ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೇನ್ ಕಂಡಿ? ಜೋಗದ್ಗುಂಡಿ; ಏನೇನ್ ತಿಂಡಿ? ತಂಬಿಟ್ಟುಂಡಿ!

By Staff
|
Google Oneindia Kannada News


ಮುಂಗಾರುಮಳೆ ಸಿನೆಮಾ ಪ್ರಭಾವವೋ, ಅದಕ್ಕೆ ತಕ್ಕಂತೆ ಮುಂಗಾರು ಮಳೆ ಅತಿವೃಷ್ಟಿಯೆನಿಸುವಂತೆಯೇ ಸುರಿದು ನದಿಗಳೆಲ್ಲ ಉಕ್ಕಿಹರಿದಿದ್ದರಿಂದಲೋ, ಅಥವಾ ಮಾಧ್ಯಮಗಳಲ್ಲಿ ಜೋಗ ಜಲಪಾತ ವೈಭವದ ಸುಂದರ ಸಚಿತ್ರವರದಿಗಳು ಪ್ರಕಟವಾಗಿದ್ದರಿಂದಲೋ ಅಂತೂ ಈವರ್ಷ ಜೋಗದಲ್ಲಿ ನೀರು ಹರಿದುದಕ್ಕಿಂತಲೂ ಹೆಚ್ಚಾಗಿ ಅಲ್ಲಿಗೆ ಪ್ರವಾಸಿಗರು ಹರಿದುಬಂದಿರಬಹುದು.

  • ಶ್ರೀವತ್ಸ ಜೋಶಿ

Memorable trip to Jog Falls ಆಷಾಢದಲ್ಲಿ ಅಂಧಕಾರ ಕವಿಯುವ ಕಾರ್ಮೋಡ, ಶ್ರಾವಣದಲ್ಲಿ ಸತತವಾಗಿ ಸುರಿಯುವ ಸೋನೆಮಳೆ, ಯಾವಾಗ ಮಳೆಬಂದೀತೋ ಎನ್ನುವುದಕ್ಕಿಂತಲೂ ಯಾವಾಗ ಮಳೆ ಬಿಟ್ಟೀತೋ ಎಂದು inverse ಚಾತಕಪಕ್ಷಿಯಂತೆ ಕಾಯುವ ಕಾಲ, ಮುಸಲಧಾರೆಯ ಮಳೆ ನಿಂತಮೇಲೆ ಎಲ್ಲಿಗಾದರೂ ಹೊರಡುವುದಿದ್ದರೂ ಕೈಯಲ್ಲೊಂದು ಕೊಡೆಯಂತೂ ಬೇಕೇಬೇಕು... ಈಪರಿಯ ಜುಲೈ-ಆಗಸ್ಟ್ season, ದೂರದ ಅಮೆರಿಕದಿಂದ ವರ್ಷಗಳಿಗೊಮ್ಮೆ ಕೆಲವೇ ದಿನಗಳ ಮಟ್ಟಿಗೆ ರಜೆಹಾಕಿ ನಮ್ಮೂರಿಗೆ ಹೋಗಿಬರುವುದಕ್ಕೆ ಖಂಡಿತಾ ಪ್ರಶಸ್ತವಲ್ಲವಿರಬಹುದು; ಆದರೆ ಪ್ರಶಸ್ತ' ಎನ್ನುವುದು ಎಷ್ಟೆಂದರೂ ಸಾಪೇಕ್ಷಪದ. ಇದ್ದುದನ್ನೇ ಪ್ರಶಸ್ತವಾಗಿಸಿಕೊಳ್ಳುವ ಮನಸ್ಸಿದ್ದರೆ, ಅದರಲ್ಲೂ ನಮ್ಮದೇ ಊರೆಂದ ಮೇಲೆ, ಭೇಟಿಕೊಡುವುದಕ್ಕೆ ಯಾವ ಕಾಲವಾದರೂ ಪ್ರಶಸ್ತವೇ! ಮತ್ತೆ, ನಿತ್ಯೋತ್ಸವ' ಎಂದು ಕವಿ ಬಣ್ಣಿಸಿರುವುದು ನಿತ್ಯವೂ ಉತ್ಸವಕಳೆಯಿಂದ ಕಂಗೊಳಿಸುವ ಆ ಸುಂದರ ಸ್ಥಳಗಳನ್ನು ನೋಡಿಯೇ ತಾನೆ? ಉತ್ಸವ ನಡೆಯುವ ಊರಿಗೆ ಹೋಗಲು ಉತ್ಸಾಹವಿಲ್ಲವಾಗುವುದಾದರೂ ಹೇಗೆ?

