• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

(ಏಕ)ವಚನದಲ್ಲಿ ನಾಮಾಮೃತ ತುಂಬಿ...

By Staff
|

ಶೇಕ್ಸ್‌ಪಿಯರ್‌ ಎಂದಾಗ ನೆನಪಾಯಿತು. ಇಂಗ್ಲಿಷ್‌ ಭಾಷೆಯಲ್ಲಿ ಈಗ ಮಧ್ಯಮಪುರುಷ ಸರ್ವನಾಮವಾಗಿ You ಎಂಬ ಒಂದೇ ಪದ ಏಕವಚನ ಬಹುವಚನಗಳೆರಡಕ್ಕೂ ಉಪಯೋಗವಾಗುತ್ತದೆ. ಆದರೆ ಕೆಲ ಶತಮಾನಗಳ ಹಿಂದಿನವರೆಗೂ ಏಕವಚನಕ್ಕಾದರೆ Thou ಮತ್ತು ಬಹುವಚನಕ್ಕಾದರೆ You ಬಳಸಬೇಕೆಂಬುದಾಗಿ ವ್ಯಾಕರಣವಿದ್ದದ್ದಂತೆ. ಹಾಗಾಗಿಯೇ ಶೇಕ್ಸ್‌ಪಿಯರ್‌ನ ನಾಟಕಗಳಲ್ಲಿ thou ಮತ್ತು you ಪ್ರಯೋಗಗಳೆರಡೂ ಕಂಡುಬರುತ್ತವೆ. ಈಗ ಇಂಗ್ಲಿಷಲ್ಲಿ ನೀನು-ನೀವು-ತಾವು ಎಲ್ಲದಕ್ಕೂ ಒಂದೇ ಪದ- You. ಜರ್ಮನ್‌, ಫ‚ೆ್ರಂಚ್‌ ಇತ್ಯಾದಿ ಇತರ ಯುರೋಪಿಯನ್‌ ಭಾಷೆಗಳಲ್ಲಿ ನೀನು-ನೀವುಗಳಿಗೆ ಪ್ರತ್ಯೇಕ ಪದಗಳಿರುವುದು ಮಾತ್ರವಲ್ಲ, ನಮ್ಮ ಕನ್ನಡದಲ್ಲಿ ಸಲಿಗೆ-ಆತ್ಮೀಯತೆಗಳು ‘ನೀವು’ನಿಂದ ‘ನೀನು’ಗೆ ಬಡ್ತಿ ಕೊಟ್ಟಂತೆ ಆ ಭಾಷೆಗಳಲ್ಲೂ ಅದೇ ಶಿಷ್ಟಾಚಾರ. ಜರ್ಮನ್‌ನಲ್ಲಂತೂ Sie (ನೀವು) ಮತ್ತು Du (ನೀನು) ನಡುವಿನ ಗೋಡೆ ಕೆಡವುವುದೆಂದರೆ ಬರ್ಲಿನ್‌ ಗೋಡೆ ಕೆಡವಿ ಒಂದಾದ ಜರ್ಮನರಂತೆಯೇ - ಪ್ರೀತಿ ವಿಶ್ವಾಸಗಳ ಗೆಲುವು.

ಮನೆಯಲ್ಲಿ ಅಪ್ಪ-ಅಮ್ಮ ಅಜ್ಜ-ಅಜ್ಜಿ ಇತ್ಯಾದಿ ಹಿರಿಯರೊಂದಿಗೆ ಸಂಭಾಷಣೆಯಲ್ಲಿ ಏಕವಚನ ಪ್ರಯೋಗ ಸಾಮಾನ್ಯವಾಗಿ ಎಲ್ಲ ಜಾತಿ-ಮತ-ಭಾಷೆಗಳಲ್ಲೂ ಕಂಡುಬರುತ್ತದೆ, ಆದರೆ ಸೊಸೆಯಾಗಿ ಬಂದವಳು ಮಾತ್ರ ತನ್ನ ಗಂಡ ಮತ್ತು ಅವನ ಸಂಬಂಧಿಕರನ್ನೆಲ್ಲ (ವಯಸ್ಸಲ್ಲಿ ಸಮಾನ ಅಥವಾ ಸಣ್ಣವರಿದ್ದರೂ!) ಬಹುವಚನದಲ್ಲಿ ಸಂಬೋಧಿಸಬೇಕು ಎಂದು ಕಟ್ಟಳೆ. ಪ್ರೇಮವಿವಾಹಗಳಲ್ಲಿ, ಸಹಪಾಠಿಗಳು/ಸಹೋದ್ಯೋಗಿಗಳು ಮದುವೆಯಾದಲ್ಲಿ ಅಥವಾ ಅತ್ತೆಮಗ-ಮಾವನಮಗಳು ಸಂಬಂಧಗಳೊಳಗಿನ ಮದುವೆಗಳಲ್ಲಿ ಹೆಂಡತಿ ಗಂಡನನ್ನು ಹೆಸರ್ಹಿಡಿದು ಹೋಗೋ ಬಾರೋ ಎನ್ನುವುದಿದೆಯಾದರೂ ಬಹುತೇಕವಾಗಿ ‘ಬಹೂ’-ಬಹುವಚನವೇ ಲೋಕರೂಢಿ.

