keyboard_backspace

ಭರವಸೆಗಳ ಹೊಳೆಯಲ್ಲಿ ಮಿಂದ ಶಿರಾಡಿ ಘಾಟ್: ಕಾಯಕಲ್ಪವೋ, ಮಾತಿನ ಸೌಧವೋ?

Google Oneindia Kannada News

ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟ್ ಮತ್ತೆ ಸುದ್ದಿಯಲ್ಲಿದೆ. ಆ ಭಾಗದ ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆ, ಅಧಿಕಾರಿಗಳ ಅಸಡ್ಡೆಯಿಂದ ಬೇಡವಾದ ಕಾರಣಕ್ಕೇ ಸುದ್ದಿಯಾಗುತ್ತಿದ್ದ ಶಿರಾಡಿ ಘಾಟಿಗೆ ಹೊಸ ಸ್ಪರ್ಶ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಪ್ರತೀ ಮಳೆಗಾಲದ ವೇಳೆಯೂ ಭೂಕುಸಿತ, ಕಳಪೆ ಕಾಮಗಾರಿಯಿಂದ ಹೆದ್ದಾರಿ ಕೆಲವು ದಿನಗಳ ಮಟ್ಟಿಗಾದರೂ ಬಂದ್ ಆಗದ ಉದಾಹರಣೆಗಳು ಕಮ್ಮಿ. 25ಸಂಸದರು ಇದ್ದರೂ, ಕರಾವಳಿಯ ಆ ಭಾಗಗಳು ಕೇಸರಿ ಕೋಟೆಯಾಗಿದ್ದರೂ, ಅಲ್ಲಿನ ಜನಪ್ರತಿನಿಧಿಗಳು ಮಾತಿನಲ್ಲೇ ಸೌಧ ಕಟ್ಟುತ್ತಿದ್ದರೇ ಹೊರತು ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎನ್ನುವುದು ವಾಸ್ತವತೆ.

1200 ಕೋಟಿ ವೆಚ್ಚದಲ್ಲಿ ಶಿರಾಡಿ ಘಾಟ್‌ನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ1200 ಕೋಟಿ ವೆಚ್ಚದಲ್ಲಿ ಶಿರಾಡಿ ಘಾಟ್‌ನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ

ಶಿರಾಡಿ ಘಾಟ್ ಉನ್ನತೀಕರಣ, ಕಾಂಕ್ರೀಟಿಕರಣ ಮುಂತಾದ ಏನೇ ಸುದ್ದಿಗಳು ಬಂದರೂ, ಅದು ಇತ್ತೀಚಿನ ದಿನಗಳಲ್ಲಿ ಹಾಸ್ಯದ ವಸ್ತುವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣಕರ್ತರು ಲೋಕೋಪಯೋಗಿ ಇಲಾಖೆ ಮತ್ತು ಅಲ್ಲಿನ ರಾಜಕಾರಣಿಗಳು.

ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವುದನ್ನು ಬಿಟ್ಟು, ಶಿರಾಡಿ ಘಾಟಿಗೆ ಹೊಸ ರೂಪ ನೀಡಲು ಜಪಾನ್ ತಂತ್ರಜ್ಞಾನವಂತೆ, ಸುರುಂಗ ಮಾಡುವುದಂತೆಲ್ಲಾ ಸುದ್ದಿ ಹಬ್ಬಿಸಿ ಚುನಾವಣೆ ಗೆದ್ದು ಹೋದ ಮೇಲೆ ಆ ಕಡೆ ತಲೆಹಾಕದ ಬೇಜವಾಬ್ದಾರಿ ನಾಯಕರುಗಳಿಂದ ದಶಕಗಳ ಸಮಸ್ಯೆ ಇನ್ನೂ, ಸಮಸ್ಯೆಯಾಗಿ ಜೀವಂತವಾಗಿದೆ. ಆದರೆ, ಈಗ ನಿತಿನ್ ಗಡ್ಕರಿ ಶಿರಾಡಿ ಘಾಟ್ ಉದ್ದಾರ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ.

