ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಜಸ್ಟ್ ಪಾಸ್ ಆದ ಬಿಪ್ಯಾಕ್

By Prasad
|
Google Oneindia Kannada News

ಬೆಂಗಳೂರು, ಮೇ. 9 : ಕರ್ನಾಟಕದ ಪಾಲಿಗೆ 14ನೇ ವಿಧಾನಸಭೆ ಚುನಾವಣೆ ಮಹತ್ವಪೂರ್ಣವಾಗಿತ್ತು. ಬಿಜೆಪಿ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿದ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿ ಕೊಟ್ಟಿದ್ದಾನೆ. 223 ಕ್ಷೇತ್ರಗಳಲ್ಲಿ 121 ಕ್ಷೇತ್ರಗಳನ್ನು (ಶೇ.54.2) ಕಬಳಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಭಾರತೀಯ ಜನತಾ ಪಕ್ಷ ಕೇವಲ ಶೇ18ರಷ್ಟು ಸ್ಥಾನಗಳನ್ನು ಗಳಿಸಿದ್ದರೆ, ಮತ್ತೆ ಅಧಿಕಾರಕ್ಕೆ ಬರಲು ಯತ್ನ ನಡೆಸಿದ್ದ ಜೆಡಿಎಸ್ ಶೇ.18.1ರಷ್ಟು ಸ್ಥಾನಗಳನ್ನು ಗಳಿಸಿದೆ. ಇಲ್ಲಿ ಗಮನಿಸಬಹುದಾಗ ಅಂಶವೆಂದರೆ, ಬೆಂಗಳೂರಿನ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಬಿಪ್ಯಾಕ್ (Bangalore Political Action Committee) ಶೇ.35.7ರಷ್ಟು ಸ್ಥಾನಗಳನ್ನು ಗೆದ್ದು ಬೆಂಗಳೂರಿನಲ್ಲಿ ತನ್ನ ಮುದ್ರೆಯನ್ನು ಒತ್ತಿದೆ.

ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಖ್ಯಾತ ಉದ್ಯಮಿಗಳು ಕಟ್ಟಿರುವ ಬಿಪ್ಯಾಕ್ ಸಂಸ್ಥೆ ವಿವಿಧ ಪಕ್ಷಗಳ ಒಟ್ಟು ಹದಿನಾಲ್ಕು ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಅವರಲ್ಲಿ 5 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಆ ಮೂಲಕ ಮತದಾರರು ಬಿಪ್ಯಾಕ್ ಆರಂಭಿಸಿರುವ ಸಂಸ್ಥೆಗೆ ಕೂಡ ಬೆಂಬಲ ಸೂಚಿಸಿದ್ದಾರೆ. ಬಯೋಕಾನ್ ಸಂಸ್ಥೆಯ ಚೇರ್ ವುಮನ್ ಆಗಿರುವ ಕಿರಣ್ ಮಜುಂದಾರ್ ಷಾ ಅವರು ಬಿಪ್ಯಾಕ್ ಮುಖ್ಯಸ್ಥೆಯಾಗಿದ್ದಾರೆ.

ಗೆದ್ದವರು ಮತ್ತು ಸೋತವರ ವಿವರಗಳು ಮುಂದಿನಂತಿವೆ.

ಬಿಜೆಪಿಯ ಸುರೇಶ್ ಕುಮಾರ್ (ಗೆದ್ದಿದ್ದಾರೆ)

ಬಿಜೆಪಿಯ ಸುರೇಶ್ ಕುಮಾರ್ (ಗೆದ್ದಿದ್ದಾರೆ)

ರಾಜಾಜಿನಗರ ಕ್ಷೇತ್ರದಲ್ಲಿ ಕೆಜೆಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ ಧುಮುಕಿದ್ದರಿಂದ ಭಾರೀ ಆಸಕ್ತಿ ಕೆರಳಿಸಿತ್ತು. ಕಾಂಗ್ರೆಸ್‌ನಿಂದ ಮಂಜುಳಾ ನಾಯ್ಡು ಕೂಡ ಕಣಕ್ಕಿಳಿದಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆರಂಭದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಮತ್ತು ಶೋಭಾ ಹಿನ್ನಡೆ ಕಂಡರೂ ಮುಂದಿನ ಹಂತದಲ್ಲಿ ಸುರೇಶ್ ಕುಮಾರ್ ಅವರು ಜಯಭೇರಿ ಬಾರಿಸಿದರು. ಎರಡನೇ ಸ್ಥಾನ ಮಂಜುಳಾ ಪಡೆದರೆ, ಶೋಭಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಕಾಂಗ್ರೆಸ್‌ನ ನರೇಂದ್ರ ಬಾಬು (ಸೋತಿದ್ದಾರೆ)

