ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?

By Staff
|
Google Oneindia Kannada News


ರೇಷ್ಮೆ ಶಾಲು ನಿಮ್ಮ ಬಳಿಯಿದ್ದರೆ, ಬಂದೂಕಿನ ಗುಂಡಿಗೆ ಗೇರ್ ಮಾಡಬೇಕಾದ ಅಗತ್ಯವಿಲ್ಲ! ರೇಷ್ಮೆ ಬಟ್ಟೆ ಗುಂಡು ನಿರೋಧಕದಂತೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತುಹೂಲಕ್ಕೆ ಇಲ್ಲಿದೆ ಸಮಾಧಾನ ಎಂದಿನ ಇನ್ಫೋಟೈನ್ ಮೆಂಟ್ ಸ್ಟೈಲ್ ನಲ್ಲಿ..



  • ಶ್ರೀವತ್ಸ ಜೋಶಿ
Shawl ke pheeche kya hai?ಪುರಚ್ಚಿತಲೈವಿ ಜಯಲಲಿತಾ (ಅವರಿಗೆ ಶ್ರೀಮತಿ ಎಂಬ ಪ್ರಿಫಿಕ್ಸ್‌ಗಿಂತ ಕನ್ನಡಕುವರಿ ಎನ್ನುವುದೇ ಸರಿಯಾಗುತ್ತದೆ) ಯಾವಾಗಲೂ ಶಾಲು ಹೊದ್ದುಕೊಂಡಿರ್ತಾರಲ್ಲ ಯಾಕೆ? ಯಾಕೆಂದರೆ, ಗಂಡಿಗೆ ಹೆದರದಿದ್ದರೂ ಗುಂಡಿಗೆ ಹೆದರುವ ಗುಂಡಿಗೆ ಅವರದು. ಆದ್ದರಿಂದ ಬುಲ್ಲೆಟ್‍ಪ್ರೂಫ್ ಶಾಲು ಹೊದ್ದುಕೊಳ್ತಾರೆ. ಗಂಡಿಗೆ ಹೆದರುವ/ಹೆದರದಿರುವ ಉಸಾಬರಿಯೇ ಬೇಡವೆಂದು ಬಹುಶಃ ಅವರು ಮದುವೆ ಮಾಡಿಕೊಂಡಿಲ್ಲವಿರಬಹುದು, ಗುಂಡಿಗಾದರೂ ಹೆದರುತ್ತಾರಲ್ಲ ಸದ್ಯ.

ಮತ್ತೆ, ನಾವೆಲ್ಲ ಗುಂಡಿಗೆ ಹೆದರದ ಗುಂಡಿಗೆಯವರೇ? ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ ಎಂಬಂತೆ ಯಾರ ಬಳಿಯಲ್ಲಿ ಯಾವ ಗುಂಡಿನ ಪಿಸ್ತೂಲ್ ಇದೆಯೋ ಎನ್ನಬೇಕಾಗಿರುವ ಇವತ್ತಿನ ಈ ಭಯಾನಕ ಪ್ರಪಂಚದಲ್ಲಿ ಗುಂಡಿನ ಹೆದರಿಕೆ ಜಯಲಲಿತಾಗಷ್ಟೇ ಅಲ್ಲ, ನಮಗೆಲ್ಲರಿಗೂ ಇದೆ. ಹಾಗಿದ್ದರೆ ನಾವು-ನೀವೂ ಯಾಕೆ ಶಾಲು ಹೊದ್ದುಕೊಂಡಿರಬಾರದು?

