ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಂಡೋಪಹಾರ ಮತ್ತು ಗಂಜಿಯೂಟ

By Staff
|
Google Oneindia Kannada News


Plate of Ganji with Uppinakai ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟಿನ (ಅದಕ್ಕೆ ದೇಸೀ ಲೇಪವನ್ನು ಕೊಡಲು ಗುಣಸಂಧಿ ಮಾಡಿ ಟಂಕಿಸಿದ ಪದ ‘ಖಂಡೋಪಹಾರ’)ಸಂಗತಿ ಅಷ್ಟಾದರೆ ನಮ್ಮ ಕನ್ನಡ ಸಂಸ್ಕೃತಿಯಲ್ಲಿನ ಬೆಳಗಿನ ಫಲಾಹಾರದ ವಿಚಾರವನ್ನೂ ಸ್ವಲ್ಪ ಅವಲೋಕಿಸಬೇಡವೆ? ಈಗ ನಿಮ್ಮಲ್ಲೇ ಪ್ರತಿಯಾಬ್ಬರ ಬಳಿಯೂ ನಿಮ್ಮ ಫ‚ೇವರಿಟ್‌ ಬ್ರೇಕ್‌ಫ‚ಾಸ್ಟ್‌ ಏನು, ಸರ್ವೇಸಾಮಾನ್ಯವಾಗಿ ನಿಮ್ಮ ಬ್ರೇಕ್‌ಫ‚ಾಸ್ಟ್‌ ಮೆನು ಏನು, ಮನೆಯಲ್ಲೇ ಏನಾದ್ರೂ ‘ಕೋತಿನಾಷ್ಟಾ’ ತಿನ್ನೋದಾ ಅಥವಾ ಬ್ರೇಕ್‌ಫ‚ಾಸ್ಟ್‌ಗೂ ದಿನಾ ರೆಸ್ಟೋರೆಂಟಿನ ಮೊರೆ ಹೋಗ್ತೀರಾ ಅಂತೆಲ್ಲ ಒಂದು ಸರ್ವೇ ಮಾಡಿದರೆ... ಅದೇ ಒಂದು ಅದ್ಭುತ ರುಚಿಕಟ್ಟಿನ ಬ್ರೇಕ್‌ಫ‚ಾಸ್ಟ್‌ ಆದೀತು!

ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ, ಹಳ್ಳಿ-ಪಟ್ಟಣಗಳ ವ್ಯತ್ಯಾಸದಲ್ಲಿ, ನಾಗರಿಕತೆ-ಆಧುನಿಕತೆಗಳಿಂದ ಬದಲಾದ ಜೀವನಶೈಲಿಯಲ್ಲಿ, ಪಾಶ್ಚಾತ್ಯ ಜಗತ್ತಿನ ಅಂಧಾನುಕರಣೆಯಲ್ಲಿ, ಡಯಟಿಂಗ್‌ ದುಮ್ಮಾನದಲ್ಲಿ - ಎಲ್ಲ ಬದಲಾಗಿದ್ದರೆ ಬ್ರೇಕ್‌ಫಾಸ್ಟೂ ಬದಲಾಗದೇ ಇರುತ್ತದೆಯೇ? ಅಕ್ಕಿರೊಟ್ಟಿ, ತಾಲಿಪೆಟ್ಟು, ರಾಗಿಅಂಬಲಿ, ಕುಸುಬಲಕ್ಕಿಗಂಜಿ ಇವೆಲ್ಲ ಹೆಸರುಕೇಳಿಯೂ ಗೊತ್ತಿಲ್ಲವೆಂದಾಗಿ ಅವುಗಳ ಜಾಗದಲ್ಲಿ ಸ್ಯಾಂಡ್‌ವಿಚ್ಚೂ ಕಾರ್ನ್‌ಫ್ಲೇಕ್ಸೂ ಕಾಣಿಸಿಕೊಳ್ಳುವುದಿಲ್ಲವೇ? ಸಂಜೆ ಒಂದರಮೇಲೊಂದು ಟಿವಿ ಸಿರಿಯಲ್‌; ಬೆಳಿಗ್ಗೆ ಯಾವುದಕ್ಕೂ ಪುರುಸೊತ್ತಿಲ್ಲವಾಗಿ ತಿಂದರೆ ಹೆಚ್ಚೆಂದರೆ ಒಂದು ಬೌಲ್‌ ಸಿರಿಯಲ್‌. ಇದುವೇ ಜೀವ ಇದು ಜೀವನ.

