• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿವಾದಿ ಭಯಂಕರ ಶ್ರೀನಿವಾಸ !

By Staff
|

ಪಿಬಿಎಸ್ ಈ ಹೆಸರಲ್ಲೇ ಏನೋ ಒಂದು ರೀತಿಯ ಇಂಪು! ಕಂಪು! ತಂಪು! ಅವರ ಹಾಡುಗಳನ್ನು ಕೇಳಿ ಸುಖಿಸದ, ವಾರೆವ್ಹಾ ಅನ್ನದ ಕನ್ನಡಿಗರು ಯಾರಿದ್ದಾರೆ? ಈ ವಾರ(ವಿಚಿತ್ರಾನ್ನ-244) ಪಿಬಿಎಸ್ ಬಗ್ಗೆ ಒಂದಿಷ್ಟು ಮಾತು ಮತ್ತು ಬಾಲ್ಯದ ನೆನಪು.

  • ಶ್ರೀವತ್ಸ ಜೋಶಿ

Dream fulfilled of meeting a legend by name P B Srinivas!ನನಗೀಗಲೂ ನೆನಪಿದೆ. ಆಗ ನಾನು ಸುಮಾರು ಆರೇಳು ವರ್ಷದವನಿರಬಹುದು. ನಮ್ಮ ಮನೆಯಲ್ಲಿ ದೊಡ್ಡದೊಂದು ಫಿಲಿಪ್ಸ್ ರೇಡಿಯೊ ಇತ್ತು. ಐದು ಬ್ಯಾಂಡ್‌ನದು ಆಲ್ ಟ್ರಾನ್ಸಿಸ್ಟರ್ ಮೊಡೆಲ್. ಅದಕ್ಕೆ ಒಂಬತ್ತು ವೋಲ್ಟ್‌ನ ದೊಡ್ಡದೊಂದು ಬ್ಯಾಟರಿ (ನಮ್ಮ ಹಳ್ಳಿಯಲ್ಲಿ ವಿದ್ಯುತ್‌ಸೌಕರ್ಯ ಇರಲಿಲ್ಲವಲ್ಲ). ಜೂನ್-ಮತ್ತು ಜುಲೈ ತಿಂಗಳ ಮುಂಗಾರುಮಳೆಗಾಲದಲ್ಲಿ ಆ ರೇಡಿಯೊ ಕೋಮಾವಸ್ಥೆಗೆ ತಲುಪುತ್ತಿತ್ತು. ಕೆಲವೊಮ್ಮೆ ಜಿರಳೆ ಒಳಹೊಕ್ಕು ರೇಡಿಯೊದ ಆರೋಗ್ಯ ಕೆಡಿಸುತ್ತಿದ್ದದ್ದೂ ಇದೆ. ಆಗೆಲ್ಲ ಅದರ ಹಿಂಬದಿಯ ಜಾಲರಿಯನ್ನು ತೆಗೆದು ಒಂದು ಒಣ ಪೈಂಟ್‌ಬ್ರಶ್‌ನಿಂದ ಒಳಗಿನ ಕಸ, ಬಲೆ, ಗೆದ್ದಲು ಇದ್ದದ್ದನ್ನೆಲ್ಲ ತೆಗೆಯುವುದಿತ್ತು.

