ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಟು : ಒಂದು 'ಪದಾರ್ಥ' ಚಿಂತಾಮಣಿ...

By Staff
|
Google Oneindia Kannada News

ಕೂಟ್ಟಿನ ಬಗ್ಗೆ ಅವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಕಥೆ ನನಗಿನ್ನೂ ಚೆನ್ನಾಗಿ ನೆನಪಿದೆ. ಭಲೇ ರುಚಿಕರವಾಗಿರುವ ಅದನ್ನಿಲ್ಲಿ ನಿಮಗೂ ತಿಳಿಸುತ್ತೇನೆ. ಮುಂದೆಂದಾದರೂ ಕೂಟು ತಿನ್ನುವ ಸಂದರ್ಭ ಬಂದರೆ, ಬಡಿಸಿದ್ದು ಸಾಂಬಾರೂ ಅಲ್ಲ ಪಲ್ಯವೂ ಅಲ್ಲ ಇದ್ಯಾವ ಪದಾರ್ಥದಪ್ಪಾ ಎಂಬ ಸನ್ನಿವೇಶ ಎದುರಾದರೆ ಈ ಕಥೆಯನ್ನು ನೆನಪಿಸಿಕೊಳ್ಳಿ.

  • ಶ್ರೀವತ್ಸ ಜೋಶಿ

ಕೂಟು : ಒಂದು 'ಪದಾರ್ಥ' ಚಿಂತಾಮಣಿ... ನಾನೊಬ್ಬ language buff. ಕನ್ನಡವಷ್ಟೇ ಅಲ್ಲದೆ ಬೇರೆಬೇರೆ ಭಾಷೆಗಳ ಪದಗಳನ್ನು ಗಮನಿಸುವುದು, ಅಭ್ಯಸಿಸುವುದು, ಮತ್ತು ಅವುಗಳೊಂದಿಗೆ ಆಟವಾಡುವುದೆಂದರೆ ನನಗೆ ಅಚ್ಚುಮೆಚ್ಚು. ಶಬ್ದವ್ಯುತ್ಪತ್ತಿ ಅಥವಾ etymologyಗೆ ಸಂಬಂಧಿಸಿದ ಮಾಹಿತಿಯ ಹಸಿವು ನನಗೆ ಅತಿಹೆಚ್ಚು. ಹಾಗಾಗಿಯೇ ನಾನು ಕಸ್ತೂರಿ ಮಾಸಿಕದಲ್ಲಿ ಬರುತ್ತಿದ್ದ ಪಾ.ವೆಂ. ಆಚಾರ್ಯರ ಪದಾರ್ಥ ಚಿಂತಾಮಣಿ', ಪ್ರಜಾವಾಣಿಯಲ್ಲಿ ಬರುವ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಇಗೋ ಕನ್ನಡ', ರೀಡರ್ಸ್ ಡೈಜೆಸ್ಟ್‌ನ It pays to enrich your wordpower ಮುಂತಾದ ಅಂಕಣಗಳನ್ನೆಲ್ಲ ತಪ್ಪದೇ ಓದುವುದು; ಸಮಾನ ಅಭಿರುಚಿಯ ಇತರ ಭಾಷಿಗರೊಂದಿಗೆ (ಕುಮಾರಸ್ವಾಮಿಯಂತೆ ಭಾಷೆತಪ್ಪುವವರೊಂದಿಗೆ ಅಲ್ಲ!) ಪದಪ್ರಯೋಗಗಳನ್ನು ಚರ್ಚಿಸುವುದು; ಒಂದುಭಾಷೆಯ ಪದವನ್ನು ಇನ್ನೊಂದು ಭಾಷೆಯ ಪದದೊಟ್ಟಿಗೆ ಎಸೆಯುವುದು, ಬೆಸೆಯುವುದು ಮತ್ತು ಹೊಸಹೊಸ ಅರ್ಥಗಳನ್ನು ಹೊಸೆಯುವುದು!

ತೊಂಬತ್ತರ ದಶಕದ ನಾಲ್ಕೈದು ವರ್ಷಗಳನ್ನು ನಾನು ಹೈದರಾಬಾದ್‌ನಲ್ಲಿ ಉದ್ಯೋಗನಿಮಿತ್ತವಾಗಿ ಕಳೆದದ್ದೆ. ನನ್ನ ಭಾಷಾಬತ್ತಳಿಕೆಯಲ್ಲಿ ಎಂಟನೆಯ ಮತ್ತು ಒಂಬತ್ತನೆಯ ಬಾಣಗಳಾಗಿ ತೆಲುಗು, ತಮಿಳು ಭಾಷೆಗಳು ಸೇರಿಕೊಂಡದ್ದು ಆಗಲೇ. ಜತೆಯಲ್ಲಿಯೇ ಅಲ್ಪಸ್ವಲ್ಪವಾಗಿ ಹೈದ್ರಾಬಾದಿ ಐಸಾ ಕಾಯ್ಕು ಬೋಲ್ತಾ?' ಶೈಲಿಯ ಉರ್ದು/ಹಿಂದಿ/ದಕ್ಖನಿ ಕಿಚಡಿ ಸಹ.

