• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಪಾನಿಶ್‌ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ...

By Staff
|

ರೆಸ್ಟೊರೆಂಟ್‌ ಕಿಚನ್‌ನಲ್ಲಿ ದೋಸೆ ಹುಯ್ಯೋದು ನಮ್ಮನಿಮ್ಮ ಮನೆಯಲ್ಲಿರುವಂಥ ಕಾವಲಿಯ ಮೇಲಲ್ಲ. ಅಲ್ಲಿ ಎರಡಡಿ ಅಗಲ ನಾಲ್ಕಡಿ ಉದ್ದದ ದೊಡ್ಡ ತವಾ ಬಳಸೋದು. ನಿಮ್ಮ ಆರ್ಡರ್‌ ಬರೆದುಕೊಂಡು ‘ಒಂದು ಮಸ್ಸಾಲೆ... ಮಸ್ಸಾಲೆ ಒಂದು...’ ಎಂದು ವೈಟರ ತಾರಸ್ಥಾಯಿಯಲ್ಲಿ ಉಸುರಿದ ಕೂಡಲೆ ಒಳಗೆ ಕಿಚನ್‌ನಲ್ಲಿ ಅಡುಗೆಯವನು ಬಿಸಿಯಾಗಿರುವ ತವಾದ ಮೇಲೆ ಒಂದು ಮುಷ್ಠಿ ನೀರು ಚಿಮುಕಿಸುತ್ತಾನೆ. ಆಮೇಲೆ ಒಂದು ಪೊರಕೆಯನ್ನು ತವಾದ ಉದ್ದಗಲಕ್ಕೂ ಸವರಿ ನೀರು ಹರಡಿ ಎಲ್ಲ ಕಡೆಯೂ ಸಮಪ್ರಮಾಣದಲ್ಲಿ ಕಾಯ್ದಿರುವಂತೆ ಮಾಡುತ್ತಾನೆ.

ಸಂದೇಹ ಬೇಡ, ಆ ಕೆಲ್ಸಕ್ಕೆ ಪೊರಕೆಯೇ ಬೆಸ್ಟ್‌ ಪರಿಕರ. ಮನೆಯಲ್ಲಿ ನಾವು ಕಾವಲಿಗೆ ಎಣ್ಣೆ ಸವರಲು ತೆಂಗಿನಕಾಯಿಜುಟ್ಟನ್ನೋ ಉಳ್ಳಾಗಡ್ಡಿಯನ್ನೋ (ನಮ್ಮೂರಲ್ಲಾದರೆ ಒಂದುಜಾತಿಯ ಕೆಸುವಿನ ದಂಟನ್ನೋ) ಬಳಸುತ್ತೇವಾದರೂ ರೆಸ್ಟೊರೆಂಟ್‌ ಕಿಚನ್‌ನಲ್ಲಿ ಅಷ್ಟು ದೊಡ್ಡ ತವಾದ ಮೇಲೆ ಅವನ್ನೆಲ್ಲ ಯೂಸ್‌ ಮಾಡಕ್ಕಾಗಲ್ಲ. ಇನ್ನು, ಅದೇ ಪೊರಕೆಯನ್ನು ಅಲ್ಲಿ ಕಸಗುಡಿಸಲಿಕ್ಕೂ ಉಪಯೋಗಿಸುತ್ತಾರೋ ಇಲ್ಲವೋ ಅಂತೆಲ್ಲ ಸಂಶಯಪಡೋದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಬಿಟ್ಟುಬಿಡಿ.

