ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ : ಜೆಡಿಎಸ್ ಪ್ರಣಾಳಿಕೆ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಮೇ 07 : ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಜೆಡಿಎಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 'ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ' ಎಂಬ ಹೆಸರಿನ ಪ್ರಣಾಳಿಕಯೆನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.

ಸೋಮವಾರ ಬೆಂಗಳೂರಿನ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ ಚುನಾವಣೆಗೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

Karnataka elections : JDS releases manifesto for 2018 elections

'ಈ ಹತ್ತು ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಒಂದೊಂದು ಬಾರಿ ಅವಕಾಶ ನೀಡಿದ್ದೀರಿ. ನನ್ನ 20 ತಿಂಗಳ ಆಡಳಿತವನ್ನು ನೋಡಿ ಈ ಬಾರಿ ನನಗೂ ಒಂದು ಅವಕಾಶ ನೀಡಿ, ವಿಶ್ವವೇ ಕರ್ನಾಟಕದ ಕಡೆ ತಿರುಗಿ ನೋಡುವ ಆಡಳಿತ ನೀಡುತ್ತೇನೆ' ಎಂದು ಕುಮಾರಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳುಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು

ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು

* ರಾಜ್ಯದ ರೈತರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ 53,000 ಕೋಟಿ ಸಾಲವನ್ನು 24 ಗಂಟೆಗಳಲ್ಲಿ ಮನ್ನಾ ಮಾಡಲಾಗುತ್ತದೆ.

* ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಮಾಡಿರುವ ಸಾಲವನ್ನು ಮನ್ನಾ

* ಸಣ್ಣ ಟ್ರಾಕ್ಟರ್ ಖರೀದಿಗೆ ಶೇ 75ರಷ್ಟು ಮತ್ತು ಇನ್ನಿತರೆ ಸಲಕರಣೆಗಳ ಖರೀದಿಗೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತದೆ

* ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣಾ ಭತ್ಯೆ ರೂಪದಲ್ಲಿ ತಿಂಗಳಿಗೆ 2 ಸಾವಿರ ರೂ. ನೀಡಲಾಗುತ್ತದೆ.

* ಆರ್ಯ ವೈಶ್ಯ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕವಾದ ನಿಗಮನವನ್ನು ಸ್ಥಾಪನೆ ಮಾಡಲಾಗುತ್ತದೆ

* ದುಡಿಯುವ ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ 100 ವಸತಿ ನಿಲಯಗಳನ್ನು ಸ್ಥಾಪನೆ ಮಾಡಲಾಗುತ್ತದೆ

* ಡಾ.ವಿಷ್ಣುವರ್ಧನ್ ಸಮಾಧಿ ಸ್ಥಳದ ವಿಚಾರವಾಗಿ ಉದ್ಭವಿಸಿರುವ ವಿವಾದ ಬಗೆಹರಿಸಲಾಗುತ್ತದೆ.

* ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನವನ್ನು 3500 ರಿಂದ 5 ಸಾವಿರಕ್ಕೆ ಏರಿಕೆ ಮಾಡಲಾಗುತ್ತದೆ

* ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯವನ್ನು ಮುಂದುವರೆಸಲಿದ್ದಾರೆ

* ವಕೀಲರ ಸಂಘಕ್ಕೆ 100 ಕೋಟಿ ರೂ. ಅನುದಾನ ಮತ್ತು ವಕೀಲರಿಗೆ 5000 ರೂ.ಸ್ಟೇಫಂಡ್

* 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 6000 ರೂ. ಮಾಸಾಶನ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ 8000 ರೂ. ಮಾಸಾಶನ.

* ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೆ ತರಲು 'ಸೇವಾ ಹಕ್ಕು ಕಾಯ್ದೆ' ಜಾರಿಗೆ
* ಸರ್ಕಾರಿ ಕಚೇರಿಗಳಲ್ಲಿ ಅವ್ಯವಹಾರ, ಅಕ್ರಮಗಳನ್ನು ತಡೆಯಲು 'ಮೂರನೇ ಕಣ್ಣು' ಎಂಬ ಕ್ಯಾಮೆರಾ ಜಾಲವನ್ನು ಸ್ಥಾಪನೆ ಮಾಡಲಾಗುತ್ತದೆ.

* ಯಾವುದೇ ವ್ಯಕ್ತಿ ಮತ್ತು ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವಾಗ ಆನ್ ಲೈನ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಈ ಮೂಲಕ ಹಣದ ಅವ್ಯವಹಾರವನ್ನು ತಡೆಗಟ್ಟಲಾಗುತ್ತದೆ.

* ಸರ್ಕಾರದ ವಿವಿಧ ಹುದ್ದೆಗಳಿಗೆ ನಿವೃತ್ತರನ್ನು ನೇಮಿಸುವ ಪರಿಪಾಠ ರಾಜ್ಯದಲ್ಲಿ ನಡೆದುಕೊಂಡು ಬಂದಿದೆ. ನಿವೃತ್ತರನ್ನು ನೇಮಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಪೂರ್ವ ನಿರ್ಧರಿತ ಮಾದರಿಯಲ್ಲಿ ಹುದ್ದೆಗಳಿಗೆ ನೇಮಕಾತಿ.

* ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೆ ತರಲು 'ಸೇವಾ ಹಕ್ಕು ಕಾಯ್ದೆ' ಜಾರಿಗೆ ತರಲಾಗುವುದು.

* ಪೊಲೀಸ್ ಇಲಾಖೆಯೂ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಸಾಮಾನ್ಯ ನಾಗರಿಕರನ್ನು ಒಳಗೊಂಡ ನಾಗರಿಕ ಮಂಡಳಿ ರಚನೆ ಮಂಡಳಿಯೊಂದನ್ನು ರಚಿಸಲಾಗುವುದು.

* ಆನ್‍ಲೈನ್ ವ್ಯವಸ್ಥೆಯಡಿಯಲ್ಲಿ ಖಜಾನೆ : ಈ ವ್ಯವಸ್ಥೆ ಅಡಿಯಲ್ಲಿ ಖಜಾನೆಗೆ ಸಂದಾಯವಾಗುವ ಎಲ್ಲ ಹಣದ ಬಾಬ್ತು ಅತ್ಯಂತ ಪಾರದರ್ಶಕವಾಗಿರಲಿದೆ. ಅದನ್ನು ಸಾರ್ವಜನಿಕರಿಗೆ ತಿಳಿಸಲು ಆನ್‍ಲೈನ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.

ಕಾನೂನು ರಕ್ಷಣೆ

* ಸರ್ಕಾರ ಮತ್ತು ಜನರೊಂದಿಗೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರತಿ ತಾಲೂಕು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 'ಜನ ಸಂಪರ್ಕ ಸಭೆ' ಯನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ. ಈ ಮೂಲಕ ನಾಗರಿಕರು ತಮ್ಮ ಕುಂದು ಕೊರತೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದು.

