ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಾಶೆ ನೋಡುವ ನೈಪುಣ್ಯ ನಾರಿಯರಿಗೇಕಿಲ್ಲ?

By * ಶ್ರೀವತ್ಸ ಜೋಶಿ
|
Google Oneindia Kannada News

Why men are smarter than women in map reading?
ಭಾಗ್ಯದ ಬಳೆಗಾರನಿಗೆ ಮುತ್ತೈದೆ ಹೆಣ್ಣು ತವರುಮನೆಗೆ ಹೋಗಲು ಬಾಳೆ, ಸೀಬೆ, ಗಾಣ, ಆಲೆಮನೆ, ನವಿಲು, ಸಾರಂಗ ಮುಂತಾಗಿ ಲ್ಯಾಂಡ್‌ಮಾರ್ಕ್‌‍ಗಳಿಂದಷ್ಟೇ ಡೈರೆಕ್ಷನ್ಸ್ ಕೊಟ್ಟ ಪರಿ ವೈಜ್ಞಾನಿಕವಾಗಿಯೂ ಸರಿಯಾಗಿಯೇ ಇದೆ. ಹೇಗೆ ಅನ್ನುವಿರಾ? ಓದಿ; ಈ ವಾರದ ವಿಚಿತ್ರಾನ್ನ(246).

ಭಾಗ್ಯದ ಬಳೆಗಾರನನ್ನು ತನ್ನ ತವರುಮನೆಗೂ ಒಮ್ಮೆ ಹೋಗಿಬರುವಂತೆ ಕೇಳಿದ ಮುತ್ತೈದೆಹೆಣ್ಣು, ಅವನಿಗೆ ಅಲ್ಲಿಗೆ ಹೋಗುವ ಡೈರಕ್ಷನ್ಸ್ ಕೊಟ್ಟದ್ದು ಹೇಗೆ? ಬಾಳೆಗಿಡ ಸೀಬೆಗಿಡಗಳ ನಡುವಿನ ದಾರಿಹಿಡಿ, ಅಂಚಿನಮನೆಗೆ ಕಂಚಿನ ಕದವಿರೋದನ್ನು ಕಾಣು, ಆಮೇಲೊಂದು ಆಲೆಮನೆ ಸಿಗ್ತದೆ, ಗಾಣ ತಿರುಗುತ್ತಿರ್ತದೆ, ನವಿಲುಸಾರಂಗಗಳು ಕುಣೀತಿರ್ತಾವೆ. ಮುತ್ತಿನಚಪ್ಪರ ಹಾಕಿದ ಹಟ್ಟಿಯಲ್ಲಿ ನಟ್ಟನಡುವೆ ಪಗಡೆಯಾಡ್ತಾ ಇರ್ತಾಳೆ ನನ್ನ ಹಡೆದವ್ವ..." ಹೀಗೆ ತಾನೆ ಅವಳು ದಾರಿತೋರಿಸಿದ್ದು?

ಆಕೆ ತವರುಮನೆಹಾದಿಯಲ್ಲಿ ಸಿಗುವ ಎಲ್ಲ ದಾರಿಗುರುತು(ಲ್ಯಾಂಡ್‍ಮಾರ್ಕ್) ಅಥವಾ ದೃಶ್ಯಾವಳಿ‍ಗಳ ಬಗ್ಗೆ ಹೇಳಿದಳೇ ವಿನಹ ಈ ರಸ್ತೆಯಲ್ಲಿ ಪಶ್ಚಿಮಾಭಿಮುಖವಾಗಿ ಇಷ್ಟು ದೂರ ಹೋಗು, ಅಲ್ಲಿ ರಸ್ತೆ ಕವಲಾದಾಗ ಎಡಕ್ಕೆ ತಿರುಗುವ ರಸ್ತೆಯಲ್ಲಿ ಸಾಗು, ಅದರಲ್ಲಿ ಎಂಟ್ಹತ್ತು ನಿಮಿಷ ನಡೆಯುವಷ್ಟು ಹೊತ್ತಿಗೆ ಒಂದು ಕೆರೆದಂಡೆಯ ಮೇಲಿನ ಕಾಲ್ದಾರಿ ಸಿಗುತ್ತೆ, ಅದರ ನಂತರ ನೂರು ಹೆಜ್ಜೆ ಹಾಕಿದರೆ ನನ್ನ ತವರುಮನೆಯ ಗೇಟು ಕಾಣಿಸ್ತದೆ..." ಎನ್ನಲಿಲ್ಲವೇಕೆ?

