ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-1‘ತಾಳಿ’ ಎಂದರೆ ಜಸ್ಟ್‌ ಇನ್ನೊಂದು ಆಭರಣ ಅಷ್ಟೆ!

By Staff
|
Google Oneindia Kannada News


(‘ಮಾಂಗಲ್ಯಮ್‌...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)

  • ವಂದನಾ ಪಟ್ಟಣಶೆಟ್ಟಿ; ಬೆಂಗಳೂರು
Mangalya is just another jewellry for Vandanaನನ್ನ ಪರ್ಸನಲ್‌ ಅಭಿಪ್ರಾಯ ಏನಂದ್ರೆ ತಾಳಿಯ ಸೆಂಟಿಮೆಂಟ್‌ ಬರ್ತಾ ಬರ್ತಾ ಕಡಿಮೆ ಆಗ್ತಾ ಇದೆ ಅನ್ಸುತ್ತೆ. ನಾನೂ ಸಹ ರೆಗ್ಯುಲರ್‌ ಆಗಿ ತಾಳಿ ಹಾಕ್ಕೊಳ್ತೇನೆ ಅಂತೇನೂ ಇಲ್ಲ, ಸೀರೆ ಉಟ್ಟಾಗ ಅಥವಾ ನಮ್ಮಮ್ಮನ ಮನೆಗೆ ಹೋಗುವಾಗ ಮಾತ್ರ ಕಡ್ಡಾಯವಾಗಿ ಧರಿಸುತ್ತೇನೆ. ಮಿಕ್ಕ ಸಮಯದಲ್ಲಿ ಅದು ಕಪ್‌ಬೋರ್ಡಲ್ಲಿ ಇರುತ್ತೆ. ಹಾಗೆ, ನನ್ನ ಮಟ್ಟಿಗೆ ತಾಳಿ ಎಂದರೆ ಜಸ್ಟ್‌ ಇನ್ನೊಂದು ಆಭರಣ ಅಷ್ಟೇ ಹೊರತು ಅದರಲ್ಲಿ ಭಾವನಾತ್ಮಕವಾದದ್ದು ಏನೂ ಇಲ್ಲ. ಈಗೀಗ ಇದು ಸರ್ವೇಸಾಮಾನ್ಯ ಎಂದು ನನ್ನ ಅನಿಸಿಕೆ.

ನಾನೊಬ್ಬಳು ತೀರಾ ಸಂಪ್ರದಾಯವಾದಿ ಅಲ್ಲವಾದ್ದರಿಂದ ಈ ಧೋರಣೆ. ತಾಳಿ ಹಾಕ್ಕೊಳ್ಳಿಲ್ಲ ಅಂತ ತಪ್ಪಿತಸ್ಥ ಭಾವನೆ ನನ್ನನ್ನು ಕಾಡಿದ್ದಿಲ್ಲ. ಎಲ್ಲೋ ಓದಿದ ನೆನಪು - ಸುಧಾಮೂರ್ತಿಯವರು ಬರೆದಿದ್ದರು, ಅವರು ಸಹ ದಿನಾ ತಾಳಿ ಧರಿಸೋದಂತೇನೂ ಇಲ್ಲವಂತೆ. ಆದರೆ ಪ್ರಾಯ ಸಂದ ಅವರ ಅತ್ತೆ ಅವರ ಜತೆಗಿದ್ದಾಗ ಮಾತ್ರ ತಪ್ಪದೆ ತಾಳಿ ಧರಿಸ್ತಾರಂತೆ!

ಹಾಗಂತ ಇದು ನಾವೆಲ್ಲ ಮಾಡರ್ನ್‌ ಎಂದಾಗಲೀ, ಸ್ತ್ರೀಸ್ವಾತಂತ್ರ್ಯ ಚಳುವಳಿಯವರೆಂದಾಗಲೀ ಅರ್ಥವಲ್ಲ. ಬೇರೆಯವರಿಗೆ ತಂಟೆಯಾಗದಂತೆ ನಮ್ಮಿಷ್ಟದಂತೆ ನಡೆದುಕೊಳ್ಳುವವರು ಅಷ್ಟೇ. ಪುಣ್ಯಕ್ಕೆ ಈಗಿನ ಕಾಲದ ಗಂಡಸರೂ ಆ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುವವರಲ್ಲ. ಅದೆಲ್ಲ ಜಸ್ಟ್‌ ಪರ್ಸನಲ್‌ ಚಾಯ್ಸ್‌. ಒತ್ತಾಯ ಇಲ್ಲ, ದಾಕ್ಷಿಣ್ಯ ಇಲ್ಲ.

ಆದರೆ ಇದರಿಂದಾಗಿ ಪೇಚಿಗೆ ಸಿಕ್ಕಿದ ಒಂದು ಪ್ರಸಂಗವನ್ನು ಹೇಳಲೇಬೇಕು. ಅದೇ ಆಗಲೇ ಹೇಳಿದ್ನಲ್ಲ, ನಮ್ಮಮ್ಮನಿಗೆ ನನ್ನ ಕೊರಳಲ್ಲಿ ಸದಾ ತಾಳಿ ಇರಬೇಕೆಂಬ ಇಚ್ಛೆ. ಕನಿಷ್ಠಪಕ್ಷ ನಾನು ತವರುಮನೆಗೆ ಹೋಗುವಾಗಾದ್ರೂ. ಯಾಕಂದ್ರೆ ನಮ್ಮಮ್ಮನ ಕನ್ಸರ್ನ್‌ ಏನೆಂದರೆ ಅವಳ ಓರಗೆಯವರೆಲ್ಲ ನನ್ನ ಬಗ್ಗೆ ಏನ್‌ ತಿಳ್ಕೊಳ್ತಾರೊ ಅಂತ.