ಹಿಂದಿಯಲ್ಲಿ ನಾನು ಗಮನಿಸಿದ ಅಥವಾ ನನಗಿಷ್ಟವಾದ ಒಂದು ಸಂಗತಿಯೆಂದರೆ ಪುಟ್ಟ ಮಕ್ಕಳನ್ನು ‘ಆಪ್‌’ ಎಂದು (ತೂ ಅಥವಾ ತುಮ್‌ ಎನ್ನುವುದರ ಬದಲಾಗಿ) ಗೌರವಪೂರ್ವಕ ಸಂಬೋಧಿಸುವುದು. ಮಕ್ಕಳ ಸ್ವಾಭಿಮಾನ/ಆತ್ಮವಿಶ್ವಾಸ ಹೆಚ್ಚಲಿ, ಮುಂದೆ ಆ ಮಕ್ಕಳು ದೊಡ್ಡವರಾದಾಗ ಬೇರೆಯವರೊಂದಿಗೆ ಸಂಭಾಷಿಸುವಾಗ ‘ಆಪ್‌’ ಎಂದೇ ಬಳಸಲಿ ಎಂಬ ಕಾರಣಕ್ಕೂ ಇರಬಹುದು, ಒಟ್ಟಿನಲ್ಲಿ ಕೇಳಲು ಖುಶಿಯಾಗುವುದಂತೂ ಹೌದು.

ತೆಲುಗುಭಾಷೆಯಲ್ಲಿ ವಚನವಾಡಿಕೆಯ ಕೆಲವು ವಿಚಿತ್ರ ರೀತಿಗಳು ನನಗೆ ಹೈದರಾಬಾದ್‌ ವಾಸ್ತವ್ಯದ ವೇಳೆ ಪರಿಚಯವಾಗಿದ್ದುವು. ತೆಲುಗರು ಕುಡಿಯುವ ನೀರಿಗೂ ‘ಮಂಚಿನೀಳ್ಳು...’ ಎಂದು ಬಹುವಚನ ಉಪಯೋಗಿಸುವ (ಉತ್ತರ ಕರ್ನಾಟಕದಲ್ಲೂ ‘ಕುಡಿಯೋ ನೀರು ಅದಾವು...’ ಎನ್ನುತ್ತಾರೆ) ಧಾರಾಳಿಗಳು ಎಂದು ಮೊದಲು ಅಂದುಕೊಂಡಿದ್ದೆ ನಾನು. ಆದರೆ ‘‘ಮೇಡಂ ವಚ್ಚಿಂದಿ... ಪಿ.ಸುಶೀಲಾ ಪಾಡಿಂದಿ... ಎಂ.ಎಸ್‌ ಸುಬ್ಬಲಕ್ಷ್ಮಿ ಪಾಡಿಂದಿ...’’ ಇತ್ಯಾದಿಯಲ್ಲಿ ಹೆಂಗಸರಿಗಾದರೆ ಬಹುವಚನ ಬಿಡಿ, ಸ್ತ್ರೀಲಿಂಗರೂಪವೂ ಇಲ್ಲದೆ ನಪುಂಸಕಲಿಂಗರೂಪದ ಪದಪ್ರಯೋಗ ಕೇಳಿ ನನಗೆ ಸಖೇದಾಶ್ಚರ್ಯವಾಗಿತ್ತು.

ಬಹುವಚನಕ್ಕೇ ಇನ್ನೊಂದು ಬಹುವಚನ ಸೇರಿಸಿ ಆಗುವ ತಪ್ಪು ಕನ್ನಡದ ಬರವಣಿಗೆಯಲ್ಲೂ ಆಗಾಗ ಕಂಡುಬರುವುದುಂಟು. ‘ಬ್ಯಾಕ್ಟೀರಿಯಮ್‌’ನ ಬಹುವಚನ ಬ್ಯಾಕ್ಟೀರಿಯಾ. ಆದರೆ ನಾವು ‘‘ಬ್ಯಾಕ್ಟೀರಿಯಾಗಳು ಉಸಿರಿನ ದುರ್ವಾಸನೆ ಉಂಟುಮಾಡುತ್ತವೆ...’’ ಎಂದೇ ಬರೆಯುತ್ತೇವೆ. ಹಾಗೆಯೇ ಮೀಡಿಯಮ್‌ (ಮಾಧ್ಯಮ) ಪದದ ಬಹುವಚನ ‘ಮೀಡಿಯಾ’. ಮೊನ್ನೆ ಯಾವುದೋ ಒಂದು ಲೇಖನದ ಶೀರ್ಷಿಕೆಯೇ ‘‘ಮೀಡಿಯಾಗಳಲ್ಲಿ ನಮ್ಮ ಬಗ್ಗೆ ಮಾತುಗಳು...’’ ಎಂದಿತ್ತು. ಹಾಗೆಯೇ ನೋಟ್ಸ್‌ಗಳು, ಲೆಕ್ಚರರ್ಸ್‌ಗಳು, ಡಾನ್ಸ್‌ಸ್ಟೆಪ್ಸ್‌ಗಳು, ಕಮೆಂಟ್ಸ್‌ಗಳು... ಎಲ್ಲ ವೆರಿ ಕಾಮನ್‌.

