keyboard_backspace

ಡ್ರಗ್ ಕೇಸ್: ಸಂಬರಗಿದು ಬರೀ ಬಡಾಯಿ; ಜ್ಯೂ. ಲಂಕೇಶ್ ಹೇಳಿಕೆಗೆ ಸೀಮಿತ

Google Oneindia Kannada News

ಬೆಂಗಳೂರು, ಸೆ. 08: ರಾಜ್ಯದಲ್ಲಿ ಡ್ರಗ್ ಪ್ರಕರಣ ತೆರೆ ಕಾಣುವ ಹೊತ್ತಿಗೆ ಸರಿಯಾಗಿ ಎರಡು ಪಾತ್ರಧಾರಿಗಳು ಛಂಗನೆ ನೆಗೆದು ವೇದಿಕೆ ಏರುತ್ತವೆ. ಪೊಲೀಸರಿಗಿಂತ, ನ್ಯಾಯಾಲಯಕ್ಕಿಂತ ಮೊದಲೇ ಡ್ರಗ್ ಕೇಸಿನ ಸಂಭವನೀಯ ಆರೋಪಿಗಳನ್ನು ಸಾರ್ವಜನಿಕ ಚರ್ಚೆಗೆ ಇವರು ಆಹ್ವಾನಿಸುತ್ತಾರೆ. ಇಡೀ ರಾಜ್ಯದ ಜನರ ಮುಂದೆ, ಕನ್ನಡ ಚಿತ್ರರಂಗ 'ನಶೆಯ ಅಲೆಯಲ್ಲಿ ತೇಲುತ್ತಿದೆ' ಎಂಬ ವಾದಗಳನ್ನು ಮಂಡಿಸುತ್ತಾರೆ, ಸೆಲೆಬ್ರಿಟಿಗಳ ಬಣ್ಣ ಕಳಚಲು ಮುಂದೆ ಬರುತ್ತಾರೆ. ಒಂದಷ್ಟು ದಿನ ಸುದ್ದಿಮನೆಗಳಲ್ಲಿ ಸದ್ದು ಮಾಡಿ ಮತ್ತೆ ಮರೆಗೆ ಸರಿಯುತ್ತಾರೆ.

ಹಾಗೆ ನೋಡಿದರೆ, ಡ್ರಗ್‌ನಂತಹ ಪ್ರಕರಣದಲ್ಲಿ ಈ ಜೋಡಿಯ ಪಾತ್ರವೇನು? ಪೊಲೀಸರ ತನಿಖೆಗೆ ಇವರಿಂದ ಆಗಿರುವ ಸಹಾಯವೇನು? ಸರಕಾರಿ ದಾಖಲೆಗಳಲ್ಲಿ ಇವರ ಉಲ್ಲೇಖಗಳೇನಿವೆ? ಇವೆಲ್ಲವನ್ನೂ ಇವತ್ತು ಮುಂದಿಡಲು ಹೊರಟಿದೆ, 'ಒನ್‌ಇಂಡಿಯಾ ಕನ್ನಡ'.

ಮಂಗಳೂರು ಡ್ರಗ್ಸ್ ಕೇಸಲ್ಲಿ ಅನುಶ್ರೀ ಹೆಸರು ಕೈ ಬಿಟ್ಟರೇ ಪೊಲೀಸರು?ಮಂಗಳೂರು ಡ್ರಗ್ಸ್ ಕೇಸಲ್ಲಿ ಅನುಶ್ರೀ ಹೆಸರು ಕೈ ಬಿಟ್ಟರೇ ಪೊಲೀಸರು?