ನಾನು ಕನ್ನಡಕರಾವಳಿಯ ಗ್ರಾಮೀಣಪ್ರದೇಶದಲ್ಲಿ ಹುಟ್ಟಿಬೆಳೆದವನಾದ್ದರಿಂದ ನನ್ನ ಜೀವನವನ್ನು ರೂಪಿಸಿದ ಬಾಲ್ಯದ ಬ್ರೇಕ್‌ಫಾಸ್ಟ್‌ ಎಂದರೆ ಗಂಜಿ! ಬಹುತೇಕವಾಗಿ ಬೆಳ್ತಿಗೆ ಅಕ್ಕಿಯ ಗಂಜಿ, ಕೆಲವೊಮ್ಮೆ ಬದಲಾವಣೆಗೆಂದು ಕುಚ್ಚಿಗೆ ಅಕ್ಕಿಯ ಗಂಜಿ. ಒಂಚೂರು ಉಪ್ಪು, ಮಿಡಿಮಾವಿನಕಾಯಿ ಉಪ್ಪಿನಕಾಯಿ, ಒಂದು ಮಿಳ್ಳೆ ತುಪ್ಪ - ಇವಿಷ್ಟು ಮೇಲೋಗರಗಳೊಂದಿಗೆ ಎರಡು ಸೌಟು ಬಿಸಿಬಿಸಿ ಗಂಜಿ. ಶುಚಿರುಚಿ ಹಿತಮಿತ simple yet sumptuous! ಬೆಳಗ್ಗೆಗಷ್ಟೇ ಅಲ್ಲ, ಮಧ್ಯಾಹ್ನ ಶಾಲೆಯಲ್ಲಿ ಬುತ್ತಿಯೂಟಕ್ಕೂ ಗಂಜಿಯೇ. ಬಹುಶಃ ಆಗಿನ ಕಾಲದಲ್ಲಿ ಆಗಿನ ಜೀವನಕ್ರಮದಲ್ಲಿ ಆರೋಗ್ಯದೃಷ್ಟಿಯಿಂದಲೂ ಅನುಕೂಲದ ದೃಷ್ಟಿಯಾಂದಲೂ ಅದೊಂದೇ ಆಯ್ಕೆ.

‘ಗಂಜಿಯ ಕುಡಿದರೂ ಗಂಡನ ಮನೆ ಲೇಸು...’ ಎಂಬ ಜನಪದ ನುಡಿಯಲ್ಲಿ ಗಂಜಿಯ ಬಗ್ಗೆ ಸ್ವಲ್ಪ ತಾತ್ಸಾರ ಗೋಚರಿಸುತ್ತದೆ. ಇಂಗ್ಲೆಂಡ್‌ನವರಿಗೆ ಕಾಂಟಿನೆಂಟಲ್‌ ಯುರೋಪ್‌ನ ಬ್ರೇಕ್‌ಫಾಸ್ಟ್‌ ಬಗ್ಗೆ ಇದ್ದಂತೆಯೇ ಇದೂ ಇರಬಹುದು. ಆದರೆ ಗಂಜಿಗೆ ನಾವು ಸಿದ್ಧವನ ಗುರುಕುಲದಲ್ಲಿ (ನಾನು ಎರಡುವರ್ಷ ಪಿಯುಸಿ ಓದಿದ್ದು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮತ್ತು ವಾಸ್ತವ್ಯ ಸಿದ್ಧವನ ಗುರುಕುಲದಲ್ಲಿ) ಉಪನಿಷತ್‌ ಸಮಾನವಾದ ಸ್ಥಾನ ಕೊಟ್ಟಿದ್ದೆವು. ಅಲ್ಲಿ ಬೆಳಗಿನ ಉಪಾಹಾರ ಗಂಜಿ-ಚಟ್ನಿ, ಅದಕ್ಕೆ ಮೊದಲು ಉಪನಿಷತ್ತಿನ ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂಜಗತ್‌... ತೇನ ತ್ಯಕ್ತೇನ ಭುಂಜೀಥಾ ಮಾಗೃಧ ಕಸ್ಯಸ್ವಿದ್ಧನಂ...’ ಶ್ಲೋಕವನ್ನು ಹೇಳುವ ಕ್ರಮವಿತ್ತು. ಅದನ್ನು ನಾವು ತೇನತ್ಯಕ್ತೇನ ‘ಗಂಜಿ’ ತಾ, ಮಾಗೃಧಃ ಕಸ್ಯ ‘ಚಟ್ನಿ’ ತಾ... ಎಂದು ಬದಲಾಯಿಸಿದ್ದೆವು!

