• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾರೆಟ್‌ ಕಾ ಕ್ಯಾ ರೇಟ್‌ ಹೈ?...

By Staff
|


‘ವಿಚಿತ್ರಾನ್ನ’ ಅಡುಗೆಮನೆಯಲ್ಲಿ ಈ ಬಾರಿ ಕ್ಯಾರೆಟ್‌(ಗಜ್ಜರಿ)ನದೇ ಮಾತು. ಅಂದಹಾಗೆ ನಾನಾರೀತಿಯ ಮ್ಯೂಸಿಯಂಗಳು ನಮಗೆ ಗೊತ್ತು. ಆದರೆ ‘ಗಜ್ಜರಿ’ ಮ್ಯೂಸಿಯಂ ಬಗ್ಗೆ ಕೇಳಿದ್ದೀರಾ?

  • ಶ್ರೀವತ್ಸ ಜೋಶಿ
ಒಂದ್‌ ಮೊಲದ್‌ಮರಿ ಇತ್ತು. ಅದಕ್ಕೆ ಕ್ಯಾರೆಟ್‌ ಅಂದ್ರೆ ತುಂಬಾ ಇಷ್ಟ. ಆದ್ರೆ ಯಾವ ಅಂಗಡೀಲಿ ಕ್ಯಾರೆಟ್‌ ಸಿಗುತ್ತೆ ಅಂತ ಅದಕ್ಕೆ ಗೊತ್ತಿಲ್ಲ. ಮನೆಗೆ ಹತ್ರ ಇರೋದು ಕಿರಾಣಿ ಅಂಗಡಿ ಒಂದೇ. ಪಾಪ, ದಿನಾ ಅಲ್ಲಿಗ್ಹೋಗಿ ಕ್ಯಾರೆಟ್‌ ಇದೆಯಾ? ಅಂತ ಕೇಳ್ತಿತ್ತು ಆ ಪುಟ್ಟಮರಿ. ಇಲ್ಲ, ನಮ್ಮಲ್ಲಿ ಕ್ಯಾರೆಟ್‌ ಇಲ್ಲ ಎಂದು ಅಂಗಡಿಯವ್ನಿಂದ ಹೇಳಿಸ್ಕೊಂಡು ವಾಪಸ್‌ ಬರ್ತಿತ್ತು. ಇಲ್ಲ ಎಂದು ಹೇಳಿದ್ಮೇಲೂ ಮತ್ತೆಮತ್ತೆ ಕ್ಯಾರೆಟ್‌ ಕೇಳಿಕೊಂಡು ಬರ್ತಿದ್ದ ಮೊಲದಮರಿಯ ಮೇಲೆ ಒಂದಿನ ಸಿಟ್ಟಾದ ಅಂಗಡಿಯವ್ನು - ‘‘ನೋಡು, ಇಲ್ಲಿ ನಾವು ಕ್ಯಾರೆಟ್‌ ಮಾರೋದಿಲ್ಲ. ಇನ್ನೊಂದ್ಸಲ ನೀನು ಕ್ಯಾರೆಟ್‌ ಕೇಳಿದರೆ ನಿನ್ನ ಕಿವಿಗಳಿಗೆ ಮೊಳೆಹೊಡೆದು ಇಲ್ಲೇ ಗೋಡೆಮೇಲೆ ನಿನ್ನನ್ನು ನೇತಾಡಿಸ್ತೇನೆ!’’ ಎಂದು ಗದರಿಸಿದ. ಪೆಚ್ಚುಮೋರೆ ಹಾಕಿ ಹಿಂತಿರುಗಿತು ಮೊಲದಮರಿ.

ಮಾರನೆದಿನ ಮತ್ತೆ ಪ್ರತ್ಯಕ್ಷವಾದ ಮೊಲದಮರಿಯನ್ನು ನೋಡಿ ಅಂಗಡಿಯವ್ನಿಗೆ ಆಶ್ಚರ್ಯ! ಆದರೆ ಅವತ್ತು ಅದು ಕ್ಯಾರೆಟ್‌ನ ಸುದ್ದಿ ತೆಗೆಯದೆ ‘‘ನಿಮ್ಮಲ್ಲಿ ಮೊಳೆ ಇದೆಯಾ?’’ ಅಂತ ಕೇಳ್ತು! ಅಂಗಡಿಯಲ್ಲಿ ನಿಜಕ್ಕೂ ಮೊಳೆಗಳ ದಾಸ್ತಾನು ಮುಗಿದಿತ್ತು. ‘‘ಇಲ್ಲ, ಮೊಳೆ ಇದ್ದದ್ದೆಲ್ಲ ನಿನ್ನೆಯಷ್ಟೇ ಖಾಲಿಯಾಯ್ತು’’ ಎಂದು ಅವನು ಹೇಳಿ ಬಾಯ್ಮುಚ್ಚೋದ್ರೊಳಗೆ ಛಂಗನೆ ಜಿಗಿದ ಮೊಲದಮರಿಯ ಪ್ರಶ್ನೆ - ‘‘ನಿಮ್ಮಲ್ಲಿ ಕ್ಯಾರೆಟ್‌ ಇದೆಯಾ?’’