ನಮ್ಮಣ್ಣ ಹಾಗೆ ಆಪರೇಶನ್ ರೇಡಿಯೊ ಕ್ಲೀನಿಂಗ್ ಮಾಡುತ್ತಿದ್ದಾಗ ನಾವೆಲ್ಲ ಚಿಕ್ಕವರು ಕುತೂಹಲಿಗಳಾಗಿ ಸುತ್ತ ಕುಳಿತುಕೊಳ್ಳುತ್ತಿದ್ದೆವು. ರೇಡಿಯೊದೊಳಗಿನ ಕೆಪೆಸಿಟರ್, ಡಯೋಡ್, ರೆಸಿಸ್ಟರ್ ಇತ್ಯಾದಿ ಬೇರೆಬೇರೆ ಭಾಗಗಳನ್ನು ತೋರಿಸಿ ಅಣ್ಣ ಬೇಕಂತಲೇ, ಇವರು ಪಿ.ಬಿ.ಶ್ರೀನಿವಾಸ್... ಇದು ಎಸ್.ಜಾನಕಿ... ಇಲ್ಲಿ ಕಿಶೋರ್‌ಕುಮಾರ್, ಮಹಮ್ಮದ್‌ರಫಿ.." ಅಂತೆಲ್ಲ ನಮಗೆ ವಿವರಿಸೋರು. ನಾವು ಪಿಳಿಪಿಳಿಕಣ್ಣುಬಿಟ್ಟು, ಇದ್ದರೂ ಇರಬಹುದು ಎಂದು ಪ್ರಾಮಾಣಿಕವಾಗಿ ನಂಬೋದು. ಹಾಗೆ ನಾವು ನಂಬ್ತಿದ್ದದ್ರಲ್ಲಿ ಆಶ್ಚರ್ಯವೇನೂ ಇಲ್ಲ, ಯಾಕೆಂದರೆ ಮುಂದೆ ಏಳನೇ ತರಗತಿಯಲ್ಲಿ ನಮಗೊಂದು ಇಂಗ್ಲಿಷ್ ಪಾಠವಿತ್ತು Melba on Air ಅಂತ. ಅದರಲ್ಲಿ ಮೆಲ್ಬಾ ಎಂಬ ಹುಡುಗಿ ರೇಡಿಯೊಸ್ಟೇಷನ್‌ಗೆ ಹಾಡಲಿಕ್ಕೆಂದುಹೋದವಳು ಅಲ್ಲಿ ಹೊರಗೆ ದೊಡ್ಡ ಆಂಟೆನಾಟವರ್‌ಅನ್ನು ನೋಡಿ ಓಹ್! ನಾನು ಅದರ ಮೇಲೆ ಹತ್ತಿ ಅಲ್ಲಿಂದ ಹಾಡಬೇಕಾ..." ಎಂದುಕೊಂಡಿರುತ್ತಾಳೆ!

ವರ್ಷಕ್ಕೆ ಒಂದೋ ಎರಡೋ ಸಲ ಕಾರ್ಕಳಪೇಟೆಯಲ್ಲಿನ ಜೈಹಿಂದ್ ಟಾಕೀಸಲ್ಲಿ ಕನ್ನಡ ಸಿನೆಮಾ ನೋಡಲಿಕ್ಕೆ ನಮ್ಮಣ್ಣ ಕರಕೊಂಡುಹೋಗುತ್ತಿದ್ದರು. ಸಿನೆಮಾದ ಶುರುವಿಗೆ, ಹೆಸರುಗಳು ಬೀಳೊದಕ್ಕೂ ಮೊದಲು, ಚಿತ್ರನಿರ್ಮಾಣಸಂಸ್ಥೆಯ ದೇವತಾಪೂಜೆಯ ಊದ್‌ಬತ್ತಿ ಶ್ಲೋಕ ಬರುತ್ತಲ್ಲ, ಅದು ಹೆಚ್ಚಾಗಿ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲೇ ಇರೋದು. ಅದನ್ನು ಕೇಳಿ ಅರೇ! ನಮ್ಮನೆ ರೇಡಿಯೊದೊಳಗಿದ್ದವರು ಇಲ್ಲಿಗ್ಹೇಗೆ ಬಂದರು ಎಂದು ನಮಗೆ ಕುತೂಹಲ. ಆಗಲೂ ಅಣ್ಣ ನಮ್ಮನ್ನು ನಂಬಿಸುತ್ತಿದ್ದದ್ದು - ಅವ್ರು ಅಲ್ಲಿ ಪರದೆಯ ಹಿಂದೆ ನಿಂತು ಹಾಡ್ತಿದ್ದಾರೆ... ಎಂದು!