ಅಂದಹಾಗೆ, ಆ ಪಾತ್ರಧಾರಿಗಳ ಹೆಸರು ಪ್ರಶಾಂತ್ ಸಂಬರಗಿ ಮತ್ತು ಇಂದ್ರಜಿತ್ ಲಂಕೇಶ್. ನಿರೀಕ್ಷೆಯಂತೆಯೇ, ಸೆ. 8ರಂದು ಮುಂಜಾನೆಯೇ ಇವರು ನಟಿ, ನಿರೂಪಕಿ ಅನುಶ್ರೀ ಡ್ರಗ್ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಸಾರ್ವಜನಿಕ ಒತ್ತಾಯ ಮಂಡಿಸಿದ್ದಾರೆ. ಸದರಿ ಪ್ರಕರಣದ ತನಿಖೆಯ ಪೇವಲವಾಗಿದೆ, ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕು, ಮರು ತನಿಖೆಯಾಗಬೇಕು ಎಂಬುದು ಅವರುಗಳು ದಿನವಿಡಿ ಮಂಡಿಸಿದ ವಾದದ ತಿರುಳು.

ಹಳೆಯ ವಾದ, ಹೊಸ ಬಟ್ಟೆ

ಹಳೆಯ ವಾದ, ಹೊಸ ಬಟ್ಟೆ

ವರ್ಷದ ಹಿಂದೆ ನಡೆದ ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಪ್ರಕರಣದ ನೆನಪು ಮಾಡಿಕೊಳ್ಳಿ. ಇಂದ್ರಜಿತ್ ಲಂಕೇಶ್ ಮತ್ತು ಪ್ರಶಾಂತ್ ಸಂಬರಗಿ ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳೇನಿದ್ದವು? "ಎಲ್ಲಾ ಸಾಕ್ಷಿಗಳನ್ನು ಸಿಸಿಬಿಗೆ ಕೊಟ್ಟು ಬಿಟ್ಟಿದ್ದೇನೆ," ಎಂದು ಒಬ್ಬರು ಕ್ಯಾಮರಾ ಮುಂದೆ ಹೇಳಿಕೊಂಡರೆ, ಮತ್ತೊಬ್ಬರು, ಬ್ಯಾಗು ಸಮೇತ ಸಿಸಿಬಿ ಕಚೇರಿಗೆ ಹೋಗಿ ಬಂದು ಮಾಡಿದರು. ಬೆಳಗಾನ ಸಂಜೆ ತನಕ ಇವರಿಬ್ಬರದ್ದೇ ಮಾಧ್ಯಮಗಳಲ್ಲಿ ಅಬ್ಬರ. ಆದರೆ ಇದು ಹೊರಗೆ ಕಂಡ ಚಿತ್ರಗಳಷ್ಟೆ. ಆಳಕ್ಕಿಳಿದರೆ, ಈಗ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಒಬ್ಬರ ಹೆಸರೇ ಇಲ್ಲ. ಇನ್ನೊಬ್ಬರು ನೀಡಿದ ಎರಡು ಪುಟಗಳ ಹೇಳಿಕೆಯಲ್ಲಿ ಯಾವ ಸತ್ವವೂ ಕಾಣಿಸುವುದಿಲ್ಲ. ಮುಂದೆ ನಡೆಯುವ ನ್ಯಾಯಾಲಯದ ವಿಚಾರಣೆಯಲ್ಲಿ ಮಹತ್ವ ನೀಡುಬಹುದಾದ ಯಾವ ಅಂಶವೂ ಇಬ್ಬರ ಕಡೆಯಿಂದ ತನಿಖಾಧಿಕಾರಿಗಳ ಸಿಕ್ಕ ಹಾಗಿಲ್ಲ.

ಐದು ಅಧ್ಯಾಯ, ಒಂದು ದೋಷಾರೋಪ

ಐದು ಅಧ್ಯಾಯ, ಒಂದು ದೋಷಾರೋಪ

ಅಚ್ಚರಿ ಏನೆಂದರೆ, ಸ್ಯಾಂಡಲ್‌ವುಡ್ ಡ್ರಗ್ ಕೇಸಿನ ಸಂಬಂಧ ಸಿಸಿಬಿ ಪೊಲೀಸರು ಹಗಲಿರುಳು ಶ್ರಮಿಸಿ 2500 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದೊಡ್ಡ ತಂಡವೇ ಇದರ ಹಿಂದೆ ಕೆಲಸ ಮಾಡಿದೆಯಾದರೂ, ಅವರ ಹೆಸರುಗಳು ಜನರಿಗೆ ತಲುಪಿಲ್ಲ.

