ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಷ್ಟವೆಂಬ ರೋಗ ಗುಣಪಡಿಸಲು ರಾಜಕಾರಣಕ್ಕೆ ಬಂದೆ: ಯತೀಂದ್ರ ಸಂದರ್ಶನ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 4 : ಮೈಸೂರಿನ ಪ್ರತಿಷ್ಠೀತ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನ ವರುಣಾ. ಈಗಾಗಲೇ ರಾಜಕೀಯ ಏರಿಳಿತದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಸಿಎಂ ಪುತ್ರ ಯತೀಂದ್ರ.

ತಂದೆಗೆ ಚಾಮುಂಡೇಶ್ವರಿ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯಾದರೆ, ಮಗನಿಗೆ ವರುಣಾ ಕ್ಷೇತ್ರ ಅಸ್ತಿತ್ವದ ಪ್ರಶ್ನೆ. ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಯತೀಂದ್ರ ರಾಜಕೀಯ ಜೀವನಕ್ಕೆ ಆಗಮಿಸಿದ್ದರ ಹಿಂದಿನ ಮರ್ಮವೇನು? ಈ ಬಾರಿ ಸಾಕಷ್ಟು ಚರ್ಚೆಗೆ ಕಾರಣವಾದ ವರುಣಾ ಕ್ಷೇತ್ರದಿಂದ ಅವರು ಗೆಲ್ಲುತ್ತಾರಾ?

ಸಿದ್ದರಾಮಯ್ಯ 2 ಕ್ಷೇತ್ರಗಳಿಂದ ಸ್ಪರ್ಧಿಸಿದರೆ ತಪ್ಪೇನಿಲ್ಲ: ಯತೀಂದ್ರ ಸಿದ್ದರಾಮಯ್ಯ 2 ಕ್ಷೇತ್ರಗಳಿಂದ ಸ್ಪರ್ಧಿಸಿದರೆ ತಪ್ಪೇನಿಲ್ಲ: ಯತೀಂದ್ರ

ಈ ಕುರಿತಾಗಿ ಅವರೇ ಮಾತನಾಡಿದ್ದಾರೆ. ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ರಾಜಕೀಯ ಬದುಕಿನ ಹೆಜ್ಜೆಗಳು ಕುರಿತು ಅನುಭವ ಹಂಚಿಕೊಂಡಿದ್ದಾರೆ.

ವೃತ್ತಿ ಬದಲಾವಣೆ ಕಷ್ಟವಾಗಲಿಲ್ಲವೇ?

ವೃತ್ತಿ ಬದಲಾವಣೆ ಕಷ್ಟವಾಗಲಿಲ್ಲವೇ?

ಪ್ರ: ನಿಮ್ಮ ಹಿಂದಿನ ವೃತ್ತಿಯಿಂದ ರಾಜಕಾರಣಕ್ಕೆ ಏಕಾಏಕಿ ಬದಲಾವಣೆಯಾಗಿದ್ದು ಹೇಗೆ? ಹೊಂದಿಕೊಳ್ಳೋಕೆ ಕಷ್ಟವೆನಿಸುತ್ತಾ ?
ಉ: ವೈದ್ಯ ವೃತ್ತಿಗೂ - ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ವೈದ್ಯನಾಗಿದ್ದಾಗ ರೋಗಿಗಳ ರೋಗವನ್ನು ಗುಣಪಡಿಸುತ್ತಿದ್ದೆ. ಈಗ ಜನರ ಕಷ್ಟವೆಂಬ ರೋಗವನ್ನು ಗುಣಪಡಿಸಲು ರಾಜಕಾರಣಕ್ಕೆ ಬಂದಿದ್ದೇನೆ. ನಾನು ಪೆಥಾಲಜಿಸ್ಟ್ ಆಗಿದ್ದೆ. ನನ್ನದೇ ಲ್ಯಾಬ್ ಇತ್ತು. ನಾನು ಹೆಚ್ಚಾಗಿ ಹೊರಗೆ ಹೋಗುತ್ತಿರಲಿಲ್ಲ. ಹಾಗಾಗಿ ಈಗ ಹೊಂದಿಕೊಳ್ಳಲು ಕಷ್ಟವೆಂದೆನಿಸುತ್ತಿದೆ. ಕಲಿಯುತ್ತಿದ್ದೇನೆ.