* ಎಲೆಕ್ಟ್ರಾನಿಕ್ ಎಫ್‍ಐಆರ್ : ಸದ್ಯದ ಪರಿಸ್ಥಿತಿಯಲ್ಲಿ ಎಫ್‍ಐಆರ್ ದಾಖಲೀಕರಣ ವ್ಯವಸ್ಥೆಯ ಮೇಲೆ ಪೊಲೀಸರು ಏಕಸ್ವಾಮ್ಯ ಹೊಂದಿದ್ದಾರೆ. ಇದನ್ನು ಹೋಗಲಾಡಿಸಲು ನಮ್ಮ ಸರ್ಕಾರ ಎಲೆಕ್ಟ್ರಾನಿಕ್ ಎಫ್‍ಐಆರ್ ವ್ಯವಸ್ಥೆ ಜಾರಿಗೆ ತರಲಿದೆ. ಈ ವ್ಯವಸ್ಥೆಯು ಎಫ್‍ಐಆರ್ ದಾಖಲೀಕರಣವನ್ನು ಸುಗಮಗೊಳಿಸಲಿದೆ. ಅಕ್ರಮಗಳನ್ನು ನೀಗಿಸಲಿದೆ.

* ಅನಗತ್ಯವಾಗಿ ವಾಹನ ತಡೆಯುವಂತಿಲ್ಲ : ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಯಾವುದೇ ವಾಹನಗಳನ್ನು ಅನಗತ್ಯವಾಗಿ ಪೊಲೀಸರು ಅಡ್ಡಗಟ್ಟಿ ತಪಾಸಣೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಣ್ಗಾವಲು ಕ್ಯಾಮೆರಾಗಳ ವಿಡಿಯೋ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುವುದು.

ಲೋಕಾಯುಕ್ತ, ಭ್ರಷ್ಟಾಚಾರ

* ಲೋಕಾಯುಕ್ತ ಬಲವರ್ಧನೆ, ಎಸಿಬಿ ನಿರ್ಮೂಲನೆ : ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರ್ಕಾರ ಪುನರುಜ್ಜೀವನಗೊಳಿಸಲಿದೆ. ಅದರ ಗತ ವೈಭವವನ್ನು ಪುನಃ ಸ್ಥಾಪಿಸಲಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸಲೆಂದೇ ಹುಟ್ಟಿಕೊಂಡ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯನ್ನು ನಿರ್ಮೂಲನೆ ಮಾಡಲಾಗುವುದು.

* ಸದ್ಯ ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿರುವ ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ದಾಳಿ ನಡೆಸಲು ಈ ಪೊಲೀಸರು ಲೋಕಾಯುಕ್ತರ ಪೂರ್ವಾನುಮತಿ ಪಡೆಯುವಂತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಲೋಕಾಯುಕ್ತಕ್ಕೆ ತನ್ನದೇ ಆದ ಸ್ವತಂತ್ರ ಸಿಬ್ಬಂದಿ ಮತ್ತು ಪೊಲೀಸ್ ವರ್ಗವನ್ನು ನೀಡಲು ಉದ್ದೇಶಿಸಿದೆ.

*ಪಿಸಿಆರ್ (ನಾಗರಿಕ ಹಕ್ಕುಗಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ನಾಗರಿಕರ ಮಾಹಿತಿ ಗೌಪ್ಯವಾಗಿಡಲು ಕ್ರಮ ಕೈಗೊಳ್ಳಲಾಗುವುದು. ರೈಡ್(ದಾಳಿ), ಟ್ರ್ಯಾಪ್‍ಗಳು ನಡೆದಾಗ ನಾಗರಿಕರ ಆಸ್ತಿಯ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸುವ ಕ್ರಮವನ್ನು ನಿಷೇಧಿಸಲಾಗುವುದು. ಆದರೆ, ದಾಳಿ ನಡೆದ ಮೂರು ತಿಂಗಳ ಒಳಗಾಗಿ ದೋಷಾರೋಪ ಸಲ್ಲಿಸುವುದು ಕಡ್ಡಾಯಗೊಳ್ಳಲಿದೆ.

* ನಿರಪರಾಧಿಗಳಿಗೆ ರಕ್ಷಣೆ : ಕಾನೂನುಗಳು ರಚನೆಯಾಗಿರುವುದು ಒಳ್ಳೆಯದಕ್ಕೆ ಎಂಬ ನಂಬಿಕೆ ಇತ್ತೀಚಿನ ದಿನಗಳಲ್ಲಿ ಶಿಥಿಲಗೊಳ್ಳುತ್ತಿದೆ. ಶೇ. 90% ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ಸುಳ್ಳು ಕೇಸುಗಳನ್ನು ದಾಖಲಿಸಿದ ಯಾವುದೇ ಪೊಲೀಸರಿಗೆ ಶಿಕ್ಷೆಯಾಗುತ್ತಿಲ್ಲ. ಆರೋಪ ಹೊತ್ತವರು ಮಾತ್ರ ವರ್ಷಾನುಗಟ್ಟಲೆ ವಿಚಾರಣೆಗೆ ಒಳಪಡಬೇಕಾದ ಸನ್ನಿವೇಶ ಎದುರಾಗಿದೆ. ಇನ್ನು ಮುಂದೆ ಮುಗ್ಧರಿಗೆ ರಕ್ಷಣೆ ಸಿಗಲಿದೆ.

* ಇಲಾಖೆಗಳಲ್ಲಿ ಭ್ರಷ್ಟಾಚಾರ ತಡೆಗೆ ಒಂದು ವ್ಯವಸ್ಥೆ: ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಕೆಳ ಹಂತದ ನ್ಯಾಯಿಕ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು.

ಭೂ ವ್ಯವಹಾರ ಸುಧಾರಣೆ ಕ್ರಮ

* ಭೂಮಿಯ ವರ್ಗಾವಣೆ, ವ್ಯವಹಾರಗಳಲ್ಲಿ ( ಕ್ರಯ, ಭೋಗ್ಯ, ಹಂಚಿಕೆ) ಪಾರದರ್ಶಕತೆ ಸಾಧಿಸಲು ಹಲವು ಸುಧಾರಣೆಗಳನ್ನು ಜೆಡಿಎಸ್ ಜಾರಿಗೆ ತರಲಿದೆ. ಯಾವುದೇ ವ್ಯಕ್ತಿ, ಟ್ರಸ್ಟ್, ಕಂಪನಿ ಮತ್ತು ಸರ್ಕಾರ ಮಾಡುವ ಭೂ ವ್ಯವಹಾರಗಳಲ್ಲಿ ಈ ಸುಧಾರಣಾ ಕ್ರಮಗಳನ್ನು ಅಳವಡಿಸಲಾಗುತ್ತದೆ.

* ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಭೂ ವ್ಯಾಜ್ಯದಿಂದಾಗಿ ಹಲವು ನಾಗರಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಇದನ್ನು ನಿವಾರಿಸಲು ಜೆಡಿಎಸ್ ಸೂಕ್ತ ಕಾಯ್ದೆ ತರಲಿದೆ. ಭೂಮಿ ಮಾರಾಟವಾದ ನಂತರ, ಮಾರಾಟಗಾರನ ವಾರಸುದಾರಿಂದ ಯಾವುದೇ ಭೂ ವಿವಾದ ಎದುರಾದರೆ, ಮಾರಾಟ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಶಾಸನ ಜಾರಿಗೆ ತರಲಾಗುತ್ತದೆ.