ಮಲೆನಾಡು-ಕರಾವಳಿ ಪರಿಸರಕ್ಕೆ, ಅಲ್ಲಿಯ ಮನೆ-ಮನೆತನಗಳಿಗೆ, ಮಳೆಗಾಲದಲ್ಲೂ ಒಂಥರದ ವಿಶೇಷ ಕಳೆಯಿರುತ್ತದೆ; ಹೊರಗೆ ಮಳೆಸುರಿಯುತ್ತಿದ್ದರೂ ಮನೆಯಲ್ಲಿ ಬೆಚ್ಚನೆಯ ಸ್ವಾಗತಾಥಿತ್ಯಗಳನ್ನು ಹಿತಮಿತವಾಗಿ ಒದಗಿಸುವ ತಾಕತ್ತಿರುತ್ತದೆ. ಈ ಮಾತನ್ನು ನೀವು ಆ ಪ್ರದೇಶದವರಾದರೆ ಪೂರ್ಣವಾಗಿಯೂ, ಇತರೆಡೆಯವರಾದರೆ ಅರೆಮನಸ್ಸಿನಿಂದಾದರೂ ಒಪ್ಪಿಯೇ ಒಪ್ಪುತ್ತೀರಿ. ಬೇಸಿಗೆಯಲ್ಲಿ ಮುಂಜಿ-ಮದುವೆ ಮತ್ತಿತರ ಸಮಾರಂಭಗಳ ಗೌಜಿಗದ್ದಲಗಳ ನಂತರ ಇದೀಗ ಒಂದು ರೀತಿಯ ನಿಶ್ಚೇಷ್ಟತೆಯಿದ್ದರೂ, ಒಗೆದ ಬಟ್ಟೆಗಳು ಒಣಗಲಿಕ್ಕೇ ಮೂರು ದಿನ ಬೇಕಾಗುವಷ್ಟು ಥಂಡಿ ವಾತಾವರಣದಲ್ಲಿದ್ದರೂ, ಮಲೆನಾಡಿನ ಮನೆಯಲ್ಲಿ ಮಳೆ ನೋಡುತ್ತ ಕುರುಕಲು ತಿಂಡಿ ಮೆಲ್ಲುತ್ತ ಜೀರುಂಡೆ-ಕಪ್ಪೆ-ಹುಳಹುಪ್ಪಟೆಗಳ ಕಲರವವನ್ನಾಲಿಸುತ್ತ ಮನಸ್ಸಿಗಾಗುವ ಹಿತಾನುಭವ ಇದೆಯಲ್ಲ, ಬೆಂಗಳೂರಿನ ಬಿಗ್‍ಬಜಾರ್‌ನಲ್ಲಾಗಲೀ ಫೋರಮ್ ಮಾಲ್‍ನಲ್ಲಾಗಲೀ ಅದು ಎಷ್ಟು ದುಡ್ಡುಕೊಟ್ಟರೂ ಸಿಗಲಾರದು!

