ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ರಾಜಕೀಯ ಹವಾ ಎತ್ತ ಬೀಸಿದೆ?

By Prasad
|
Google Oneindia Kannada News

Shimoga district latest updates
ಮಾಜಿ ಮುಖ್ಯಮಂತ್ರಿಗಳಾಗಿರುವ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ಸೇರಿಕೊಂಡಿರುವ ಎಸ್ ಬಂಗಾರಪ್ಪ, ಹಾಗು ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಕೆ.ಎಸ್. ಈಶ್ವರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮದಗಜಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜಾತಿಮತಗಳ ಬೇಟೆ ಹೇಗೆ ಆಡಬೇಕೆಂದು ಎಲ್ಲ ಧುರೀಣರು ಲೆಕ್ಕ ಹಾಕುತ್ತಿದ್ದಾರೆ. ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾವ ಜಾತಿಯ ಮತದಾರರು ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂಬ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ಶಿಕಾರಿಪುರ ಕ್ಷೇತ್ರ

ಈ ಕ್ಷೇತ್ರದಲ್ಲಿ ಲಿಂಗಾಯಿತರು ಹಾಗೂ ದಲಿತರು ಸಮಪ್ರಮಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ಸಮುದಾಯಗಳಿಗಿಂತ ತುಸು ಹೆಚ್ಚೇ ಅನ್ನುವಷ್ಟು ಹಿಂದುಳಿದ ವರ್ಗದ ಜಾತಿಯ ಮತಗಳು ಈ ಕ್ಷೇತ್ರದಲ್ಲಿವೆ. ಲಿಂಗಾಯಿತರು ಹಾಗೂ ದಲಿತರ ಮತದ ಜೊತೆಗೆ ಒಂದಷ್ಟು ಹಿಂದುಳಿದ ಜಾತಿಗಳ ಮತದೊಂದಿಗೆ ಯಡಿಯೂರಪ್ಪ ಇಲ್ಲಿ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗಗಳವರು ಕೈ ಕೊಟ್ಟಾಗ ಯಡಿಯೂರಪ್ಪ ಇಲ್ಲಿ ಸೋಲು ಕಂಡಿದ್ದರು. ಇವರ ವಿರುದ್ದ ಇವರ ಗೆಳೆಯರೇ ಆಗಿರುವ ಲಿಂಗಾಯಿತ ಸಮುದಾಯದ ಶಾಂತವೀರಪ್ಪಗೌಡರಿಗೆ ಕಾಂಗ್ರೆಸ್‍ ಈಗಾಗಲೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಕುರುಬ ಸಮುದಾಯದ ನಗರದ ಮಹದೇವಪ್ಪ ಅವರಿಗೆ ಟಿಕೆಟ್ ಕೊಡಬಹುದೆಂಬ ಮಾತು ಕೇಳಿಬಂದಿತ್ತು, ಅದು ಸುಳ್ಳಾಗಿದೆ. ಜೆಡಿಎಸ್‍ನಿಂದ ಸ್ವಯಂ ನಿವೃತ್ತ ಕೆಎಎಸ್ ಅಧಿಕಾರಿ ಎಚ್. ಬಳಿಗಾರ್ ಅವರು ಕಣಕ್ಕಿಳಿಯುತ್ತಿದ್ದಾರೆ. ಸಿಎಂ ಆದ ನಂತರ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಯಥೇಚ್ಛ ಅನ್ನುವಷ್ಟು ಕಾಮಗಾರಿಗಳನ್ನು ನಡೆಸಿ ಎಲ್ಲರನ್ನೂ ಸೆಳೆದಿರುವುದರಿಂದ ಜಾತಿ ವರ್ಕ್‍ಔಟ್ ಆಗಲ್ಲ ಅನ್ನೋ ಮಾತು ಕೇಳಿ ಬರ್ತಿದೆ.

