್ಟ್ಯಾಗ್ ಮಾಡಿಸಬೇಕು ಎಂದು ಒಪ್ಪಿಕೊಳ್ಳೋಣ. ಆದರೆ, ಅಪರೂಪಕ್ಕೆ ಹೆದ್ದಾರಿ ರಸ್ತೆಗಳಿಗೆ ಹೋಗುವರೆಲ್ಲರೂ ದುಬಾರಿ ಹಣ ಕಟ್ಟಿ ಫಾಸ್ಟ್ಯಾಗ್ ಮಾಡಿಸಿಕೊಳ್ಳಬೇಕು ಎಂಬುದು ತಪ್ಪು. ದಂಡ ವಿಧಿಸುವುದು ಕಾನೂನು ವಿರೋಧಿ. ರಸ್ತೆ ಖಾಸಗಿಯವರು ನಿರ್ಮಿಸಿ ನಿರ್ವಹಣೆ ಮಾಡುತ್ತಿದ್ದು, ಅದನ್ನು ಬಳಸುವರು ಶುಲ್ಕ ಪಾವತಿಸಬೇಕು ಎಂಬುದು ಒಪ್ಪಿಕೊಳ್ಳೋಣ. ಆದರೆ, ಟೋಲ್ ಶುಲ್ಕ ಯಾವ ರೀತಿಯಲ್ಲಾದರೂ ಪಾವತಿ ಮಾಡುವ ಹಕ್ಕು ಜನ ಸಾಮಾನ್ಯರಿಗೆ ಇದೆ. ಯಾವ ರೀತಿ ಫಾಸ್ಟ್ಯಾಗ್ ಗೆ ಅವಕಾಶ ಕಲ್ಪಿಸಿದ್ದಾರೋ, ಅದೇ ರೀತಿ ನಗದು ಪಾವತಿಗೂ ಅವಕಾಶ ನೀಡಬೇಕಿತ್ತು. ಇದು ಜನರಿಗೆ ನೀಡಿರುವ ಮೂಲ ಭೂತ ಹಕ್ಕುಗಳ ಉಲ್ಲಂಘನೆ ಎಂದು ವಕೀಲ ರಾಘವೇಂದ್ರ ಕಟ್ಟೀಮನಿ ಅಭಿಪ್ರಾಯ ಪಟ್ಟಿದ್ದಾರೆ.

ಫಾಸ್ಟ್ಯಾಗ್ ದಂಡ ಮಹಾ ದ್ರೋಹ :

ಫಾಸ್ಟ್ಯಾಗ್ ದಂಡ ಮಹಾ ದ್ರೋಹ :

ಐದು ಲಕ್ಷ ರೂಪಾಯಿ ಕೊಟ್ಟು ಒಂದು ವಾಹನ ಖರೀದಿ ಮಾಡಿದರೆ, ಅದಕ್ಕೆ ಸಾರಿಗೆ ಅಧಿಕಾರಿಗಳು ಒಂದೂವರೆ ಲಕ್ಷ ರೂಪಾಯಿ ರಸ್ತೆ ತೆರಿಗೆ ವಿಧಿಸುತ್ತಾರೆ. ರಸ್ತೆ ತೆರಿಗೆ ಪಾವತಿಸಿದ ಬಳಿಕವೂ ಯಾಕೆ ಟೋಲ್ ಶುಲ್ಕ. ಭಾರತ ವಾಹನ ಮಾರಾಟದ ಹಬ್ ಆಗಿದೆ. ವಾಹನಗಳು ಮಾರಾಟ ಆದಷ್ಟೂ ರಸ್ತೆ ತೆರಿಗೆ ಸರ್ಕಾರದ ಬೊಕ್ಕಸ ತುಂಬಿ ಹರಿಯುತ್ತಿದೆ. ಈ ಹಣ ಎಲ್ಲಿ ಹೋಗುತ್ತಿದೆ. ರಸ್ತೆ ತೆರಿಗೆ ಯಾಕೆ ಕಟ್ಟಿಸಿಕೊಳ್ಳಬೇಕು.ಇರುವ ರಸ್ತೆಗಳೆಲ್ಲಾ ಟೋಲ್ ರಸ್ತೆಗಳಾಗಿವೆ. ರಾಜ್ಯದಲ್ಲಿ 44 ಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್ ಗಳಿವೆ. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಭೂತ್ ಸಂಸ್ಕೃತಿ ಆರಂಭವಾಗಿದ್ದು, ಇನ್ನೇನು ಜಿಲ್ಲಾ ರಸ್ತೆಗಳಲ್ಲಿ ಟೋಲ್ ವಸೂಲಿ ಶೀಘ್ರದಲ್ಲಿ ಆರಂಭವಾಗಲಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ವಾಹನಗಳಿಗೆ ಯಾಕೆ ರೋಡ್ ಟ್ಯಾಕ್ಸ್ ವಸೂಲಿ ಮಾಡಬೇಕು ? ನಮ್ಮ ಜನ ಮುಗ್ಧರು. ಟೋಲ್ ಕಟ್ಟುವ ಜತೆಗೆ ಇದೀಗ ಫಾಸ್ಟ್ಯಾಗ್ ಕಡ್ಡಾಯ. ಒಂದು ಪ್ರತ್ಯೇಕ ಕಾಯ್ದೆ ಇಲ್ಲದೇ ಫಾಸ್ಟ್ಯಾಗ್ ಕಡ್ಡಾಯ, ಫಾಸ್ಟ್ಯಾಗ್ ಇಲ್ಲಿದ್ದರೆ ದಂಡ ಕಟ್ಟಿ ಎಂಬುದು ಕಾನೂನಿಗೆ ವಿರೋಧವಾಗಿದೆ. ಯಾವ ವಿಶೇಷ ಕಾಯ್ದೆ ತಂದು ದಂಡ ಕಟ್ಟಿ ಅಂತ ಹೇಳುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಲಿಕ್ಕೆ ಕಾನೂನು ಮಾಡಿದ್ದಾರೆ. ಅದೇ ರೀತಿ ಫಾಸ್ಟ್ಯಾಗ್ ಕಡ್ಡಾಯ ಮಾಡದಿದ್ದರೆ ದಂಡ ಕಟ್ಟಬೇಕು ಎಂಬ ವಿಶೇಷ ಕಾನೂನು ಜಾರಿಗೆ ತಂದಿದ್ದಾರಾ ? ಜನರನ್ನು ಲೂಟಿ ಮಾಡುವ ಈ ನೀತಿಗಳ ವಿರುದ್ಧ ಜನರೇ ಮಾತನಾಡಬೇಕು ಎಂದು ವಕೀಲರಾದ ಬಿ. ಸಿದ್ದೇಶ್ವರ ತನ್ನ ಅಭಿಪ್ರಾಯವನ್ನು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.

