ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಬದಲಾವಣೆಗಾಗಿ 'ಬ್ಯಾಟಿಂಗ್': ಪ್ರಶಾಂತ್ ನಾಯ್ಕ ಸಂದರ್ಶನ

|
Google Oneindia Kannada News

ಬೆಂಗಳೂರು, ಮೇ 5: ಉತ್ತರ ಕನ್ನಡ ಜಿಲ್ಲೆಯ ಕುಮಟಾ-ಹೊನ್ನಾವರ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ 'ಬ್ಯಾಟಿಂಗ್‌'ಗೆ ಇಳಿದಿರುವ ಯುವ ಮುಖ ಪ್ರಶಾಂತ್ ನಾಯ್ಕ ಕರ್ಕಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.

ಡಿಪ್ಲೊಮಾ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಪ್ರಶಾಂತ ನಾಯ್ಕ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಉದ್ಯೋಗಕ್ಕೆ ರಜೆ ಹಾಕಿ ಬಂದಿರುವ ಅವರು, 'ಬ್ಯಾಟ್ಸ್‌ಮನ್‌' ಗುರುತು ಪಡೆದಿರುವ ಪಕ್ಷೇತರ ಅಭ್ಯರ್ಥಿ.

ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು? ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?

ಬಿಜೆಪಿಯ ದಿನಕರ್ ಶೆಟ್ಟಿ, ಕಾಂಗ್ರೆಸ್‌ನ ಶಾರದಾ ಮೋಹನ್ ಶೆಟ್ಟಿ, ಜೆಡಿಎಸ್‌ನ ಪ್ರದೀಪ್ ನಾಯಕ್ ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಬಂಡಾಯ ಅಭ್ಯರ್ಥಿಗಳೂ ಇದರಲ್ಲಿ ಇದ್ದಾರೆ. ಅವರ ನಡುವೆ ಪ್ರಶಾಂತ್ ನಾಯ್ಕ ಅವರ ಪ್ರಚಾರ ವೈಖರಿ ಮತ್ತು ಪ್ರಣಾಳಿಕೆ ಎಲ್ಲರ ಗಮನ ಸೆಳೆದಿದೆ.

ಮತಗಳಿಕೆಯ ಲೆಕ್ಕಾಚಾರದ ಸೋಲು ಗೆಲುವಿನ ಆಚೆ ಈಗಲೇ ಒಂದು ಮಟ್ಟದ ಜಯ ಸಾಧಿಸಿದ್ದೇನೆ ಎನ್ನುತ್ತಿದ್ದಾರೆ ಪ್ರಶಾಂತ್ ನಾಯ್ಕ. 'ದ್ವೇಷ ರಾಜಕಾರಣಕ್ಕೆ ಇಲ್ಲ ಎನ್ನಿ' ಎಂಬ ಘೋಷವಾಕ್ಯದ ಜತೆ, 'ನಾವೆಲ್ಲರೂ ಒಂದಾದರೆ ಸಾಧ್ಯ' ಎಂಬ ಅಭಿವೃದ್ಧಿ ರಾಜಕಾರಣದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ.

ಯಡಿಯೂರಪ್ಪ ಸಿಎಂ ಆಗಲು ಬಿಜೆಪಿ ಬೆಂಬಲಿಸಿ : ಅಶೋಕ್ ನಾಯ್ಕ್ ಸಂದರ್ಶನಯಡಿಯೂರಪ್ಪ ಸಿಎಂ ಆಗಲು ಬಿಜೆಪಿ ಬೆಂಬಲಿಸಿ : ಅಶೋಕ್ ನಾಯ್ಕ್ ಸಂದರ್ಶನ

ಅವರು ತಮ್ಮ ರಾಜಕೀಯ ಉದ್ದೇಶಗಳು, ಗುರಿಗಳು, ಧ್ಯೇಯಗಳು, ಅಭಿವೃದ್ಧಿ ಕುರಿತ ತಮ್ಮ ಕನಸುಗಳ ಕುರಿತು 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ್ದಾರೆ.

