ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವತ್ತು ವಿಚಿತ್ರಾನ್ನದಲ್ಲಿ ಬೇತಾಳಕಥೆ!

By Staff
|
Google Oneindia Kannada News


ಮಂದಾರವತಿಯ ಅಂತ್ಯಸಂಸ್ಕಾರಕ್ಕೆ ಕೇಶವನೊಂದಿಗೆ ಆ ಮೂವರು ಯುವಕರೂ ನೆರವಾದರು. ನದಿಯ ಪಕ್ಕದಲ್ಲಿ ಚಿತೆಯ ಮೇಲೆ ಶವವನ್ನಿಟ್ಟರು. ಮಂದಾರವತಿಯ ಮೃತದೇಹ ಚಿತೆಯಲ್ಲಿ ಉರಿದು ಬೂದಿಯಾಯ್ತು. ಆ ಯುವಕರ ಪೈಕಿ ಒಬ್ಬನು ತೀವ್ರ ಶೋಕದಿಂದ ನೊಂದು ತಾನೂ ಅದೇ ಚಿತೆಗೆ ಹಾರಿ ಪ್ರಾಣತ್ಯಾಗ ಮಾಡಿದನು. ಎರಡನೆಯವನು ತನ್ನ ಪ್ರಿಯತಮೆಯ ಆತ್ಮಕ್ಕೆ ಶಾಂತಿ ಕೋರುತ್ತ ಅಲ್ಲೇ ನದಿತೀರದಲ್ಲಿ ಒಂದು ಗುಡಿಸಲನ್ನು ಕಟ್ಟಿ ವಾಸಿಸಲು ನಿರ್ಧರಿಸಿದನು. ಮೂರನೆಯವನು ಐಹಿಕಭೋಗಗಳನ್ನೆಲ್ಲ ತೊರೆದು ಸನ್ಯಾಸ ಸ್ವೀಕರಿಸಿ ಭಿಕ್ಷಾಟನೆಗೈಯುತ್ತ ಜೀವಿಸತೊಡಗಿದನು.

ಹೀಗೆ ಸನ್ಯಾಸಿಯಾಗಿ ಊರೂರು ಅಲೆಯುತ್ತಿದ್ದ ಮೂರನೆಯವನು ಒಂದು ದಿನ ಒಬ್ಬ ಬ್ರಾಹ್ಮಣನ ಮನೆಮುಂದೆ ಬಂದು ಅಮ್ಮಾ ತಾಯೀ ಭಿಕ್ಷಾಂ ದೇಹಿ ಎಂದನು. ಒಳಗಿದ್ದ ಮನೆಯಾಡತಿ ಬ್ರಾಹ್ಮಣಿಯು ದೊಡ್ಡ ತಟ್ಟೆಯ ತುಂಬಾ ರುಚಿಯಾದ ಊಟವನ್ನು ತಂದು ಅವನ ಮುಂದೆ ಇಟ್ಟಳು. ಮನೆಯ ಯಜಮಾನ ಬ್ರಾಹ್ಮಣನೂ ಅವನೊಂದಿಗೆ ಲೋಕಾಭಿರಾಮ ಮಾತನಾಡಲು ಕುಳಿತುಕೊಂಡನು. ಭಿಕ್ಷುಕ ಸನ್ಯಾಸಿಯು ಇನ್ನೇನು ತುತ್ತನ್ನು ಬಾಯಾಳಗಿಡಬೇಕೆನ್ನುವಷ್ಟರಲ್ಲಿ ಮನೆಯಾಳಗೆ ಪುಟ್ಟ ಮಗುವೊಂದು ದನಿಯೆತ್ತರಿಸಿ ಅಳತೊಡಗಿತು. ಬ್ರಾಹ್ಮಣಿಯು ಮಗುವನ್ನು ನೋಡಿಕೊಳ್ಳಲು ಒಳನಡೆದಳು. ಅವಳೆಷ್ಟೇ ಸಮಾಧಾನಿಸಿದರೂ ಮಗುವಿನ ಅಳು ನಿಲ್ಲಲಿಲ್ಲ. ಸಿಟ್ಟಿನಿಂದ ಅವಳದನ್ನು ಬೀಸಿ ಒಗೆದಾಗ ಅಡುಗೆಮನೆಯಲ್ಲಿ ಉರಿಯುತ್ತಿದ್ದ ಒಲೆಗೆ ಬಿದ್ದು ಮಗು ಸತ್ತೇ ಹೋಯಿತು!

