ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸ್ಥಾನ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಲಾಗುತ್ತಿದೆಯಾ?

By ಬಿ.ಎಂ.ಲವಕುಮಾರ್
|
Google Oneindia Kannada News

ಬೆಂಗಳೂರು, ಜೂನ್ 20: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರವನ್ನು ರಚಿಸಿಕೊಂಡಿದ್ದರೂ ಸದ್ಯಕ್ಕೆ ರಾಜ್ಯದಲ್ಲಿ ಆಡಳಿತ ಶುರುವಾಗಿರುವಂತೆ ಗೋಚರವಾಗುತ್ತಿಲ್ಲ. ಜತೆಗೆ ಸಚಿವ ಸ್ಥಾನ ಪಡೆದವರ ಮತ್ತು ಆಕಾಂಕ್ಷಿ ಶಾಸಕರ ಅಸಮಾಧಾನವೂ ಕಡಿಮೆಯಾದಂತೆ ಕಂಡು ಬರುತ್ತಿಲ್ಲ.

ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆಯಾ ಎಂಬ ಅನುಮಾನವೇ ಚಿಗುರೊಡೆಯುತ್ತಿದೆ. ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂಬ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಜೆಡಿಎಸ್ ಗೆ ಈಗ ಮೈಪರಚಿಕೊಳ್ಳುವಂತಾಗಿದೆ.

ರಾಹುಲ್ ಗಾಂಧಿ ಮುಂದೆ ಮತ್ತೆ ಅಳಲು ತೋಡಿಕೊಳ್ಳಲಿದ್ದಾರಾ ರಾಜ್ಯ ಕಾಂಗ್ರೆಸ್ಸಿಗರು?ರಾಹುಲ್ ಗಾಂಧಿ ಮುಂದೆ ಮತ್ತೆ ಅಳಲು ತೋಡಿಕೊಳ್ಳಲಿದ್ದಾರಾ ರಾಜ್ಯ ಕಾಂಗ್ರೆಸ್ಸಿಗರು?

ಅತ್ತ ಸಾಲ ಮನ್ನಾ ಮಾಡದೆ ಎಳ್ಳುನೀರು ಬಿಡುವಂತೆಯೂ ಇಲ್ಲ. ಇತ್ತ ಸಾಲ ಮನ್ನಾ ಮಾಡಲು ಖಜಾನೆಯೇ ಬರಿದಾಗಿದೆ. ಸದ್ಯಕ್ಕೆ ಹಣ ಎಲ್ಲಿಂದ ಹೊಂದಿಸುವುದು ಎಂಬ ಚಿಂತೆ ಕಾಡತೊಡಗಿದೆ. ಇದರ ನಡುವೆ ಸಚಿವ ಸ್ಥಾನ ಆಕಾಂಕ್ಷಿಗಳು ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದಾರೆ.

ಚುನಾವಣೆಗೂ ಮುನ್ನ ಇದ್ದ ಹುರುಪು ಈಗಿಲ್ಲ!

ಚುನಾವಣೆಗೂ ಮುನ್ನ ಇದ್ದ ಹುರುಪು ಈಗಿಲ್ಲ!

ಹಾಗೆಸುಮ್ಮನೆ ಗಮನಿಸಿ ನೋಡಿದರೆ ಚುನಾವಣೆಗೆ ಮುನ್ನ ಇದ್ದ ಹುರುಪು, ಉತ್ಸಾಹ, ಖದರು ಎಲ್ಲವೂ ಇಳಿದು ಹೋಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವುದೇ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಚಿಂತೆಯಾಗಿದೆ. ಇನ್ನು ಕಾಂಗ್ರೆಸ್‍ ನಲ್ಲಿ ಎರಡು ಬಣಗಳಾಗಿದ್ದು, ಒಂದು ವರ್ಗ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರೆ ಮತ್ತೊಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬೆನ್ನಿಗೆ ಬಂದು ನಿಂತಿದೆ. ಪರಮೇಶ್ವರ್ ಗೂ ಇಷ್ಟುವರೆಗಿನ ರಾಜಕೀಯ ಬದುಕಿನಲ್ಲಿ ಸಿಎಂ ಆಗುವ ಯೋಗವಂತೂ ಇದುವರೆಗೆ ಬರಲಿಲ್ಲ. ಇದೀಗ ಸಿಕ್ಕಿರುವ ಉಪ ಮುಖ್ಯಮಂತ್ರಿ ಪಟ್ಟವನ್ನಾದರೂ ಒಂದಷ್ಟು ವರ್ಷ ಅನುಭವಿಸುವ ಬಯಕೆಯಿದೆ. ಹೀಗಾಗಿಯೇ ಅವರು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಕಸರತ್ತುಗಳನ್ನು ಮಾಡುತ್ತಾ ಜೆಡಿಎಸ್ ಗೆ ಶರಣಾಗಿದ್ದಾರೆ.

