• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..

By ಶ್ರೀವತ್ಸ ಜೋಶಿ
|

ಇಡ್ಲಿಗೆ ಯಾವುದು ಪರ್ಫೆಕ್ಟ್ ಕಾಂಬಿನೇಶನ್? ಅದೂ ಒಂದು ಪ್ರಶ್ನೆನಾ, ಚಟ್ನಿ ಇರುವುದೇ ಇಡ್ಲಿಯ ಜತೆ ಕಂಬೈನ್ ಆಗಲಿಕ್ಕೆ ಅಂತೀರಾ? ಆದರೆ ಇಡ್ಲಿ-ಚಟ್ನಿ ಮಾತ್ರ ಆದರ್ಶಜೋಡಿ ಅಂತೇನಿಲ್ಲ, ಇಡ್ಲಿ-ಸಾಂಬಾರ್ ಸಹ ಜಗದ್ವಿಖ್ಯಾತ ಕಾಂಬಿನೇಶನ್. ಹೊಟೆಲ್‌ನವರಂತೂ ಈ ಮೂರೂ ಮೇಳೈಸಲಿ ಎಂದು ಇಡ್ಲಿ-ಚಟ್ನಿ-ಸಾಂಬಾರ್ ಡೆಡ್ಲಿ ಕಾಂಬಿನೇಶನನ್ನೇ ಸರ್ವ್ ಮಾಡುತ್ತಾರೆ. ಮನೆಯಲ್ಲಾದರೆ ಚಿಕ್ಕಮಕ್ಕಳಿಗೆ ಇಡ್ಲಿ ಜತೆ ಚಟ್ನಿ-ಸಾಂಬಾರುಗಳು ಖಾರವಾಗುತ್ತವೆಯೆಂದು ತುಪ್ಪ-ಸಕ್ಕರೆ ಅಥವಾ ಜೇನುತುಪ್ಪ ಕಾಂಬಿನೇಶನ್ ಸರಿಹೋಗುತ್ತೆ. ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತು ಮಲೆನಾಡಿನ ಕೆಲ ಪ್ರದೇಶಗಳಲ್ಲ್ಲಿ ಜಾನಿ ಬೆಲ್ಲ (ಪಾಕದಂತಿರುವ ತೆಳುಬೆಲ್ಲ ಆಲೆಮನೆಯಲ್ಲಿ ತಯಾರಾದದ್ದು) ಸಹ ಇಡ್ಲಿ, ದೋಸೆ, ಪೂರಿ, ಚಪಾತಿ ಯಾವುದರ ಜೊತೆಗೂ ಹೊಂದಿಕೊಳ್ಳುವ ಡೆಡ್ಲಿ ಕಾಂಬಿನೇಶನ್. ಚಿಕ್ಕಮಕ್ಕಳಿಗಷ್ಟೇ ಅಲ್ಲ, ಮಕ್ಕಳು ಅಥವಾ ಮೊಮ್ಮಕ್ಕಳು ಇರುವವರಿಗೂ!