ರಾಜಕಾರಣದ ಪರಿಭಾಷೆ ಬದಲಾಗಲಿದೆ

ರಾಜಕಾರಣದ ಪರಿಭಾಷೆ ಬದಲಾಗಲಿದೆ

ಪ್ರಚಾರದ ಮೊದಲ ಉದ್ದೇಶ ಮತದಾನದ ಅರಿವು ಮುಡಿಸುವುದು. ಬಳಿಕ ನಮಗೆ ಮತ ಏಕೆ ಹಾಕಬೇಕು ಎಂಬ ಬಗ್ಗೆ ಹೇಳಬೇಕು. ಎದುರಾಳಿಗೆ ಮತ ಹಾಕಬೇಡಿ ಎಂದು ಹೇಳುವುದಲ್ಲ. ಯಾರಿಗೆ ಮತ ಹಾಕಬಾರದು ಎಂಬ ಅರಿವಿರುವಷ್ಟು ಪ್ರಜ್ಞಾವಂತರು ಇದ್ದಾರೆ. ಜನ ಯೋಚನೆ ಮಾಡ್ತಿದ್ದಾರೆ ಎಂಬ ವಿಶ್ವಾಸದ ಮೇಲೆಯೇ ನಾವು ಸಾಗುತ್ತಿರುವುದು.

ಇದು ನಮ್ಮ ಮೊದಲ ಹೆಜ್ಜೆ. ಜನರಿಗೆ ತಮ್ಮ ಅಗತ್ಯಗಳು, ಚುನಾವಣಾ ಪ್ರಕ್ರಿಯೆ ಹೇಗೆ ಆಗುತ್ತದೆ ಎಂಬ ಅರಿವು ಮೂಡಬೇಕು. ಚುನಾವಣೆ ಎನ್ನುವುದು ಗುಮ್ಮ ಅಲ್ಲ. ಸಾಮಾನ್ಯರು ಕೂಡ ಸ್ಪರ್ಧೆಗೆ ಪ್ರಯತ್ನಿಸಬಹುದು. ನಮ್ಮನ್ನು ಮಾದರಿಯಾಗಿಸಿಕೊಂಡು ಸ್ಥಳೀಯ ಚುನಾವಣೆಗಳಲ್ಲಿ ನನ್ನಂತಹ ಯುವಕರು ನಿಂತರೆ ಐದಾರು ವರ್ಷಗಳಲ್ಲಿ ಈ ರಾಜಕಾರಣದ ಪರಿಭಾಷೆ ಬದಲಾಗುತ್ತದೆ. ರಾಜಕಾರಣದ ಇಡೀ ಪೀಳಿಗೆ ಬದಲಾಗುತ್ತದೆ ಎಂಬ ವಿಶ್ವಾಸವಿದೆ.

ಕ್ಷೇತ್ರ ಅಭಿವೃದ್ಧಿಗೆ 16 ಯೋಜನೆ

ಕ್ಷೇತ್ರ ಅಭಿವೃದ್ಧಿಗೆ 16 ಯೋಜನೆ

ಕ್ಷೇತ್ರ ಅಭಿವೃದ್ಧಿಗೆ ಹದಿನಾರು ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಅದರ ಅನುಷ್ಠಾನಕ್ಕೆ ನೀಲನಕ್ಷೆಯೂ ನಮ್ಮ ಬಳಿ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಅಘನಾಶಿನಿ, ಶರಾವತಿ ಹಿನ್ನೀರು ಸಮುದ್ರ ಸೇರಿ ಉಪ್ಪಾಗುತ್ತದೆ. ಮುರುಡೇಶ್ವರದಲ್ಲಿ ಆರ್‌ಎನ್ ಶೆಟ್ಟಿ ಅವರು ಮಾಡಿರುವಂತೆ ಪೈಪ್‌ಲೈನ್ ಮಾಡಿ ನೀರು ಸಂಗ್ರಹಿಸಬಹುದು. ಉದ್ಯಮಿಯಿಂದ ಆಗುವ ಕೆಲಸ ಶಾಸಕ, ಸರ್ಕಾರಕ್ಕೆ ಆಗುವುದಿಲ್ಲವೇ.