ಪ್ರ: ನಿಮಗೆ ಸಕ್ರೀಯ ರಾಜಕಾರಣದಲ್ಲಿ ಆಸಕ್ತಿ ಇತ್ತಾ ?ಇದು ಹಠಾತ್ತನೇ ಬಂದ ಕೆಲಸ ತಲೆಬಿಸಿ ಎನಿಸುತ್ತಿಲ್ಲವೇ ?
ಉ: ಅಣ್ಣಾ ತೀರಿಕೊಂಡ ನಂತರ ಚುನಾವಣಾ ರಾಜಕಾಣಕ್ಕೆ ಬರಬೇಕೆಂದು ನಿರ್ಧಾರ ಮಾಡಿರಲಿಲ್ಲ. ವರುಣಾದಲ್ಲಿ ತಂದೆಯವರೇ ಶಾಸಕರಾಗಿದ್ದಾಗ ಗಮನ ಕೊಡಲು ಆಗುತ್ತಿರಲಿಲ್ಲ. ರಾಕೇಶ್ ವರುಣಾ ಕ್ಷೇತ್ರವನ್ನು ಗಮನಿಸುತ್ತಿದ್ದ. ಆ ನಂತರ ನಾನು ಅಣ್ಣನ ಕೆಲಸವನ್ನು ಮಾಡತೊಡಗಿದೆ. ನನಗೆ ಇದು ಆತ್ಮತೃಪ್ತಿ ತಂದುಕೊಟ್ಟಿತು. ತಲೆ ಬಿಸಿ ಖಂಡಿತಾ ಇಲ್ಲ. ಇದು ನನ್ನ ಸ್ವಂತ ಕೆಲಸ ಎನಿಸುತಿದೆ. ಹುಟ್ಟಿದಾಗಿನಿಂದಲೂ ಯಾರು ಕೂಡ ರಾಜಕಾರಣಿಯಾಗುವುದಿಲ್ಲ. ಜನರೊಂದಿಗೆ ಬೆರೆಯುತ್ತಿದ್ದಾಗ ಕ್ಷೇತ್ರ ನಿಧಾನವಾಗಿ ನನ್ನನ್ನು ಅಪ್ಪತೊಡಗಿತು.

ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?

ವರುಣಾ ಕ್ಷೇತ್ರವನ್ನೇ ಆಯ್ದುಕೊಂಡಿದ್ದೇಕೆ?

ವರುಣಾ ಕ್ಷೇತ್ರವನ್ನೇ ಆಯ್ದುಕೊಂಡಿದ್ದೇಕೆ?

ಪ್ರ: ವರುಣಾ ಕ್ಷೇತ್ರದಲ್ಲೇ ನಿಮ್ಮ ಸ್ಪರ್ಧೆ ಏಕೆ ? ಬೇರೆಲ್ಲದರೂ ಸ್ಪರ್ಧಿಸಬಹುದಿತ್ತು? ಸಿಎಂ ಅವರ ಕ್ಷೇತ್ರವನ್ನೇ ನಿಮಗೆ ಬಿಟ್ಟುಕೊಟ್ಟ ಕಾರಣವೇನು ?
ಉ: ಅವರ ರಾಜಕೀಯ ಜೀವನದ ಆರಂಭವಾಗಿದ್ದು ಚಾಮುಂಡೇಶ್ವರಿಯಲ್ಲಿ. ರಾಜಕೀಯ ಜೀವನದ ಏಳುಬೀಳುಗಳನ್ನು ಎದುರಿಸಿದ್ದು ಅಲ್ಲೇ. ಅವರೇ ಘೋಷಿಸಿದಂತೆ ತಾವು ರಾಜಕೀಯ ಜೀವನದಲ್ಲಿ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದರು. ಹಾಗಾಗಿ ಅದನ್ನು ಎಲ್ಲಿಂದ ಶುರುಮಾಡಿದ್ದಾರೋ ಅಲ್ಲಿಯೇ ಮುಗಿಸಬೇಕೆಂಬ ಅಪೇಕ್ಷೆ ಅವರದ್ದಾಗಿತ್ತು.

