ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"I am a virgin! Do you love me?!"

By ಗಗನಸಖಿ
|
Google Oneindia Kannada News

I am a virgin! Do you love me?
ವಾಸ್ತವದಲ್ಲಿ ಪ್ರತೀ ಲಿಂಗವೂ ಅಪೂರ್ಣ. ಪರಿಪೂರ್ಣತೆಯೆಡೆಗೆ ನಮಗಿರುವ ಕಾತರತೆಯಿಂದಲೇ ಆಕರ್ಷಿತರಾಗುವುದು. ಒಬ್ಬರನೊಬ್ಬರು ಓಲೈಸಲು ಪ್ರಯತ್ನಿಸುವುದು. ಪರಸ್ಪರ ಅರ್ಥ ಮಾಡಿಸಲು ದುಂಬಾಲು ಬೀಳುವುದು. ಎದುರಿನವರ ಸಮ್ಮತಿಗಾಗಿ ನಿದ್ದೆಗೆಡಿಸಿಕೊಳ್ಳುವುದು. ಇದೇ ಗೀಳು ಜೀವನ ಪರ್ಯಂತ ನಮ್ಮನ್ನು ಕನ್ಯಾಕುಮಾರಿಯರಾಗಿರಲು ಪ್ರೇರೇಪಿಸುವುದು ಹೌದಾ?!

ಚಂದಾಮಾಮದ ಕಥೆ ಹೇಳಿದ್ರೆ “ಅಡುಗೂಲಜ್ಜಿ ಆರು ತಿಂಗಳು ರಜೆ ತೊಗೊಂಡ್ಹೋಗು" ಅಂತೀರ. ಹ್ಯಾರಿ ಪಾಟರ್ ಅಂದ್ರೆ ಮಡಿ ಮಡಿ ಅಂತ ಅಡಿಗಡಿಗ್ಹಾರ್ತೀರ. ತೆಪ್ಪಗಿದ್ರೆ 'ಮಾತಾಡ್ ಮಾತಾಡ್ ಮಲ್ಲಿಗೆ" ಅಂತ ಜಡೆ ಜಗ್ಗ್ತೀರ. ಇದೇ confusionನಲ್ಲಿ ನನ್ನ ಗೆಳೆಯನ ಹತ್ರ ಹೋದ್ರೆ ಅವನು 'ನಿನಗೆ ಹಂಸ ಕ್ಷೀರ ನ್ಯಾಯದ ಕಥೆ ಗೊತ್ತಲ್ಲಾ?" ಅಂತ ಮತ್ತೆ ನನ್ನನ್ನು ಕಥೆ ಕಡೆಗೇ ಕರೆದ್ಕ್ಕೊಂಡ್ಹೋಗ್ತಾನೆ. ಏನ್ಮಾಡ್ಲಿ? ಅದಕ್ಕೆ ಈ ಸರ್ತಿನೂ ನಿಮಗಾಗಿ ಮತ್ತೆರಡು ಮೇಲೊಂದು ಕೊಸರು ಕಥೆಗಳನ್ನೇ ತಂದಿದ್ದೀನಿ.

