• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯೋಗದ ಬಗೆಗಿನ ಸತ್ಯ ಮತ್ತು ಅನಂತತೆಯ ಅನುಭವ

By ಶ್ರೀ ಶ್ರೀ ರವಿಶಂಕರ್ ಗುರೂಜಿ
|

ಯೋಗದಿಂದ ನಿಮಗೆ ಹಿತ, ಸುಖ ಉಂಟಾಗುತ್ತದೆ. ಆಸನ ಎಂದರೆ ಯಾವುದು ಸ್ಥಿರವಾದ, ಸುಖವಾದ ಭಂಗಿಯೊ ಅದು. ಯೋಗಾಸನಗಳನ್ನು ಮಾಡುವಾಗ ನೀವು ಹಿತವನ್ನು ಅನುಭವಿಸಬೇಕು. ಸುಖ ಎಂದರೇನು? ನೀವು ದೇಹವನ್ನು ಅನುಭವಿಸದಿದ್ದಾಗ ಸಿಗುವಂತದ್ದು.

ಯಾವುದೋ ಒಂದು ಅಸಾಮಾನ್ಯವಾದ ಭಂಗಿಯಲ್ಲಿ ಕುಳಿತಾಗ, ದೇಹದ ಆ ಭಾಗದ ಅರಿವು, ಅದರಿಂದ ಬರುತ್ತಿರುವ ನೋವಿನಿಂದಾಗಿ ಉಂಟಾಗುತ್ತದೆ. ಆಗ ನಿಮ್ಮ ಗಮನವೆಲ್ಲವೂ ಅದರಿಂದ ಬರುತ್ತಿರುವ ಅಹಿತವಾದ ಸಂವೇದನೆಯ ಮೇಲೇ ಇರುತ್ತದೆ. ನೀವು ಯಾವುದೇ ಆಸನವನ್ನು ಮಾಡಿದಾಗ ನಿಮ್ಮ ಅನುಭವಕ್ಕೆ ಬರುವ ಮೊದಲನೆಯ ವಿಷಯವೆಂದರೆ ಅಹಿತಕರವಾದ ಸಂವೇದನೆ. ಅದರ ಮನಸ್ಸನ್ನು ಆ ಸಂವೇದನೆಯಲ್ಲಿ ನಡೆಸಿಕೊಂಡು ಹೋದಾಗ, ಕೆಲವೇ ಕ್ಷಣಗಳಲ್ಲಿ ಆ ಅಹಿತಕರವಾದ ಸಂವೇದನೆಯು ಮಾಯವಾಗಿ, ದೇಹದ ಅನುಭವವೂ ಮಾಯವಾಗುವುದನ್ನು ಕಾಣಬಹುದು.

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

ವಿಸ್ತಾರವಾದಂತಹ ಅಥವಾ ಅನಂತತೆಯ ಅನುಭವವನ್ನು ಆಸನಗಳಿಂದ ಪಡೆಯುತ್ತೀರಿ. ಒಂದು ಆಸನವನ್ನು ಹೇಗೆ ಮಾಡಬೇಕು? ಒಂದು ಆಸನದ ಭಂಗಿಯಲ್ಲಿ ಹೊಕ್ಕಿ, ಪ್ರಯತ್ನವನ್ನು ಬಿಟ್ಟುಬಿಡಬೇಕು. ಆಗೇನಾಗುತ್ತದೆ? ನಿಮ್ಮಲ್ಲಿ ಅನಂತತೆಯು ನೆಲೆ ನಿಲ್ಲುತ್ತದೆ. ಆದ್ದರಿಂದ, ಕೇವಲ ಸರಿಯಾದ ಭಂಗಿಯ ಸ್ಥಿತಿಯಲ್ಲಿರುವುದು ಮಾತ್ರ ನಮ್ಮ ಗುರಿಯಾಗಿರದೆ, ನಮ್ಮಲ್ಲಿ ಅನಂತತೆಯನ್ನು ಅನುಭವಿಸಬೇಕೆಂಬ ಗುರಿಯಿಂದ ಆಸನಗಳನ್ನು ಮಾಡಬೇಕು. ಯೋಗಾಸನಗಳನ್ನು ಮಾಡುವಾಗ ಇದು ಬಲು ಮುಖ್ಯ.