ಈ ಕಾರಣಕ್ಕಾಗಿಯೇ ನೀನು ವರುಣಾದಲ್ಲಿ ನಿಲ್ಲು ಎಂದರು. ಜನರ ಒತ್ತಡವೂ ಇತ್ತು. ನಾನು ಕೂಡ ಅಣ್ಣನ ನಿಧನದ ಬಳಿಕ ಇಲ್ಲಿ ಓಡಾಡಿದ್ದೇ. ನನಗೂ ಅದು ಸೂಕ್ತವೆನಿಸಿತು. ಹಾಗಾಗಿ ಆರಿಸಿಕೊಂಡೆ ಅಷ್ಟೇ.

ಚುನಾವಣಾ ವಿಡಿಯೋಗಳು

ಏಕೆ ಮತ ಹಾಕಬೇಕು?

ಏಕೆ ಮತ ಹಾಕಬೇಕು?

ಪ್ರ: ನಿಮಗೆ ಮತದಾರರು ಏಕೆ ಮತ ಹಾಕಬೇಕು?
ಉ: ಸಿಎಂ ಮಗನೆಂದು ಅಲ್ಲ. ಡಾಕ್ಟರ್ ನೆಂದೂ ಅಲ್ಲ. ನಿಮ್ಮ ಕಾಂಗ್ರೆಸ್ ಪಕ್ಷ, ಇದರ ಸಿದ್ಧಾಂತ ನೋಡಿ ಮತ ಹಾಕಿ. ನಮ್ಮ ಪಕ್ಷದ ಕೆಲಸ ನೋಡಿ ಓಟ್ ಹಾಕಿ. ನಮ್ಮದು ಜನಸಾಮಾನ್ಯರ ಪಕ್ಷ. ಒಬ್ಬ ಅಭ್ಯರ್ಥಿ, ವ್ಯಕ್ತಿತ್ವ, ಪಕ್ಷದ ಧೋರಣೆ ಎಲ್ಲವನ್ನೂ ಅಳೆದು ತೂಗಿ ಮತ ಹಾಕಿ. ಅದು ನನ್ನನ್ನು ಒಳಗೊಂಡು ಕೂಡ. ವರುಣಾ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಕಳೆದ ಒಂದೂವರೆ ವರುಷಗಳಿಂದ 2 ರಿಂದ 3 ಬಾರಿ ಓಡಾಡಿದ್ದೇನೆ. ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಪ್ರಯತ್ನ ಸಹ ಪಟ್ಟಿದ್ದೇನೆ. ಇದರೊಟ್ಟಿಗೆ ನಾನು ಯಾವಾಗಲೂ ಮೈಸೂರಿನಲ್ಲಿಯೇ ಇರುವುದರಿಂದ ಜನರಿಗೆ ಸುಲಭವಾಗಿ ಲಭ್ಯವಾಗುತ್ತೇನೆ. ಇದನ್ನು ನೋಡಿ ಜನ ನನಗೆ ಮತಚಲಾಯಿಸುವಂತೆ ಕೇಳಿಕೊಳ್ಳುತ್ತೇನೆ.

ವಿಜಯೇಂದ್ರ ಕಣದಲ್ಲಿದ್ದಿದ್ದರೆ..?

ವಿಜಯೇಂದ್ರ ಕಣದಲ್ಲಿದ್ದಿದ್ದರೆ..?