ಪಾರ್ವತಿ ಅಮ್ಮ ಹಿಮಾಲಯದ ಮೇಲೆ ತಪ್ಪಸ್ಸು ಮಾಡಿದಳು. ಶಿವಪ್ಪ ಪ್ರತ್ಯಕ್ಷ ಆದ. ಮದುವೆಗೆ ಒಪ್ಪಿದ. ಮಹೂರ್ತ ಗೊತ್ತು ಪಡಿಸಿದ. ಸರಿ ಪಾರ್ವತಿ ಅಮ್ಮ ಭಾರತ ಶಿರದಿಂದ ಹಾರಿ ಪಾದಕ್ಕೆ ಬಂದು ಮನೋಹರವಾದ ಚಪ್ಪರದಡಿಯಲ್ಲಿ ತನ್ನನ್ನು ತಾನು ಸಿಂಗರಿಸಿಕೊಂಡು ವರನ ಆಗಮನಕ್ಕೆ ಕಾಯುತ್ತಿದ್ದಳು. ಯಥಾ ಪ್ರಕಾರ ಶಿವಪ್ಪನಿಗೆ ಲೋಕ ಕಲ್ಯಾಣದಿಂದ ಬಿಡುವೆಲ್ಲಿ? ಅಸುರ ಸಂಹಾರ ಮಾಡ್ತಾ ಮಾಡ್ತಾ ಮದುವೆ ಮಹೂರ್ತಕ್ಕೆ ತಡವಾಗಿ ಬಂದ! ಅಮ್ಮನವರ ಸಿಟ್ಟು ಕೇಳ್ಬೇಕಾ? ಒಡವೆ ವಸ್ತ್ರ ಎಲ್ಲಾ ಕಿತ್ತು ಬಿಸ್ಹಾಕಿ 'ನಾನಿನ್ನು ಇಲ್ಲೇ ಕನ್ಯಾಕುಮಾರಿಯಾಗಿಯೇ ಇದ್ದ್ಬಿಡುತ್ತೇನೆ" ಅಂತ ಶಪಥ ಮಾಡಿ ಕಲ್ಲಾಗಿ ಹೋದ್ಳಂತೆ ಕನ್ಯಾಕುಮಾರಿಯಲ್ಲಿ. ಇದು ಅಜ್ಜಿ ಕೈ ತುತ್ತು ಹಾಕುತ್ತಾ ಹೇಳುತ್ತಿದ್ದ ಕಥೆ! ಈಗ ಅಜ್ಜಿನೂ ಇಲ್ಲ, ಕೈಯ್ಯೂ ಇಲ್ಲ, ತುತ್ತಂತೂ ಇಲ್ಲವೇ ಇಲ್ಲ! ಆದರೆ ಕಥೆ ಮಾತ್ರ ಮತ್ತೊಂದು versionನಲ್ಲಿ ಮುಂದುವರಿತಾನೆ ಇದೆ. ಅದ್ಹೇಗೊತ್ತಾ?

ಒಬ್ಬಾಕೆ, ಎರಡು ಮಕ್ಕಳ ತಾಯಿ. ತನ್ನ ಮದುವೆಯ ಇಪ್ಪತ್ತೈದನೆಯ ವಾರ್ಷಿಕೋತ್ಸವಕ್ಕೆ ಗಂಡನಿಗೇನಾದ್ರು ಸ್ಪೆಷಲ್ ಉಡುಗೊರೆ ಕೊಡ್ಬೇಕು ಅಂತಂದ್ಕೊಂಡ್ಳು. ಏನು ಕೊಡೋದು? ಬಟ್ಟೆ ಬರೆ ರಾಶಿ ರಾಶಿ ಇದೆ. ಪೆನ್ನು ಪರ್ಫ್ಯೂಮ್ ವಾಕರಿಕೆ ಬರೋಷ್ಟಿದೆ. ಲಂಚು ಡಿನ್ನರು ಸಾಕಪ್ಪಾ ಸಾಕು. ಮತ್ತೇನು? ಮತ್ತೇನು? ಅಬ್ಬ! ಅಂತೂ ಚಕ್ ಅಂತ idea ಹೊಳೇದೇ ಬಿಟ್ಟಿತು. ಏನು ಗೊತ್ತಾ? ಪತಿದೇವರಿಗೆ ತನ್ನ 'ಕನ್ಯತ್ವವನ್ನು" ಪುನರುಡುಗೊರೆ ಕೊಡೋದು ಅಂತ! ಹೇಗಿದೆ ಐಡಿಯಾ? ಅದಕ್ಕವಳು Hymenoplasty ಅಂತ ಶಸ್ತ್ರ ಚಿಕಿತ್ಸೆ ಮಾಡಿಸ್ಕೊಂಡ್ಳಂತೆ. ಇದಲ್ಲ್ವಾ ನಿಜವಾದ ಪತಿ ಭಕ್ತಿ, ಸೇವೆ ಅಂದ್ರೆ?!