 ಶಿರಾಡಿ ಘಾಟ್: ದಶಕಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ

ಶಿರಾಡಿ ಘಾಟ್: ದಶಕಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ

ಶಿರಾಡಿ ಘಾಟ್ ಎರಡು ಜಿಲ್ಲೆಗಳಿಗೆ (ಹಾಸನ, ದಕ್ಷಿಣ ಕನ್ನಡ) ಸಂಬಂಧಪಟ್ಟ ವಿಚಾರವಾಗಿರುವುದರಿಂದ, ಅಧಿಕಾರಿಗಳ ಸಂವಹನದ ಕೊರತೆ ಇಲ್ಲಿ ಎದುರಾಗುವ ಮತ್ತೊಂದು ಸಮಸ್ಯೆ. ಕರಾವಳಿಯನ್ನು ಸಂಪರ್ಕಿಸಲು ಸಂಪಾಜೆ, ಬಾಳೆಬರೆ, ಹುಲಿಕಲ್, ಆಗುಂಬೆ, ಚಾರ್ಮಾಡಿ ಘಾಟ್ ಮುಂತಾದವು ಬೆಂಗಳೂರಿನಿಂದ ಇದ್ದರೂ ಕೂಡಾ, ಕಿಲೋಮೀಟರ್ ಅಂತರದ ದೃಷ್ಟಿಯಿಂದ ಶಿರಾಡಿ ಘಾಟ್ ಸೂಕ್ತ. ಜೊತೆಗೆ, ಟ್ಯಾಂಕರ್ ಸಂಚಾರಕ್ಕೂ ಇದು ಸೂಕ್ತವಾದ ರಸ್ತೆಯಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಪ್ರಮುಖವಾದ ಘಾಟ್ ಇದಾಗಿದ್ದರೂ, ದಶಕಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತದೆ.

 ಸರಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಆಪಾದನೆ

ಸರಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಆಪಾದನೆ

2009ರಲ್ಲಿ 24 ಕಿ.ಮೀಗಳ ಉದ್ದದ ರಸ್ತೆಗೆ ಕಾಂಕ್ರೀಟ್ ಹಾಕಲು ಕೇಂದ್ರ ಸರಕಾರ 115 ಕೋಟಿ ರೂಪಾಯಿ ತಾಂತ್ರಿಕ ಅನುಮೋದನೆ ನೀಡಿತ್ತು. ಜೊತೆಗೆ, ಓವರ್ ಲೋಡ್ ಕಮ್ಮಿ ಮಾಡಲು ತೂಗುಸೇತುವೆ ನಿರ್ಮಿಸುವುದಕ್ಕೂ ಆಗ ಕೇಂದ್ರದ ಸಚಿವರಾಗಿದ್ದ ಕಮಲ್ ನಾಥ್ ಅನುಮತಿ ನೀಡಿದ್ದರು. ಆದರೆ, ಸರಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಆಪಾದನೆಯನ್ನು ಬಿಜೆಪಿಯವರು ಅಂದು ಮಾಡಿದ್ದರು. ಇದಕ್ಕೂ ಮುನ್ನ ಕೇಂದ್ರ ಸರಕಾರ ಮೂವತ್ತು ಕೋಟಿ ಬಿಡುಗಡೆ ಮಾಡಿತ್ತು, ಅದರಲ್ಲಿ ಎರಡು ಕಿಲೋಮೀಟರ್ ಮಾತ್ರ ರಾಜ್ಯ ಸರಕಾರ ಕಾಂಕ್ರೀಟ್ ರಸ್ತೆ ನಿರ್ಮಿಸಿ, ಉಳಿದಂತೆ ಟಾರ್ ರಸ್ತೆ ನಿರ್ಮಿಸಿ ಕೈತೊಳೆದುಕೊಂಡಿತ್ತು. ಇದಾದ ನಂತರ ಎರಡು ವರ್ಷದಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಗುಂಡಿ ಮುಚ್ಚುವ ಕೆಲಸದ ಕಾಮಗಾರಿ ನಡೆದಿತ್ತು.

 ಮೂರ್ನಾಲ್ಕು ಸಾವಿರ ಕೋಟಿ ಖರ್ಚು ಎಂದು ಚರ್ಚೆಯಾಯಿತು

ಮೂರ್ನಾಲ್ಕು ಸಾವಿರ ಕೋಟಿ ಖರ್ಚು ಎಂದು ಚರ್ಚೆಯಾಯಿತು

2012ರಲ್ಲಿ ಉನ್ನತ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲು ಜಪಾನ್ ದೇಶ ಮುಂದೆ ಬಂದಿದೆ ಎಂದು ಆಗ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡ್ರು ಹೇಳಿದ್ದರು. ಆದರೆ, ಅದು ಆ ಕ್ಷಣದಲ್ಲಿ ಆಡಿದ್ದ ಮಾತಾಗಿತ್ತೇ ಹೊರತು, ಕಾರ್ಯರೂಪಕ್ಕೆ ಬರಲಿಲ್ಲ. ಇದಾದ ಒಂದು ವರ್ಷದ ನಂತರ ಜಪಾನ್ ವಿಚಾರ ಬಿಟ್ಟ ಸರಕಾರ ಸುರಂಗದ ಹಿಂದೆ ಬಿತ್ತು. ಇದಕ್ಕೆ ಮೂರ್ನಾಲ್ಕು ಸಾವಿರ ಕೋಟಿ ಖರ್ಚು ಎಂದು ಚರ್ಚೆಯಾಯಿತು. ಇದಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಯಿತು. ಆಗ ಮತ್ತೆ ಮಳೆಗಾಲ ಆರಂಭವಾಯಿತು, ಗುಡ್ಡು ಕುಸಿಯಿತು, ಶಿರಾಡಿ ಘಾಟಿನ ಪರಿಸ್ಥಿತಿ ಯಥಾರೀತಿ ಮುಂದುವರಿಯಿತು.

