ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ ಯೋಗ

By ವಿನಾಯಕ ಭಟ್
|
Google Oneindia Kannada News

ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚ ವೈದಕೇನ
ಯೋಪಾ ಕರೋತ್ತಂ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿರಾನತೋಸ್ಮಿ

ಯೋಗದಿಂದ ಚಿತ್ತವನ್ನೂ, ಪದಗಳಿಂದ ಮಾತನ್ನೂ, ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿಯುವೆ- ಎಂಬ ಶ್ಲೋಕವೊಂದಿದೆ. ಅಂದರೆ ಯೋಗ ದೇಹಾರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ರಹದಾರಿ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಯೋಗ ಶರೀರ ಮತ್ತು ಉಸಿರಾಟ ಕ್ರಿಯೆಯನ್ನು ಸಮತೋಲನದೊಂದಿಗೆ ಬಳಸಿಕೊಂಡು ಆರೋಗ್ಯದಿಂದ ಆಧ್ಯಾತ್ಮದೆಡೆಗೆ ಕರೆದೊಯ್ಯುವ ವಿದ್ಯೆ. ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ.

ಯುವಜನರು ಆಧುನಿಕ ಜಿಮ್ಗೆ ಮಾರುಹೋಗುತ್ತಿದ್ದಾರೆ. ಇಲ್ಲಿ ಲಕ್ಷಾಂತರ ರುಪಾಯಿಗಳ ಉಪಕರಣ ಬೇಕಾಗುತ್ತದೆ. ಯೋಗಕ್ಕೆ ಶರೀರವೇ ಉಪಕರಣ. ಈ ಶರೀರವೆಂಬ ಉಪಕರಣವನ್ನು ಬಳಸಿದಷ್ಟೂ ಆರೋಗ್ಯವರ್ಧನೆಯ ಮೂಲಕ ಅದರ ಮೌಲ್ಯವರ್ಧನೆಯಾಗುತ್ತದೆ. ಜಿಮ್ ಮಾಡುವುದನ್ನು ಬಿಟ್ಟರೆ ಶರೀರದಲ್ಲಿ ಬೊಜ್ಜು ಬೆಳೆಯುತ್ತದೆ, ದೇಹಾಕಾರ ವಿಕಾರವಾಗುತ್ತದೆ. ಅತಿಯಾದ ಜಿಮ್ ವರ್ಕೌಟ್ನಿಂದ ವಯಸ್ಸಾದಂತೆ ಅಂಗಾಂಗಗಳಲ್ಲಿ ನೋವು, ಮೂಳೆಸವೆತ ಕಾಣಿಸಿಕೊಳ್ಳಬಹುದು. ಆದರೆ ಯೋಗದಿಂದ ಈ ಅಡ್ಡಪರಿಣಾಮಗಳ್ಯಾವವೂ ಇರುವುದಿಲ್ಲ. ಅಲ್ಲದೇ ಜಿಮ್ಗೆ ತಿಂಗಳಿಗೆ ಸಾವಿರಾರು ರುಪಾಯಿ ಸುರಿಯಬೇಕು. ಖರ್ಚಿಲ್ಲದ ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಕಸಿತವಾಗುತ್ತದೆ. [ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ]

Yoga, the master of all physical and mental exercises

ಜಿಮ್ ಬಾಡಿ ಮಾಡಿಕೊಂಡು ಎದೆಯುಬ್ಬಿಸಿಕೊಂಡು ಓಡಾಡುವ ತಹತಹ ಎಷ್ಟೋ ಮಂದಿಯಲ್ಲಿ. ವರ್ಕೌಟ್ಗೆ ತಕ್ಕಂತೆ ಅವರು ಅತಿಯಾದ ಕೃತಕ ಪೌಷ್ಟಿಕ ಆಹಾರ ಮತ್ತು ಮಾಂಸಾಹಾರಗಳನ್ನು ಸೇವಿಸಬೇಕಾಗುತ್ತದೆ. ಒಟ್ಟಿನಲ್ಲಿ ಶರೀರಕ್ಕೆ ಬೇಕೋ ಬೇಡವೋ ಹೊರಗಿನಿಂದ ಎಲ್ಲವನ್ನೂ ತಂದುತಂದು ತುರುಕಿ ಆಕಾರ ಗಟ್ಟಿ ಮಾಡಿದಂತಿರುತ್ತದೆ.

