ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಾಶೆ ನೋಡುವ ನೈಪುಣ್ಯ ನಾರಿಯರಿಗೇಕಿಲ್ಲ? (ಭಾಗ 2)

By Super Admin
|
Google Oneindia Kannada News

Why men are smarter than women in map reading?
ನ್ಯೂಯಾರ್ಕ್‍ನ ರಾಚೆಸ್ಟರ್ ಯುನಿವರ್ಸಿಟಿಯ ಸೈಕಾಲಜಿ ಪ್ರೊಫೆಸರ್ ಟಾಮ್ ಬೆವರ್ ಮತ್ತವರ ತಂಡ ಒಮ್ಮೆ ಈ ಪ್ರಯೋಗವನ್ನು ಮಾಡಿತ್ತು. ಒಂದು ಚಕ್ರವ್ಯೂಹವನ್ನು ನಿರ್ಮಿಸಿ ಅದರೊಳಗೆ ಕೆಲ ಗಂಡು ಮತ್ತು ಹೆಣ್ಣು ಅಭಿಮನ್ಯುಗಳನ್ನು ಬಿಟ್ಟು ಅವರು ಎಷ್ಟು ಬೇಗ ಹೊರಬರುತ್ತಾರೆಂದು ಪರೀಕ್ಷಿಸಿದರು. ಸರಾಸರಿ ಅವಧಿ ಸಮಪ್ರಮಾಣದಲ್ಲೇ ಇತ್ತು. ಮುಂದಿನ ಹಂತದಲ್ಲಿ ಆ ಪರೀಕ್ಷಾರ್ಥಿಗಳಿಗೆ ಕೆಲವು ನಕ್ಷೆಗಳನ್ನು ತೋರಿಸಿ ಆಗಷ್ಟೇ ಅವರೆಲ್ಲ ಹೊಕ್ಕುಬಂದಿದ್ದ ಚಕ್ರವ್ಯೂಹದ ನಕ್ಷೆ ಅವುಗಳ ಪೈಕಿ ಯಾವುದು ಎಂದು ಕೇಳಿದಾಗ, ಹುಡುಗರ ಪೈಕಿ ಮುಕ್ಕಾಲುಪಾಲು ಸರಿಯಾಗಿ ಗುರುತಿಸಿದರೆ ಹುಡುಗಿಯರ ಸರಿಯುತ್ತರ ಶೇಕಡಾ 25 ಮಾತ್ರವಿತ್ತು.

ಆಮೇಲೆ ಅವರೆಲ್ಲರಿಗೂ ಚಕ್ರವ್ಯೂಹದ ಮ್ಯಾಪ್ ಬಿಡಿಸಲು ಹೇಳಿದಾಗಲೂ ಹುಡುಗರೇ ಹೆಚ್ಚು ನಿಖರತೆ ಪ್ರದರ್ಶಿಸಿದ್ದರು. ಆಶ್ಚರ್ಯವೆಂದರೆ ಚಕ್ರವ್ಯೂಹದ ಒಳಗೆ ತೆಗೆದಿದ್ದ ಕೆಲ ಫೊಟೋಗಳನ್ನು ತೋರಿಸಿ ಅವು ಯಾವ ಭಾಗದಲ್ಲಿ ತೆಗೆದವೆಂಬುದನ್ನು ಕೇಳಿದಾಗ ಮಾತ್ರ ಹೆಣ್ಮಕ್ಕಳೇ ಹೆಚ್ಚೂಕಡಿಮೆ ಎಲ್ಲರೂ ಸರಿಯಾಗಿ ಉತ್ತರಿಸಿದ್ದರು.

ಆ ಪ್ರಯೋಗದ ಒಟ್ಟು ಫಲಿತಾಂಶ: ಗಂಡಸರಿಗೆ ದೂರ-ದಿಕ್ಕು-ಸಮಯ ಪ್ರಮಾಣಗಳ ಪರಿವೆ ಹೆಚ್ಚು; ಹೆಂಗಸರಿಗೆ ದೃಶ್ಯಾವಳಿಯನ್ನು ನೆನಪಿಡುವ ಸಾಮರ್ಥ್ಯ ಹೆಚ್ಚು.

