ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಬೆಟ್ : ಹವಾನಿಯಂತ್ರಣವೂ ಬೋಧಿವಿಕಾಸವೂ!

By Staff
|
Google Oneindia Kannada News

ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ಆಗರ. ಓದಿ ಆ ವಿವರ ವಿಚಿತ್ರಾನ್ನದಲ್ಲಿ ಈ ವಾರ.

  • ಶ್ರೀವತ್ಸ ಜೋಶಿ

Dalai lama ಪ್ರಶ್ನೆ : ಟಿಬೆಟ್ ಕುರಿತು ಒಂದು ಪುಟಕ್ಕೆ ಮೀರದಂತೆ ಟಿಪ್ಪಣಿ ಬರೆಯಿರಿ.

ಉತ್ತರ : "ಸಮುದ್ರಮಟ್ಟದಿಂದ ಅತಿಹೆಚ್ಚು ಎತ್ತರದಲ್ಲಿ, ಅಂದರೆ ಸುಮಾರು 5000 ಮೀಟರ್ ಎತ್ತರದಲ್ಲಿರುವ ದೇಶ ಟಿಬೆಟ್. ಈ ಕಾರಣದಿಂದಲೇ ಇದು ಪ್ರಪಂಚದ ಚಾವಣಿ' ಎಂದು ಹೆಸರುವಾಸಿಯಾಗಿದೆ. ಎರಡೂವರೆ ಮಿಲಿಯನ್ ಚದರ ಕಿಲೊಮೀಟರ್‌ನಷ್ಟು ವಿಸ್ತೀರ್ಣವಿರುವ ಟಿಬೆಟ್‌ನ ಜನಸಂಖ್ಯೆ ಸುಮಾರು ಹದಿಮೂರು ಮಿಲಿಯನ್‌ನಷ್ಟು ಇದೆ. ಬೌದ್ಧಧರ್ಮದ ಪರಮಗುರು ದಲಾಯಿಲಾಮಾ ಅವರ ಧರ್ಮಪೀಠವಿರುವುದು ಟಿಬೆಟ್‌ನಲ್ಲೇ. ಅವಲೋಕಿತೇಶ್ವರ ಬುದ್ಧನ ಅವತಾರವೆಂದು ನಂಬಲಾದ ದಲಾಯಿಲಾಮಾ ಮತ್ತವರ ಬೋಧನೆಗಳಿಂದಾಗಿ ಟಿಬೆಟ್‌ಗೆ ಪ್ರಪಂಚಭೂಪಟದಲ್ಲಿ ಉನ್ನತವಾದ ಸ್ಥಾನವಿದೆ. ಅಂತಹ ಟಿಬೆಟ್ ಈಗ 40 ವರ್ಷಗಳಿಂದೀಚೆಗೆ ಚೈನಾ ದೇಶದ ನಿಯಂತ್ರಣಕ್ಕೊಳಗಾಗಿದೆ; ಸ್ವಾಭಿಮಾನಿ ಟಿಬೆಟಿಯನ್ನರು ಸ್ವಾತಂತ್ರ್ಯಕ್ಕಾಗಿ ಹೋರಾಡುವಂತಾಗಿದೆ..."

ಹೀಗೆ ಒಂದಿಷ್ಟು ಜಿಯಾಗ್ರಫಿ, ಸ್ವಲ್ಪ ಹಿಸ್ಟರಿ, ಒಂಚೂರು ಸಿವಿಕ್ಸ್ ಅಂಶಗಳನ್ನೆಲ್ಲ ಕಲೆಹಾಕಿದರೆ ಟಿಬೆಟ್ ಟಿಪ್ಪಣಿ ಸಿದ್ಧವಾಗುತ್ತದೆ. ಸಮಾಜ ಪರಿಚಯ ಪಠ್ಯದಿಂದ ಕೇಳಿದ ಪ್ರಶ್ನೆಯಾದರೆ ಪೂರ್ಣ ಅಂಕಗಳನ್ನು ಗಳಿಸಲು ಇದಿಷ್ಟು ಉತ್ತರ ಧಾರಾಳವಾಯ್ತು. ಬೇಕಿದ್ದರೆ, ಹಿಂದಿಯಲ್ಲಿ ಟಿಬೆಟ್‌ಅನ್ನು 'ತಿಬ್ಬಟ್" ಎನ್ನುತ್ತಾರೆ ಎಂದು ಬರೆದವರಿಗೆ ಒಂದು ಗ್ರೇಸ್ ಮಾರ್ಕ್.