ಒಂದಿನ ಅಭ್ಯಾಸಬಲದಂತೆ, ಕೊರಳಲ್ಲಿ ತಾಳಿ ಇಲ್ಲದೆ ಅಮ್ಮನ ಮನೆಗೆ ಹೋಗಿದ್ದೆ. ಅದೂ ಅಲ್ದೆ ಅವತ್ತು ನಾನೂ ಅಮ್ಮ ಸೇರಿ ಅಲ್ಲಿನ ಲೋಕಲ್‌ ಕ್ಲಿನಿಕ್‌ಗೆ ಹೋಗುವುದಿತ್ತು ನನ್ನ ಫಸ್ಟ್‌ ‘ಪ್ರೆಗ್ನೆನ್ಸಿ ಟೆಸ್ಟ್‌’ಗೆ! ಸರಿ, ನಾನು ಮತ್ತು ಅಮ್ಮ ಡಾಕ್ಟ್ರತ್ರ ಹೋದೆವು. ಟೆಸ್ಟ್‌ ಮಾಡಿ ಆಯ್ತು. ಸ್ವಲ್ಪ ಹೊತ್ತು ಕಾದ ನಂತರ ಡಾಕ್ಟ್ರು ನಮ್ಮಿಬ್ಬರನ್ನೂ ತನ್ನ ಕೊಠಡಿಗೆ ಕರೆದರು. ಟೆಸ್ಟ್‌ ಪಾಸಿಟಿವ್‌ ಎಂದು ಹೇಳಿದರು! ನಮ್ಮ ಸಂತೋಷಕ್ಕೆ ಎಣೆಯುಂಟೇ! ಆದರೆ ಡಾಕ್ಟ್ರ ಮುಖದಲ್ಲಿ ಏನೋ ಸೀರಿಯಸ್‌ನೆಸ್‌ ಇತ್ತು. ಅವರು ಸ್ವಲ್ಪ ಹಿಂಜರಿಯುತ್ತಲೇ ಪಿಸುಮಾತಲ್ಲೇ ನನ್ನ ಅಮ್ಮನತ್ರ ಕೇಳಿದರು - ‘‘ಮಗಳಿಗೆ ಮದುವೆ ಆಗಿದೆಯಾ?’’

ಆಗಷ್ಟೇ ನಾವು ಗಮನಿಸಿದ್ದು ಅವತ್ತು ನನ್ನ ಕೊರಳಲ್ಲಿ ‘ಮದುವೆ ಲೈಸೆನ್ಸ್‌’ ಇರಲಿಲ್ಲ ಎಂಬ ವಿಚಾರವನ್ನು. ತುಮಕೂರಿನ ಒಂದು ಪುಟ್ಟ ಪೇಟೆಯಲ್ಲಿನ ಆ ಡಾಕ್ಟ್ರಿಗೆ, ತಾಳಿ ಧರಿಸದಿದ್ದ ನಾನು ಪ್ರೆಗ್ನೆನ್ಸಿ ಟೆಸ್ಟ್‌ ಪಾಸಿಟಿವ್‌ ಮಾಡಿಕೊಂಡದ್ದು ನೋಡಿ ಸಹಜವಾಗಿಯೇ ಗಲಿಬಿಲಿ ಆಗಿರಬೇಕು. ಅವತ್ಯಾಕೋ ಕ್ಲಿನಿಕ್‌ಗೆ ಹೊರಡುವ ಮೊದಲು ಅಮ್ಮನೂ ಅಷ್ಟೊಂದು ಗಮನಿಸಿರಲಿಲ್ಲ ಎಂದೆನಿಸುತ್ತದೆ. ಹಿಂದಿರುಗುವಾಗ ಮಾತ್ರ ಅಮ್ಮ ನನ್ನನ್ನು ಚೆನ್ನಾಗಿ ಬೈದ್ರು.

ಹೌದು, ನನಗೆ ಅದು ತಮಾಷೆಯ ವಿಷಯವಾದ್ರೂ ಅಮ್ಮನಿಗೆ ಅಲ್ಲವಲ್ಲ! ನನ್ನಿಂದ ಗುಡ್‌ ನ್ಯೂಸ್‌ ಇದ್ರೂ ತಾಳಿಯ ವಿಷಯದಲ್ಲಿ ಅಮ್ಮನ ಮನ ನೋಯಿಸಿದ್ದೆ. ಆ ಘಟನೆಯ ನಂತರ, ತವರುಮನೆಗೆ ಹೋಗುವಾಗಂತೂ ತಾಳಿ ಹಾಕ್ಕೊಳ್ಳೋದನ್ನು ಮರೆಯೋದೇ ಇಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X