ಜನರು ಗೋವಾಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ನಮ್ಮಲ್ಲಿಗೇ ಕಂಪೆನಿಗಳು ಬಂದರೆ ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಅಳವೆಕೋಡಿಯಿಂದ ಧಾರೇಶ್ವರ ನಡುವೆ ಐದು ಕಿಮೀ ಅಡೆತಡೆ ಇಲ್ಲದೆ ಬೀಚ್ ಇದೆ. ಅಲ್ಲಿ ವಾಟರ್‌ಸ್ಪೋರ್ಟ್ಸ್ ತರಬಹುದು. ಬೀಚ್ ಪಾರ್ಕ್ ಮಾಡಬಹುದು. ಜನರನ್ನು ಸೆಳೆಯಬಹುದು. ಇದರಿಂದ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಅಲ್ಲದೆ, ವಿಮಾನನಿಲ್ದಾಣಕ್ಕೆ ಭೂಮಿ ಇದೆ. ಇದರಿಂದ ಮಂಗಳೂರು, ಗೋವಾ ಸಮೀಪವಾಗುತ್ತದೆ. ಬಂಡವಾಳವನ್ನು ಸುಲಭವಾಗಿ ಆಕರ್ಷಿಸಬಹುದು. ಮೂಲಸೌಕರ್ಯ ಕಲ್ಪಿಸಿದರೆ ಐಟಿ, ಬಿಪಿಒ ಕಂಪೆನಿಗಳನ್ನು ತರುವುದು ಕಷ್ಟವಾಗಲಾರದು.

ಜನನಾಯಕರಲ್ಲ, ಜನಪ್ರತಿನಿಧಿ ಬೇಕು

ಜನನಾಯಕರಲ್ಲ, ಜನಪ್ರತಿನಿಧಿ ಬೇಕು

ರಾಜಕಾರಣಕ್ಕೆ ಇಳಿಯುವುದು ನನ್ನ ಒಬ್ಬನ ಯೋಚನೆಯಿಂದ ಹುಟ್ಟಿದ್ದಲ್ಲ. 25-30 ಸಮಾನ ಮನಸ್ಕರು ಸೇರಿದಾಗ ನಮ್ಮಿಂದ ಬದಲಾವಣೆ ಸಾಧ್ಯವೇ ಎಂದು ಮಾತನಾಡುತ್ತಿದ್ದೆವು. ಇದಕ್ಕೆ ರಾಜಕೀಯ ಹಿನ್ನೆಲೆ ಬೇಕಿಲ್ಲ. ಜನಸೇವೆ ಮಾಡಿಕೊಂಡಿರಬೇಕು ಎಂದಿಲ್ಲ. ಗೆದ್ದವರು ಕೆಲಸ ಮಾಡಬೇಕು. ಅವರಿಗೆ ಸಂಬಳ, ಎಲ್ಲ ಸೌಲಭ್ಯ ನೀಡುತ್ತಾರೆ. ಗೆದ್ದವರು ಮುಂದೆ 'ಸಾಹೇಬ'ರಾಗಿ ರಾಜಕಾರಣ ಮಾಡಿಕೊಂಡು ಇರುತ್ತಾರೆ. ನಮಗೆ ಜನನಾಯಕರು ಬೇಡ. ಜನಪ್ರತಿನಿಧಿಗಳು ಬೇಕು. ಜನಸಾಮಾನ್ಯರಿಂದಲೇ ಜನಪ್ರತಿನಿಧಿ ಹುಟ್ಟಿದರೆ ಆತ ಜನರ ಕೈಗೆ ಸಿಗುತ್ತಾನೆ. ಮನೆ ಕಟ್ಟಿಸುವಾಗ ಅನುಮತಿ ಇತ್ಯಾದಿಗಾಗಿ ಅಪ್ಪ ಅಮ್ಮ ಕಷ್ಟಪಡುವುದನ್ನು ನೋಡಿದ್ದೇನೆ. ಶಾಸಕನಾಗಿ ನಾನು ಇಂತಹವುಗಳನ್ನು ನಿಯಂತ್ರಿಸಬಹುದು. ನಮ್ಮಲ್ಲಿ ಉತ್ತಮವಾದ ಆಡಳಿತವರ್ಗ, ಪಂಚಾಯತ್ ರಾಜ್‌ ವ್ಯವಸ್ಥೆ ಇದೆ. ಅದನ್ನು ಬಳಸಿಕೊಳ್ಳಬೇಕು. ಸಾಂಪ್ರದಾಯಿಕ ರಾಜಕಾರಣಗಳಿಗೆ ಓಟು ಹಾಕುವ ಕಾಲ ಮುಗಿಯಿತು. ನಮ್ಮ ಪೀಳಿಗೆಯ ಜನರಿಗೆ ಹೊಸತರ ಆಲೋಚನೆಗಳು ಮೂಡುತ್ತಿವೆ.

