• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಹದ್ದು ಮೀರಿದ ಹದ್ದಿನ ಕತೆ!

By Staff
|

True story of bald eagles in Washingtonನಮ್ಮೀ ಕತೆಯ ನಾಯಕ-ನಾಯಕಿ ಹದ್ದುಗಳ ಗೂಡು ಇದ್ದದ್ದು ಈ ಸೇತುವೆಯ ಮೇರಿಲ್ಯಾಂಡ್ ತುದಿಯಲ್ಲಿ, ಒಂದು ದೊಡ್ಡ ಮರದಮೇಲೆ. ಕಳೆದ ಆರೇಳು ವರ್ಷಗಳಿಂದಲೂ ಸೇತುವೆ ಅಗಲೀಕರಣದ ಮೆಗಾಪ್ರೊಜೆಕ್ಟ್ ನಡೆಯುತ್ತಿದೆ, ದಿನಕ್ಕೆ 70000 ವಾಹನಗಳ ಭಾರವನ್ನು ಹೊರುವಷ್ಟೇ ಶಕ್ತಿಯ ಸೇತುವೆಯನ್ನು ಈಗಿನ ಟ್ರಾಫಿಕ್ ದಿನಕ್ಕೆ 200000 ಸಂಖ್ಯೆಯ ವಾಹನಗಳ ಭಾರ ತಡೆಯುವಷ್ಟು ಬಲಶಾಲಿಯಾಗಿಸುವುದಕ್ಕೆ. ಸೇತುವೆ ಕಾಮಗಾರಿಯ ಕಾರ್ಮಿಕರಿಗೆ ಈ ಹದ್ದಿನ ಜೋಡಿಯ ನಿತ್ಯದರ್ಶನ, ಆತ್ಮೀಯ ಒಡನಾಟ. ಗಂಡು ಹದ್ದಿಗೆ ಜಾರ್ಜ್ ಎಂದೂ ಹೆಣ್ಣಿಗೆ ಮಾರ್ತಾ ಎಂದೂ ಬ್ರಿಡ್ಜ್ ಕಾರ್ಮಿಕರಿಂದ ನಾಮಕರಣ.

2006ರ ಏಪ್ರಿಲ್‍ವರೆಗೂ ಎಲ್ಲವೂ ಚೆನ್ನಾಗಿತ್ತು. ಮಾರ್ತಾ ಆ ವರ್ಷವೂ ಎರಡು ಮೊಟ್ಟೆಗಳನ್ನಿಟ್ಟಿದ್ದಳು, ಇನ್ನೇನು ಒಂದು ವಾರದಲ್ಲಿ ಅವು ಒಡೆದು ಮರಿಗಳು ಹೊರಬರುವುದಿತ್ತು. ಆಗ ಪ್ರವೇಶಿಸಿದಳು ನೋಡಿ ಒಬ್ಬ ಖಳನಾಯಕಿ! ಅದೆಲ್ಲಿಂದಲೋ ಬಂದು ಜಾರ್ಜ್‍ನ ಮೇಲೆ ಹದ್ದಿನಕಣ್ಣು ಹಾಕಿದ ಕ್ಯಾಬರೆನರ್ತಕಿ! ಮೊಟ್ಟೆಗಳ ರಕ್ಷಣೆಗಾಗಿ ಜಾರ್ಜ್ ಗೂಡಲ್ಲಿದ್ದಾಗ, ಮಾರ್ತಾ ಆಹಾರಕ್ಕಾಗಿ ಹೊರ ಹಾರಿದಾಗ ಆಕಾಶದಲ್ಲೇ ಅವಳಿಗೆ ಢಿಕ್ಕಿ ಹೊಡೆದು ಕೆಳಗುರುಳಿಸಿದ ಶೂರ್ಪನಖಿ! ಮಾರ್ತಾಳನ್ನು ಕೊಂದಾದರೂ ಜಾರ್ಜ್‌ನನ್ನು ತನ್ನವನಾಗಿಸುತ್ತೇನೆಂದುಕೊಂಡ, ಹರೆಯದ ಹುಚ್ಚಿನಲ್ಲಿ ಹದ್ದು ಮೀರಿದ ಹೆಣ್ಣುಹದ್ದು!