ಪ್ರ: ವಿಜಯೇಂದ್ರ ನಿಮ್ಮ ಕ್ಷೇತ್ರಕ್ಕೆ ಬರುತ್ತಾರೆಂಬ ನಿರೀಕ್ಷೆ ಇತ್ತಾ ? ಅವರು ಇದ್ದ ಸಂದರ್ಭದಲ್ಲಿ ನಿಮಗೆ ಸೋಲಿನ ಭಯ ಕಾದಿತ್ತಾ ?
ಉ: ವಿಜಯೇಂದ್ರ ಬರುತ್ತಾರೆಂಬ ನಿರೀಕ್ಷೆ ಖಂಡಿತಾ ಇರಲಿಲ್ಲ. ಸೋಲಿನ ಭಯ ಕಾಣಿಸೋಕು ಸಾಧ್ಯವಿರಲಿಲ್ಲ. ಪ್ರತಿಸ್ಫರ್ಧಿ ಯಾರಾಗಿದ್ದರೂ ಚುನಾವಣೆ ಎದುರಿಸಲೇಬೇಕು.
ಪ್ರ: ವಿಜಯೇಂದ್ರ ಅವರು ಅಭ್ಯರ್ಥಿ ಅಲ್ಲ ಎಂದ ದಿನದಿಂದ ನಿಮ್ಮ ನೆಮ್ಮದಿ ಇಮ್ಮಡಿಗೊಂಡಿದೆ ಎಂಬ ಮಾತಿದೆ ಹೌದೇ ?
ಉ: ನಾನು ಮೊದಲಿನಿಂದಲೂ ನೆಮ್ಮದಿಯಿಂದ ಇದ್ದೇನೆ. ನಮಗೆ ಯಾವ ವ್ಯಕ್ತಿ ಪ್ರತಿಸ್ಪರ್ಧಿಯಾದರೂ ಚುನಾವಣೆ ಎದುರಿಸುವ ಪರಿ ಅರಿವಿದೆ.

ಕುಟುಂಬ ರಾಜಕಾರಣದ ವಿರೋಧಿಯಾದರೂ ನಿಮ್ಮ ತಂದೆ ನಿಮಗೆ ಟಿಕೆಟ್ ನೀಡಿದ್ದೇಕೆ?

ಕುಟುಂಬ ರಾಜಕಾರಣದ ವಿರೋಧಿಯಾದರೂ ನಿಮ್ಮ ತಂದೆ ನಿಮಗೆ ಟಿಕೆಟ್ ನೀಡಿದ್ದೇಕೆ?

ಪ್ರ: ನಿಮ್ಮ ತಂದೆಯವರು ಕುಟುಂಬ ರಾಜಕಾರಣದ ವಿರೋಧಿ? ಆದರೆ ನೀವು ಅಖಾಡಕ್ಕೆ ಇಳಿದಿರುವುದು ಎಷ್ಟು ಸರಿ ?
ಉ: ವಂಶಪಾರಂಪರ್ಯ ರಾಜಕಾರಣ ಎಂದರೆ ಮನೆಯಲ್ಲಿ ಯಾರೋ ಒಬ್ಬರು ಮಾತ್ರ ಬರಬೇಕೆಂಬ ಧ್ಯೇಯವೇ ? ಹಾಗಾದರೆ ನನ್ನ ತಂದೆಯವರು ರಾಜಕಾರಣಿ ಎಂದ ಮಾತ್ರಕ್ಕೆ, ನಾವು ಕೂಡ ಪೊಲಿಟಿಕ್ಸ್ ಗೆ ಬರಬೇಕೆಂಬ ಆಸೆಯನ್ನು ಬದಿಗೊತ್ತಬೇಕೆ. ಇದರಿಂದ ನಮಗೆ ನಾವೇ ಅನ್ಯಾಯ ಮಾಡಿದಂತಾಗುವುದಿಲ್ಲವೇ ? ಕುಟುಂಬ ರಾಜಕಾರಣ ಎಂದರೇ ಒತ್ತಾಯ ಪೂರ್ವಕವಾಗಿ ಬರುವುದು ಹಾಗೂ ನಮ್ಮದೇ ಪಕ್ಷದ ಮುಖಂಡರನ್ನು ತುಳಿದು ಬೆಳೆಯುವುದು. ನಾನು ಹಾಗೂ ನನ್ನ ತಂದೆ ಇಬ್ಬರೂ ಆ ಕೆಲಸವನ್ನು ಮಾಡಿಯೇ ಇಲ್ಲವಲ್ಲ. ಹೇಗೆ ಕುಟುಂಬ ರಾಜಕಾರಣ ಎಂದು ಬಿಂಬಿಸುತ್ತೀರಾ ?

