ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಪತರು ನಾಡು ತುಮಕೂರು ಕ್ಷೇತ್ರ ನೋಡಿ

By Mahesh
|
Google Oneindia Kannada News

ಕಲ್ಪತರು ನಾಡು, ವಿದ್ಯಾ ಕ್ಷೇತ್ರಗಳ ಬೀಡು, ನಡೆದಾಡುವ ದೇವರ ಬೀಡು, ತೆಂಗು ಬೆಳೆಯ ಸ್ವರ್ಗ ಎಂದೆಲ್ಲ ಖ್ಯಾತಿ ಗಳಿಸಿರುವ ತುಮಕೂರು ಜಿಲ್ಲೆ, ರಾಜಕೀಯವಾಗಿ ಕೂಡಾ ಪ್ರಮುಖ ಕ್ಷೇತ್ರ. ತುಮಕೂರಿನ ಮೂಲ ಹೆಸರು ತುಮ್ಮೆಗೂರು.

ವೀರಶೈವ, ಲಿಂಗಾಯತರ ಪರಮ ಪವಿತ್ರಕ್ಷೇತ್ರ, ಶ್ರೀಸಿದ್ದಗಂಗಾ ಮಠ, ಜಾತಿ ಮತ ಲಿಂಗ ತಾರತಮ್ಯವಿಲ್ಲದೆ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಹಾಗೂ ವಿದ್ಯಾದಾನ ಮಾಡುತ್ತಿದೆ. ತ್ರಿವಿಧ ದಾಸೋಹಿ, ಶತಾಯುಷಿ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ಶಿವ ಎಂದೇ ಖ್ಯಾತರಾಗಿದ್ದಾರೆ. ರಾಜಕೀಯವಾಗಿ ಕೂಡಾ ಸಿದ್ದಗಂಗಾ ಮಠ ಬಿಜೆಪಿ ಸರ್ಕಾರಕ್ಕೆ ಗುರುಪೀಠವಾಗಿ ಗುರುತಿಸಿಕೊಂಡಿದೆ.

ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿರುವ ಕ್ಯಾತ್ಸಂದ್ರದ ತಟ್ಟೆ ಇಡ್ಲಿ, ಮಧುಗಿರಿ ಕೋಟೆ, ಅಮೂಲ್ಯ ಗಿಡಮೂಲಿಕೆಗಳನ್ನು ಹೊಂದಿರುವ ಸಿದ್ದರಬೆಟ್ಟ, ಕುಣಿಗಲ್ ಬಳಿಯ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇಗುಲ, ನಾಡಿಗೆ ತೆಂಗು ಒದಗಿಸುವ ತಿಪಟೂರು. ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನ, ದೇವರಾಯನ ದುರ್ಗದ ನರಸಿಂಹಸ್ವಾಮಿ, ಪಾವಗಡ ಶನೀಶ್ವರ ದೇಗುಲ ಮುಂತಾದ ಧಾರ್ಮಿಕ ಕ್ಷೇತ್ರಗಳು ನೆನಪಾಗುತ್ತದೆ.

ಇದರ ಜೊತೆಗೆ ಚಿಕ್ಕನಾಯಕನ ಹಳ್ಳಿ ಚಿಪ್ಪು, ತುರುವೇಕೆರೆ ಜಡೆಮಾಯಸಂದ್ರವನ್ನು ವರ್ಲ್ಡ್ ಫೇಮಸ್ ಮಾಡಿದ ರಾಜಕಾರಣಿ ಕಮ್ ನಟ ಜಗ್ಗೇಶ್, ರಾಷ್ಟ್ರಕವಿ ಬಿರುದು ಪಡೆದ ಕವಿ ಜಿ,ಎಸ್ ಶಿವರುದ್ರಪ್ಪ, ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರು ತಕ್ಷಣಕ್ಕೆ ನೆನಪಾಗುತ್ತಾರೆ.

