• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿವಾದಿ ಭಯಂಕರ ಶ್ರೀನಿವಾಸ !

By Staff
|

ಸಂಸ್ಕೃತಪ್ರಿಯನಾದ ನನಗೆ, ಸಂಸ್ಕೃತದಲ್ಲೂ ಚಿತ್ರಗೀತೆ ಇರಲು ಸಾಧ್ಯ ಎಂದು ತೋರಿಸಿಕೊಟ್ಟ ಪಿಬಿಎಸ್ ಮೇಲಿನ ಅಭಿಮಾನ ಆ ಒಂದು ಹಾಡಿಂದಲೇ ದುಪ್ಪಟ್ಟಾಯಿತು ಎಂದರೆ ತಪ್ಪಲ್ಲ.

ಚಂದ್ರಲೋಕಕ್ಕೆ ಮಾನವನ ಪದಾರ್ಪಣೆಯ ಸಂದರ್ಭದಲ್ಲಿ ಪಿ.ಬಿ.ಶ್ರೀನಿವಾಸ್ ಆ ಬಗ್ಗೆ ಒಂದು ಇಂಗ್ಲಿಷ್ ಕವನ ಬರೆದು ಅದನ್ನು ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಆಗಿನ ಅಮೆರಿಕಾಧ್ಯಕ್ಷ ರಿಚರ್ಡ್ ನಿಕ್ಸನ್ - ಇವರಿಬ್ಬರಿಗೂ ಕಳಿಸಿದ್ದರಂತೆ, ಮಾತ್ರವಲ್ಲ ಅವರಿಂದ ಪ್ರಶಂಸೆ/ಧನ್ಯವಾದಗಳ ಪ್ರತ್ಯುತ್ತರವನ್ನೂ ಪಡೆದಿದ್ದರಂತೆ! ಪಿಬಿಎಸ್ ಬಹುಭಾಷಾ ಗಾಯಕರಷ್ಟೇ ಅಲ್ಲ ಬಹುಭಾಷಾ ಕವಿ ಸಹ. ಶಾಸ್ತ್ರೀಯಸಂಗೀತವನ್ನು ಕಲಿಯದಿದ್ದರೂ ನವನೀತ ಸುಮಸುಧ ಎಂಬ ಹೆಸರಿನ ಒಂದು ರಾಗವನ್ನೇ ಸೃಷ್ಟಿಸಿ ಸಂಗೀತಲೋಕಕ್ಕರ್ಪಿಸುವಷ್ಟು ಸಂಗೀತಕೃಷಿಕ.

ಕನ್ನಡ ಚಿತ್ರರಂಗದ ಮಟ್ಟಿಗಂತೂ ನಟಸಾರ್ವಭೌಮ ಡಾ|ರಾಜ್ ಶರೀರ ಮತ್ತು ಗಾನಸಾಮ್ರಾಟ್ ಡಾ|ಪಿ.ಬಿ.ಶ್ರೀನಿವಾಸ್ ಶಾರೀರಗಳದು ಹಾಲುಸಕ್ಕರೆ ಜೋಡಿ ಎಂದೇ ಪ್ರಖ್ಯಾತಿ. ಆದಾಗ್ಯೂ ರಾಜ್ ಮೃತರಾದಾಗ ಪಾರ್ಥಿವಶರೀರದ ದರ್ಶನಭಾಗ್ಯ ಪಿಬಿಎಸ್‌ಗೆ ಸಿಗಲಿಲ್ಲವಂತೆ.

