ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ಯುತಿಸಂಚಯವೋ ನಯವಂಚನೆಯೋ?

By Staff
|
Google Oneindia Kannada News


ಈ ವರ್ಷ (2007) ದಿಂದ ಏಪ್ರಿಲ್‌ಗೆ ಬದಲು ಮಾರ್ಚ್‌ ಎರಡನೆ ಭಾನುವಾರದಿಂದಲೇ ಡೇಲೈಟ್‌ ಸೇವಿಂಗ್‌ ಟೈಮ್‌ ಆರಂಭ ಮತ್ತು ಅಕ್ಟೋಬರ್‌ ಕೊನೆಯ ಭಾನುವಾರದ ಬದಲಾಗಿ ನವೆಂಬರ್‌ ಮೊದಲ ಭಾನುವಾರದವರೆಗೂ ಅದರ ಅವಧಿ ವಿಸ್ತಾರ ಎಂಬ ಕಾನೂನನ್ನು ಅಮೆರಿಕ ಸರಕಾರ ಎರಡು ವರ್ಷಗಳ ಹಿಂದೆಯೇ ಜಾರಿಗೊಳಿಸಿತು. ಅಂದರೆ, ವರ್ಷದ ಎಂಟು ತಿಂಗಳು ಡೇಲೈಟ್‌ ಸೇವಿಂಗ್‌ ಟೈಮ್‌ ಮತ್ತು ಉಳಿದ ನಾಲ್ಕು ತಿಂಗಳು ಮಾತ್ರ ಸ್ಟಾಂಡರ್ಡ್‌ ಟೈಮ್‌ (ಬರೀ ಮೂರನೆ ಒಂದಂಶದ್ದನ್ನು ‘ಸ್ಟಾಂಡರ್ಡ್‌’ ಎಂದು ಕರೆಯುವುದು ವಿಚಿತ್ರವೆನಿಸುತ್ತದೆ). ಯಾಕೆ ಈ ಬದಲಾವಣೆಯನ್ನು ಮಾಡಲಾಯಿತು? ಈಗೇನೂ ಪ್ರಪಂಚಯುದ್ಧವಾಗಲೀ ತೈಲ ಆಮದಿನ ಸಮಸ್ಯೆಯಾಗಲೀ ಇಲ್ಲವಲ್ಲ? ಬೆಳಕಿನ ಉಳಿತಾಯದ ಮೂಲಕ ಶಕ್ತಿಸಂಚಯವಾಗುತ್ತದೆ ಎಂದು ಜನರನ್ನು ನಂಬಿಸಿ ಕಾನೂನು ಜಾರಿಗೊಳಿಸಿದ್ದೇ?

ಅಲ್ಲವೆನ್ನುತ್ತಾನೆ ಮೈಕೇಲ್‌ ಡೌನಿಂಗ್‌ - Spring Forward: The Annual Madness of Daylight Saving Time ಎಂಬ ಪುಸ್ತಕವನ್ನು ಬರೆದ ಲೇಖಕ. ಮೊನ್ನೆ ಎನ್‌.ಪಿ.ಆರ್‌(ನ್ಯಾಶನಲ್‌ ಪಬ್ಲಿಕ್‌ ರೇಡಿಯಾ)ದಲ್ಲಿ ಅವನದೊಂದು ಕಿರುಸಂದರ್ಶನವಿತ್ತು. ಅದನ್ನು ಕೇಳಿದರೆ ಅಥವಾ ಮೈಕೇಲ್‌ನ ಪುಸ್ತಕವನ್ನು ಓದಿದರೆ ಡೇಲೈಟ್‌ ಸೇವಿಂಗ್‌ ಟೈಮ್‌ನ ಹಿಂದೆ ಇರುವ ದಗಾಕೋರರ ಲಾಬಿಯ ಪರಿಚಯವಾಗುತ್ತದೆ. ಒಂಥರಾ ನಮ್ಮಲ್ಲಿ ಕೊಂಕಣರೈಲುಮಾರ್ಗದ ವಿರುದ್ಧ, ಬೆಂಗಳೂರು-ಮಂಗಳೂರು ರೈಲುಮಾರ್ಗದ ವಿರುದ್ಧ ಖಾಸಗಿ ಬಸ್‌ ಮಾಲೀಕರ ಲಾಬಿಯಂಥವು ಇರುತ್ತವಲ್ಲ ಅಂತಹ ಸ್ವಾರ್ಥಗಳು ಬೆಳಕಿಗೆ ಬರುತ್ತವೆ.

