keyboard_backspace

Explained: ಅಯೋಧ್ಯೆ ಭೂಮಿ ಅಧಿಕಾರಿಗಳ ಸಂಬಂಧಿಕರಿಂದ ಖರೀದಿ: ಯಾರ ಬಳಿ ಎಷ್ಟಿದೆ ಭೂಮಿ?

Google Oneindia Kannada News

ಫೆಬ್ರವರಿ 2020 ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸ್ಥಾಪನೆ ಮಾಡಲಾಗಿದ್ದು ಈವರೆಗೆ ಸುಮಾರು 70 ಎಕರೆಗಳನ್ನು ಟ್ರಸ್ಟ್‌ ಸ್ವಾಧೀನಕ್ಕೆ ಪಡೆದುಕೊಂಡಿದೆ. ಆದರೆ ಈ ನಡುವೆ ಅಯೋಧ್ಯೆ ಯೋಜನೆಯ ಮೂಲಕ ಖಾಸಗಿ ಖರೀದಿದಾರರು ಭಾರೀ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಅಧಿಕಾರಿಗಳು ಕೂಡಾ ಈ ಅಯೋಧ್ಯೆ ಯೋಜನೆಯನ್ನು ಹಣ ಗಳಿಸುವ ತಮ್ಮ ಭರವಸೆಯ ಕೇಂದ್ರವನ್ನಾಗಿಸಿಕೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ತನಿಖೆಯಲ್ಲಿ ಬಹಿರಂಗವಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಅಯೋಧ್ಯೆಯ ಭೂ ಹಗರಣದ ಬಗ್ಗೆ ತನಿಖೆಯನ್ನು ಮಾಡಿದ್ದು, ಈ ತನಿಖಾ ವರದಿಯನ್ನು ಪ್ರಕಟ ಮಾಡಿದೆ. ಈ ತನಿಖೆಯ ಪ್ರಕಾರ ಭೂಮಿಯನ್ನು ಖರೀದಿ ಮಾಡಿದವರಲ್ಲಿ ಸ್ಥಳೀಯ ಶಾಸಕರು, ಅಯೋಧ್ಯೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ನಿಕಟ ಸಂಬಂಧಿಗಳು ಮತ್ತು ಸ್ಥಳೀಯ ಕಂದಾಯ ಅಧಿಕಾರಿಗಳು ಕೂಡಾ ಸೇರಿದ್ದಾರೆ.

ಶಾಸಕರು, ಮೇಯರ್‌ಗಳು ಹಾಗೂ ರಾಜ್ಯ ಒಬಿಸಿ ಕಮಿಷನ್‌ನ ಸದಸ್ಯರುಗಳು ತಮ್ಮ ಹೆಸರಿನಲ್ಲೇ ಡಿವಿಜನ್‌ ಕಮಿಷನ್‌, ಸಬ್‌ ಡಿವಿಷನ್‌ ಮೆಜಿಸ್ಟ್ರೀಸ್‌, ಡೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌, ಸರ್ಕಲ್‌ ಆಫಿಸರ್‌ ಆಫ್‌ ಪೊಲೀಸ್‌, ಸ್ಟೇಟ್‌ ಇನ್ಫಾರ್ಮೆಷನ್‌ ಕಮಿಷನರ್‌ಗಳ ಸಂಬಂಧಿಕರಿಗೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ ತನಿಖೆಯಲ್ಲಿ ಇಂತಹ 14 ಪ್ರಕರಣಗಳು ಬಯಲಿಗೆ ಬಂದಿದೆ. ಅಧಿಕಾರಿಗಳ ಕುಟುಂಬಸ್ಥರು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ಭೂಮಿಯನ್ನು ಖರೀದಿ ಮಾಡಿದ್ದು, ಖರೀದಿ ಮಾಡಿದ ಭೂಮಿಗಳು ಎಲ್ಲವೂ ರಾಮ ಮಂದಿರದ ಸ್ಥಳದ 5-ಕಿಮೀ ವ್ಯಾಪ್ತಿಯೊಳಗೆ ಇದೆ.

 ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ ರಾಮಮಂದಿರ ಟ್ರಸ್ಟ್ ಇನ್ನಷ್ಟು ಭೂ ಹಗರಣ ಬಯಲಿಗೆ

ಒಂದೆಡೆ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್ (ಎಂಆರ್‌ವಿಟಿ) ದಲಿತ ಗ್ರಾಮಸ್ಥರಿಂದ ಭೂಮಿಯನ್ನು ಖರೀದಿಸುವಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ನಿರ್ವಹಣೆ ಹೊಣೆ ಹೊತ್ತುಕೊಂಡಿರುವ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿರುದ್ಧ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇಂಡಿಯಾ ಟುಡೇ ಈಗಾಗಲೇ ವರದಿ ಮಾಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಭೂ ದಾಖಲೆಗಳನ್ನು ತನಿಖೆ ಮಾಡಿದೆ. ಹಾಗೆಯೇ ಪ್ಲಾಟ್ ಸೈಟ್‌ಗಳಿಗೆ ಭೇಟಿ ನೀಡಿದೆ. ಹಾಗೆಯೇ ಅಧಿಕಾರಿಗಳ ಜೊತೆ, ಖರೀದಿದಾರರ ಜೊತೆ ಮಾತನಾಡಿ ತನಿಖಾ ವರದಿಯನ್ನು ಪ್ರಕಟ ಮಾಡಿದೆ. ಯಾರ ಬಳಿ ಎಷ್ಟು ಭೂಮಿಯಿದೆ, ದಾಖಲೆಗಳು ಏನು ಹೇಳುತ್ತದೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ, ಮುಂದೆ ಓದಿ...