ಆದರೆ ಯೋಗಪಟುವನ್ನು ಕೂಲಂಕುಷವಾಗಿ ಗಮನಿಸಿ. ಹೊರಗಿನಿಂದ ಅವನು ಸಾಮಾನ್ಯ ಮನುಷ್ಯನಂತೆ, ಕೆಲವು ಸಲ ಸಣಕಲನಂತೆ ಕಾಣಿಸುತ್ತಾನೆ. ಆದರೆ ಅವನ ನಡೆಯಲ್ಲಿ ಚುರುಕು ಮತ್ತು ಚಟುವಟಿಕೆ ಎದ್ದು ಕಾಣುತ್ತದೆ. ಮಾತಿನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತದೆ. ನೋಟದಲ್ಲಿ ಮೊನಚಿರುತ್ತದೆ. ಏನೋ ಒಂದು ಆಕರ್ಷಣೆ ಇರುತ್ತದೆ. ಛಲದಿಂದಲೇ ಜಗತ್ತನ್ನು ಗೆಲ್ಲಬಲ್ಲ ಹುಮ್ಮಸಿರುತ್ತದೆ. ಸಂದರ್ಭ ಬಂದರೆ ಫೈಟ್ ಮಾಡುವಷ್ಟು ಗಟ್ಟಿಗರಾಗಿಯೂ ಇರುತ್ತಾರೆ. [ವಿಜಯ್ ಕಾಂತ್ ಫನ್ನಿ ಯೋಗ ವಿಡಿಯೋ]

ಯುಗದ ಹೀರೋ-ಯೋಗದ ಹೀರೋ : ಸಿನಿಮಾ ಹೀರೋ ಆಗಲು ಜಿಮ್ ವರ್ಕೌಟ್ ಮಾಡಲೇಬೇಕೆಂಬ ಭ್ರಮೆ ಈಗಿನ ಉದಯೋನ್ಮುಖ ನಟರಲ್ಲಿದೆ. ಆದರೆ ನಿಜವಾದ ಹೀರೋ, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸರಿಸಾಟಿ ಇಲ್ಲದ ನಾಯಕ ಡಾ|| ರಾಜ್ಕುಮಾರ್ ಎಂದೂ ಜಿಮ್ಗೆ ಹೋಗಲಿಲ್ಲ. ಅವರು ತಮ್ಮ 40ನೆಯ ವಯಸ್ಸಿಗೆ ಯೋಗ ಕಲಿತರು. ಅನೇಕ ಕ್ಲಿಷ್ಟಕರ ಆಸನಗಳನ್ನೂ ನಿರಾಯಾಸವಾಗಿ ಮಾಡುತ್ತಿದ್ದರು. 'ಕಾಮನ ಬಿಲ್ಲು' ಚಿತ್ರದಲ್ಲಿ ಅವರ ಯೋಗದ ಒಂದು ಝಲಕ್ ನೋಡಿರಬಹುದು. ಅವರ ಮರಣವನ್ನೂ ಇಚ್ಛಾಮರಣ ಎಂದೂ ಹೇಳಲಾಗುತ್ತಿದೆ.

Yoga, the master of all physical and mental exercises

ಯೋಗದ ತುತ್ತತುದಿ ತಲುಪಿದವರಿಗೆ ಇದು ಅಸಾಧ್ಯವೇನಲ್ಲ. ಒಟ್ಟಿನಲ್ಲಿ ತನ್ನ ಯೌವನದಲ್ಲಿ ಯಾವ ಅಂಗಸೌಷ್ಟವ ಹೊಂದಿದ್ದರೋ ಅದೇ ಶರೀರಮಾಟವನ್ನು ತಮ್ಮ 77ನೆಯ ವಯಸ್ಸಿನಲ್ಲೂ ಹೊಂದಿದ್ದರು ಎನ್ನುವುದು ಸೋಜಿಗ. ಇದು ಯೋಗಾಯೋಗ. ದಶಕಗಳ ಕಾಲ ಇವರಿಗೆ ಬಟ್ಟೆ ಹೊಲಿದುಕೊಟ್ಟ ದರ್ಜಿ ಹೇಳಿದ್ದು ಗಮನಾರ್ಹ- 34ನೆಯ ವಯಸ್ಸಿನಲ್ಲೂ 75ನೆಯ ವಯಸ್ಸಿನಲ್ಲೂ ರಾಜ್ರ ಸೊಂಟದ ಸುತ್ತಳತೆ ಒಂದೇ ಇತ್ತು! ಇದು ಯೋಗಮಹಿಮೆ.