Tumkur District Assembly Constituency Profiles

ಐತಿಹಾಸಿಕವಾಗಿ ತುಮಕೂರು ಜಿಲ್ಲೆ ಗಂಗರು, ರಾಷ್ಟ್ರಕೂಟರು, ನೊಳಂಬರು, ಜೋಳರು, ವಿಜಯನಗರದ ಅರಸರು, ಮೈಸೂರು ಅರಸರ ಆಳ್ವಿಕೆ ಒಳಪಟ್ಟಿತ್ತು. ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಅತ್ತ ಕಡೆ ಮೈಸೂರು ಇತ್ತ ಕಡೆ ತುಮಕೂರು ಬೆಳೆಯಬೇಕಾಗಿತ್ತು. ಆದರೆ, ಬಸವನ ಬೆಳವಣಿಗೆ ತಡೆಯಲು ನೆತ್ತಿ ಮೇಲೆ ಸುತ್ತಿಗೆ ಪೆಟ್ಟು ಕೊಟ್ಟಂತೆ ಬೆಂಗಳೂರಿನ ಸಂಕಷ್ಟಗಳು ಮಾತ್ರ ಎರಡು ನಗರಗಳಿಗೆ ರವಾನೆಯಾಯ್ತು. ಬೆಂಗಳೂರು ಮಟ್ಟಕ್ಕೆ ಬೆಳವಣಿಗೆ ಆಗದಂತೆ ಪುಢಾರಿಗಳೆ ಪೆಟ್ಟು ಕೊಟ್ಟಿದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ವಿಧಾನಸಭಾ ಕ್ಷೇತ್ರಗಳು: ಚಿಕ್ಕನಾಯಕನಹಳ್ಳಿ,ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಸಿರಾ, ಗುಬ್ಬಿ, ಪಾವಗಡ, ಮಧುಗಿರಿ,

ತಾಲೂಕುಗಳು: ತುಮಕೂರು, ಸಿರಾ, ಕುಣಿಗಲ್, ಪಾವಗಡ, ಮಧುಗಿರಿ, ಗುಬ್ಬಿ, ಕೊರಟಗೆರೆ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ

ನೈಸರ್ಗಿಕ ಖನಿಜ/ಅರಣ್ಯ ಸಂಪತ್ತು: ಜಿಲ್ಲೆಯಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ, ಖನಿಜಗಳು ಬೆಟ್ಟದ ತಪ್ಪಲಿನಲ್ಲಿ ಹೇರಳವಾಗಿ ಸಿಗುತ್ತದೆ. ಹುಲಿ, ಚಿರತೆ, ಕರಡಿಗಳು ಅರಣ್ಯದಲ್ಲಿ ಕಾಣ ಸಿಗುತ್ತದೆ. ದೇವರಾಯನ ದುರ್ಗ, ಜಯಮಂಗಲ ಕೃಷ್ಣ ಮೃಗ ಅಭಯಾರಣ್ಯ ರಕ್ಷಿತಾರಣ್ಯ ಪ್ರಮುಖವಾಗಿದೆ.

ಪ್ರಮುಖ ಭಾಷೆ: ಕನ್ನಡ, ತೆಲುಗು,

ಪ್ರಮುಖ ಜನಾಂಗ: ವೀರಶೈವ,

ಜನಸಂಖ್ಯೆ: 2,584,711 ಸಾಕ್ಷರತೆ ಪ್ರಮಾಣ 74.32 %

ಸಾರಿಗೆ: ಬೆಂಗಳೂರು ಪುಣೆ ರಾಷ್ಟೀಯ ಹೆದ್ದಾರಿ NH 4, ಬಿಟ್ಟರೆ ಒಳನಾಡಿನ ಸಾರಿಗೆ ಸಂಪರ್ಕಕ್ಕೆ ಸರಿಯಾದ ರಸ್ತೆಗಳಿಲ್ಲ.