ಗಂಜಿ ಬಗೆಗಿನ ಕೀಳರಿಮೆ ಬಹುಶಃ ಅದು ‘ರೋಗಿಗಳಿಗೆ ಪಥ್ಯದ ಆಹಾರ...’ ಎಂಬ ಭಾವನೆಯಿಂದ ಬಂದದ್ದಿರಬಹುದು. ಸ್ವಾರಸ್ಯವೆಂದರೆ ಇದೇ ಭಾವನೆ ಕೆಲವರಿಗೆ ಇಡ್ಲಿ ಅಥವಾ ಬ್ರೆಡ್‌ ಮೇಲೂ ಇದೆ! ಭೈರಪ್ಪನವರ ಗೃಹಭಂಗ ಕಾದಂಬರಿಯಲ್ಲಿ ಜ್ವರಪೀಡಿತ ಪಾರ್ವತಿ ಅಕ್ಕಿ ತರಿಯ ಗಂಜಿ ಮಾಡಿ ತಾನೂ ಕುಡಿದು ತನಗಿಂತಲೂ ಹೆಚ್ಚು ಮೈಬಿಸಿಯಿಂದ ನರಳುವ ಮಗ ರಾಮಣ್ಣನಿಗೂ ಕುಡಿಸಿ ಆರೈಕೆ ಮಾಡುವ ಸನ್ನಿವೇಶ ಬರುತ್ತದೆ. ಗಂಜಿ ತಿಂದ ಮೇಲೆ ರೋಗದ ಅಂಜಿಕಿನ್ಯಾತಕಯ್ಯಾ ಎಂದು ಇರಬಹುದು. ನನಗೆ ಗಂಜಿಯ ಬಗ್ಗೆ ಕೀಳರಿಮೆ ಭಾವನೆ ಗುಲಗಂಜಿಯಷ್ಟೂ ಇಲ್ಲ. ನನ್ನನ್ನು ಬೆಳೆಸಿದ ಗಂಜಿಯ ಬಗ್ಗೆ ಯಾವತ್ತಿಗೂ ನಾನು ಹೆಮ್ಮೆಪಟ್ಟುಕೊಳ್ಳುತ್ತೇನೆ.

