ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ

By ಡಾ. ವಿನೋದ ಜಿ. ಕುಲಕರ್ಣಿ. ಹುಬ್ಬಳ್ಳಿ
|
Google Oneindia Kannada News

ನಮ್ಮ ದೈನಂದಿನ ಭೋಗಗಳನ್ನು ಕಡಿಮೆ ಮಾಡುವದೇ ಈ ಯೋಗ. ಯೋಗದಿಂದ ಹಲವಾರು ರೋಗಗಳನ್ನು ನಿಯಂತ್ರಣದಲ್ಲಿಡಬಹುದೇ ಹೊರತು, ಬರೀ ಯೋಗದಿಂದಲೇ ರೋಗಗಳು ಸಂಪೂರ್ಣವಾಗಿ ಗುಣವಾಗುವದೆಂದು ಹೇಳಲು ಅಸಾಧ್ಯ. ಈ ಯೋಗ ಕ್ರಿಯೆ ಇಂದು, ನಿನ್ನೆಯದಲ್ಲ. ಅದಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಇದರ ಬಗ್ಗೆ ಅನೇಕ ಉಲ್ಲೇಖಗಳು ಜಾರಿಯಲ್ಲಿವೆ. ಇದು ಮಾನವ ಕುಲಕ್ಕೆ, ಆ ದಯಾಮಯನಾದ ಭಗವಂತ ನೀಡಿದ ಅತ್ಯುನ್ನತ ಕೊಡುಗೆ.

"ಹಿತ್ತಲ ಗಿಡ ಮದ್ದಲ್ಲ" ಎಂಬ ನಾಣ್ಣುಡಿಯಂತೆ, ನಮ್ಮ ಭಾರತೀಯರಿಗೂ, ಹಲವರಲ್ಲಿ ಇದರ ಬಗ್ಗೆ ಏನೋ ಒಂದು ತರಹದ ಅಸಡ್ಡೆ, ಒಂದು ತರಹದ ಉದಾಸೀನ ಪ್ರವೃತ್ತಿ! ಆದರೆ ಇದೇ ಯೋಗಾಭ್ಯಾಸವನ್ನು ಪಾಶ್ಚಾತ್ಯರು ಅನುಸರಿಸಿದರೆ, ಹಾಂ! ಹೌದು! ಅವರೇ ನಮಗೆ ಒಂದು ವಿಶೇಷ ಗುರು ಆಗಿ ತೋರಬಲ್ಲರು.

ಯೋಗ ಮಾಡಲು ಬ್ರಾಹ್ಮಿ ಸಮಯ ಹಾಗೂ ಸಂಜೆಯ ಸಮಯ ಆಹ್ಲಾದಕರ ಹಾಗೂ ಹಿತವೆನಿಸಿದರೂ, ಪ್ರಾಯಶಃ ಇದಕ್ಕೆ ಕಾಲಮಿತಿ, ಗಡಿಯ ಮಿತಿ, ಧರ್ಮದ ಮಿತಿ, ಲಿಂಗದ ಮಿತಿ, ಊಹೂಂ, ಯಾವುದೂ ಇಲ್ಲವೇ ಇಲ್ಲ. ಓರ್ವ ಗುರುವಿನಿಂದಲೇ ಯೋಗ ಕಲಿಯಬೇಕೆಂಬ ಕಟ್ಟುನಿಟ್ಟಾದ ನಿಯಮವೇನಿಲ್ಲ. ಇತರರನ್ನು ನೋಡಿ, ವಿಡಿಯೋ ಚಿತ್ರಗಳನ್ನು ನೋಡಿ ಯೋಗಾಭ್ಯಾಸ ಕಲಿಯಬಹುದು. [ಈ ಲೇಖನ ಓದಿ ಸೂರ್ಯ ನಮಸ್ಕಾರ ಮಾಡುವುದನ್ನು ಕಲಿಯಿರಿ]

What famous psychiatrist say about yoga

ಮನೋದೈಹಿಕ ಸಮಸ್ಯೆಗಳಾದ ರಕ್ತದ ಒತ್ತಡ, ಸಕ್ಕರೆ ರೋಗ, ಅಸ್ಥಮಾ, ಚರ್ಮದ ವ್ಯಾಧಿಗಳು, ಆ್ಯಸಿಡಿಟಿ, ಪಿತ್ತ, ಪದೇ ಪದೇ ಮಲವಿಸರ್ಜನೆ (ಉದಾ: ಐ. ಬಿ. ಎಸ್. ಎಂಬ ರೋಗದಲ್ಲಿ), ಹೃದಯಾಘಾತ ಇವೆಲ್ಲವುಗಳನ್ನು ತಡೆಗಟ್ಟಲು, ಯೋಗ ಸಹಕಾರಿ ಎಂದರೆ ಉತ್ಪ್ರೇಕ್ಷೆ ಅಲ್ಲವೇ ಅಲ್ಲ. ಮನೋರೋಗಗಳ ಹಾಗೂ ಯೋಗದ ಬಗ್ಗೆ ಒಂದು ಆಳವಾದ ಮೌಢ್ಯ ಜನರಲ್ಲಿ ಬೇರೂರಿದೆ.