ಇಂಗ್ಲೆಂಡ್‍ನ ವಿಶ್ವವಿದ್ಯಾಲಯಗಳಲ್ಲೂ ಈ ಕುರಿತು ಪ್ರಯೋಗಗಳು ನಡೆದಿವೆ. ಅಲ್ಲಿನ ಡಾ| ಮೈಕೇಲ್ ಟ್ಲೌಕಾ ಹೇಳುವಂತೆ ಮಾನಸಿಕ ಪರಿಭ್ರಮಣ (mental rotation) ಅಂತೊಂದಿರುತ್ತದೆ, ನಮ್ಮ ಸುತ್ತಲಿನ ಯಾವುದೇ ವಸ್ತುವನ್ನಾದರೂ ವಿವಿಧ ಕೋನಗಳಿಂದ ಮನಸ್ಸಿನೊಳಗೆ ಚಿತ್ರಿಸಿಕೊಳ್ಳುವ ಪ್ರಕ್ರಿಯೆ. ಮ್ಯಾಪ್ ರೀಡಿಂಗ್ ಅದಕ್ಕೊಂದು ಅತ್ಯುತ್ತಮವಾದ ಪ್ರಾಯೋಗಿಕ ಉದಾಹರಣೆ. ಈ ಪ್ರಕ್ರಿಯೆಯಲ್ಲಿ ಗಂಡಸರ ಮೆದುಳು ಹೆಂಗಸರದಕ್ಕಿಂತ ಸಾಕಷ್ಟು ದಕ್ಷತೆ ತೋರಿಸುತ್ತದೆ. ಇದಕ್ಕೆ ಸಂಶೋಧಕರು ಕೊಡುವ ಸಮರ್ಥನೆಯೂ ಕುತೂಹಲಕರವಾಗಿಯೇ ಇದೆ.

ಡಾ|ಮೈಕೇಲ್ ಪ್ರಕಾರ ಇದರಲ್ಲಿ ಪ್ರಕೃತಿ ಮತ್ತು ಪೋಷಣೆ (nature and nurture) ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ಬಾಲ್ಯದಲ್ಲಿ ಗಂಡುಮಕ್ಕಳ ಆಟಿಗೆ ಅಥವಾ ಆಟಗಳು - ಕಾರು, ರೈಲ್ವೇ ಟ್ರಾಕ್, ಬಿಲ್ಡಿಂಗ್, ಟವರ್ - ಇವೆಲ್ಲದರಲ್ಲಿ ದೂರ-ದಿಕ್ಕು-ಸಮಯಗಳ ಪ್ರಮಾಣದ ಕಲ್ಪನೆಯು ಮಗುವಿನ ಮೆದುಳಿಗೆ ಪರಿಚಯವಾಗುತ್ತದೆ. ಹೆಣ್ಣುಮಗುವಾದರೋ ಬಾರ್ಬಿಗೊಂಬೆಗೆ ಬಣ್ಣದಲಂಗ ತೊಡಿಸುವ, ಹಾಲು ಕುಡಿಸುವ ಸಂಭ್ರಮಪಡುವಾಗ ಆ ಜ್ಞಾನಾರ್ಜನೆಗೆ ಅಸ್ಪದವಿರುವುದಿಲ್ಲ. ಮುಂದೆ ಗಂಡುಮಗು ಬೆಳೆದು ಫುಟ್‍ಬಾಲ್, ಕ್ರಿಕೆಟ್ ಆಟಗಳನ್ನು ಆಡತೊಡಗಿದಾಗಲೂ ತಾನಿರುವ ಜಾಗ (positioning) ಮತ್ತು ಚಲಿಸಬೇಕಾಗಿ ಬಂದಾಗ ತಾನು ಸಾಗಬೇಕಾದ ದಿಕ್ಕು (direction) ಇವುಗಳ ಸ್ಪಷ್ಟಕಲ್ಪನೆ ಇದ್ದೇಇರಬೇಕಾಗುತ್ತದೆ. ಸಹಜವಾಗಿಯೇ ಮಾನಸಿಕ ಪರಿಭ್ರಮಣ ಸಾಮರ್ಥ್ಯ ಗಂಡು ಮಗುವಿನಲ್ಲಿ ಮೈಗೂಡಿಕೊಳ್ಳುತ್ತದೆ.

