ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಯಿಖಾನೆಯಲ್ಲಿ ಪಠಿಸಲೆಂದೇ ಪ್ರಕಟವಾದ ಪುಸ್ತಕಗಳಿವೆ!

By Super Admin
|
Google Oneindia Kannada News

Rest room books
ಅಮೆರಿಕದಲ್ಲಿ ಇನ್ನೊಂದು ನಮೂನೆಯ ಹೂರಣವಿರುವ ಬಾತ್‌ರೂಮ್‌ ಬುಕ್ಸ್ ಸಹ ಇವೆ, ಅದೆಂದರೆ ವಿಶ್ವವಿಖ್ಯಾತ ದೊಡ್ಡದೊಡ್ಡ ಗ್ರಂಥಗಳ ಸಾರಸಂಗ್ರಹ ಸಂಕಲನಗಳು. ಸಾವಿರಗಟ್ಟಲೆ ಪುಟಗಳಲ್ಲಿ ಬರೆದದ್ದನ್ನು ಒಂದು ಅಥವಾ ಎರಡು ಪುಟಗಳ ಟಿಪ್ಪಣಿಯಾಗಿ ಪ್ರಸ್ತುತಪಡಿಸಿರುವುದು. ಅಂದರೆ ತಾತ್ಪರ್ಯವಿಷ್ಟೇ - ಒಮ್ಮೆ ಕೈಗೆತ್ತಿಕೊಂಡ ಓದು ಒಂದು ಸಿಟ್ಟಿಂಗ್ಗೆ (ಸ ಮತ್ತು ಶ ಅಕ್ಷರಗಳ ಉಚ್ಚಾರವ್ಯತ್ಯಾಸ ಗೊತ್ತಿಲ್ಲದಿದ್ದರೂ ಪರವಾ‌ಇಲ್ಲ ಬಿಡಿ) ಮುಗಿಯಬೇಕು. ಸಸ್ಪೆನ್ಸ್ ಥ್ರಿಲ್ಲರ್‍ಗಳಾಗಲೀ ಪ್ರೇಮದ ಕಾದಂಬರಿಗಳಾಗಲೀ ಕಾಫಿ ಟೇಬಲ್ ಬುಕ್ಸ್ ಎಂದೇ ಹಣೆಪಟ್ಟಿಯಿರುವ ನುಣ್ಣನೆಯ ಹಾಳೆಗಳ ಮೇಲೆ ಬಣ್ಣಬಣ್ಣದ ಚಿತ್ರಗಳಿರುವ ಭಾರದ ಪುಸ್ತಕಗಳಾಗಲೀ ಅಲ್ಲಿ ಉಪಯೋಗಕ್ಕೆ ಬಾರವು.

ಒಂದು ಮುಖ್ಯಸಂಗತಿಯನ್ನಿಲ್ಲಿ ನಾವು ಗಮನಿಸಬೇಕು. ಪಾಶ್ಚಾತ್ಯ ಶೈಲಿಯಲ್ಲಿ ಶೌಚಕ್ಕೆ ಕುಳಿತುಕೊಳ್ಳುವ ಭಂಗಿಯು ಕೈಯಲ್ಲಿ ಪುಸ್ತಕವನ್ನು ಹಿಡಿದು ಓದಲಿಕ್ಕೆ ಹೆಚ್ಚು ಅನುಕೂಲಕರ; ನಮ್ಮ ಭಾರತೀಯ ಪಾಯಿಖಾನೆಗಳಲ್ಲಿ ಕುಳಿತುಕೊಳ್ಳುವ ಭಂಗಿ ಪುಸ್ತಕ ಹಿಡಿಯಲು ಅಷ್ಟೊಂದು ಅನುಕೂಲಕರವಲ್ಲ. ಹಾಗಾಗಿ ಅಮೆರಿಕದಲ್ಲಿ ಬಾತ್‌ರೂಮ್‌ಬುಕ್ಸ್ ಇವೆಯೆಂದ ಮಾತ್ರಕ್ಕೆ ಭಾರತದಲ್ಲೂ ಇರಬೇಕೆಂದಿಲ್ಲ. ಪಾಯಿಖಾನೆಪುಸ್ತಕ ಎಂದು ನಾನು ಭಾರತೀಯ ಭಾಷೆಯ ಯಾವುದಾದರೂ ಪುಸ್ತಕವನ್ನು ಇಲ್ಲಿ ಹೆಸರಿಸಿದರೆ ಸುಖಾಸುಮ್ಮನೆ ಮಾನನಷ್ಟಮೊಕದ್ದಮೆ ಎದುರಿಸಬೇಕಾದೀತು!