ಇದನ್ನು ನೋಡುತ್ತಿದ್ದ ಭಿಕ್ಷುಕನಿಗೆ ಖೇದವಾಯಿತು. ಊಟ ಮಾಡುವುದಕ್ಕೆ ಅವನು ನಿರಾಕರಿಸಿದನು. ಈರೀತಿ ಕ್ರೌರ್ಯ ನಡೆಯುವ ಮನೆಯಲ್ಲಿ ಅದುಹೇಗೆ ತಾನೆ ನಾನು ಉಣ್ಣಲಿ ಎಂದು ಗೊಣಗುತ್ತ ಅವನು ಎದ್ದೇಬಿಟ್ಟನು.

‘‘ಸ್ವಲ್ಪ ನಿಲ್ಲು, ಏನಾಯ್ತು ಎಂದು ನಾನು ನೋಡಿಕೊಂಡು ಬರುತ್ತೇನೆ’’ ಎಂದು ಮನೆಯ ಯಜಮಾನ ಒಳಗೆ ಹೋಗಿ ಒಂದು ಹಳೆಯ ಗ್ರಂಥವನ್ನು ತೆಗೆದುಕೊಂಡು ಬಂದನು. ಅದರೊಳಗಿನ ಯಾವುದೋ ಮಂತ್ರವನ್ನು ಪಠಿಸುತ್ತ, ಮನೆಯಾಳಗಿದ್ದ ಗಂಗಾಜಲವನ್ನು ಒಲೆಯಲ್ಲಿ ಕರಕಲಾಗಿದ್ದ ಮಗುವಿನ ದೇಹದ ಮೇಲೆ ಸಿಂಪಡಿಸಿದನು. ಆಶ್ಚರ್ಯದಲ್ಲಿ ಪರಮಾಶ್ಚರ್ಯವೋ ಎಂಬಂತೆ ಮಗು ಮರಳಿಜೀವ ಪಡೆದು ಕಿಲಕಿಲನಗುತ್ತ ಅಂಬೆಹರಿಯತೊಡಗಿತು. ಮೈಸುಟ್ಟ ಯಾವುದೇ ಕುರುಹು ಸಮೇತ ಅದಕ್ಕಿರಲಿಲ್ಲ!

ಈ ಒಂದು ಅದ್ಭುತ ಚಮತ್ಕಾರವನ್ನು ಕಣ್ಣಾರೆ ನೋಡಿದ ಭಿಕ್ಷುಕ ಸನ್ಯಾಸಿಯ ತಲೆಯಾಳಗೊಂದು ಯೋಚನೆ ಹೊಳೆಯಿತು. ‘‘ಆ ಗ್ರಂಥ ನನ್ನ ಕೈಗೆ ಸಿಕ್ಕರೆ... ಅದೇ ಮಂತ್ರವನ್ನು ಪಠಿಸಿ ನೀರು ಚಿಮುಕಿಸಿ ನಾನೂ ನನ್ನ ಪ್ರಿಯತಮೆಯನ್ನು ಬದುಕಿಸಬಹುದಲ್ಲ!’’ ಯೋಚನೆಯೇನೋ ಬಂತು, ಆದರೆ ಅಂತಹ ದಿವ್ಯಶಕ್ತಿಯ ಗ್ರಂಥವನ್ನು ಆ ಬ್ರಾಹ್ಮಣ ತನಗೆ ಎರವಲು ಕೊಡುವನೇ ಎಂಬ ಸಂದೇಹವೂ ಬಂತು. ಇರಲಿ, ಏನಾದರೂ ಮಾಡಿ ಆ ಗ್ರಂಥವನ್ನು ಸಂಪಾದಿಸಬೇಕು, ಮಂತ್ರವನ್ನು ಕಲಿಯಬೇಕು, ಮಂದಾರವತಿಯ ಶವದ ಮೇಲೆ ಅದನ್ನು ಪ್ರಯೋಗಿಸಿ ಅವಳನ್ನು ಮತ್ತೆ ಸಜೀವಗೊಳಿಸಬೇಕು ಎಂದವನು ಪಣತೊಟ್ಟನು.