ಅದೇನೆಂದರೆ, ಯೋಗದಿಂದ ಎಲ್ಲಾ ಮನೋಬೇನೆಗಳನ್ನು ಸರಿಪಡಿಸಬಹುದೆಂದು. ಇಲ್ಲ, ಖಂಡಿತವಾಗಿಯೂ ಇದು ದುಸ್ಸಾಧ್ಯ. ಸಾಮಾನ್ಯ ಮನೋಬೇನೆಗಳಾದ ಆತಂಕ ಹಾಗೂ ಖಿನ್ನತೆಗಳು ಸ್ವಲ್ಪ ಮಟ್ಟಿಗೆ, ಯೋಗಾಭ್ಯಾಸದಿಂದ ಶಮನಗೊಂಡರೂ, ತೀವ್ರವಾದ ಖಿನ್ನತೆ, ಆತ್ಮಹತ್ಯೆಯ ಭೀತಿ, ಮತಿಭ್ರಾಂತಿ, ಮದ್ಯಸೇವನೆಯ ಮೇಲೆ ಅವಲಂಬನೆ, ಇಂಥ ಭೀಕರ ಮನೋರೋಗಗಳಿಗೆ, ಔಷಧಿ ಚಿಕಿತ್ಸೆ ಕಡ್ಡಾಯ.

ಯೋಗಾಭ್ಯಾಸವನ್ನು 6 ವರ್ಷದ ಬಾಲಕರಿಂದ ಹಿಡಿದು 100 ವರ್ಷದ ವಯೋವೃದ್ಧರೂ ಮಾಡಬಹುದು, ಹಾಗೂ ಮಾಡಬೇಕು ಕೂಡಾ. ಯೋಗ ಗುರು ದಿ. ಬಿಕೆಎಸ್ ಐಯ್ಯಂಗಾರ್ ಅವರು ತಮ್ಮ ಜೀವನದ 93 ವರ್ಷದವರೆಗೂ ನಿರಂತರ ಯೋಗಾಭ್ಯಾಸವನ್ನು ಪಾಲಿಸಿದವರು. [ಯೋಗಾಭ್ಯಾಸ ಆರಂಭಿಸುವವರಿಗೆ ಉಪಯುಕ್ತ ಟಿಪ್ಸ್]

"ಮೆಡಿಟೇಶನ್ ಹಾಗೂ ಮೆಡಿಕೇಶನ್" ಎಂಬ ಒಂದು ಅಧ್ಯಯನದಲ್ಲಿ, ಯೋಗ ಚಿಕಿತ್ಸೆಯು, ರೋಗಗಳನ್ನು ನಿಯಂತ್ರಣದಲ್ಲಿಡಲು ಪೂರಕವೇ ವಿನಃ, ಅದು ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣ ಪರ್ಯಾಯ ಅಲ್ಲವೆಂದು ಸಾಬೀತು ಪಡಿಸಲಾಗಿದೆ.

ಇನ್ನು ಯೋಗಾಭ್ಯಾಸ, ಇತರ ಶಾರೀರಿಕ ವ್ಯಾಯಾಮಗಳಾದ, ವಾಯುವಿಹಾರ, ಓಡುವದು, ಈಜುವುದು, ಸೈಕಲ್ ತುಳಿಯುವುದು, ಜಿಮ್ಮಿಗೆ ಹೋಗುವುದು, ಇಂತಹ ಶಾರೀರಿಕ ವ್ಯಾಯಾಮಗಳಿಗೆ ಸರಿಸಾಟಿ ಅಲ್ಲವೇ ಅಲ್ಲ. ಜಿಮ್ಮಿನಲ್ಲಿ ಮೈ ದುಡಿಸುವದು, ಓಡುವುದು, ವಾಕಿಂಗ್, ಇವೆಲ್ಲ ಮಾಡಿದ ನಂತರ ದಿನನಿತ್ಯ, ಒಂದು 15 ನಿಮಿಷದಿಂದ ಅರ್ಧಗಂಟೆಯವರೆಗೆ ಯೋಗಾಭ್ಯಾಸ ಮಾಡಿದವನೇ, ಅತ್ಯಂತ ಆರೋಗ್ಯಶಾಲಿಯಾಗಿ ಬಾಳಬಲ್ಲನು. [ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಯೋಗ ಸಾಧನೆ]

