• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಎಲ್ಲರನ್ನೂ ಗೆಲ್ಲು’ವುದಕ್ಕಿಂತ, ಎಲ್ಲರೂ ಗೆಲ್ಲೋಣ!

By Staff
|

ಸರಿ, ‘ವಿ’ಸೈನ್‌ನ ಉಪಕಥೆಯ ನಂತರ ಮತ್ತೆ ನಮ್ಮ ಕಥಾನಾಯಕ ಸರ್ವಜಿತ್‌ನ ವಿಷಯಕ್ಕೆ ಬಂದರೆ, ’’ಸರ್ವಜಿತ್‌ ಎಂದರೆ ಎಲ್ಲರನ್ನೂ ಗೆಲ್ಲುವವನು ಎಂದೇ ಆಗಬೇಕಿಲ್ಲ, ಎಲ್ಲವನ್ನೂ ಗೆಲ್ಲುವವನು ಎಂದೂ ಆಗುತ್ತದೆ...’’ ಎನ್ನಬಹುದು ಆಧ್ಯಾತ್ಮವನ್ನು ಉಪದೇಶಿಸುವವರು, ಮೋಕ್ಷಮಾರ್ಗವನ್ನು ಪ್ರತಿಪಾದಿಸುವವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ - ಈ ಅರಿಷಡ್ವರ್ಗಗಳೆಲ್ಲವನ್ನೂ ಗೆದ್ದವನು ನಿಜಕ್ಕೂ ‘ಸರ್ವಜಿತ್‌’ ಎಂದು ಈ ಯೋಗಿಗಳೆಲ್ಲ ವ್ಯಾಖ್ಯಾನಿಸಬಹುದು. ಅದು ಒಪ್ಪತಕ್ಕ ಮಾತೇನೋ ಸರಿ, ಆದರೆ ನಮ್ಮಂತೆ ಟೇಬಲ್‌ಸಾಲ್ಟ್‌ ಚಿಲ್ಲಿಪೌಡರ್‌ ತಿನ್ನುವ ಜನಸಾಮಾನ್ಯರಿಗೆ ಅರಿಷಡ್ವರ್ಗಗಳನ್ನು ಜಯಿಸಿ ಸರ್ವಜಿತ್‌ ಎನಿಸಿಕೊಳ್ಳುವುದು ದುಸ್ತರವಾದದ್ದು.

ಅದಕ್ಕಿಂತ, ಹೊಸದೊಂದು ಚಿಂತನಾಶಾಲೆ (school of thought) ಈ ವಿಷಯದಲ್ಲಿ ನಮಗೆ ನೆರವಾದೀತು. ಅದೇ ಇತ್ತೀಚಿನ ದಿನಗಳಲ್ಲಿ ತುಂಬ ಜನಪ್ರಿಯವಾಗುತ್ತಿರುವ win-win ಕಾನ್ಸೆಪ್ಟು. ಕಾರ್ಪೊರೇಟ್‌ ಕಂಪೆನಿಗಳ ಹೊಸ ಮಂತ್ರವೇ ’ವಿನ್‌-ವಿನ್‌’ - ಗ್ರಾಹಕರು, ಷೇರುದಾರರು, ಉದ್ಯೋಗಿಗಳು, ಮಾಲೀಕರು ಎಲ್ಲರೂ ವಿನ್ನರ್ಸ್‌. ಕಾರ್ಪೊರೇಟ್‌ ವಿನ್‌-ವಿನ್‌ನಲ್ಲಿ ಹಾವೂ ಸಾಯೋದಿಲ್ಲ, ಕೋಲೂ ಮುರಿಯೋದಿಲ್ಲ! ಕಾರ್ಪೊರೇಟ್‌ ಜಗತ್ತಲ್ಲಷ್ಟೇ ಏಕೆ, ಕ್ರಿಕೆಟ್‌ನಲ್ಲೂ ಇರಲಿ ಎಂದು ಮೊನ್ನೆ ವರ್ಲ್ಡ್‌ಕಪ್‌ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ-ಐರ್ಲೇಂಡ್‌ ಪಂದ್ಯವೂ ವಿನ್‌-ವಿನ್‌ ಆಗಬೇಕೆ!