* ಜಿಲ್ಲಾ ನೋಂದಣಿ ಕೇಂದ್ರಗಳ ರಚನೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ನೋಂದಣಿ ಕೇಂದ್ರಗಳನ್ನು ಜಾರಿಗೆ ತರಲಾಗುವುದು.

* ಭೂ ಕಬಳಿಕೆ ನಿಯಂತ್ರಿಸಲು ನ್ಯಾಯಾಲಯ, ಪ್ರತ್ಯೇಕ ಸಿಬ್ಬಂದಿ ರಾಜ್ಯದಲ್ಲಿ ಸರ್ಕಾರಿ ಭೂ ಕಬಳಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭೂ ಕಬಳಿಕೆ ಪ್ರಕರಣಗಳ ಇತ್ಯರ್ಥಕ್ಕಾಗಿ ಪ್ರತ್ಯೇಕ ನ್ಯಾಯಾಲಯ ಮತ್ತು ಸಿಬ್ಬಂದಿ ವರ್ಗವನ್ನು ಅಸ್ತಿತ್ವಕ್ಕೆ ತರಲಾಗುವುದು. ಕಬಳಿಕೆಯಾದ ಭೂಮಿಯನ್ನು ವಶಕ್ಕೆ ಪಡೆಯುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು.

ಆಡಳಿತ

* ಪರೀಕ್ಷೆ ಆಧಾರದಲ್ಲಿ ವೇತನ, ಬಡ್ತಿ: ಕ್ಲಾಸ್ ಒನ್ ಅಧಿಕಾರಿಗಳು ಸೇರಿದಂತೆ ಐಎಎಸ್, ಐಪಿಎಸ್, ಐಎಫ್‍ಎಸ್ ಮತ್ತು ಕೆಎಎಸ್ಅ ಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಾಮರ್ಶಿಸಲು ವಾರ್ಷಿಕ ಪರೀಕ್ಷೆ ಪರೀಕ್ಷೆ ನಡೆಸಲಾಗುವುದು.

ವೇತನ ಹೆಚ್ಚಳಕ್ಕೆ ಈ ಪರೀಕ್ಷೆ ಮಾನದಂಡವಾಗಲಿದೆ. ಡಿಪಿಎಆರ್ ಇಲಾಖೆಯ ಕಾರ್ಯದರ್ಶಿ ಈ ಪರೀಕ್ಷೆಯನ್ನು ನಡೆಸಲಿದ್ದಾರೆ. ಪರೀಕ್ಷೆಯಲ್ಲಿ ಸತತ ಎರಡು ವರ್ಷ ಅನುತ್ತೀರ್ಣಗೊಳ್ಳುವವರಿಗೆ ಹಿಂಬಡ್ತಿ ನೀಡಲಾಗುತ್ತದೆ. ಸತತ ಮೂರು ವರ್ಷ ಅನುತ್ತೀರ್ಣಗೊಂಡವರಿಗೆ ಕಡ್ಡಾಯ ನಿವೃತ್ತಿ
ತೆಗೆದುಕೊಳ್ಳಲು ಸೂಚಿಸಲಾಗುವುದು.

* ಸರ್ಕಾರಿ ಅಧಿಕಾರಿಗಳ ಆಸ್ತಿಘೋಷಣೆಯನ್ನು ಸರ್ಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಅಧಿಕಾರಿಗಳು ಆಸ್ತಿ ಘೋಷಣೆ ಮಾಡದಿರುವುದು ಅಪರಾಧವಾಗಲಿದೆ. ಪ್ರತಿವರ್ಷ ಮಾರ್ಚ್ 31ರ ಒಳಗೆ ಅಧಿಕಾರಿಗಳು ಆಸ್ತಿ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ.

* ಸಿಸಿಎ (ನಾಗರೀಕ ಸೇವಾ ಕಾನೂನು) ಪುನಾರಚನೆ ಅಧಿಕಾರಿ, ಸಿಬ್ಬಂದಿಯ ಕಾರ್ಯಕ್ಷಮತೆ, ಪ್ರಾಮಾಣಿಕತೆಯನ್ನು ಗುರುತಿಸಲು ಸಿಸಿಎ ಕಾನೂನನ್ನು ಪುನಾರಚಿಸಲಾಗುವುದು.

* ಸರ್ಕಾರದ ಪ್ರತಿ ಇಲಾಖೆಗಳಲ್ಲೂ ವಿಚಕ್ಷಣ ದಳವನ್ನು ಅಸ್ತಿತ್ವಕ್ಕೆ ತರಲಾಗುವುದು. ಪೊಲೀಸ್ ಇಲಾಖೆಯಲ್ಲಿನ ಆರ್ಡರ್ಲಿ ವ್ಯವಸ್ಥೆಯನ್ನು ನಿಷೇಧಿಸಲಾಗುವುದು.

* ಸರ್ಕಾರಿ ಇಲಾಖೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸರ್ಕಾರಿ ವಾಹನಗಳ ದುರ್ಬಳಕೆಯನ್ನು ತಪ್ಪಿಸಲಾಗುವುದು. ಪೋಲೀಸ್, ಆರೋಗ್ಯ, ಕಂದಾಯ, ಅಗ್ನಿಶಾಮಕ ದಳದಂತಹ ತುರ್ತು ಸೇವೆಗಳನ್ನು ಹೊರತುಪಡಿಸಿ ಇತರ ಇಲಾಖೆಗಳಲ್ಲಿ ಹೊಸ ವಾಹನಗಳ ಖರೀದಿಗೆ ಅವಕಾಶ ಇರುವುದಿಲ್ಲ.

ವಾಹನಗಳ ರಿಪೇರಿ, ನಿರ್ವಹಣೆ ಸರ್ಕಾರಕ್ಕೆ ದೊಡ್ಡ ಹೊರೆಯಾಗಿದೆ. ಹೀಗಾಗಿ, ಅಧಿಕಾರಿಗಳಿಗೆ ವಾಹನ ಭತ್ಯೆ ನೀಡಲಾಗುವುದು. ಮಕ್ಕಳನ್ನು ಶಾಲೆಗೆ ಕಳುಹಿಸಲು ಅಧಿಕಾರಿಗಳ ಕುಟುಂಬದ ಸದಸ್ಯರು ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುವುದನ್ನು ಈ ಮೂಲಕ ತಪ್ಪಿಸಲಾಗುವುದು.

ಕೃಷಿ, ನೀರಾವರಿ (ಆದಾಯದ ವೃತ್ತಿಯಾಗಲಿದೆ ಕೃಷಿ)

* ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ರೈತರ ಸಲಹಾ ಸಮಿತಿಯನ್ನು ಜೆಡಿಎಸ್ ಸರ್ಕಾರ ರಚಿಸಲಿದೆ. ಪ್ರತಿ ತಿಂಗಳು ಈ ರೈತರ ಸಮಿತಿಯೊಂದಿಗೆ ಚರ್ಚೆ ನಡೆಸಲಿರುವ ಮುಖ್ಯಮಂತ್ರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿಯಲಿದ್ದಾರೆ. ಈ
ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.