ವಿಭಾಗೀಯ ಆಯುಕ್ತ ಎಂಪಿ ಅಗರ್ವಾಲ್‌

ವಿಭಾಗೀಯ ಆಯುಕ್ತ ಎಂಪಿ ಅಗರ್ವಾಲ್‌

ವಿಭಾಗೀಯ ಆಯುಕ್ತ ಎಂಪಿ ಅಗರ್ವಾಲ್‌ರ ಮಾವ ಕೇಶವ್ ಪ್ರಸಾದ್ ಅಗರ್ವಾಲ್‌ ಡಿಸೆಂಬರ್ 10, 2020 ರಂದು ಬರ್ಹತಾ ಮಂಜಾದಲ್ಲಿ 2,530 ಚದರ ಮೀಟರ್ ಜಾಗವನ್ನು ಸುಮಾರು 31 ಲಕ್ಷ ರೂಪಾಯಿ ನೀಡಿ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ ಖರೀದಿ ಮಾಡಿದ್ದಾರೆ. ಸೋದರ ಮಾವ ಆನಂದ್ ವರ್ಧನ್ ಅದೇ ದಿನ ಅದೇ ಗ್ರಾಮದಲ್ಲಿ ಸುಮಾರು 1,260 ಚದರ ಮೀಟರ್ ಭೂಮಿಯನ್ನು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ ಸುಮಾರು 15.50 ನೀಡಿ ಖರೀದಿ ಮಾಡಿದ್ದಾರೆ. ಇನ್ನು ಸಂಸ್ಥೆಯ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಆಯುಕ್ತರ ಪತ್ನಿ ತನ್ನ ತಂದೆಯ ಸಂಸ್ಥೆಯಾದ ಹೆಲ್ಮಂಡ್ ಕಾಂಟ್ರಾಕ್ಟರ್ಸ್ ಮತ್ತು ಬಿಲ್ಡರ್ಸ್ ಎಲ್‌ಎಲ್‌ಪಿಯಲ್ಲಿ ಪಾಲುದಾರರಾಗಿದ್ದಾರೆ ಎಂದು ಕಂಡು ಬಂದಿದೆ. ಇನ್ನು ಈ ಬಗ್ಗೆ ಪ್ರಶ್ನಿಸಿದಾಗ ಎಂಪಿ ಅಗರ್ವಾಲ್‌, "ಏನೂ ನೆನಪಿಲ್ಲ" ಎಂದು ಹೇಳಿ ಯಾವುದೇ ಪ್ರಶ್ನೆಗೆ ಉತ್ತರಿಸಿಲ್ಲ. ಇನ್ನು ಅವರ ಮಾವ ಕೇಶವ್ ಪ್ರಸಾದ್ ಅಗರ್ವಾಲ್‌, "ಹೌದು, ನಾನು ನಿವೃತ್ತಿಯ ನಂತರ ಅಯೋಧ್ಯೆಯಲ್ಲಿ ಉಳಿಯಲು ಯೋಜಿಸಿದ್ದರಿಂದ ನಾನು ಈ ಭೂಮಿಯನ್ನು ಖರೀದಿಸಿದೆ. ಆದರೆ ಇದರಲ್ಲಿ ಎಂಪಿ ಅಗರ್ವಾಲ್‌ ಯಾವುದೇ ಪಾತ್ರವಿಲ್ಲ," ಎಂದು ತಿಳಿಸಿದ್ದಾರೆ.