ನಿರ್ಲಕ್ಷ್ಯವೇ ಕಾರಣ

ನಿರ್ಲಕ್ಷ್ಯವೇ ಕಾರಣ

ಖಾಸಗಿ ಕಂಪೆನಿಯ ಕೆಲಸ, ಇಎಂಐ ಇರುತ್ತೆ, ಸಂಬಳ ಇರುತ್ತದೆ. ಎಲ್ಲ ಬಿಟ್ಟು ಇವೆಲ್ಲ ಏಕೆ ಮಾಡಬೇಕು ಎಂದು ಎಲ್ಲರೂ ನಿರ್ಲಕ್ಷ್ಯ ಮಾಡಿದ್ದಕ್ಕೇ ರಾಜಕಾರಣ ಈ ಸ್ಥಿತಿಗೆ ಬಂದಿರುವುದು. ಸಾಮಾನ್ಯರು ಚುನಾವಣೆಗೆ ಸ್ಪರ್ಧಿಸಲು ಆಗುವುದಿಲ್ಲ ಎಂಬ ಸ್ಥಿತಿ ಇತ್ತು.

ಇವರೆಲ್ಲ ಏನೂ ಮಾಡುತ್ತಿಲ್ಲ ಎಂದು ಎನಿಸಿದ್ದರಿಂದ ರಾಜಕೀಯ ಪ್ರವೇಶ ಮಾಡಬೇಕಾಯ್ತು. ಒಂದು ಉದಾಹರಣೆಯನ್ನು ನೀಡಬೇಕಿತ್ತು. ಮುಂದೆ ನನ್ನಂತಹವರು ಸ್ಪರ್ಧಿಸುವ ಪ್ರಯತ್ನ ಮಾಡಿದಾಗ ನನ್ನ ಅನುಭವದಲ್ಲಿ ಅವರಿಗೆ ನಾನು ನೆರವು ನೀಡಬಹುದು. ನನ್ನಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ. ನನಗೆ 500 ಮತಗಳು ಸಿಕ್ಕರೂ ಅದರ ಆಧಾರದಲ್ಲಿ ಗೆದ್ದವರನ್ನು ನಾನು ಪ್ರಶ್ನಿಸಬಹುದು.

ನೋಟಾ ಮತ ಬಂದರೂ ಸಾಕು

ನೋಟಾ ಮತ ಬಂದರೂ ಸಾಕು

ಇಲ್ಲಿ ರಾಜಕೀಯ ಪಕ್ಷಗಳದ್ದೇ ಕೈ ಮೇಲೆ. ಅವರ ಜತೆ ಸೆಣಸಾಟ ಸುಲಭವಲ್ಲ. ಜನರೂ ಅವರ ಪ್ರಭಾವಕ್ಕೆ ಒಳಗಾಗಿರುತ್ತಾರೆ.
ನಾನು ಹೇಳುವುದು ನಿಮ್ಮ ಸಾಧನೆ ಆಧಾರದಲ್ಲಿ ಮತ ಕೇಳಿ. ನಾವು ನಮ್ಮ ಕಾನ್ಸೆಪ್ಟ್ ಆಧಾರದಲ್ಲಿ ಮತ ಕೇಳ್ತೀವಿ. ನೀವು ಕೆಲಸ ಮಾಡಿಲ್ಲ ಎಂದು ನಾವು ದೂರುವುದಿಲ್ಲ. ಅದು ನಮ್ಮದೇ ತಪ್ಪು. ನಾವು ನಿಮ್ಮನ್ನು ಕೇಳಲಿಲ್ಲ. ನಾವು ಓಟು ಹಾಕಿ ಮರೆತಿದ್ದೇವೆ. ಇಚ್ಛಾಶಕ್ತಿಯ ಕೊರತೆ ಅವರಲ್ಲಿ ಮಾತ್ರವಲ್ಲ, ಓಟು ಹಾಕಿದ ನಮ್ಮಲ್ಲೂ ಇರುತ್ತದೆ.