ಇದು, ಚಾಕ್ಲೇಟು-ಚಿಪ್ಸು-ಚೀಸು ಅದುಇದು ಹಾಳುಮೂಳು ತಿಂಡಿಗಿಂತ ತರಕಾರಿ ಹಣ್ಣುಹಂಪಲು ಹೆಚ್ಚಿಗೆ ತಿನ್ನಬೇಕೆಂದು ಚಿಕ್ಕ ಮಕ್ಕಳನ್ನು ಪುಸಲಾಯಿಸಲು ಅಮ್ಮಂದಿರಿಗೆ/ಅಜ್ಜಿಯಂದಿರಿಗೆ ಹೇಳಿಮಾಡಿಸಿದಂಥ ಕಥೆ. ಹಸಿಯಾಗಲಿ ಬೇಯಿಸಿದ್ದಾಗಲೀ ತರಕಾರಿ ತಿನ್ನಲಿಕ್ಕೆ ಮಕ್ಕಳು ರಂಪ ಮಾಡೋದೂ, ಹೇಗಾದರೂ ಮಾಡಿ ತಿನ್ನುವಂತೆ ಅವರನ್ನು ಪುಸಲಾಯಿಸೋದೂ ಮನೆಮನೆಗಳ ಕಥೆ. ಆವಾಗೆಲ್ಲ ಮೊಲದಮರಿಯೋ ರಾಜಕುಮಾರಿಯೋ ಮಾಯಾನಗರಿಯೋ ಒಂದು ಕಥೆಯಾಗಿ ಬಂದು ತರಕಾರಿ ಪರವಾಗಿ ವಕಾಲತ್ತು ಮಾಡಿದರೆ ಇತ್ತ ಕಥೆ ಕೇಳಿದಂತೆಯೂ ಆಯ್ತು ಮಗುವಿನ ಹೊಟ್ಟೆಗೆ ತಾಜಾ ತರಕಾರಿ ಸೇರಿದಂತೆಯೂ ಆಯ್ತು. ಅದರಲ್ಲೂ ಕ್ಯಾರೆಟ್‌ನಂಥ ತರಕಾರಿಯ ಶಿಫಾರಸಿಗೆ ‘‘ನೋಡು, ಕ್ಯಾರೆಟ್‌ ತಿಂದಿಲ್ಲಾ ಅಂದ್ರೆ ದೊಡ್ಡವ್ನಾದ್ಮೇಲೆ ನಿನಗೆ ಸರಿಯಾಗಿ ಕಣ್ಣು ಕಾಣ್ಸೋಲ್ಲ...’’ ಎಂಬ ಹದವಾದ ಹೆದರಿಕೆ ಬೇರೆ!

ನಾವೆಲ್ಲ ಚಿಕ್ಕವರಾಗಿದ್ದಾಗ ಅಂಥ ಬೆದರಿಕೆಗಳನ್ನು ಕೇಳಿಸಿಕೊಂಡವರೇ. ಕುಟುಂಬಸಂಪ್ರದಾಯವಾಗಿ ನಮ್ಮ ಮಕ್ಕಳಿಗೂ ಅವನ್ನು ಮುಂದುವರಿಸಿದವರೇ. ಆದರೆ ಕ್ಯಾರೆಟ್‌ಗೆ ಸಂಬಂ-ಧಿಸಿದಂತೆ ಆ ಬೆದರಿಕೆ ಬರೀ ಕುರುಡು ಉಪದೇಶವಲ್ಲ, ಅದರಲ್ಲಿ ಸತ್ಯಾಂಶವೂ ಇದೆ. ಅದೇ ರೀತಿ ಕ್ಯಾರೆಟ್‌ಗೂ ಕುರುಡುನಿವಾರಣೆಗೂ ಸಂಬಂಧ ಕಲ್ಪಿಸಿ ಉಪದೇಶಿಸುವ ಪದ್ಧತಿ ಆರಂಭವಾದುದಕ್ಕೆ ಒಂದು ಐತಿಹ್ಯವೂ ಇದೆ!