ಯೋಗದ ಉದ್ದೇಶ ನಮ್ಮನ್ನು ಉತ್ತಮವಾದ ದೇಹದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಲ್ಲದೆ, ಒಳ್ಳೆಯ ಆಕಾರವನ್ನು ಹೊಂದುವುದಲ್ಲದೆ, ಕಾಲಾತೀತವಾದ ಅನಂತತೆಯನ್ನು ಅನುಭವಿಸುವುದೂ ಆಗಿದೆ. ಅಭ್ಯಾಸವನ್ನು ಮುಂದುವರಿಸುತ್ತಿದ್ದ ಹಾಗೆಯೇ ಇದರ ಅನುಭವ ನಮಗೆ ಆಗತೊಡಗುತ್ತದೆ. ಯೋಗದ ಮತ್ತೊಂದು ಲಕ್ಷಣನಿರೂಪಣೆ ಎಂದರೆ, ದೃಶ್ಯದಿಂದ ದ್ರಷ್ಟುವಿನೆಡೆಗೆ ಮರಳಿ ಬರುವುದು.

ಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನ

ಹೊರಗಿನಿಂದ ನಿಧಾನವಾಗಿ ಗಮನವನ್ನು ನಮ್ಮ ಆಂತರ್ಯದತ್ತ ತೆಗೆದುಕೊಂಡು ಹೋಗುವುದು. ಪರಿಸರದಿಂದ ಗಮನವನ್ನು ದೇಹದ ಮೇಲೆ ತರುವುದು. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ದೇಹವನ್ನೂ ದೃಶ್ಯವನ್ನಾಗಿ ನೋಡುವುದು ಮತ್ತು ಗಮನವನ್ನು ಮನಸ್ಸಿನ ಕಡೆಗೆ ತಿರುಗಿಸುವುದು. ಮನಸ್ಸಿನಲ್ಲಿ ಏಳುತ್ತಿರುವ ಆಲೋಚನೆಗಳನ್ನು ಗಮನಿಸಿದಾಗ, ಆಲೋಚನೆಗಳು, ಮನಸ್ಸೂ ದೃಶ್ಯವಾಗಿಬಿಡುತ್ತದೆ. ಮತ್ತಷ್ಟು ಆಳವಾಗಿ ಹೊಕ್ಕಿ. ದೃಶ್ಯದಿಂದ ದ್ರಷ್ಟುವಿನಿಡೆಗೆ, ಎಲ್ಲವನ್ನೂ ಕಾಣುತ್ತಿರುವ ದ್ರಷ್ಟುವಿನೆಡೆಗೆ ಪಯಣಿಸುವುದೇ ಯೋಗ.

ನೀವು ಸಂತೋಷವನ್ನು, ಆನಂದವನ್ನು, ಉನ್ಮಾದತೆಯನ್ನು ಜೀವನದಲ್ಲಿ ಅನುಭವಿಸಿದಾಗ, ತಿಳಿದೊ ಅಥವಾ ತಿಳಿದೆಯೊ ನೀವು ದ್ರಷ್ಟುವಿನ ಸ್ವಭಾವದಲ್ಲಿ ಹೊಕ್ಕುತ್ತಿರುವಿರಿ. ಇಲ್ಲವಾದರೆ ಇತರ ಸಮಯಗಳಲ್ಲಿ ನೀವು ಮನಸ್ಸಿನ ವಿವಿಧ ಚಟುವಟಿಕೆಗಳಲ್ಲಿ ಕಳೆದುಹೋಗುತ್ತೀರಿ. ಮನಸ್ಸಿನ ವಿವಿಧ ಚಟುವಟಿಕೆಗಳು ಯಾವುದು? ಮನಸ್ಸಿಗೆ ಐದು ಪ್ರವೃತ್ತಿಗಳಿವೆ. ಕೆಲವು ಸಮಸ್ಯೆಗಳು ಸಮಸ್ಯೆಯನ್ನು ತರುತ್ತವೆ, ಕೆಲವು ಸಮಸ್ಯೆಗಳನ್ನು ತರುವುದಿಲ್ಲ. ಅವುಗಳು:

1) ಪ್ರಮಾಣ : ಮನಸ್ಸು ಪ್ರಮಾಣವನ್ನು ಹುಡುಕುವುದರಲ್ಲೇ ನಿರತವಾಗಿರುತ್ತದೆ.