ಟೋಲ್ ಲೆಕ್ಕ ಕೊಡಲಿ:

ಟೋಲ್ ಲೆಕ್ಕ ಕೊಡಲಿ:

ರಾಷ್ಟ್ರೀಯ ಹೆದ್ದಾರಿಗಳನ್ನು ಎಷ್ಟು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ತಗುಲಿರುವ ವೆಚ್ಚ ಎಷ್ಟು ? ಅವನ್ನು ನಿರ್ವಹಣೆ ಮಾಡಲಿಕ್ಕೆ ಮಾಡಿರುವ ವೆಚ್ಚ ಎಷ್ಟು ? ಪ್ರತಿ ಕ್ಷಣ ಸಾರ್ವಜನಿಕರಿಂದ ಸಂಗ್ರಹವಾದ ಟೋಲ್ ಶುಲ್ಕ ಕುರಿತು ತಿಳಿದು ಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಈ ಎಲ್ಲಾ ವಿವರಗಳನ್ನು ಟೋಲ್ ಗಳ ಬಳಿ ಡಿಜಿಟಲ್ ಮೀಟರ್ ನಲ್ಲಿ ಪ್ರಕಟಿಸಲಿ. ಸಂಗ್ರಹವಾಗುವ ಪ್ರತಿ ರೂಪಾಯಿ ಟೂಲ್ ಹಣದ ಮೊತ್ತದ ವಿವರ ಸಾರ್ವಜನಿಕರು ನೋಡುವಂತೆ ಪಾರದರ್ಶಕತೆ ತರಲಿ. ಪ್ರತಿ ಟೋಲ್ ಬಳಿ ಈವರೆಗೂ ಸಂಗ್ರಹವಾದ ಟೋಲ್ ಶುಲ್ಕ, ಪ್ರತಿ ಕ್ಷಣ ಸಂಗ್ರಹವಾಗುತ್ತಿರುವ ಟೋಲ್ ಮೊತ್ತದ ವಿವರ ಖಾಸಗಿ ಕಂಪನಿಗಳು ಬಹಿರಂಗ ಪಡಿಸಲಿ ಎಂದು ಸಿದ್ದೇಶ್ವರ ಪ್ರಶ್ನಿಸಿದ್ದಾರೆ.

ಫೆ. 15 ರಂದು ದೇಶೆಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯಕ್ಕೆ ನೀಡಿದ್ದ ಗಡುವು ಮುಗಿದಿತ್ತು. ರಾಜ್ಯದಲ್ಲಿ ವಿವಿಧ ಟೋಲ್ ಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ದಂಡದ ರೂಪದಲ್ಲಿ ದುಬಾರಿ ಮೊತ್ತ ವಸೂಲಿ ಮಾಡಿದವು. ಇದರ ವಿರುದ್ಧ ಸಾರ್ವಜಿಕರು ಆಕ್ರೋಶ ವ್ಕ್ತಪಡಿಸಿದರೂ, ಅದಕ್ಕೆ ಸ್ಪಂದಿಸುವ ಬಗ್ಗೆಯಾಗಲೀ, ಜನರ ಹಕ್ಕುಗಳ ಉಲ್ಲಂಘನೆ ಬಗ್ಗೆ ಸಣ್ಣ ಪ್ರತಿಕ್ರಿಯೆ ಕೂಡ ಸರ್ಕಾರ ನೀಡಲಿಲ್ಲ. ಕೇವಲ 100 ಪರ್ಸೆಂಟ್ ಡಿಜಿಟಲೀಕರಣ ಎಂದು ತನ್ನ ಬೆನ್ನು ತಾನು ತಟ್ಟಿಕೊಳ್ಳುತ್ತಿದೆ. ವಾಸ್ತವ ಅರಿಯದ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಜನರೇ ಎಚ್ಚೆತ್ತುಕೊಳ್ಳಬೇಕು.

English summary
Fastag fine was againest the Fundamental rights says Legal experts
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X