ಆದರೆ ಒಂದುವೇಳೆ ವಿಜ್ಞಾನಶಾಸ್ತ್ರದ ಪ್ರಶ್ನೆಪತ್ರಿಕೆಯಲ್ಲಿ ಟಿಬೆಟ್ ಬಗ್ಗೆ ವಿವರವಾಗಿ ಬರೆಯುವಂತೆ ಕೇಳಿದರೆ?

ಇಲ್ಲಿದೆ ನೋಡಿ ಉತ್ತರ. ವಿಶ್ವವಿಖ್ಯಾತ ಎಂ.ಐ.ಟಿ ವಿದ್ಯಾಸಂಸ್ಥೆಯ ಸಂಶೋಧಕರಿಬ್ಬರು ಕಲೆಹಾಕಿರುವ ಟಿಬೆಟ್ ಪ್ರವರ. ಪ್ರಪಂಚದ ಚಾವಣಿಯಾಗಿರುವುದಷ್ಟೇ ಅಲ್ಲ, ಮನುಷ್ಯನ ತಲೆ/ಮೆದುಳು ದೊಡ್ಡದಾಗಿ ಅಕ್ಷರಶಃ ಬೋಧಿವಿಕಾಸಕ್ಕೆ ಪರೋಕ್ಷ ಕಾರಣವಾದ ಟಿಬೆಟ್ ಅಚ್ಚರಿಗಳ ವಿವರ!

*

ಡೈನೊಸಾರ್‌ಗಳು ಜೀವಿಸಿದ್ದ ಕಾಲದಲ್ಲಿ, ಅಂದರೆ ಸುಮಾರು ನೂರಿನ್ನೂರು ಮಿಲಿಯನ್ ವರ್ಷಗಳಷ್ಟು ಹಿಂದೆ ಈ ಭೂಮಂಡಲದ ಸರಾಸರಿ ತಾಪಮಾನವು ಈಗಿನದಕ್ಕಿಂತ ಎಂಟ್ಹತ್ತು ಡಿಗ್ರಿ ಸೆಲ್ಸಿಯಸ್‍ನಷ್ಟಾದರೂ ಅಧಿಕವಿತ್ತು. ಸಮುದ್ರಗಳ ಮಟ್ಟ ಈಗಿನದಕ್ಕಿಂತ ಒಂದು-ಒಂದೂವರೆ ಮೀಟರ್‌ಗಳಷ್ಟು ಹೆಚ್ಚು ಇತ್ತು. ವಾತಾವರಣದಲ್ಲಿ ಇಂಗಾಲದಡೈಆಕ್ಸೈಡ್ ಪ್ರಮಾಣ ಈಗಿರುವುದಕ್ಕಿಂತ ದುಪ್ಪಟ್ಟಿನಷ್ಟಿತ್ತು.

ಹಾಗಿದ್ದರೆ ಯಾರು ಗಾಳಿ ಊದಿ ವಾತಾವರಣವನ್ನು ತಂಪಾಗಿಸಿದರು? ಸಮುದ್ರದ ನೀರುಕುಡಿದು ಜಲಮಟ್ಟವನ್ನು ತಗ್ಗಿಸಿದರು? ಇಂಗಾಲದ ಡೈ‌ಆಕ್ಸೈಡನ್ನು ವಾತಾವರಣದಿಂದ ಸೈಫನೌಟ್ ಮಾಡಿದರು?

ಬೇರಾರೂ ಅಲ್ಲ, ಟಿಬೆಟ್ ದೇಶ! ಅದ್ಹೇಗೆ? ಮುಂದೆ ಓದಿ.

