ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳಂದ ಕ್ಷೇತ್ರ ಪರಿಚಯ: ಹಳೆ ಹುಲಿಗಳ ಕದನದಲ್ಲಿ ಗೆಲುವು ಯಾರಿಗೆ?

By Sachhidananda Acharya
|
Google Oneindia Kannada News

ಆಳಂದ ತಾಲೂಕು ಜಿಲ್ಲಾ ಕೇಂದ್ರ ಕಲಬುರಗಿಯಿಂದ 43 ಕಿಲೋ ಮೀಟರ್ ದೂರದಲ್ಲಿದೆ. ಆಳಂದ ತಾಲೂಕು ಕೇಂದ್ರವೂ ಹೌದು. ಮಾದನ ಹಿಪ್ಪಾರಗಾ, ಖಜ್ಜುರಗಿ, ನರೋಣಾ ಮತ್ತು ನಿಂಬರಗಾ ಆಳಂದದ ನಾಲ್ಕು ಹೋಬಳಿಗಳು.

ಕೃಷಿ ಇಲ್ಲಿನ ಪ್ರಮುಖ ಕಸುಬು. ತೊಗರಿ, ಜೋಳ, ಉದ್ದು, ಕಬ್ಬು, ಶೇಂಗಾ ಇತ್ಯಾದಿ ಬೆಳೆಗಳನ್ನು ಇಲ್ಲಿನ ಜನರು ಪ್ರಮುಖವಾಗಿ ಬೆಳೆಯುತ್ತಾರೆ. ತೀರಾ ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ಆಳಂದದಲ್ಲಿ ಬಡತನ ತಾಂಡವವಾಡುತ್ತಿದೆ. ವಿದ್ಯುತ್, ನೀರು, ಶಿಕ್ಷಣ, ನಿರುದ್ಯೋಗ ಸಮಸ್ಯೆ ತಾಲೂಕಿನಲ್ಲಿ ಹೆಚ್ಚಾಗಿದ್ದು ಇಲ್ಲಿನ ಜನರು ಪಕ್ಕದ ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ.

Karnataka Assembly Election 2018: Aland Rural Constituency Profile

ಆಳಂದದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೇಕಡಾ 45ರಷ್ಟಿರುವ ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕವಾಗಿವೆ.

ಇಲ್ಲಿನ ಚುನಾವಣೆಗಳಲ್ಲಿ ಬಿ.ಆರ್ ಪಾಟೀಲ್ ಮತ್ತು ಸುಭಾಷ್ ಗುತ್ತೇದಾರ್ ಇಬ್ಬರ ನಡುವೆ ಪೈಪೋಟಿ ನಡೆಯುತ್ತಾ ಬಂದಿದ್ದನ್ನು ಗಮನಿಸಬಹುದು. ವಿಶೇಷವೆಂದರೆ ಇಬ್ಬರೂ ಪಕ್ಷಾಂತರಕ್ಕೆ ಖ್ಯಾತಿ ಪಡೆದಿದ್ದಾರೆ. ಇನ್ನೊಂದು ವಿಶೇಷವೆಂದರೆ ಸುಭಾಷ್ ಗುತ್ತೇದಾರ್ ಅಫಜಲ್ಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ಸಹೋದರರಾಗಿದ್ದಾರೆ. ಮಾಲಿಕಯ್ಯ ಗುತ್ತೇದಾರರೂ ಇದೇ ರೀತಿಯ ಪಕ್ಷಾಂತರಕ್ಕೆ ಹೆಸರುವಾಸಿಯಾಗಿದ್ದಾರೆ.

1983ರಲ್ಲಿ ಬಿ.ಆರ್. ಪಾಟೀಲ್ ಗೆದ್ದಾಗ ಜನತಾ ಪಕ್ಷದಲ್ಲಿದ್ದರು. 1985, 89ರಲ್ಲಿ ಕಾಂಗ್ರೆಸ್ ನ ಶರಣಬಸಪ್ಪ ಮಾಲಿ ಪಾಟೀಲ್ ಗೆಲುವು ಸಾಧಿಸಿದ್ದರು. 1994 ರಲ್ಲಿ ಸುಭಾಷ್ ಗುತ್ತೇದಾರ್ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದರು. ಅವರ ವಿರುದ್ಧ ಸೋತ ಬಿ.ಆರ್. ಪಾಟೀಲ್ ಈ ಬಾರಿ ಜನತಾದಳದಲ್ಲಿದ್ದರು. 1999ರಲ್ಲಿ ಸುಭಾಷ್ ಗೆದ್ದಾಗ ಜಾತ್ಯಾತೀತ ಜನತಾದಳದಕ್ಕೆ ಬಂದಿದ್ದರು. ಪಾಟೀಲ್ ಸಂಯುಕ್ತ ಜನತಾ ದಳದಿಂದ ನಿಂತು ಈ ಬಾರಿ ಸೋಲು ಕಂಡರು.

