ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಬಿಎಸ್ ಬಗ್ಗೆ ಓದಿದಾಗ ನಮ್ಮಜ್ಜಿ ನೆನಪಾದಳು!

By Staff
|
Google Oneindia Kannada News


Dr Rajkumar in devotional mood ಆತ್ಮೀಯ ಶ್ರೀವತ್ಸ ಜೋಶಿಯವರೆ,

ನೀವು ಬರೆದ ಪಿ.ಬಿ. ಶ್ರೀನಿವಾಸ್ ಲೇಖನ ಓದಿ, ಅವರ ಒಂದು ಹಾಡು ಕೇಳಿದಷ್ಟೇ ಸಂತೋಷವಾಯಿತು. ಅಲ್ಲದೇ ನನ್ನ ಮನಸ್ಸು ನಾಲ್ಕು ದಶಕ ಹಿಂದಕ್ಕೆ ಹೋಯಿತು.

ಆಗ ನನ್ನ ತಂದೆ ಶಿವಮೊಗ್ಗದಲ್ಲಿ ಡಾಕ್ಟರಾಗಿದ್ದರು. ನಮ್ಮ ಅಜ್ಜಿ (ನನ್ನ ತಂದೆಯ ದೊಡ್ಡಮ್ಮ) ಸಹ ನಮ್ಮೊಡನೆ ಇದ್ದಳು. ಹನ್ನೆರಡು ವರ್ಷ ವಯಸ್ಸಿಗೆ ಮದುವೆಯಾಗಿ ಮೂರು ತಿಂಗಳಿಗೆ ಗಂಡನನ್ನು ಕಳೆದುಕೊಂಡು ಸುಮಾರು ಎಂಭತ್ತು ವರ್ಷ ಇತರರ ಸೇವೆಯಲ್ಲೇ ಸವೆಸಿದ್ದ ಜೀವ ಅವಳದ್ದು.

ಮನೆ ವೈದ್ಯ, ಅಡಿಗೆ, ಮನೆಗೆಲಸ,ಚಿಕ್ಕ ಮಕ್ಕಳ ಪಾಲನೆ,ರೋಗಿಗಳ ಆರೈಕೆಯಲ್ಲಿ ಸುಖ ಕಾಣುತ್ತಿದ್ದ ಅವಳು, ನೀವು ಬರೆದ ಹಾಗೆ, ಪರರ ಸಂತೋಷವನ್ನು ಕಂಡು ಸಂತಸಪಡುವುದೇ ಪರಮ ಸಂತೋಷ ಎಂದು ತಿಳಿದವಳು . ಒಂದು ಹೊತ್ತಿನ ಸರಳ ಊಟ ಬಿಟ್ಟರೆ ಬೇರಾವುದರ ಅಗತ್ಯವೇ ಅವಳಿಗೆ ಇರಲಿಲ್ಲ. ಹಬ್ಬ ಹರಿದಿನಗಳಲ್ಲಿ ನಮಗಾಗಿ ಬಗೆ ಬಗೆಯ ಅಡಿಗೆ ಮಾಡುವುದರಲ್ಲಿ ಅವಳಿಗೆ ಖುಶಿ, ತಾನು ಮಾತ್ರ ತಿನ್ನುತ್ತಿರಲಿಲ್ಲ.

ಆ ಸಮಯದಲ್ಲಿ ಡಾ.ರಾಜ್ ಅಭಿನಯದ ಭಕ್ತ ಕನಕದಾಸ ಚಿತ್ರ ಬಿಡುಗಡೆಯಾಗಿತ್ತು. ಊರಲ್ಲಿ ಯಾರ ಬಾಯಲ್ಲಿ ನೋಡಿದರೂ ಅದರದ್ದೇ ಮಾತು. ಯಾವ ಕಾರಣಕ್ಕೊ ತಿಳಿಯದು, ಆ ಚಿತ್ರವನ್ನು ದೊಡ್ಡಮ್ಮನಿಗೆ ತೋರಿಸಬೇಕೆಂದು ನನಗೆ ಆಸೆಯಾಯಿತು. ಅವಳು ಏನು ಮಾಡಿದರೂ ಒಪ್ಪಲ್ಲಿಲ್ಲ,ಈ ವಯಸ್ಸಿನಲ್ಲಿ ನನಗದೆಲ್ಲಾ ಯಾಕೆ? ಅಂದುಬಿಟ್ಟಳು. ಕೊನೆಗೆ ಸೋತವಳು ಅವಳೇ, ನನ್ನ ಹಟಕ್ಕೆ ಮಣಿದು ಚಿತ್ರ ನೋಡಿದಳು.

ಡಾ.ರಾಜ್ ಅಭಿನಯ, ಪಿ.ಬಿ.ಎಸ್. ಗಾಯನ ಅವಳ ಕಣ್ಣಲ್ಲಿ ನೀರು ಸುರಿಸಿದವು. ಆ ಮೇಲಿನ ದಿನಗಳಲ್ಲಿ, ಎಂದೂ ರೇಡಿಯೊ ಕೇಳದವಳು, ಭಕ್ತ ಕನಕದಾಸದ ಹಾಡುಗಳು ಪ್ರಸಾರವಾದಾಗ ಕೇಳಿ ಸೆರಗಿನಿಂದ ಕಣ್ಣೊರಸಿಕೊಳ್ಳುತ್ತಿದ್ದಳು. ಈಗವಳು ತೀರಿಕೊಂಡು ಮೂವತ್ತೆಂಟು ವರ್ಷಗಳಾದರೂ ನೆನಪು ಒಂದಿಷ್ಟೂ ಮಾಸಿಲ್ಲ.

ನಿಮ್ಮ ಲೇಖನ ಓದಿ ಕಣ್ಣು ಮಂಜಾಯಿತು.

ವಿಚಿತ್ರಾನ್ನಾಭಿಮಾನಿ,
ಪ್ರಕಾಶ್
ರಾಜಾರಾವ್,ಆಕ್ಲೆಂಡ್,ನ್ಯೂಜಿಲೆಂಡ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X