ಇದೇನು ಹುಚ್ಚೋ ಬೆಪ್ಪೋ ಶಿವಲೀಲೇನೋ ಅಂತ ಅನ್ನಿಸ್ತಿದ್ಯಾ? ಹೆಚ್.ಐ.ವಿ ವೈರಾಣು ಹುಟ್ಟಿದ ದಿನಾಂಕ ದಾಖಲು ಮಾಡಿದ್ದೀವಿ. ಪ್ಲೇಗ್ ಮಾರಿ ಸತ್ತ ದಿನ ಗುರ್ತು ಮಾಡಿದ್ದೀವಿ. ಆದರೆ, ಗಂಡನ್ನು ಪ್ಲೀಸ್ ಮಾಡುವ ಒಂದೇ ಕಾರಣಕ್ಕೆ ಕನ್ಯಾಕುಮಾರಿಯಾಗಿ recycle ಆಗುತ್ತಿರಬೇಕು ಅನ್ನುವ ನಮ್ಮ ಮನೋಭಾವ ಒಂದು ಪಿಡುಗಿನಂತೆ ನಮ್ಮನ್ನು ಯಾವಾಗ ಆವರಿಸಿಕೊಳ್ಳ್ತೋ ಗೊತ್ತೇ ಆಗ್ಲಿಲ್ಲ ನೋಡಿ. ಮೈಕ್ರೋಸ್ಕೋಪ್‍ಗೂ ಲ್ಯಾಪ್ರೋಸ್ಕೋಪಿ ಮಾಡಿದ್ರೆ ಮಾತ್ರ ಗೊತ್ತಾಗುವಷ್ಟು ಚಿಕ್ಕದಾದ, ಕೆಲಸಕ್ಕೆ ಬಾರದ ಅಂಗದಲ್ಲಿ ನಮ್ಮ ಚಾರಿತ್ರ್ಯ, ಆಲೋಚನಾ ವೈಖರಿ, ಬುದ್ಧಿಮತ್ತೆ, ಮಾನವೀಯತೆ, ಭಾವನೆ, basic instincts ಎಲ್ಲಾ ಅಡಗಿದೆ ಅನ್ನೋದು ನಿಜ ಆಗಿದ್ರೆ ಹರಪ್ಪ ಮೊಹೆಂಜೋದಾರದಿಂದ ಈ ಪಾಪಿ ಪರದೇಶಿ ನಾಗರಿಕತೆ ಅನ್ನುವುದು ಇಷ್ಟು ದೂರ ನಡ್ಕೋಂಡ್ಬರಬೇಕಿತ್ತಾ? ಹುಲ್ಲುಹಾಸಿನ ಮೇಲೆ ಬರಿಗಾಲಲ್ಲಿ ನಡೆದಾಡಿದ್ರೆ ದೃಷ್ಟಿ ಕೀಳುವ ಕಣ್ಣಿನ ಪೊರೆಯನ್ನೇ ಕಳಚಿಬಿಡಬಹುದಾದರೆ; ಈಜು ಹೊಡೆದು, ಸೈಕಲ್ ತುಳಿದು, ಬೆಟ್ಟ ಹತ್ತಿ, ಗುಡ್ದ ಇಳಿದ್ರೆ ಕರಿಮಣಿಗೆ ಕತ್ತು ಕೊಡದೆ ಕನ್ಯಾಪೊರೆಯನ್ನು ಕಳಚಿಕೊಳ್ಳೋದು ದೊಡ್ದ ಮಾತೇನು?

