ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಮಾಗಡಿಯಲ್ಲಿ ಬಾಲಕೃಷ್ಣ ಓಟಕ್ಕೆ ತಡೆ ಹಾಕುವವರಾರು?

By Sachhidananda Acharya
|
Google Oneindia Kannada News

ಬೆಂಗಳೂರಿನಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಮಾಗಡಿ ಸದ್ಯ 2007ರಲ್ಲಿ ರಚನೆಗೊಂಡ ನೂತನ ಜಿಲ್ಲೆ ರಾಮನಗರದ ಒಂದು ತಾಲೂಕು ಕೇಂದ್ರ. ಇದು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡನ ರಾಜಧಾನಿಯಾಗಿತ್ತು.

ರಾಜ್ಯದ ಬಲವರ್ಧನೆಗಾಗಿ ಹಾಗೂ ರಾಜ್ಯ ಖಜಾನೆ ಸುಭದ್ರಪಡಿಸಲು ಕೆಂಪೇಗೌಡ ಕಟ್ಟಿದ ಕೋಟೆಯನ್ನು ಇಂದಿಗೂ ಮಾಗಡಿಯಲ್ಲಿ ಕಾಣಬಹುದು.

ಶಿವಗಂಗೆ, ಸಾವನದುರ್ಗ, ಮಾಗಡಿ ಕೋಟೆ, ಮಾಗಡಿ ರಂಗನಾಥ ದೇವಾಲಯ, ಸೋಮೇಶ್ವರ ದೇಗುಲ, ಕುದೂರಿನ ಏಕಶಿಲಾ ಬೆಟ್ಟ ಮುಂತಾದ ಪ್ರವಾಸೀ ಕೇಂದ್ರಗಳನ್ನು ಮಾಗಡಿ ತಾಲೂಕು ಹೊಂದಿದೆ.

ಭೌಗೋಳಿಕವಾಗಿ ಕಪ್ಪು, ಕೆಂಪು ಮತ್ತು ಬಿಳಿಯ ಕಲ್ಲುಗಳಿಂದ ಕೂಡಿರುವ ಈ ತಾಲೂಕಿನಲ್ಲಿ ರಾಗಿ, ಭತ್ತ, ಅವರೆ, ಮಾವು ಬೆಳೆಗಳನ್ನು ಇಲ್ಲಿ ಬೆಳೆಯುತ್ತಾರೆ. ಮಾಗಡಿಯ ಬಹುಭಾಗ ರೈತ ಸಮೂಹವೇ ಆಗಿದ್ದು ಸಮೀಪದಲ್ಲಿಯೇ ಇರುವ ರಾಜಧಾನಿ ಬೆಂಗಳೂರಿಗೆ ಬಹುತೇಕ ಆಹಾರ ಸಾಮಗ್ರಿಗಳು, ದಿನಬಳಕೆಯ ವಸ್ತುಗಳು ಮಾಗಡಿ ತಾಲೂಕಿನಿಂದಲೇ ನಿತ್ಯ ಸರಬರಾಜಾಗುತ್ತವೆ.

Karnataka Assembly Election 2018: Magadi Constituency Profile

ಮಾಗಡಿ ಸುತ್ತಮುತ್ತಲಿನ ಪರಿಸರ ಮತ್ತು ಅರಣ್ಯ ಪ್ರದೇಶ ವಿಶಿಷ್ಟವಾಗಿದ್ದು ಇದನ್ನು ಭಾರತ ಸಂಜಾತ ಬ್ರಿಟೀಶ್ ಬೇಟೆಗಾರ 'ಕೆನಿತ್ ಆಂಡರ್ಸನ್' ತಮ್ಮ 'Old Munnusamy and the man-eater of Magadi' ಎಂಬ ಕಥಾನಕದಲ್ಲಿ ವರ್ಣಿಸಿದ್ದಾರೆ. ಇದನ್ನು ಪೂರ್ಣಚಂದ್ರ ತೇಜಸ್ವಿ "ಮುನಿಸ್ವಾಮಿ ಮತ್ತು ಮಾಗಡಿ ಚಿರತೆ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ದುರಂತವೆಂದರೆ ಇತ್ತೀಚಿಗೆ ಹೆಚ್ಚಿರುವ ನಗರೀಕರಣದ ಪ್ರಭಾವದಿಂದ ಮತ್ತು ಪರಿಸರ ಮಾಲಿನ್ಯದಿಂದಲೂ ಮಾಗಡಿ ಸುತ್ತ ಮುತ್ತಲಿನ ಅರಣ್ಯ ಸಂಪತ್ತಿನ ಜೊತೆಗೆ ಅರಣ್ಯ ಜೀವ ಸಂಕುಲವು ಅಳಿವಿನ ಅಂಚಿನಲ್ಲಿವೆ.