ಧಾರಾಳವಾಗಿ! ಒಂದು ಹದಾಮಟ್ಟಿನ ರೇಷ್ಮೆಶಾಲು ನಮಗೆ ಗುಂಡು ನಿರೋಧಕವಾಗಿ ರಕ್ಷಣೆಯೊದಗಿಸಬಲ್ಲದು. ಅಫ್‍ಕೋರ್ಸ್, ಜಯಲಲಿತಾ ಬಳಿ ಆಕೆಯ ಸೀರೆ-ಚಪ್ಪಲಿಗಳಿಗೆ ಮ್ಯಾಚ್ ಆಗುವಂಥ ವಿವಿಧ ತರಹದ ಶಾಲುಗಳಿರಬಹುದು, ಅಷ್ಟೊಂದು ಶಾಲುಗಳನ್ನಿಟ್ಟುಕೊಳ್ಳುವ ಕೆಪ್ಯಾಸಿಟಿಯೂ ಆಕೆಗಿರಬಹುದು; ಪರಂತು ನಮ್ಮಂಥ ಸಾಮಾನ್ಯಪ್ರಜೆಗಳಿಗೆ ಒಂದೇ ಒಂದು ರೇಷ್ಮೆ ಶಾಲು ಇದ್ದರೂ ಸಾಕು, ಅದನ್ನು ಹೊದ್ದುಕೊಂಡರೆ ಬೇರೆ ರಕ್ಷಾಕವಚ ಏನೂ ಬೇಡ! ಅಂತಹ ಬುಲ್ಲೆಟ್‌ಪ್ರೂಫ್ ಗುಣ ರೇಷ್ಮೆ ವಸ್ತ್ರಕ್ಕಿದೆ. ಅದ್ಹೇಗೆ ಎನ್ನುವುದೇ ಇವತ್ತಿನ ಈ ಲೇಖನದಲ್ಲಿ ಮಂಥನವಾಗಲಿರುವ ವಿಷಯ.

ಸುಮಾರು ನೂರಿಪ್ಪತ್ತು ವರ್ಷಗಳ ಹಿಂದೆ, ಜಾರ್ಜ್ ಎಮ್ರಿ ಎನ್ನುವ ಅಮೆರಿಕನ್ ವೈದ್ಯನೊಬ್ಬ ಬರೆದ ಸಂಶೋಧನಾ ಪ್ರಬಂಧದಲ್ಲಿ ರೇಷ್ಮೆಯ ಗುಂಡುನಿರೋಧಕ ಗುಣದ ಬಗ್ಗೆ ವಿಶ್ಲೇಷಿಸಿದ್ದಾನೆ. ತನ್ನ ಕಣ್ಮುಂದೆಯೇ ನಡೆದ ಗುಂಡಿನ ಚಕಮಕಿಯ ದೃಶ್ಯಗಳನ್ನು ವರ್ಣಿಸುತ್ತ ಆ ಘಟನೆಗಳಿಂದ ತಾನು ಕಂಡುಕೊಂಡ ಸಂಗತಿಗಳ ಬಗ್ಗೆ ಬರೆದಿದ್ದಾನೆ. ಡಾ.ಜಾರ್ಜ್ ಎಮ್ರಿ ಒಬ್ಬ ನುರಿತ ಸರ್ಜನ್ ಆಗಿದ್ದು, ಆರಿಜೋನಾ ಸಂಸ್ಥಾನದಲ್ಲಿನ ಪ್ರಕ್ಷುಬ್ಧ ಪ್ರದೇಶಗಳಲ್ಲೇ ವಾಸಿಸುತ್ತಿದ್ದುದರಿಂದ ಗುಂಡಿನ ಕಾಳಗಗಳು, ಗಾಯಾಳುಗಳ ದೇಹದಿಂದ ಗುಂಡುಗಳನ್ನು ತೆಗೆಯುವುದು - ಇವೆಲ್ಲ ಅವನಿಗೆ ಸಾಮಾನ್ಯ ಸಂಗತಿಗಳಾಗಿದ್ದುವು.

"1881ರ ಏಪ್ರಿಲ್‍ನಲ್ಲಿ ಒಂದು ದಿನ, ನನ್ನಿಂದ ಕೆಲವೇ ಅಡಿಗಳ ದೂರದಲ್ಲಿದ್ದ ಇಬ್ಬರು ಹಿಪ್ಪಿಗಳು ಯಾವುದೋ ಕಾರಣಕ್ಕೆ ಜಗಳಾಡತೊಡಗಿದರು, ಮಾತಿಗೆಮಾತು ಬೆಳೆದು ಪರಸ್ಪರ ಗುಂಡೇಟಿನವರೆಗೂ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಅವರಲ್ಲೊಬ್ಬನ ಎದೆಗೆ ಎರಡು ಗುಂಡುಗಳು ತಗುಲಿದ್ದರಿಂದ ಅವನು ಸತ್ತೇಹೋದ. ಕೋಲ್ಟ್-45 ಕ್ಯಾಲಿಬರ್ ರಿವಾಲ್ವರ್‌‍ನಿಂದ ಹೊಡೆದಿದ್ದ ಆ ಗುಂಡುಗಳಲ್ಲಿ ಒಂದು ಭಾಗದಷ್ಟು ಮದ್ದು ಮತ್ತು ಅದರ ಎಂಟು ಪಟ್ಟಿನಷ್ಟು ಸೀಸ ಇತ್ತು... ಒಂದೇಒಂದು ಹನಿಯಷ್ಟೂ ರಕ್ತ ಸುರಿಯಲಿಲ್ಲ... ಎದೆಯ ಮೇಲಾಗಿದ್ದ ಕುಳಿಯಿಂದ ರೇಷ್ಮೆಯ ಕರವಸ್ತ್ರದ ತುದಿಗಳು ಹೊರಬಂದಿದ್ದುವು... ಅವನ್ನು ಹಿಡಿದೆಳೆದಾಗ ಇಡೀ ಕರವಸ್ತ್ರ ಹೊರಬಂತು, ಅದರ ಜತೆಯಲ್ಲೇ ಗುಂಡು ಸಹ!"