ನೆಲಕ್ಕುರುಳಿದ ಮಾರ್ತಾಳಿಗೆ ಗಂಭೀರವಾದ ಗಾಯಗಳಾದುವು. ಬಿಳಿತಲೆ ರಕ್ತಸಿಕ್ತವಾಯಿತು. ಅವಳ ಸ್ಥಿತಿಯನ್ನು ಕಂಡು ಕರುಳುಕಿತ್ತುಬಂದ ಕಾರ್ಮಿಕರು ಹೇಗೋ ಮಾಡಿ ಅವಳನ್ನು ಒಂದು ಚೀಲದಲ್ಲಿ ಹಿಡಿದು (ಗಾಳಿಸಂಚಾರಕ್ಕಾಗಿ ತೂತುಗಳಿದ್ದ ಚೀಲ) ಮೇರಿಲ್ಯಾಂಡ್‍ನ ಪರಿಸರತಜ್ಞರನ್ನು ಸಂಪರ್ಕಿಸಿದರು. ಅವರ ಶಿಫಾರಸಿನಂತೆ ಗಾಯಾಳು ಮಾರ್ತಾಳನ್ನು ಕೂಡಲೆ ಪಕ್ಕದ ರಾಜ್ಯವಾದ ಡೆಲವೇರ್‌ನಲ್ಲಿರುವ ಪಕ್ಷಿಚಿಕಿತ್ಸಾಲಯಕ್ಕೆ ಸಾಗಿಸಲಾಯಿತು. ನಾಲ್ವರು ನುರಿತ ಪಕ್ಷಿವೈದ್ಯರಿಂದ ಮಾರ್ತಾಳ ಚಿಕಿತ್ಸೆ ಆರಂಭವಾಯಿತು.

ಇತ್ತ ಗೂಡಿನಲ್ಲೇನಾಯಿತು? ಜಾರ್ಜ್ ಆ ಶೂರ್ಪನಖಿಯನ್ನೇನೂ ಒಳಸೇರಿಸಿಕೊಳ್ಳಲಿಲ್ಲ. ನಿಜಕ್ಕೂ ಶ್ರೀರಾಮನ ಅಪರಾವತಾರವೇ ಇರಬೇಕು ಆತ. ಆದರೆ ಮಾರ್ತಾ ಇಲ್ಲದೆ ವಿರಹವೇದನೆ. ಮೊಟ್ಟೆಗಳನ್ನು ನೋಡಿಕೊಳ್ಳಬೇಕು, ಅವಕ್ಕೆ ಕಾವುಕೊಡಬೇಕು, ನಾಳೆ ಅವು ಮರಿಗಳಾದ ಮೇಲೆ ಆಹಾರ ಉಣಿಸಬೇಕು, ತಾನೂ ಆಹಾರ ಹುಡುಕಿತಂದು ತಿನ್ನಬೇಕು - ಒಮ್ಮಿಂದೊಮ್ಮೆಲೇ ಜೀವನ ದುರ್ಭರವಾಯಿತು. ಬ್ರಿಡ್ಜ್ ಕಾರ್ಮಿಕರು ಜಾರ್ಜ್‍ನ ಅವಸ್ಥೆಯನ್ನು ನೋಡಿ ಮರುಗುತ್ತಿದ್ದರು. ಅವನಿಗೆ ಸಿಗುವಂತೆ ಮೀನುಗಳನ್ನು, ಮಾಂಸದ ಚೂರುಗಳನ್ನು ಬಿಸಾಡುತ್ತಿದ್ದರು. ಆದರೆ ಮಹಾಸ್ವಾಭಿಮಾನಿಯಾದ ಜಾರ್ಜ್ ಅವನ್ನೆಲ್ಲ ಮೂಸಿಯೂ ನೋಡುತ್ತಿರಲಿಲ್ಲ!