ಸುಮಾರು 50 ಮಿಲಿಯನ್ ವರ್ಷಗಳ ಹಿಂದೆ ಭಾರತ ಉಪಖಂಡದ ಭೂಪ್ರದೇಶವು ವರ್ಷಕ್ಕೆ 20 ಸೆಂಟಿಮೀಟರ್‌ಗಳಷ್ಟು ವೇಗದಲ್ಲಿ ಉತ್ತರಕ್ಕೆ ಸಾಗುತ್ತ ಏಷ್ಯಾದ ಇತರಭಾಗಗಳಿಗೆ ಡಿಕ್ಕಿಹೊಡೆಯತೊಡಗಿತು. ಅದೂ ಎಷ್ಟು, ಸುಮಾರು 2000 ಕಿ.ಮೀಗಳಷ್ಟು ದೂರದ ಸ್ಥಾನಪಲ್ಲಟ! ಈ ಒಂದು ಅಗಾಧ ಪ್ರಕ್ರಿಯೆಯಿಂದಾಗಿ ಹಿಮಾಲಯ ಪರ್ವತಶ್ರೇಣಿಯೂ ಮತ್ತು ಅದರ ಮೇಲೆ ಟಿಬೆಟ್ ಪ್ರಸ್ಥಭೂಮಿಯೂ ರೂಪುಗೊಂಡವು. ಜತೆಜತೆಗೇ ಅಂಟಾರ್ಕಟಿಕ್ ಪ್ರದೇಶವು ಹಿಮಾವೃತವಾಗಿ ಹೆಪ್ಪುಗಟ್ಟಿತು. ಜಾಗತಿಕ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗತೊಡಗಿತು.

ಇದರೊಂದಿಗೆ ಆಶ್ಚರ್ಯಕರವಾಗಿ ಸಂಭವಿಸಿದ ಇನ್ನೊಂದು ವಿದ್ಯಮಾನವೆಂದರೆ ಮನುಷ್ಯಜೀವಿಗಳ ತಲೆ' ದೊಡ್ಡದಾಗಲಾರಂಭಿಸಿದ್ದು! ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ, ನಮ್ಮ ಪೂರ್ವಜರಾದ ಮಂಗ-ಚಿಂಪಾಂಜಿ-ಗೊರಿಲ್ಲಾಗಳ ಪ್ರಭೇದಗಳಲ್ಲಿ ದೇಹಕ್ಕೆ ಹೋಲಿಸಿದರೆ ತಲೆ ಸಣ್ಣದು. ಮೊದಲು ಮನುಷ್ಯನಲ್ಲೂ (ಆದಿಮಾನವನ ಗುಹಾವಾಸದ ಕಾಲದಲ್ಲಿ) ಹಾಗೆಯೇ ಇತ್ತು. ಆದರೆ ಜಾಗತಿಕ ತಾಪಮಾನದ ಇಳಿತಕ್ಕೆ ವಿಲೋಮವಾಗಿ ಮನುಷ್ಯನ ಮಿದುಳು ಸರಾಸರಿ 600 ಮಿ.ಲೀ ಗಾತ್ರದಷ್ಟಿರುತ್ತಿದ್ದದ್ದು 1200 ಮಿ.ಲೀವರೆಗೂ ಬೆಳೆಯತೊಡಗಿತು. ಸಹಜವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಮನುಷ್ಯನ ತಲೆ'ಯ ಸೈಜ್ ಹೆಚ್ಚಾಗುತ್ತ ಬಂತು!