ಇರಲಿ, ಪೊರ್ಕೆಯ ಹೊರತಾಗಿಯೂ ಇನ್ನೊಂದಿಷ್ಟು ಸ್ಪಾನಿಶ್‌ ಸ್ವಾರಸ್ಯಗಳನ್ನು ಸವಿಯೋಣ. ಮಾಧುರಿದೀಕ್ಷಿತ್‌-ಅನಿಲ್‌ಕಪೂರ್‌ ಅಭಿನಯದ ‘ಪುಕಾರ್‌’ ಚಿತ್ರದಲ್ಲಿ ‘‘ಕೆ ಸೆರಾ ಸೆರಾ ಸೆರಾ... ಜೊ ಭಿ ಹೊ ತೊ ಹೊ...’’ ಅಂತೊಂದು ಹಾಡಿದೆ ನಿಮಗೆ ನೆನಪಿರಬಹುದು. ಅದರಲ್ಲಿನ ‘ಕೆ ಸೆರಾ’ ಸ್ಪಾನಿಶ್‌ ಭಾಷೆಯ ಪದಪುಂಜ. ಸ್ಪಾನಿಶ್‌ನಲ್ಲಿ Que sera ಎಂದರೆ ಹಿಂದಿಯಲ್ಲಿ ‘ಜೊ ಭಿ ಹೊ’ (ಇಂಗ್ಲಿಷ್‌ನಲ್ಲಿ that to be) ಎಂದು! ಸ್ಪಾನಿಶ್‌ನ ಇನ್ನೊಂದು ವೈಶಿಷ್ಟ್ಯವೆಂದರೆ ಅಲ್ಲಿ ‘ಜ’ ಉಚ್ಚಾರವಿಲ್ಲ. ‘ಜ’ ಬದಲಿಗೆ ‘ಹ’ ಉಚ್ಚಾರ. ಹಾಗಾಗಿಯೇ ಪೊರ್ಟರಿಕೊದ ರಾಜಧಾನಿ San Juan, ಉಚ್ಚರಣೆಯಲ್ಲಿ ಸಾನ್‌ ಹ್ವಾನ್‌. ನಮ್ಮ ಟೀಮ್‌ನಲ್ಲಿ ಪೊರ್ಟರಿಕೊದವರು ಇಬ್ಬರಿದ್ದರು - ಜಾರ್ಜ್‌ ಮತ್ತು ಅಲೆಗ್ಜಾಂಡರ್‌. ಸ್ಪಾನಿಶ್‌ ನಾಡಿನಲ್ಲಿ ಅವರ ಹೆಸರುಗಳು ಅನುಕ್ರಮವಾಗಿ ‘ಹೊರ್ಹೆ’ (Jorje ಸ್ಪೆಲ್ಲಿಂಗ್‌ನ ಸ್ಪಾನಿಶ್‌ ಉಚ್ಚಾರ) ಮತ್ತು ‘ಅಲ್‌ಹಾಂದ್ರೊ’ ಎಂದು! ಹಾಗಾಗಿಯೇ ಪೊರ್ಟರಿಕೊದಲ್ಲಿದ್ದಷ್ಟು ದಿನಗಳಲ್ಲಿ ನಾನೂ ಜೋಶಿಯಲ್ಲ ‘ಹೊಸಿ’!

ಪೊರ್ಟರಿಕೊದಲ್ಲಿನ ಉಡುಪಿ ಹೊಟೆಲ್‌ ಬಗ್ಗೆಯೂ ಬರೆಯುತ್ತೇನೆ ಎಂದಿದ್ದೆನಷ್ಟೆ? ವಾಸ್ತವವಾಗಿ ಅದು ‘ಉಡುಪಿ’ ಹೊಟೆಲ್‌ ಅಲ್ಲ, ಅಮೆರಿಕದ ಇತರ ನಗರಗಳಲ್ಲಿರುವ ಸಾಮಾನ್ಯ ಇಂಡಿಯನ್‌ ರೆಸ್ಟೊರೆಂಟ್‌ಗಳ ಮಾದರಿಯದೂ ಅಲ್ಲ. ಆದರೂ ಅಲ್ಲಿ ಮಸಾಲೆದೋಸೆ ಸಿಗುತ್ತದೆ ಎಂದರೆ ನಿಜಕ್ಕೂ ಏನೋ ವಿಚಿತ್ರವಿದೆ ಎನಿಸುತ್ತದಲ್ಲವೇ?

ಪೊರ್ಟರಿಕೊದಲ್ಲಿ ‘ಒಲ್ಡ್‌ ಸಾನ್‌ಹ್ವಾನ್‌’ ಎಂಬ ಪ್ರದೇಶವಿದೆ, ಸುಮಾರು ನಾಲ್ಕುನೂರು ವರ್ಷ ಹಳೆಯ ಪಟ್ಟಣ. ಅಲ್ಲಿನ ಕೋಟೆ ಕೊತ್ತಳಗಳು, ಬಂಗಲೆಗಳಂಥ ಮನೆಗಳು, ತೀರಾ ಇಕ್ಕಟ್ಟಾದ ಗಲ್ಲಿಗಳು, ಜಗಮಗಿಸುವ ಅಂಗಡಿಮುಂಗಟ್ಟುಗಳು ಸಂಜೆಯ ಹೊತ್ತನ್ನು ರಂಗೇರಿಸುತ್ತವೆ. ಸಮುದ್ರತಡಿಯಲ್ಲಿ ಹಾದುಹೋಗುವ ರಸ್ತೆ, ಅದರ ಒಂದು ಬದಿಯಲ್ಲಿ ಅಲ್ಲಿನ ‘ಬಡ’ಜನರು ವಾಸಿಸುವ ಜೋಪಡಿಗಳು, ಇನ್ನೊಂದು ಮಗ್ಗುಲಲ್ಲಿ ಸಿರಿವಂತರ ಅಪಾರ್ಟ್‌ಮೆಂಟ್‌ಗಳು - ಒಮ್ಮೆ ಮುಂಬಯಿಯ ನೆನಪಾಗುತ್ತದೆ. ನಮ್ಮ ಟೀಮ್‌ಮೇಟ್‌ ಅಲ್‌ಹಾಂದ್ರೊ ಒಂದು ಸಂಜೆ ತನ್ನ ಕಾರಿನಲ್ಲಿ ಸಾನ್‌ಹ್ವಾನ್‌ ಸುತ್ತಾಟಕ್ಕೆ ಕರಕೊಂಡುಹೋಗಿ ಅಲ್ಲಿನ ಪಾರ್ಲಿಮೆಂಟ್‌ ಹೌಸ್‌, ಗವರ್ನರ್ಸ್‌ ಬಂಗ್ಲೊ, ಕ್ರೂಸ್‌ ಹಡಗುನಿಲ್ದಾಣ ಮುಂತಾದುವುಗಳನ್ನೂ ತೋರಿಸಿದ್ದ. ಸಸ್ಯಾಹಾರಿಯಾದ ನನಗೋಸ್ಕರ ಅವತ್ತು ಡಿನ್ನರ್‌ಗೆ ಒಂದು ಸ್ಪೆಷಲ್‌ ರೆಸ್ಟೊರೆಂಟ್‌ಗೆ ಕರಕೊಂಡುಹೋಗುತ್ತೇನೆ ಎಂದಿದ್ದ.

