• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಹರ್‌ ಕಾ ವಾದಾ... ಫಿಫ್ಟಿ ಫಿಫ್ಟಿ...

By Staff
|


ವಿಚಿತ್ರಾನ್ನದಲ್ಲಿದ್ದ ವಿಷ ಸಮಸ್ಯೆಯನ್ನು ಬಿಡ್ಸಿದ್ದೇನೆ... ‘ ನೀರು ಕುಡಿ’ದಷ್ಟು ಸುಲಭವಾಗಿ!

ಸ್ವಾಮಿ,

ವಿಚಿತ್ರಾನ್ನದಲ್ಲಿ ‘ಪಚನವಾಗುವಷ್ಟೇ...’ ಎಂದು ಪುಸಲಾಯಿಸಿ ಒಂದು ಡೋಸ್‌ ವಿಷ(ಯ) ಮತ್ತು ಅದಕ್ಕಿಂದ ಸ್ಟ್ರಾಂಗ್‌ ಡೋಸ್‌ ಜಾಣ್ಮೆಲೆಕ್ಕ ಕೊಟ್ಟಿದ್ರಲ್ಲ? ‘‘ಇದೊಳ್ಳೇ ತಲೆತಿನ್ನುವ ಪ್ರಶ್ನೆ ಆಯ್ತಲ್ಲ ಮಾರಾಯ್ರೆ. ಉತ್ತರ ಹೇಂಗೆ ತಲೆ ಕೆಳಗೆ ಮಾಡಿದ್ರೂ ಸಿಗ್ತಿಲ್ಲೆ!’’ ಅಂತ ಕುಂದಾಪುರ ಕಡೆಯ ನನ್ನ ಮಿತ್ರನೊಬ್ಬನ ಉವಾಚ.

ನಾನೂ ಮಂಡೆ ಸರೀ ಕಿರುಮಿ ಕಿರುಮಿ (ತಲೆ ಕೆರೆದು ಕೆರೆದು) ಉತ್ತರ ಉದ್ಭವಿಸುತ್ತದಾ ಎಂದು ಯತ್ನಿಸಿದೆ. ‘ನೀರು ಕುಡಿದಷ್ಟು’ ಎಂದು ಹಿಂಟ್‌ ಇದ್ದುದರಿಂದ ಮೈಮೇಲೆಲ್ಲ ನೀರು ಹಾಕಿಕೊಂಡಾಗ ಕೊನೆಗೂ ಹೊಳೆದ ಉತ್ತರದೊಂದಿಗೆ ಬಚ್ಚಲುಮನೆಯಿಂದ ಆರ್ಕಿಮಿಡಿಸ್‌ನಂತೆ ಓಡಿ ಬರುತ್ತಿದ್ದೇನೆ... ಒಪ್ಪಿಸಿಕೊಳ್ಳಿ!

ನನ್ಗೆ ಕಾಣುವ ಹಾಗೆ ವಿಷಗಿಷ ಎಂಥದೂ ಇಲ್ಲ. ಕೋಶಾಧಿಕಾರಿ ಮತ್ತು ವೈದ್ಯ ಇಬ್ಬರೂ ರಾಜನೆದುರಿಗೆ ತಂದದ್ದು ಬರೀ ನೀರು ಅಷ್ಟೆ! (ಅದೂ ‘ಬಿಸ್ಲೇರಿ’ ದುಬಾರಿ ಅಲ್ವಾ ಅದಕ್ಕೆ ಬಾವಿಯ ಚಪ್ಪೆ ನೀರು).

ವೈದ್ಯ ಬದುಕುತ್ತಾನೆ ಮತ್ತು ಕೋಶಾಧಿಕಾರಿ (ಅವನನ್ನು ಸದ್ಯಕ್ಕೆ ‘ಕೋಶ’ ಎಂದು ನಮೂದಿಸೋಣ) ಸಾಯುತ್ತಾನೆ ಎಂದಿತ್ತಲ್ಲ ಪ್ರಶ್ನೆಯಲ್ಲೇ? ಹಾಗಾಗಿ ಕೋಶ ವಿಷ ಕುಡಿದಿರಬೇಕು, ವೈದ್ಯ ವಿಷ ಕುಡಿದಿಲ್ಲ. ವೈದ್ಯ ಯಾಕೆ ಸಾಯಲಿಲ್ಲ ಅಂದ್ರೆ ಅವನು ತಂದದ್ದು ನೀರು; ಕೋಶ ತಂದದ್ದೂ ನೀರು. ನೀರಿನ ಮೇಲೆ ಮತ್ತೆ ನೀರು ಕುಡಿದ್ರೆ ಅದು ಎಚ್‌ಟುಒ ಆಗಿಯೇ ಉಳೀತದೆ ಅಲ್ವಾ? ಹಾಗಾಗಿ ವೈದ್ಯ ಬದುಕಿದ.