ಸಿದ್ದರಾಮಯ್ಯ ಅಡ್ಡಗಾಲು?

ಸಿದ್ದರಾಮಯ್ಯ ಅಡ್ಡಗಾಲು?

ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅಡ್ಡಗಾಲಾಗುತ್ತಿದ್ದಾರೆ ಎಂಬ ಸೂಕ್ಷ್ಮತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಗೊತ್ತಾಗಿದೆ. ಮತ್ತೊಮ್ಮೆ ಬಜೆಟ್ ಮಂಡಿಸಿ ಒಂದಷ್ಟು ಬ್ಯಾಲೆನ್ಸ್ ಮಾಡಿ ತನ್ನ ಆಡಳಿತದ ವೈಖರಿಯನ್ನು ಜನತೆಯ ಮುಂದಿಡುವ ಜರೂರು ಕುಮಾರಸ್ವಾಮಿ ಅವರಿಗಿದೆ. ಆದರೆ ಇದಕ್ಕೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರವರು ಅಡ್ಡಗಾಲಾಗುತ್ತಿದ್ದಾರೆ ಎಂಬ ಆರೋಪವೂ ಇದೆ. ಹೀಗಾಗಿಯೇ ರಾಹುಲ್‍ ಗಾಂಧಿಯವರನ್ನು ಭೇಟಿ ಮಾಡಿರುವ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್‍ನ ಭಿನ್ನಮತೀಯ ಗುಂಪಿಗೆ ಬಾಯಿಮುಚ್ಚಿಕೊಂಡಿರುವಂತೆ ಹೇಳಲು ಮನವಿ ಮಾಡಿ ಬಂದಿದ್ದಾರೆ ಎಂಬುದು ಈಗಿನ ಸುದ್ದಿ. ಇದನ್ನು ಸಿದ್ದರಾಮಯ್ಯ ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಗಳೂರು ಚಲೋಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ ಬೆಂಗಳೂರು ಚಲೋ

ಜೆಡಿಎಸ್ ಗೆ ಶರಣಾಗುವುದು ಕಾಂಗ್ರೆಸ್ಸಿಗೆ ಅನಿವಾರ್ಯ

ಜೆಡಿಎಸ್ ಗೆ ಶರಣಾಗುವುದು ಕಾಂಗ್ರೆಸ್ಸಿಗೆ ಅನಿವಾರ್ಯ

ಕಾಂಗ್ರೆಸ್ ಹೈಕಮಾಂಡ್ ಗೆ ಈಗಿನ ಪರಿಸ್ಥಿತಿಯಲ್ಲಿ ಜೆಡಿಎಸ್ ಗೆ ಶರಣಾಗಿ ಮುನ್ನಡೆಯುವುದು ಅನಿವಾರ್ಯವಾಗಿದೆ. ಕಾರಣ ಇನ್ನು ಒಂದೇ ವರ್ಷಕ್ಕೆ ಲೋಕಸಭಾ ಚುನಾವಣೆ ಬರುತ್ತಿದೆ. ಇಡೀ ದೇಶದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಚುನಾವಣೆಯನ್ನು ಎದುರಿಸಬೇಕಾಗಿದೆ. ಇದಕ್ಕೆಲ್ಲ ಸಂಪನ್ಮೂಲ ಕ್ರೋಢೀಕರಿಸಬೇಕಿದೆ. ಸದ್ಯಕ್ಕೆ ಒಂದಷ್ಟು ಸಂಪನ್ಮೂಲ ಸಿಕ್ಕರೆ ಅದು ಕರ್ನಾಟಕದಿಂದ ಮಾತ್ರ. ಒಂದು ವೇಳೆ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಂಡರೆ ಬರುವ ಸಂಪನ್ಮೂಲಕ್ಕೂ ಕಲ್ಲು ಬೀಳಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ತಲೆದೂಗುತ್ತಿದ್ದಾರೆ.

