• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

(ಏಕ)ವಚನದಲ್ಲಿ ನಾಮಾಮೃತ ತುಂಬಿ...

By Staff
|

ಮಾತಿನಲ್ಲಿ ವ್ಯಾಕರಣ ಇರಬೇಕೋ ಅಥವಾ ಪ್ರೀತಿ ಇರಬೇಕೋ? ಅನ್ನೋದು ದೊಡ್ಡ ಚರ್ಚೆಗೆ ಕಾರಣವಾಗುವಂತಹ ಸರಕು. ಆದರೆ ಏನಿರದಿದ್ದರೂ ಚಿಂತೆಯಿಲ್ಲ, ಮಾತು ಕೇಳಲು ನಿಂತವರಿಗೆ ಉಗುಳು ಸಿಡಿಯದಿದ್ದರೆ ಸಾಕು ಅಲ್ವಾ? ಈ ವಾರ(ವಿಚಿತ್ರಾನ್ನ -233)ಭಾಷೆಯಾಳಗಿನ ಮಾತಿನ ವರಸೆ ಮತ್ತು ವಚನ ಗೊಂದಲ.

  • ಶ್ರೀವತ್ಸ ಜೋಶಿ

‘‘ಗೌರವಾನ್ವಿತರೇ, ತಾವೊಬ್ಬ ಕಾಸುಪ್ರಯೋಜನವಿಲ್ಲದ ಶತಮೂರ್ಖರು!’’

ಪೊಲಂಡ್‌ ದೇಶದಲ್ಲಿ ಅಲ್ಲಿನ Polish ಭಾಷೆಯಲ್ಲಿ ಒಬ್ಬನನ್ನು ಬಯ್ಯಬೇಕಿದ್ದರೂ ಗೌರವಸೂಚಕ ಬಹುವಚನವನ್ನೇ ಉಪಯೋಗಿಸಬೇಕಂತೆ, "Respected Sir, You are a useless idiot" ಎಂಬ ಅರ್ಥ ಬರುವಂತೆ ಹೇಳಬೇಕಂತೆ! ಅಲ್ಲಿನ ಸಮಾಜದಲ್ಲಿ ಹದಿಹರೆಯ ದಾಟಿದ ಎಲ್ಲರನ್ನೂ - ಆತ/ಆಕೆ ಸಮಾಜದ ಯಾವುದೇ ಸ್ತರದಲ್ಲಿರಲಿ, ರಸ್ತೆಯನ್ನು ಸ್ವಚ್ಛಮಾಡುವ ಜಾಡಮಾಲಿಯೇ ಇರಲಿ, ಮುಸುರೆ ತಿಕ್ಕಲಿಕ್ಕೆ ಬರುವ ಮನೆಗೆಲಸದವಳೇ ಇರಲಿ - ಬಹುವಚನದಲ್ಲೇ ಸಂಬೋಧಿ-ಸಬೇಕಂತೆ. ‘ಪಾನ್‌/ಪಾನಿ’(ಪೊಲಿಷ್‌ನಲ್ಲಿ ಸರ್‌/ಲೇಡಿ ಅರ್ಥದ) ಪದಗಳನ್ನು ಉಪಯೋಗಿಸದೆ ಸಂಭಾಷಿಸಿದರೂ ಜರಿದರೂ ಜನ್ಮಜಾಲಾಡಿಸಿದರೂ ಆ ವ್ಯಕ್ತಿಯ ಅಸ್ತಿತ್ವವನ್ನೇ ಪ್ರಶ್ನಿಸಿ ಅವಹೇಳನ ಮಾಡಿದಂತಾಗುತ್ತದಂತೆ!

ಬಹುಶಃ ಅಷ್ಟು ಪೊಲಿಷ್‌ ಆಗಿರುವ ಪೊಲಿಷ್‌ ಭಾಷೆಯನ್ನು ಬಿಟ್ಟರೆ ಬೇರೆಲ್ಲೂ ಬೈಗುಳಕ್ಕೆ ಬಹುವಚನದ ಬಳಕೆಯಿರಲಿಕ್ಕಿಲ್ಲ. ನಮ್ಮ ಭಾಷೆಗಳಲ್ಲಾದರೆ, ಸಿಟ್ಟು-ಸಿಡುಕಿನ ಬಿರುಗಾಳಿ(‘ಚಂಡಿ’ಮಾರುತ?) ಬೀಸಿದಾಗ ಮೊದಲಿಗೆ ಮುರಿದುಬೀಳುವ ಮರವೆಂದರೆ ‘ವಚನ’ಪ್ರಜ್ಞೆ. ಮಾಮೂಲಾಗಿ ಶಿಷ್ಟಾಚಾರಕ್ಕಾಗಿಯೋ ದಾಕ್ಷಿಣ್ಯಕ್ಕೋ ಅಂತೂ ಬಹುವಚನದಲ್ಲಿ ಗಂಡನನ್ನು ಸಂಬೋ-ಧಿಸುವ ಹೆಂಡತಿ ಸಹ ಮುನಿದು ಮಾರಿಯಾದಾಗ ಅವಳ ನಾಲಿಗೆಯ ಮೇಲೆ ಏಕವಚನವಷ್ಟೇ ನಲಿದಾಡುವುದು. ಅದೂ ಏನು, ಏಕವಚನ ಎಂದರೆ ಇದ್ದುದರಲ್ಲಿ ಡೀಸೆಂಟ್‌, ಆಮೇಲೂ ಮೇರೆಮೀರಿದರೆ ಇಲ್ಲಿ ಮುದ್ರಿಸಲಸದಳವಾದಷ್ಟು ಸಹಸ್ರನಾಮಾವಳಿ!