ಮೈಕೇಲ್‌ ಹೇಳುತ್ತಾನೆ: ‘‘ಡೇಲೈಟ್‌ ಸೇವಿಂಗ್‌ ಟೈಮ್‌ನಿಂದಾಗಿ ಸಂಜೆ ತುಂಬಾ ಹೊತ್ತು ಬೆಳಕಿರುವುದರಿಂದ ಸಾರ್ವಜನಿಕರು ಮನೆಹೊರಗೆ ಉಳಿಯಬಯಸುತ್ತಾರೆ. ಆಫಿ‚ೕಸ್‌ನಿಂದ ಬಂದವರೇ ಮತ್ತೆ ಪಾರ್ಕ್‌ಗಳಿಗೋ, ಮಾಲ್‌ಗಳಿಗೋ, ಔಟ್‌ಡೋರ್‌ ಬಾರ್ಬಿಕ್ಯು ಪಾರ್ಟಿಗಳಿಗೋ, ಗೋಲ್ಫ್‌ ಆಡಲಿಕ್ಕೋ ಹೊರಡುತ್ತಾರೆ. ಅಲ್ಲಿಗೆಲ್ಲ ಅವರು ನಡಕೊಂಡು ಹೋಗುತ್ತಾರೇನು? ಮತ್ತೆ ತಂತಮ್ಮ ಕಾರುಗಳನ್ನು ದೌಡಾಯಿಸುತ್ತಾರೆ. ಮತ್ತಷ್ಟು ಪೆಟ್ರೋಲ್‌ ಉರಿಯುತ್ತದೆ. ಕೊಳ್ಳುಬಾಕ ಸಂಸ್ಕೃತಿಯ ನಾಡಿನಲ್ಲಿ ಜೇಬಿಂದ ಮತ್ತಷ್ಟು ದುಡ್ಡು (ಕ್ರೆಡಿಟ್‌ಕಾರ್ಡ್‌ ಇದ್ದೇ ಇದೆಯಲ್ಲ!) ಖರ್ಚಾಗುತ್ತದೆ. ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಿಗೆ, ರಿಟೈಲರ್‌ಗಳಿಗೆ ಬೇಕಾದ್ದು ಅದೇ. 1986ರಲ್ಲಿ ಡೇಲೈಟ್‌ ಸೇವಿಂಗ್‌ ಟೈಮ್‌ ಅವಧಿಯನ್ನು ಒಂದು ತಿಂಗಳಷ್ಟು (ಆರರಿಂದ ಏಳು) ಹೆಚ್ಚಿಸಿದಾಗ ಗೋಲ್ಫ್‌ ಇಂಡಸ್ಟ್ರಿಯಾಂದರಲ್ಲೇ 200 ಮಿಲಿಯನ್‌ ಡಾಲರ್‌ ಹೆಚ್ಚುವರಿ ವಹಿವಾಟು ನಡೆಯಿತಂತೆ. ಬಾರ್ಬಿಕ್ಯು ಉದ್ಯಮದ ನಿವ್ವಳ ಲಾಭ 100 ಮಿಲಿಯನ್‌ ಡಾಲರ್‌ ಹೆಚ್ಚಿತಂತೆ!’’