ಕಾಂಗ್ರೆಸ್‌ನ ನರೇಂದ್ರ ಬಾಬು (ಸೋತಿದ್ದಾರೆ)

ಎರಡು ಬಾರಿ ಮಹಾಲಕ್ಷ್ಮಿ ಲೇಔಟಿನಿಂದ ಗೆದ್ದಿದ್ದ ನರೇಂದ್ರ ಬಾಬು ಅವರು ಈ ವಿಧಾನಸಭೆ ಚುನಾವಣೆಯಲ್ಲಿ ಸೋತ ಪ್ರಮುಖರು. ಅವರು ಜೆಡಿಎಸ್‌ನ ಗೋಪಾಲಯ್ಯ ವಿರುದ್ಧ 16 ಸಾವಿರ ಮತಗಳಿಂದ ಸೋಲನುಭವಿಸಿದ್ದಾರೆ.

ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ (ಗೆದ್ದಿದ್ದಾರೆ)

ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ (ಗೆದ್ದಿದ್ದಾರೆ)

ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಕೃಷ್ಣ ಭೈರೇಗೌಡ ಗೆಲ್ಲುವ ಕುದುರೆಯಾಗಿದ್ದರು. ಆದರೆ, ಅವರು ಮಾಡಿರುವ ಕೆಲಸ ಗಮನಿಸಿ ಬಿಪ್ಯಾಕ್ ಅವರನ್ನು ಬೆಂಬಲಿಸಿತ್ತು. ಜನರು ಕೃಷ್ಣರ ಮೇಲಿಟ್ಟ ವಿಶ್ವಾಸ ಹುಸಿಯಾಗಲಿಲ್ಲ. ಹತ್ತಿರದ ಸ್ಪರ್ಧಿ ಬಿಜೆಪಿಯ ಎ ರವಿ ಅವರನ್ನು ಸೋಲಿಸಿ ಕೃಷ್ಣ ಜಯದ ಮಾಲೆ ಧರಿಸಿದ್ದಾರೆ.

ಕಾಂಗ್ರೆಸ್‌ನ ತೇಜಸ್ವಿನಿ ಗೌಡ (ಸೋತಿದ್ದಾರೆ)

ಕಾಂಗ್ರೆಸ್‌ನ ತೇಜಸ್ವಿನಿ ಗೌಡ (ಸೋತಿದ್ದಾರೆ)

ಯುವ ನಾಯಕಿಯರಲ್ಲಿ ಒಬ್ಬರಾಗಿರುವ ಫೈರ್ ಬ್ರಾಂಡ್ ಡಾ. ತೇಜಸ್ವಿನಿ ಗೌಡ ಅವರ ಮೇಲೆ ಬಿಪ್ಯಾಕ್ ಇಟ್ಟಿದ್ದ ವಿಶ್ವಾಸ ಹುಸಿಯಾಗಿದೆ. ಬಿಜೆಪಿಯ ಎಂ. ಕೃಷ್ಣಪ್ಪ ಭಾರೀ ಅಂತರದಿಂದ ಜೆಡಿಎಸ್‌ನ ಪ್ರಭಾಕರ್ ಅವರನ್ನು ಸೋಲಿಸಿದ್ದಾರೆ. ತೇಜಸ್ವಿನಿ ಮೂರನೇ ಸ್ಥಾನ ಪಡೆದು ಹೀನಾಯವಾಗಿ ಸೋತಿದ್ದಾರೆ.

ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ (ಗೆದ್ದಿದ್ದಾರೆ)

ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ (ಗೆದ್ದಿದ್ದಾರೆ)

ಕಾಂಗ್ರೆಸ್‌ನ ಯುವ ನಾಯಕರಲ್ಲಿ ಒಬ್ಬರಾಗಿರುವ ದಿನೇಶ್ ಗುಂಡೂರಾವ್ ಅವರಲ್ಲಿನ ನಾಯಕತ್ವದ ಗುಣ ಗಮನಿಸಿ ಬಿಪ್ಯಾಕ್ ಅವರನ್ನು ಬೆಂಬಲಿಸಿತ್ತು. ಗಾಂಧಿ ನಗರ ಕ್ಷೇತ್ರದಲ್ಲಿ ನಡೆದ ತುರುಸಿನ ಸ್ಪರ್ಧೆಯಲ್ಲಿ ದಿನೇಶ್ ಅವರು ಬಿಜೆಪಿಯ ಹುರಿಯಾಳು ಪಿ.ಸಿ. ಮೋಹನ್ ಅವರನ್ನು ಸದೆಬಡಿತು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ನ ಪ್ರೊ. ಬಿ.ಕೆ. ಚಂದ್ರಶೇಖರ್ (ಸೋತಿದ್ದಾರೆ)

ಕಾಂಗ್ರೆಸ್‌ನ ಪ್ರೊ. ಬಿ.ಕೆ. ಚಂದ್ರಶೇಖರ್ (ಸೋತಿದ್ದಾರೆ)

ಬಸವನಗುಡಿಯಲ್ಲಿ ಕೂಡ ಬಿಪ್ಯಾಕ್ ಇಬ್ಬರು ಅಭ್ಯರ್ಥಿಗಳನ್ನು ಬೆಂಬಲಿಸಿತ್ತು. ಕಾಂಗ್ರೆಸ್‌ನ ಬಿಕೆಸಿ ಒಬ್ಬರಾದರೆ, ಲೋಕ ಸತ್ತಾ ಪಕ್ಷದ ಶಾಂತಲಾ ದಾಮ್ಲೆ ಮತ್ತೊಬ್ಬರು. ಇವರಲ್ಲಿ, ಪ್ರತಿಭಟನೆಯ ನಡುವೆ ಟಿಕೆಟ್ ಪಡೆದಿದ್ದ ಬಿಕೆಸಿ ಮೂರನೇ ಸ್ಥಾನ ಪಡೆದು ಸೋತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ರವಿ ಸುಬ್ರಮಣ್ಯ ಜಯಭೇರಿ ಬಾರಿಸಿದ್ದಾರೆ.

ಬಿಜೆಪಿಯ ಡಾ. ಅಶ್ವತ್ಥ ನಾರಾಯಣ (ಗೆದ್ದಿದ್ದಾರೆ)

ಬಿಜೆಪಿಯ ಡಾ. ಅಶ್ವತ್ಥ ನಾರಾಯಣ (ಗೆದ್ದಿದ್ದಾರೆ)

ಮಲ್ಲೇಶ್ವರ ಕ್ಷೇತ್ರದಲ್ಲಿ ಇಬ್ಬರು ವಿಭಿನ್ನ ಪಕ್ಷಗಳ ಅಭ್ಯರ್ಥಿಗಳನ್ನು ಬಿಪ್ಯಾಕ್ ಬೆಂಬಲಿಸಿತ್ತು. ಬಿಜೆಪಿಯ ಡಾ. ಅಶ್ವತ್ಥ ನಾರಾಯಣ ಮತ್ತು ಲೋಕ ಸತ್ತಾ ಪಕ್ಷದ ಡಾ. ಮೀನಾಕ್ಷಿ ಭರತ್ ಅವರ ಬೆನ್ನ ಹಿಂದೆ ಬಿಪ್ಯಾಕ್ ನಿಂತಿತ್ತು. ಇಬ್ಬರಲ್ಲಿ ಹಿಂದಿನ ಶಾಸಕ ಅಶ್ವತ್ಥ ನಾರಾಯಣ ಅವರು ಕಾಂಗ್ರೆಸ್‌ನ ಬಿಕೆ ಶಿವರಾಮ್ ಅವರ ವಿರುದ್ಧ ಜಯಭೇರಿ ಬಾರಿಸಿದ್ದರೆ, ಮೀನಾಕ್ಷಿ ಭರತ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಲೋಕ ಸತ್ತಾದ ಶಾಂತಲಾ ದಾಮ್ಲೆ (ಸೋತಿದ್ದಾರೆ)

ಲೋಕ ಸತ್ತಾದ ಶಾಂತಲಾ ದಾಮ್ಲೆ (ಸೋತಿದ್ದಾರೆ)