* ನಾಡಿನ ರೈತ ಬಾಂಧವರು ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲವನ್ನು ಜೆಡಿಎಸ್ ಸರ್ಕಾರ ರಚನೆಯಾದ ಕೇವಲ 24 ಗಂಟೆಗಳಲ್ಲಿ, ಅದೂ ಒಂದೇ ಹಂತದಲ್ಲಿ ಮನ್ನಾ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ.

* ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ತಾಲೂಕುಗಳಲ್ಲೂ ಕೃಷಿ ಉತ್ಪಾದನಾ ಯೋಜನಾ ಘಟಕ ರಚಿಸಲು ನಾವು ನಿರ್ಧರಿಸಿದ್ದೇವೆ. ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ, ಯಾವ ಬೆಳೆ ಬೆಳೆಯಬೇಕೆಂಬ ಸಲಹೆಯನ್ನು ಈ ಘಟಕದ ಮೂಲಕ ನೀಡಲಾಗುವುದು. ಅಲ್ಲದೆ, ಮಾರುಕಟ್ಟೆ ಆಧಾರದಲ್ಲಿ ಕೃಷಿ ವಿಸ್ತರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

* ಕೃಷಿ ವಾಣಿಜ್ಯ ಸಂಶೋಧನೆಗೆ ಒತ್ತು ಈ ಹಿಂದೆಯೇ ಹೇಳಿದಂತೆ ಕರ್ನಾಟಕದ ಕೃಷಿ ರಂಗವನ್ನು ಜಾಗತಿಕ ಮಟ್ಟದ ಪೈಪೋಟಿಗೆ ಸನ್ನದ್ಧಗೊಳಿಸಲು ಸಕಲ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸಂಶೋಧನೆ ಮತ್ತು ವಿಸ್ತರಣಾ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲಾಗುವುದು.

* ನಂದಿನಿ ಬ್ರಾಂಡ್ ಮಾದರಿಯಲ್ಲಿ ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹ ಆಹಾರ ಪದಾರ್ಥಗಳ ಎಣ್ಣೆ ತಯಾರಿಕೆಯಲ್ಲಿ ಕರ್ನಾಟಕದ ಮಟ್ಟಿಗೆ ಶೇಂಗಾ ಮತ್ತು ಸೂರ್ಯಕಾಂತಿ ಪ್ರಮುಖವಾದವು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಲಬೆರಕೆ ಎಣ್ಣೆ ತಯಾರಕರ ಹಾವಳಿ ಮೇರೆ ಮೀರಿದೆ. ಹಣ ಗಳಿಕೆಗೆ ಇಳಿದಿರುವ ಅವರಿಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ರೈತರ ಸಲಹಾ ಸಮಿತಿಯನ್ನು ಜೆಡಿಎಸ್ ಸರ್ಕಾರ ರಚಿಸಲಿದೆ.

* ನಮ್ಮ ಸರ್ಕಾರ ಬಂದ ನಂತರ ಕಲಬೆರೆಕೆ ಎಣ್ಣೆ ತಯಾರಕರನ್ನು ನಿರ್ಮೂಲನೆ ಮಾಡಲಾಗುವುದು. ಅಲ್ಲದೆ, ಪರಿಶುದ್ಧ ಎಣ್ಣೆ ತಯಾರಿಕೆಯನ್ನು ಕೃಷಿ ಹಂತದಲ್ಲೇ ಪ್ರೋತ್ಸಾಹಿಸಲಾಗುವುದು. ಇದಕ್ಕೆ ನಂದಿನಿ ಮಾದರಿಯಲ್ಲಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಉತ್ಪನ್ನ ಮತ್ತು ಮಾರಾಟದಲ್ಲಿ ರೈತರ ನೇರ ಪಾಲ್ಗೊಳ್ಳುವಿಕೆ ತರಲಾಗುವುದು.

* ನಾಡಿನ ರೈತರು ಬೆಳೆ ನಷ್ಟ ಮತ್ತು ಬೆಲೆ ಕುಸಿತದಿಂದ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಸಂಸ್ಕರಣಾ ವ್ಯವಸ್ಥೆ ಕಲ್ಪಿಸಲು ಜೆಡಿಎಸ್ ನಿರ್ಧರಿಸಿದೆ. ಒಣಮೆಣಸು, ಕಾಳುಮೆಣಸು, ಬಾದಾಮಿ, ಕಾಫಿ ಬೀಜ, ಜೀರಿಗೆ, ಕೊತ್ತಂಬರಿ ಬೀಜ ಸೇರಿದಂತೆ ಇದೇ ಮಾದರಿಯ ಬೆಳೆಗಳ ಸಂಸ್ಕರಣೆಗೆ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಘಟಕಗಳ ಸ್ಥಾಪನೆಯಲ್ಲಿ ಖಾಸಗಿ, ಸರ್ಕಾರಿ ಜಂಟಿ
ಸಹಭಾಗಿತ್ವಕ್ಕೂ ಅವಕಾಶ ನಿಡಲಾಗುತ್ತದೆ.

* ಧಾನ್ಯ ಮತ್ತು ಸಾವಯವ ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ, ಅವುಗಳಿಗೆ ಸರ್ಕಾರದಿಂದಲೇ ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.

* ಹನಿ ನೀರಾವರಿಯಲ್ಲಿ ಸೋಲಾರ್ ಶಕ್ತಿ ಬಳಕೆ : ಇತ್ತೀಚಿನ ದಿನಗಳಲ್ಲಿ ಹನಿ ನೀರಾವರಿ ಪದ್ಧತಿಯನ್ನು ರೈತರು ಹೆಚ್ಚು ಬಳಸಲು ಆರಂಭಿಸಿದ್ದಾರೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಈ ಪದ್ಧತಿ ನಿರೀಕ್ಷಿತ ಫಲ ಕಾಣುತ್ತಿಲ್ಲ. ಈ ವ್ಯವಸ್ಥೆಗೆ ಬೇಕಾದ ಯಂತ್ರಗಳಿಗೆ ಸೋಲಾರ್ ಶಕ್ತಿ ವಿನಿಯೋಗಿಸಿದರೆ ವಿದ್ಯುತ್ ಮೇಲಿನ
ಅವಲಂಬನೆ ತಪ್ಪಲಿದೆ. ಇದಕ್ಕಾಗಿ ನಮ್ಮ ಸರ್ಕಾರ ಸಂಶೋಧನಾ ಸಂಸ್ಥೆಗಳೊಂದಿಗೆ ಚರ್ಚಿಸಿ ರೈತರಿಗೆ ಸೌರಶಕ್ತಿ ಆಧಾರಿತ ಯಂತ್ರಗಳನ್ನು ಪೂರೈಸಲಿದೆ.

* ಒಳಾಂಗಣ ಕೃಷಿಗೆ ಒತ್ತು : ಒಳಾಂಗಣ ಅಥವಾ ಪಾಲಿ ಹೌಸಿ ಮಾದರಿಯ ಕೃಷಿಯಲ್ಲಿ ಲಾಭವಿದೆ. ಇದರಲ್ಲಿ ಕೋಸು ರೀತಿಯ ತರಕಾರಿಗಳನ್ನು ಮತ್ತು ಹೂ ಬೆಳೆ ಬೆಳೆಯಲು ಸಾಧ್ಯವಿದೆ. ಇದು ಅತಿ ಕಡಿಮೆ ಮಾನವ ಸಂಪನ್ಮೂಲ ಬೇಡುತ್ತದಾದರೂ ಬಂಡವಾಳ ಅಧಿಕ. ಆದರೆ, ನಮ್ಮ ಸರ್ಕಾರ ಇದರ ವೆಚ್ಚ ಕಡಿಮೆ ಮಾಡಿ ಪ್ರೋತ್ಸಾಹಧನ ನೀಡಲಿದೆ.