ಬಿಗ್ ಬಿ ಅಮಿತಾಭ್ ಕೊಂಚ ತಡವಾಗಿಯಾದರೂ ಯೋಗ ಕಲಿತು ಈಗ ಸಾಧನೆ ಮುಂದುವರಿಸಿದ್ದಾರಂತೆ. ಅವರ ಸೊಸೆ ವಿಶ್ವಸುಂದರಿ ಐಶ್ವರ್ಯ ಅಂತೂ ಮೊದಲಿನಿಂದಲೂ ಯೋಗಪ್ರಿಯೆ. ಮಗುವಾದರೂ ಶರೀರ ಮಾಗದಿರುವಂತೆ ನೋಡಿಕೊಳ್ಳಲು ಅವರು ಯೋಗದ ಮೊರೆಹೋಗಿದ್ದಾರಂತೆ. ಹಿಂದಿ ಚಿತ್ರರಂಗದ ಚಿರಯೌವನೆ ರೇಖಾ ಕೂಡ ಯೋಗದ ವಿದ್ಯಾರ್ಥಿ. ತಮ್ಮ 66ನೆಯ ವಯಸ್ಸಿನಲ್ಲಿ ಆಕೆ ಆ ಆಕರ್ಷಣೆ ಉಳಿಸಿಕೊಂಡಿದ್ದರೆ ಅದಕ್ಕೆ ಯೋಗ ಕಾರಣ. ಹಾಲಿವುಡ್ ಮೋಹನಾಂಗಿ ಮರ್ಲಿನ್ ಮನ್ರೋ ಕೂಡ ಭಾರತೀಯ ಯೋಗ ಅಭ್ಯಸಿಸಿದ್ದರು. ಹೀಗೆ ಯೋಗಾಂಗರಾದ ಚಿತ್ರತಾರೆಯರ ಪಟ್ಟಿ ದೊಡ್ಡದಿದೆ.

Yoga, the master of all physical and mental exercises

ಛಲ ಮತ್ತು ಸತತ ಪರಿಶ್ರಮ : ಯೋಗಾಯೋಗಿಗಳಾಗಲು ಛಲ ಮತ್ತು ಸತತ ಪರಿಶ್ರಮ ಬೇಕು. ಕೆಲವರು ಆರಂಭಶೂರತ್ವದಿಂದ ಒಂದೆರಡು ದಿನ ಆಸನಗಳನ್ನು ಮಾಡುತ್ತಾರೆ. ಮೂರನೆ ದಿನ ಬೆಳಗ್ಗೆ ಎದ್ದೇಳುವುದೇ ಇಲ್ಲ.

ನೂರು ವರ್ಷ ಬದುಕಿದ ಯೋಗಪಟು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಯೋಗದಿಂದ ಪ್ರಖ್ಯಾತರೂ ವಿವಾದಾತ್ಮಕ ವ್ಯಕ್ತಿಯೂ ಆಗಿ ಬೆಳೆದ ಬಾಬಾ ರಾಮ್ದೇವ್ ಬಾಲ್ಯದಲ್ಲಿ ರೋಗಿಗಳಾಗಿದ್ದರು. ಬದುಕುವುದು ಕಷ್ಟವೆಂದು ವೈದ್ಯರು ನಿಶ್ಚಯಿಸಿಬಿಟ್ಟಿದ್ದರು. ಅಂಥವರನ್ನೂ ಯೋಗ ಬದುಕಿಸಿತು. ಜಗತ್ತಿಗೇ ಗುರುವಾಗಿ ನೀಡಿತು. ಉಪದೇಶ ಸುಲಭ. ಮಾಡಿತೋರಿಸುವುದು ಕಷ್ಟ. ಇಬ್ಬರೂ ಸ್ವತಃ ಯೋಗಾಸನಗಳನ್ನು ಮಾಡಿ ತೋರಿಸುತ್ತ, ಕಲಿಸುತ್ತ ಯೋಗಗುರುಗಳೆಂಬ ಅಭಿದಾನಕ್ಕೆ ಪಾತ್ರರಾದರು.

ಭರತಮುನಿ ನಾಟ್ಯಶಾಸ್ತ್ರ ಬರೆದ. ಸುಶ್ರುತ ವೈದ್ಯಕೀಯ ಶಾಸ್ತ್ರ ಬರೆದ. ಚಾಣಕ್ಯ ಅರ್ಥಶಾಸ್ತ್ರ ಬರೆದ. ಕಣಾದ ವೈಮಾನಿಕ ಶಾಸ್ತ್ರ ಬರೆದ. ಪತಂಜಲಿ ಯೋಗಶಾಸ್ತ್ರವನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದ. ಹೀಗೆ ಭಾರತದ ಋಷಿಗಳು ಜಗತ್ತಿಗೇ ಕಲಿಸಿಕೊಟ್ಟ ಶಾಸ್ತ್ರಗಳು ವಿದೇಶಗಳ ಶಾಲಾ ಪಠ್ಯಕ್ರಮದಲ್ಲಿ ಸೇರಿಕೊಳ್ಳುತ್ತದೆ. ಭಾರತದಲ್ಲೇ ವಿರೋಧ ವ್ಯಕ್ತವಾಗುತ್ತದೆ. ಯೋಗದ ಮಟ್ಟಿಗೆ ಹೇಳುವುದಾದರೆ ವಿರೋಧಿಸುವವರಿಗೇ ನಷ್ಟ.

English summary
We spend lot of money to get gym body. But, it cannot be maintained for long healthy life. Yoga is the only exercise through which we can maintain our mental and physical health. Actors like Rajkumar, Rekha, yoga gurus like Malladihalli Raghavendra Swamiji, Baba Ramdev are examples how yoga can be practiced for better health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X