ಇದು ಕಾಕತಾಳೀಯವಿರಬಹುದು, ಆದರೆ ಮೆದುಳು ದೊಡ್ಡದಾದಂತೆಲ್ಲ ಅದಕ್ಕೆ ತಂಪುಹವೆಯ ಅಗತ್ಯ ಹೆಚ್ಚುತ್ತದೆ ಎಂಬುದನ್ನು ನಾವು ಗಮನಿಸಬೇಕು. ಮನುಷ್ಯನಿಗೆ ಮೆದುಳೇ ಸರ್ವಸ್ವ. ಇತರ ಪ್ರಾಣಿಗಳಿಗಿಂತ ಅತ್ಯಧಿಕ ಪ್ರಗತಿ ಕಂಡ ಅಂಗ ಅದೇ ತಾನೆ? ಮೆದುಳು ಅಷ್ಟೊಂದು ಚುರುಕಿಲ್ಲದಿದ್ದರೆ ನಾವು ಏನನ್ನೂ ಸರಿಯಾಗಿ ನೋಡಲಾರೆವು, ವೇಗವಾಗಿ ಓಡಲಾರೆವು, ಕೈಬೆರಳುಗಳಿಂದ ವಸ್ತುಗಳನ್ನು ಹಿಡಿದುಕೊಳ್ಳಲಾರೆವು. ಗಣಿತಸೂತ್ರಗಳನ್ನು ಕಲಿಯಲಾರೆವು. ನಿನ್ ತಲೆಯೊಳಗೆ ಏನು ಬೈಹುಲ್ಲು ತುಂಬಿದೆಯಾ ಸೆಗಣಿ ಇದೆಯಾ?' ಎಂದೋ, ಎಡಕಿವಿಯಿಂದ ಬಲಕಿವಿಯವರೆಗೂ ಬರೀ ಒಂದು ಸುರಂಗ ಇದೆಯೋ ಹೇಗೆ?' ಎಂದೋ ಬೈಗುಳಗಳಿಂದ ತಪ್ಪಿಸಿಕೊಳ್ಳಲಾರೆವು.

ಅಷ್ಟಾಗಿ, ದೇಹದ ಮಿಕ್ಕೆಲ್ಲ ಭಾಗಗಳ ಒಟ್ಟು ತೂಕಕ್ಕೆ ಹೋಲಿಸಿದರೆ ಮೆದುಳು ಇರುವುದು 2% ದಷ್ಟು ಮಾತ್ರ. ಆದರೆ ರಕ್ತಸಂಚಲನೆ ಮಾತ್ರ ಇಡೀದೇಹದ 20%ದಷ್ಟು ಮೆದುಳೊಂದಕ್ಕೇ ಬೇಕು. ತತ್ಪರಿಣಾಮವಾಗಿ ನಮ್ಮ ದೇಹದಲ್ಲಿ ಶಾಖೋತ್ಪನ್ನವೂ ಸುಮಾರು 20%ದಷ್ಟು ಮಂಡೆಬಿಸಿ'ಯ ರೂಪದಲ್ಲೇ ಆಗುವುದು! ಅಲ್ವೇ ಮತ್ತೆ, ಅಷ್ಟೊಂದು ಚಟುವಟಿಕೆಗಳಲ್ಲಿ ಬಿಜಿ'ಯಾಗುವ ಮೆದುಳಿನ ಇಂಜಿನ್ ಬಿಸಿ'ಯಾಗದೆ ಇರಬೇಕಾದರೆ ಪರಿಸರ ತಂಪಾಗಿರಲೇಬೇಕು. ಅಂತೂ ಪರಸ್ಪರ ಪೂರಕವಾಗಿ ಹವಾಮಾನದಲ್ಲಿ ತಾಪದ ಇಳಿಕೆ, ಮನುಷ್ಯನ ಮೆದುಳಿನ ಗಾತ್ರದ ಏರಿಕೆ ಎರಡೂ ಒಟ್ಟೊಟ್ಟಿಗೆ ಸಂಭವಿಸಿದವು.

ಅದಿರಲಿ, ಟಿಬೆಟ್ ಪ್ರಸ್ಥಭೂಮಿಯು ಪ್ರಪಂಚವನ್ನೆಲ್ಲ ಕೂಲ್ ಮಾಡಿದ್ದು ಹೇಗೆ? ಸಂಶೋಧಕರು ಹೇಳುವ ಪ್ರಕಾರ ಮುಖ್ಯವಾಗಿ ವಾತಾವರಣದಲ್ಲಿರುವ ಇಂಗಾಲದ ಡೈ‌ಆಕ್ಸೈಡ್ ಪ್ರಮಾಣವನ್ನು ತಗ್ಗಿಸಿದ್ದು. ಪ್ರಪಂಚದ ಛಾವಣಿಯಾಗಿರುವುದರಿಂದ ಮಳೆಮೋಡಗಳೆಲ್ಲ ಟಿಬೆಟ್‍ ಮೇಲೆ ಮಳೆಸುರಿಸುತ್ತವೆ. ಗಂಗಾ, ಯಮುನಾ, ಸಿಂಧು, ಮೆಕಾಂಗ್, ಯಾಂಗ್ಜಿ ನದಿಗಳು ಟಿಬೆಟ್ ತಪ್ಪಲಲ್ಲೇ ಹುಟ್ಟಿ ಹರಿಯುತ್ತವೆ. ಈ ನದಿಗಳು ಪ್ರಪಂಚದ 5% ದಷ್ಟು ಭೂಭಾಗಕ್ಕೆ ನೀರುಣಿಸುವುದಾದರೂ ಅವು ಸಮುದ್ರ ಸೇರಿದಾಗ ಒಯ್ಯುವ ಖನಿಜಾಂಶಗಳ ಪ್ರಮಾಣ ಪ್ರಪಂಚದ ಖನಿಜಾಂಶ ಸಂಚಯದ 25%ದಷ್ಟು!