* ಕೃಷಿ ತಂತ್ರಜ್ಞಾನಕ್ಕಾಗಿ ವಿಶೇಷ ಉದ್ದೇಶ ವ್ಯವಸ್ಥೆ : ಕೃಷಿ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಸದ್ಯ ಅಧ್ಯಯನ, ಸಂಶೋಧನೆ, ತಂತ್ರಜ್ಞಾನ ಬಳಕೆ ಅನಿವಾರ್ಯ. ಆವಿಷ್ಕಾರಗಳಿಗಾಗಿ ನಮ್ಮ ಸರ್ಕಾರ ವಿಶೇಷ ಉದ್ದೇಶಿತ ವ್ಯವಸ್ಥೆಯನ್ನು (ಸ್ಪೆಷಿಯಲ್ ಪರ್ಪಸ್ ವೆಹಿಕಲ್ - ಎಸ್‍ಪಿವಿ) ಜಾರಿಗೆ ತರಲಿದೆ.

*ಮಳೆ ನೀರು ಕೋಯ್ಲು ಸಬ್ಸಿಡಿ : ರೈತರು ತಮ್ಮ ಭೂಮಿಯಲ್ಲಿ ನೀರಿನ ಸಂಗ್ರಹಣೆಗೆ ಮಾಡುವ ಯಾವುದೇ ವ್ಯವಸ್ಥೆಅಥವಾ ರಚನೆಗೆ ಶೇ.100ರಷ್ಟು ಸಬ್ಸಿಡಿ ನೀಡಲಾಗುವುದು.

* ಯಂತ್ರ ಖರೀದಿಗೆ ಪ್ರೋತ್ಸಾಹ ಧನ ಕೃಷಿಯಲ್ಲಿ ಯಂತ್ರಗಳ ಬಳಕೆಗೆ ಪ್ರೋತ್ಸಾಹ ನೀಡುತ್ತೇವೆ. ಸಣ್ಣ ಟ್ರಾಕ್ಟರ್ ಖರೀದಿಗೆ ಶೇ. 75% ಮತ್ತು ಇನ್ನಿತರೆ ಸಲಕರಣೆಗಳ ಖರೀದಿಗೆ ಶೇ. 90%ರಷ್ಟು ಸಬ್ಸಿಡಿ ನೀಡಲಾಗುವುದು.

* ನೀರಾವರಿ ಕಾರಣಕ್ಕಾಗಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪಡೆಯಲು ರೈತರು ಸಲ್ಲಿಸಿರುವ
ಎಲ್ಲ ಅರ್ಜಿಗಳನ್ನು ಅಕ್ಟೋಬರ್ 2018ರ ಹೊತ್ತಿಗೆ ಸರ್ಕಾರ ಇತ್ಯರ್ಥಗೊಳಿಸುತ್ತದೆ.
ಮತ್ತು ವಿದ್ಯುತ್ ಸಂಪರ್ಕ ನೀಡಲಿದೆ.

ಶಿಕ್ಷಣ ಕ್ಷೇತ್ರ

* ಸರ್ಕಾರಿ ಶಾಲೆಗಳ ಬಲವರ್ಧನೆ ಸರ್ಕಾರಿ ಮಾದರಿ ಶಾಲೆಗಳು ವಾಸ್ತವದಲ್ಲೂ ಮಾದರಿಯಾಗಬೇಕು. ಇದಕ್ಕಾಗಿ ಪ್ರತಿ ಹೋಬಳಿಯಲ್ಲೂ ಕ್ಲಸ್ಟರ್ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ಮೂಲಕ ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾದ ಉತ್ತಮ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತವೆ.

* ಕನಿಷ್ಠ 100 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ, ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳಿಗೆ ಶೇ.100ರಷ್ಟು ವೇತನ ಅನುದಾನ ನೀಡಲು ಜೆಡಿಎಸ್ ತೀರ್ಮಾನಿಸಿದೆ. ಆದರೆ, ಒಂದೇ ಸೂರಿನಡಿ ಸಿಬಿಎಸ್‍ಸಿ ಮತ್ತು ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಈ ಯೋಜನೆ ಅಡಿಯಲ್ಲಿ ವೇತನ ಅನುದಾನ ದೊರೆಯುವುದಿಲ್ಲ.

* ಶಾಲೆಗಳು ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ, ಟ್ರಸ್ಟ್‌ಗೆ ಎಂದು ಇಲ್ಲ ಸಲ್ಲದ ಸಬೂಬು ಹೇಳಿ ಪೋಷಕರಿಂದ ಶುಲ್ಕ ಸಂಗ್ರಹಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ಅಪರಾಧವಾಗಲಿದೆ. ವಿದ್ಯಾಭ್ಯಾಸದ ವೆಚ್ಚವನ್ನು ಕಡಿಮೆ ಮಾಡಲಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಪೋಷಕರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಅನಗತ್ಯ ಶುಲ್ಕ ಹೇರಿಕೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತದೆ.

* ಸರ್ಕಾರಿ ಶಾಲೆಗಳಲ್ಲೇ ಕನ್ನಡ-ಇಂಗ್ಲಿಷ್ ಭಾಷಾ ತರಬೇತಿ ಕೇಂದ್ರ ಭಾಷಾ ಕೌಶಲ್ಯ ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಸ್ಪೋಕನ್ ಕನ್ನಡ ಮತ್ತು ಸ್ಪೋಕನ್ ಇಂಗ್ಲಿಷ್ ದ್ರಗಳನ್ನು ಅಸ್ತಿತ್ವಕ್ಕೆ ತರಲಾಗುವುದು.

* ಸರ್ಕಾರಿ ಶಾಲೆಗಳ ಸೌಲಭ್ಯವನ್ನು ಅಭಿವೃದ್ಧಿಗೊಳಿಸುವ ಜೊತೆ ಜೊತಗೆ, ಶಿಕ್ಷಣ ಗುಣಮಟ್ಟವನ್ನೂ ಅಭಿವೃದ್ಧಿ ಮಾಡಲಿದ್ದೇವೆ. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿ ನಂತರ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರಲಿದ್ದೇವೆ. ಇಂದಿನ ಪೈಪೋಟಿಯ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅತ್ಯಂತ ಅಗತ್ಯ. ಹೀಗಾಗಿಯೇ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಐದನೇ ತರಗತಿ ಮೇಲ್ಪಟ್ಟು ಕಂಪ್ಯೂಟರ್ ಶಿಕ್ಷಣ ಜಾರಿಗೆ ತರಲಿದ್ದೇವೆ.