Hotel Tantraಒಲ್ಡ್‌ ಸಾನ್‌ಹ್ವಾನ್‌ನಲ್ಲಿ Calle Fortaleza (ಕೋಟೆಬೀದಿ ಎಂದು ಭಾಷಾಂತರಿಸಬಹುದು) ಎಂಬ ಒಂದು ಗಲ್ಲಿಯಿದೆ. ಅದರ ಉದ್ದಕ್ಕೂ ಬೇರೆಬೇರೆ ರೆಸ್ಟೊರೆಂಟ್‌ಗಳು - ಕೆರಿಬಿಯನ್‌, ಲ್ಯಾಟಿನ್‌, ಮೆಕ್ಸಿಕನ್‌, ಚೈನಿಸ್‌, ಜಪಾನಿಸ್‌ ಹೀಗೆ ಸಾಲುಸಾಲಾಗಿ ಇವೆ. ಅದೇ ಸಾಲಿನಲ್ಲಿರುವ ಒಂದು ರೆಸ್ಟೊರೆಂಟ್‌ಗೆ ನಾವು ಪ್ರವೇಶಿಸಿದೆವು. Tantra ಎಂಬ ನಾಮಫಲಕದಲ್ಲಿ ತಾಜಮಹಲ್‌ ಆಕೃತಿ ಮತ್ತು ಕೇಸರಿ-ಬಿಳಿ-ಹಸಿರು ಬಣ್ಣಗಳ ಜೋಡಣೆ ನೋಡಿದರೆ ಅದರಲ್ಲೇನೋ ‘ಇಂಡಿಯನ್‌’ ಅಂಶವಿದೆಯೆಂದು ಸ್ಪಷ್ಟವಾಗಿತ್ತು. ಒಳಗೆ ಪ್ರವೇಶಿಸಿದಾಗ ಆಳೆತ್ತರದ ಕಂಚಿನ ಗಣೇಶವಿಗ್ರಹ, ಅಷ್ಟೇ ದೊಡ್ಡದೊಂದು ಆದಿಶೇಷನ ಪ್ರತಿಮೆ (ಮರದ ಕೆತ್ತನೆ), ಗೋಡೆಯ ಮೇಲೆ ರಾಧಾ-ಕೃಷ್ಣ ರಾಸಲೀಲೆಯ ಪಟ, ಟೆರ್ರಾಕೊಟಾ ಮತ್ತು ಕೇಸರಿ ಬಣ್ಣಗಳ ಛಾಯೆ, ಕೇರಳ-ತಮಿಳ್ನಾಡಿನ ಹಳೆಯ ಮನೆಗಳಲ್ಲಿರುವಂತೆ ಮರದತೊಲೆಗಳ ವಿನ್ಯಾಸದ ಒಳಛಾವಣಿ, ಮೋಂಬತ್ತಿಗಳ ಮಂದಬೆಳಕಿನ ಜತೆಯಲ್ಲೇ ಮೈಸೂರ್‌ ಜಾಸ್ಮಿನ್‌ ಅಗರಬತ್ತಿಗಳ ಹದವಾದ ಘಮ - ರೆಸ್ಟೊರೆಂಟ್‌ನೊಳಗೆ ’ಭಾರತ’ ಹಿತವಾಗಿ ಅನುಭವವಾಗುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X