ಸೊರಬ ಕ್ಷೇತ್ರ

ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಈಡಿಗ ಸಮುದಾಯದ ಮತದಾರರಿದ್ದಾರೆ. ಆದರೆ, ಪ್ರಮುಖ ಸ್ಪರ್ಧಾಳುಗಳೆಲ್ಲಾ ಈಡಿಗ ಸಮುದಾಯದವರೇ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಪ್ಪ, ಕಾಂಗ್ರೆಸ್‍ನ ಕುಮಾರ್ ಬಂಗಾರಪ್ಪ, ಸಮಾಜವಾದಿ ಪಕ್ಷದ ಮಧು ಬಂಗಾರಪ್ಪ ಈಡಿಗರ 60 ಸಾವಿರ ಮತಗಳನ್ನ ಹಂಚಿಕೊಂಡಿದ್ದರು. ಲಿಂಗಾಯತ ಸಮುದಾಯದ ಮತಗಳನ್ನ ದೊಡ್ಡ ಸಂಖ್ಯೆಯಲ್ಲಿ ಪಡೆದ ಹಾಲಪ್ಪ, ಜಯ ಗಳಿಸಿದ್ದರು. ಈ ಬಾರಿಯೂ ಇದೇ ಮೂವರು ಕಣದಲ್ಲಿದ್ದಾರೆ. ಬಿಜೆಪಿಯಲ್ಲಿದ್ದ ಹಾಲಪ್ಪ, ಕೆಜೆಪಿಗೆ ಹಾರಿದ್ದಾರೆ. ಸಮಾಜವಾದಿ ಪಕ್ಷದಲ್ಲಿದ್ದ ಮಧು ಬಂಗಾರಪ್ಪ, ಜೆಡಿಎಸ್‍ನಲ್ಲಿದ್ದಾರೆ. ಹಾಲಪ್ಪ ಅವರಿಗೆ 2 ಪ್ರಮುಖ ಮೈನಸ್ ಪಾಯಿಂಟ್‍ಗಳಿವೆ. ರೇಪ್ ಆರೋಪ ಹಾಗೂ ಪಕ್ಷಾಂತರ ಮಾಡಿದ್ದು. ಈಡಿಗರ ಮತದ ಜೊತೆಗೆ ದಲಿತರು ಮತ್ತು ಮುಸ್ಲಿಮರ ಮತ ಸೆಳೆಯುವವರು ಗೆಲುವು ಸಾಧಿಸುತ್ತಾರೆ.

ಶಿವಮೊಗ್ಗ ನಗರ ಕ್ಷೇತ್ರ

ಅತ್ಯಧಿಕ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಇಲ್ಲಿ ಉಳಿದ ಸಮುದಾಯಗಳು ಒಂದಾಗಿ ಈಶ್ವರಪ್ಪ ಅವರನ್ನ ಗೆಲ್ಲಿಸುತ್ತಾ ಬಂದಿವೆ. ಮುಸ್ಲಿಮರ ನಂತರ ಬ್ರಾಹ್ಮಣ ಸಮುದಾಯಕ್ಕೆ ಅತಿ ಹೆಚ್ಚು ಮತಗಳಿದ್ದು, ಮತ್ತೊಂದು ಪ್ರಬಲ ಸಮುದಾಯವಾಗಿರೋ ಲಿಂಗಾಯತ ಹಾಗೂ ದಲಿತರ ಮತಗಳನ್ನ ಸೆಳೆದವರು ಇಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಕಳೆದ ಬಾರಿ ಈಶ್ವರಪ್ಪ ಪ್ರತಿಸ್ಪರ್ಧಿಯಾಗಿ ಇಸ್ಮಾಯಿಲ್ ಕಣದಲ್ಲಿದ್ದರು. ಆದ್ರೆ ಈ ಬಾರಿ ಬ್ರಾಹ್ಮಣ ಸಮುದಾಯದ ಕೆ. ವಿ. ಪ್ರಸನ್ನ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ. ಜೆಡಿಎಸ್ ನಿಂದ ಶ್ರೀಕಾಂತ್ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ಲಿಂಗಾಯಿತರಿದ್ದಾರೆ. ಬೋವಿ, ಈಡಿಗ, ಕುರುಬ, ಉಪ್ಪಾರ ಸುಮಾರು 8 ಜಾತಿಗಳ ಮತದಾರರು ಸಮಪ್ರಮಾಣದಲ್ಲಿದ್ದಾರೆ. ಲಿಂಗಾಯಿತರ ಮತಗಳ ಜೊತೆಗೆ ಸಣ್ಣ ಪುಟ್ಟ ಜಾತಿಗಳ ಮತವೂ ಇಲ್ಲಿ ನಿರ್ಣಾಯಕವೇ. ಇಲ್ಲಿ ಯಾವ ಸಮುದಾಯ ಬೇಕಾದರೂ ಗೆಲುವನ್ನು ದಾಖಲಿಸಬಹುದು. ಕಳೆದ ಚುನಾವಣೆಯಲ್ಲಿ ಇಲ್ಲಿ ಯಡಿಯೂರಪ್ಪ ಅಲೆ ಬಿಜೆಪಿ ಗೆಲುವಿಗೆ ಕಾರಣವಾಗಿತ್ತು. ಕಾಂಗ್ರೆಸ್‌ನಿಂದ ಕರಿಯಣ್ಣ, ಜೆಡಿಎಸ್‌ನಿಂದ ಶಾರದಾ ಪೂರ್ಯನಾಯಕ್ ಮತ್ತು ಬಿಜೆಪಿಯಿಂದ ಕೆ ಜಿ. ಕುಮಾರಸ್ವಾಮಿ ಯಜಕ್ಕಾಗಿ ಸೆಣಸಲಿದ್ದಾರೆ.