ಪ್ರ: ನೀವು ರಾಜಕಾರಣಕ್ಕೆ ಹೊಸಬರು. ನಿಮ್ಮ ತಂದೆ ಅನುಭವಿಗಳು. ಅವರಿಂದ ಕಲಿತದ್ದು ಏನು ?
ಉ: ತಂದೆಯ ಭಾಷಣದ ಶೈಲಿ. ಅವರು ಸರಳ ರೀತಿಯಲ್ಲೇ ಜನಸಾಮಾನ್ಯರಿಗೂ ಮನಮುಟ್ಟುವಂತೆ ಮಾಡುವ ಪರಿಯನ್ನು ಅರಿಯುತ್ತಿದ್ದೇನೆ. ನನಗೆ ಅದು ಬಹಳ ಇಷ್ಟ.

ಪ್ರ: ನಿಮ್ಮ ಅಣ್ಣನ ಅಗಲಿಕೆಯಿಂದ ನಿಮ್ಮ ಸ್ಪರ್ಧೆ ಅನಿವಾರ್ಯವೆನಿಸಿತಾ ?
ಉ: ಅನಿವಾರ್ಯವೆಂದೆನಿಸಿಲ್ಲ. ಈಗಲೂ ಅಣ್ಣನ ಬಗ್ಗೆ ಕ್ಷೇತ್ರದ ಜನರಲ್ಲಿ ಒಲವು ಜಾಸ್ತಿಯಿದೆ. ಅವನಲ್ಲಿ ನಾಯಕತ್ವದ ಗುಣಗಳಿತ್ತು. ನಾನು ಕೂಡ ಅವನಲ್ಲಿ ಉತ್ತಮ ನಾಯಕನ ಎಲ್ಲಾ ಗುಣಗಳನ್ನು ನೋಡಿದ್ದೆ. ಅವನ ರಾಜಕಾರಣದ ಪಟ್ಟು, ತಂತ್ರಗಾರಿಕೆಯ ಮಟ್ಟವನ್ನು ನಾನು ಮುಟ್ಟಲೂ ಸಾಧ್ಯವಿಲ್ಲ. ಅವನ ಸ್ಥಾನ ತುಂಬಲು ನಾನು ಪ್ರಯತ್ನಿಸುತ್ತೇನೆ ಅಷ್ಟೇ.
ಗೆದ್ದರೆ ಮಂತ್ರಿಯಾಗುತ್ತೀರಾ?

ಗೆದ್ದರೆ ಮಂತ್ರಿಯಾಗುತ್ತೀರಾ?

ಪ್ರ: ನೀವು ಗೆದ್ದರೆ ಮಿನಿಸ್ಟರ್ ಆಗುವ ಹಂಬಲವಿದೆಯಾ ? ಮಗ ಮುಖ್ಯಮಂತ್ರಿ, ನೀವು ಸಚಿವರು ಯಾಕಾಗಬಾರದು ?
ಉ: ನಾನು ಮಿನಿಸ್ಟರ್ ಆಗಬೇಕೆಂಬ ಅಭಿಲಾಷೆಯಾಗಲೀ ಅಥವಾ ಗುರಿಯಾಗಲೀ ನನ್ನಲ್ಲಿಲ್ಲ. ನನ್ನ ಫೋಕಸ್ ಕೇವಲ ವರುಣಾ ಕ್ಷೇತ್ರಕ್ಕಷ್ಟೇ ಸೀಮಿತ.

ಪ್ರ: ನಿಮ್ಮ ಮೇಲೆ ಕಾಂಟರ್ವಸಿ ವಿಷಯಗಳು ಕೇಳಿಪಟ್ಟಿತು. ಭೂ ವಿವಾದ, ಲ್ಯಾಬ್ ವಿಚಾರ.. ಅದರಿಂದ ಹೇಗೆ ಹೊರಬಂದ್ರಿ ?
ಉ: ಹಗರಣ ಇಲ್ಲದ್ದನ್ನು ಹಗರಣವನ್ನಾಗಿಮಾಡಿದ್ದು ಬೇಸರವಾಗಿತ್ತು.ನಾನು ಸಿದ್ದರಾಮಯ್ಯನವರ ಪುತ್ರ. ಈ ತರಹದ ಕಾಂಟ್ರವರ್ಸಿಗಳು ನನ್ನ ಮೇಲೆ ಬಂದೆರಗುತ್ತದೆ ಎಂದು ಯೋಚನೆಯನ್ನು ಸಹ ಮಾಡಿರಲಿಲ್ಲ. ಸರ್ಕಾರಿ ಟೆಂಡರ್ ಕರೆದಾಗಲೇ ಅಪ್ಲೈ ಮಾಡಿದ್ದೆ. ಎಲ್ಲವೂ ಕಾನೂನಾತ್ಮಕವಾಗಿಯೇ ನಡೆದಿತ್ತು. ಆದರೆ ಕೆಲವರು ನನ್ನನ್ನು ಹಾಗೂ ತಂದೆಯವರನ್ನು ಬೇಕೆಂದೇ ಟಾರ್ಗೆಟ್ ಮಾಡಿದ್ದು ಬೇಸರ ತರಿಸಿತ್ತು. ಅದು ನನಗೆ ಹೊಸದು. ನನ್ನ ತಂದೆಗೆ ಡ್ಯಾಮೇಜ್ ಆಗಬಾರದೆಂದು ನಂತರ ನಾನು ಆ ಸಂಸ್ಥೆಯಿಂದಲೇ ಬಿಟ್ಟು ಹೊರಬಂದೆ.

