keyboard_backspace

ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಇದೆಂಥಾ ನಿಯಮ?

Google Oneindia Kannada News

ಬೆಂಗಳೂರು, ಸೆ. 06: ಮುಂದಿನ ವಿಧಾನ ಸಭಾ ಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ಆರಂಭಿಸಿವೆ. ಅದರಲ್ಲಿಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಂದು ಹೆಜ್ಜೆ ಮುಂದು ಹೋಗಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು, ಮತ್ತೆ ಕೆಲವು ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಎಂದೂ ಘೋಷಣೆ ಹಾಕುವುದು ಸಾಮಾನ್ಯವಾಗಿದೆ. ಅದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಬ್ಬರೂ ಹಲವು ಬಾರಿ ಇರುಸು ಮುರುಸು ಅನುಭವಿಸಿರುವುದು ಬೇರೆ ವಿಚಾರ.

2023ರ ವಿಧಾನಸಭಾ ಚುನಾವಣೆಗೆ ಮೊದಲು 2022ರ ಜನವರಿಯಲ್ಲಿ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಚುನಾವಣೆ ನಡೆಯಲಿದೆ. ಆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈಗಾಗಲೇ ಭರ್ಜರಿ ತಯಾರಿ ಆರಂಭಿಸಿವೆ. ಅಭ್ಯರ್ಥಿಗಳ ಆಯ್ಕೆಗೆ ಹಲವು ಮಾನದಂಡಗಳನ್ನು ಮೂರು ಪಕ್ಷಗಳು ಹಾಕಿಕೊಂಡಿವೆ.

ಕಾಂಗ್ರೆಸ್ ಟಿಕೆಟ್ ಪಡೆಯಲು ಇರಬೇಕಾದ ಅರ್ಹತೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಿಗದಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದ್ದು, ಆ ಅರ್ಹತೆಯ ಮಾನದಂಡಗಳಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಕಾಂಗ್ರೆಸ್ ಟಿಕೆಟ್ ಪಡೆಯಲು ಇರಬೇಕಾದ ಸಾಮರ್ಥ್ಯವೇನು? ಮುಂದಿದೆ ಮಾಹಿತಿ!

ಶ್ರೀಮಂತರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್?

ಶ್ರೀಮಂತರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್?

ಮುಂಬರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು 10 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಮರ್ಥ್ಯವಿದ್ದರೆ ಮಾತ್ರ ಕಾಂಗ್ರೆಸ್ ಟಿಕೆಟ್ ಕೊಡಲಾಗುತ್ತದೆ ಎಂಬ ಸೂಚನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಗೆ ನೀಡಿದ್ದಾರೆ. ಜೊತೆಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಲು 1 ಲಕ್ಷ ರೂ. ದರ ನಿಗದಿ ಪಡಿಸಲಾಗಿದೆ ಎಂಬ ಮಾಹಿತಿಯೂ ಬಂದಿದೆ.

ಮುಂಬರುವ ಪರಿಷತ್ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲಾವಾರು ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಆ ಸಭೆಯಲ್ಲಿ ಇದನ್ನು ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ ಎನ್ನಲಾಗಿದೆ.

ಭರವಸೆ ಕೊಟ್ಟರೆ ಮಾತ್ರ ಕಾಂಗ್ರೆಸ್ ಟಿಕೆಟ್?

ಭರವಸೆ ಕೊಟ್ಟರೆ ಮಾತ್ರ ಕಾಂಗ್ರೆಸ್ ಟಿಕೆಟ್?

ಆ ಸಭೆಯಲ್ಲಿ ಜಿಲ್ಲಾ ಮುಖಂಡರುಗಳಿಗೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಿಷತ್ ಚುನಾವಣೆಗೆ ಟಿಕೆಟ್‌ಗೆ ಅರ್ಜಿ ಸಲ್ಲಿಸಲು 1 ಲಕ್ಷ ರೂ. ನಿಗದಿ ಮಾಡಿದ್ದಾರೆ ಎನ್ನಲಾಗಿದ್ದು, ಆ ಹಣವನ್ನು ಪಕ್ಷದ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಮುಖಂಡರಿಗೆ ಡಿಕೆಶಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಬಯಸುವವರು ಚುನಾವಣೆಯಲ್ಲಿ ಕನಿಷ್ಠ 10 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧನಿದ್ದೇನೆ ಎಂದು ಖಾತ್ರಿ ನೀಡಬೇಕು. ಅಂಥವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಲಾಗುವುದು. ಚುನಾವಣೆಯಲ್ಲಿ 5 ರಿಂದ 10 ಕೋಟಿ ರೂ. ಖರ್ಚು ಮಾಡುವ ಬಗ್ಗೆ ಅಭ್ಯರ್ಥಿಯ ಆರ್ಥಿಕ ವ್ಯವಹಾರದ ಬಗ್ಗೆ ಬಂಡವಾಳ ಖಾತ್ರಿ ತೋರಿಸಬೇಕು. ಅವರಿಗೆ ಮಾತ್ರ ಟಿಕೆಟ್ ನೀಡುವ ಸಂದೇಶವನ್ನು ಡಿ.ಕೆ. ಶಿವಕುಮಾರ್ ನೀಡಿದ್ದಾರೆ ಎನ್ನಲಾಗಿದೆ.