ಆದರೆ ಏಕವಚನ ಪ್ರಯೋಗ ಸಿಟ್ಟಿನಿಂದ ಮಾತ್ರ ಆಗುವುದೆಂದೇನಿಲ್ಲ. ಸಿಟ್ಟಿನ ಮನಸ್ಥಿತಿಗೆ ತದ್ವಿರುದ್ಧವಾಗಿ, ಅಂದರೆ ಅತಿಯಾದ ಒಲವಿನಿಂದಲೂ ಸಲಿಗೆಯಿಂದಲೂ ಏಕವಚನದಲ್ಲಿ ಸಂಬೋಧನೆ ನಡೆಯಬಹುದು. ದೇವರ ಮೇಲಿನ ಭಕ್ತಿ ಉಕ್ಕಿಹರಿಯುವಂತೆ ಭಾವೋದ್ವೇಗದಿಂದಲೂ ಆಗಬಹುದು. ಇವತ್ತಿನ ಈ ಹರಟೆಯ ವಿಷಯ ಅದೇ - ಆತ್ಮೀಯತೆಯ ಏಕವಚನ, ಅನವಶ್ಯಕ ಆಡಂಬರಗಳಿಲ್ಲದ ಅನೌಪಚಾರಿಕ ಸಂವಹನ ಮತ್ತು ಅದರಿಂದಾಗುವ ಅಕ್ಕರೆಯ ಅಮೃತಪಾನ.

*

ಕನ್ನಡ ಬ್ಲಾಗ್‌ಗಳ ಪ್ರಸ್ತಾಪ ಬಂದಾಗೆಲ್ಲ ‘ತೂಕದ ವಿಚಾರಗಳುಳ್ಳ ಬ್ಲಾಗ್‌’ ಎಂದು ಕರೆಸಿಕೊಳ್ಳುವ ಪ್ರೊ।ಎಂ.ಎಸ್‌.ಶ್ರೀರಾಮ್‌ ಅವರ ‘ಕನ್ನಡವೇ ನಿತ್ಯ’ ಬ್ಲಾಗ್‌ನಲ್ಲಿ ಅವರು ವ್ಯಕ್ತಿಪರಿಚಯದ ಲಹರಿಗಳನ್ನು ಹರಿಸುವಾಗ ಏಕವಚನ ಪ್ರಯೋಗ ಮಾಡುತ್ತಾರೆ. ಇತ್ತೀಚೆಗಷ್ಟೇ ಅರುವತ್ತು ತುಂಬಿದ ತುಂಟಕವಿ ಬಿ.ಆರ್‌.ಲಕ್ಷ್ಮಣರಾವ್‌ ಬಗ್ಗೆ ಬರೆಯುವಾಗ ‘ಲಕ್ಷ್ಮಣ... ಅವನು... ಅವನನ್ನು...’ ಎಂದು ಏಕವಚನದಲ್ಲೇ ಬರೆದಿದ್ದರು.

ಇರಲಿ, ಪೌರಾಣಿಕ ಲಕ್ಷ್ಮಣ ಹೇಗೂ ಶ್ರೀರಾಮನ ತಮ್ಮನಾದ್ದರಿಂದ ಏಕವಚನ ಓಕೆ ಎನ್ನಬಹುದು, ಆದರೆ ಪ್ರೊ।ಶ್ರೀರಾಮ್‌ ಆಮೇಲೆ ಖ್ಯಾತ ಹನಿಕವಿ ಎಚ್‌.ಡುಂಡಿರಾಜ್‌ ಕುರಿತು ಬರೆದ ಲೇಖನದಲ್ಲೂ ‘‘ಡುಂಡಿರಾಜನದ್ದು ನಿಜಕ್ಕೂ ರೌಂಡೆಡ್‌ ಗ್ರೌಂಡೆಡ್‌ ವ್ಯಕ್ತಿತ್ವ... ಅವನು ಪದಗಳೊಂದಿಗೆ ಆಟವಾಡಿ ಅದ್ಭುತವಾಗಿ ಬರೆಯುತ್ತಾನೆ... ಅಂಕಣಬರಹದಿಂದ ಮುಕ್ತನಾಗಿ ಬರೆಯುವ ಸಾಹಸವನ್ನೂ ಅವನು ಮಾಡಬಲ್ಲ...’’ ಇತ್ಯಾದಿಯಾಗಿ ಏಕವಚನ ಪ್ರಯೋಗ ಬಳಸಿದ್ದಾರೆ.