ಪಿಬಿಎಸ್ ಬಗ್ಗೆ ಹೀಗೆಯೇ ಸ್ವಾರಸ್ಯದ ಎಷ್ಟೋ ಸಂಗತಿಗಳನ್ನು ನಾನು ಸಂಗ್ರಹಿಸಿದ್ದಿದೆ; ಪತ್ರಿಕೆಗಳ ಸಿನೆಮಾಪುಟಗಳಲ್ಲಿ ಯಾವತ್ತಾದರೂ ಪಿಬಿಎಸ್ ಫೊಟೊ ಸಹ ನೋಡಿದ್ದಿದೆ. ಭಕ್ತಕುಂಬಾರದಂಥ ಚಿತ್ರಗಳ ಹಾಡುಗಳನ್ನು ದೈನಂದಿನ ಪ್ರಾರ್ಥನೆಯೋ ಎಂಬಂತೆ ಲೆಕ್ಕವಿಲ್ಲದಷ್ಟು ಸಲ ಆಲಿಸಿ ಅನುಭವಿಸಿದ್ದಿದೆ. ಆದರೆ ನಿಜರೂಪದಲ್ಲಿ ಆ ಮಹಾನುಭಾವ ಹೇಗಿರಬಹುದು ಎಂಬ ಕುತೂಹಲ ಸಣ್ಣಹುಡುಗನಾಗಿದ್ದಾಗ ತಲೆಯೊಳಗೆ ಹೊಕ್ಕಿದ್ದು ಮಾತ್ರ ಹಾಗೆಯೇ ಬೆಚ್ಚಗೆ ಮುದುಡಿ ಕುಳಿತಿತ್ತು.

ಮೊನ್ನೆ ಜೂನ್ ೨ರಂದು ಕೊನೆಗೂ ಆ ಕುತೂಹಲ ತಣಿಯುವ ಶುಭಗಳಿಗೆ ಬಂತು! ಇದೇ ಪ್ರಪ್ರಥಮ ಬಾರಿಗೆ ಅಮೆರಿಕ ದೇಶಕ್ಕೆ ಭೇಟಿಯಿತ್ತ ಗಾನಸಾಮ್ರಾಟ್ ಡಾ|ಪಿ.ಬಿ.ಶ್ರೀನಿವಾಸ್ ನಮ್ಮ ವಾಷಿಂಗ್ಟನ್‌ಡಿಸಿಗೆ ಬಂದಿದ್ದರು; ಅವರ ತಮ್ಮನಮಗ (ಎಸ್.ವಿ.ಫಣೀಂದ್ರ) ಇಲ್ಲೇ ರಾಜಧಾನಿಪ್ರದೇಶದಲ್ಲಿ ವಾಸಿಸುತ್ತಿದ್ದು ಅವರ ಮನೆಯಲ್ಲಿ ಪಿಬಿಎಸ್ ಉಳಕೊಂಡಿದ್ದರು. ಈ ಸಂದರ್ಭದಲ್ಲೇ ನಮ್ಮ ಕಾವೇರಿ ಕನ್ನಡ ಸಂಘವು ಪಿಬಿಎಸ್ ಅವರಿಗೆ ಸನ್ಮಾನಿಸಿ ಗೌರವಿಸುತ್ತ ಅವರದೊಂದು ಸಂಗೀತಸಂಜೆ ಕಾರ್ಯಕ್ರಮವನ್ನೂ ಏರ್ಪಡಿಸಿತ್ತು. ಕನ್ನಡ ಚಿತ್ರರಂಗದ ಸುವರ್ಣಯುಗದುದ್ದಕ್ಕೂ ಹಾಡಿ ನಮ್ಮೆಲ್ಲರ ನೆನಪುಗಳ ಬುತ್ತಿಯಲ್ಲಿ ಗಾನಮಾಧುರ್ಯದ ಜೇನನ್ನು ತುಂಬಿಸಿದ ಜಾದೂಗಾರನನ್ನು ಅಂದು ಕಣ್ಣಾರೆ ಕಾಣುವ ಅವಕಾಶ! ಅದನ್ನು ನಾನು ಹೇಗೆತಾನೆ ತಪ್ಪಿಸಿಕೊಂಡೇನು!?