ಏಕೆಂದರೆ ಆಕೆಯದು ಹೆಣ್ಣುತಲೆ!

Why men are smarter than women in map reading?ಒಂದುವೇಳೆ ಅವಳ ಗಂಡನೇ ಬಳೆಗಾರನಿಗೆ ಡೈರೆಕ್ಷನ್ಸ್ ಕೊಡೋದಾಗಿದ್ರೆ ಅಕ್ಷರಶಃ ಈ ಮೇಲಿನ ದೂರ-ದಿಕ್ಕು-ಸಮಯ ಪರಿಗಣನೆಗಳ ರೀತಿಯದನ್ನೇ ಹೇಳುತ್ತಿದ್ದ. (ಬೇಕಿದ್ದರೆ ತಮಾಷೆಗಾಗಿ, ಅಮೆರಿಕದಲ್ಲಾಗಿದ್ದಿದ್ರೆ ಇಂಟರ್‌ಸ್ಟೇಟ್ ಹೈವೇ 270 ನಾರ್ತ್‌ನಲ್ಲಿ ಹೋಗು, ಎಕ್ಸಿಟ್ 11 ತಗೋ, ಮೂರನೇ ಸಿಗ್ನಲ್ ಲೈಟ್‍ನಲ್ಲಿ ಲೆಫ್ಟ್ ಟರ್ನ್ ತಗೋ. ಸ್ಟಾಪ್ ಸೈನ್‍ನಲ್ಲಿ ರೈಟ್‌ಗೆ ಹೋದರೆ ಬಲಭಾಗದಲ್ಲಿ 3ನೇ ಇಂಡಿಪೆಂಡೆಂಟ್ ಹೌಸ್ ನಮ್ಮ ಮಾವನದ್ದು" ಎನ್ನುತ್ತಿದ್ದ ಎಂದಿಟ್ಟುಕೊಳ್ಳಿ). ಅಮೆರಿಕದಲ್ಲಿರಲಿ ಭಾರತದಲ್ಲಿರಲಿ, ಗಂಡ ಹೇಳಿದ ದೂರ-ದಿಕ್ಕು-ಸಮಯ ಪರಿಗಣನೆಯ ಡೈರೆಕ್ಷನ್ಸ್ ಬಳೆಗಾರನಿಗೆ ಚಾಚೂತಪ್ಪದೆ ಅರ್ಥವಾಗುತ್ತಿತ್ತು.

ಏಕೆ?ಏಕೆಂದರೆ ಅವೆರಡೂ ಗಂಡು ತಲೆಗಳು!

ಹೌದು, ನಕಾಶೆ ನೋಡುವುದು (ಮ್ಯಾಪ್ ರೀಡಿಂಗ್) ಮತ್ತು ಮಾರ್ಗದರ್ಶನ (ಡೈರೆಕ್ಷನ್) ವಿಷಯಕ್ಕೆ ಬಂದಾಗ ಹೆಣ್ಣು ಮತ್ತು ಗಂಡಿನ ಮಿದುಳುಗಳಲ್ಲಿ ಸ್ಪಷ್ಟ ವ್ಯತ್ಯಾಸವಿರುತ್ತದೆ. ಮ್ಯಾಪ್‍ರೀಡಿಂಗ್ ಅನ್ನೋದು ಗಂಡಸರಿಗೆ ನೀರುಕುಡಿದಷ್ಟು ಸುಲಭವಾದರೆ ಹೆಣ್ಮಕ್ಕಳಿಗೆ ಅದು ಅತಿಕ್ಲಿಷ್ಟಕರ ಸಂಗತಿ. ಎಷ್ಟು ಕ್ಲಿಷ್ಟ ಎನ್ನುವುದಕ್ಕೆ ಉದಾಹರಣೆಯೆಂದರೆ, ದಕ್ಷಿಣಾಭಿಮುಖವಾಗಿ ಹೋಗುವಾಗ ಮ್ಯಾಪನ್ನು ತಲೆಕೆಳಗಾಗಿ ಹಿಡಿದು (ಮ್ಯಾಪ್‍ನಲ್ಲಿ ಯಾವಾಗಲೂ ಉತ್ತರದಿಕ್ಕು ಮೇಲಕ್ಕೆ, ಪೂರ್ವದಿಕ್ಕು ಬಲಕ್ಕೆ ಇರೋದಲ್ವೇ?) ಅನುಸರಿಸುವ ಹೆಂಗಸರು ಅನೇಕರಿದ್ದಾರೆ! ಮ್ಯಾಪ್‍ಅನ್ನು ಹಾಗೆ ಹಿಡಿಯುವುದರಿಂದ ಸುತ್ತಲೂ ಕಾಣುತ್ತಿರುವುದನ್ನು ಮ್ಯಾಪ್‌ನೊಂದಿಗೆ ತಾಳೆ ಮಾಡುವುದು ಅವರಿಗೆ ಸುಲಭವಾಗುತ್ತದೆ.

