ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಎದೆಹಾಲಿನ ಸ್ವಗತ!

By Staff
|
Google Oneindia Kannada News

Breast feeding
ಮೊನ್ನೆ ಅನು ಮದ್ವೇಲಿ ಏನಾಯ್ತು ಗೊತ್ತಾ? ಸೀರೆ ಬದಲಾಯಿಸುತ್ತಿದ್ದ ಅಕ್ಕನ ಬಳಿ ಹೋಗಿ ಐದು ವರ್ಷದ ಶುಭ “ಅಮ್ಮ ಇನ್ಯಾವತ್ತೂ ನಾನು ಇಲ್ಲಿಂದ ಹಾಲು ಕುಡಿಯೋಕ್ಕಾಗಲ್ವಾ?" ಅಂತ ಕೇಳ್ದಾಗ ಯಾಕೋ ಗೊತ್ತಿಲ್ಲಾರೀ, ತುಂಬಾ ಭಾವುಕಳಾಗ್ಬಿಟ್ಟೆ. ನನ್ನ ಎದೆನೇ ಒದ್ದೆ ಆದ್ಹಾಗಾಯ್ತು. . . .

ಗಗನಸಖಿ

ನಂದಿನಿ ಬಂದಿದ್ದಳು. ಕಾಡು ಹರಟೆ ಮತ್ತಿನ್ನೇನು? ಸುಮಾರು ಹೊತ್ತು ಹಾಗೇ ಟೀವಿ ನೋಡ್ತಾ ಕೂತಿದ್ದ್ವಿ. ಹುಟ್ಟಿದ ಮಕ್ಕಳಿಗೆ ಎದೆ ಹಾಲು ಕುಡಿಸೋದನ್ನು ಪ್ರಮೋಟ್ ಮಾಡೋಕ್ಕೆ ಪ್ರಪಂಚ ಇಡೀ ಸಪ್ತಾಹ ಆಚರಿಸ್ತಿದೆ ಅಂತ ಹೇಳ್ತಾನೇ ಇದ್ದ್ವು ಎಲ್ಲಾ ಚ್ಯಾನಲ್ಗಳು.

ನಿಮಗೇ ಗೊತ್ತಲ್ಲ ನಮ್ಮ ನಂದಿನಿ ತನ್ನ ಬಗ್ಗೆ ಹೇಳಿಕೊಳ್ಳೊ ಯಾವ ಸಂದರ್ಭ ಸಿಕ್ಕ್ರೂ ಬಿಡೋದೇ ಇಲ್ಲ ಅಂತ! ತಪ್ಪೇನಿಲ್ಲ ಬಿಡಿ, ಅವಳು ಇರೋದು ಹಾಗೆ, ಮಾಡಿರೋದು ಹಾಗೆ. ಸ್ವಲ್ಪ ಬಡಬಡಾಂತ ಹೇಳಿಕ್ಕೊಳ್ಳ್ತಾಳೆ ಅಷ್ಟೆ. ಅವತ್ತೂ ಹಾಗೇ ಟೀವಿ ನೋಡ್ತಾ “ನಾನಂತೂ ಈಗಿನ ಕಾಲ್ದವಳಾಗಿಯೂ ನನ್ನ ಇಬ್ಬರು ಮಕ್ಕಳಿಗೂ ಮೂರ್ಮೂರ್ವರ್ಷ ಹಾಲು ಕುಡಿಸ್ದ್ದೇಪ್ಪಾ.. ." ಅಂತ ಏನೇನೋ ಹೇಳಿಕೊಂಡ್ಳು. ಹೊರಟ್ಹೋದ್ಲು. ನನಗೆ ಗೊತ್ತಿತ್ತು, ನಮ್ಮಜ್ಜಿ ಕೈ ಹೂಬತ್ತಿ ಹೊಸೀತಿದ್ರೂ ಕಿವಿಮಾತ್ರ ನಮ್ಮ ಮಾತಿಗೇ ಜೋತುಬಿದ್ದಿರತ್ತೆ ಅಂತ.