೭೭ರ ಇಳಿವಯಸ್ಸಿನಲ್ಲೂ ಉತ್ಸಾಹದ ಬುಗ್ಗೆಯಂತಿದ್ದ ಪಿಬಿಎಸ್, ಓಲ್ಡ್ ಇಸ್ ಗೋಲ್ಡ್ ಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರಿಗೆಲ್ಲ ಅರವತ್ತೆಪ್ಪತರ ದಶಕದ ದಿನಗಳಿಗೆ ಫ್ರೀ ಟ್ರಿಪ್ ಮಾಡಿಸಿದ್ದು ಒಂದು ಕೊಡುಗೆಯಾದರೆ, ಹಾಡಿನಿಂದ ಹಾಡಿಗೆ ಮಧ್ಯದಲ್ಲಿ ಹೃದಯಬಿಚ್ಚಿ ಮಾತಾಡಿದ್ದಿದೆಯಲ್ಲ ಅದು ನಿಜಕ್ಕೂ - ಅವರುಹಾಡಿದ ಒಂದು ಅತಿಪ್ರಖ್ಯಾತ ಹಾಡಿನ ಸಾಲನ್ನೇ ಬಳಸಿ ಹೇಳಬೇಕೆಂದರೆ - ಸುರಸ್ವಪ್ನವಿದ್ದ ಪ್ರತಿಬಿಂಬಬಿದ್ದ ಉದ್ಬುದ್ಧಶುದ್ಧ ನೀರು!

ನಿಜ್ವಾಗ್ಲೂ ಹೇಳ್ತೇನೆ - ಬದುಕಿನಲ್ಲಿ ಹುರುಪು, ಚುರುಕು, ಸೃಜನಶೀಲತೆ, ಕಾರ್ಯತತ್ಪರತೆ, ಸರಸ-ರಸಿಕತೆಯ ಜತೆಜತೆಗೇ ಸೂಕ್ಷ್ಮ, ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ಕಾಣುವುದು - ಇವನ್ನೆಲ್ಲ ನಾವು ಪಿ.ಬಿ.ಶ್ರೀನಿವಾಸ್ ಎಂಬ ಶುದ್ಧಹೃದಯದ ಮನುಷ್ಯನಿಂದ ಕಲಿತುಕೊಳ್ಳಬೇಕು. Our joy is anyway there, But enjoying others’ joy is our superjoy! - ಇದಕ್ಕಿಂತ ಬೇರೆ ಬೇಕೆ ಅವರ ಹೃದಯವೈಶಾಲ್ಯಕ್ಕೆ ಪುರಾವೆ? ಹುರುಪು ಎಂಬ ಶಬ್ದವನ್ನಂತೂ ಅವರು ಎಷ್ಟುಸಲ ಉಪಯೋಗಿಸಿದರೆಂದರೆ ಆಮೇಲೆ ಟಿವಿ ಕಾರ್ಯಕ್ರಮಕ್ಕಾಗಿ ಅವರನ್ನು ಸಂದರ್ಶಿಸಿದ ರವಿ ಹರಪ್ಪನಹಳ್ಳಿಯವರನ್ನು ನೀವು ರವಿ ಹುರುಪಿನಹಳ್ಳಿ..." ಎಂದುಹೇಳಿ ಉತ್ತೇಜಿಸಿದರು!

PBS ಎಂದರೆ ಪ್ಲೇಬ್ಯಾಕ್ ಸಿಂಗರ್ ಅಂತಾರೆ ಜನ; ಆದರೆ ತಾನು ಪ್ರಾರ್ಥನೆಯಲ್ಲಿ ನಂಬಿಕೆಯಿರುವವನು, ಆದ್ದರಿಂದ ತನ್ನ ಪ್ರಕಾರ PBS ಎಂದರೆ Prayer Believer ಶ್ರೀನಿವಾಸ್ ಎನ್ನುತ್ತಾರೆ ಪಿಬಿಎಸ್. ಆದರೆ ಒಂದು ಸ್ವಾರಸ್ಯಕರ ಸಂಗತಿ ನಿಮಗೆ ಗೊತ್ತಿರಲಿಕ್ಕಿಲ್ಲ, ಅವರ ಹೆಸರಿನ PBS ಇನಿಶಿಯಲ್ಸ್‌ನ ವಿಸ್ತೃತರೂಪ ಪ್ರತಿವಾದಿ ಭಯಂಕರ ಎಂದು! ಅದು ತಲೆಮಾರುಗಳ ಹಿಂದಿನಿಂದಲೂ ಬಂದ ಉಪಾಧಿ . ಹಿಂದೆ ರಾಜರ ಆಸ್ಥಾನಗಳಲ್ಲಿ ಅಪ್ರತಿಮ ವಾಕ್ಪಟು/ಚರ್ಚಾಧುರೀಣರಿಗೆ ಆ ರೀತಿಯ ಬಿರುದುಗಳಿರುತ್ತಿದ್ದವು. ವಾದ ಮಾಡತೊಡಗಿದನೆಂದರೆ ಎದುರಾಳಿಗೆ ಭಯಹುಟ್ಟಿಸುವಷ್ಟು ಪ್ರಕಾಂಡಪಂಡಿತ ಎಂಬ ಹೆಮ್ಮೆಯಿಂದ ಆ ಗೌರವ. ಮಾತಿಗೆ ತೊಡಗಿದರೆ ಶ್ರೀನಿವಾಸ್ ನಿಜಕ್ಕೂ ಪ್ರತಿವಾದಿ ಭಯಂಕರ!