ಅಂದ ಹಾಗೆ, ಕಥೆ ಮೇಲೊಂದು ಕೊಸರು ಅಂದ್ನಲ್ಲಾ ನಾನು ಅದೇನು ಗೊತ್ತಾ? ನಮ್ಮ್ಪಕ್ಕದ್ಮನೆ ಪುರುಷೋತ್ತಮ ಮದುವ್ಯಾದ್ಮಾರ್ನೆ ದಿನಾನೇ divorceಗೆ ಹಾಕ್ಕೊಂಡಿದ್ದಾನೆ. ಕಾರಣ ನಿಮಗೆ ನಾನು ಬಿಡಿಸಿಹೇಳ್ಬೇಕಾ? ಅಯ್ಯೋ, ತುಂಬಾ ಸಿಂಪಲ್! ಅವನಿಗೆ ಹೆಂಡತಿಯ ನಡತೆ ಮೇಲೆ ಅನುಮಾನಾನೋ ಅನುಮಾನ! ಜೊತೆಗೆ ಅವಳು ಅಂಗದಿಂದ ಕನ್ಯೆ ಆಗಿಲ್ಲದಿದ್ದರೆ ಇವನ ದೈಹಿಕ ಸುಖಕ್ಕೆ ಏನೋ ಅಡ್ಡಿ, ಅತೃಪ್ತಿ ಅನ್ನುವ ಹುಂಬ ನಂಬಿಕೆ ಬೇರೆ! ಮದುವೆ ರಾತ್ರಿ ಅವನ ಮನಸ್ಸಿಗೆ ಸಂತೋಷ, ಸ್ಪಂದನ ಬೇಕಿತ್ತೋ? ದೇಹಕ್ಕೆ ಸುಖ, ಸಾಂತ್ವನ ಬೇಕಿತ್ತೋ? ಇಲ್ಲ ಅವರಮ್ಮ ಮಂಚದ ಮೇಲೆ ಹಾಸಿದ್ದ ಬಿಳಿ ಚಾದರದ ತುಂಬಾ ಕೆಂಪು ಹಚ್ಚೆ ಬೇಕಿತ್ತೋ? ನನಗಂತೂ ಇದು ಅರ್ಥವಾಗದ್ದೇ ಬಿಡಿ. ನಾನೇನಾದ್ರು ಇದರ ಪರ ಮಾತಾಡಿದ್ರೆ ಕೈ-ಕೈ ಮಿಲಾಯಿಸುವವರೂ ನೀವೇ. ವಿರೋಧ ಹೇಳಿದ್ರೆ ಗದರಿಸುವವರೂ ನೀವೇ. ಕನ್ಫ್ಯೂಷನ್ನೋ ಕನ್ಫ್ಯೂಷನ್ನು!

ನೀವು ಯಾವುದಕ್ಕೇ vote ಹಾಕಿ ನಾನಂತೂ ಈ ಉಸಿರಿರುವವರೆಗೂ virgin! ಬಿ.ಸರೋಜಾದೇವಿಯ ಉದ್ದ ಜಡೆ ನೋಟದಿಂದ ಸಂಜನಗಾಂಧಿಯ ಸ್ವಿಂ ಸೂಟ್ ನೋಟದವರೆಗೂ ಈ ಮನಸ್ಸು ಕವಡೆ ಹಾಕ್ಕೊಂಡು ಕುಣಿಯುತ್ತೆ. ನನ್ನ ಮನಸ್ಸಿನ virginity ಕಳೆದುಹೋಗದಷ್ಟು solid ಆಗಿಬಿಟ್ಟಿದೆ. ಅದಕ್ಕೇ ಹೇಳಿದ್ದು ನಾನಿನ್ನೂ virgin ಅಂತ!

English summary
Thanks to this cosmetic surgery now women now can gift virginity to their partners! : Hymenoplasty is a surgical procedure designed to repair and reconstruct the thin, ring-like skin membrane partially covering the opening of the vagina. Gagana explores emotional membranes of a married women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X