ಯಾಕಿರಬಹುದು ಹೀಗೆ? ಹೆಣ್ಣಿಗಿಂತ ಗಂಡು ಎಲ್ಲ ವಿಧದಲ್ಲೂ ಶಾರ್ಪ್, ಇಂಟೆಲಿಜೆಂಟ್ ಅಂತೇನಾದ್ರೂ ಬರೆದ್ರೆ ಮುಗೀತು ನನ್‍ಕಥೆ! ನಿಜಸಂಗತಿಯೇನೆಂದರೆ ಹೆಣ್ಣು ಮತ್ತು ಗಂಡು ಮಿದುಳುಗಳು ಮಾಹಿತಿಸಂಗ್ರಹ ಮತ್ತು ಸಂಸ್ಕರಣ ಮಾಡುವ ವಿಧಾನದಲ್ಲಿ ವ್ಯತ್ಯಾಸವಿರುವುದು ಹೌದಾದರೂ ಅವುಗಳ ಸಾಮರ್ಥ್ಯದಲ್ಲಿ ಅಲ್ಲ. ಒಂದುರೀತಿಯಲ್ಲಿ, ಮ್ಯಾಕಿಂಟೊಶ್ ಕಂಪ್ಯೂಟರ್ ಮತ್ತು ವಿಂಡೋಸ್ ಪಿಸಿ ನಡುವೆ, ಇಂಟರ್‌ನೆಟ್ ಎಕ್ಸ್‌ಪ್ಲೋರ‌ರ್ ಮತ್ತು ಮೊಜಿಲ್ಲಾ ಬ್ರೌಸರ್‌‍ಗಳ ನಡುವೆ ಸಾಮರ್ಥ್ಯ ಒಂದೇ ಇದ್ದರೂ ಕಾರ್ಯತಂತ್ರದಲ್ಲಿ ವ್ಯತ್ಯಾಸವಿರುತ್ತದಲ್ಲ, ಹಾಗೆ.

ಹೆಣ್ಣು-ಗಂಡು ಮಿದುಳುಗಳ ಕಾರ್ಯವಿಧಾನದ ವ್ಯತ್ಯಾಸವನ್ನರಿಯಲು ಒಂದು ಪರೀಕ್ಷೆ. ಒಂದು ಚಕ್ರಬಿಂಬಕೋಟೆ (maze) ಇರುತ್ತದೆಂದುಕೊಳ್ಳಿ. ಅದರೊಳಗೆ ಕೆಲ ಹೆಂಗಸರನ್ನೂ ಗಂಡಸರನ್ನೂ ಬಿಟ್ಟು ಅವರೆಲ್ಲ ಅದರಿಂದ ಯಶಸ್ವಿಯಾಗಿ ಹೊರಬರಲು ತಗಲುವ ಅವಧಿಯನ್ನು ಲೆಕ್ಕಹಾಕುವುದು, ಅದು ಹೆಚ್ಚುಕಡಿಮೆ ಎಲ್ಲರಿಗೂ ಏಕಪ್ರಮಾಣದಲ್ಲಿದ್ದರೂ, ಹೊರಬರುವ ದಾರಿಯನ್ನು ಕಂಡುಕೊಳ್ಳುವ ಬಗೆಯಲ್ಲಿ ಗಂಡಿಗೂ ಹೆಣ್ಣಿಗೂ ವ್ಯತ್ಯಾಸವಿರುತ್ತದೆ. ಗಂಡಸರು ಹೆಚ್ಚಾಗಿ ಜ್ಯಾಮಿತಿ(ಜಿಯೊಮೆಟ್ರಿ) ಜ್ಞಾನವನ್ನು ಬಳಸಿದರೆ ಹೆಂಗಸರು ಲ್ಯಾಂಡ್‌ಮಾರ್ಕ್‌ಗಳನ್ನು ಅವಲಂಬಿಸುತ್ತಾರೆ. ಮುಂದಿನ ಭಾಗ...

English summary
Why women are not good in finding locations? there is a startling difference in finding locations between man and women. Find out how and why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X