ಅಂದರೆ, ಪಿಸ್ತೂಲ್‍ನಿಂದ ಹೊರಟ ಗುಂಡು ವ್ಯಕ್ತಿಯ ಉಡುಪನ್ನು ಹರಿದಿತ್ತು, ಅಂಗಾಂಶಗಳನ್ನು ಛಿದ್ರವಿಚ್ಛಿದ್ರವಾಗಿಸಿತ್ತು, ಆದರೆ ಅವನ ಜೇಬಿನಲ್ಲಿದ್ದ ರೇಷ್ಮೆ ಕರವಸ್ತ್ರವನ್ನು ಸೀಳುವುದು ಸಾಧ್ಯವಾಗಿರಲಿಲ್ಲ! ಡಾ.ಎಮ್ರಿ ಪ್ರಯೋಗಾರ್ಥವಾಗಿ ಅದೇ ಮಾದರಿಯ ಪಿಸ್ತೂಲ್‍ನಿಂದ ಅದೇ ರೀತಿಯ ಗುಂಡುಗಳನ್ನು ಅಷ್ಟೇ ದೂರದಿಂದ ಫೈರ್ ಮಾಡಿನೋಡಿದ. ಹತ್ತು ಸೆಂಟಿಮೀಟರ್ ದಪ್ಪದ ಮರದದಿಮ್ಮಿಯನ್ನದು ಸುಲಭದಲ್ಲಿ ಸೀಳಿತು. ಮರದ ದಿಮ್ಮಿಗೆ ರೇಷ್ಮೆ ವಸ್ತ್ರವನ್ನು ಸುತ್ತಿ ಮತ್ತೆ ಪಿಸ್ತೂಲ್‍ನಿಂದ ಫೈರ್ ಮಾಡಿದಾಗ ರೇಷ್ಮೆ ವಸ್ತ್ರವನ್ನು ಸೀಳುವುದು ಆ ಬುಲೆಟ್‌ನಿಂದಾಗಲಿಲ್ಲ!

ಹಾಗೆ ನೋಡಿದರೆ ಗ್ರೀಕರ ಕಾಲದಿಂದಲೂ ಗುಂಡು ನಿರೋಧಕವಾಗಿ ಅಥವಾ ಸಾಮಾನ್ಯವಾಗಿ ಈಟಿ ಭರ್ಚಿ ಮೊದಲಾದ ಯಾವುದೇ ಆಯುಧದಿಂದಾಗುವ ಗಾಯವನ್ನು ತಪ್ಪಿಸಲಿಕ್ಕಾಗಿ ಬೇರೆಬೇರೆ ವಸ್ತುಗಳ ಕವಚಗಳ ಬಳಕೆಯಾಗಿದೆ. ಪ್ರಾಣಿಗಳ ತೊಗಲಿನಿಂದ ಮಾಡಿದ ಅಂಗಿಗಳು ಯೋಧರ ಸಮವಸ್ತ್ರಗಳಾಗಿವೆ, ಎರಡನೆ ಪ್ರಪಂಚ ಯುದ್ಧದ ವೇಳೆಗೆ ನೈಲಾನ್‌ನ ಆವಿಷ್ಕಾರವಾಗಿದ್ದು ಅದನ್ನು ಗುಂಡುನಿರೋಧಕವಾಗಿ ಉಪಯೋಗಿಸಿದ್ದಿದೆ. ಈಗ ಬಹುತೇಕವಾಗಿ ಕೆವ್ಲಾರ್ ಎಂಬ ವಸ್ತುವಿನಿಂದ ಮಾಡಿದ ಕವಚಗಳ ಬಳಕೆಯಾಗುತ್ತದೆ. ಜಯಲಲಿತಾ ಹೊದ್ದುಕೊಳ್ಳುವುದು ಕೆವ್ಲಾರ್ ಶಾಲು ಇರಬಹುದು. ಸಲ್ವಾರ್ ಕಮೀಜ್ ತೊಡದೆ ಸೀರೆಯ ಮೇಲೆ ಕೆವ್ಲಾರ್ ಶಾಲು! ಫ್ಯಾಶನ್ನೂ ಆಯ್ತು, ಪ್ರಾಣರಕ್ಷಣೆಯೂ ಆಯ್ತು!

