ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಯಾವ ಜಾತಿ ಟ್ರಂಪ್ ಕಾರ್ಡ್ ಆಗಲಿದೆ?

By Prasad
|
Google Oneindia Kannada News

Udupi district latest update
ಉಡುಪಿಯಲ್ಲಿ ರಘುಪತಿ ಭಟ್ ರಾಸಲೀಲೆ ಪ್ರಕರಣ, ಕರಾವಳಿ ವಾಜಪೇಯಿ ಅಂತ ಖ್ಯಾತರಾಗಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ತೊರೆದಿರುವುದು, ಬೈಂದೂರಿನ ಲಕ್ಷ್ಮೀನಾರಾಯಣ ಕೆಜೆಪಿ ಜೊತೆ ಕಾಣಿಸಿಕೊಂಡಿರುವುದು, ಕಾಪು ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟಿಗೆ ಕೈಯೊಡ್ಡಿರುವುದು, ಕಾರ್ಕಳದಲ್ಲಿ ಸೋತು ಗೆದ್ದು, ಗೆದ್ದು ಸೋತವರ ನಡುವೆ ಕದನ ನಡೆಯುತ್ತಿರುವುದು ಇಡೀ ಉಡುಪಿ ಜಿಲ್ಲೆಯನ್ನು ಎಲ್ಲರೂ ತಿರುಗಿ ನೋಡುವಂಥ ಕಣವನ್ನಾಗಿಸಿದೆ. ಬಂಟರು, ಬಿಲ್ಲವರು, ಮೊಗವೀರರ ನಡುವೆ ಮುಸ್ಲಿಂ ಮತಗಳನ್ನು ಗೆದ್ದವರು ಇಲ್ಲಿ ಜಯಭೇರಿ ಬಾರಿಸಲಿದ್ದಾರೆ.

ಉಡುಪಿ

ಘಟಾನುಘಟಿಗಳ ಅಖಾಡ ಅಂತಾನೇ ಉಡುಪಿ ವಿಧಾನಸಭಾ ಕ್ಷೇತ್ರ ಕರೆಸಿಕೊಂಡಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಉಡುಪಿ ಕಥೆ ಉಲ್ಟಾ ಪಲ್ಟಾ ಆಗಿದೆ. ಬಿಜೆಪಿ ಶಾಸಕ ರಘುಪತಿ ಭಟ್ ರಾಸಲೀಲೆ ಆರೋಪ ಎದುರಿಸುತ್ತಿದ್ದು, ಒನ್ ಸೈಡ್ ಫೈಟ್ ಆಗೋ ಸಾಧ್ಯತೆಯಿದೆ. ಯಾಕಂದ್ರೆ, ಭಟ್ ಕಣದಿಂದ ಹಿಂದೆ ಸರಿದಿರೋದ್ರಿಂದ ಬಿಜೆಪಿಗೆ ಸಮರ್ಥ ಅಭ್ಯರ್ಥಿಯೇ ಇಲ್ಲದಂತಾಗಿದೆ. ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಕಳೆದ ಚುನಾವಣೆಯಲ್ಲಿ ಸೋತ ದಿನದಿಂದಲೇ ದಾನ ಧರ್ಮದಲ್ಲಿ ತೊಡಗಿದ್ದರು. ಇದರ ಫಲವಾಗಿ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲೂ 23 ಸೀಟು ಗೆಲ್ಲಿಸಿಕೊಡುವಲ್ಲಿ ಸಕ್ಸಸ್ಸಾಗಿದ್ದಾರೆ. ಹೀಗಾಗಿ ಈ ಬಾರಿ ಮಧ್ವರಾಜ್ ಗೆಲುವು ಸುಲಭ ಅಂತಾನೇ ಹೇಳಾಗ್ತಿದೆ. ರಘುಪತಿ ಹಿಂದೆ ಸರಿದ್ದರಿಂದ ಸುಧಾಕರ ಶೆಟ್ಟಿ ಅವರಿಗೆ ಬಿಜೆಪಿ ಅವಕಾಶ ನೀಡಿದೆ. ಗೆಲುವು ಯಾರಿಗೆ ಲಭಿಸಲಿದೆ?