ಮತ್ತೆ ಕೋಶ ಸತ್ತದ್ದು ಯಾಕೆ? ಇದು ಸಮಸ್ಯೆಯನ್ನು ಬಿಡಿಸುವವರಿಗೆ ಸ್ವಲ್ಪ ತಲೆನೋವು ತರಿಸುತ್ತದೆ. ಬರೀ ಹೆದರಿಕೆಯಿಂದಲೇ ಸತ್ತಿರ್ಬಹುದು ಅಂದ್ಕೊಳ್ತಾರೆ ಕೆಲವರು. ನನ್ಗೆ ಅನ್ಸುವ ಪ್ರಕಾರ ಕೋಶ ಅರಮನೆಗೆ ಹೊರಡುವ ಸ್ವಲ್ಪ ಮೊದಲು, ತನ್ನ ಮನೆಯಲ್ಲೇ ವಿಷ ಕುಡಿದು ಬಂದಿದ್ದ (ಅವನಷ್ಟು ‘ಇಂಟೆಲಿಜೆಂಟ್‌ ಮೂರ್ಖ’ ಬೇರೆ ಯಾರೂ ಇಲ್ಲ)! ವೈದ್ಯನ ಮೇಲೆ ಭಾರೀ ಭರವಸೆ ಅವ್ನಿಗೆ. ತನ್ನದಕ್ಕಿಂತ ಪ್ರಬಲ ವಿಷವನ್ನು ವೈದ್ಯ ತಂದೇತರ್ತಾನೆ ಅಂತ ಎಣಿಸಿಕೊಂಡು ಪಾಪ, ತಾನು ಒಂದು ಸಣ್ಣ ಇಲಿಪಾಷಾಣವನ್ನೋ, ಲಕ್ಷ್ಮಣರೇಖೆಯನ್ನೋ, ನೊಣಗಳಿಗೆ ಬಳಸುವ ಬೇಗಾನ್‌ಬೇಟ್‌ ಅನ್ನೋ ತಿಂದುಕೊಂಡು ಬರ್ತಾನೆ (ಅಸಲಿಗೆ ಅವನು ಅಷ್ಟೂ ಮಾಡೋದು ಬೇಡಾಗಿತ್ತು. ಹಣ್ಣಿನಂಗಡಿಯಿಂದ ತಂದ ದ್ರಾಕ್ಷಿಯನ್ನು ತೊಳೆಯದೇ ಕ್ರಿಮಿನಾಶಕ ಸಿಂಪಡಿಸಿದ ನೀಲಿನೀಲಿ ಕಲೆಗಳು ಅದರ ಮೇಲೆ ಇರುವಂತೆಯೇ ತಿಂದಿದ್ದರೂ ಸಾಕಾಗಿರೋದು).

ಈ ಮನಶಾಸ್ತ್ರಜ್ಞ ವೈದ್ಯನಾದರೋ ಅದನ್ನು ಮೊದಲೇ ಊಹಿಸಿ ಕೋಶನಿಗೆ ಉಲ್ಟಾ ‘ಬತ್ತಿ’ ಇಡಲಿಕ್ಕಾಗಿ ತಾನು ಬರೀ ನೀರನ್ನೇ ತಕೊಂಡು ಬರ್ತಾನೆ. ಕೋಶ ತಂದಿದ್ದ ನೀರು ಮತ್ತೆ ತನ್ನ ನೀರು ಎರಡನ್ನೂ ಆರಾಮಾಗಿ ಗಟಗಟನೆ ಕುಡಿದು ಬದುಕಿಕೊಳ್ಳುತ್ತಾನೆ. ಹೆಚ್ಚೆಂದರೆ ಆ ನೀರು ಕಲುಷಿತವಾಗಿದ್ದಲ್ಲಿ ಅವನಿಗೊಂದು ಸಲ ಕಾಮಾಲೆಯೊ, ಮಲೇರಿಯಾವೊ ಆಗ್ಬಹುದು - ಆದರೇನು, ವೈದ್ಯ ಅಲ್ವಾ ಸ್ವಲ್ಪ ಶುಂಠಿಕಷಾಯ ತಕ್ಕೊಂಡು ಸರಿಮಾಡಿಕೊಳ್ತಾನೆ ಬಿಡಿ. ಆದರೆ ಈ ಇಲಿಪಾಷಾಣ ಕುಡಿದ ನಮ್ಮ ಪಾಪದ ಖಜಾಂಚಿ ಮಾತ್ರ ಗೊಟಕ್‌ ಅಂದ! ವೈದ್ಯ ಬುದ್ಧಿವಂತಿಕೆಯಿಂದ ಗೆದ್ದ.