ಅವಳು ಹೊರಟ ತಕ್ಷಣ ನಮ್ಮಜ್ಜಿ ಅಂದೇಅಂದಳು “ಅಲ್ಲ ಕಣೇ ನೀವಾಡೋ ಮಾತು ಹೇಗಿತ್ತು ಅಂದ್ರೆ ಎಂಥ ಕಾಲದಲ್ಲೂ ನನ್ನ ಹೆಂಡ್ತಿ ಮಕ್ಕಳನ್ನ ನಾನೇ ಸಾಕ್ದೇ ಅನ್ನೋ ಹಾಗಿತ್ತು ನೋಡು.ನಮ್ಮ ಮಕ್ಕಳ್ಗೆ ನಾವು ಹಾಲು ಕುಡ್ಸೋದು ಒಂದು ದೊಡ್ಡ ಸಾಧನೇನಾ? ಅದನ್ನು ಬೀದ್ಬೀದೀಲಿ ಹೇಳ್ಕೊಂಡ್ತಿರಗ್ಗ್ಬೇಕಾ? ಅದೇನೋಪ್ಪಾ, ನಮಗಿಂತ ಹೆಚ್ಚು ಓದ್ತೀರಿ ಬರೀದೀರಿ ಅಂತೀರಾ ನೀವ್ಗಳು ಅದ್ಯಾವ ಪುರುಷಾಥಕ್ಕೋ ಕಾಣೆ. ಮಗುಗೆ ಹಾಲು ಕುಡಿಸ್ಬೇಕು ಅನ್ನೋದನ್ನೂ ಪೇಪರ್ನವ್ನು ಹೇಳಿಕೊಡ್ಬೇಕಾ ನಿಮಗೆ? ಬಿಟ್ಟ್ರೆ ಇನ್ನೂ ಏನೇನನ್ನು ಅವರಿವ್ರ ಹತ್ರ ಹೇಳಿಸ್ಕೋತೀರೋಮ್ಮ ಈಗಿನ ಕಾಲದ ಬಿನ್ನಾಣಗಿತ್ತೀರು.ನಾವುಗಳಂತು ಹೆರೋದೇ ನಮಗೋಸ್ಕರ ನಮ್ಮೆದೆ ಇರೋದೆ ನಮ್ಮ ಮಗೂಗ್ಹಾಲು ಕುಡಿಸಕ್ಕೋಸ್ಕರ ಅಂತಾನೇ ತಿಳಿದ್ಕೊಂಡಿದ್ದ್ವಿ. ಹೆತ್ತವನ್ನೆಲ್ಲಾ ಮೂರ್ನಾಲ್ಕ್ವರ್ಷ ಎದೆಗವ್ಚ್ಕೊಂಡಿದ್ದೇ ಎಪ್ಪತ್ತೈದೆಂಭತ್ತಾದ್ರೂ ಕಿವಿ ಕಣ್ಣು ಎಲ್ಲಾ ಗಟ್ಟ್ಯಾಗಿ ಇಟ್ಟ್ಕೊಂಡೇ ಇದ್ದೀವಿ. ನೀವು ಕಲಿತವ್ರು ಮಣ್ಣು ಮಸಿ ಅಂತ ಭಾಷಣ ಬಿಗೀತಾ ಮೂವತ್ತೈದು ನಲವತ್ತಕ್ಕೇ ಕ್ಯಾನ್ಸರ್ರೂ ಪಾನ್ಸರ್ರೂ ಅಂತ ಎದೆನೇ ಕುಯ್ಯಿಸ್ಕೋತೀರಾ, ತಿಂಗ್ಳಿಡೀ ಹೊಟ್ಟೆ ಹಿಡ್ಕೊಂಡು ಗರ್ಭಕೋಶಾನೇ ಕತ್ತರಿಸ್ಕೊಳ್ಳ್ತೀರಾ. . . . .ಎಷ್ಟೇ ಆದ್ರೂ ನೀವುಗಳು ಓದಿದವರು ತಾನೆ? ಈ ಹಳೇ ಮುದುಕಿಗೇನ್ಗೊತ್ತಾಗುತ್ತೆ ಹೇಳು. . . . . ."

ಹೂಂ, ಅಜ್ಜಿ ಮಾತಿನ ಮಳೆ ನಿಲ್ಲ್ತು ಅಂದ್ಕೊಂಡೆ. ಅಯ್ಯೋ, ಇಲ್ಲ ಅದೊಂತರಹಾ ಸೈಕ್ಲೋನ್ ತರಹ.