ಕುಂದಾಪುರ

ಉಡುಪಿ ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆದಿರೋದು, ಕುಂದಾಪುರದ ವಿಧಾನಸಭಾ ಕ್ಷೇತ್ರ. ಟೈಂ ಸರಿಯಿಲ್ಲದಿದ್ರೆ ಹಗ್ಗವೂ ಹಾವಾಗುತ್ತೆ ಅನ್ನೋ ಹಾಗಾಗಿದೆ, ಬಿಜೆಪಿ ಕಥೆ. ಕರಾವಳಿಯ ವಾಜಪೇಯಿ ಅಂತಾನೇ ಖ್ಯಾತಿ ಗಳಿಸಿರೋ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಮಲ ಪಕ್ಷ ತೊರೆದಿದ್ದಾರೆ. ಹೀಗಾಗಿ, ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳೋದು ಖಚಿತ ಎನ್ನಲಾಗ್ತಿದೆ. ಹಾಲಾಡಿ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ಹಾಲಾಡಿ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಕಾರಣ ಕಿಶೋರ್ ಕುಮಾರ್ ಎಂಬುವವರನ್ನು ಬಿಜೆಪಿ ಸ್ಪರ್ಧೆಗೆ ನಿಲ್ಲಿಸಿದೆ. ಕಾಂಗ್ರೆಸ್ ಪಕ್ಷ ಎಂ ಶಿವರಾಮ್ ಶೆಟ್ಟಿ ಅವರನ್ನು ಕಣಕ್ಕೆ ಇಳಿಸಿದೆ. ಅದೇನೇ ಇರಲಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಭಾಗದ ಪ್ರಬಲ ಬಂಟ ಸಮುದಾಯಕ್ಕೆ ಸೇರಿದವರು. ಜೊತೆಯಲ್ಲೇ ಹಾಲಾಡಿಗೆ ಜಾತಿ-ಧರ್ಮದ ಬೇಲಿಯಿಲ್ಲ. ಎಲ್ಲ ಜಾತಿಯವರೂ ಹಾಲಾಡಿ ಪರ ನಿಲ್ಲುತ್ತಾರೆ ಅಂತಾನೇ ಹೇಳಲಾಗ್ತಿದೆ.

ಬೈಂದೂರು

ಲೋಕಸಭಾ ವ್ಯಾಪ್ತಿಯನ್ನು ತೆಗೆದುಕೊಂಡರೆ ಬೈಂದೂರು ಶಿವಮೊಗ್ಗ ಜಿಲ್ಲೆಗೆ ಬರುತ್ತದೆ. ಮಾಜಿ ಸಿಎಂ ಬಿಎಸ್‌ವೈ ಪುತ್ರ ಬಿ.ವೈ ರಾಘವೇಂದ್ರ ಅವರ ಏರಿಯಾ ಇದು. ಇಲ್ಲಿ ಸದ್ಯ ಲಕ್ಷ್ಮೀನಾರಾಯಣ ಶಾಸಕ. ಆದರೆ ಬಿಜೆಪಿಯ ಗಟ್ಟಿ ಶಾಸಕ ಅಂತ ಲಕ್ಷ್ಮೀನಾರಾಯಣರನ್ನು ಬಿಂಬಿಸೋ ಶಕ್ತಿ ಬಿಜೆಪಿಗಿಲ್ಲ. ಯಾಕಂದ್ರೆ ಈ ಶಾಸಕರು ಒಮ್ಮೆ ಕೆಜೆಪಿಯ ಸಮಾವೇಶದಲ್ಲಿ ಗುರುತಿಸಿಕೊಂಡಿದ್ದರು. ಎರಡೇ ದಿನಕ್ಕೆ ನಾನು ಕೆಜೆಪಿಗೆ ಹೋಗಲ್ಲ, ಬಿಜೆಪಿಯಲ್ಲೇ ಇದ್ದೇನೆ ಅಂದಿದ್ದರು. ಹೀಗಾಗಿ ಈ ಬಾರಿ ಲಕ್ಷ್ಮೀನಾರಾಯಣಗೆ ಟಿಕೆಟ್ ನೀಡಿಲ್ಲ. ಬದಲಿಗೆ ಸುಕುಮಾರ್ ಶೆಟ್ಟಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಪರ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿಯೇ ಕಣಕ್ಕಿಳಿಯುತ್ತಿದ್ದಾರೆ. ಬಂಟರು ಇಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಬಿಲ್ಲವರು ಎರಡನೇ ಸ್ಥಾನಕ್ಕೆ. 2 ಜಾತಿಗಳಿಂದ ಅಭ್ಯರ್ಥಿಗಳು ನಿಂತರೆ, ಮೊಗವೀರರೇ ನಿರ್ಣಾಯಕರಾಗುತ್ತಾರೆ. ಮುಸ್ಲಿಮರು ಯಾರಿಗೆ ಓಟು ಹಾಕುತ್ತಾರೋ ಅವರು ಗೆದ್ದಂತೆ.