ಜಾನಿಬೆಲ್ಲದ ಹಾಗೆಯೇ ಆಲ್‌ರೌಂಡರ್ ಕಾಂಬಿನೇಶನ್ ಸಾಮರ್ಥ್ಯವುಳ್ಳದ್ದೆಂದರೆ ಉಪ್ಪಿನಕಾಯಿ. ಅನ್ನ, ಇಡ್ಲಿ, ದೋಸೆ. ಹಲಸಿನಹಣ್ಣಿನ ಕಡುಬು ಹೀಗೆ ಎಲ್ಲದಕ್ಕೂ ಸೈ ಎನಿಸುವ ಜತೆಗಾರ. ಅದರಲ್ಲೂ ಅಪ್ಪೆಮಿಡಿ ಉಪ್ಪಿನಕಾಯಿರಸ ಹಚ್ಚಿ ತಿನ್ನುವುದೆಂದರೆ... ಆಹಾ ಡೆಡ್ಲಿಯೆಸ್ಟ್ ಕಾಂಬಿನೇಶನ್! ಕೆಲವರು (ಸ್ವಲ್ಪ ವಿಚಿತ್ರ ನಮೂನೆಯವರು) ಹೋಳಿಗೆಗೂ ಉಪ್ಪಿನಕಾಯಿ ಹಚ್ಚಿ ತಿನ್ನುವವರಿರುತ್ತಾರೆ. ಅಂಥವರು ಐಸ್‌ಕ್ರೀಮ್ ಮತ್ತು ಉಪ್ಪಿನಕಾಯಿ ಸಹ ಅತಿಮಧುರ ಕಾಂಬಿನೇಶನ್ ಅಂತಾರೋ ಏನೊ! ಅದೆಲ್ಲ ಬಿಡಿ, ಉಪ್ಪಿನಕಾಯಿಯೇ ಸ್ವತಃ ಒಂದು ಎಷ್ಟು ಅದ್ಭುತ ಕಾಂಬಿನೇಶನ್ ನೋಡಿ. ಅದಕ್ಕೇ ಅಲ್ವೇ ಅಲ್ಲಮಪ್ರಭುಗಳು ಹೇಳಿದ್ದು, ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ ಎಂದು?

ಆಹಾರಕ್ರಮದ ಈ ಕಾಂಬಿನೇಶನ್‌ಗಳೆಲ್ಲ ಪರಂಪರಾಗತವಾಗಿ ಬಂದಂಥವು, ನಮ್ಮ ಆಹಾರ ಸಂಸ್ಕೃತಿಯ ಅಂದವನ್ನು ಹೆಚ್ಚಿಸಿದಂಥವು. ಪೂರಿ-ಸಾಗು, ಪೂರಿ-ಭಾಜಿ, ವಡಾ-ಸಾಂಬಾರ್ ಇತ್ಯಾದಿಯೆಲ್ಲ ರಾಷ್ಟ್ರೀಯ ಮಟ್ಟದಲ್ಲಾದರೆ ಪ್ರಾದೇಶಿಕವಾಗಿ ಮಲೆನಾಡಿನಲ್ಲಿ ರಾಗಿಮುದ್ದೆ-ಸೊಪ್ಪಿನಸಾರು, ರಾಗಿರೊಟ್ಟಿ-ಉಚ್ಚೆಳ್ಳುಚಟ್ನಿ, ಬಯಲುಸೀಮೆಯಲ್ಲಿ ಜೋಳದಭಕ್ರಿ-ಝುಣ್ಕಾ, ಭಕ್ರಿ-ಪಿಟ್ಲ, ಕರಾವಳಿಯಲ್ಲಿ ನೀರುದೋಸೆ-ಸೀಕರಣೆ, ಅಕ್ಕಿರೊಟ್ಟಿ-ಕೋಳಿಘಸಿ ಇವೆಲ್ಲ ಶತಮಾನಗಳಿಂದಲೂ ಪರಸ್ಪರ ಬೆಸೆದುಕೊಂಡಿರುವ ಕಾಂಬಿನೇಶನ್‌ಗಳು.