ಆದರೆ, ಇವತ್ತಿಗೂ ಡ್ರಗ್ ವಿಚಾರ ಬಂದಾಗಲೆಲ್ಲಾ ಮಾಧ್ಯಮಗಳ ಮುಂದೆ ವಕ್ಕರಿಸುವ ಪ್ರಶಾಂತ್ ಸಂಬರಗಿ ಎಲ್ಲಿಯೂ ದಾಖಲೆಗಳಲ್ಲಿ ಉಲ್ಲೇಖವೇ ಆಗಿಲ್ಲ. "ಆತನ (ಪ್ರಶಾಂತ್ ಸಂಬರಗಿ) ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನರ್ಹವಾಗಿದೆ ಎಂಬ ಕಾರಣಕ್ಕೆ ದೋಷಾರೋಪ ಪಟ್ಟಿಯಿಂದ ಕೈ ಬಿಟ್ಟಿದ್ದೇವೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದಂತೆ, ನ್ಯಾಯಾಲಯಕ್ಕೆ ಹೇಳಿಕೆ ಕೊಡಲು ಸಾಧ್ಯವಿಲ್ಲ. ಹೊರಿಸುವ ಪ್ರತಿ ಆರೋಪಕ್ಕೂ ಸಾಕ್ಷಿ ನೀಡಬೇಕಾಗುತ್ತದೆ. ಇವರದ್ದು ಬರೀ ಹೇಳಿಕೆಗಳಷ್ಟೆ, ಅದನ್ನೇ ಇಟ್ಟುಕೊಂಡು ನ್ಯಾಯದಾನ ಮಾಡಲು ಸಾಧ್ಯವಿಲ್ಲ,'' ಎನ್ನುತ್ತಾರೆ ಡ್ರಗ್ ಪ್ರಕರಣದ ತನಿಖೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳಲ್ಲೊಬ್ಬರು.

ಕೇಳಿದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ

ಕೇಳಿದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ

ಬುಧವಾರ, ಮತ್ತೆ ಡ್ರಗ್ ಪ್ರಕರಣದಲ್ಲಿ 'ಸೇವಿಯರ್' ಪಾತ್ರವಹಿಸಿದ ಸಂಬರಗಿ ಅವರಿಗೆ, ಸಿಸಿಬಿ ಪೊಲೀಸರು ತಮ್ಮನ್ನು ಎಲ್ಲಿಯೂ ಪರಿಗಣಿಸಿಯೇ ಇಲ್ಲ ಎಂಬ ಮಾಹಿತಿಯೂ ಇರಲಿಲ್ಲ. ನ್ಯಾಯಾಲಯದ ದಾಖಲೆಗಳನ್ನು ಮುಂದಿಟ್ಟುಕೊಂಡು ಸಂಬರಗಿಯನ್ನು 'ಒನ್‌ಇಂಡಿಯಾ ಕನ್ನಡ' ಸಂಪರ್ಕಿಸಿದಾಗ, "ನಾನು ಪಿರ್ಯಾದುದಾರ, ಹಾಗಾಗಿ ನನ್ನ ಹೆಸರು ಎಲ್ಲಿಯೂ ದೋಷಾರೋಪ ಪಟ್ಟಿಯಲ್ಲಿ ಇಲ್ಲ,'' ಎಂಬ- ಕಾನೂನು ತಿಳಿವಳಿಕೆಗೆ ದೂರವಾದ ಪ್ರತಿಕ್ರಿಯೆ ನೀಡಿದರು.