ಭದ್ರಾವತಿ ಕ್ಷೇತ್ರ

ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯ ತಮಿಳು ಮತ್ತು ತೆಲುಗರಿದ್ದಾರೆ. ಅಲ್ಲದೆ 2ನೇ ದೊಡ್ಡ ಸಂಖ್ಯೆಯಲ್ಲಿ ದಲಿತರಿದ್ದಾರೆ. ಈ ಕ್ಷೇತ್ರ ಜಾತಿ ಸಮೀಕರಣಕ್ಕಿಂತಾ ಹೆಚ್ಚಾಗಿ ತಮಿಳುನಾಡಿನ ರಾಜಕಾರಣವನ್ನು ಪ್ರತಿಬಿಂಬಿಸುತ್ತಿದೆ. ಕಳೆದ ಎರಡೂವರೆ ದಶಕಗಳಲ್ಲಿ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಗೆಲುವು ಸಾಧಿಸುತ್ತಾ ಬಂದಿದೆ. ಜೆಡಿಎಸ್‍ನ ಅಪ್ಪಾಜಿ ಗೌಡ ಮತ್ತು ಕಾಂಗ್ರೆಸ್‍ನ ಸಂಗಮೇಶ್ ಈ ಕ್ಷೇತ್ರದಲ್ಲಿ ಜುಗಲ್‍ಬಂದಿ ಆಡುತ್ತಿದ್ದಾರೆ. ಒಕ್ಕಲಿಗರು, ಲಿಂಗಾಯತರು ಹಾಗೂ ಮುಸ್ಲಿಮರು ಬಹುತೇಕ ಸಮ ಪ್ರಮಾಣದಲ್ಲಿದ್ದಾರೆ. ಈ ಮೂವರ ಪೈಕಿ 2 ಸಮುದಾಯದ ಮತ ಸೆಳೆಯಬಲ್ಲವರು ಜಯಭೇರಿ ಬಾರಿಸುತ್ತಾರೆ.