ಇನ್ನು, ಕೆಲವು ಊರುಗಳ ವೈಶಿಷ್ಟ್ಯವಾಗಿ ತಿಂಡಿ ಕಾಂಬಿನೇಶನ್ಸ್ ಇರುತ್ತವೆ - ಉದಾಹರಣೆಗೆ ದಾವಣಗೆರೆಯ ಮಂಡಕ್ಕಿ-ಮಿರ್ಚಿಭಜಿ, ಬೆಂಗಳೂರಿನ ಚೌಚೌಭಾತ್ ಇತ್ಯಾದಿ. ಅವೆಲ್ಲ ಒಂಥರಾ ಟೈಮ್ ಟೆಸ್ಟೆಡ್ (ಟೇಸ್ಟೆಡ್ ಸಹ) ಕಾಂಬಿನೇಶನ್ಸ್. ಇಂತಿಂಥ ಹಬ್ಬಗಳಿಗೆ ಇಂತಿಂಥ ಭಕ್ಷ್ಯಗಳ ಕಾಂಬಿನೇಶನ್ ಅಂತನೂ ಮಾಡಿಟ್ಟಿದ್ದಾರೆ ನಮ್ಮ ಹಿರಿಯರು. ಹಬ್ಬಗಳಷ್ಟೇ ಏಕೆ, ಶ್ರಾದ್ಧದೂಟಕ್ಕೂ ಸಹಿತ ಇಂಥದೇ ಪಕ್ವಾನ್ನಗಳ ಕಾಂಬಿನೇಶನ್ ಅಂತಿರುತ್ತದೆ. ಬಹುಶಃ ಅದೂ ಒಂದರ್ಥದಲ್ಲಿ ಡೆಡ್ಲಿ ಕಾಂಬಿನೇಶನ್!

ಕೆಲವೊಂದು ಅಡುಗೆವೈವಿಧ್ಯಗಳ ತಯಾರಿಯಲ್ಲಿ ಬಳಸುವ ಪದಾರ್ಥಗಳ ಕಾಂಬಿನೇಶನ್‌ನದೇ ಅಲಿಖಿತ ಸಂವಿಧಾನವಿರುತ್ತದೆ. ರುಚಿರುಚಿಯಾದ ಅಡುಗೆ ಮಾಡುವ ಅಮ್ಮಂದಿರನ್ನು/ಅಜ್ಜಿಯಂದಿರನ್ನು ಕೇಳಿನೋಡಿ - ಬಸಳೆಸೊಪ್ಪಿನ ಹುಳಿಗೆ ಬೆಳ್ಳುಳ್ಳಿ ಹಾಕಿದ್ರೇನೇ ಚೆನ್ನಾಗಿರೋದು..., ಎಳೆಗೇರುಬೀಜ ಮತ್ತು ತೊಂಡೆಕಾಯಿ ಸೇರಿಸಿದ್ರೆ ಮಾತ್ರ ಎಕ್ಸೊಟಿಕ್ ಪಲ್ಯ ಆಗೋದು..., ಕಳಲೆ(ಎಳೆಬಿದಿರು) ಹುಳಿಗೆ ಮೊಳಕೆಬರಿಸಿದ ಹೆಸರುಕಾಳು ಹಾಕಿದ್ರೆ ಬೊಂಬಾಟ್ ಆಗಿರುತ್ತೆ..." - ಹೀಗೆ ರಸಪಾಕದ ವಿವಿಧ ಅನುಭವದ ಮಾತುಗಳು ಬಾಯಲ್ಲಿ ನೀರೂರುವಷ್ಟು ರುಚಿಕರವಾಗಿ ಹರಿದುಬರುತ್ತವೆ. ಅವೆಲ್ಲ deadly ಕಾಂಬಿನೇಶನ್ಸ್ ಅಷ್ಟೇ ಅಲ್ಲ, eternal (ಶಾಶ್ವತ) ಕಾಂಬಿನೇಶನ್ಸ್!