ಪಿರ್ಯಾದುದಾರ ಎಂದರೆ ಇನ್ನೊಂದು ಅರ್ಥದಲ್ಲಿ ದೂರುದಾರರು. ಯಾವುದೇ ಪ್ರಕರಣ ಆರಂಭವಾಗುವುದು ದೂರು ದಾಖಲಾಗುವ ಮೂಲಕ. ಸ್ಯಾಂಡಲ್‌ವುಡ್ ಡ್ರಗ್‌ ಪ್ರಕರಣದಲ್ಲಿ ದೂರುದಾರರು ಸಿಸಿಬಿ ಅಧಿಕಾರಿ ಗೌತಮ್. ಇನ್ನು, ದೂರು ನೀಡಿದವರ ಹೆಸರನ್ನು ಬಿಟ್ಟು ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಹೇಗೆ ಸಾಧ್ಯ? ವರ್ಷದ ಹಿಂದೆ, ಒಂದು ಮುಂಜಾನೆ ಸಿಸಿಬಿ ಕಚೇರಿಗೆ ಹೋಗುವ ಮುನ್ನವೇ ಕಪ್ಪು ಬ್ಯಾಗು ತೆಗೆದುಕೊಂಡು ಬಂದಿದ್ದ ಪ್ರಶಾಂತ್ ಸಂಬರಗಿ, "ಇವೆಲ್ಲಾ ಮಹತ್ವದ ಸಾಕ್ಷಿಗಳು, ಸಿಸಿಬಿ ಪೊಲೀಸರಿಗೆ ಕೊಡ್ತೇನೆ," ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ನೆನಪಿಸಿಕೊಳ್ಳಬಹುದು.

ಡ್ರಗ್ ಪ್ರಕರಣ ಎಂಬ ಸೇಫ್ ಟಾರ್ಗೆಟ್

ಡ್ರಗ್ ಪ್ರಕರಣ ಎಂಬ ಸೇಫ್ ಟಾರ್ಗೆಟ್

ಈ ವರ್ಷ ಮತ್ತದೇ ರೀತಿಯಲ್ಲಿ ಪ್ರಶಾಂತ್ ಸಂಬರಗಿ, 'ಡ್ರಗ್ ಫೈಟರ್' ಅವತಾರ ಎತ್ತಿ ವೇದಿಕೆ ಮುಂದೆ ಬಂದಿದ್ದಾರೆ. ಮಂಗಳೂರು ಪೊಲೀಸರು ದಾಖಲಿಸಿರುವ ಡ್ರಗ್ ಪ್ರಕರಣದಲ್ಲಿ ಅರೋಪಿಯೊಬ್ಬ ನೀಡಿರುವ ಹೇಳಿಕೆಯಲ್ಲಿ ನಿರೂಪಕಿ ಅನುಶ್ರೀ ಹೆಸರು ಪ್ರಸ್ತಾಪವಾಗಿದೆ. ಇದು ಸುದ್ದಿಯಾಗುತ್ತಿದ್ದಂತೆ ಸಂಬರಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿವ ಚಾಳಿ ಆರಂಭಿಸಿದ್ದಾರೆ. "ಅನುಶ್ರೀ ಮಾದಕ ವಸ್ತು ಸೇವನೆ ಮಾಡಿದ್ರೂ, ಪೊಲೀಸರು ಆರೋಪಿ ಸ್ಥಾನದಿಂದ ಕೈ ಬಿಟ್ಟಿದ್ದಾರೆ, ಅನುಶ್ರೀ ಕೈ ಬಿಟ್ಟಿರುವ ಹಿಂದೆ ಮಾಜಿ ಸಿಎಂ ಪ್ರಭಾವ ಇದೆ, ನಾನು ನವೆಂಬರ್ ಒಂದಕ್ಕೆ ಬಿಡುಗಡೆ ಮಾಡಲಿರುವ 'ಶುಗರ್ ಡ್ಯಾಡಿ' ಪುಸ್ತಕದಲ್ಲಿ ಎಲ್ಲಾ ವೃತ್ತಾಂತ ಬಯಲು ಮಾಡುತ್ತೇನೆ," ಎಂದಿದ್ದಾರೆ.