ಇನ್ನು ತಿಂಡಿ-ತಿನಿಸುಗಳ ವಿಚಾರಕ್ಕೆ ಬಂದರೂ, ಬೇಸಿಗೆಯಲ್ಲಿ ಹಪ್ಪಳ-ಮಾಂಬಳ ಹಾಕಿ ಅಳಿದುಳಿದ ಹಲಸು-ಮಾವು, ತುಂಬಿಹರಿವ ಹಳ್ಳಕೊಳ್ಳಗಳ ಬದಿಯ ಮೆಳೆಗಳಲ್ಲಿ ಆಗಷ್ಟೇ ಹುಟ್ಟಿರುವ ಎಳೆಬಿದಿರು (ಕಣಿಲೆ ಅಥವಾ ಕಳಲೆ), ಮನೆ ಹಿತ್ತಲಲ್ಲೇ ದಷ್ಟಪುಷ್ಟವಾಗಿ ಬೆಳೆದಿರುವ ಕೆಸುವಿನೆಲೆ, ಅರಸಿನದೆಲೆ ಮುಂತಾದುವು ಪತ್ರೊಡೆ ಕಡಬು ಪಾತ್ತೊಳಿಯಂಥ ಮಳೆಗಾಲ ಸ್ಪೆಷಲ್ ಖಾದ್ಯಗಳನ್ನು ಮಾಡಿ ಸವಿಯಿರಿ, ನಮ್ಮನ್ನು ಸದುಪಯೋಗಪಡಿಸಿ ಎಂದು ಅಂಗಲಾಚಿ ಬೇಡುವಂತಿರುವ ಅಲ್ಲಿನ ಮಳೆಗಾಲದ ಮಜವೇ ಬೇರೆ!

ಪಶ್ಚಿಮಘಟ್ಟಗಳ ತಪ್ಪಲಲ್ಲಿರುವ ನಮ್ಮೂರಿನ ನಮ್ಮ ಮನೆಯ ಮಳೆಗಾಲದ ಹಿತಾನುಭವವನ್ನು, ರಸದೌತಣವನ್ನು ಮನಃಪೂರ್ತಿ ಮೊಗೆದುಕೊಂಡ ಜತೆಯಲ್ಲೇ ಈ ಬಾರಿಯ ಪ್ರವಾಸದಲ್ಲಿ ನನಗೆ ಮಹದಾನಂದವನ್ನು ಕೊಟ್ಟದ್ದೆಂದರೆ ಜೋಗ ವೈಭೋಗ ದರ್ಶನ. ಜತೆಯಲ್ಲೇ ಜೋಗಪ್ರವಾಸದ ಅವಿಸ್ಮರಣೀಯ ಅನುಭವಕ್ಕೆ ಆತ್ಮೀಯತೆಯ ರಂಗುತಂದ, ಆ ದಿನವನ್ನು ಒಂದು eventful day ಆಗಿಸಿದ ನನ್ನ ಇ-ಮಿತ್ರವರ್ಗದ ನಿರ್ವ್ಯಾಜ ಸ್ನೇಹದ ನಿದರ್ಶನ. ಅದುವರೆಗೆ ಬರೀ ಇಮೈಲ್ ಮೂಲಕವಷ್ಟೇ ಪರಿಚಯವಿದ್ದ, ನೋಡಿ ಮಾತಾಡಿ ಭೇಟಿಯಾಗಿರದವರ ಮುಖಾಮುಖಿಯಾದ ಸುಂದರಕ್ಷಣ. ಅವತ್ತಿನ ನನ್ನ ಸಂತೋಷದ ಸ್ಮರಣೆಯಾಗಿ, ಸ್ನೇಹಸೇತುವಿಗೆ ಸಮರ್ಪಣೆಯಾಗಿ ಈ ಒಂದು ಲೇಖನ.