ಸಂಕಷ್ಟಕ್ಕೆ ಸಿಲುಕಿದ್ದಾರಾ ಸಿಎಂ?

ಸಂಕಷ್ಟಕ್ಕೆ ಸಿಲುಕಿದ್ದಾರಾ ಸಿಎಂ?

ಪ್ರ: ನಿಮ್ಮನ್ನು ಉಳಿಸಲು ಹೋಗಿ ಸಿಎಂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ ಏಕೆ ?
ಉ: ಹಾಗೇನಿಲ್ಲ. ನಮ್ಮ ತಂದೆ ರಾಜ್ಯದ ಯಾವ ಮೂಲೆಯಲ್ಲಿ ನಿಂತರೂ ಅವರಿಗೆ ಗೆಲ್ಲುವ ವರ್ಚಸ್ಸು ಇದೆ. ಕಾಂಗ್ರೆಸ್ ನ ಭದ್ರಕೋಟೆ ಎಂದೆನಿಸದ್ದ ಹಲವು ಕಡೆ ಹಿಂದಿನಿಂದಲೂ ಒತ್ತಡ ಬಂತು. ಅವರು ಗೆಲ್ಲುವ ಕುದುರೆ. ಎಲ್ಲಿ ನಿಂತರೂ ಗೆಲ್ಲುತ್ತಾರೆ. ಎದುರಾಳಿಗಳನ್ನು ಮಣಿಸಿಯೇ ತೀರುತ್ತಾರೆ.

ಪ್ರ: ನಿಮ್ಮ ತಂದೆಯವರೆ ಎರಡು ಕ್ಷೇತ್ರದ ಸ್ಪರ್ಧೆ ಪಲಾಯನವಾದ ಎನಿಸುತ್ತಿಲ್ಲವೆ ? ಇದನ್ನು ಖುದ್ದು ಸಿಎಂ ಸ್ನೇಹಿತ ಅಂಬಿ ಕೂಡ ವಿರೋಧಿಸಿದ್ದರಲ್ಲವೇ ?
ಉ: ಪಲಾಯನವಾದ ಖಂಡಿತ ಅಲ್ಲ. ಇದನ್ನು ರಾಜಕೀಯ ಚಾಣಾಕ್ಷತನ ಎಂದು ಕರೆದರೆ ಒಳಿತು. ಅಲ್ಲಿನ ಜನರು ಕೂಡ ನಮ್ಮ ಕ್ಷೇತ್ರದಲ್ಲಿ ನೀವು ಸ್ಪರ್ಧಿಸಿದರೆ ಇಲ್ಲಿನ ಶಾಸಕರಿಗೆ ಉಪಯೋಗವಾಗಲಿದೆ ಎಂದು ಒತ್ತಡ ಹೇರಿದರು. ಹೈ ಕಮಾಂಡ್ ಕೂಡ ಸೂಚಿಸಿದ ಹಿನ್ನೆಲೆ ಸ್ಪರ್ಧಿಸಿದ್ದಾರೆ ಅಷ್ಟೇ. ಅಂಬರೀಶ್ ಅವರದ್ದು ವೈಯುಕ್ತಿಯ ನಿರ್ಧಾರ ತಿಳಿಸಿದ್ದಾರೆ. ಆದರೆ ಪಕ್ಷದ ಮೆಜರಿಟಿ ನಾಯಕರು ಸ್ಪರ್ಧಿಸುವಂತೆ ಸೂಚಿಸಿದ್ದರು. ಹಾಗಾಗಿ ಈ ನಿರ್ಧಾರಕ್ಕೆ ತಲೆ ಬಾಗಲೇಬೇಕಿತ್ತು.
ಪ್ರತ್ಯೇಕ ಧರ್ಮದ ಬಗ್ಗೆ