* ಇನ್ಫೋಸಿಸ್, ವಿಪ್ರೋ ಸೇರಿದಂತೆ ವಿವಿಧ ಕಂಪನಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸರ್ಕಾರಿ ಶಾಲೆಗಳನ್ನು ದತ್ತ ತೆಗೆದುಕೊಂಡು ಕಂಪ್ಯೂಟರ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು.

* ಅಧಿಕಾರಕ್ಕೆ ಬರುತ್ತಲೇ ಪ್ರದೇಶವಾರು ಡೊನೇಷನ್ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ. ನಮ್ಮ ಸರ್ಕಾರ ಎಸ್/ಎಸ್‍ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಿದೆ.

ಉನ್ನತ ಶಿಕ್ಷಣ

* ವೃತ್ತಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾದ ಶಿಕ್ಷಣ ನೀಡಬೇಕೆಂಬುದು ಜೆಡಿಎಸ್ ಪಕ್ಷದ ಆಶಯ. ಆ ಕಾರಣಕ್ಕೆ ಕೆಲವೊಂದು ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಿದೆ. ಆ ಮೂಲಕ ಆಯಾ ರಂಗದ ಕೌಶಲ್ಯಕ್ಕೆ ಸರ್ಕಾರ ಒತ್ತು ನೀಡಲಿದೆ. ಹೋಮ್ ಲ್ಯಾಂಡ್ ಸೆಕ್ಯುರಿಟಿ(ಭದ್ರತಾ ಸಿಬ್ಬಂದಿ) ವಿಶ್ವವಿದ್ಯಾಲಯ, ವೃತ್ತಿಪರ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ, ಕ್ರೀಡೆ ಮತ್ತು ಫಿಟ್ನೆಸ್ ವಿಶ್ವವಿದ್ಯಾಲಯ, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನಾ ವಿಶ್ವವಿದ್ಯಾಲಯ, ಟೂರಿಸಂ ಮತ್ತು ವೈದ್ಯಕೀಯ ಸೇವೆಗಳ ವಿಶ್ವವಿದ್ಯಾಲಯ ಸ್ಥಾಪನೆ.

* ತಾಂತ್ರಿಕ ಜ್ಞಾನ ಅಭಿವೃದ್ಧಿಗೆ ಬರಲಿವೆ ಸಂಸ್ಥೆಗಳು: ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಅಭಿವೃದ್ಧಿಗೆ ಐಟಿಐ, ಡಿಪ್ಲೋಮಾ ಮಾದರಿಯಲ್ಲೇ ಶಿಕ್ಷಣ ನೀಡಲಾಗುವುದು. ತರಬೇತಿ, ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ.

* ಸಿಇಟಿ ರ್ಯಾಂಕಿಂಗ್‍ನಲ್ಲಿ ಕನ್ನಡವೂ ಪರಿಗಣನೆ: ಮೆಡಿಕಲ್, ಎಂಜಿನಿಯರಿಂಗ್, ಎಂಬಿಎ ಮತ್ತು ಇತರ ತಾಂತ್ರಿಕ ಕೋರ್ಸ್ ಡೆಯಲು ವಿದ್ಯಾರ್ಥಿಗಳು ಬರೆಯುವ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕಿಂಗ್ ನೀಡುವಾಗ ದ್ವಿತೀಯ ಪಿಯುಸಿ ಕನ್ನಡ ವಿಷಯದ ಅಂಕಗಳನ್ನೂ ಪರಿಗಣಿಸುವಂತೆ ಮಾಡಲಾಗುವುದು. ಇದು ಕನ್ನಡಿಗ ಮತ್ತು ಹೊರನಾಡು ಕನ್ನಡಿಗ ಕೋಟಾದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ.

ಆರೋಗ್ಯ ಸೇವೆ

* ಎಲ್ಲ ನಾಗರಿಕರಿಗೂ ಸಮರ್ಪಕ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು 'ಹೊಸ ಆರೋಗ್ಯ ಸೇವಾ ವ್ಯವಸ್ಥೆ' ಯೊಂದನ್ನು ಪರಿಚಯಿಸಲಿದ್ದೇವೆ. ಈ ನೂತನ ಆರೋಗ್ಯ ಸೇವಾ ವ್ಯವಸ್ಥೆಯ ಅಡಿಯಲ್ಲಿ ಎಲ್ಲ ವಲಯದ, ಅಂದರೆ ಸಾರ್ವಜನಿಕ ಹಾಗೂ ಖಾಸಗಿವಲಯಗಳೆರಡರ ನೋಂದಾಯಿತ ವೈದ್ಯರ ನೆಟ್‍ವರ್ಕ್-ಜಾಲವೊಂದನ್ನು ರೂಪಿಸಲಿದ್ದೇವೆ.

* ಆರೋಗ್ಯ ಸೇವೆಯು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಈಗ ಹಾಲಿ ಜಾರಿಯಲ್ಲಿರುವ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳು ಹಾಗೂ ಅವುಗಳ ಕಾರ್ಯಾಚರಣೆಯನ್ನು ಈ ಹೊಸ ವ್ಯವಸ್ಥೆಯೊಂದಿಗೆ ಸೇರ್ಪಡೆಗೊಳಿಸಲಾಗುತ್ತದೆ. ಈ ಯೋಜನೆಗಾಗಿ ನಾವು ಹೆಚ್ಚುವರಿಯಾಗಿ 8000 ಕೋಟಿ ರೂಪಾಯಿಗಳನ್ನು ಮೀಸಲಿಡಲಿದ್ದೇವೆ.

* ಗರ್ಭಿಣಿಯರಿಗೆ ಹೆರಿಗೆ ಪೂರ್ವ, ಹೆರಿಗೆ ನಂತರ ಮೂರು ತಿಂಗಳುಗಳ ಕಾಲ ಮಾಸಿಕ 6000 ರೂಪಾಯಿಗಳ ಸಹಾಯಧನ ನೀಡಲಾಗುತ್ತದೆ.

*ಔಷಧಗಳ ಮೇಲಿನ ವೆಚ್ಚ ಕಡಿಮೆಯಾಗಲಿದೆ. ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಷನ್‍ನಲ್ಲಿರುವ ಎಲ್ಲ ರೀತಿಯ ಜೆನರಿಕ್ ಔಷಧಗಳು, ಕರ್ನಾಟಕದ ಎಲ್ಲ ಆರೋಗ್ಯ ಕೇಂದ್ರ ಮತ್ತು ಸಂಸ್ಥೆಗಳಲ್ಲೂ ಉಚಿತವಾಗಿ ಲಭ್ಯವಾಗುವ ವ್ಯವಸ್ಥೆ
ಕಲ್ಪಿಸಲಿದ್ದೇವೆ.

* ಕ್ಯಾನ್ಸರ್, ಕಿಡ್ನಿ, ಹೃದಯರೋಗಿಗಳಿಗೆ ಅಗತ್ಯವಿರುವ ತುರ್ತು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯದ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತದೆ. ಈ ಆಸ್ಪತ್ರೆಗಳಲ್ಲಿ ಸರ್ಕಾರ
ಶೇ.40ರವರೆಗಿನ ಪಾಲುದಾರಿಕೆ ಜೊತೆಗೆ ಆರಂಭದಲ್ಲಿ ಶೇ.40ರಷ್ಟು ಬೆಡ್ ಶೇರಿಂಗ್ ಹೊಂದಿರಲಿದೆ.