ನಮ್ಮ ಜನರಿಗೆ ಚುನಾವಣೆ ಮತ್ತು ರಾಜಕೀಯ ತಿಳಿವಳಿಕೆ ಕೊರತೆ ಇದೆ. ಅದು ಕೆಟ್ಟದ್ದು ಎಂದು ದೂರವೇ ಇದ್ದಾರೆ. ಇದನ್ನು ಬಳಸಿಕೊಂಡು ರಾಜಕಾರಣಿಗಳು ನಮ್ಮನ್ನು ಹಾಳು ಮಾಡುತ್ತಿದ್ದಾರೆ. ನಾವು ಯಾರನ್ನೂ ಓಲೈಸುತ್ತಿಲ್ಲ. ಯಾವ ಅಭ್ಯರ್ಥಿಯೂ ಸರಿಯಿಲ್ಲ ಎಂಬ ಕಾರಣಕ್ಕೆ ನೋಟಾ ಹಾಕುತ್ತಾರೆ. ಅದು ಪ್ರಜಾಪ್ರಭುತ್ವದ ಮೇಲಿನ ಗಾಯ. ಒಳ್ಳೆಯದು ಮಾಡುವ ಮನಸಿನವರು ನಾವಿದ್ದೇವೆ. ಆಯ್ಕೆ ಇಲ್ಲ ಎಂಬ ಅಸಹಾಯಕತೆ ನಿಮ್ಮನ್ನು ಕಾಡಬಾರದು ಎಂದು ನಾವು ನಿಂತಿದ್ದೇವೆ. ನೋಟಾಕ್ಕೆ ಮತ ಒತ್ತುವವರು ನಮಗೆ ಹಾಕಿ ಎಂದು ಕೇಳುತ್ತಿದ್ದೇವೆ.

ಹಿಂದೆಯೇ ಬರಬೇಕಿತ್ತು ಎಂದರು

ಹಿಂದೆಯೇ ಬರಬೇಕಿತ್ತು ಎಂದರು

'ಮತಬೇಟೆ' ಎಂಬ ಪದ ರೇಜಿಗೆ ಹುಟ್ಟಿಸುತ್ತದೆ. ಮತ ಬೇಟೆ ಮಾಡಲು ಜನರು ಪ್ರಾಣಿಗಳಲ್ಲ. ರಾಜಕಾರಣಿಗಳು ಶಿಕಾರಿ ಮಾಡುವವರಲ್ಲ. ನಾವಿಲ್ಲಿ ಯಾರನ್ನೋ ಬದಲಾಯಿಸುತ್ತೇವೆ ಎಂಬ ಭಂಡತನ ನಮ್ಮಲ್ಲಿಲ್ಲ. ಆದರೆ, ಇಡೀ ವ್ಯವಸ್ಥೆ ವಿರುದ್ಧವೇ ನಾವು ನಿಂತಿದ್ದೇವೆ. ನಮ್ಮ ಜತೆ ಬರಲು ಹೆಚ್ಚಿನವರಿಗೆ ಮನಸಿದೆ. ಆದರೆ ಅವರು ಒಂದು ಪಕ್ಷ, ಸಿದ್ಧಾಂತ, ವ್ಯಕ್ತಿಗಳ ಜತೆ ಗುರುತಿಸಿಕೊಂಡಿದ್ದಾರೆ. ಒಂದು ವರ್ಷದ ಹಿಂದೆಯೇ ನೀವು ಬಂದಿದ್ದರೆ ಪಕ್ಷದಿಂದ ಹಿಂದೆ ಸರಿದು ನಿಮ್ಮ ಜತೆ ಬಂದುಬಿಡುತ್ತಿದ್ದೆವು ಎಂದು ಅನೇಕರು ಹೇಳಿದ್ದಾರೆ. ತುಂಬಾ ಜನರಿಗೆ ನಾವು ಇಷ್ಟವಾಗಿದ್ದೇವೆ.