ಡೆಲವೇರ್ ಆಸ್ಪತ್ರೆಯಲ್ಲಿ ಎರಡು ತಿಂಗಳ ಶುಶ್ರೂಷೆಯ ನಂತರ ಮಾರ್ತಾ ಮರಳಿದಳು. ಜಾರ್ಜ್‌ಗೆ ಒಂದುಕಡೆ ಸಡಗರ, ಇನ್ನೊಂದೆಡೆ ತನಗೆ ಮರಿಗಳನ್ನು ಸಾಕಲಾಗದೆ ಅವು ಸತ್ತುಹೋದ ಸುದ್ದಿಯನ್ನು ಮಾರ್ತಾಳಿಗೆ ತಿಳಿಸಲಾಗದ ಸಂಕಟ. ಮಾರ್ತಾ ಕಣ್ಣೀರಿಟ್ಟಳಾದರೂ ಮತ್ತೆ ಜಾರ್ಜ್ ಜತೆಗೂಡುವಂತಾಯ್ತಲ್ಲ ಎಂದು ಸಮಾಧಾನಪಟ್ಟುಕೊಂಡಳು. ಆದದ್ದಾಗಿ ಹೋಯ್ತು, ಮುಂದಿನ ವರ್ಷವಾದರೂ ಮರಿಗಳನ್ನು ಬೆಳೆಸುವಾ ಎಂದು ಜಾರ್ಜ್ ಸಹ ಹೊಸ ಚೈತನ್ಯ ತಂದುಕೊಂಡ. ಸೇತುವೆ ಕಾಮಗಾರಿಯವರೂ ಜಾರ್ಜ್-ಮಾರ್ತಾ ಮತ್ತೆ ಜತೆಯಾಗಿ ಕಾಣಿಸಿಕೊಳ್ಳತೊಡಗಿದ್ದನ್ನು ನೋಡಿ ಖುಶಿಪಟ್ಟರು.

ತಾನೊಂದು ನೆನೆದರೆ ಮಾನವ... ಬೇರೊಂದು ಬಗೆವುದು ದೈವ... ಎಂದಿದೆಯಲ್ಲ? ಮಾನವನ ಸಂಗತಿಯೇ ಹಾಗಾದರೆ ಇನ್ನು ಹದ್ದುಗಳ ಪಾಡೇನು? ಮತ್ತೊಮ್ಮೆ ಎರಗಿತು ಮಾರ್ತಾಳ ಮೇಲೆ ವಿಧಿಯ ಕ್ರೌರ್ಯ. ಈಹಿಂದಿನ ಗಾಯಗಳೆಲ್ಲ ಮಾಸಿದ್ದರೂ ಅದೇನು ನಿಶ್ಶಕ್ತಿಯಿತ್ತೋ ತಲೆಸುತ್ತಿದಂತಾಯ್ತೊಏನೋ, ಆಹಾರ ಹುಡುಕುತ್ತ ಹಾರುತ್ತಿದ್ದ ಮಾರ್ತಾ ಒಂದು ಹೈಟೆನ್ಷನ್ ವಯರ್‌ಗೆ ತಗುಲಿ ಮತ್ತೆ ಧರೆಗುರುಳಿದಳು. ಈಗ ಬಲರೆಕ್ಕೆಯನ್ನೂ ಕೊಕ್ಕನ್ನೂ ಸಂಪೂರ್ಣವಾಗಿ ಮುರಿದುಕೊಂಡಿದ್ದಳು. ಜೀವ ಉಳಿದಿತ್ತು, ಆದರೆ ಜೀವಮಾನವಿಡೀ ವಿಕಲಚೇತನಳಾಗಿ ಜೀವಿಸುವಷ್ಟು ಮಾತ್ರ.

ಸಂಕಟದ ಸುಳಿಗಾಳಿಗೆ... ಹಕ್ಕಿ ಸುತ್ತಿ ಸುತ್ತಿತು...ಹಕ್ಕಿ ಸುತ್ತಿ ಸುತ್ತಿ ಸುತ್ತಿತು. ಈಬಾರಿ ಡೆಲವೇರ್ ಆಸ್ಪತ್ರೆಯವರು ಮಾರ್ತಾಳಿಗೆ ಚಿಕಿತ್ಸೆಕೊಟ್ಟು ಅವಳನ್ನು ಮೊದಲಿನಂತಾಗಿಸುವುದು ಅಸಾಧ್ಯವೆಂದು ತೀರ್ಮಾನಿಸಿದರು. ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾರ್ತಾಳಿಗೆ ದಯಾಮರಣವೇ ಉಳಿದದಾರಿಯೆಂದು ನಿರ್ಧರಿಸಿದರು. ಅಕ್ಟೋಬರ್‌ನ ಒಂದು ದಿನ ಮಾರಣಾಂತಿಕ ಇಂಜಕ್ಷನ್ ಚುಚ್ಚಿಸಿಕೊಂಡ ಮಾರ್ತಾ ಮೃತಳಾದಳು.