ಆದರೆ ಡಾ. ಎಮ್ರಿ ಗುರುತಿಸಿದಂತೆ ಜೈವೋತ್ಪನ್ನವಾದ ರೇಷ್ಮೆಗೆ ಎಲ್ಲಿಂದ ಬಂತು ಗುಂಡುನಿರೋಧಕ ಶಕ್ತಿ? ಈ ಪ್ರಶ್ನೆಗೆ ಜೀವಶಾಸ್ತ್ರವೇ ಉತ್ತರವನ್ನೊದಗಿಸಿದೆ. ರೇಷ್ಮೆಯಲ್ಲಿರುವ ಎರಡು ಪ್ರಮುಖ ಪ್ರೊಟೀನ್‍ಗಳು - ಸ್ಪಟಿಕಶಲಾಕೆಯಂಥವು ಮತ್ತು ಸುರುಳಿಯಾಕೃತಿಯ ಲೋಳೆಯಂಥವು, ಇವು ಈ ಕಾರ್ಯಕ್ಷಮತೆಯ ಹಿಂದಿನ ಪ್ರಧಾನ ಅಂಶಗಳು.

ಸ್ಪಟಿಕಶಲಾಕೆಯಂತಿರುವ ಪ್ರೊಟೀನ್‍ಗಳು ಸ್ಕರ್ಟ್‌ನ ಪ್ಲೀಟ್‌ಗಳಂತೆ, ಸೀರೆಯ ನೆರಿಗೆಗಳಂತೆ ಪದರಪದರವಾಗಿ ಒತ್ತೊತ್ತಾಗಿ ಇರುವ ಸಂರಚನೆಗಳು. ಈ ಸಂರಚನೆಗಳ ಗುಂಪುಗಳು ಲೋಳೆಯಂತಿರುವ ಇನ್ನೊಂದು ಪ್ರೊಟೀನ್‍ನ ಸಹಾಯದಿಂದ ಬೆಸೆದುಕೊಂಡಿರುತ್ತವೆ. ತತ್ಪರಿಣಾಮವಾಗಿ ನಿರ್ಮಿತವಾಗುವ ಬಲೆ ನಿಜಕ್ಕೂ ಅಭೇದ್ಯ ಕೋಟೆಯಂತಿರುತ್ತದೆ. ಪ್ರೋಟೀನ್ ಸಂರಚನೆಗಳ ಗುಂಪುಗಳನ್ನು ಚದುರಿಸಲು ಅಗಾಧ ಪರಿಮಾಣದ ಶಕ್ತಿ ಬೇಕಾಗುತ್ತದೆ, ಅಂತಿಂಥ ಗುಂಡಿನಿಂದ ಅದು ಸಾಧ್ಯವಾಗುವುದಿಲ್ಲ. ಹೀಗಿದ್ದೂ ಮೃದುವಾಗಿ, ನವಿರಾಗಿ, ಬೆಲೆಬಾಳುವಂಥದ್ದಾಗಿ, ರಾಜಮಾನ್ಯವಾಗಿಯೂ ಇದೆಯಲ್ಲ, ಅದೇ ರೇಷ್ಮೆಯ ಹಿರಿಮೆ!

ಅಂದಹಾಗೆ, ಕುಶಾಲುತೋಪುಗಳಿಂದ ಸಿಡಿಯುವ ಗುಂಡುಗಳನ್ನು ರೇಷ್ಮೆಶಾಲು ತಡೆಯಬಲ್ಲದೇ? ಅಗತ್ಯವಿಲ್ಲ, ಯಾಕೆಂದರೆ ಅವು ಗಾಳಿಯಲ್ಲಿ ಆಕಾಶದತ್ತ ಹಾರಿಸುವ ಗುಂಡುಗಳು!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X