ಡಾ।ಯು.ಆರ್‌.ಅನಂತಮೂರ್ತಿಯವರು ಕೆ.ವಿ.ಸುಬ್ಬಣ್ಣ ಅವರ ಬಗ್ಗೆ ಬರೆಯುವಾಗಲೂ ಇದೇ ನಮೂನೆಯ ಏಕವಚನಪ್ರಯೋಗವನ್ನು ಮಾಡುತ್ತಾರೆ. ಓರಗೆಯವರು, ಸಲಿಗೆಯುಳ್ಳವರು ಪರಸ್ಪರರಲ್ಲಿ ಚಾಲ್ತಿಯಿರುವ ಮೌಖಿಕ ಶಿಷ್ಟಾಚಾರವನ್ನೇ ಲಿಖಿತವಾಗಿಸುವುದಕ್ಕೆ ಇವೆಲ್ಲ ನಿದರ್ಶನಗಳು. ಓದುಗರಾಗಿ ನಮಗೆ ಇದು ಸ್ವಲ್ಪ ಇರುಸುಮುರುಸೆನಿಸುತ್ತದೆ, ಯಾಕೆಂದರೆ ಆ ವ್ಯಕ್ತಿಗಳಿಗೆಲ್ಲ ನಮ್ಮ ಮನಸ್ಸಲ್ಲಿ ಒಂದು ಗೌರವದ ಚೌಕಟ್ಟು ಇರುತ್ತದೆ, ನಾವೇ ಆಗಿದ್ದರೆ ಅವರಿಗೆ ಬಹುವಚನ ಉಪಯೋಗಿಸುವುದಿರುತ್ತದೆ. ಆದರೆ ಲೇಖಕ ಮತ್ತು ಉಲ್ಲೇಖಿತ ವ್ಯಕ್ತಿಯ ನಡುವಿನ ಸಾಮೀಪ್ಯದ ಆತ್ಮೀಯತೆಯನ್ನು ಅರ್ಥಮಾಡಿಕೊಂಡಾಗ ಅದೇ ಒಂದು ಒಳ್ಳೆಯ ಅನುಭವವೆನಿಸುತ್ತದೆ.

ನೀವು ಗಮನಿಸಿದ್ದೀರೋ ಇಲ್ಲವೋ - ನಮ್ಮ ಬರವಣಿಗೆಯಲ್ಲಿ ವಿದೇಶಿ ವಿಜ್ಞಾನಿಗಳು, ಸಾಹಿತಿಗಳು, ಕ್ರೀಡಾಳುಗಳಿಗೆಲ್ಲ ಹೆಚ್ಚಾಗಿ ಏಕವಚನವೇ ಇರುತ್ತದೆ. ‘‘ಸ್ನಾನಗೃಹದಿಂದ ಆರ್ಕಿಮಿಡಿಸ್‌ ಬತ್ತಲೆಯಾಗಿಯೇ ಓಡಿದನು...’’ ಎಂದೋ, ‘‘ಎಲೆಕ್ಟ್ರಿಕ್‌ ಬಲ್ಬನ್ನು ಕಂಡುಹಿಡಿದ ನಂತರ ಎಡಿಸನ್‌ ಈಗಿನ ಜಿ.ಇ ಕಂಪೆನಿಯನ್ನು ಸ್ಥಾಪಿಸಿದನು...’’ ಎಂದೋ ಬರೆಯುವ ನಾವು ಸಿ.ವಿ.ರಾಮನ್‌ ವಿಷಯವಾದರೆ ‘‘ಅವರು ವಿಜ್ಞಾನದಷ್ಟೇ ಸಂಗೀತಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದರು...’’ ಎಂದೇ ಬರೆಯುತ್ತೇವೆ! ಆದರೆ ನಮ್ಮವರೇ ಆದ ಕಾಳಿದಾಸ, ಭಾಸ, ಪಂಪ ರನ್ನ ಕುಮಾರವ್ಯಾಸ ವಿಚಾರ ಬಂದಾಗ ಮತ್ತೆ ಶೇಕ್ಸ್‌ಪಿಯರ್‌ ವರ್ಡ್ಸ್‌ವರ್ತ್‌ ಮಿಲ್ಟನ್‌ ನಂತೆಯೇ ಎಲ್ಲರಿಗೂ ಏಕವಚನವೇ ಗತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more