ಪ್ರತ್ಯೇಕ ಧರ್ಮದ ಬಗ್ಗೆ

ಪ್ರ: ವೀರಶೈವ - ಲಿಂಗಾಯತ ವಿಚಾರದಿಂದ ವರುಣಾದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂಬ ಮಾತಿದೆ. ಇದಕ್ಕೇನಂತಿರಿ ?
ಉ: ಮೈಸೂರು ಭಾಗದಲ್ಲಿ ಲಿಂಗಾಯಿತ -ವೀರಶೈವ ಧರ್ಮದ ವಿಚಾರ ಅಷ್ಟು ದೊಡ್ಡದೇನೂ ಅಲ್ಲ. ಇಲ್ಲಿ ಯಾವುದೇ ಅಸಮಾಧಾನ ಭುಗಿಲೆದ್ದಿಲ್ಲ. ಅದೊಂದು ಸುಳ್ಳುವದಂತಿ ಅಷ್ಟೇ.

ಪ್ರ: ನಿಮ್ಮ ಪ್ರಕಾರಕ್ಕೆ ಸ್ಟಾರ್ ಕ್ಯಾಂಪೇನ್ ಗಳು ಬರುತ್ತಾರೆ ? ಹೇಗೆ ನಡೆಯುತ್ತಿದೆ ಪ್ರಚಾರದ ಭರಾಟೆ ?
ಉ: ಇಲ್ಲಿ ಸ್ಟಾರ್ ಕ್ಯಾಂಪೇನರ್ ಗಳಂತೇನು ವಿಶೇಷವಿಲ್ಲ. ನಾವು ಯಾರನ್ನು ಕರೆದಿಲ್ಲ. ನಮ್ಮ ಪಕ್ಷದ ಮೇಲೆ ಗೌರವವಿರುವವರು ಸ್ವತಃ ಬಂದು ಪ್ರಚಾರ ನಡೆಸುತ್ತಿದ್ದಾರೆ. ನಾವು ಯಾರಿಗೂ ಪ್ರಚಾರ ನಡೆಸುವಂತೆ ಕೇಳಿಲ್ಲ.
ವರುಣಾ ಕ್ಷೇತ್ರದ ಬಗ್ಗೆ ನಿಮ್ಮ ಕನಸು?

ವರುಣಾ ಕ್ಷೇತ್ರದ ಬಗ್ಗೆ ನಿಮ್ಮ ಕನಸು?

ಪ್ರ: ವರುಣಾ ಕ್ಷೇತ್ರದ ಬಗ್ಗೆ ಏನು ಕನಸು ಕಟ್ಟಿಕೊಂಡಿದ್ದೀರಿ? ಅಭಿವೃದ್ಧಿಗೆ ಏನೇನು ಮಾಡಲಿದ್ದೀರಿ?
ಉ: ವರುಣಾ ಕ್ಷೇತ್ರವನ್ನು ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಇದು ನನ್ನ ಆದ್ಯತೆ.

ಪ್ರ: ವಿಜಯೇಂದ್ರ ಅಭಿಮಾನಿಗಳು ಮತದಾರರಿಗೆ ನೋಟಾ ಬಳಸಲು ಪ್ರೇರೇಪಿಸುತ್ತಿದ್ದಾರೆ. ಇದಕ್ಕೇನಂತೀರಿ?
ಉ: ಇಲ್ಲ ಹಾಗೇನೂ ಆಗುವುದಿಲ್ಲ. ನೋಟಾ ಬಳಸದಂತೆ ನಾನು ಕೂಡ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

English summary
Karnataka assembly elections 2018: Here is an interview of Yathindra Siddaramaiah. He is son of chief minsiter Siddaramaiah and Congress candidate for Varuna constituency in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X