ಸಾಗರ ಕ್ಷೇತ್ರ

ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆ ಈಡಿಗರಿದ್ದಾರೆ. ಬ್ರಾಹ್ಮಣರು, ಲಿಂಗಾಯತರು, ಮುಸ್ಲಿಮರು, ದಲಿತರು ಬಹುತೇಕ ಸಮ ಪ್ರಮಾಣದಲ್ಲಿ ಇದ್ದಾರೆ. ಈ ನಾಲ್ವರ ಪೈಕಿ ಮೂರು ಸಮುದಾಯದ ಮತ ಸೆಳೆಯಬಲ್ಲವರು ಇಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ, ಮೊದಲ ಬಾರಿಗೆ ಬೇಳೂರು ಗೋಪಾಲ ಕೃಷ್ಣ ವಿರುದ್ಧ ಸೋಲು ಕಾಣಲು ಬಂಗಾರಪ್ಪ ಅಲೆ ಕಾರಣವಾಯ್ತು. 2ನೇ ಬಾರಿಗೆ ಬಿಎಸ್‍ವೈ ಅಲೆಯಿಂದಾಗಿ ಕಾಗೋಡು ಸೋಲುಂಡರು. ಆದ್ರೆ ಈ ಬಾರಿ ಇದು ನನ್ನ ಕೊನೆ ಚುನಾವಣೆ ಎನ್ನುತ್ತಾ ಪ್ರಚಾರಕ್ಕಿಳಿದು ಅನುಕಂಪ ಗಿಟ್ಟಿಸಲು ಪ್ರಾರಂಭಿಸಿರುವುದರಿಂದ ಬೇಳೂರು ಗೋಪಾಲಕೃಷ್ಣ ಯಾವ ಪಕ್ಷ ಸೇರಿ ಸ್ಪರ್ಧಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಅವರು ಕಾಂಗ್ರೆಸ್‍ಗೆ ಹೋಗಿಬಿಟ್ರೆ ಗೆಲುವು ಸಲೀಸು ಎನ್ನುವುದು ಅವರ ಲೆಕ್ಕಾಚಾರ. ಜೆಡಿಎಸ್‍ಗೆ ಹೋದ್ರೆ ಈಡಿಗರ ಮತದ ಜೊತೆಗೆ ಬಂಗಾರಪ್ಪ ಅಭಿಮಾನಿಗಳ ಮತ, ಮುಸ್ಲಿಮರ ಮತಗಳನ್ನ ಸೆಳೆಯುವ ಮೂಲಕ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಬೇಳೂರು ಇದ್ದಾರೆ.

ತೀರ್ಥಹಳ್ಳಿ ಕ್ಷೇತ್ರ

ಈ ಕ್ಷೇತ್ರದಲ್ಲಿ ಬ್ರಾಹ್ಮಣರು ಹಾಗೂ ಈಡಿಗರು ದೊಡ್ಡ ಸಂಖ್ಯೆಯಲ್ಲೇ ಸಮಪ್ರಮಾಣದಲ್ಲಿದ್ದಾರೆ. ಈ ಎರಡೂ ಸಮುದಾಯದ ಮತಗಳನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆದವರು ಅಥವಾ ಒಂದು ಸಮುದಾಯದ ದೊಡ್ಡ ಮತಗಳ ಜೊತೆಗೆ ಸಣ್ಣ ಪುಟ್ಟ ಸಮುದಾಯಗಳನ್ನು ಆಕರ್ಷಿಸಿದವರು ಇಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅನುಕಂಪವೇ ಕಾರಣ ಎನ್ನಲಾಗಿದೆ. ಪದೇ ಪದೇ ಸೋತಿದ್ದ ಕಿಮ್ಮನೆ ರತ್ನಾಕರ ಅವರನ್ನು ಆರಗ ಜ್ಞಾನೇಂದ್ರ ವಿರುದ್ದ ಗೆಲ್ಲಿಸಿದ್ದರು. ಈ ಕ್ಷೇತ್ರದ ಮತದಾರರ ಮನದಾಳ ಅರಿಯುವುದೇ ಕಷ್ಟ. ಯಾವಾಗ ಯಾರನ್ನು ಬೇಕಾದರೂ ಜಾತಿ ಮೀರಿ ಗೆಲ್ಲಿಸುತ್ತಾರೆ ಅನ್ನುತ್ತಾರೆ ಶಿವಮೊಗ್ಗ ಜನತೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka assembly election 2013 : Shimoga district is gearing up for the election, where caste politics plays vital role, especially Eediga and Brahmins votes are decisive. Let's look at the constituency wise situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X