ಇದರಿಂದ ಪ್ರಶಾಂತ್ ಸಂಬರಗಿ ಹೊಸ ಪುಸ್ತಕಕ್ಕೆ ಪ್ರಚಾರ ಸಿಗಬಹುದೇನೊ? ಆದರೆ, ಪೊಲೀಸರ ತನಿಖೆಗೆ ನಯಾಪೈಸದ ಉಪಯೋಗ ಇಲ್ಲ ಎಂಬುದನ್ನು ಸಿಸಿಬಿ ದಾಖಲೆಗಳೇ ಹೇಳುತ್ತಿವೆ. ಜತೆಗೆ, ಇವರ ವೈಯಕ್ತಿಕ ಪ್ರಚಾರದ ಹುಚ್ಚಿಗೆ, ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿದವರ ತೇಜೋವಧೆ ನಡೆದು ಹೋಗುತ್ತಿದೆ. ನ್ಯಾಯಾಲಯದ ಹೊರಗೆ ಕಳಂಕಗಳನ್ನು ಹೊರೆಸುವ ಹೀನ ಸಂಪ್ರದಾಯಕ್ಕೆ ನಾಂದಿಹಾಡಿದಂತಾಗಿದೆ.

ನ್ಯಾಯಾಲಯದ ಅಂಗಳದಲ್ಲಿ ಇಂದ್ರಜಿತ್

ನ್ಯಾಯಾಲಯದ ಅಂಗಳದಲ್ಲಿ ಇಂದ್ರಜಿತ್

ಇನ್ನು, ಪ್ರಶಾಂತ್ ಸಂಬರಗಿ ಜತೆಯಲ್ಲಿ, ಮಾಧಕ ಲೋಕದ ವಿರುದ್ಧ ಭಾರಿ ಹೋರಾಟಕ್ಕೆ ಇಳಿದ ಮತ್ತೊಬ್ಬರು ಇಂದ್ರಜಿತ್ ಲಂಕೇಶ್. ವಿಶೇಷ ಪರಿಚಯದ ಅಗತ್ಯವಿರದ ವ್ಯಕ್ತಿತ್ವ ಇವರದ್ದು. ಯಾಕೋ, ಕಳೆದ ಎರಡು ವರ್ಷಗಳಿಂದ ಡ್ರಗ್ ವಿಚಾರದಲ್ಲಿ ಭಾರಿ ಚಿಂತೆಗೆ ಒಳಗಾಗಿದ್ದಾರೆ. ಮಾಧ್ಯಮಗಳ ಮುಂದೆ, ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅದು ವಿಷಾದದಿಂದ.

ಯಾಕೆ, ವಿಷಾದ ಎಂದರೆ- ಸುಮಾರು 2.5 ಸಾವಿರ ಪುಟಗಳ 'ಡ್ರಗ್‌ ಫೈಲ್ಸ್‌'ಗಳಲ್ಲಿ ಇಂದ್ರಜಿತ್ ಲಂಕೇಶ್ ಅವರದ್ದು ಎರಡು ಪುಟಗಳ ಹೇಳಿಕೆಯೊಂದಿದೆ, ಅದನ್ನವರು ವಿಷಾದದಿಂದ ನೀಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇಂದ್ರಜಿತ್ ಹೇಳಿಕೆ ಅಷ್ಟೆ, ಸಾಕ್ಷಿಯಾಗಿ ಕರೆಯಲ್ಲ