ಅನೇಕ ಪ್ರಸಿದ್ಧ ವ್ಯಕ್ತಿಗಳು ಇಂದಿಗೂ ಯೋಗಾಭ್ಯಾಸವನ್ನು ಮೈಗೂಡಿಸಿಕೊಂಡಿದ್ದಾರೆ. ಆದರ್ಶ ಗುರುಗಳಾದ ಪರಮ ಪೂಜ್ಯ ಪೇಜಾವರ ಶ್ರೀಗಳವರು ಇಂದಿಗೂ, (ಅವರ ವಯಸ್ಸು 84) ದಿನನಿತ್ಯ ಯೋಗಾಭ್ಯಾಸ ಮಾಡುತ್ತಾರೆ. ನಾನೂ ಕೂಡಾ, ದಿನನಿತ್ಯ 25 ನಿಮಿಷದವರೆಗೆ ವಿಷ್ಣು ಸಹಸ್ರನಾಮವನ್ನು ಆಲಿಸುತ್ತಾ, ಪಠಿಸುತ್ತಾ, ಶಿರಸಾಸನವನ್ನು ಕಳೆದ 12 ವರುಷಗಳಿಂದ ಮಾಡುತ್ತಾ ಬಂದಿದ್ದೇನೆ. ಇದು ಒಂದು ಗಿನ್ನಿಸ್ ದಾಖಲೆಯ ಪ್ರಯತ್ನವೂ ಆಗಿದೆ. ನನ್ನ ವಯಸ್ಸು ಈಗ 63, ನನ್ನ ಸಕ್ಕರೆ ರೋಗ, ಬ್ಲಡ್ ಪ್ರೆಶರ್, ಇವೆರಡೂ ಯೋಗಾಭ್ಯಾಸ, ಶಾರೀರಿಕ ವ್ಯಾಯಮ ಹಾಗೂ ಔಷಧಿಗಳಿಂದ ನಿಯಂತ್ರಣದಲ್ಲಿವೆ.

ಈಗ ಯೋಗದ ಬಗ್ಗೆ ಅರಿವು ಮೂಡಿಸುತ್ತಿರುವ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲೇಬೇಕು. ಜೂನ್ 21-ವಿಶ್ವ ಯೋಗ ದಿನಾಚರಣೆಯಾಗಿ, ಮಾರ್ಪಾಡು ಹೊಂದಿದ್ದು ಅವರ ಪ್ರಯತ್ನದಿಂದಲೇ. ಯೋಗವನ್ನು ಪ್ರಚಾರಗೊಳಿಸುವಲ್ಲಿ ಬಾಬಾ ರಾಮದೇವ್ ಅವರ ಪ್ರಯತ್ನ ಕೂಡ ಶ್ಲಾಘನೀಯ. ಬನ್ನಿರಿ, ಎಲ್ಲರೂ ಯೋಗಾಭ್ಯಾಸವನ್ನು ಮಾಡೋಣ. ಅತಿಯಾದ ಭೋಗ ಹಾಗೂ ರೋಗ ರುಜಿನಗಳಿಂದ ವಿಮುಕ್ತಿ ಹೊಂದೋಣ.

ಲೇಖಕರು:
ಡಾ. ವಿನೋದ ಜಿ. ಕುಲಕರ್ಣಿ. ಎಂ.ಡಿ. ಡಿಪಿಎಂ (ಮುಂಬಯಿ), ಎಫ್ಆಯ್ಪಿಎಸ್.
ಖ್ಯಾತ ಹಿರಿಯ ಮನೋರೋಗ ತಜ್ಞರು,
ಮನ, ಮಿದುಳು, ಹಾಗೂ ನರರೋಗ ತಜ್ಞರು,
ಮದ್ಯ ವ್ಯಸನ ಚಿಕಿತ್ಸಕರು ಹಾಗೂ ಕೌಟುಂಬಿಕ ಮನೋವೈದ್ಯರು, ಹುಬ್ಬಳ್ಳಿ

English summary
Famous psychiatrist doctor Vinod G. Kulkarni from Hubballi firmly believes that everyone must practice yoga everyday for a healthy life. He says, though yoga will not cure all the serious ailments, regular practice can make our life easy and keeps us away from illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X