ನೀರಿನ ಆಸರೆ: ಕಾವೇರಿ, ಕೃಷ್ಣ, ಉತ್ತರ ಪಿನಾಕಿನಿ, ಜಲಾನಯನ ಪ್ರದೇಶಗಳಿದ್ದು ಶಿಂಷಾ, ಜಯಮಂಗಲಿ, ಸುವರ್ಣಮುಖಿ ನದಿಗಳು ಪ್ರಮುಖವಾಗಿವೆ. ಕುಣಿಗಲ್ ಕೆರೆ, ಬುಗುಡನಹಳ್ಳಿ ಕೆರೆ

ಪ್ರವಾಸಿ ತಾಣಗಳು : ದೇವರಾಯನದುರ್ಗ, ಮಧುಗಿರಿ ಏಕಾಶಿಲಾಬೆಟ್ಟ, ನಿಡಗಲ್ಲು ದುರ್ಗ, ಮಿಡೀಗೆಶಿ ದುರ್ಗ, ಹುಲಿಯೂರು ದುರ್ಗ, ಸಿದ್ದರಬೆಟ್ಟ ಇತರೆ ಬೆಟ್ಟಗಳು. ಗೂಳೂರು, ಕೈದಾಳ, ಕ್ಯಾಮೇನಹಳ್ಳಿ, ಬೇವಿನಹಳ್ಳಿ, ಗೊರವನಹಳ್ಳಿ, ಹೆಬ್ಬೂರು ಮಠ ದೇಗುಲಗಳು, ಮೈದುನಹಳ್ಳಿ ಕೃಷ್ಣಮೃಗ ತಾಣ.

ಜಾತಿ ಲೆಕ್ಕಾಚಾರದಲ್ಲಿ ವೀರಶೈವರದ್ದೇ ಇಲ್ಲಿ ಮೇಲುಗೈ. ಉಳಿದಂತೆ ಹತ್ತು ಹಲವು ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು ಜಿಲ್ಲೆಯಲ್ಲಿ ಪ್ರಮುಖ ಮತದಾರರಾಗಿದ್ದಾರೆ.

ಪ್ರಮುಖ ವ್ಯಕ್ತಿಗಳು: ಸಾಹಿತ್ಯ ನಿರ್ಮಾಣಕ್ಕಾಗಿ ಬೆಳ್ಳಾವಿ ನರಹರಿ ಶಾಸ್ತ್ರಿ, ಬಿ.ಎಂ.ಶ್ರೀಕಂಠಯ್ಯ, ತಿ.ನಂ.ಶ್ರೀಕಂಠಯ್ಯ, ನರಸಿಂಹಚಾರ್, ರಾಘವಾಚಾರ್,ಜಿ.ಎಸ್ ಶಿವರುದ್ರಪ್ಪ, ಬಿ.ಶಿವಮೂರ್ತಿಶಾಸ್ತ್ರಿ ತಾಳಕೆರೆ ಸುಬ್ರಮಣ್ಯ, ಬಾಣಸಂದ್ರದ ಹುಚ್ಚೆಗೌಡ, ಗುಬ್ಬಿ ತೋಂಟದಪ್ಪ, ನಿಡಸಾಲೆ ಚನ್ನಂಜಪ್ಪನವರು, ನಿಟ್ಟೂರು ಶ್ರೀನಿವಾಸರಾಯರು, ನಾಟಕರತ್ನ ಗುಬ್ಬಿ ವೀರಣ್ಣ, ಸಾಹಿತಿ ಬರಗೂರು ರಾಮಚಂದ್ರಪ್ಪ, ಡಾ ರಾಜ ರಾಮಣ್ಣ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಮುಂತಾದವರು.

ಪ್ರಮುಖ ಶಿಕ್ಷಣ ಸಂಸ್ಥೆಗಳು: ನವೋದಯ ಶಾಲೆ, ಸಿದ್ಧಗಂಗಾ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು, ತಿಪಟೂರಿನ ಕಲ್ಪತರು ಇಂಜಿನಿಯರಿಂಗ್ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯವನ್ನು ಹೊಂದಿದೆ.