ಕಾಪು

ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಎಲ್ಲರ ಕುತೂಹಲದ ಕೇಂದ್ರಬಿಂದು. ಉಡುಪಿಯಲ್ಲಿ ಕಾಂಗ್ರೆಸ್ ಹವಾ ಎದ್ದಾಗಿದೆ. ಹೀಗಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ 16 ಆಕಾಂಕ್ಷಿಗಳಿದ್ದಾರೆ. ಈ ಪೈಕಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ಉಳಿದ ಎಲ್ಲಾ ನಾಯಕರು ಕಾಂಗ್ರೆಸ್ ವಿರುದ್ಧ ನಿಲ್ಲೋದು ಗ್ಯಾರಂಟಿ. ಈ ಹಿಂದೆ ಲೋಕಸಭಾ ಸದಸ್ಯನಾಗಿದ್ದ, ಮಾಜಿ ಶಾಸಕ ಮೂಲತಃ ದಕ್ಷಿಣ ಕನ್ನಡದ ವಿನಯ್ ಕುಮಾರ್ ಸೊರಕೆಗೆ, ಕಾಪುವಿನಲ್ಲಿ ಕಾಂಗ್ರೆಸ್ ಮಣೆ ಹಾಕಲಾಗುತ್ತೆ ಎಂಬ ಮಾತಿದೆ. ಆದರೆ ಕೊನೆ ಕ್ಷಣದಲ್ಲಿ ಏನೂ ಆಗ್ಬಹುದು. ಶಾಸಕ ಲಾಲಾಜಿ, ಮೊಗವೀರ ಸಮುದಾಯದವರು. ಕಾಂಗ್ರೆಸ್ ಬಿಲ್ಲವರಿಗೆ ಮಣೆ ಹಾಕಿದ್ರೆ, ಬಂಟರೇ ಟ್ರಂಪ್ ಕಾರ್ಡ್‌ಗಳು. ಮುಸ್ಲಿಂ ಸಮುದಾಯದಿಂದ ಒಂದೆರಡು ಮಂದಿ ಸ್ಪರ್ಧಿಸಿದ್ರೆ ಕಾಂಗ್ರೆಸ್ ಮತಗಳು ಛಿದ್ರವಾಗುತ್ತದೆ.

ಕಾರ್ಕಳ

ಕಾರ್ಕಳ ವಿಧಾನಸಭಾ ಕ್ಷೇತ್ರ ಕೂಡಾ ಒಂದು ಲೆಕ್ಕದಲ್ಲಿ ಜಿದ್ದಾಜಿದ್ದಿನ ಕ್ಷೇತ್ರ. ಶಾಸಕ ಗೋಪಾಲ ಭಂಡಾರಿ ವಿರುದ್ಧ ಮಾಜಿ ಶಾಸಕ ಸುನೀಲ್ ಕುಮಾರ್ ತೊಡೆ ತಟ್ಟಲಿದ್ದಾರೆ. ಭಂಡಾರಿಗೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಸಪೋರ್ಟ್ ಇದೆ. ಸುನೀಲ್‌ಗೆ ಹಿಂದುತ್ವ ಮತ್ತು ಯುವ ಬಿಜೆಪಿ ಬಲವಿದೆ. ಕಳೆದ ಬಾರಿ ಸುನೀಲ್ ಕುಮಾರ್ ಗೆದ್ದಿದ್ದರೆ, ನಂತರ ಕಾಂಗ್ರೆಸ್ ಗೆದ್ದಿತ್ತು. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಸುನೀಲ್ ಸೋತಿದ್ದ ಸಿಂಪತಿ, ಈ ಬಾರಿ ವರ್ಕ್ ಆಗಬಹುದು ಎಂಬ ಮಾತಿದೆ. ಕಾಂಗ್ರೆಸ್‌ನ ಶಾಸಕ ಗೋಪಾಲ ಭಂಡಾರಿ, ಭಂಡಾರಿ ಪಂಗಡದವರು. ಬಿಜೆಪಿಯ ಸುನೀಲ್ ಕುಮಾರ್, ಬಿಲ್ಲವರು. ಈ ಬಾರಿ ಕೂಡಾ ಇವರಿಬ್ಬರೇ ಸ್ಪರ್ಧಿಸಲಿದ್ದಾರೆ. ಇಲ್ಲಿ, ಬಂಟರು, ಬಿಲ್ಲವರೇ ನಿರ್ಣಾಯಕರು. ಮುಸ್ಲಿಂ ಸಮುದಾಯದ ಮತಗಳು ಅತೀ ಅವಶ್ಯಕ.

English summary
Udupi district latest update. In Udupi, Kundapura, Karkala, Kapu, Byndoor constituencies votes of Bunts, Billavas, Mogaveeras caste votes, along with that of Muslims play a vital role in securing seat in Karnataka assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X