ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (ಕೆಪಿಜೆಪಿ) ಹೊರಬಂದ ನಟ ಉಪೇಂದ್ರ ನಡೆ ಕುತೂಹಲ ಮೂಡಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹದೊಂದಿಗೆ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಮಾಡಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದ ಉಪೇಂದ್ರ, ಕೆಪಿಜೆಪಿ ಮೂಲಕ ರಾಜಕೀಯ ಬದಲಾವಣೆಯ ಪ್ರಯತ್ನದ ಕನಸುಗಳನ್ನು ಹಂಚಿಕೊಂಡಿದ್ದರು.

ಆದರೆ, ಉಪ್ಪಿ ಈಗ ಎಲ್ಲಿದ್ದಾರೆ? ಮತ್ತೆ ಸಿನಿಮಾಕ್ಕೆ ಮರಳಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಜತೆಗೆ ರಾಜಕೀಯದಲ್ಲಿಯೂ ಮುಂದುವರಿಯುವ ಸುಳಿವು ನೀಡಿದ್ದಾರೆ. ಸದ್ಯಕ್ಕೆ ಅವರೀಗ ದೆಹಲಿಯಲ್ಲಿದ್ದಾರೆ. ಅದೂ ರಾಜಕೀಯದ ಕೆಲಸಕ್ಕೆ.

ಉಪೇಂದ್ರ ರಾಜಕೀಯ ಪ್ರವೇಶವೇ ಓಳು ಬರೀ ಓಳು!ಉಪೇಂದ್ರ ರಾಜಕೀಯ ಪ್ರವೇಶವೇ ಓಳು ಬರೀ ಓಳು!

ಹೌದು. ಉಪೇಂದ್ರ ರಾಜಕೀಯ ಸೇರ್ಪಡೆಯ ಆರಂಭದಿಂದಲೂ 'ಪ್ರಜಾಕೀಯ' ಪಕ್ಷದ ಹೆಸರು ಕೇಳಿಬರುತ್ತಿತ್ತು. ಈ ಹೆಸರನ್ನು ಅಪ್ಪಿಕೊಂಡಿರುವ ಉಪ್ಪಿ, 'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ತೆರಳಿರುವ ಉಪೇಂದ್ರ 'ಉತ್ತಮ ಪ್ರಜಾಕೀಯ ಪಾರ್ಟಿ'ಯ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ.

ರಾಜಕೀಯವನ್ನು 'ಪ್ರಜಾಕೀಯ' ಎಂದು ಪರಿವರ್ತಿಸಿರುವ ಉಪೇಂದ್ರ, ಕೆಪಿಜೆಪಿ ಆರಂಭಿಸಿದ್ದಾಗಿನಿಂದಲೂ ರಾಜಕೀಯದಲ್ಲಿ ಆಗಬೇಕಾದ ಸ್ಥಿತ್ಯಂತರದ ಕುರಿತು ಸುದೀರ್ಘ ಕನಸುಗಳನ್ನು ಹಂಚಿಕೊಂಡಿದ್ದರು. ಅವರ ಮಾತುಗಳು ಸಿನಿಮಾ ಸಂಭಾಷಣೆಯ ಧಾಟಿಯಲ್ಲಿಯೇ ಇದ್ದವು. ಕೊನೆಗೆ ತಮ್ಮದೇ ಪಕ್ಷದಿಂದ ತಾವೇ ಹೊರಬೇಕಾದ 'ದುರಂತ ನಾಯಕ'ನಂತೆಯೂ ಕಂಡಿದ್ದರು.

ಪಕ್ಷ ಸ್ಥಾಪನೆ ಬಳಿಕ ಮುಂದೇನು?
ಕೆಪಿಜೆಪಿಯಿಂದ ಹೊರಬಂದ ಬಳಿಕ ಉಪೇಂದ್ರ ಮುಂದಿನ ನಡೆ ಏನೆಂಬುದು ಗುಪ್ತವಾಗಿತ್ತು. ಆದರೆ, ರಾಜಕೀಯದಿಂದ ಹೊರಬರುವುದಿಲ್ಲ ಎಂಬ ಸುಳಿವು ನೀಡಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಹೊಂದಿದ್ದ ಉಪೇಂದ್ರ, ಈಗ ಆ ಅವಕಾಶ ಹೊಂದಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕ ಏಪ್ರಿಲ್ 24 (ಮಂಗಳವಾರ) ಅಂತ್ಯಗೊಂಡಿದೆ. ಹೀಗಾಗಿ ಹೊಸ ಪಕ್ಷ ಸ್ಥಾಪಿಸಿದರೂ ಉಪೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ.

ಹೊಸ ಪಕ್ಷ ಆರಂಭಿಸಲಿರುವ ಉಪೇಂದ್ರ, ಪಕ್ಷ ಸಂಘಟನೆಯ ಚಟುವಟಿಕೆಗೆ ಮುಂದಾಗಬೇಕಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಉಪೇಂದ್ರ ಅವರೊಂದಿಗೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮುನಿಸಿಕೊಂಡಿದ್ದರು. ಈಗ ತಮ್ಮದೇ ಪಕ್ಷ ಸ್ಥಾಪಿಸುತ್ತಿರುವ ಉಪ್ಪಿ, ಮುಂದೆ ಪಕ್ಷವನ್ನು ಹೇಗೆ ಕಟ್ಟುತ್ತಾರೆ ಎಂಬುದು ಮುಂದಿರುವ ಕುತೂಹಲ.

English summary
Actor Upendra is making a process for registering his new political party "Utthama Prajakeeya Party'. He was left out from KPJP before
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X