• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!

By Staff
|

Why do some people stick out their tongue?ಡಾರ್ವಿನ್ ಪ್ರತಿಪಾದಿಸಿದ ಜೀವವಿಕಾಸದ ಟೈಮ್‌ಲೈನ್‌ನಲ್ಲಿ, ಮನುಷ್ಯನಿಗೆ ಕೈಚಳಕದ ಬೆಳವಣಿಗೆಯಾದದ್ದು ಮಾತುಗಾರಿಕೆಯ ಜತೆಜತೆಗೇ. ಮಿಕ್ಕ ಪ್ರಾಣಿಗಳಿಗಿಂತ ಮನುಷ್ಯನಿಗೆ ಸ್ಪಷ್ಟವಾದ ವ್ಯತ್ಯಾಸ ಅಥವಾ ಮುನ್ನಡೆ ಕಂಡುಬರುವುದೂ ಈ ಎರಡು ಚಟುವಟಿಕೆಗಳಲ್ಲೇ. ಆದ್ದರಿಂದಲೇ ಈ ಚಟುವಟಿಕೆಗಳ ಅಂಗಗಳನ್ನು (ಅನುಕ್ರಮವಾಗಿ ಕೈಗಳು ಮತ್ತು ನಾಲಿಗೆ) ನಿಯಂತ್ರಿಸುವ ಕೇಂದ್ರಗಳು ಮನುಷ್ಯನ ಮೆದುಳಿನಲ್ಲಿ ರೂಪುಗೊಂಡದ್ದೂ ಸರಿಸುಮಾರಾಗಿ ಒಂದೇ ಕಾಲಘಟ್ಟದಲ್ಲಿ ಎನ್ನಬಹುದು. ಅವು ಅಕ್ಕಪಕ್ಕದಲ್ಲಿರುವುದು ಮತ್ತು ಜತೆಜತೆಯಾಗಿ ಬೆಳವಣಿಗೆ ಕಂಡಿರುವುದಾದ್ದರಿಂದ ಸಹಜವಾಗಿಯೇ ಅವುಗಳಿಂದ ಹೊರಡುವ ನರನಾಡಿಗಳ ಪೈಕಿ ಕೆಲವೊಂದು/ಕೆಲವೊಮ್ಮೆ ತಳುಕುಹಾಕಿಕೊಳ್ಳುತ್ತವೆ. ಪರಿಣಾಮವಾಗಿ, ಮೆದುಳು ಕೈಗಳಿಗೆಂದು ಕೊಡುವ ಆರ್ಡರ್ ನಾಲಿಗೆಗೂ, ನಾಲಿಗೆಗೆಂದು ಕೊಟ್ಟದ್ದು ಕೈಗಳಿಗೂ ತಪ್ಪಾಗಿ ತಲುಪುವುದಿದೆ (ಟೆಲಿಫೋನ್ ಸರ್ಕ್ಯೂಟ್‌ನಲ್ಲಿ ರಾಂಗ್‌ನಂಬರ್‌ಗೆ ಕನೆಕ್ಟ್ ಆದಂತೆ)!

ನಾಲಿಗೆ ಮತ್ತು ಕೈಗಳ ಚಟುವಟಿಕೆಗಳು ಪರಸ್ಪರ ಬೆಸೆದುಕೊಂಡಿರುವುದರಿಂದಲೇ, ಕೆಲವರು ಮಾತಾಡುವಾಗ ಅಥವಾ ಭಾಷಣ ಮಾಡುವಾಗ ಕೈಗಳಿಂದ ವಿವಿಧ ಸಂಜ್ಞೆಗಳನ್ನು ಮಾಡುತ್ತಿರುತ್ತಾರೆ. ಫೋನಲ್ಲಿ ಮಾತಾಡುವಾಗ ಸಹಿತ ಬಲಕೈಯಿಂದ ವಿನ್ಯಾಸಗಳನ್ನು ಮಾಡುತ್ತ ವಿವರಿಸುವವರು ಎಷ್ಟೋ ಜನ ಇದ್ದಾರೆ. ವೇದಿಕೆಯ ಮೇಲೆ ಮಾತಾಡುವಾಗಂತೂ ಒಂದು ವಿಷಯವನ್ನು ಒತ್ತಿಹೇಳುವಾಗ ಮೇಜುಗುದ್ದುವುದು, ರೋಷ ಉಕ್ಕುವ ಮಾತಾಡುವಾಗ ಮುಷ್ಠಿಯನ್ನು ಗಾಳಿಯಲ್ಲಿ ಬಲವಾಗಿ ತೂರುವುದು ಇವೇ ಮೊದಲಾದ ಕರಚಳಕವನ್ನು ಪರಿಣಾಮಕಾರಿಯಾಗಿ ಮಾಡುತ್ತಿರುತ್ತಾರೆ. ಅವರಲ್ಲಿ ನಾಲಿಗೆ ಮತ್ತು ಕೈಗಳ ನಿಯಂತ್ರಣಕೇಂದ್ರಗಳು ಅಸದೃಶ ಜುಗಲ್‌ಬಂದಿ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮತ್ತೆ, ಟಿವಿಯಲ್ಲಿ ವಿಡಿಯೊಜಾಕಿಗಳು ಮಾತಾಡೋದಕ್ಕೂ ಅವರ ಕೈಕರಣಕ್ಕೂ ಏನೊಂದೂ ಸಂಬಂಧವಿರುವುದಿಲ್ಲ ಅದ್ಯಾಕೆ ಅಂತೀರಾ? ಅವರೆಲ್ಲ ಅತಿಮಾನವರು, ವಿಚಿತ್ರಜೀವಿಗಳು ಅವರ ಸಂಗತಿ ಬಿಟ್ಟುಬಿಡಿ.