ನಿಮಗೆ ಆಶ್ಚರ್ಯವಾಗಬಹುದು, ನಮ್ಮ ಕರ್ನಾಟಕ ಕರಾವಳಿಯಲ್ಲಷ್ಟೇ ಅಲ್ಲದೆ ಏಷ್ಯಾ ಖಂಡದಲ್ಲಿ ಅಕ್ಕಿ ಬೆಳೆಯುವ/ ಅಕ್ಕಿ ಮುಖ್ಯ ಅಹಾರವಾಗಿರುವ ಚೈನಾ, ಜಪಾನ್‌ ಮುಂತಾದ ದೇಶಗಳಲ್ಲೂ ಬ್ರೇಕ್‌ಫಾಸ್ಟ್‌ ಮೆನುದಲ್ಲಿ ಗಂಜಿಯೇ ಇರುವುದು. ಅಲ್ಲಿಯವರೂ ನಮ್ಮಂತೆಯೇ ಉಪ್ಪಿನಕಾಯಿ ಸೇರಿಸಿಯೇ ಗಂಜಿ ತಿನ್ನುವುದು. ಮಾತ್ರವಲ್ಲ, ಅಲ್ಲಿನ ಭಾಷೆಗಳಲ್ಲಿ ಅದಕ್ಕಿರುವ congee ಎಂಬ ಪದವೂ ನಮ್ಮ ಗಂಜಿ(ಅಥವಾ ತಮಿಳಿನ ‘ಕಂಜಿ’?)ಯಂತೆಯೇ ಧ್ವನಿಸುವುದು! ಈಗ ಹೇಳಿ, ಗಂಜಿಯನ್ನೂ ಒಂದು ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ ಅಥವಾ ‘ಖಂಡೋಪಹಾರ’ ಎನ್ನಬಹುದಲ್ಲವೇ?

ಅಂದಹಾಗೆ ನಿಮ್ಮ ಮೋಸ್ಟ್‌ ಫ‚ೇವರಿಟ್‌ ಬ್ರೇಕ್‌ಫಾಸ್ಟ್‌ ಯಾವುದು? ಅದು ಕಾಂಟಿನೆಂಟಲ್‌ ಇರಬಹುದು, ಸೆಂಟಿಮೆಂಟಲ್‌ ಇರಬಹುದು ನಿಮ್ಮಿಷ್ಟದ ಉಪಾಹಾರದ ಬಗ್ಗೆ ಬರೆದುತಿಳಿಸಿ. ಎಲ್ಲ ಹಂಚಿಕೊಳ್ಳೋಣ, ಬುತ್ತಿಯಿಂದ ಉಪಾಹಾರ ಹಂಚಿಕೊಂಡಂತೆ. ಪತ್ರಿಸಲು ವಿಳಾಸ - [email protected]

*
ಪೂರಕ ಓದು : Breakfast Around the World ಅಂತೊಂದು ವೆಬ್‌ಪುಟ ಇದೆ - ಅದರಲ್ಲಿ ಪ್ರಪಂಚದ ಬೇರೆಬೇರೆ ದೇಶ-ಪ್ರದೇಶಗಳಲ್ಲಿ ಬ್ರೇಕ್‌ಫ‚ಾಸ್ಟ್‌ ಪದ್ಧತಿ ಏನಿದೆ, ಹೇಗಿದೆ ಎಂಬುದನ್ನು ಚೆನ್ನಾಗಿ ವಿವರಿಸಿದ್ದಾರೆ. ಬ್ರೇಕ್‌ಫ‚ಾಸ್ಟ್‌ ಅಥವಾ ಬೆಳಗಿನ ಆಹಾರ/ಉಪಾಹಾರದ ಕ್ರಮಕ್ಕೆ ವಿವಿಧ ಭಾಷೆಗಳಲ್ಲಿ ಯಾವ ಪದವಿದೆ, ಅದು ಹೇಗೆ ವ್ಯುತ್ಪತಿಯಾಯಿತು ಇತ್ಯಾದಿಯಿಂದ ಹಿಡಿದು ವಿವಿಧ ಸಂಸ್ಕೃತಿಗಳಲ್ಲಿ ಬ್ರೇಕ್‌ಫ‚ಾಸ್ಟ್‌ಗಿರುವ ಮಹತ್ವ, ಬ್ರೇಕ್‌ಫ‚ಾಸ್ಟ್‌ ಸಂಪ್ರದಾಯದಲ್ಲಿ ಕಾಲಾಂತರದಲ್ಲಿ ಆಗುತ್ತಿರುವ ಬದಲಾವಣೆಗಳು ಇವನ್ನೆಲ್ಲ ಚೆನ್ನಾಗಿ ವಿವರಿಸಿದ್ದಾರೆ. ಓದುವ ಹಸಿವಿದ್ದರೆ ಇಲ್ಲಿ ಕ್ಲಿಕ್ಕಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X