ಮುಖ್ಯ ಕಂದಾಯ ಅಧಿಕಾರಿ ಪುರುಷೋತ್ತಮ್ ದಾಸ್ ಗುಪ್ತಾ

ಮುಖ್ಯ ಕಂದಾಯ ಅಧಿಕಾರಿ ಪುರುಷೋತ್ತಮ್ ದಾಸ್ ಗುಪ್ತಾ

ಜುಲೈ 20, 2018 ಮತ್ತು ಸೆಪ್ಟೆಂಬರ್ 10, 2021 ರ ನಡುವೆ ಅಯೋಧ್ಯೆಯ ಮುಖ್ಯ ಕಂದಾಯ ಅಧಿಕಾರಿ ಆಗಿದ್ದ ಪುರುಷೋತ್ತಮ್ ದಾಸ್ ಗುಪ್ತಾರ ಹೆಸರು ಕೂಡಾ ಈ ಭೂಮಿ ಖರೀದಿಯಲ್ಲಿ ಕಂಡು ಬಂದಿದೆ. ಈಗ ಅವರು ಗೋರಖ್‌ಪುರದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಕಾರ್ಯನಿರ್ವಾಹಕ) ಆಗಿದ್ದಾರೆ. ಪುರುಷೋತ್ತಮ್ ದಾಸ್ ಗುಪ್ತಾ ಅವರ ಸೋದರ ಮಾವ ಅತುಲ್ ಗುಪ್ತಾರ ಪತ್ನಿ ತೃಪ್ತಿ ಗುಪ್ತಾ ಅವರು ಅಮರ್ ಜೀತ್ ಯಾದವ್ ಅವರ ಪಾಲುದಾರಿಕೆಯಲ್ಲಿ ಅಕ್ಟೋಬರ್ 12, 2021 ರಂದು ಬರ್ಹತಾ ಮಂಜಾದಲ್ಲಿ 1,130 ಚದರ ಮೀಟರ್ ಭೂಮಿಯನ್ನು 21.88 ಲಕ್ಷ ರೂ. ನೀಡಿ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ ಖರೀದಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುರುಷೋತ್ತಮ್ ದಾಸ್ ಗುಪ್ತಾ, ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ (ಎಂಆರ್‌ವಿಟಿ) ವಿರುದ್ಧದ ವಿಚಾರಣೆಯಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ತಮ್ಮ ಹೆಸರಿನಲ್ಲಿ ಯಾವುದೇ ಭೂಮಿಯನ್ನು ಖರೀದಿಸಿಲ್ಲ ಎಂದು ಹೇಳಿದ್ದಾರೆ. ಅತುಲ್ ಗುಪ್ತಾ ಪ್ರತಿಕ್ರಿಯೆ ನೀಡಿ, "ನಾನು ಭೂಮಿಯನ್ನು ಖರೀದಿಸಿದ್ದೇನೆ, ಅದು ಕಡಿಮೆ ದರದಲ್ಲಿ ಲಭಿಸಿದೆ. ನಾನು ಪುರುಷೋತ್ತಮ್ ದಾಸ್ ಗುಪ್ತಾರ ಸಹಾಯವನ್ನು ಪಡೆದಿಲ್ಲ," ಎಂದಿದ್ದಾರೆ.

ಅಯೋಧ್ಯೆಯ ಗೋಸೈಗಂಜ್ ಶಾಸಕ ಇಂದ್ರ ಪ್ರತಾಪ್ ತಿವಾರಿ

ಅಯೋಧ್ಯೆಯ ಗೋಸೈಗಂಜ್ ಶಾಸಕ ಇಂದ್ರ ಪ್ರತಾಪ್ ತಿವಾರಿ

ನವೆಂಬರ್ 18, 2019 ರಂದು ಬರ್ಹತಾ ಮಂಜಾದಲ್ಲಿ 2,593 ಚದರ ಮೀಟರ್‌ ಭೂಮಿಯನ್ನು ಅಯೋಧ್ಯೆಯ ಗೋಸೈಗಂಜ್ ಶಾಸಕ ಇಂದ್ರ ಪ್ರತಾಪ್ ತಿವಾರಿ ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ ಖರೀದಿ ಮಾಡಿದ್ದಾರೆ. ಮಾರ್ಚ್ 16, 2021 ರಂದು, ಅವರ ಸೋದರ ಮಾವ ರಾಜೇಶ್ ಕುಮಾರ್ ಮಿಶ್ರಾ, ರಾಘವಾಚಾರ್ಯ ಎಂಬವರ ಜೊತೆಗೆ ಸೂರಜ್ ದಾಸ್ ಅವರಿಂದ 47.40 ಲಕ್ಷ ರೂಪಾಯಿ ನೀಡಿ, ಬರ್ಹತಾ ಮಜಾದಲ್ಲಿ 6320 ಚದರ ಮೀಟರ್ ಭೂಮಿಯನ್ನು ಖರೀದಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂದ್ರ ಪ್ರತಾಪ್ ತಿವಾರಿ ಸೋದರ ಮಾವ ರಾಜೇಶ್ ಕುಮಾರ್ ಮಿಶ್ರಾ, "ನಾನು ಈ ಪ್ಲಾಟ್‌ಗಳನ್ನು ನನ್ನ ಉಳಿತಾಯದ ಹಣದಿಂದ ಖರೀದಿಸಿದೆ. ಅದನ್ನು ಹೊರತುಪಡಿಸಿ ತಿವಾರಿ ಜೀ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನವೆಂಬರ್ 18, 2019 ರಂದು, ಶಾಸಕರಿಗೆ ಸಂಬಂಧಿಸಿದ ಮಾನ್ ಶಾರದಾ ಸೇವಾ ಟ್ರಸ್ಟ್‌ ಬರ್ಹತಾ ಮಂಜಾದಲ್ಲಿ 9,860 ಚದರ ಮೀಟರ್ ಭೂಮಿಯನ್ನು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ ಖರೀದಿ ಸುಮಾರು 73.95 ಲಕ್ಷ ನೀಡಿ ಖರೀದಿ ಮಾಡಿದ್ದಾರೆ.

ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ದೀಪಕ್ ಕುಮಾರ್

ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ದೀಪಕ್ ಕುಮಾರ್

ಜುಲೈ 26, 2020 ಮತ್ತು ಮಾರ್ಚ್ 30, 2021 ರ ನಡುವೆ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಆಗಿದ್ದ ದೀಪಕ್ ಕುಮಾರ್ ಅವರ ಪತ್ನಿಯ ಸಹೋದರಿ ಮಹಿಮಾ ಠಾಕೂರ್ ಅವರು ಸೆಪ್ಟೆಂಬರ್ 1, 2021 ರಂದು ಬರ್ಹತಾ ಮಂಜಾದಲ್ಲಿ 1,020 ಚದರ ಮೀಟರ್ ಭೂಮಿಯನ್ನು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ 19.75 ಲಕ್ಷ ರೂ.ಗೆ ಖರೀದಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೀಪಕ್ ಕುಮಾರ್, "ನಾನು ಅಯೋಧ್ಯೆಯಲ್ಲಿ ಪೋಸ್ಟಿಂಗ್‌ನಲ್ಲಿ ಇದ್ದಾಗ ನನ್ನ ಯಾವುದೇ ಸಂಬಂಧಿಕರು ಯಾವುದೇ ಭೂಮಿಯನ್ನು ಖರೀದಿಸಿಲ್ಲ. ಅಲ್ಲಿನ ಯಾವುದೇ ಜಮೀನಿಗೆ ನಾನು, ನನ್ನ ಪತ್ನಿ ಅಥವಾ ನನ್ನ ತಂದೆ ಹಣ ನೀಡಿಲ್ಲ. ನನ್ನ ಸಹೋದರ (ಮಹಿಮಾ ಠಾಕೂರ್ ಅವರ ಪತಿ) ಕುಶಿನಗರದಿಂದ ಬಂದವರು ಮತ್ತು ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕುಶಿನಗರದಲ್ಲಿರುವ ತಮ್ಮ ಭೂಮಿಯನ್ನು ಮಾರಾಟ ಮಾಡಿದ ನಂತರ ಅವರು ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಅವರು ನನಗೆ ಹೇಳಿದ್ದಾರೆ. ಈ ಖರೀದಿಯಲ್ಲಿ ನನ್ನ ಯಾವುದೇ ಪಾತ್ರ ಮತ್ತು ಸಂಬಂಧವಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.

ಯುಪಿ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಉಮಾಧರ್ ದ್ವಿವೇದಿ

ಯುಪಿ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಉಮಾಧರ್ ದ್ವಿವೇದಿ

ಯುಪಿ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಉಮಾಧರ್ ದ್ವಿವೇದಿ ಪ್ರಸ್ತುತ ಲಕ್ನೋದಲ್ಲಿ ವಾಸಿಸುತ್ತಿದ್ದಾರೆ. ಅವರು ಅಕ್ಟೋಬರ್ 23, 2021 ರಂದು ಬರ್ಹತಾ ಮಂಜಾದಲ್ಲಿ 1,680 ಚದರ ಮೀಟರ್‌ ಭೂಮಿಯನ್ನು ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ನಿಂದ 39.04 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮಹರ್ಷಿ ರಾಮಾಯಣ ವಿದ್ಯಾಪೀಠ ಟ್ರಸ್ಟ್‌ ವಿರುದ್ಧ ಯಾವುದೇ ಪ್ರಕರಣ ಬಾಕಿ ಇದೆಯೇ ಎಂದು ನನಗೆ ತಿಳಿದಿಲ್ಲ. ಈ ವ್ಯವಹಾರದಲ್ಲಿ ನಾನು ಜಿಲ್ಲಾಡಳಿತದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ," ಎಂದಿದ್ದಾರೆ.