ಅಭಿವೃದ್ಧಿಯ ಭಿತ್ತಿಪತ್ರ ಹಿಡಿದು ವಿಷಲ್ ಹಾಕುತ್ತಲೇ ಶಾಂತಲಾ ದಾಮ್ಲೆ ಬಸವನಗುಡಿ ಕ್ಷೇತ್ರದುದ್ದಕ್ಕೂ ಭಾರೀ ಪ್ರಚಾರ ನಡೆಸಿದ್ದರು. ಜನರ ಅಪಾರ ಬೆಂಬಲವನ್ನೂ ಪಡೆದಿದ್ದರು. ಆದರೂ, ಜನರು ಅನುಭವಿ ರಾಜಕಾರಣಿಗಳಿಗೆ ಮೊರೆಹೋಗಿದ್ದಾರೆ. ಶಾಂತಲಾ ಅವರ ಮುಂದೆ ಇನ್ನೂ ಹಲವಾರು ವರ್ಷಗಳ ರಾಜಕೀಯ ಜೀವನ ಬಾಕಿ ಇದೆ.

ಬಿಜೆಪಿಯ ಬಿ.ಎನ್. ವಿಜಯಕುಮಾರ್ (ಗೆದ್ದಿದ್ದಾರೆ)

ಬಿಜೆಪಿಯ ಬಿ.ಎನ್. ವಿಜಯಕುಮಾರ್ (ಗೆದ್ದಿದ್ದಾರೆ)

ಜಯನಗರ ಕ್ಷೇತ್ರದ ಅನಭಿಷಿಕ್ತ ದೊರೆಯಂತಿರುವ ಬಿ.ಎನ್. ವಿಜಯ್ ಕುಮಾರ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ಜನಾನುರಾಗಿಗಳಾಗಿದ್ದಾರೆ. ಆಜನ್ಮ ಬ್ರಹ್ಮಚಾರಿಯಾಗಿರುವ ಬಿಪ್ಯಾಕ್ ಬೆಂಬಲಿತ ವಿಜಯ್ ಕುಮಾರ್ ಅವರಿಗೆ ಸ್ಪರ್ಧೆಯೇ ಇರಲಿಲ್ಲ. ಅವರು ಕಾಂಗ್ರೆಸ್ಸಿನ ಎಂ.ಸಿ.ವೇಣುಗೋಪಾಲ್ ಅವರನ್ನು ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸದೆಬಡಿದಿದ್ದಾರೆ.

ಲೋಕ ಸತ್ತಾದ ಮೀನಾಕ್ಷಿ ಭರತ್ (ಸೋತಿದ್ದಾರೆ)

ಲೋಕ ಸತ್ತಾದ ಮೀನಾಕ್ಷಿ ಭರತ್ (ಸೋತಿದ್ದಾರೆ)

ಪರಿಸರಕ್ಕಾಗಿ ಸಾಕಷ್ಟು ಹೋರಾಟ ನಡೆಸಿರುವ ಮೀನಾಕ್ಷಿ ಭರತ್ ಕೂಡ ಮಲ್ಲೇಶ್ವರದಲ್ಲಿ ಸಾಕಷ್ಟು ಅಡ್ಡಾಡಿ ಜನರನ್ನು ಭೇಟಿ ಮಾಡಿ ಮತ ಯಾಚಿಸಿದ್ದರು. ಆದರೆ, ಅವರಿಗೂ ವಿಜಯಲಕ್ಷಿ ಒಲಿಯಲಿಲ್ಲ. ಮೂರನೇ ಸ್ಥಾನ ಪಡೆದು ಸೋತರೂ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ, ಹಿಂದಿಡುವುದು ಬೇಡ.

ಲೋಕ ಸತ್ತಾದ ಡಾ. ಅಶ್ವಿನ್ ಮಹೇಶ್ (ಸೋತಿದ್ದಾರೆ)

ಲೋಕ ಸತ್ತಾದ ಡಾ. ಅಶ್ವಿನ್ ಮಹೇಶ್ (ಸೋತಿದ್ದಾರೆ)