 ಎರಡು ಹಂತದಲ್ಲಿ ಶಿರಾಡಿ ಘಾಟಿಗೆ ಒಂದಷ್ಟು ಕಾಯಕಲ್ಪ ಸಿಕ್ಕಿತ್ತು

ಎರಡು ಹಂತದಲ್ಲಿ ಶಿರಾಡಿ ಘಾಟಿಗೆ ಒಂದಷ್ಟು ಕಾಯಕಲ್ಪ ಸಿಕ್ಕಿತ್ತು

ಇದಾದ ನಂತರ ಎಚ್.ಸಿ.ಮಹದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದಾಗ ಎರಡು ಹಂತದಲ್ಲಿ ಶಿರಾಡಿ ಘಾಟಿಗೆ ಒಂದಷ್ಟು ಕಾಯಕಲ್ಪ ಸಿಕ್ಕಿದ್ದು ಹೌದು. ಹೆಗ್ಗದ್ದೆಯಿಂದ ಕೆಂಪುಹೊಳೆ ಗೆಸ್ಟ್‌ಹೌಸ್‌ವರೆಗೆ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗಿತ್ತು, ಸುಮಾರು ಎಪ್ಪತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿತ್ತು. ಆದರೆ, ನಿಗದಿತ ಅವಧಿಯಲ್ಲಿ ರಸ್ತೆ ಕೆಲಸ ಮುಗಿಯದೇ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದಾದ ನಂತರ 2017-18ರಲ್ಲಿ ಮತ್ತೆ ಕಾಮಗಾರಿಗಾಗಿ ಸಂಚಾರ ಬಂದ್ ಮಾಡಲಾಯಿತು. ಎಷ್ಟೋ ತಿಂಗಳ ನಂತರ ರಸ್ತೆ ಸಂಚಾರಕ್ಕೆ ಮುಕ್ತವಾಯಿತು.

 ಕೇಂದ್ರ ಸರಕಾರದಲ್ಲಿ ಆಕ್ಟೀವ್ ಸಚಿವರಾಗಿರುವ ನಿತಿನ್ ಗಡ್ಕರಿ

ಕೇಂದ್ರ ಸರಕಾರದಲ್ಲಿ ಆಕ್ಟೀವ್ ಸಚಿವರಾಗಿರುವ ನಿತಿನ್ ಗಡ್ಕರಿ

ಇದಾದ ನಂತರ ಹಲವು ಬಾರಿ ಕಾಮಗಾರಿ, ಮಳೆಯಿಂದಾಗಿ ಶಿರಾಡಿ ಬಂದ್ ಆಗಿತ್ತು. ಕಳೆದ ಕೆಲವು ತಿಂಗಳಿನಿಂದಂತೂ ಗುಂಡಿಯ ಮಧ್ಯೆ ರಸ್ತೆಯಂತಿತ್ತು. ಈಗ, ಮತ್ತೊಂದು ಸುದ್ದಿ ಹೊರಬಿದ್ದಿದೆ. 1,200 ಕೋಟಿ ವೆಚ್ಚದಲ್ಲಿ ಶಿರಾಡಿ ಘಾಟ್‌ನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ಸಿಕ್ಕಿದೆ ಎನ್ನುವುದು. ಕೇಂದ್ರ ಸರಕಾರದಲ್ಲಿ ಆಕ್ಟೀವ್ ಸಚಿವರಾಗಿರುವ ನಿತಿನ್ ಗಡ್ಕರಿಯವರು ಈ ಹೇಳಿಕೆಯನ್ನು ನೀಡಿದ್ದಾರೆ. ಇದು ಕೂಡಾ ರಾಜಕಾರಣಿಗಳ ಮಾತಿನ ಸೌಧವಾಗುತ್ತಾ ಅಥವಾ ಕಾರ್ಯರೂಪಕ್ಕೆ ಬರುತ್ತಾ ಎನ್ನುವುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಭರವಸೆಯ ಹೊಳೆಯಲ್ಲಿ ಮಿಂದಿರುವ ಶಿರಾಡಿ ಘಾಟ್, ಜನ ಪ್ರತಿನಿಧಿಗಳ ಮಾತಿನ ಝಲಕಿಗೆ ಸಿಕ್ಕ ವೇದಿಕೆಯಾಗಿರುವುದು ನಮ್ಮೆಲ್ಲರ ದುರಂತ.

English summary
Demand From Decades, Will Union Government Take Up Shiradi Ghat Up gradation Work Seriously. Know More
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X