‘‘ಕ್ಯಾಂಡಿ ತಯಾರಕ/ಮಾರಾಟಗಾರರೂ ಡೇಲೈಟ್‌ ಸೇವಿಂಗ್‌ ಟೈಮ್‌ ಪರವಾಗಿ ವಾದಿಸುವವರೇ. ಅತಿಹೆಚ್ಚು ಕ್ಯಾಂಡಿ ಮಾರಾಟದ ಹ್ಯಾಲೊವಿನ್‌ ಹಬ್ಬ ಬರುವುದು ಪ್ರತಿವರ್ಷ ಅಕ್ಟೋಬರ್‌ 31ಕ್ಕೆ. ಇಲ್ಲಿಯವರೆಗಾದರೆ ಆ ಹೊತ್ತಿಗೆ ಡೇಲೈಟ್‌ ಸೇವಿಂಗ್‌ ಟೈಮ್‌ ಮುಗಿದಿರುತ್ತಿತ್ತು. ಕ್ಯಾಂಡಿ ಉದ್ಯಮದವರ ಲಾಬಿಯಿಂದಾಗಿ ಈಗ ನವೆಂಬರ್‌ ಮೊದಲ ಭಾನುವಾರದವರೆಗೆ (ಅಂದರೆ ಹ್ಯಾಲೊವಿನ್‌ ಹಬ್ಬ ಕವರ್‌ ಆಗುವಂತೆ) ಡೇಲೈಟ್‌ ಸೇವಿಂಗ್‌ ಟೈಮ್‌ಅನ್ನು ವಿಸ್ತರಿಸಲಾಗಿದೆ.

ಅಕ್ಟೋಬರ್‌ 31ರಂದು ಸಂಜೆಯ ಒಂದು ಗಂಟೆ ಹೆಚ್ಚುವರಿ ಬೆಳಕಲ್ಲಿ ಅಮೆರಿಕವಿಡೀ ಮಕ್ಕಳು ‘ಟ್ರಿಕ್‌ ಆರ್‌ ಟ್ರೀಟ್‌’ ಮಾಡಿದರೆ ಎಷ್ಟು ಹೆಚ್ಚು ಕ್ಯಾಂಡಿ ಖರ್ಚಾಗುತ್ತದೆಯೆಂಬ ಲೆಕ್ಕಾಚಾರ ಕ್ಯಾಂಡಿ ಲಾಬಿಯವರಿಗೆ ಗೊತ್ತಿದೆ. 1985ರಲ್ಲೇ ಇದಕ್ಕೆ ಪ್ರಯತ್ನ ನಡೆದಿತ್ತು; ಆವರ್ಷ ಡೇಲೈಟ್‌ ಸೇವಿಂಗ್‌ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕಿದ್ದ ದಿನ ಪ್ರತಿಯಾಬ್ಬ ಸಂಸದನ ಕುರ್ಚಿಯ ಮೇಲೆ ಒಂದೊಂದು ಕ್ಯಾಂಡಿ ಇಡಲಾಗಿತ್ತು. ಯಾಕೋ ಆ ವರ್ಷ ಆ ಬಿಲ್‌ ಪಾಸಾಗಲಿಲ್ಲ. ಈಗ 2007ರಿಂದ ಹ್ಯಾಲೊವಿನ್‌ ಸಹ ಡೇಲೈಟ್‌ ಸೇವಿಂಗ್‌ ಟೈಮ್‌ನಲ್ಲೇ ಬರುತ್ತದೆ. ಕ್ಯಾಂಡಿ ಮಾರಾಟಗಾರರ ಖಜಾನೆ ತುಂಬುತ್ತದೆ...’’

ಮೈಕೇಲ್‌ ಡೌನಿಂಗ್‌ನ ವಾದಸರಣಿ ತುಂಬ ಕನ್ವಿನ್ಸಿಂಗ್‌ ಆಗಿಯೇ ಇದೆ. ಡೇಲೈಟ್‌ ಸೇವಿಂಗ್‌ ಟೈಮ್‌ ಪರಿಪಾಲಿಸುವುದರಿಂದ ಸಂಪನ್ಮೂಲಗಳ ಉಳಿತಾಯವಾಗುತ್ತದೆಯೆಂಬ ವಾದವನ್ನು ಆತ ಸಾರಾಸಗಟಾಗಿ ಅಲ್ಲಗಳೆಯುತ್ತಾನೆ.