ಅದ್ಸರಿ, ಭಾರತೀಯ ಆಹಾರಕ್ರಮದ ಉದಾಹರಣೆಗಳನ್ನಷ್ಟೇ ಉಲ್ಲೇಖಿಸುತ್ತಿದ್ದೀರಿ, ಅಮೆರಿಕನ್ ಫುಡ್ ಕಲ್ಚರ್ ಹೇಗಿದೆ ಅಂತೀರಾ? ಅಮೆರಿಕನ್ನರ ಆಹಾರದಲ್ಲೂ ಕಾಂಬಿನೇಶನ್‌ನದೇ ದರ್ಬಾರು. ಫಾಸ್ಟ್‌ಫುಡ್ ರೆಸ್ಟೊರೆಂಟ್‌ಗಳಲ್ಲಿ ಕೊಂಬೋ-ಮೀಲ್ ತುಂಬಾ ಪಾಪ್ಯುಲರ್. ಒಂದು ಹ್ಯಾಮ್‌ಬರ್ಗರ್, ಒಂದಿಷ್ಟು ಫ್ರೆಂಚ್‌ಫ್ರೈಸ್ ಮತ್ತೊಂದರ್ಧ ಕೊಡಪಾನದಷ್ಟು ಕೋಕ್ ಅಥವಾ ಪೆಪ್ಸಿ - ಇವಿಷ್ಟು ಹೊಟ್ಟೆ ಸೇರಿದರೆ ಮಧ್ಯಾಹ್ನದ ಊಟ ಆದಂತೆಯೇ. ಕಾಂಬಿನೇಶನ್ ನೆಪದಲ್ಲಿ ಮಾರ್ಕೆಟಿಂಗ್‌ನ ತೀವ್ರತೆ ಎಷ್ಟೆಂದರೆ ನಾವು ಬರೀ ವೆಜ್ಜಿಬರ್ಗರ್ ಅಷ್ಟನ್ನೇ ಆರ್ಡರ್ ಮಾಡಿದರೂ would you like french fries with that? ಎಂದು ಕೇಳಿಯೇಬಿಡುತ್ತಾರೆ. ಮೆಕ್‌ಡೊನಾಡ್ಸ್‌ನಲ್ಲಂತೂ ಪ್ರತಿಯೊಬ್ಬ ಗಿರಾಕಿಗೂ ಪ್ರತಿ ಸಲವೂ ಆ ಪ್ರಶ್ನೆಯನ್ನು ಕೇಳಬೇಕೆಂದು ರೆಸ್ಟೊರೆಂಟ್ ನೌಕರರಿಗೆ ಉದ್ಯೋಗತರಬೇತಿಯಲ್ಲೇ ಹೇಳಿಕೊಟ್ಟಿರುತ್ತಾರೋ ಏನೊ.

ಅದೇನೇ ಇದ್ದರೂ ಅಮೆರಿಕದ ಜಂಕ್‌ಫುಡ್‌ಗಿಂತ ನಮ್ಮ ಭಾರತೀಯ ಭಕ್ಷ್ಯಭಂಡಾರದಲ್ಲಿ ಕಂಡುಬರುವ ಕಾಂಬಿನೇಶನ್ಸೇ ಮಹದಾನಂದವನ್ನು ಕೊಡುವಂಥವು ಎಂದು ನನ್ನ ಅಂಬೋಣ. ಜಿಲೇಬಿಯನ್ನು ಮೊಸರಲ್ಲಿ ಅದ್ದಿ ತಿನ್ನುವುದಿರಲಿ, ಒಬ್ಬಟ್ಟಿಗೆ ಬಿಸಿ ಹಾಲು ಅಥವಾ ತೆಂಗಿನಕಾಯಿ ರಸ ಸುರಿದು ಸವಿಯುವುದಿರಲಿ ಅಥವಾ ಬೇರೇನೂ ಬೇಡವಾದರೆ ಬಿಸಿಬಿಸಿ‌ಅನ್ನಕ್ಕೆ ಒಂಚೂರು ತುಪ್ಪ ಮತ್ತು ತಾಜಾ ಆಗಿ ತಯಾರಿಸಿದ ಚಟ್ನಿಪುಡಿ ಕಲಸಿ ಚಪ್ಪರಿಸುವುದಿರಲಿ - ಸಂಯೋಗದ ರಸಪಾನ ಅದೆಷ್ಟು ಆಪ್ಯಾಯಮಾನ!

ಅಂದಹಾಗೆ ನಿಮ್ಮ ನೆಚ್ಚಿನ ಕಾಂಬಿನೇಶನ್ ಯಾವುದು?

- srivathsajoshi@yahoo.com

English summary
Vichitranna Columnist Srivathsa Joshi writes on idli combination and deadly Combination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X