ಟಿಬೆಟ್ ಮೇಲೆ ಬಿದ್ದ ಮಳೆನೀರಿನಲ್ಲಿ ಇಂಗಾಲದ ಡೈ‌ಆಕ್ಸೈಡ್ ಕರಗಿ ಕಾರ್ಬೊನಿಕ್ ಆಸಿಡ್ ಆಗುತ್ತದೆ, ಬೆಟ್ಟಗುಡ್ಡಗಳಲ್ಲಿರುವ ಗ್ರಾನೈಟ್ ಮತ್ತು ಲೈಮ್‌ಸ್ಟೋನ್‌ನ ಮೇಲೆ ಸುರಿಯುವ ಕಾರ್ಬೊನಿಕ್ ಆಸಿಡ್‍ನಿಂದಾಗಿ ಅತ್ಯಧಿಕ ಪ್ರಮಾಣದ ಇಂಗಾಲ ಸಮುದ್ರತಳಕ್ಕೆ ಸೇರುತ್ತದೆ. ಆ ದೃಷ್ಟಿಯಿಂದ ನೋಡಿದರೆ ಟಿಬೆಟ್ ಒಂದು ಕೂಲಿಂಗ್ ಪಂಪ್ ಇದ್ದಂತೆ.

ಅಮೆರಿಕದ ಎಂ.ಐ.ಟಿಯಲ್ಲಿ ಸಾಗರಶಾಸ್ತ್ರಜ್ಞರಾಗಿರುವ ಪ್ರೊ| ಮೌರಿನ್ ರೆಮೊ ಮತ್ತವರ ಸಹೋದ್ಯೋಗಿ ಬಿಲ್ ರಡ್ಡಿಮ್ಯಾನ್ ಜತೆಯಾಗಿ ಪ್ರತಿಪಾದಿಸಿರುವ ಟಿಬೆಟ್ ಥಿಯರಿ ಇದು. ರಾಸಾಯನಿಕ ಕ್ರಿಯೆಯ ಮೂಲಕ ವಾತಾವರಣದ ಇಂಗಾಲದ ಡೈ‌ಆಕ್ಸೈಡನ್ನು ತೆಗೆದು ತಾಪಮಾನ ಕಡಿಮೆಮಾಡುವುದಷ್ಟೇ ಅಲ್ಲ, ಅದರ ಸೈಡ್‍ಎಫೆಕ್ಟ್ ರೂಪದಲ್ಲಿ ಮನುಷ್ಯನ ಮೆದುಳಿನ ಬೆಳವಣಿಗೆಗೆ ನೆರವಾದದ್ದು ಜಗತ್ತಿಗೆ/ಮನುಕುಲಕ್ಕೆ ಟಿಬೆಟ್ ಮಾಡಿರುವ ಟು-ಇನ್-ವನ್ ಉಪಕಾರ.

ಅದಕ್ಕೆ ತಕ್ಕಂತೆ ಬೌದ್ಧತತ್ವಗಳ ಮೂಲಕವೂ ಬೋಧಿವಿಕಾಸ ಮಾಡುವ ಟಿಬೆಟ್ ಪ್ರಪಂಚದ ಚಾವಣಿ' ಎಂದು ಕರೆಸಿಕೊಂಡಿರುವುದು ಅದೆಷ್ಟು ಅರ್ಥಪೂರ್ಣ!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X