Everyone is a winner ಅಥವಾ ಪ್ರತಿಯಾಬ್ಬನೂ ಜಯಶಾಲಿಯಾದರೆ ಅವನು ಯಾರಿಗೂ ಸೋಲದವನೆಂದಲ್ಲವೇ? ಸೋಲಿಲ್ಲದ ಸರದಾರ ಅವನೇ ಅಲ್ಲವೇ? ಹಾಗಾಗಿ ‘ವಿನ್‌-ವಿನ್‌’ ಮತ್ತು ‘ಸರ್ವಜಿತ್‌’ ಒಂದಕ್ಕೊಂದು ತಾಳೆಯಾಗುತ್ತವೆ ಎಂದರೆ ನೀವೂ ಒಪ್ಪುತ್ತೀರಾ? ಇನ್ನೂ ಸ್ವಲ್ಪ ವಿವರಣೆ ಬೇಕಂತೀರಾ? ಹಾಗಾದರೆ ವಿನ್‌-ವಿನ್‌ ಕಾನ್ಸೆಪ್ಟಿನ ಈ ಎರಡು ಕಥೆಗಳನ್ನು ಓದಿ. ಇವು ಈಮೈಲ್‌ಫ‚ಾರ್ವರ್ಡ್‌ಗಳಲ್ಲಿ, ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳಲ್ಲಿ, ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಾಕಷ್ಟು ಜನಜನಿತವಾಗಿರುವ ಕಥೆಗಳೇ. ಈಗಾಗಲೇ ಗೊತ್ತಿದ್ದರೂ ಇನ್ನೊಮ್ಮೆ ಓದಿಸಿಕೊಳ್ಳುವಂಥವೇ.

ಸಿಯಾಟಲ್‌ನಲ್ಲಿ ಕೆಲ ವರ್ಷಗಳ ಹಿಂದೆ ವಿಶೇಷ ಒಲಂಪಿಕ್ಸ್‌ ಕ್ರೀಡೆಗಳಲ್ಲಿ ವಿಕಲಚೇತನರಿಗೆ ಏರ್ಪಡಿಸಿದ್ದ ನೂರು ಮೀಟರ್‌ ಓಟದ ಸ್ಪರ್ಧೆಯಲ್ಲಿ ನಡೆಯಿತೆನ್ನಲಾದ ಘಟನೆ. ಒಂಬತ್ತು ಮಂದಿ ಮಕ್ಕಳು (ಅವರೆಲ್ಲ ಒಂದೋ ಬುದ್ಧಿಮಾಂದ್ಯರು, ಇಲ್ಲವೇ ಅಂಗವಿಕಲರು) ಸ್ಪರ್ಧಾಳುಗಳು. ರೆಡಿ-ಗೆಟ್‌-ಸೆಟ್‌-ಗೋ ಎಂದ ಕೂಡಲೆ ಓಡತೊಡಗಿದ್ದಾರೆ. ತಾವೂ ಓಡಬೇಕೆಂಬ ಆಸೆಯಿಂದ, ಸ್ಪರ್ಧೆಯಲ್ಲಿ ಗೆಲ್ಲಬೇಕೆಂಬ ಅದಮ್ಯ ಉತ್ಸಾಹದಿಂದ. ಅವರೆಲ್ಲ ಅರ್ಧದಷ್ಟು ಓಡಿರಬಹುದೋ ಏನೊ ಒಂದು ಮಗು ನಡುವಲ್ಲೇ ಮುಗ್ಗರಿಸಿ ಬಿದ್ದಿದೆ, ಗೊಳೋ ಎಂದು ಅಳತೊಡಗಿದೆ. ಉಳಿದ ಎಂಟು ಸ್ಪರ್ಧಾಳುಗಳೂ ಅರೆಕ್ಷಣ ಈಕಡೆಗೆ ತಿರುಗಿನೋಡಿದ್ದಾರೆ, ಅವರೆಲ್ಲರೂ ಬಿದ್ದ ಮಗುವಿನತ್ತ ಬರುತ್ತಿದ್ದಾರೆ! ಗುಂಪಿನಲ್ಲಿದ್ದ ಒಬ್ಬ ಪುಟ್ಟಹುಡುಗಿ, ಬಿದ್ದ ಹುಡುಗನ ಮೈನೇವರಿಸಿ ಸಮಾಧಾನಮಾಡಿದ್ದಾಳೆ, ಆಮೇಲೆ ಆ ಒಂಬತ್ತೂ ಮಂದಿ ಕೈಕೈ ಹಿಡಿದು ಸರಪಳಿಯಾಗಿ ನಡೆದು ವಿಜಯರೇಖೆಯನ್ನು ತಲುಪಿದ್ದಾರೆ! ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರೆಲ್ಲ ಮೂಕವಿಸ್ಮಿತರಾಗಿ ಗಂಟಲುಕಟ್ಟಿಬಂದು ಕಣ್ಣೀರಿಳಿಸಿದ್ದಾರೆ. ಚಪ್ಪಾಳೆ ಕಿವಿಗಡಚಿಕ್ಕಿದೆ. ಆ ಒಂಬತ್ತು ಮಕ್ಕಳು ವಿನ್‌-ವಿನ್‌ ತತ್ತ್ವಕ್ಕೇ ದಿಗ್ವಿಜಯ ಮಾಡಿಸಿದ್ದಾರೆ.