ಕೈಯ್ಯಿ ತಿರುಗಿಸುತ್ತಾ ಅಜ್ಜಿ ಮತ್ತೊಮ್ಮೆ ಬಾಯಿ ಬಿಚ್ಚಿದಳು “ ನಿಮಗೆಲ್ಲಾ ಈಗಿನ ಕಾಲದಲ್ಲಿ ಆಗೋದೇ ಒಂದೋ ಇಲ್ಲ ಅರ್ಧಾನೋ ಮಕ್ಕಳು. ಅವಕ್ಕ್ಹಾಲು ಕೊಡೋಕ್ಕೂ ಜಿಪುಣ್ತನ ಮಾಡ್ತೀರ. ನಮ್ಮ ಕಾಲದಲ್ಲಿ ತುಂಬಿದ ಸಂಸಾರ. ಒಂದ್ಕೋಣೆಲೀ ತಂಗಿ ಮದುವೆಗೆ ದೇವರ ಸಮಾರಾಧನೆ ನಡೀತಿದ್ದ್ರೆ ಇನ್ನೊಂದ್ರಲ್ಲಿ ಅಕ್ಕನ ಬಾಣಂತನ ನಡೀತಿರ್ತಿತ್ತು. ಅತ್ತಿಗೆ ಹತ್ರ ಹಾಲು ಕಡಿಮೆ ಆದ್ರೆ ಮಕ್ಕಳು ನಾದಿನಿ ಎದೆ ಚೀಪ್ತಾನಿಂತಿರ್ತ್ತಿದ್ವು. ನಾನೂ ಮೂರ್ವರ್ಷ ನಮ್ಮ ಚಿಕ್ಕಿ ಸೋದರತ್ತೆ ಹಾಲೇ ಅಂತೆ ಕುಡಿದಿದ್ದು. ಹಾಗಂತ ಅನಂತು ಮಾವ ಯಾವಾಗ್ಲೂ ಹೇಳ್ತಿದ್ದ. ನಿಮೆಗೆಲ್ಲಾ ಅಯ್ಯೋ ಅಂದ್ರೆ ಮನೇಲೀ ಮರುಗೋಕ್ಕೆ ಒಂದು ಜೀವ ಜೊತೆಗಿರೋಲ್ಲ. ಅದಕ್ಕೆ ಎದೆ ಹಾಲಿಗೂ ಅದೇನೋ ಬ್ಯಾಂಕು ಪಾಂಕೂ ಅಂತ ಮಾಡ್ತೀರ. ಅದೂ ಸರಿ ನನಗೇನು ಗೊತ್ತಾಗುತ್ತೆ ಹೇಳು ನಾನೇನು ನಿಮ್ಮಷ್ಟು ಓದಿದ್ದೀನಾ?" ಅಜ್ಜಿ ಗೊಣಗಿಕೊಂಡೇ ಒಳಗೆದ್ದ್ಹೋದ್ರು. ನಾನಂತು ಇದ್ಯಾವುದು ನನಗೆ ಸಂಬಂಧಾನೇ ಪಟ್ಟಿಲ್ಲ ಅನ್ನುವ ಹಾಗೆ ಟೀವಿ ನೋಡ್ತಾಯಿದ್ದೆ.

ಮೊನ್ನೆ ಅನು ಮದ್ವೇಲಿ ಏನಾಯ್ತು ಗೊತ್ತಾ? ಸೀರೆ ಬದಲಾಯ್ಸ್ತ್ತಿದ್ದ ಅಕ್ಕನ ಬಳಿ ಹೋಗಿ ಐದು ವರ್ಷದ ಶುಭ “ಅಮ್ಮ ಇನ್ನ್ಯಾವತ್ತೂ ನಾನು ಇಲ್ಲಿಂದ ಹಾಲು ಕುಡಿಯೋಕ್ಕಾಗಲ್ವಾ?" ಅಂತ ಕೇಳ್ದಾಗ ಯಾಕೋ ಗೊತ್ತಿಲ್ಲಾರೀ, ತುಂಬಾ ಭಾವುಕಳಾಗ್ಬಿಟ್ಟೆ. ನನ್ನ ಎದೆನೇ ಒದ್ದೆ ಆದ್ಹಾಗಾಯ್ತು. ಎದೆ ಹಾಲು ಕುಡಿಸಕ್ಕೋಸ್ಕರನಾದ್ರೂ ಇನ್ನೂ ಹತ್ತು ಮಕ್ಕಳು ಮಾಡಿಕೊಳ್ಳ್ಬೇಕು ಅನ್ನ್ಸಿತು! ಓಹ್, ಏನು ಹುಚ್ಚುತನ ಅಲ್ಲ್ವಾ? ಹೀಗೇ ಏನೇನೋ ಪೆದ್ದು ಪೆದ್ದು ಆಲೋಚನೆಗಳು ಬಂದಾಗ ನಮ್ಮಜ್ಜಿ ನನ್ನ ಮನಸ್ಸಿನ ಪಡಸಾಲೆಯಲ್ಲಿ ಕೂತು ಹೂಬತ್ತಿ ಹೊಸಿತಾನೇ ಇರ್ತಾಳೆ. . . . . .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X