ಕ್ಯಾರೆಟ್‌ (ಕನ್ನಡದಲ್ಲಿ ‘ಗಜ್ಜರಿ’) ತುಂಬಾ ಪ್ರಾಚೀನವಾದ ತರಕಾರಿಗಳ ಪೈಕಿಯದು. ಈಗಿನ ಅಫಘಾನಿಸ್ತಾನ ಪ್ರದೇಶವು ಕ್ಯಾರೆಟ್‌ನ ತವರು, ಅಲ್ಲಿ ಕ್ರಿಸ್ತಪೂರ್ವ ಶತಮಾನಗಳ ಕಾಲದಿಂದಲೂ ಕ್ಯಾರೆಟ್‌ ಬೆಳೆಯಲಾಗುತ್ತಿತ್ತು ಎಂದು ತಿಳಿದುಬಂದಿದೆಯಂತೆ. ಕ್ರಿ.ಶ 14ನೇ ಶತಮಾನದ ಹೊತ್ತಿಗೆ ಯುರೋಪಿಯನ್‌ ದೇಶಗಳಿಗೆ ಮತ್ತು ಭಾರತ ಚೈನಾ ಜಪಾನ್‌ ಮುಂತಾದ ಏಷ್ಯಾ ಪ್ರಾಂತ್ಯಗಳಿಗೆ ಕ್ಯಾರೆಟ್‌ನ ಪರಿಚಯವಾಯ್ತು ಎನ್ನುತ್ತಾರೆ. ಆಗೆಲ್ಲ ಅದನ್ನು ಬರೀ ತರಕಾರಿಯಾಗಷ್ಟೇ ಅಲ್ಲದೆ ಔಷಧರೂಪದಲ್ಲೂ ಬಳಸಲಾಗುತ್ತಿತ್ತು. ಈಗಿನ ಅಮೆರಿಕದಲ್ಲಂತೂ ಅತಿ ಜನಪ್ರಿಯ ತರಕಾರಿಗಳ ಪೈಕಿ ಆಲೂಗೆಡ್ಡೆಯ ನಂತರದ ದ್ವಿತೀಯ ಸ್ಥಾನ ಕ್ಯಾರೆಟ್‌ಗೆ.

ನಮಗೆಲ್ಲ ಗೊತ್ತಿರುವಂತೆ ದೃಷ್ಟಿಸೌಷ್ಠವಕ್ಕೆ ಅತಿ ಮುಖ್ಯವಾಗಿ ಬೇಕಾಗುವುದು ‘ಎ’ ಜೀವಸತ್ವ. ಹೆಚ್ಚಾಗಿ ಪ್ರಾಣಿಜನ್ಯ (ಮೀನೆಣ್ಣೆ, ಹಾಲು, ಬೆಣ್ಣೆ ಇತ್ಯಾದಿ) ಆಹಾರಪದಾರ್ಥಗಳಿಂದಷ್ಟೇ ನಮಗೆ ‘ಎ’ ವಿಟಮಿನ್‌ ಪೂರೈಕೆಯಾಗುವುದು. ಹಾಗಿದ್ದರೆ ಕ್ಯಾರೆಟ್‌ಗೇಕೆ ನಮ್ಮ ಕಣ್ಣುಗಳ ಆರೋಗ್ಯ ನೋಡಿಕೊಳ್ಳುವ ಹೆಚ್ಚುಗಾರಿಕೆ? ಅದಕ್ಕೆ ಉತ್ತರ ಕ್ಯಾರೆಟ್‌ನ ಬಣ್ಣದಲ್ಲೇ ಇದೆ! ಹೌದು, ಕ್ಯಾರೆಟ್‌ನ (ಮತ್ತು ಅಂತಹ ಇತರ ತರಕಾರಿಗಳ) ಬಣ್ಣಕ್ಕೆ ಕಾರಣ ಅದರಲ್ಲಿರುವ ‘ಕೆರೊಟಿನ್‌’ ರಾಸಾಯನಿಕ ಅಂಶ. ನಮ್ಮ ಶರೀರದೊಳಗೆ ಯಕೃತ್ತು (ಪಿತ್ತಜನಕಾಂಗ) ಈ ಕೆರೊಟಿನ್‌ಅನ್ನು ‘ಎ’ ಜೀವಸತ್ವವನ್ನಾಗಿ ಪರಿವರ್ತಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more