ಸಮಸ್ಯೆಗೆ ಸರಿಯುತ್ತರ ಅಷ್ಟು. ಆದರೆ ತಾಳಿ ತಾಳಿ, ಆಮೇಲೆ ಅಲ್ಲೇನಾಯ್ತು ಅನ್ನೋದು ಇನ್ನಷ್ಟು ಕುತೂಹಲಕರ!

ಕೋಶಾಧಿಕಾರಿ ಪೂರ್ತಿಯಾಗಿ ಸಾಯುವುದಿಲ್ಲ. ವಿಲವಿಲ ಒದ್ದಾಡ್ತಾನೆ. ಅವನು ಬರೀ ಇಲಿಪಾಷಾಣ ತಿಂದಿರುವುದು ಅಂತ ಅವನು ಕಕ್ಕುವ ನೊರೆ ನೋಡಿ ವೈದ್ಯನಿಗೆ ಗೊತ್ತಾಗ್ತದೆ. ಕೂಡಲೆ ಅವನೊಳಗಿನ ‘ವೈದ್ಯೋ ನಾರಾಯಣೊ ಹರಿಃ’ ಜಾಗೃತನಾಗ್ತಾನೆ. ರಾಜನಿಗೆ ತೋರಿಸಲು ನೀರನ್ನು ಮಾತ್ರ ತಂದದ್ದಾದ್ರೂ, ತಾನು ಒಂದು ವಾರ ತಲೆಗೆ ಕಾಲುಕೊಟ್ಟು ಲಾಗಹಾಕಿ ತಯಾರು ಮಾಡಿದ ‘ಸ್ಟ್ರಾಂಗೆಸ್ಟ್‌’ ವಿಷವನ್ನೂ ಏನಕ್ಕಾದ್ರೂ ಇರಲಿ ಎಂದು ಅವನು ಸಣ್ಣ ವಸ್ತ್ರದಲ್ಲಿ ಕಟ್ಟಿಕೊಂಡು ಬಂದಿರ್ತಾನೆ. ಅದನ್ನೇ ಕೂಡಲೇ ಕೋಶಾಧಿಕಾರಿಗೆ ಕುಡಿಸಿ ಅವನನ್ನು ಬದುಕಿಸ್ತಾನೆ! ಈರೀತಿ ವೈದ್ಯನ ಪರಿಶ್ರಮಕ್ಕೂ ಬೆಲೆ ಬಂತು; ಬುದ್ಧಿವಂತಿಕೆಗೂ ನ್ಯಾಯ ಸಂದಿತು, ಮಾನವೀಯತೆಯನ್ನು ಮೆರೆದಂತೆಯೂ ಆಯ್ತು! ರಾಜ ಮಾತ್ರ ತನ್ನ ತಿಳಿಗೇಡಿತನಕ್ಕೆ ನಾಚಿ ಕ್ಷಮಾಪಣೆ ಕೇಳುವಂತಾಯ್ತು.

ಹೂಂ... ಮುಂದ?

ವೈದ್ಯನಿಗೆ ಕೋಶಾಧಿಕಾರಿಯಿಂದ ಪ್ರತಿ ತಿಂಗಳೂ ‘ಫಿಫ್ಟಿ-ಫಿಫ್ಟಿ’ ಡೀಲ್‌. ‘‘ಜೆಹರ್‌ ಕಾ ವಾದಾ... ಫಿಫ್ಟಿ ಫಿಫ್ಟಿ... ಆಧಾ ಆಧಾ ಫಿಫ್ಟಿ ಫಿಫ್ಟಿ... ತರರಂಪಂಪಂಪಂ...!’’

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more