ಇಂದ್ರಜಿತ್ ಹೇಳಿಕೆ ಅಷ್ಟೆ, ಸಾಕ್ಷಿಯಾಗಿ ಕರೆಯಲ್ಲ

"ನೈಜೀರಿಯನ್ ಡ್ರಗ್ ಪೆಡ್ಲರ್‌ಗಳಿಂದ ಡ್ರಗ್ ಖರೀದಿ ಮಾಡ್ತಾರಂತೆ. ರಾಗಿಣಿ, ಸಂಜನಾ ಡ್ರಗ್ ಸೇವನೆ ಮಾಡುತ್ತಿದ್ದರು. ಇವರು ವಾಟ್ಸಪ್ ಗ್ರೂಪ್ ಮಾಡಿಕೊಂಡಿರುವ ಅನುಮಾನ ಇರುತ್ತದೆ. ಡ್ರಗ್ ಪೆಡ್ಲರ್‌ಗಳು ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಇರುತ್ತದೆ..ಹೀಗೆ ಸಾಗುತ್ತದೆ ಇಂದ್ರಜಿತ್ ಲಂಕೇಶ್ ದಾಖಲಸಿರುವ ಹೇಳಿಕೆಯ ವಿವರ.

ಅಂದರೆ, ಹೆಚ್ಚು ಕಡಿಮೆ ಮಾಧ್ಯಮಗಳು ಹೇಳಿದ್ದನ್ನೇ ಇಂದ್ರಜಿತ್ ದಾಖಲಿಸಿದ್ದಾರೆ ಅಥವಾ ಇಂದ್ರಜಿತ್ ದಾಖಲಿಸಿರುವ ಅಂತೆ- ಕಂತೆಗಳನ್ನು ಮಾಧ್ಯಮಗಳು, 'ಡ್ರಗ್ ಕೇಸ್‌' ಹೆಸರಿನಲ್ಲಿ ಪ್ರಸಾರ ಮಾಡುತ್ತಿವೆ.

ಇಂದ್ರಜಿತ್ ಲಂಕೇಶ್ ಹೇಳಿಕೆ, ನಿಗದಿತ ವ್ಯಕ್ತಿಯ ಬಗ್ಗೆ, ನಿಗದಿತ ಜಾಗ, ನಿಗದಿತ ಡ್ರಗ್ ಬಗ್ಗೆ ಮಾಹಿತಿ ಇಲ್ಲ. ಬಹುಶಃ ಈ ಕಾರಣಕ್ಕೆ ಏನೋ, ಜ್ಯೂ, ಲಂಕೇಶ್ ಅವರಿಂದ ಪೊಲೀಸರು- 'ನ್ಯಾಯಾಲಯಕ್ಕೆ ಬಂದು ಸಾಕ್ಷಿ ನುಡಿಯಬೇಕು' ಎಂಬ ಮುಚ್ಚಳಿಕೆಗೆ ಸಹಿ ಹಾಕಿಸಿಕೊಂಡಿಲ್ಲ.

ಒಂದು ಕಡೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಡ್ರಗ್ ಕೇಸುಗಳ ವಿಚಾರಣೆ ನಡೆಯುತ್ತಿದೆ. ಆದರೆ ಅದೇ ವಿಚಾರದಲ್ಲಿ ಹೊರಗೆ ಪ್ರಶಾಂತ್ ಸಂಬರಗಿ ಮತ್ತು ಇಂದ್ರಜಿತ್ ಲಂಕೇಶ್ ಆಪಾದನೆಗಳನ್ನು ಮುಂದುವರಿಸಿದ್ದಾರೆ. ಇವರಿಬ್ಬರಿಗೂ, ಇತ್ತೀಚೆಗೆ ಕರ್ನಾಟಕದ ಹೈಕೋರ್ಟ್‌ ಪ್ರಕರಣಗಳ ವಿಚಾರಣೆ ಮಾಹಿತಿ ಸೋರಿಕೆ ಹಾಗೂ ಸಾರ್ವಜನಿಕ ಚರ್ಚೆಗಳ ಕುರಿತು ನೀಡಿದ ನಿರ್ದೇಶನದ ಕುರಿತು ತಿಳಿವಳಿಕೆ ನೀಡಬೇಕಿದೆ.

English summary
Sandalwood drug case: Prashant Sambargi and Indrajit Lankesh statements are just of sake of publicity, Know more..
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X