ಲೋಕ ಸತ್ತಾದ ಬೆಂಗಳೂರು ಘಟಕದ ನಾಯಕ ಡಾ. ಅಶ್ವಿನ್ ಮಹೇಶ್ ಬೆಂಗಳೂರು ಅಭಿವೃದ್ಧಿಯ ಹರಿಕಾರರಲ್ಲಿ ಒಬ್ಬರು. ಸರಕಾರದ ಒಡಗೂಡಿ ನಗರದ ಬೆಳವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಮತ್ತು ಹಲವಾರು ಕನಸು ಕಂಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಶ್ವಿನ್ ಮಹೇಶ್ ಅವರಿಗೆ ಜನರು ಬೆಂಬಲ ಸೂಚಿಸಿದರೂ ಗೆಲ್ಲಿಸಿ ಕೊಡಲಿಲ್ಲ. ಬೊಮ್ಮನಹಳ್ಳಿಯಲ್ಲಿ ಬಿಜೆಪಿಯ ಸತೀಶ್ ರೆಡ್ಡಿ ಜಯಶಾಲಿಯಾದರು.

ಜೆಡಿಎಸ್‌ನ ಡಾ. ಎಂಆರ್‌ವಿ ಪ್ರಸಾದ್ (ಸೋತಿದ್ದಾರೆ)

ಜೆಡಿಎಸ್‌ನ ಡಾ. ಎಂಆರ್‌ವಿ ಪ್ರಸಾದ್ (ಸೋತಿದ್ದಾರೆ)

ಅಪಾರ ಜನಾನುರಾಗಿ ಆಗಿರುವ ಡಾ. ಎಂಆರ್‌ವಿ ಪ್ರಸಾದ್ ಅವರು ಪದ್ಮನಾಭ ನಗರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ರಾಜಕಾರಣಿ ಆರ್ ಅಶೋಕ್ ವಿರುದ್ಧ ಸೆಣಸಿದ್ದರು. ಪ್ರಸಾದ್ ಅವರು ಇಪ್ಪತ್ತಾರು ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದರೂ ಅಶೋಕ್ ಅವರಿಗೆ ಸರಿಸಾಟಿಯಾಗಲಿಲ್ಲ.

ಜೆಡಿಎಸ್‌ನ ಅಬ್ದುಲ್ ಅಜೀಂ (ಸೋತಿದ್ದಾರೆ)

ಜೆಡಿಎಸ್‌ನ ಅಬ್ದುಲ್ ಅಜೀಂ (ಸೋತಿದ್ದಾರೆ)

ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಅವರು ಹೆಬ್ಬಾಳದಲ್ಲಿ ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದರು. ಕೊನೆಗೂ ಅವರಿಗೆ ಅದೃಷ್ಟಲಕ್ಷ್ಮಿ ಒಲಿಯಲೇ ಇಲ್ಲ. ಹೆಬ್ಬಾಳದಲ್ಲಿ ಬಿಜೆಪಿಯ ಜಗದೀಶ್ ಕುಮಾರ್ ಜಯಶಾಲಿಯಾದರೆ, ಅಬ್ದುಲ್ ಅಜೀಂ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಕೆಜೆಪಿಯ ಮೈಕಲ್ ಬಿ. ಫರ್ನಾಂಡಿಸ್ (ಸೋತಿದ್ದಾರೆ)

ಕೆಜೆಪಿಯ ಮೈಕಲ್ ಬಿ. ಫರ್ನಾಂಡಿಸ್ (ಸೋತಿದ್ದಾರೆ)

ಸರ್ವಜ್ಞನಗರದಲ್ಲಿ ಬಿಪ್ಯಾಕ್ ಬೆಂಬಲಿತ ಕೆಜೆಪಿಯ ಅಭ್ಯರ್ಥಿ ಮೈಕಲ್ ಬಿ. ಫರ್ನಾಂಡಿಸ್ ಪ್ರಬಲ ಹುರಿಯಾಳು ಆಗಿರಲೇ ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆಜೆ ಜಾರ್ಜ್ 69 ಸಾವಿರ ಮತಗಳನ್ನು ಪಡೆದರೆ ಫರ್ನಾಂಡಿಸ್ ಕೇವಲ 2 ಸಾವಿರ ಮತಗಳನ್ನು ಪಡೆದಿದ್ದಾರೆ.

English summary
Five candidates out of 14 supported by BPAC (Bangalore Political Action Committee) have won in Karnataka assembly election 2013. BPAC is an organization established by Bangalore based entrepreneurs for the development of Bangalore. Is it a huge success for BPAC?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X