ಅಯೋಧ್ಯೆ ಶಾಸಕರು ವೇದ್ ಪ್ರಕಾಶ್ ಗುಪ್ತಾ

ಅಯೋಧ್ಯೆ ಶಾಸಕರು ವೇದ್ ಪ್ರಕಾಶ್ ಗುಪ್ತಾ

ಅಯೋಧ್ಯೆ ಶಾಸ ವೇದ್ ಪ್ರಕಾಶ್ ಗುಪ್ತಾರ ಸೋದರಳಿಯ ತರುಣ್ ಮಿತ್ತಲ್ ನವೆಂಬರ್ 21, 2019 ರಂದು ಬರ್ಹತಾ ಮಂಜಾದಲ್ಲಿ 5,174 ಚದರ ಮೀಟರ್ ಭೂಮಿಯನ್ನು ರೇಣು ಸಿಂಗ್ ಮತ್ತು ಸೀಮಾ ಸೋನಿ ಅವರಿಂದ 1.15 ಕೋಟಿ ರೂ.ಗೆ ಖರೀದಿಸಿದರು. ಡಿಸೆಂಬರ್ 29, 2020 ರಂದು, ಅವರು ದೇವಾಲಯದ ಸ್ಥಳದಿಂದ ಸುಮಾರು 5 ಕಿಮೀ ದೂರದಲ್ಲಿರುವ ಸರಯು ನದಿಗೆ ಅಡ್ಡಲಾಗಿ ಪಕ್ಕದ ಮಹೇಶ್‌ಪುರದಲ್ಲಿ 14,860 ಚದರ ಮೀಟರ್ ಭೂಮಿಯನ್ನು ಜಗದಂಬಾ ಸಿಂಗ್ ಮತ್ತು ಜದುನಂದನ್ ಸಿಂಗ್ ಅವರಿಂದ 4 ಕೋಟಿ ರೂ.ಗೆ ಖರೀದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದ್ ಪ್ರಕಾಶ್ ಗುಪ್ತಾ, "ನಾನು ಶಾಸಕನಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಸಣ್ಣ ತುಂಡು ಭೂಮಿಯನ್ನು ಸಹ ಖರೀದಿಸಿಲ್ಲ. ಆದರೆ ಅಯೋಧ್ಯೆಯ ಶಾಸಕನಾಗಿ, ನಾನು ದೇಶಾದ್ಯಂತದ ಜನರನ್ನು ಅಯೋಧ್ಯೆಗೆ ಭೇಟಿ ನೀಡಲು ಮತ್ತು ಭೂಮಿಯನ್ನು ಖರೀದಿಸಲು ಆಹ್ವಾನಿಸುತ್ತಲೇ ಇದ್ದೇನೆ," ಎಂದು ತಿಳಿಸಿದ್ದಾರೆ. ಇನ್ನು ತರುಣ್ ಮಿತ್ತಲ್ ಅವರ ತಂದೆ ಮಾತನಾಡಿ, "ನಾವು ಪ್ಲಾಟ್‌ನಲ್ಲಿ ಗೋಶಾಲೆಯನ್ನು ಹೊಂದಿದ್ದೇವೆ, ಸದ್ಯಕ್ಕೆ ಸುಮಾರು 20 ಹಸುಗಳಿವೆ. ಮಹೇಶಪುರದಲ್ಲಿ ನಾಲ್ಕೈದು ಮಂದಿ ಜಂಟಿಯಾಗಿ ಭೂಮಿ ಖರೀದಿಸಿದ್ದಾರೆ," ಎಂದು ತಿಳಿಸಿದ್ದಾರೆ.

ಅಯೋಧ್ಯೆ ಮೇಯರ್‌ ರಿಷಿಕೇಶ್ ಉಪಾಧ್ಯಾಯ

ಅಯೋಧ್ಯೆ ಮೇಯರ್‌ ರಿಷಿಕೇಶ್ ಉಪಾಧ್ಯಾಯ

ಅಯೋಧ್ಯೆ ಮೇಯರ್‌ ರಿಷಿಕೇಶ್ ಉಪಾಧ್ಯಾಯ ಅವರು ತೀರ್ಪಿಗೆ ಎರಡು ತಿಂಗಳ ಮೊದಲು ಸೆಪ್ಟೆಂಬರ್ 18, 2019 ರಂದು 1,480 ಚದರ ಮೀಟರ್ ಭೂಮಿಯನ್ನು ಹರೀಶ್ ಕುಮಾರ್ ಎಂಬುವವರಿಂದ 30 ಲಕ್ಷ ರೂ.ಗೆ ಖರೀದಿಸಿದರು. ಜುಲೈ 9, 2018 ರಂದು, ಪರಮಹಂಸ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯದ ಮ್ಯಾನೇಜರ್ ಆಗಿ, ಅವರು ಅಯೋಧ್ಯೆಯ ಕಾಜಿಪುರ ಚಿತವನದಲ್ಲಿ 2,530 ಚದರ ಮೀಟರ್ ಭೂಮಿಯನ್ನು ರಮೇಶ್ ಅವರಿಂದ "ದೇಣಿಗೆ" ಎಂದು ಸ್ವಾಧೀನಪಡಿಸಿಕೊಂಡರು. ಅಧಿಕೃತ ದಾಖಲೆಗಳಲ್ಲಿ ಭೂಮಿಯ ಮೌಲ್ಯ 1.01 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆ ಮೇಯರ್‌ ರಿಷಿಕೇಶ್ ಉಪಾಧ್ಯಾಯ, "ನಾನು ಮೊದಲು ನನ್ನ ಸ್ವಂತ ಭೂಮಿಯನ್ನು ಮಾರಿದ್ದೆ, ನಂತರ ಅದನ್ನು ಹರೀಶ್ ಕುಮಾರ್‌ರಿಂದ ಮತ್ತೆ ಖರೀದಿಸಿದೆ. ಕಾಜಿಪುರ ಚಿತವನ್‌ನಲ್ಲಿ, 2006 ರಿಂದ ನಡೆಸುತ್ತಿರುವ ನನ್ನ ಕಾಲೇಜಿಗೆ ಭೂಮಿ ಖರೀದಿಯಾಗಿದೆ," ಎಂದು ಹೇಳಿದ್ದಾರೆ.