ಮುಂದಿನ ಚುನಾವಣೆ ಅಂದರೆ 2004ರಲ್ಲಿ ಪಾಟೀಲರು ಗೆದ್ದಾಗ ಅವರು ಜೆಡಿಎಸ್ ನಲ್ಲಿದ್ದರು. ಸುಭಾಷ್ ಗುತ್ತೇದಾರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2008 ರಲ್ಲಿ ಮತ್ತೆ ಜೆಡಿಎಸ್ ನಿಂದ ಸ್ಪರ್ಧಿಸಿ ಸುಭಾಷ್ ಗುತ್ತೇದಾರ್ ಗೆಲುವು ಕಂಡರು. ಈ ಬಾರಿ ಮತ್ತೆ ಇಬ್ಬರ ಪಕ್ಷಗಳೂ ಅದಲು ಬದಲಾಗಿತ್ತು. ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿ.ಆರ್. ಪಾಟೀಲ್ ಸೋಲು ಕಂಡಿದ್ದರು.

ಅಭ್ಯರ್ಥಿಗಳು ಬದಲಾದರೂ ಇಲ್ಲಿ 1999, 2004, 2008 ಹೀಗೆ ಸತತ ಮೂರು ಬಾರಿ ಜೆಡಿಎಸ್ ಗೆಲುವು ಸಾಧಿಸಿತ್ತು ಎನ್ನುವುದು ವಿಶೇಷ.

2013ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ನಿಂದ ಬಿ.ಆರ್ ಪಾಟೀಲ್ ಕೆಜೆಪಿಗೆ ಬಂದಿದ್ದರು. ಕೆಜೆಪಿಯಿಂದ 2013ರಲ್ಲಿ ಸ್ಪರ್ಧಿಸಿದ್ದ ಬಿ.ಆರ್ ಪಾಟೀಲ್, ಜೆಡಿಎಸ್ ನ ಸುಭಾಷ್ ಗುತ್ತೇದಾರ್ ವಿರುದ್ಧ ಭರ್ಜರಿ 17 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.

ಕೆಜೆಪಿಯಲ್ಲಿರುವವರೆಲ್ಲಾ ಬಿಜೆಪಿ ಕಡೆ ಮುಖಮಾಡಿಯಾಗಿದೆ. ಆದರೆ ಬಿ.ಆರ್. ಪಾಟೀಲರು ಮಾತ್ರ ಬಿಜೆಪಿ ಸೇರುವುದಿಲ್ಲ, ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ವಿಚಿತ್ರ ನೋಡಿ. ಬಿ.ಆರ್ ಪಾಟೀಲ್ ಬಿಜೆಪಿಗೆ ಬರದಿದ್ದರೇನಂತೆ. ತಮ್ಮ ಪಕ್ಷಾಂತರ ಪರಂಪರೆ ಬಿಟ್ಟುಕೊಡದ ಸುಭಾಷ್ ಗುತ್ತೇದಾರ್ ಈ ಬಾರಿ ತೆನೆ ಬಿಟ್ಟು ಕಮಲ ಹಿಡಿದಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಬಿ.ಆರ್. ಪಾಟೀಲ್ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಅವರಿಗೆ ಪೈಪೋಟಿ ನೀಡಲು ಮೂರು ಬಾರಿಯ ಶಾಸಕರಾದ ಸುಭಾಷ್ ಗುತ್ತೇದಾರ್ ಬಿಜೆಪಿಯಿಂದ ಸಿದ್ದವಾಗಿದ್ದಾರೆ. ಹಳೇ ಹುಲಿಗಳಲ್ಲಿ ಯಾರು ಗೆಲ್ಲುತ್ತಾರೋ ಕಾದು ನೋಡಬೇಕು.

English summary
Karnataka Assembly Election 2018: Read all about Aland assembly constituency of Kalaburagi (Gulbarga) district. Get election news from Aland. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X