* ಮನೆ ಬಾಗಿಲಿಗೇ ಜನರಿಕ್ ಔಷಧ : ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರದ ರೀತಿಯ ದೀರ್ಘ ಕಾಲಿಕ ಕಾಯಿಲೆಗಳನ್ನು ಹೊಂದಿರುವ ಎಲ್ಲ ನೋಂದಾಯಿತ ವ್ಯಕ್ತಿಗಳಿಗೆ, ಮಾಸಿಕ ಆಧಾರದಲ್ಲಿ ಅವರ ಮನೆ ಬಾಗಿಲಿಗೆ ಉಚಿತ "ಜೆನರಿಕ್ ಔಷಧ" ನೀಡಲಾಗುತ್ತದೆ.

ನೀರಾವರಿ

* ಕರ್ನಾಟಕದಲ್ಲಿ ನೀರಾವರಿ ಸೌಲಭ್ಯದ ಅಭಿವೃದ್ಧಿಗೆ ಪ್ರಮುಖ ಆದ್ಯತೆಯನ್ನು ನಾವು ನೀಡಲಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ 1,50,000 ಕೋಟಿ
ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ.

* ಕಾವೇರಿಯಿಂದ ಹೆಚ್ಚುವರಿ 15 ಟಿಎಂಸಿ ನೀರು ಬಳಕೆ ಯೋಜನೆ : ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಗಳು. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿಯ ದಕ್ಷತೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಜಲಾನಯನ ಪ್ರದೇಶದಲ್ಲಿನ ಕಾಲುವೆ ವ್ಯವಸ್ಥೆಯನ್ನು ಉತ್ತಮಪಡಿಸಲಾಗುವುದು.

* ಎರಡು ವರ್ಷಗಳಲ್ಲಿ ವಿಸಿ ನಾಲೆ ಆಧುನೀಕರಣ ಕಾರ್ಯಕೈಗೊಳ್ಳಲಾಗುವುದು. ಇದರಿಂದ ಜಲಾನಯನ ಪ್ರದೇಶದ ಕಡೆಯ ಹಂತದಲ್ಲಿರುವ (ಟೇಲ್ ಎಂಡ್) ಮಳವಳ್ಳಿ ಮತ್ತು ಹಲಗೂರು ಪ್ರಾಂತ್ಯದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ನೀರಾವರಿ ಸೌಲಭ್ಯದ ದಕ್ಷತೆಯನ್ನು ಉತ್ತಮಪಡಿಸುವ ಕಾರ್ಯದ ಒಂದು ಭಾಗವಾಗಿ, ಈ ಹಿಂದೆ ಮಹಾರಾಜರು ನಿರ್ಮಿಸಿರುವ ಆಣೆಕಟ್ಟೆಗಳ ಆಧುನೀಕರಣ ಕಾರ್ಯ ಕೈಗೊಳ್ಳಲಾಗುವುದು.

* ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗುವುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು. ಭೀಮಾ ನದಿಗೆ ಸಂಬಂಧಿಸಿದ ಎಲ್ಲ ಅಡೆತಡೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಿವಾರಿಸಲಾಗುವುದು.

* ಕೋಲಾರ-ಚಿಕ್ಕಬಳ್ಳಾಪುರ ನೀರಿನ ಯೋಜನೆಗೆ 60 ಟಿಎಂಸಿ : ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಮತ್ತು ಅರಸಿಕೆರೆ ಹಾಗೂ ತಿಪಟೂರು ತಾಲ್ಲೂಕುಗಳಿಗೆ ಜನತೆಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳಿಂದ 60 ಟಿಎಂಸಿ ನೀರು ತರುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಬೆಂಗಳೂರಿನ ನೀರು ಸರಬರಾಜು ಬೇಡಿಕೆಗಳನ್ನು ಕೂಡ ಇದೇ ಯೋಜನೆ ಮೂಲಕ ಈಡೇರಿಸಲಾಗುವುದು.

* ನೀರಾವರಿ ಯೋಜನೆಗಳಿಂದ ತೊಂದರೆಗೊಳಗಾಗಿರುವ ಜನರಿಗೆ ಪುನರ್ವಸತಿ, ಭೂಮಿ ಕಳೆದುಕೊಂಡವರಿಗೆ ಆಜೀವ ಪರಿಹಾರ, 1980ರಿಂದಲೂ ಜಾರಿಗೊಳಿಸಿರುವ ನೀರಾವರಿ ಯೋಜನೆಗಳು, ವಿದ್ಯುತ್ ಜನೆಗಳು ಮತ್ತು ಗ್ರಾಮೀಣ ವಸತಿ ಯೋಜನೆಗಳಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿರುವ ಎಲ್ಲ ಕುಟುಂಬಗಳಿಗೆ ಜೀವಮಾನ ಪರ್ಯಂತ ಎಕರೆಗೆ 2000 ರೂ. ವಾರ್ಷಿಕ ಪರಿಹಾರ ನೀಡಲಾಗುವುದು.

ಕೈಗಾರಿಕೆ

*ಕರ್ನಾಟಕದಲ್ಲಿ ಕೈಗಾರಿಕಾ ವಲಯದ ಉತ್ಪಾದನೆ ವೃದ್ಧಿಸುವ ನಿಟ್ಟಿನಲ್ಲಿ ಚೀನಾದೊಂದಿಗೆ ಸ್ಪರ್ಧೆ (ಸಿಸಿಪಿ) ಮಾದರಿಯ ಕಾರ್ಯಕ್ರಮ ರೂಪಿಸಲಾಗುತ್ತದೆ. ಇದರ ಅಡಿಯಲ್ಲಿ ಕರ್ನಾಟಕದವರೇ ಆಗಿರುವ ಒಬ್ಬ ದಕ್ಷ ಹಾಗೂ ಯಶಸ್ವೀ ಉದ್ಯಮಿಯ ನೇತೃತ್ವದಲ್ಲಿ ಪ್ರೋಗ್ರಾಮ್ ಮಿಷನ್ ಡೈರೆಕ್ಟರೇಟ್ (ಯೋಜನಾ ಗುರಿ ನಿರ್ದೇಶನಾಲಯ) ಒಂದನ್ನು ಸ್ಥಾಪಿಸಲಾಗುತ್ತದೆ.

* ಸೃಷ್ಟಿ, ಸಾಮಾನ್ಯ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಮಾನವ ಸಂಪನ್ಮೂಲದ ಲಭ್ಯತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಹೊಸ ಉದ್ಯಮಿಗಳಿಗೆ ಜೆಡಿಎಸ್ ಸರ್ಕಾರ ಅಗತ್ಯ ನೆರವನ್ನು ಒದಗಿಸಲಿದೆ. ಈ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ಒಂದೇ ಒಂದು ಅರ್ಹತೆ, ಕಲಿಯಲು ಮತ್ತು ಕಾರ್ಯನಿರ್ವಹಿಸಲು ಇರುವ ತುಡಿತವಾಗಿರಲಿದೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಆಯ್ದ
ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.