ತುಮಕೂರು ನಗರ:ಎಸ್ ಶಿವಣ್ಣ ಸೊಗಡು (ಬಿಜೆಪಿ) 1,05,192 ಮತಗಳು
ತುಮಕೂರು ಗ್ರಾಮಾಂತರ: ಬಿ ಸುರೇಶ್ ಗೌಡ (ಬಿಜೆಪಿ) 1,21,617 ಮತಗಳು
ಸಿರಾ: ಟಿ.ಬಿ ಜಯಚಂದ್ರ (ಕಾಂಗ್ರೆಸ್) 1,35,023 ಮತಗಳು
ಕುಣಿಗಲ್: ಬಿ.ಬಿ. ರಾಮಸ್ವಾಮಿ ಗೌಡ (ಕಾಂಗ್ರೆಸ್) 1,20,653 ಮತಗಳು
ಪಾವಗಡ (ಎಸ್ ಸಿ): ವೆಂಕಟರಮಣಪ್ಪ (ಪಕ್ಷೇತರ) 1,28,350 ಮತಗಳು
ಮಧುಗಿರಿ: ಗೌರಿಶಂಕರ್ ಡಿ,ಸಿ (ಜೆಡಿಎಸ್) 1,23,713 ಮತಗಳು
ಗುಬ್ಬಿ: ಎಸ್ ಆರ್ ಶ್ರೀನಿವಾಸ್ (ವಾಸು) (ಜೆಡಿಎಸ್) 1,24,202 ಮತಗಳು
ಕೊರಟಗೆರೆ (ಎಸ್ ಸಿ): ಡಾ. ಜಿ ಪರಮೇಶ್ವರ (ಕಾಂಗ್ರೆಸ್)1,27,477 ಮತಗಳು
ತುರುವೇಕೆರೆ: ಎಂಟಿ ಕೃಷ್ಣಪ್ಪ (ಜೆಡಿಎಸ್)1,27,639 ಮತಗಳು
ತಿಪಟೂರು: ಬಿ.ಸಿ ನಾಗೇಶ್ (ಬಿಜೆಪಿ) 1,21,433 ಮತಗಳು
ಚಿಕ್ಕನಾಯಕನಹಳ್ಳಿ: ಸಿ.ಬಿ ಸುರೇಶ್ ಬಾಬು (ಜೆಡಿಎಸ್) 1,43,589 ಮತಗಳು

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ: ಲೆಕ್ಕ ಹಾಕಿದರೆ ಸುಮಾರು ನದಿಗಳು ತುಮಕೂರು ಜಿಲ್ಲೆಗಳಲ್ಲಿ ನೀರಿನ ಆಸರೆಯಾಗಿದ್ದರೂ ಪಾವಗಡ, ಮಧುಗಿರಿ ಸೇರಿದಂತೆ ಹಲವು ತಾಲೂಕುಗಳು ಅನಾದಿ ಕಾಲದಿಂದ ನೀರಿನ ದಾಹದಲ್ಲೇ ಬೆಳೆಯುತ್ತಾ ಬಂದಿದೆ.
* ಗುಡಿ ಕೈಗಾರಿಕೆ, ತೆಂಗು ಸಂಬಂಧಿತ ಕೈಗಾರಿಕೆಗೆ ಸಿಗದ ಹೆಚ್ಚಿನ ಮನ್ನಣೆ
* ಎಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಕೈಗಾರಿಕೆಗಳಿದ್ದರೂ ಬೆಂಗಳೂರು, ಮೈಸೂರಿಗೆ ಹೋಲಿಸಿದರೆ ಕೈಗಾರಿಕಾ ನಗರವಾಗಿ ತುಮಕೂರು ಬೆಳೆಯಲೇ ಇಲ್ಲ.
* ಹಲವು ಶಿಕ್ಷಣ ಸಂಸ್ಥೆಗಳಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣದ ಕೊರತೆ ಎದುರಿಸುತ್ತಿದೆ.
* ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕೊರತೆ ಇದ್ದೇ ಇದೆ.

English summary
Karnataka assembly Election 2013 : Tumkur District Assembly Constituency Profiles.Tumkur district consists 10 Assembly constituencies: Tumkur, Kunigal, Sira, Madhugiri, Gubbi, Koratagere, Turuvekere, Tiptur, chikkanayakahalli, Pavagada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X