ಆಯುಷ್ ಚೌಧರಿ, ಮಾಜಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಅಯೋಧ್ಯೆ

ಆಯುಷ್ ಚೌಧರಿ, ಮಾಜಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಅಯೋಧ್ಯೆ

ಅಯೋಧ್ಯೆಯ ಮಾಜಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಚೌಧರಿ ಈಗ ಕಾನ್ಪುರದಲ್ಲಿದ್ದಾರೆ. ಮೇ 28, 2020 ರಂದು, ಚೌಧರಿ ಅವರ ಸೋದರ ಸಂಬಂಧಿ ಶೋಭಿತಾ ರಾಣಿ ಅಯೋಧ್ಯೆಯ ಬಿರೌಲಿಯಲ್ಲಿ 5,350 ಚದರ ಮೀಟರ್ ಭೂಮಿಯನ್ನು ಆಶಾರಾಮ್ ಎಂಬವರಿಂದ 17.66 ಲಕ್ಷ ರೂ ನೀಡಿ ಖರೀದಿ ಮಾಡಿದ್ದಾರೆ. ನವೆಂಬರ್ 28, 2019 ರಂದು, ದಿನೇಶ್ ಕುಮಾರ್‌ ಎಂಬವರಿಂದ ಶೋಭಿತಾ ರಾಣಿ ನಡೆಸುತ್ತಿರುವ ಆರವ್ ದಿಶಾ ಕಮಲಾ ಫೌಂಡೇಶನ್, 7.24 ಲಕ್ಷ ರೂ.ಗೆ ಅಯೋಧ್ಯೆಯ ಮಲಿಕ್‌ಪುರದಲ್ಲಿ 1,130 ಚದರ ಮೀಟರ್ ಭೂಮಿಯನ್ನು ಖರೀದಿ ಮಾಡಿದೆ. ಈ ಬಗ್ಗೆ ಮಾತನಾಡಿದ ಆಯುಷ್ ಚೌಧರಿ, "ಶೋಭಿತಾ ರಾಣಿ ಆಗಲಿ ಫೌಂಡೇಶನ್‌ಗೆ ಆಗಲಿ ನನ್ನೊಂದಿಗೆ ಯಾವುದೇ ಸಂಬಂಧ ಇಲ್ಲ," ಎಂದು ಹೇಳಿದ್ದು, ಈ ನಡುವೆ ರಾಣಿಯ ಪತಿ ರಾಮ್ ಜನ್ಮ ವರ್ಮಾ, "ಆಯುಷ್ ನನ್ನ ಪತ್ನಿಯ ಸೋದರಸಂಬಂಧಿ. ನಮ್ಮ ಭೂಮಿಯನ್ನು ನಾವು ಅಡಿಪಾಯವನ್ನು ಹಾಕಿದ್ದೇವೆ," ಎಂದಿದ್ದಾರೆ.

ಅರವಿಂದ್ ಚೌರಾಸಿಯಾ, ಸರ್ಕಲ್ ಅಧಿಕಾರಿ (ಈಗ ಮೀರತ್‌ನಲ್ಲಿ)

ಅರವಿಂದ್ ಚೌರಾಸಿಯಾ, ಸರ್ಕಲ್ ಅಧಿಕಾರಿ (ಈಗ ಮೀರತ್‌ನಲ್ಲಿ)

ಸರ್ಕಲ್ ಅಧಿಕಾರಿಯಾಗಿದ್ದ ಅರವಿಂದ್ ಚೌರಾಸಿಯಾ ಪ್ರಸ್ತುತ ಮೀರತ್‌ನಲ್ಲಿದ್ದಾರೆ. ಜೂನ್ 21, 2021 ರಂದು, ಅವರ ಮಾವ ಸಂತೋಷ್ ಕುಮಾರ್ ಚೌರಾಸಿಯಾ, ಭೂಪೇಶ್ ಕುಮಾರ್ ಎಂಬವರಿಂದ ಅಯೋಧ್ಯೆಯ ರಾಮ್‌ಪುರ ಹಲ್ವಾರ ಉಪರ್ಹಾರ್ ಗ್ರಾಮದಲ್ಲಿ 126.48 ಚದರ ಮೀಟರ್ ಭೂಮಿಯನ್ನು 4 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಸೆಪ್ಟೆಂಬರ್ 21, 2021 ರಂದು, ಅವರ ಅತ್ತೆ ರಂಜನಾ ಚೌರಾಸಿಯಾ ಕಾರ್ಖಾನಾದಲ್ಲಿ 279.73 ಚದರ ಮೀಟರ್ ಭೂಮಿಯನ್ನು ಭಾಗೀರಥಿ ಎಂಬವರಿಂದ 20 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಚೌರಾಸಿಯಾ, "ನನ್ನ ಮಾವ ಧಾರ್ಮಿಕ ಚಟುವಟಿಕೆಯನ್ನು ಹೆಚ್ಚಾಗಿ ನಡೆಸುತ್ತಾರೆ. ಅವರು ಅಯೋಧ್ಯೆಯಲ್ಲಿ ಆಶ್ರಮವನ್ನು ಸ್ಥಾಪಿಸಲು ಬಯಸಿದ್ದಾರೆ. ಶಿಕ್ಷಕಿಯಾಗಿರುವ ನನ್ನ ಅತ್ತೆಯ ನಿವೃತ್ತಿಯ ನಂತರ ಅವರು ಇಲ್ಲಿ ನೆಲೆಸಲು ಬಯಸಿದ್ದಾರೆ," ಎಂದು ತಿಳಿಸಿದ್ದಾರೆ.