ರಾಜಕಾರಣದಲ್ಲಿ ವಚನರೇಖೆ ಬಲು ನಾಜೂಕಾದುದು. ರವಿ ಬೆಳಗೆರೆಯವರ ಲೇಖನಗಳಲ್ಲಿ ಕೆಲವೊಮ್ಮೆ ಕಂಡುಬರುವ ಏಕವಚನ ಪ್ರಯೋಗದ ಖದರನ್ನು ನೋಡಿದವರಿಗೆ ಅದು ಅರ್ಥವಾಗುತ್ತದೆ. ಮೊನ್ನೆಯಷ್ಟೇ ಕರ್ನಾಟಕದ ಶಾಸಕರೋರ್ವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ಸಂಬೋಧಿ-ಸಿದರು ಎಂದು ಗುಲ್ಲೆದ್ದಿತ್ತು. ಕೆಲವರ್ಷಗಳ ಹಿಂದೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾಡುಕಳ್ಳ ವೀರಪ್ಪನ್‌ಗೆ ‘‘ಶ್ರೀಯುತ ವೀರಪ್ಪನ್‌ ಅವರು...’’ ಎಂದು ಬಹುವಚನ ಉಪಯೋಗಿಸಿದ್ದರೆಂದು ದೊಡ್ಡ ರಾದ್ಧಾಂತವೇ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಒಂದೊಮ್ಮೆ ಮುಖ್ಯಮಂತ್ರಿಗಳು ವೀರಪ್ಪನ್‌ಗೆ ಏಕವಚನ ಉಪಯೋಗಿಸುತ್ತಿದ್ದರೂ ಅದು ಅವರಿಬ್ಬರ ನಡುವಿನ ಆತ್ಮೀಯತೆಯ ಸಾಮೀಪ್ಯವನ್ನು ತೋರಿಸುತ್ತಿದೆ ಎಂದು ಕಿಡಿಗೇಡಿ ಪತ್ರಕರ್ತರು ಬಣ್ಣಹಚ್ಚುತ್ತಿದ್ದರೋ ಏನೊ!

ಕಳೆದವರ್ಷ ಇಲ್ಲಿ ನಡೆದ ‘ಅಕ್ಕ’ವಿಶ್ವಕನ್ನಡಸಮ್ಮೇಳನದ ಒಂದು ಸಂದರ್ಭವನ್ನಿಲ್ಲಿ ಉಲ್ಲೇಖಿಸುತ್ತ ಈ ಹರಟೆಯನ್ನು ಮುಗಿಸುತ್ತೇನೆ. ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ದಟ್ಸ್‌ಕನ್ನಡದ ಶಾಮಸುಂದರ್‌, ವಿಜಯಕರ್ನಾಟಕದ ವಿಶ್ವೇಶ್ವರ ಭಟ್‌ ಮತ್ತು ನಾವೆಲ್ಲ ಒಟ್ಟಾಗಿ ಹರಟುತ್ತಿದ್ದಾಗ ದಟ್ಸ್‌ಶಾಮ್‌ ಒಂದು ಸ್ವಾನುಭವವನ್ನು ಹಂಚಿಕೊಂಡದ್ದು ಹೀಗೆ - ‘‘ಸಮ್ಮೇಳನ ಸಭಾಂಗಣದ ಹೊರಗೆ ನಟಿ ತಾರಾ ಭೇಟಿಯಾದಳು... ಬೆಂಗಳೂರಲ್ಲಿ ಯಾವುದಾದ್ರೂ ಸಮಾರಂಭದಲ್ಲಿ ಅಥವಾ ಪ್ರೆಸ್‌ಮೀಟ್‌ನಲ್ಲಿ ಸಿಕ್ಕಾಗ ‘ನಮ್ಸ್ಕಾರ... ಹೇಗಿದ್ದೀರಿ?’ ಎಂದು ಬಹುವಚನ ಉಪಯೋಗಿಸುವ ತಾರಾ ಇವತ್ತು ಇಲ್ಲಿ ‘ಏನೋ ಶಾಮಾ... ಯಾವಾಗ್ಬಂದೆ...?’ ಎಂದು ಏಕವಚನದಲ್ಲಿ ಕರೆದಳು! ಇದಕ್ಕೆ shockಆಚರಣೆ ಮಾಡ್ಬೇಕಾ ಅಥವಾ ಅಮೆರಿಕೆಗೆ ಬಂದಾಗ ನಾನವಳಿಗೆ ಏಕಾಏಕಿ ಆತ್ಮೀಯನಾಗಿಬಿಟ್ಟೆ ಅಂದ್ಕೋಬೇಕಾ ಅರ್ಥವಾಗುವೊಲ್ತು...!’’

- srivathsajoshi@yahoo.com

ಇದನ್ನೂ ಓದಿ : ‘ಏನೆಂದು ಕರೆಯಲಿ ನಿನ್ನ...?’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X