ನಮ್ಮನ್ನೇ ಅನುಕರಿಸಿದರು

ನಮ್ಮನ್ನೇ ಅನುಕರಿಸಿದರು

ನನಗೆ ರಾಜಕಾರಣದ ಅನುಭವ ಇಲ್ಲ. ಆದರೆ ಜನರ ಜತೆ ಒಡನಾಟ ಇದೆ. ಜನರ ಹುಟ್ಟುಹಬ್ಬದ ದಿನ ಗಿಡ ನೆಡ್ತೇವೆ. ರಕ್ತದಾನ ಶಿಬಿರ ಮಾಡ್ತೇವೆ. ಶೌಚಾಲಯ ನಿರ್ಮಿಸಲು ನೆರವಾಗಿದ್ದೇವೆ. ಇವು ಒಬ್ಬ ವ್ಯಕ್ತಿಯಾಗಿ ನಮ್ಮ ಸಾಮಾಜಿಕ ಜವಾಬ್ದಾರಿ. ರಾಜಕೀಯ ಪಕ್ಷಗಳ ಸದಸ್ಯರು ಲಾಬಿ, ಟಿಕೆಟ್ ಹಂಚಿಕೆಯಲ್ಲಿ, ಧರ್ಮ, ಜಾತಿ, ಭಾವನೆ ಹೆಸರಲ್ಲಿ ರಾಜಕಾರಣ ಮಾಡಿಕೊಂಡು ಇರುತ್ತಾರೆ. ಅಭಿವೃದ್ಧಿ ಬಗ್ಗೆ ಮಾತೇ ಆಡುವುದಿಲ್ಲ. ಇಲ್ಲೇ ನಾವು ಗೆದ್ದಿರುವುದು. ನಾವು ನೀಡಿದ ಪ್ರಣಾಳಿಕೆಯನ್ನು ಯಾವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೂ ನೀಡಿಲ್ಲ. ನಮಗೆ ಜನರ ಅಗತ್ಯಗಳ ಅರಿವಿದೆ. ಅದನ್ನು ನೋಡಿದವರು ಉಳಿದ ಪಕ್ಷದವರನ್ನು ಪ್ರಶ್ನಿಸಿದರು. ಅವರೀಗ ನಮ್ಮ ಪ್ರಣಾಳಿಕೆಯನ್ನು ಅನುಕರಿಸುತ್ತಿದ್ದಾರೆ. ಜನರನ್ನು ಓಲೈಸಲು ಬೇರೆ ಮಾತನ್ನಾಡುತ್ತಿದ್ದವರು ಈಗ ಅಭಿವೃದ್ಧಿ ಅಂಶಗಳನ್ನು ಇಟ್ಟುಕೊಂಡು ಮಾತನ್ನಾಡುತ್ತಿದ್ದಾರೆ.