ಇನ್ನೊಂದು ಕಥೆ, ಸ್ವರ್ಗ ಮತ್ತು ನರಕಗಳಿಗಿರುವ ವ್ಯತ್ಯಾಸವನ್ನು ತೋರಿಸುವಂತೆ ದೇವರನ್ನು ಕೇಳಿಕೊಂಡ ಸಾಧುವಿನದು. ದೇವರು ಸಾಧುವನ್ನು ಕರಕೊಂಡು ಹೋಗುತ್ತ ಒಂದು ಬಾಗಿಲನ್ನು ತೆರೆದ. ಅಲ್ಲಿ ಒಳಗೆ ಒಂದು ದುಂಡುಮೇಜಿನ ಸುತ್ತಲೂ ಕೆಲಜನರು ಕುಳಿತಿದ್ದರು. ಅವರಲ್ಲಿ ಒಬ್ಬೊಬ್ಬರೂ ಬಡಕಲುದೇಹದವರು, ಹೊಟ್ಟೆ ಬೆನ್ನಿಗೆ ತಾಗಿದವರು. ಅಷ್ಟಾಗಿ, ಮೇಜಿನ ಮಧ್ಯಭಾಗದಲ್ಲಿ ಒಂದು ಅಗಲಪಾತ್ರೆಯಲ್ಲಿ ಅಮೃತವನ್ನಿಡಲಾಗಿತ್ತು ಮತ್ತು ಮೇಜಿನ ಸುತ್ತ ಕುಳಿತಿರುವವರ ಕೈಗೆ ಒಂದೊಂದು ಸೌಟನ್ನು ಕೊಡಲಾಗಿತ್ತು. ಆ ಸೌಟಿನ ವಿಶೇಷತೆಯೇನೆಂದರೆ ಅದರ ಹಿಡಿಯು ಮನುಷ್ಯನ ಕೈಗಿಂತ ಮೂರುಪಟ್ಟಿನಷ್ಟು ಉದ್ದ. ಹಾಗಾಗಿ ಅಮೃತದ ಪಾತ್ರೆಯಲ್ಲಿ ಮುಳುಗಿಸಿದ ಸೌಟನ್ನು ಬಾಯಿಗೆ ತರುವುದು ಸಾಧ್ಯವಾಗದೆ ಅವರೆಲ್ಲ ಪರದಾಡುತ್ತಲೇ ಇದ್ದರು. ‘‘ಇದು ನರಕ’’ ಎಂದಷ್ಟೇ ಹೇಳಿದ ದೇವರು ಸಾಧುವನ್ನು ಇನ್ನೊಂದು ಕೋಣೆಗೆ ಕರೆದೊಯ್ದ.