ಅಂದಹಾಗೆ, ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ? ನನಗೆ ಗೊತ್ತಿಲ್ಲ, ಆದರೆ ಹುರುಪು ಮೂರ್ತಿವೆತ್ತಂತಿರುವ ಪಿಬಿಎಸ್ ಬಾಡಿಹೋಗಿಲ್ಲ, ಹೂವು ಅರಳುವುದೂ ನಿಂತಿಲ್ಲ. ಅವತ್ತಿನ ಸಂಗೀತಸಂಜೆಯಲ್ಲಿ ವೇದಿಕೆಯ ಮೇಲೆ ಕುಳಿತಿದ್ದಾಗಲೇ ಒಂದು ಆಶುಕವನ ಬರೆದು ಅದನ್ನು ರಾಗಬದ್ಧವಾಗಿ ಹಾಡಿದ್ದೇ ಅದಕ್ಕೆ ಸಾಕ್ಷಿ! ಹಾಗೆಯೇ, ತಂತಿ ಕಡಿದ ವೀಣೆಯಿಂದ ಗಾನ ಹರಿಯಬಲ್ಲದೇ? ಅದೂ ಗೊತ್ತಿಲ್ಲ, ಆದರೆ ವಯಸ್ಸಿನಿಂದಾಗಿ ಧ್ವನಿ ಒಂಚೂರು ಶಿಥಿಲವಾಗಿದೆ ಎನ್ನುವುದುಬಿಟ್ಟರೆ ಅದನ್ನು ಮರೆಮಾಚುವ ಹುರುಪು ಪಿಬಿಎಸ್ ಅವರಲ್ಲಿ ವಿಪುಲವಾಗಿದ್ದು ಗಾನರಸ ನಿರಂತರ ಹರಿಯುತ್ತಿರುವಂತೆ ನೋಡಿಕೊಂಡಿದೆ.

ಅದೆಲ್ಲಕ್ಕಿಂತಲೂ ಹೆಚ್ಚಾಗಿ, ನನಗೆ ಬಾಲ್ಯದಲ್ಲಿ ರೇಡಿಯೊದೊಳಗೆ ಸಿಲ್ವರ್‌ಕಲರ್‌ನ ಒಂದಿಂಚು ಉದ್ದದ ಕೆಪಾಸಿಟರ್ ಆಗಿ ಪರಿಚಯಗೊಂಡ ಈ ಗಾನಯೋಗಿಯ ನಿಜವಾದ ಕೆಪೆಸಿಟಿಯ ಮೇರುರೂಪ ಕಂಡು ನಿಬ್ಬೆರಗಾಗಿ ನಿಲ್ಲುವಂತೆ ಮಾಡಿದೆ!

* ಈವಾರ ಒಂದು ರಸಪ್ರಶ್ನೆಯಿದೆ. ಪಿ.ಬಿ.ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೆಟ್ ಕೊಟ್ಟ ವಿಶ್ವವಿದ್ಯಾಲಯ ಯಾವುದು? ಸುಳಿವು: ಇದು ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯವಲ್ಲ ಎಂಬ ಅರಿವು ನಿಮಗಿದ್ದರೆ ಉತ್ತರ ಅರ್ಧ ಗೊತ್ತಾದಂತೆಯೇ! ಯೋಚಿಸಿ, ಮಾಹಿತಿಹುಡುಕಿ, ಸರಿಯುತ್ತರ ಬರೆದು ಕಳಿಸಿ. ವಿಳಾಸ

- srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X