ಸದ್ಯಕ್ಕೆ ಇದನ್ನೆಲ್ಲಾ ಪಕ್ಕಕ್ಕಿಟ್ಟು ಮಾಗಡಿಯ ರಾಜಕೀಯ ಇತಿಹಾಸವನ್ನು ಕೆದಕಿದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಎಂ ರೇವಣ್ಣ ಮತ್ತು ಜೆಡಿಎಸ್ ನ ಎಚ್.ಸಿ ಬಾಲಕೃಷ್ಣ ಹಾಗೂ ಬಾಲಕೃಷ್ಣ ತಂದೆ ಎಚ್.ಜಿ ಚೆನ್ನಪ್ಪ ನಡುವೆ ನಡೆದ ಚುನಾವಣಾ ಯುದ್ಧಗಳು ಗಮನ ಸೆಳೆಯುತ್ತವೆ.

ಸದ್ಯಕ್ಕೆ ಮಾಗಡಿ ಶಾಸಕರು ಎಚ್.ಸಿ ಬಾಲಕೃಷ್ಣ. ಇವರ ತಂದೆ ಎಚ್.ಜಿ ಚನ್ನಪ್ಪ ಕೂಡಾ ಇಲ್ಲಿ ಮೂರು ಬಾರಿ ಶಾಸಕರಾಗಿದ್ದರು. ಜನತಾ ಪಕ್ಷದ ಎಚ್.ಜಿ ಚನ್ನಪ್ಪ ಎದುರು ಇಲ್ಲಿ ಕಾಂಗ್ರೆಸಿನ ಎಚ್.ಎಂ ರೇವಣ್ಣ 1985ರಲ್ಲಿ ಸೋಲು ಕಂಡಿದ್ದರು.

1989ರಲ್ಲಿ ಇಲ್ಲಿ ರೇವಣ್ಣ ಗೆಲುವು ಕಂಡಿದ್ದರು; ಇದು ಎಚ್.ಜಿ ಚನ್ನಪ್ಪ ಸ್ಪರ್ಧಿಸಿದ ಕೊನೆಯ ಚುನಾವಣೆಯೂ ಆಗಿತ್ತು. ಮರು ವರ್ಷ ಅಖಾಡಕ್ಕೆ ಬಿಜೆಪಿಯಿಂದ ಎಚ್.ಸಿ ಬಾಲಕೃಷ್ಣ ಪ್ರವೇಶವಾಯಿತು. 1994 ಬಾಲಕೃಷ್ಣ ಗೆದ್ದರೆ, 1999ರಲ್ಲಿ ರೇವಣ್ಣ ಗೆದ್ದರು.

2004ರ ವೇಳೆಗೆ ಬಾಲಕೃಷ್ಣ ಜೆಡಿಎಸ್ ಗೆ ಬಂದರು. ಅಲ್ಲಿಂದ ಅವರು ತಿರುಗಿ ನೋಡಲೇ ಇಲ್ಲ. 2004ರಲ್ಲಿ ಎಚ್.ಎಂ. ರೇವಣ್ಣರಿಗೆ 12 ಸಾವಿರ ಮತಗಳಿಂದ ಸೋಲುಣಿಸಿದ ಅವರು 2008ರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿ ತಮ್ಮ ಗೆಲುವಿನ ಅಂತರವನ್ನು 24 ಸಾವಿರ ಮತಗಳಿಗೆ ಹೆಚ್ಚಿಸಿಕೊಂಡರು.

2013ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ 14 ಸಾವಿರ ಮತಗಳಿಂದ ಗೆಲುವು ಸಾಧಿಸಿದರು. ಸದ್ಯದ ವಿಶೇಷವೆಂದರೆ ಜೆಡಿಎಸ್ ನ 7 ಜನ ಬಂಡಾಯ ಶಾಸಕರಲ್ಲಿ ಬಾಲಕೃಷ್ಣರೂ ಒಬ್ಬರಾಗಿದ್ದು ಅವರು ಕಾಂಗ್ರೆಸ್ ಗೆ ಪಕ್ಷಾಂತರ ಮಾಡಲಿದ್ದಾರೆ. ಹೀಗಾಗಿ ಇಲ್ಲಿ ಜೆಡಿಎಸ್ ಅಭ್ಯರ್ಥಿಗಳ ಕೊರತೆ ಅನುಭವಿಸಲಿದೆ. ಕಾಂಗ್ರೆಸ್ ಕೋಟೆ ಮತ್ತಷ್ಟು ಬಲಿಷ್ಠವಾಗಲಿದೆ.

ಜಿಲ್ಲೆಯಲ್ಲಿ ಭಾರೀ ಪ್ರಭಾವ ಹೊಂದಿರುವ ಡಿಕೆ ಶಿವಕುಮಾರ್ ಬೆಂಬಲದೊಂದಿಗೆ ಇಲ್ಲಿ ಬಾಲಕೃಷ್ಣ ಮತ್ತೆ ಗೆಲ್ಲುವುದು ಬಹುತೇಕ ನಿಕ್ಕಿಯಾಗಿದೆ. ಜೆಡಿಎಸ್ ಯಾರನ್ನು ಇಲ್ಲಿ ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಉಳಿದ ಭವಿಷ್ಯ ನಿಂತಿದೆ. ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇದೆಯಾದರೂ ಗೆಲ್ಲುವ ಲಕ್ಷಣಗಳು ಕಡಿಮೆ.

English summary
Karnataka Assembly Election 2018: Read all about Magadi assembly constituency of Ramanagara district. Get election news from Magadi. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X