* ಕಲಬುರಗಿ ಜಿಲ್ಲೆಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಚಿತ್ರದುರ್ಗದಲ್ಲಿ ಸ್ಥಳೀಯ ಲೈಟಿಂಗ್ ಕ್ಲಸ್ಟರ್ ಅಭಿವೃದ್ಧಿ ಮಾಡಲಾಗುತ್ತದೆ.

* ಹಾಸನದಲ್ಲಿ ಸ್ನಾನಗೃಹ ಸಾಧನಗಳ ಉದ್ಯಮದ ಅಭಿವೃದ್ಧಿ: ಭಾರತದಲ್ಲಿನ ನೆಲಹಾಸು ಟೈಲ್ಸ್ ಹಾಗೂ ಸ್ನಾನಗೃಹ ಸಲಕರಣೆಗಳ ಮಾರುಕಟ್ಟೆಯನ್ನು ಚೀನಾ ಆಕ್ರಮಿಸಿಕೊಂಡಿದೆ.

* ಹಾಸನ ಜಿಲ್ಲೆಯನ್ನು ಸ್ನಾನಗೃಹ ಟೈಲ್ಸ್ ಮತ್ತು ಉಪಕರಣಗಳ ಉತ್ಪಾದಕ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯನ್ನು ನಾವು ಹೊಂದಿದ್ದೇವೆ. ಈ ಯೋಜನೆಗಾಗಿ ಸರ್ಕಾರದ 2000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು ಖಾಸಗಿ ಹೂಡಿಕೆದಾರ ಮೂಲಕ 3000 ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ಜತೆಗೆ, ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ.

ಪ್ರವಾಸೋದ್ಯಮ

* ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಕೊಳಚೆ ಪರಿಸರ, ಪ್ರವಾಸಿಗರಿಗೆ ಉಂಟಾಗುವ ಕಿರಿಕಿರಿ ಅನುಭವಗಳಿಂದಾಗಿ ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುವ ಅಪಾಯವಿರುತ್ತದೆ. ಹಾಗಾಗಿ, ಪ್ರವಾಸಿ ತಾಣಗಳಲ್ಲಿ ನಿರ್ಮಾಣವಾಗುವ ಟೂರಿಸ್ಟ್ ಹೋಟೆಲ್‍ಗಳಿಗೆ ಮಾನ್ಯತೆ ನೀಡಲು ಪ್ರತ್ಯೇಕವಾದ ಸ್ವಾಯತ್ತ ಸಂಸ್ಥೆಯೊಂದನ್ನು ಸೃಷ್ಟಿಸಲಾಗುತ್ತದೆ.

* ಈ ಸಂಸ್ಥೆಯು ಮಾನ್ಯತೆ ನೀಡುವುದರ ಜತೆಗೆ ಆ ಹೋಟೆಲ್‍ಗಳ ಗುಣಮಟ್ಟ ಹಾಗೂ ಆ ಹೋಟೆಲ್‍ಗಳ ಜಾಲತಾಣಗಳ ಮೂಲಕ ಪ್ರವಾಸಿಗರಿಗೆ ಸಿಗುವ ಅನುಕೂಲಗಳ ಬಗ್ಗೆಯೂ ಗಮನ ಹರಿಸಲಿದೆ. ಅಲ್ಲದೆ, ತನ್ನ ಅಧಿಕೃತ ಜಾಲತಾಣದಲ್ಲಿ ಸಂಸ್ಥೆಯು ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಲ್ಲಿನ ಮೂಲ ಸೌಕರ್ಯಗಳ ಡೇಟಾಬೇಸ್ ಅನ್ನು ಹೊಂದಿರಲಿದೆ.

* ಹೈ ಎನರ್ಜಿ ಟೂರಿಸ್ಟ್ ಪಾಯಿಂಟ್ಸ್ :ಕಾರವಾರ-ಮುರುಡೇಶ್ವರ ನಡುವಿನ ಪ್ರಾಂತ್ಯವನ್ನು ರಾಜ್ಯದ ಪ್ರಮುಖ ಬೀಚ್ ಟೂರಿಂಗ್ ಪ್ರಾಂತ್ಯವನ್ನಾಗಿ ಪರಿವರ್ತಿಸಲಾಗುತ್ತದೆ.

* ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರಿಗಾಗಿ, ಕೆಜಿಎಫ್ ಅನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ನಿರ್ಮಾಣವಾಗುವ ಬೃಹತ್ ಹೋಟೆಲ್ ಗಳು, 2000 ಕೊಠಡಿಗಳನ್ನು ಹೊಂದಿರಲಿದ್ದು, ಅಚ್ಚುಕಟ್ಟಾದ ರಸ್ತೆಗಳು, ಹೆಲಿಪ್ಯಾಡ್ ಮತ್ತು ರೈಲು ಸಂಪರ್ಕ ಸೌಲಭ್ಯಗಳನ್ನು ಹೊಂದಿರುತ್ತವೆ. ಈ ಕೇಂದ್ರಗಳನ್ನು ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ

* ವೃತ್ತಿ ನಿರತ ಮಹಿಳೆಯರಿಗಾಗಿ ವಸತಿ ನಿಲಯಗಳ ನಿರ್ಮಾಣ ನಗರ ಪ್ರದೇಶಗಳಿಗೆ ಬಂದು ದುಡಿಯುವ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ವಸತಿ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗಿದೆ. ಈ ಅನಾನುಕೂಲತೆಯನ್ನು ಸರಿಪಡಿಸಲು ಎಲ್ಲಾ ನಗರಗಳಲ್ಲಿಯೂ ಅಲ್ಪಸಂಖ್ಯಾತ ಮಹಿಳೆಯರಿಗಾಗಿ ವೃತ್ತಿ ನಿರತ ಮಹಿಳೆಯರ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು.

* ಮುಸ್ಲಿಂ ವಿವಿ ಗುಲ್ಬರ್ಗದಲ್ಲಿ ಅಲಿಘರ್ ಮುಸ್ಲಿಂ ವಿವಿ ಮಾದರಿಯಲ್ಲಿ ಉರ್ದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

* 01-01-2018ರ ವರೆಗೆ ಕರ್ನಾಟಕದಲ್ಲಿ ವಾಸವಿರುವ ಆಧಾರ್ ದೃಢೀಕರಣ ಹೊಂದಿರುವ 24ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಗೆ ಯಾವುದೇ ಜಾತಿಯ ಬೇಧವಿಲ್ಲದೆ ಪ್ರತಿ ತಿಂಗಳು 2000 ರೂ ಗಳನ್ನು ಆಕೆಯ ಜೀವನ ನಿರ್ವಹಣೆಗಾಗಿ ಭತ್ಯೆ ನೀಡಲಾಗುತ್ತದೆ.

* ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಶುಲ್ಕ ಪಾವತಿಯಿಂದ ಎಲ್ಲಾ ಮಟ್ಟದ ಶಿಕ್ಷಣದಲ್ಲೂ ವಿನಾಯಿತಿ ನೀಡಲಾಗುತ್ತದೆ.

English summary
JDS released its manifesto for Karnataka assembly elections 2018. Party state president H.D.Kumaraswamy released manifesto on May 7, 2018. Assembly elections will be held on May 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X