ರಾಜ್ಯ ಮಾಹಿತಿ ಆಯುಕ್ತರು ಹರ್ಷವರ್ಧನ್ ಶಾಹಿ

ರಾಜ್ಯ ಮಾಹಿತಿ ಆಯುಕ್ತರು ಹರ್ಷವರ್ಧನ್ ಶಾಹಿ

ನವೆಂಬರ್ 18, 2021 ರಂದು, ರಾಜ್ಯ ಮಾಹಿತಿ ಆಯುಕ್ತರು ಹರ್ಷವರ್ಧನ್ ಶಾಹಿ ಅವರ ಪತ್ನಿ ಸಂಗೀತಾ ಶಾಹಿ ಮತ್ತು ಅವರ ಮಗ ಸಹರ್ಷ್ ಕುಮಾರ್ ಶಾಹಿ ಅಯೋಧ್ಯೆಯ ಸರೈರಾಸಿ ಮಂಜಾದಲ್ಲಿ 929.85 ಚದರ ಮೀಟರ್ ಭೂಮಿಯನ್ನು ಇಂದ್ರ ಪ್ರಕಾಶ್ ಸಿಂಗ್ ಅವರಿಂದ 15.82 ಲಕ್ಷ ರೂ.ಗೆ ಖರೀದಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಹರ್ಷವರ್ಧನ್ ಶಾಹಿ, "ನಾನು ಅಯೋಧ್ಯೆಯಲ್ಲಿ ವಾಸಿಸಲು ಬಯಸುತ್ತೇನೆ. ನಾನು ಈ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಖರೀದಿಸಿದ್ದೇನೆ. ನನ್ನ ಕುಟುಂಬಕ್ಕಾಗಿ ನಾನು ಅಲ್ಲಿ ಮನೆಯನ್ನು ನಿರ್ಮಿಸುತ್ತೇನೆ," ಎಂದಿದ್ದಾರೆ.

ರಾಜ್ಯ ಒಬಿಸಿ ಆಯೋಗ ಸದಸ್ಯ ಬಲರಾಮ್ ಮೌರ್ಯ

ರಾಜ್ಯ ಒಬಿಸಿ ಆಯೋಗ ಸದಸ್ಯ ಬಲರಾಮ್ ಮೌರ್ಯ

ರಾಜ್ಯ ಒಬಿಸಿ ಆಯೋಗ ಸದಸ್ಯ ಬಲರಾಮ್ ಮೌರ್ಯ ಅವರು ಫೆಬ್ರವರಿ 28, 2020 ರಂದು ಗೊಂಡಾದ ಮಹೇಶ್‌ಪುರದಲ್ಲಿ ಜಗದಂಬಾ ಮತ್ತು ತ್ರಿವೇಣಿ ಸಿಂಗ್ ಎಂಬವರಿಂದ 50 ಲಕ್ಷ ರೂ.ಗೆ 9,375 ಚದರ ಮೀಟರ್ ಭೂಮಿಯನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, "ಸುತ್ತಮುತ್ತಲಿನ ಇತರ ಖರೀದಿದಾರರು ನಿರ್ಮಾಣ ಕಾರ್ಯ ಆರಂಭ ಮಾಡಿದ ನಂತರ ನಾನು ಈ ಭೂಮಿಯಲ್ಲಿ ಹೋಟೆಲ್ ಅನ್ನು ನಿರ್ಮಿಸಲು ಬಯಸುತ್ತೇನೆ. ಅದಕ್ಕಾಗಿ ನಾನು ಬ್ಯಾಂಕ್‌ಗಳಿಂದ ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ," ಎಂದು ತಿಳಿಸಿದ್ದಾರೆ.