ಆ ಕೋಣೆಯ ದೃಶ್ಯ - ಮಧ್ಯದಲ್ಲಿ ಮೇಜು, ಅದರ ಮೇಲೆ ಅಮೃತವಿರುವ ಪಾತ್ರೆ, ಸುತ್ತ ಕುಳಿತಿರುವ ಜನ, ಅವರ ಕೈಯಲ್ಲಿ ಉದ್ದನೆಯ ಸೌಟು - ಇವೆಲ್ಲ ಮೊದಲ ಕೋಣೆಯ ತದ್ರೂಪವೇ ಆಗಿತ್ತು. ವ್ಯತ್ಯಾಸವೆಂದರೆ ಇಲ್ಲಿ ಮೇಜಿನ ಸುತ್ತ ಕುಳಿತಿದ್ದವರು ಆರೋಗ್ಯವಂತರಾಗಿ ಉಲ್ಲಸಿತರಾಗಿ ಕಂಡುಬರುತ್ತಿದ್ದರು, ಅವರ ಮುಖದಲ್ಲಿ ತೃಪ್ತಿ ತುಂಬಿತುಳುಕುತ್ತಿತ್ತು. ಸಾಧುವಿಗೆ ಏನೊಂದೂ ಅರ್ಥವಾಗಲಿಲ್ಲ. ಆಗ ದೇವರು ವಿವರಿಸಿದ್ದು ಹೀಗೆ - ’’ಮೊದಲ ಕೋಣೆಯವರೆಲ್ಲ ತಾವು ಮಾತ್ರ ತಿನ್ನಬೇಕೆಂಬ ಒಂದೇ ಗುರಿಯಿದ್ದವರು, ಇದುವರೆಗೂ ಒಂದು ಹನಿ ಅಮೃತವೂ ಅವರಿಗೆ ಸಿಕ್ಕಿಲ್ಲ. ಈ ಕೋಣೆಯವರೆಲ್ಲ ಇತರರೂ ತಿನ್ನಬೇಕೆಂಬ ಔದಾರ್ಯವುಳ್ಳವರು. ಸೌಟಿಂದ ತಮಗೇ ತಿನ್ನಲಾಗದಿದ್ದರೂ ಇತರರಿಗೆ ತಿನಿಸಿದ್ದಾರೆ, ಇತರರಿಂದ ತಿನ್ನಿಸಿಕೊಂಡಿದ್ದಾರೆ. ಇದು ಸ್ವರ್ಗ!’’

ಹಾಗಿದ್ದಲ್ಲಿ, win-win ಕಾನ್ಸೆಪ್ಟು ಇಷ್ಟು ಚೆನ್ನಾಗಿದ್ದಲ್ಲಿ, ಸರ್ವಜಿತ್‌ ಸಂವತ್ಸರದಲ್ಲಿ ಪ್ರತಿಯಾಂದು ಹಬ್ಬಹರಿದಿನದ ಸಂದರ್ಭದಲ್ಲೂ ನಮ್ಮ ಶುಭಾಶಯವು ‘ಎಲ್ಲರೂ ಗೆಲ್ಲೋಣ’ (win win) ಎಂದೇ ಇರಲಿ. ಇದು ಮುಂದಿನವಾರ ಬರುವ ಶ್ರೀರಾಮನವಮಿಯಾಂದಿಗೇ ಆರಂಭವಾಗಲಿ - ಜಯ ಜಯ (win win) ಆರತ ರಾಮ ತುಮ್ಹಾರೇ... ಪ್ರಾಣನಾಥ ರಘುನಾಥ ಮುರಾರೇ... ಎಂಬ ಸಂಕೀರ್ತನೆಯಾಂದಿಗೆ!

- srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X