ಹೋಗಲಿ, ಕನ್ನಡದಲ್ಲಿ ಬಾತ್‌ರೂಮ್‌ ಬುಕ್ಸ್ ಇವೆಯೇ? ಇಂಗ್ಲಿಷ್‌ನ ರೀಡರ್ಸ್ ಡೈಜೆಸ್ಟ್ಅನ್ನು ಹೋಲುವ ಕನ್ನಡ ನಿಯತಕಾಲಿಕ ಯಾವುದು ನೆನಪಾಯ್ತೇ? ನಿಜ, ಕಸ್ತೂರಿ ಮಾಸಪತ್ರಿಕೆಗೆ ಅಂಕಿತವಾಗಿಯೂ ಅನ್ವರ್ಥವಾಗಿಯೂ ಪಾಯಿಖಾನೆಪುಸ್ತಕ ಎನಿಸಿಕೊಳ್ಳಲು ಸಕಲಯೋಗ್ಯತೆಗಳಿವೆ ಎಂದು ನನ್ನ ಅಭಿಪ್ರಾಯ. ರವಿ ಬೆಳಗೆರೆಯವರ ಬಾಟಂ ಐಟಮ್ ಬರಹಗಳ ಸಂಕಲನವಿದ್ದರೆ ಅದು ಕೂಡ ಅಂತಹ ಅನ್ವರ್ಥಕೀರ್ತಿಗೆ ಪಾತ್ರವಾಗಬಹುದು. ಒಬ್ಬ ಅಮೆರಿಕನ್ನಡಿಗಮಿತ್ರನ ಮನೆಯ ರೆಸ್ಟ್‌ರೂಮ್‌ನಲ್ಲಿ ನನಗೊಮ್ಮೆ ಶಿವರಾಮಕಾರಂತರ ಮೂಕಜ್ಜಿಯ ಕನಸುಗಳು ಪುಸ್ತಕ ಗೋಚರಿಸಿತ್ತು! ಅದನ್ನು ಅವನು ಅಲ್ಲಿ ಓದಲಿಕ್ಕೆಂದು ಇಟ್ಟುಕೊಂಡಿದ್ದನೋ ಅಥವಾ ಪಾಯಿಖಾನೆಯಲ್ಲಿ ಪೀಠಸ್ಥನಾಗಿರುವಾಗಲೂ ತನಗೆ ಕನಸುಗಳು ಕಾಣುತ್ತಿರಲಿ ಎಂಬುದನ್ನು ನೆನಪಿಸುವುದಕ್ಕೋಸ್ಕರ ಇಟ್ಟುಕೊಂಡಿದ್ದನೋ ಗೊತ್ತಿಲ್ಲ.

ಅಷ್ಟಕ್ಕೂ ಬಾತ್‌ರೂಮ್‌ ಬುಕ್ ಎಂದು ಗುರುತಿಸುವುದರಿಂದ ಯಾವುದೇ ಪುಸ್ತಕಕ್ಕೆ ಅಪಮರ್ಯಾದೆ ಅಥವಾ ಅವಮಾನ ಮಾಡಿದಂತೆ ಎಂದು ಏಕೆ ತಿಳಿದುಕೊಳ್ಳಬೇಕು? ಅಸಹ್ಯ ಅಥವಾ ಅಶ್ಲೀಲ ಎಂದೇ ಏಕೆ ಯೋಚಿಸಬೇಕು? ಬಹುಶಃ ಈಬಗ್ಗೆ ನನ್ನದೇ ಒಂದು ವೈಯಕ್ತಿಕ ಅನುಭವವನ್ನು ಇಲ್ಲಿ ಉಲ್ಲೇಖಿಸಿದರೆ ಅಪ್ರಸ್ತುತವಾಗಲಾರದು ಎಂದುಕೊಳ್ಳುತ್ತೇನೆ.