ಶಾಸಕರ ಮೂಗಿಗೆ ತುಪ್ಪ ಸವರುವ ಯತ್ನ

ಶಾಸಕರ ಮೂಗಿಗೆ ತುಪ್ಪ ಸವರುವ ಯತ್ನ

ಇದೆಲ್ಲದರ ನಡುವೆ ತಳಮಟ್ಟದಿಂದ ರಾಜಕೀಯ ಮಾಡಿಕೊಂಡು ಬಂದು ಮೂರ್ನಾಲ್ಕು ಬಾರಿ ಶಾಸಕರಾದರೂ ನಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಕೊರಗುತ್ತಿರುವವರು ಒಂದೆಡೆಯಾದರೆ, ಇನ್ನೊಂದೆಡೆ ನಾವು ಪಕ್ಷಕ್ಕಾಗಿ ದುಡಿದಿದ್ದೇವೆ ನಮಗೆ ಸಚಿವ ಸ್ಥಾನಕೊಡಿ, ಕೊನೆ ಪಕ್ಷ ನಿಗಮಮಂಡಳಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಿ ಎಂದು ದುಂಬಾಲು ಬೀಳುವವರ ಸಂಖ್ಯೆಯೂ ಹೆಚ್ಚಿದೆ. ಮೈತ್ರಿ ಸರ್ಕಾರದ ಶಾಸಕರೆಲ್ಲರಿಗೂ ತಾವು ಸಚಿವರಾಗಬೇಕೆಂಬ ಬಯಕೆಯಿದೆ. ಇದನ್ನು ಗಮನಿಸಿ ಇದೀಗ ಪ್ರಭಾವಿ ಶಾಸಕರ ಮೂಗಿಗೆ ತುಪ್ಪ ಸವರುವ ಕೆಲಸವೂ ಸದ್ದಿಲ್ಲದೆ ನಡೆಯುತ್ತಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳಿಗಿದೆಯೇ ತಾಳ್ಮೆ?

ಸಚಿವ ಸ್ಥಾನದ ಆಕಾಂಕ್ಷಿಗಳಿಗಿದೆಯೇ ತಾಳ್ಮೆ?

ಅದು ಏನೆಂದರೆ? ಈಗಾಗಲೇ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಇದೀಗ ಸಚಿವ ಸ್ಥಾನ ಅಲಂಕರಿಸಿದವರು ಎರಡು ವರ್ಷದ ನಂತರ ಸಚಿವ ಸ್ಥಾನವನ್ನು ಬಿಟ್ಟು ಕೊಡಬೇಕು. ಆ ನಂತರ ಸಚಿವರಾಗುವವರು ಮೂರು ವರ್ಷ ಅಧಿಕಾರ ನಡೆಸಬಹುದಾಗಿದೆ. ಆದ್ದರಿಂದ ತಾಳ್ಮೆಯಿಂದ ಕಾಯಿರಿ ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. ಈಗಿರುವ ಪರಿಸ್ಥಿತಿಯಲ್ಲಿ ಆರು ತಿಂಗಳ ಕಾಲ ಸರ್ಕಾರ ನಡೆಯುವುದೇ ಕಷ್ಟವಾಗಿದೆ. ಹೀಗಿರುವಾಗ ಇನ್ನೆರಡು ವರುಷ ಕಾಯುವ ತಾಳ್ಮೆ ನಮ್ಮ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಇದೆಯಾ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.

English summary
Karnataka Cabinet expansion: Congress high command has told it's Karnataka MLAs who doesn't get cabinet portfolio to keep quiet as of now. Congress is targeting 2019 Lok Sabha elections. So it doesn't want to lose confidence of JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X