ಜಾರ್ಜ್‌ಗೆ ಮತ್ತೆ ಒಬ್ಬಂಟಿತನ. ಈಗ ಆತ ವಿಧುರ, ಸತಿವಿಯೋಗದ ದುಃಖಿ. ಆದರೂ ಶೋಕತಪ್ತನಾಗಿಯೇ ದಿನಕಳೆಯುತ್ತಿದ್ದ. ಬ್ರಿಡ್ಜ್‌ವರ್ಕರ್‍‌ಗಳ ಮಾನವೀಯತೆಯ ಹಿಡಿ ಅನುಕಂಪ ಅಷ್ಟಿಷ್ಟು, ತಿಂದರೆ ಉಂಟು ಇಲ್ಲದಿದ್ದರೆ ಇಲ್ಲ ಬೇಟೆ ಆಹಾರ ಒಂದಿಷ್ಟು. ಎಷ್ಟು ದಿನ ಒಬ್ಬಂಟಿಯಾಗಿ ಇರುತ್ತೀಯಾ? ನಾನಿಲ್ಲವೆ ಸೌಂದರ್ಯದ ಖನಿ? ನನ್ನನ್ನು ಮದುವೆಯಾಗು ಜಾರ್ಜ್, ಐ ಲವ್ ಯೂ..." ಎಂದು ಮತ್ತೆ ಬಂದಳು ಅದೇ ಶೂರ್ಪನಖಿ. ಮಾರ್ತಾಳಿಗೆ ಹೈಟೆನ್ಷನ್ ವಯರ್ ತಾಗಿ ಅಪಘಾತವಾಗುವುದರಲ್ಲಿ ಈಕೆಯ ಪಾತ್ರವಿತ್ತೋ ಇಲ್ಲವೋ ಆ ದೇವರಿಗೇ ಗೊತ್ತು.

ಜಾರ್ಜ್‌ನ ಸ್ವಾಭಿಮಾನದ ಪರಿಚಯವಿದ್ದ ಸೇತುವೆಕಾರ್ಮಿಕರು, ಅವನು ಸುಲಭದಲ್ಲಿ ಶೂರ್ಪನಖಿಗೆ ಮರುಳಾಗುವುದಿಲ್ಲವೆಂದುಕೊಂಡಿದ್ದರು. ಅವರ ಲೆಕ್ಕಾಚಾರ ತಪ್ಪಾಯಿತು. ಮಾರ್ತಾಳ ಮೇಲೆ ಮಾರಕದಾಳಿಯಿಟ್ಟು ಮನೆಹಾಳು ಮಾಡಿದ ಮಹಾಮಾರಿಗೆ ಜಾರ್ಜ್ ಶರಣಾದ. ಈಗಲ್‌ಗಳು ಎನ್‍ಡೇಂಜರ್‍ಡ್ ಸ್ಪೀಸಿಸ್ ಆಗುವುದನ್ನು ತಪ್ಪಿಸುವುದಕ್ಕೋಸ್ಕರವಾದರೂ ಮರುಮದುವೆಯಾಗಿ ಸಂತಾನೋತ್ಪತ್ತಿ ಮಾಡುವುದೇ ತಾನುಮಾಡಬಹುದಾದ ಒಳ್ಳೆಯ ಕಾರ್ಯವೆಂದು ಬಗೆದ ಜಾರ್ಜ್, ತನ್ನ ಸತಿಗೆ ಮುಳುವಾದವಳನ್ನೇ ಸತಿಯಾಗಿ ಸ್ವೀಕರಿಸಿದ.

ಸೇತುವೆಕಾರ್ಮಿಕರು ಭೂಮಿಯ ಮೇಲೆ ಇಂಥದನ್ನು ಎಷ್ಟೋ ನೋಡಿದ್ದಾರೆ. ಈಗ ಆಕಾಶದಲ್ಲೂ ನೋಡಿ ಮೂಕವಿಸ್ಮಿತರಾಗಿದ್ದಾರೆ!

- srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X