ಭಯ ಮೂಡಿಸಬೇಕಿತ್ತು

ಭಯ ಮೂಡಿಸಬೇಕಿತ್ತು

ಗೆದ್ದರೆ ಕೆಲಸಕ್ಕೆ ರಾಜೀನಾಮೆ ನೀಡಿ ನನ್ನ ಜವಾಬ್ದಾರಿ ಹೊತ್ತುಕೊಳ್ಳುವುದು. ಸೋತರೆ ಫಲಿತಾಂಶ ಬಂದ ಮರುದಿನ ವಾಪಸ್ ಕೆಲಸಕ್ಕೆ ಹೋಗುವುದು. ಅದಾದ ಬಳಿಕವೂ ಕೆಲಸಗಳನ್ನು ಮುಂದುವರಿಸುತ್ತೇವೆ. ಪ್ರಶ್ನಿಸುತ್ತೇವೆ. ಅರಿವು ಮೂಡಿಸುತ್ತೇವೆ. ತಮ್ಮ ಓಟನ್ನು ನಾವು ಕಸಿಯುತ್ತೇವೆ ಎಂಬ ಭಯ ರಾಜಕಾರಣಿಗಳಲ್ಲಿ ಮೂಡಿದೆ. ನಾವು ಪ್ರಚಾರಕ್ಕೆ ಹೋದ ಜಾಗಕ್ಕೆ ನಮ್ಮನ್ನೇ ಹಿಂಬಾಲಿಸಿ ಪ್ರಚಾರ ಮಾಡುತ್ತಾರೆ. ನಾವು ಕೆಲಸ ಮಾಡದಿದ್ದರೆ ಇಂತಹ ಹುಡುಗರು ಹುಟ್ಟಿಕೊಂಡು ತಮ್ಮ ರಾಜಕಾರಣಕ್ಕೆ ಕುತ್ತು ತರುತ್ತಾರೆ ಎಂಬ ಸಣ್ಣ ಭಯ ಮೂಡಿಸಬೇಕಿತ್ತು. ಅದು ಭಾಗಶಃ ಯಶಸ್ವಿಯಾಗಿದೆ.

ಸೋತರೆ ನನ್ನೊಬ್ಬನ ಸೋಲು

ಸೋತರೆ ನನ್ನೊಬ್ಬನ ಸೋಲು

ಚುನಾವಣೆಗೆ ನಿಂತಾಗ ಸಾಕಷ್ಟು ತೊಂದರೆ ಎದುರಿಸಬೇಕಾಯ್ತು. ಇದು ಕತ್ತಿ ಅಲಗಿನ ಮೇಲಿನ ನಡಿಗೆ. ಬಹಳ ಸೂಕ್ಷ್ಮ. ಇಲ್ಲಿ 2008 ರಲ್ಲಿ ಜೆಡಿಎಸ್ 20 ಮತದಿಂದ ಗೆದ್ದಿತ್ತು. 2013 ರಲ್ಲಿ 421 ಮತದಿಂದ ಕಾಂಗ್ರೆಸ್ ಗೆದ್ದಿತ್ತು. ಈ ಮಧ್ಯದಲ್ಲಿ ನಾವು ನುಗ್ಗಿದರೆ ಗೆಲ್ಲುವವರು ಸೋಲುತ್ತಾರೆ. ನಾಲ್ಕನೇ ಸ್ಥಾನದಲ್ಲಿ ಬರಬೇಕಾದವನು ಗೆಲ್ಲುತ್ತಾನೆ. ಹಾಗಾಗಿ ನಮ್ಮ ಮೇಲೆ ಒತ್ತಡ, ಆಮಿಷಗಳು ತುಂಬಾ ಇದ್ದವು. ಲಕ್ಷಗಟ್ಟಲೆ ಮೊತ್ತದ ಮೌಲ್ಯದ ಆಮಿಷ ಬಂದಿದ್ದವು. ನಮ್ಮ ಸ್ವಾಭಿಮಾನ, ಹಕ್ಕು, ಹೋರಾಟಗಳು ಮಾರಾಟಕ್ಕಿಲ್ಲ. ಅದೆಲ್ಲ ನಿಮ್ಮ ಕಾಲಕ್ಕೇ ಮುಗಿದುಹೋಗಿದೆ ಎಂದು ಖಡಾಖಂಡಿತವಾಗಿ ಹೇಳಿದೆವು. ಲಕ್ಷ ಕೋಟಿ ದುಡಿಯುತ್ತೇವೆ, ನಿಮ್ಮ ಅಗತ್ಯ ನಮಗಿಲ್ಲ ಎಂದು ಹೇಳಿ ಬಂದೆವು. ನಾನು ಗೆದ್ದರೆ ಕುಮಟಾ ಹೊನ್ನಾವರದ 80,000 ಯುವಕರ ಗೆಲುವು. ಸೋತರೆ ನನ್ನೊಬ್ಬನ ಸೋಲು. ಅದರಲ್ಲಿ ನಮ್ಮ ಆಶಯ ಈಡೇರಿದರೆ ಸಾಕು.

English summary
Prashanth naik, an employee of a private company is contesting from Kumta-Honnavar constituency as an independent candidate. Here is his interview with oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X