ಇದರ ಕುರಿತು ಇನ್ನೊಂದು ತೆರನಾದ ವಿಶ್ಲೇಷಣೆಯನ್ನೂ ಕೆಲವರು ಮಾಡುತ್ತಾರೆ. ಅದೇನೆಂದರೆ, ಆದಿಮಾನವನ ಕಾಲದಿಂದಲೂ ಗಂಡಸು ಗೂಡಿನಿಂದ ಹೊರಗೆ ಹೋಗಿ (ಬೇಟೆಯಾಡಲಿಕ್ಕೆ, ಆಹಾರ ಸಂಗ್ರಹಣೆಗೆ) ದಿನವಿಡೀ ಅಲೆದಲೆದು ಸಂಜೆಗೆ ಹಿಂದಿರುಗುವುದು, ಹೆಂಗಸು ಗೂಡಿನಲ್ಲೇ ಅಥವಾ ಅಲ್ಲೇ ಅಕ್ಕಪಕ್ಕ ಅಡುಗೆಪಡುಗೆ ಮತ್ತಿತರ ಕೆಲಸಗಳನ್ನು ಮಾಡಿಕೊಂಡಿರುವುದು - ಇದು ಜೀವನಕ್ರಮ. ಸ್ವಾಭಾವಿಕವಾಗಿಯೇ ಗಂಡಸಿಗೆ ದೂರ-ದಿಕ್ಕು-ಸಮಯಗಳ ಪ್ರಜ್ಞೆ ಸದಾ ಜಾಗ್ರತವಾಗಿರಬೇಕಿತ್ತು, ತಾನಿರುವ ಸ್ಥಳದಿಂದ ಗೂಡಿಗೆ ಹಿಂದಿರುಗುವುದಕ್ಕೆ ಒಂದು ನಕಾಶೆಯನ್ನು ಅವನು ಮನಸ್ಸಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತಿತ್ತು. ಹೀಗೆ ಮ್ಯಾಪ್ ರೀಡಿಂಗ್ ಗಂಡಸಿನ ರಕ್ತದಲ್ಲೇ ಅವಿಭಾಜ್ಯ ಅಂಶವಾಯಿತು.

ಆದರೆ ವಿಜ್ಞಾನದ ಪ್ರಕಾರ ಅದು ರಕ್ತದಲ್ಲಲ್ಲ, ಮೆದುಳಿನ ವಿಶೇಷ ದ್ರವ್ಯದಲ್ಲಿ ರೂಪುಗೊಂಡಿರುವುದು. ಮನುಷ್ಯನ ಮಿದುಳಿನಲ್ಲಿ ಬೂದು ಮತ್ತು ಬಿಳಿ ಈರೀತಿ ಎರಡು ದ್ರವ್ಯಗಳಿರುತ್ತವೆ. ಗಂಡಸರಲ್ಲೂ ಹೆಂಗಸರಲ್ಲೂ ಇವೆರಡು ಸಮಪ್ರಮಾಣದಲ್ಲೇ ಇರುತ್ತವೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವುದರಲ್ಲಿ ಮಾತ್ರ ವ್ಯತ್ಯಾಸವಿದೆ. ಗಂಡಸರು ಬೂದುದ್ರವ್ಯವನ್ನು ಹೆಚ್ಚು ಉಪಯೋಗಿಸಿದರೆ ಹೆಂಗಸರು ಬಿಳಿದ್ರವ್ಯವನ್ನುಪಯೋಗಿಸುತ್ತಾರೆ. ಲೆಕ್ಕಬಿಡಿಸುವುದು, ನಕ್ಷೆ ಅರ್ಥಮಾಡಿಕೊಳ್ಳುವುದು, ತಾರ್ಕಿಕ ವಿಶ್ಲೇಷಣೆ ನಡೆಸುವುದು - ಈ ಎಲ್ಲ ಚಟುವಟಿಕೆಗಳಿಗೆ ಬೂದುದ್ರವ್ಯ ಜೀವರಸ. ಭಾವೋದ್ವೇಗ, ಭಾಷೆಯ ಉಪಯೋಗ, ಕುಸುರಿ ನಿರ್ಮಾಣ ಇವೇ ಮುಂತಾದ ಚಟುವಟಿಕೆಗಳಿಗೆ ಬಿಳಿದ್ರವ್ಯ ಮುಖ್ಯ ಇಂಧನ. ಮ್ಯಾಪ್ ರೀಡಿಂಗ್‌ನಲ್ಲಿ ಗಂಡಸರೇಕೆ ಪಳಗಿದವರಾಗುತ್ತಾರೆ, ಹೆಂಗಸರು ಪರದಾಡುತ್ತಾರೆ ಎಂಬುದಕ್ಕೆ ಇದು ಅತಿ ಸಮಂಜಸ ವೈಜ್ಞಾನಿಕ ವಿವರಣೆ.