ಬ್ರಾಹ್ಮಣನ ಮನೆಯಿಂದ ಹೊರಟ ಭಿಕ್ಷುಕನು ಅಲ್ಲೇ ಎಲ್ಲೋ ಕಣ್ತಪ್ಪಿಸಿ ಅಡಗಿಕೊಂಡನು. ಸರಿರಾತ್ರಿ ಹೊತ್ತಿಗೆ ಕಳ್ಳಹೆಜ್ಜೆ ಹಾಕುತ್ತ ಮತ್ತೆ ಬ್ರಾಹ್ಮಣನ ಮನೆಯತ್ತ ಬಂದು ನಿಧಾನವಾಗಿ ಮನೆಯ ಛಾವಣಿಯನ್ನೇರಿ ಒಂದೆರಡು ಹಂಚುಗಳನ್ನು ತೆಗೆದು ಮನೆಯಾಳಗೆ ನುಸುಳಿದನು. ಗ್ರಂಥವನ್ನೆತ್ತಿಕೊಂಡು ಹಾಗೆಯೇ ಯಾವ ಸದ್ದನ್ನೂ ಮಾಡದೆ ಮನೆಯಿಂದ ಹೊರನಡೆದನು.

ಅಲ್ಲಿಂದ ಅವನು ಸೀದಾ ನಡೆದದ್ದು ಮಂದಾರವತಿಯ ಚಿತೆಯಿದ್ದ ಸ್ಥಳಕ್ಕೆ. ಅಲ್ಲಿ ಅವನಿಗೆ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಎರಡನೆ ಯುವಕ ಭೇಟಿಯಾದನು. ‘‘ಮಿತ್ರಾ, ಹೇಗಿದ್ದಿ? ನಿನ್ನ ಪರ್ಯಟನೆಯಲ್ಲಿ ಹೊಸದೇನಾದರೂ ಕಲಿತುಕೊಂಡೆಯಾ?’’ ಎಂದು ಅವನು ಸನ್ಯಾಸಿಗೆ ಕೇಳಿದನು.

‘‘ಹೌದು, ನನಗೊಂದು ಅದ್ಭುತವಾದ ವಿದ್ಯೆ ಸಿಕ್ಕಿದೆ. ಅಂತಿಂಥ ವಿದ್ಯೆಯಲ್ಲ, ಸತ್ತವರನ್ನು ಬದುಕಿಸುವ ಅತ್ಯಂತ ನಿಗೂಢವಾದ ವಿದ್ಯೆ!’’ ಎಂದು ಸಂತೋಷದಿಂದ ಹೇಳುತ್ತ ಸನ್ಯಾಸಿಯು ತಡಮಾಡದೆ ತನ್ನಲ್ಲಿದ್ದ ಗ್ರಂಥವನ್ನು ತೆರೆದು ಮಂತ್ರವನ್ನು ಪಠಿಸಿ ಅಲ್ಲಿಯೇ ಹರಿಯುತ್ತಿದ್ದ ನದಿನೀರನ್ನು ಮಂದಾರವತಿಯ ಅಸ್ಥಿಗಳ ಮೇಲೆ ಸಿಂಪಡಿಸಿದನು. ಮಂತ್ರ ನಿಜವಾಗಿಯೂ ಕೆಲಸಮಾಡಿತು! ಅವತ್ತು ಬ್ರಾಹ್ಮಣನ ಮನೆಯಲ್ಲಿ ಒಲೆಯಾಳಗಿಂದ ಮಗು ಜೀವಪಡೆದು ಹೊರಬಂದಂತೆಯೇ ಇಲ್ಲಿ ಮಂದಾರವತಿಯೂ ಮತ್ತೆ ಜೀವ ಪಡೆದಳು. ಜತೆಯಲ್ಲಿಯೇ ಅವಳೊಂದಿಗೆ ಸಹಗಮನ ಮಾಡಿದ್ದ ಮೊದಲನೆಯ ಯುವಕನೂ ಜೀವಂತನಾದನು.

ವಿಧಿಲೀಲೆಯೆಂದರೆ ಇದೇ! ಈಗೇನಾಯ್ತೆಂದರೆ ಮತ್ತೆ ಮೂವರು ಯುವಕರೂ ಮಂದಾರವತಿಯನ್ನು ವರಿಸಲು ಸ್ಪರ್ಧಿಗಳಾದರು!

*

ಈಗ ಪ್ರಶ್ನೆ. ‘‘ಮೂವರು ಯುವಕರಲ್ಲಿ ಯಾರು ಮಂದಾರವತಿಗೆ ಅತಿಯೋಗ್ಯನಾದ ವರ? ಯಾಕೆ?’’

ಪ್ರಶ್ನೆಗೆ ಉತ್ತರವನ್ನು ತಿಳಿಸುತ್ತ ಮತ್ತು ವಿಚಿತ್ರಾನ್ನದಲ್ಲಿ ಈರೀತಿ ಏಕಾಏಕಿ ಬೇತಾಳಕಥೆಯಾಂದು ಪ್ರಸ್ತುತಗೊಂಡ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುತ್ತ ಪತ್ರಿಸಿ. ವಿಳಾಸ [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X