ನಾಲಿಗೆ ಮತ್ತು ಕೈಗಳ ನಿಯಂತ್ರಣ ಕೇಂದ್ರಗಳು ಅಕ್ಕಪಕ್ಕದಲ್ಲಿರುತ್ತವೆಯೆಂದೂ, ಅವೆರಡರ ಸಂಪರ್ಕಜಾಲದಲ್ಲಿ ಒಂಚೂರು ಓವರ್‌ಲ್ಯಾಪಿಂಗ್ ಇರುತ್ತದೆಯೆಂದೂ ಅರ್ಥವಾಯಿತು. ಆದರೆ ಕಾರ್ಯತತ್ಪರತೆಯ ವೇಳೆಯಲ್ಲಿ ನಾಲಿಗೆ ಹೊರಚಾಚಿಕೊಂಡಿರುವುದೇತಕ್ಕೆ ಎಂಬ ಸಮಸ್ಯೆಗೆ ಇದರಿಂದ ಸೂಕ್ತ ಸಮಜಾಯಿಶಿ ಯಾಕೋ ಸರಿಯಾಗಿ ಸಿಕ್ಕಂತಾಗಿಲ್ಲ ಎನಿಸುತ್ತಿದೆಯೇ?

ಅದರ ರಹಸ್ಯವೂ ಈಗ ಪತ್ತೆಯಾಗಿದೆ. ಕೈಗಳಿಂದಾಗುತ್ತಿರುವ ಕೆಲಸದ ಮೇಲೆಯೇ ಸಂಪೂರ್ಣವಾದ ಮಗ್ನತೆ ಬರಬೇಕೆಂದು ಮೆದುಳಿನಲ್ಲಿನ ಕೈ ನಿಯಂತ್ರಣ ಕೇಂದ್ರವು ಪ್ರಧಾನ ನಿಯಂತ್ರಣ ಕಕ್ಷೆ (ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ)ಗೆ ಕೋರಿಕೆ ಸಲ್ಲಿಸುತ್ತದೆ. ಹೈಕಮಾಂಡ್‌ನ ಆಜ್ಞೆಯನ್ನು ಪಾಲಿಸಲೇಬೇಕಾಗಿ ಬರುವ ನಾಲಿಗೆ ನಿಯಂತ್ರಣ ಕೇಂದ್ರವು ನಾಲಿಗೆಯನ್ನು ತುಟಿಗಳ ಮಧ್ಯದಲ್ಲಿ ಕಟ್ಟಿಹಾಕಿದಂತೆ ಇಡುತ್ತದೆ. ಇದರಿಂದಾಗಿ ಮೆದುಳಿನಿಂದ ಹೊರಟ ಸಂಕೇತಗಳೆಲ್ಲ ಕೈಗಳನ್ನು ಮಾತ್ರ ತಲುಪುತ್ತವೆ, ಮಾಡುತ್ತಿರುವ ಕೆಲಸದಲ್ಲಿ ಅದ್ಭುತವಾದ ಏಕಾಗ್ರತೆಯನ್ನು ದೊರಕಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕಾನ್ಸಂಟ್ರೇಶನ್ ಅಥವಾ ಮನಸ್ಸಿನ ಕೇಂದ್ರೀಕರಣ ಎಂದರೆ ಅದೇ.

ಕ್ರಿಕೆಟ್ ಆಟಗಾರರು ಚೂಯಿಂಗ್‌ಗಮ್ ಜಗಿಯುತ್ತಾ ಇರುವುದು, ಟ್ರಕ್ ಚಾಲಕರು ಜರ್ದಾ ಪಾನ್ ಅಗಿಯುತ್ತಾ ಇರುವುದು - ಇವೂ ಸಹ ನಾಲಿಗೆಗೆ ಒಂದು ನಿರ್ದಿಷ್ಟ ಕೆಲಸವನ್ನು ವಹಿಸಿ, ಕೈಕರಣದಲ್ಲಿ ಅದು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಕಾನ್ಸಂಟ್ರೇಶನ್ ಹೆಚ್ಚಿಸುವುದಕ್ಕಾಗಿಯೇ ಮೆದುಳು ಮಾಡುವ ಉಪಾಯಗಳು. ಅಂತೆಯೇ ಮಹಿಳಾಮಣಿಗಳು ತಮ್ಮ ಸಹಜಸುಂದರ ಮುಖಾರವಿಂದಕ್ಕೆ ಮೇಕಪ್ ಮೆತ್ತಿಕೊಳ್ಳುವಾಗ (ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಳ್ಳುವಾಗಲೂ) ತಮಗರಿವಿಲ್ಲದಂತೆಯೇ ಬಾಯ್ತೆರೆದುಕೊಂಡಿರುತ್ತಾರಲ್ಲ? ಅದೂ ಸಹ ನಾಲಿಗೆ ನಿಯಂತ್ರಣದ, ತನ್ಮೂಲಕ ಕಾನ್ಸಂಟ್ರೇಶನ್‌ನ ಒಂದು ವಿಧಾನ!