ಹೀಗೆ ಒಂದು ಅತಿಪರಿಚಿತ ಆಪ್ತ-ಆತ್ಮೀಯ ಧ್ವನಿಯ ವ್ಯಕ್ತಿ ಯಾರಿರಬಹುದು, ಅವರು ನೋಡಲಿಕ್ಕೆ ಹೇಗಿರಬಹುದು, ಹಾಡಲ್ಲದೆ ಬರೀ ಮಾತಾಡುವಾಗ ಅವರ ಧ್ವನಿ ಹೇಗಿರಬಹುದು... ಎಂದೆಲ್ಲ ನನ್ನಲ್ಲಿ ಅತ್ಯಂತ ಕುತೂಹಲ ಕೆರಳಿಸಿದವರೆಂದರೆ ಹಿನ್ನೆಲೆಗಾಯಕ ಪಿ.ಬಿ.ಶ್ರೀನಿವಾಸ್. ಒಬ್ಬ ಓದುಗ ತನ್ನ ನೆಚ್ಚಿನ ಲೇಖಕನನ್ನು ಜೀವನದಲ್ಲೊಮ್ಮೆಯಾದರೂ ಭೇಟಿಯಾಗಬೇಕು ಎಂದುಕೊಳ್ಳುವಂತೆ, ಒಬ್ಬ ಚಿತ್ರವೀಕ್ಷಕ ತನ್ನ ನೆಚ್ಚಿನ ಕಲಾವಿದನ ಕೈಕುಲುಕುವ ಸಂದರ್ಭ ಒಮ್ಮೆಯಾದರೂ ಬರಬೇಕು ಎಂದುಕೊಳ್ಳುವಂತೆ, ಈ ಮನುಷ್ಯ ಯಾರು ಅಂತ ನಾನೊಮ್ಮೆ ನೋಡಬೇಕು ಎಂದು ನನ್ನ ತಲೆಯಲ್ಲಿ ಗುಂಗಿಹುಳ ಹೊಕ್ಕಿದ್ದರೆ ಅದು ಪಿ.ಬಿ.ಶ್ರೀನಿವಾಸ್ ಬಗ್ಗೆ.

ಹಾಗೆನೋಡಿದರೆ ರೇಡಿಯೊದಲ್ಲೇನೂ ಅವರೊಬ್ಬರೇ ಹಾಡುತ್ತಿದ್ದದ್ದಲ್ಲ, ಮಿಕ್ಕ ಎಷ್ಟೋ ಅಶರೀರಧ್ವನಿಗಳು ರೇಡಿಯೊದಿಂದ ನಮ್ಮ ಕಿವಿಗೆ ಬೀಳುತ್ತಿದ್ದರೂ, ಆಪ್ತತೆಯ/ಆರ್ದೃತೆಯ ರೋಮಾಂಚನವಾಗುತ್ತಿದ್ದದ್ದು ಪಿಬಿಎಸ್ ವಿಷಯದಲ್ಲಿ ಮಾತ್ರ. ಕಾರಣ ಸ್ಪಷ್ಟ - ರೇಡಿಯೊ ಮಾತ್ರ ಏಕೈಕ ಮನರಂಜನೆಯಾಗಿದ್ದ, ಸಂಗೀತದ ಅಬ್ಬರಕ್ಕಿಂತ ಸಾಹಿತ್ಯಮಾಧುರ್ಯ ತುಂಬಿತುಳುಕುತ್ತಿದ್ದ ಹಾಡುಗಳೇ ಹೆಚ್ಚಿಗಿದ್ದ, ಕನ್ನಡಚಿತ್ರಗೀತೆಯೆಂದರೆ ಪಿಬಿಎಸ್-ಎಸ್.ಜಾನಕಿ ಹಾಡಿದ್ದು ಎನ್ನುವಂತಿದ್ದ ದಿನಗಳು. ಸಿನೆಮಾನೋಡುತ್ತಿದ್ದದ್ದು ಕಡಿಮೆಯಾದ್ದರಿಂದ ನಮಗೆ ಚಿತ್ರಗೀತೆಗಳ ಜ್ಞಾನಭಂಡಾರವೇ ಹೆಚ್ಚು. ಅದರಲ್ಲೂ ಪಿ.ಬಿ.ಶ್ರೀನಿವಾಸ್ ಅಚ್ಚುಮೆಚ್ಚು.