ಇಲ್ಲೊಂದು ಸಂಗತಿಯನ್ನು ನಾವು ಗಮನಿಸಬೇಕು! ನಮ್ಮ ನಿತ್ಯಬಳಕೆಯ ಮ್ಯಾಪ್‍ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಇಂಜನಿಯರಿಂಗ್, ಸರ್ವೆಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡುಕ್ಷೇತ್ರಗಳೇ ತಾನೆ? ಇವತ್ತು ಚಾಲ್ತಿಯಿರುವ ಮ್ಯಾಪ್‍ಗಳೆಲ್ಲ ಗಂಡಸರು ರಚಿಸಿ ಗಂಡಸರು ಮಾರಾಟಮಾಡಿ ಗಂಡಸರು ಉಪಯೋಗಿಸುವಂಥವೇ ಇರೋದು ಎಂದರೂ ತಪ್ಪಲ್ಲ. ಒಂದುವೇಳೆ ಹೆಂಗಸರೇ ಮ್ಯಾಪ್ ರಚಿಸುತ್ತಿದ್ದರೆ? ಆಗ ಅದರಲ್ಲಿ ಚೌಕಗಳಜಾಲ ಮತ್ತು ಬಿಂದುಗಳ ಬದಲಿಗೆ ಲ್ಯಾಂಡ್‍ಮಾರ್ಕ್‌ಗಳ ಚಿತ್ರಗಳೇ ಇರುತ್ತಿದ್ದವು, ಸೀರೆಯಂಗಡಿ ಇರುವಲ್ಲಿ ಸೀರೆಯ ಚಿತ್ರ, ಬಾಟಾ ಸ್ಟೋರ್ ಇರುವಲ್ಲಿ ಪಾದರಕ್ಷೆಯ ಚಿತ್ರ... ಇತ್ಯಾದಿ. ಇನ್ನೊಬ್ಬ ಹೆಂಗಸು ಆ ಮ್ಯಾಪ್‌ಅನ್ನು ನೋಡಿದರೆ ಆಕೆಗದು ಕ್ಷಣಾರ್ಧದಲ್ಲಿ ಅರ್ಥವಾಗುತ್ತಿತ್ತು!

ಅಂದಮೇಲೆ, ಭಾಗ್ಯದ ಬಳೆಗಾರನಿಗೆ ಮುತ್ತೈದೆ ಹೆಣ್ಣು ತವರುಮನೆಗೆ ಹೋಗಲು ಬಾಳೆ ಸೀಬೆ ಗಾಣ ಆಲೆಮನೆ ನವಿಲು ಸಾರಂಗ ಮುಂತಾಗಿ ಲ್ಯಾಂಡ್‌ಮಾರ್ಕ್‌‍ಗಳಿಂದಷ್ಟೇ ಡೈರೆಕ್ಷನ್ಸ್ ಕೊಟ್ಟ ಪರಿ ವೈಜ್ಞಾನಿಕವಾಗಿಯೂ ಸರಿಯಾಗಿಯೇ ಇದೆಯೆಂದಾಯಿತು! - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X