2) ವಿಪರ್ಯಯ : ಎಂದರೆ ತಪ್ಪಾದ ತಿಳಿವಳಿಕೆ.

3) ವಿಕಲ್ಪ : ಸತ್ಯಕ್ಕೆ ದೂರವಾದ, ವಾಸ್ತವವಾಗಿರದ ಕಾಲ್ಪನಿಕ ಮನೋಭಾವನೆಯನ್ನು ಹೊಂದಿರುವುದು.

4) ನಿದ್ದೆ

5) ಸ್ಮೃತಿ : ನೆನಪುಗಳಲ್ಲಿಯೇ ಜೀವಿಸುವುದು.

ಈ ಐದು ವೃತ್ತಿಗಳು ಮಾನವರ ಸಾಮರ್ಥ್ಯವನ್ನು ಕುಗ್ಗಿಸಿಬಿಡುತ್ತವೆ. ಅವುಗಳು ಇರುತ್ತವೆ, ಆದರೆ ಅವುಗಳ ಮೇಲೆ ನಿಯಂತ್ರಣವನ್ನು ಹೊಂದುವುದೇ ಯೋಗ. ಅವುಗಳು ಕುದುರೆಗಳಂತೆ. ಕುದುರೆಗಳ ಲಗಾಮು ನಿಮ್ಮ ಕೈಯಲ್ಲಿದ್ದರೆ, ಆಗ ಅವುಗಳಿಗೆ ನೀವು ಸರಿಯಾದ ದಿಕ್ಕನ್ನು ತೋರಿಸಬಹುದು. ಆದರೆ ನೀವು ಕುದುರೆಯ ಅಡಿಯಾಳಾಗಿಬಿಟ್ಟರೆ, ಆಗ ಅದರ ಮನಸ್ಸಿಗೆ ತೋಚಿದಂತೆ ನಿಮ್ಮನ್ನು ಎಳೆದೊಯ್ಯುತ್ತದೆ. ಆದ್ದರಿಂದ, ಯೋಗಃ ಚಿತ್ತವೃತ್ತಿ ನಿರೋಧಃ ಎಂದರು ಪತಂಜಲಿಯವರು.

ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ

ಯೋಗ ಎಂದರೆ ಈ ಐದು ಮನಸ್ಸಿನ ವೃತ್ತಿಗಳನ್ನು ನಿರೋಧಿಸುವುದು. ಒಂದು ಆಸನವನ್ನು ಮಾಡಿದಾಗ, ಆಸನದ ಗುರಿಯು ನಿಮ್ಮನ್ನು ಆ ಭಂಗಿಯಲ್ಲಿ ಸುಖವಾಗಿ ಇಡುವುದು, ನಂತರ ವಿಸ್ತಾರದ ಅನುಭವವನ್ನು ನಿಮಗೆ ತಂದುಕೊಡುವುದು. ಏನೋ ಒಂದನ್ನು ಅನುಭವಿಸಲು ಹಾತೊರೆಯುವುದಲ್ಲ. ಬಿಟ್ಟುಬಿಡುವುದರಿಂದ, ಏನನ್ನೂ ಮಾಡದಿರುವುದರಿಂದ ಅನುಭವಿಸುವುದು. ಆದ್ದರಿಂದ, ಯೋಗದ ಮೊದಲನೆಯ ಹೆಜ್ಜೆಯೆಂದರೆ ಬಿಟ್ಟುಬಿಡುವುದು, ವಿಶ್ರಮಿಸುವುದು. ಯೋಗದ ಕೊನೆಯ ಹಂತದಲ್ಲೂ ಎಲ್ಲವನ್ನೂ ಬಿಟ್ಟು ವಿಶ್ರಮಿಸಬೇಕು.

English summary
The Truth about Yoga. Yoga is that which gives you pleasure and comfort. When you practice an asana, the goal is to feel comfortable and then feel the expansion; not by wanting to feel, but by letting go; by not 'doing' something.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more