ಪಿಬಿಎಸ್ ಹಾಡಿದ ಕನ್ನಡ ಹಾಡುಗಳ ಮಾತಂತೂ ಆಯ್ತೇ, ಆಗ ೭೦ರ ದಶಕದಲ್ಲಿ ಒಂದಿಷ್ಟು ತುಳು ಚಿತ್ರಗಳೂ ಬಂದಿದ್ದವು. ಕೋಟಿ-ಚೆನ್ನಯ ಚಿತ್ರಕ್ಕಾಗಿ ಪಿಬಿಎಸ್ ಹಾಡಿದ ಜೋಡುನಂದಾದೀಪ ಬೆಳಗ್ಂದು ತುಳುವನಾಡ್‌ದಾ ಗುಂಡೊಡ್..." ಹಾಡು ಎಷ್ಟು ಸುಮಧುರ ಅಂತೀರಿ! ಅದಕ್ಕಿಂತಲೂ ಬೆಸ್ಟ್ ಅಂದರೆ ಬೊಳ್ಳಿದೋಟ ಚಿತ್ರದ ದಾನೆ ಪೊಣ್ಣೆ... ನಿನ್ನಾ ಮನಸೆಂಕ್ ತೆರಿಯಂದೆ ಪೋಂಡಾ..." ಆಹಾ! ಅಂಥ ಮೆಲೋಡಿಯಸ್ ಹಾಡು ಕನ್ನಡ ಅಥವಾ ಹಿಂದಿಚಿತ್ರಗಳಲ್ಲೂ ಬಂದಿರಲಿಲ್ಲವೇನೊ.

ಮಂಗಳೂರು ಆಕಾಶವಾಣಿಯ ಕೋರಿಕೆ ಕಾರ್ಯಕ್ರಮದಲ್ಲಿ ಪ್ರಾಯಶಃ ಅತಿಹೆಚ್ಚು ರಿಕ್ವೆಸ್ಟ್ ಲೆಟರ್‍ಸ್ ಗಳಿಸಿದ ಖ್ಯಾತಿ ಇವತ್ತಿಗೂ ಆ ಹಾಡಿನದೇ ಆಗಿರಬಹುದು ಎಂದು ನನ್ನದೊಂದು ಅಂದಾಜು.

ನಮಗೆ ಮೂರನೆಯ ತರಗತಿಯಲ್ಲಿ ಕನ್ನಡಪಠ್ಯಪುಸ್ತಕದಲ್ಲಿ ಪುಣ್ಯಕೋಟಿಯ ಹಾಡಿತ್ತು. ಸರಿಸುಮಾರು ಅದೇ ಸಮಯಕ್ಕೆ ತಬ್ಬಲಿಯು ನೀನಾದೆ ಮಗನೆ ಚಿತ್ರಕ್ಕೆಂದು ಆ ಗೀತೆ ಪಿ.ಬಿ.ಶ್ರೀನಿವಾಸ್ (ಸಹಕಲಾವಿದರೊಂದಿಗೆ) ಧ್ವನಿಯಲ್ಲಿ ಮೊಟ್ಟಮೊದಲು ಕೇಳಿದಾಗ ಆದ ರೋಮಾಂಚನ ನನಗೆ ಈಗ ಅದನ್ನು ಕೇಳಿದರೂ ಆಗುತ್ತದೆ! ಅಷ್ಟೇ ಖುಶಿಯಾಗೋದು ಭಾಗ್ಯಜ್ಯೋತಿ ಚಿತ್ರಕ್ಕಾಗಿ ಅವರು ರಚಿಸಿ ಹಾಡಿದ ಸಂಸ್ಕೃತ ಗೀತೆ ದಿವ್ಯಗಗನ ವನವಾಸಿನಿ... ಭವ್ಯರುಚಿರಧರಹಾಸಿನಿ..." ಎಂದು ಶುರುವಾಗುತ್ತಲ್ಲಾ ಅದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more