ಎರಡು ವರ್ಷಗಳ ಹಿಂದೆ ಈ ಅಂಕಣಬರಹಗಳ ಸಂಕಲನರೂಪದಲ್ಲಿ ಪ್ರಕಟವಾದ ವಿಚಿತ್ರಾನ್ನ ಪುಸ್ತಕವನ್ನು ಖರೀದಿಸಿದ್ದ ಅಮೆರಿಕನ್ನಡತಿಯೊಬ್ಬರು ನನಗೆ ಒಂದು ಇಮೇಲ್ ಕಳಿಸಿದ್ದರು. ಜೋಶಿಯವರೆ, ನಾನು ಹೀಗೆ ಬರೆಯುತ್ತಿರುವುದಕ್ಕೆ ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ನನ್ನ ಗಂಡ ನಿಮ್ಮ ವಿಚಿತ್ರಾನ್ನ ಪುಸ್ತಕವನ್ನು ಬಾತ್‌ರೂಮ್‌ ಬುಕ್ ಆಗಿ ಉಪಯೋಗಿಸುತ್ತಿದ್ದಾರೆ; ಪ್ರಾಥರ್ವಿಧಿಯ ವೇಳೆ ದಿನಕ್ಕೊಂದರಂತೆ ವಿಚಿತ್ರಾನ್ನ ಸಂಚಿಕೆಗಳನ್ನು ಓದುತ್ತಿದ್ದಾರೆ, ತುಂಬಾ ಮೆಚ್ಚಿಕೊಂಡಿದ್ದಾರೆ. ನನಗೂ ಇದರಿಂದ ಖುಶಿಯೇ, ಆ ರೀತಿಯಿಂದಾದ್ರೂ ನಮ್ಮೆಜಮಾನ್ರು ಕನ್ನಡ ಪುಸ್ತಕ ಓದ್ತಾರಲ್ಲಾ ಎಂದು..."!

ಅಂತಹ ಒಂದು ಪ್ರಾಮಾಣಿಕ ಪ್ರತಿಕ್ರಿಯೆಯನ್ನು ಪಡೆಯುವುದು ಸಾರ್ಥಕ ಭಾವದ ಒಂದು ಅನನ್ಯ ಅನುಭವ. ಬೇಂದ್ರೆಯವರ ಮಾತು ನೆನಪಾಗುತ್ತದೆ, ಅವರೊಮ್ಮೆ ಹೇಳಿದ್ದರಂತೆ - ಮರದ ದಿಮ್ಮಿಗಳನ್ನು ಎಳೆಯುವ ಕೂಲಿಕಾರ್ಮಿಕರು ಎಲೆಲೆಲೊ ಐಸಾ... ಎಲ್ಲಸೇರಿ ಐಸಾ... ಅಂತಾರಲ್ಲಾ ಹಾಗೆ ಉತ್ಸಾಹವರ್ಧನೆಗಾಗಿ ನನ್ನದೊಂದು ಕವಿತೆಯನ್ನು ಹಾಡ್ಕೊಂಡಿದ್ರು. ಪಾಪ ಅವರಿಗೆ ಇದು ಬೇಂದ್ರೆಮಾಸ್ತರು ಬರೆದದ್ದು... ಸಾಹಿತ್ಯದ್ದು ಸರಸ್ವತೀದು ಅನ್ನೋದೆಲ್ಲ ಏನೂ ಗೊತ್ತಿಲ್ಲ. ಆದರೂ ಅವರ ಶ್ರಮ ಮರೆಸಿ ಆನಂದ ಕೊಡಲಿಕ್ಕೆ ನನ್ನ ಕವನ ಸಹಾಯ ಮಾಡಿತ್ತು. ಧನ್ಯನಾದೆ ಅಂತ ನನಗನಿಸಿದ್ದು ಅವತ್ತು, ಜ್ಞಾನಪೀಠ ಬಂದಾಗಲ್ಲ!"

ಪಾಯಿಖಾನೆಯಲ್ಲಿನ ಪರಮೋಲ್ಲಾಸವನ್ನು ಹೆಚ್ಚಿಸುವ ಸತ್ಕಾರ್ಯವನ್ನು ಒಂದು ಪುಸ್ತಕವು ಮಾಡಬಲ್ಲದಾದರೆ/ಮಾಡುತ್ತದಾದರೆ ಅದು ನಿಜವಾಗಿಯೂ ಆ ಪುಸ್ತಕದ ಸಾರ್ಥಕತೆಯೇ! ಬೇಸ್‌ಮೆಂಟಿನ ಕಪಾಟಿನಲ್ಲಿ ಧೂಳು ಹಿಡಿಯುತ್ತಿರುವ ಪುಸ್ತಕಗಳಿಗೆಲ್ಲಿದೆ ಆ ಸಾರ್ಥಕತೆ? [ಹಿಂದಿನ ಪುಟ]

- [email protected]

English summary
Vichitranna Columnist Srivathsa Joshi writes on Bathroom books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X