Memorable trip to Jog Fallsಮುಂಗಾರುಮಳೆ ಸಿನೆಮಾ ಪ್ರಭಾವವೋ, ಅದಕ್ಕೆ ತಕ್ಕಂತೆ ಮುಂಗಾರು ಮಳೆ ಅತಿವೃಷ್ಟಿಯೆನಿಸುವಂತೆಯೇ ಸುರಿದು ನದಿಗಳೆಲ್ಲ ಉಕ್ಕಿಹರಿದಿದ್ದರಿಂದಲೋ, ಅಥವಾ ಮಾಧ್ಯಮಗಳಲ್ಲಿ ಜೋಗ ಜಲಪಾತ ವೈಭವದ ಸುಂದರ ಸಚಿತ್ರವರದಿಗಳು ಪ್ರಕಟವಾಗಿದ್ದರಿಂದಲೋ ಅಂತೂ ಈವರ್ಷ ಜೋಗದಲ್ಲಿ ನೀರು ಹರಿದುದಕ್ಕಿಂತಲೂ ಹೆಚ್ಚಾಗಿ ಅಲ್ಲಿಗೆ ಪ್ರವಾಸಿಗರು ಹರಿದುಬಂದಿರಬಹುದು. ಜೂನ್-ಜುಲೈ ತಿಂಗಳಲ್ಲೇ ಜೋಗದ ಚಿತ್ರಗಳು ನನ್ನ ಇಮೈಲ್ ಇನ್‌ಬಾಕ್ಸ್‌ನಲ್ಲೂ ಜಲಪಾತದಂತೆ ಧುಮುಕಲಾರಂಭಿಸಿದಾಗಲೇ ನಾನು ಈಸಲದ ಭಾರತಪ್ರವಾಸದಲ್ಲಿ ಜೋಗಕ್ಕೆ ಭೇಟಿಯನ್ನೂ ಸೇರಿಸಬೇಕು ಅಂದುಕೊಂಡಿದ್ದೆ.

ಮೂರನೇ ತರಗತಿಯ ಸಮಾಜಪರಿಚಯ ಪಾಠದಲ್ಲಿ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪೆ ಬಳಿ ಶರಾವತಿ ನದಿಯು ಸುಮಾರು ಸಾವಿರ ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ... ರಾಜ, ರಾಣಿ, ರೋರರ್, ರಾಕೆಟ್ ಎಂಬ ಹೆಸರಿನ ನಾಲ್ಕು ಕವಲುಗಳ ಈ ಸುಂದರ ಜಲಪಾತವು ದೇಶದಲ್ಲೇ ಅತಿ ಎತ್ತರದಾಗಿದೆ..." ಎಂದು ಊಹೆಯ ಚಿತ್ರಣವನ್ನಷ್ಟೇ ಕಟ್ಟಿಕೊಂಡಿದ್ದ ಜೋಗ ಜಲಪಾತವನ್ನು ನಾನು ಇದುವರೆಗೂ ಕಣ್ಣಾರೆ ನೋಡಿರಲಿಲ್ಲ. ಆಮೇಲೆ ಅಣ್ಣಾವ್ರ ಅಭಿಮಾನಿಯಾಗಿ ... ಇರೋದ್ರೊಳ್ಗೇ ಒಮ್ಮೆ ನೋಡು ಜೋಗದ್‍ಗುಂಡಿ..." ಹಾಡನ್ನು ತುಂಬಾಸಲ ಗುನುಗುನಿಸಿದ್ದಿದೆಯೇ ವಿನಹ ಹೈಸ್ಕೂಲ್-ಕಾಲೇಜು ಟ್ರಿಪ್‍ಗಳಲ್ಲಾಗಲೀ, ಉದ್ಯೋಗಪರ್ವದ ಟೂರ್‌ಗಳಲ್ಲಾಗಲೀ ಜೋಗ ಯಾಕೋ ಸೇರಿಕೊಳ್ಳಲೇ ಇಲ್ಲ. ಹಾಗಿರುವಾಗ ಇದು ಸುಸಂದರ್ಭ, ತಪ್ಪಿಸಿಕೊಳ್ಳಬಾರದು ಎಂಬ ಆಸೆ ಸಕಾರಣವಾದದ್ದೇ, ಸಮಂಜಸವಾದದ್ದೇ.