ಆ ಮೂಲಕ ಅಷ್ಟು ಹಣ ಖರ್ಚು ಮಾಡುವ ಶಕ್ತಿ ಇಲ್ಲದವರು ಸುಮ್ಮನೆ ಟಿಕೆಟ್‌ಗೆ ಲಾಬಿ ಮಾಡಬೇಡಿ ಎಂದು ಪರೋಕ್ಷವಾಗಿ ಟಿಕೆಟ್ ಆಕಾಂಕ್ಷಿಗಳಿಗೆ ಸಂದೇಶ ರವಾನಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಬಿಜೆಪಿ ಜೊತೆಗೆ ಒಳ ಒಪ್ಪಂದ?

ಬಿಜೆಪಿ ಜೊತೆಗೆ ಒಳ ಒಪ್ಪಂದ?

25 ಸ್ಥಳೀಯ ವಿಧಾನ ಪರಿಷತ್ತಿನ ಸ್ಥಾನಗಳಲ್ಲಿ 5 ಕಡೆಗಳಲ್ಲಿಇಬ್ಬರು ಅಭ್ಯರ್ಥಿಗಳು ಸ್ಪರ್ಧೆಗೆ ಅವಕಾಶ ಇದೆ. ಆದರೆ, ಎಲ್ಲ ಕ್ಷೇತ್ರಗಳಲ್ಲಿಯೂ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ. ನಾಯಕರ ಈ ನಿರ್ಧಾರವನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Recommended Video

ಸಲೀಂ ಮತ್ತು ಉಗ್ರಪ್ಪ ಹೇಳಿಕೆಗೆ ಡಿಕೆಶಿ ಕೊಟ್ಟ ಪ್ರತಿಕ್ರಿಯೆ | Oneindia Kannada
ಬೇರೆ ಪಕ್ಷಗಳ ಅಭ್ಯರ್ಥಿಗಳಿಗೂ ಗಾಳ?

ಬೇರೆ ಪಕ್ಷಗಳ ಅಭ್ಯರ್ಥಿಗಳಿಗೂ ಗಾಳ?

ಜಿಲ್ಲಾ ಮುಖಂಡರ ಸಭೆಯಲ್ಲಿ ಯಾವ ಜಿಲ್ಲೆಯಲ್ಲಿ ಯಾವ ಪಕ್ಷದ ಜೊತೆಗೆ ಅಧಿಕೃತವಾಗಿ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬಹುದು ಎನ್ನುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದ್ದು, ಸ್ಥಳೀಯ ಪರಿಸ್ಥಿತಿಗನ್ವಯವಾಗಿ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಚುನಾವಣೆ ಗೆಲ್ಲುವ ಸಾಮರ್ಥ್ಯ ಇರುವ ಬೇರೆ ಪಕ್ಷದವರನ್ನು ಸೇರಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನ ಪರಿಷತ್ ಟಿಕೆಟ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಅವರ ಕಾರ್ಯ ಚಟುವಟಿಕೆ,ಅವರ ವರ್ಚಸ್ಸು, ಜನರೊಂದಿಗೆ ಸಂಪರ್ಕ ಪಕ್ಷದ ನಾಯಕರೊಂದಿಗೆ ಹೊಂದಿರುವ ಸಂಬಂಧದ ಕುರಿತು ಸಂದರ್ಶನ ನಡೆಸಿ, ನಂತರ ಟಿಕೆಟ್ ನೀಡಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

English summary
KPCC president DK Shivakumar Fixed Amount for Legislative Council Election Ticket? 1 Lakh for Application and Rs 10 Crore for Ticket. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X