ಈವರ್ಷದ ಹೊಸ ಕ್ರಮದಿಂದಾಗಿ, ಇದುವರೆಗೂ ಏಪ್ರಿಲ್‌ ಮೊದಲ ಭಾನುವಾರ ಡೇಲೈಟ್‌ ಸೇವಿಂಗ್‌ ಟೈಮ್‌ಗೆ ಶಿಫ‚್‌್ಟ ಆಗುತ್ತಿದ್ದ ಕಂಪ್ಯೂಟರ್‌ ಮತ್ತಿತರ ಉಪಕರಣಗಳಲ್ಲಿ ಮಾರ್ಚ್‌ ಎರಡನೆ ಭಾನುವಾರವೇ ಸಮಯ ಬದಲಾವಣೆಯಾಗಬೇಕು. ಅದಕ್ಕಾಗಿ ಅವುಗಳಲ್ಲಿನ ತಂತ್ರಾಂಶವನ್ನು ಬದಲಿಸುವುದರಲ್ಲೇ ಒಂದಿಷ್ಟು ಮಿಲಿಯನ್‌ ಡಾಲರ್‌ಗಳು ಖರ್ಚಾಗಿವೆ. ಈಗ ಅವು ಯಶಸ್ವಿಯಾಗಿ ಸ್ವಯಂಬದಲಾವಣೆ ಮಾಡಿಕೊಂಡರೂ ಮುಂದೆ ಏಪ್ರಿಲ್‌ನಲ್ಲಿ ಇನ್ನೊಮ್ಮೆ ಮಾಡಿಕೊಳ್ಳದಂತೆ ನಿಗಾ ವಹಿಸಿಡಬೇಕಾಗಿದೆ. ಇದೊಂದು ‘ಮಿನಿ Y2K ಸಮಸ್ಯೆ’ಯಿದ್ದಂತೆ. ಕಂಪೆನಿಗಳಲ್ಲಿ ಐಟಿ ಕ್ಷೇತ್ರಕ್ಕಾಗಿ ಹೆಚ್ಚುವರಿ ಖರ್ಚು. ಅಷ್ಟೇ ಅಲ್ಲದೆ ಈ ಹೊಸ ವೇಳಾಪಟ್ಟಿಯಿಂದ ಆರ್ಥಿಕ, ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡಲು ಅಮೆರಿಕ ಸರಕಾರ ಸುಮಾರು 150 ಮಿಲಿಯನ್‌ ಡಾಲರ್‌ ತೆಗೆದಿರಿಸಿದೆಯಂತೆ. ಒಂದು ವೇಳೆ ನಿರೀಕ್ಷಿತ ಪ್ರಯೋಜನಗಳಾಗದಿದ್ದರೆ ಮತ್ತೆ ಏಪ್ರಿಲ್‌-ಅಕ್ಟೋಬರ್‌ ವೇಳಾಪಟ್ಟಿಯನ್ನೇ ಅಳವಡಿಸಿಕೊಳ್ಳಲಾಗುವುದಂತೆ. ಇದೂ ಒಂದು ರೀತಿಯ ‘ತುಘಲಕ್‌ ದರ್ಬಾರು’?

ದ್ಯುತಿಸಂಚಯದ ಹೆಸರಲ್ಲಿ ಇಷ್ಟೆಲ್ಲ ಹಣ, ಸಮಯ, ಶಕ್ತಿ ವ್ಯಯವಾಗುವುದನ್ನು ನೋಡುವಾಗ ಥರ್ಮೊಡೈನಮಿಕ್ಸ್‌ನ ನಿಯಮ ನೆನಪಾಗುತ್ತದೆ: Energy can neither be created nor be destroyed; It can only be transferred from one form into another. ಆದರೂ ಅವೆಲ್ಲದರ ನಡುವೆ ಇಲ್ಲಿನ ಭಾರತೀಯರಿಗೆ ಡೇಲೈಟ್‌ ಸೇವಿಂಗ್‌ ಟೈಮ್‌ನಿಂದಾಗುವ delight ಏನು ಗೊತ್ತೇ? ಭಾರತೀಯ ಕಾಲಮಾನಕ್ಕೆ ಒಂದು ತಾಸು ಹತ್ತಿರವಾದೆವೆಂಬ ಸಂತಸ!

- ಠ್ಟಜಿಡಚಠಿಜಠಚ್ಜಟಠಜಜಿಃಢಚಜಟಟ.್ಚಟಞ

***ಆಸಕ್ತರ ಗಮನಕ್ಕೆ -
ಡೇಲೈಟ್‌ ಸೇವಿಂಗ್‌ ಬಗ್ಗೆ ಸಮಗ್ರ ಮಾಹಿತಿ ಈ ವೆಬ್‌ಸೈಟ್‌ನಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X