ನನ್ನ ಆ ಆಸೆಯನ್ನು ಅದು ಹೇಗೆ ಗ್ರಹಿಸಿದರೋ ಏನೋ, ಶಿಕಾರಿಪುರದಲ್ಲಿರುವ ಇ-ಮಿತ್ರ ಚಂದ್ರಶೇಖರ್ (ಚಂದ್ರು) ನನಗೆ ಇಮೈಲ್ ಬರೆದರು; ನಾನಿನ್ನೂ ಭಾರತಕ್ಕೆ ಹೊರಡುವ ಮೊದಲೇ ನನ್ನ ಜೋಗಪ್ರವಾಸವನ್ನು ಪಕ್ಕಾ ಮಾಡಿಬಿಟ್ಟರು! ನೀವು ಬೆಂಗಳೂರು-ಲಿಂಗನಮಕ್ಕಿ ನೈಟ್‍ಬಸ್ ಹತ್ತಿ ಬೆಳಿಗ್ಗೆ ಜೋಗದಲ್ಲಿಳಿಯುವ ಹೊತ್ತಿಗೆ ನಾನು ಅಲ್ಲಿಗೆ ಬಂದಿರುತ್ತೇನೆ. ಅಲ್ಲಿನ ಪ್ರವಾಸಿಬಂಗ್ಲೆಯಲ್ಲಿ ರೂಮ್ ಕಾದಿರಿಸುತ್ತೇನೆ, ಸ್ನಾನ-ತಿಂಡಿ ಇತ್ಯಾದಿಯೆಲ್ಲ ಮಾಡಿ ಆರಾಮಾಗಿ ಜೋಗ ಜಲಪಾತ ನೋಡಿ ಬರೋಣವಂತೆ, ಲಿಂಗನಮಕ್ಕಿ ಅಣೆಕಟ್ಟು ಮತ್ತು ವಿದ್ಯುತ್‌ಸ್ಥಾವರ ನೋಡಲಿಕ್ಕೂ ಪರವಾನಗಿಪತ್ರ ತಕೊಂಡಿಟ್ಟಿರುತ್ತೇನೆ. ಸಾಧ್ಯವಾದರೆ ವಾರಾಂತ್ಯ/ರಜಾದಿನಗಳ ಬದಲು ವಾರದದಿನಗಳಲ್ಲಿ ಬರುವ ಪ್ಲಾನ್ ಮಾಡಿ..." ಇತ್ಯಾದಿ ಎಲ್ಲ ಏರ್ಪಾಡುಗಳನ್ನೂ ಪೂರ್ವಭಾವಿಯಾಗಿಯೇ ಮಾಡಿಟ್ಟಿದ್ದ ಚಂದ್ರು, ಆಗಸ್ಟ್ 21ರಂದು ಬೆಳಿಗ್ಗೆ ಆರೂವರೆಗೆ ನಾನು ಜೋಗ ಬಸ್‍ನಿಲ್ದಾಣದಲ್ಲಿ ಬಸ್ಸಿನಿಂದಿಳಿದಾಗ ಸ್ವಾಗತಿಸುತ್ತ ನಿಂತಿದ್ದರು! ಜತೆಯಲ್ಲಿ ಅವರ ತಮ್ಮ ಮಂಜುನಾಥ್ ಸಹ ಇದ್ದರು. ಅವತ್ತು ದಿನವಿಡೀ ನಮ್ಮ ಓಡಾಟಕ್ಕಾಗಿ ಒಂದು ಮಾರುತಿವ್ಯಾನ್ ಸಹ ಇಟ್ಟುಕೊಂಡಿದ್ದರು.

ಮುಂದಿನ ಪುಟ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X