ಗಂಜಾ ಗ್ರಾಮದ ಲೇಖಪಾಲ ಬದ್ರಿ ಉಪಾಧ್ಯಾಯ

ಗಂಜಾ ಗ್ರಾಮದ ಲೇಖಪಾಲ ಬದ್ರಿ ಉಪಾಧ್ಯಾಯ

ಇತ್ತೀಚೆಗೆ ವರ್ಗಾವಣೆಗೊಂಡ ಗಂಜಾ ಗ್ರಾಮದ ಲೇಖಪಾಲ (ಭೂ ವ್ಯವಹಾರಗಳನ್ನು ದೃಢೀಕರಿಸುವ ಕಂದಾಯ ಅಧಿಕಾರಿ) ಬದ್ರಿ ಉಪಾಧ್ಯಾಯರ ತಂದೆ ವಶಿಷ್ಠ ನಾರಾಯಣ್ ಉಪಾಧ್ಯಾಯ ಮಾರ್ಚ್ 8, 2021 ರಂದು ಗಂಜಾದಲ್ಲಿ ಶ್ಯಾಮ್ ಸುಂದರ್ ಎಂಬುವವರಿಂದ 116 ಚದರ ಮೀಟರ್ ಭೂಮಿಯನ್ನು ರೂ 3.50 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬದ್ರಿ ಉಪಾಧ್ಯಾಯ, "ಯಾವುದೇ ಹಿತಾಸಕ್ತಿ ಸಂಘರ್ಷ ಅಥವಾ ಪ್ರಶ್ನೆ ಇಲ್ಲಿ ಇಲ್ಲ. ನನ್ನ ಬಳಿ ಹಣವಿದೆ ಮತ್ತು ನಾನು ಎಲ್ಲಿ ಬೇಕಾದರೂ ಭೂಮಿ ಖರೀದಿಸಬಹುದು," ಎಂದು ಹೇಳಿದ್ದಾರೆ.

ಸುಧಾಂಶು ರಂಜನ್, ಗಂಜಾ ಗ್ರಾಮದ ಕಂದಾಯ ಅಧಿಕಾರಿ

ಸುಧಾಂಶು ರಂಜನ್, ಗಂಜಾ ಗ್ರಾಮದ ಕಂದಾಯ ಅಧಿಕಾರಿ

ಗಂಜಾ ಗ್ರಾಮದ ಕಂದಾಯ ಅಧಿಕಾರಿ (Kanoongo: ಲೇಖಪಾಲರ ಲಸವನ್ನು ಮೇಲ್ವಿಚಾರಣೆ ಮಾಡುವವರು) ಸುಧಾಂಶು ರಂಜನ್ ಗಂಜಾರ ಪತ್ನಿ ಅದಿತಿ ಶ್ರೀವಾಸ್ತವ್ ಮಾರ್ಚ್ 8, 2021 ರಂದು ಗಂಜಾದಲ್ಲಿ 7.50 ಲಕ್ಷ ರೂಪಾಯಿ ನೀಡಿ 270 ಚದರ ಮೀಟರ್ ಭೂಮಿಯನ್ನು ಖರೀದಿಸಿದರು. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ತಾನು ಸುಧಾಂಶು ರಂಜನ್ ಭೂಮಿ ಖರೀದಿ ಮಾಡಿದ್ದನ್ನು ನಿರಾಕರಿಸಿದ್ದಾರೆ. ಆದರೆ ಅವರ ಪತ್ನಿ ಮಾತನಾಡಿ, "ಸುಧಾಂಶು ನನ್ನ ಗಂಡ. ಈ ಭೂ ವ್ಯವಹಾರದ ಬಗ್ಗೆ ನೀವು ಅವರೊಂದಿಗೆ ಮಾತನಾಡಬಹುದು," ಎಂದಿದ್ದಾರೆ.

ಎಂಆರ್‌ವಿಟಿ ಪ್ರಕರಣ ವಿಚಾರಣೆಯ ಅಧಿಕಾರಿ ಭಾನ್ ಸಿಂಗ್‌ನ ದಿನೇಶ್ ಓಜಾ

ಎಂಆರ್‌ವಿಟಿ ಪ್ರಕರಣ ವಿಚಾರಣೆಯ ಅಧಿಕಾರಿ ಭಾನ್ ಸಿಂಗ್‌ನ ದಿನೇಶ್ ಓಜಾ

ಎಂಆರ್‌ವಿಟಿ ಪ್ರಕರಣ ವಿಚಾರಣೆಯ ಸಹಾಯಕ ದಾಖಲೆ ಅಧಿಕಾರಿ ಭಾನ್ ಸಿಂಗ್‌ನ ದಿನೇಶ್ ಓಜಾ ಅವರ ಮಗಳು ಶ್ವೇತಾ ಓಜಾ ತಿಹುರಾ ಮಂಜಾದಲ್ಲಿ 2542 ಚದರ ಮೀಟರ್ ಅನ್ನು ಖರೀದಿಸಿದ್ದಾರೆ. ಈ ಭೂಮಿಯು ಭಾನ್ ಸಿಂಗ್ ವ್ಯಾಪ್ತಿಗೆ ಬರುತ್ತದೆ. 5 ಲಕ್ಷ ರೂಪಾಯಿಗೆ ಈ ಭೂಮಿಯನ್ನು ಖರೀದಿ ಮಾಡಲಾಗಿದೆ. ಓ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಓಜಾ, "ಈ ಭೂಮಿಯಲ್ಲಿ ವಿವಾದವಿಲ್ಲ ಮತ್ತು ನನ್ನ ಹೆಸರಿನಲ್ಲಿಲ್ಲ," ಎಂದು ಹೇಳಿ ನುಣುಚಿಕೊಂಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Explained: MLAs, Mayor, relatives of Commissioner, buy land in Ayodhya.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X