ಕಠಿಣ ದುಡಿಮೆ ಮಾತು ಕಡಿಮೆ ಎಂಬ ನಾಣ್ಣುಡಿ ಹುಟ್ಟಿದ್ದಾದರೂ ಯಾಕಿರಬಹುದಂತೀರಿ? ಮೂರ್ನಾಲ್ಕು ಮಂದಿ ಕಾರಲ್ಲಿ ಒಟ್ಟಿಗೇ ಪ್ರಯಾಣಮಾಡುತ್ತಿರುವಾಗ, ಡ್ರೈವರನಾಗಿರುವವನೂ ವಾಚಾಳಿಯಾಗಿ ಹರಟೆಯಲ್ಲಿ ಸೇರಿಕೊಂಡರೆ ದಾರಿತಪ್ಪಿಹೋಗುವ ಪ್ರಸಂಗ ಬರುತ್ತದೆ ನೋಡಿ, ಆಗ ಅರಿವಾಗುತ್ತದೆ ನಾಲಿಗೆ ನಿಯಂತ್ರಣದ ಮಹತ್ವ. ಮಾತು ಕಡಿಮೆಯಾಗಬೇಕಾದರೆ ಬಾಯ್ಮುಚ್ಚಿಕೊಂಡು ಇರಬಹುದಾದರೂ ಜಿಹ್ವಾಚಾಪಲ್ಯ ಎಷ್ಟೆಂದರೂ ಇದ್ದೇ ಇರುತ್ತದಲ್ಲ, ಅದಕ್ಕಾಗಿ ನಾಲಿಗೆಯನ್ನು ಹೊರಚಾಚಿಟ್ಟು ಒಂದುರೀತಿಯಲ್ಲಿ ಕಟ್ಟಿಹಾಕಿಬಿಡುವುದು. ಆಗ ಕಾನ್ಸಂಟ್ರೆಶನ್ನೂ ಸಿಗುತ್ತದೆ, ಕೆಲಸವೂ ಸುಗಮವಾಗಿ ಸಾಗುತ್ತದೆ.

ಮೆದುಳಿನ ಬಗ್ಗೆ ಈರೀತಿಯ ಮಾಹಿತಿಗಳನ್ನೆಲ್ಲ ವಿವರಿಸುವ ಒಬ್ಬ ಡಾಕ್ಟರರಿಗೇ ಕಾರ್ಯಮಗ್ನತೆಯ ವೇಳೆ ನಾಲಿಗೆ ಹೊರಚಾಚುವ ಅಭ್ಯಾಸವಿತ್ತಂತೆ. ಒಮ್ಮೆ ಯಾರೋ ಅವರನ್ನು ಕೇಳಿದರು - "ನೀವು ಮನಸ್ಸನ್ನು ಕೇಂದ್ರೀಕರಿಸಿ ಕೆಲಸ ಮಾಡುವಾಗೆಲ್ಲ ನಾಲಿಗೆ ಹೊರಚಾಚಿರುತ್ತೀರಲ್ಲ? ರೋಗಿಯ ತಪಾಸಣೆ ಮಾಡುವಾಗ ಅಥವಾ ಅದಕ್ಕಿಂತಲೂ ಹೆಚ್ಚಿನ ಕಾನ್ಸಂಟ್ರೇಶನ್ ಅಪೇಕ್ಷಿಸುವ ಆಪರೇಶನ್ ಥಿಯೇಟರ್‌ನ ಸನ್ನಿವೇಶದಲ್ಲಿ ಇದರಿಂದಾಗಿ ನಿಮಗೆ/ ನಿಮ್ಮ ರೋಗಿಗಳಿಗೆ ತೊಂದರೆಯಾಗುವುದಿಲ್ಲವಾ?" ಎಂದು. ಆಗ ಆ ವೈದ್ಯರು ನಾಲಿಗೆಯನ್ನು ಬಾಯಿಂದ ಹೊರಚಾಚದೆ ಗಲ್ಲದೊಳಕ್ಕೆ ತೂರಿ ಕೊಟ್ಟ ಉತ್ತರ - "ಮತ್ತೆ ನಾವೆಲ್ಲ ವೈದ್ಯರು ಆಪರೇಷನ್ ಮಾಡುವಾಗ ಬಾಯಿಗೆ ಮಾಸ್ಕ್ ಹಾಕಿಕೊಳ್ಳುವುದು ಇನ್ನೇತಕ್ಕೆ ಅಂತಂದುಕೊಂಡ್ರಿ?"

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more