ಹೈದರಾಬಾದ್‌ನಲ್ಲಿ ನಾನು ಕೆಲಸಮಾಡುತ್ತಿದ್ದ ಕಂಪೆನಿಯಲ್ಲಿ ಎಕ್ಸಿಕ್ಯುಟಿವ್ ಸೆಕ್ರೆಟರಿ ಆಗಿದ್ದ ಗುರುಮೂರ್ತಿ ನಾರಾಯಣನ್ ಎಂಬ ಹೆಸರಿನ ತಮಿಳಿನವರೊಬ್ಬರು ನನಗೆ ಬಹಳ ಆಪ್ತವಾಗಿದ್ದರು. ವಯಸ್ಸಲ್ಲಿ ನನಗಿಂತ ತುಂಬ ಹಿರಿಯವರಾದರೂ ನನ್ನಂತೆಯೇ ಅವರೂ ಒಬ್ಬ language buff ಆಗಿದ್ದುದು ಬಹುಶಃ ನಮ್ಮ ದೋಸ್ತಿಗೆ ವಿಶೇಷ ಕಾರಣ. ಬಿಡುವಿನ ವೇಳೆಯ ಲೋಕಾಭಿರಾಮ ಹರಟೆಯಲ್ಲಿ ನಾವು ಕನ್ನಡ, ತೆಲುಗು, ತಮಿಳು ಈ ಮೂರೂ ಭಾಷೆಗಳ ಕಲಸುಮೇಲೋಗರ ಮಾಡಿ ಸವಿಯುತ್ತಿದ್ದೆವು. ಕೆಲವೊಮ್ಮೆ ವಾರಾಂತ್ಯಗಳಲ್ಲಿ ನಮ್ಮ ಮನೆಗಳಲ್ಲೂ ಅಡುಗೆ-ಊಟದ ಜತೆಜತೆಯಲ್ಲೇ ಈ ರೀತಿಯ ಭಾಷೆಯ ಆಟ-ಪಾಟ ಕೂಡ ಇಟ್ಟುಕೊಳ್ಳುತ್ತಿದ್ದೆವು.

ಅದೊಂದು ದಿನ ಗುರುಮೂರ್ತಿ ನನ್ನನ್ನು ಊಟಕ್ಕೆ ಕರೆದಿದ್ದರು. ಯಥಾಪ್ರಕಾರ ತಮಿಳುಬ್ರಾಹ್ಮಣ ಶೈಲಿಯ ಪೊಗದಸ್ತಾದ ಊಟ. ಅವತ್ತು ಅವರ ಮನೆಯಲ್ಲಿ ಸೋರೆಕಾಯಿಯ ಕೂಟು' ಮಾಡಿದ್ದರು. ಅವರ ಹಿತ್ತಲಲ್ಲೇ ಬೆಳೆದಿದ್ದ ತರಕಾರಿಯಿಂದ ಮಾಡಿದ್ದೆಂದು ಒಂಚೂರು ಹೆಚ್ಚಿನ ಹೆಮ್ಮೆಯಿಂದ, ಕೂಟು ಅಥವಾ ಕೂಟ್ಟು ಒಂದು ಟಿಪಿಕಲ್ ತಮಿಳಿಯನ್ ಡಿಶ್, ನಿಮಗೆ ಗೊತ್ತಿರಲಿಕ್ಕಿಲ್ಲ... ಹೇಗಿದೆ ರುಚಿ ನೋಡಿ" ಎಂದು ಅಭಿಮಾನದಿಂದ ಬಡಿಸಿದ್ದರು. ಸರಿ, ಅವತ್ತು ನಮಗೆ ಹೊಟ್ಟೆತುಂಬ ಊಟಕ್ಕೂ ಮನತುಂಬ ಚರ್ಚೆಗೂ ಗ್ರಾಸವಾದದ್ದು ಕೂಟು'!

ಕರಾವಳಿ ಕರ್ನಾಟಕದವನಾದ ನನಗೆ ಕೂಟು' ಅಂತೊಂದು ಸ್ವಾದಿಷ್ಟ ವ್ಯಂಜನದ ಹೆಸರು ಗೊತ್ತಿರದಿದ್ದರೂ ತಮಿಳಿನಲ್ಲಿ ಅದರ ವ್ಯುತ್ಪತ್ತಿ ಹೇಗೆ ಆಗಿರಬಹುದೆಂಬ ಲಾಜಿಕ್ ಫಕ್ಕನೆ ಹೊಳೆಯಿತು. ರೇಡಿಯೊ ಸಿಲೊನ್( ಶ್ರೀಲಂಕಾ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ )ನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಕನ್ನಡ ಕಾರ್ಯಕ್ರಮಕ್ಕೆ ಮೊದಲು ತಮಿಳು ಉದ್ಘೋಷಕ ಹೇಳುತ್ತಿದ್ದ ಇಲಂಗೈ ಒಲಿವರಪ್ಪು ಕೂಟ್ಟುತ್ತಾಪನಂ ಆಸಿಯ ಸೇವೈ... " ಎಂಬ ಉಲಿ ಥಟ್ಟನೆ ನೆನಪಾಯಿತು. ಕಾರ್ಪೊರೇಶನ್ ಎಂಬ ಪದದ ತದ್ಭವರೂಪದ ತಮಿಳು ಪದ ಕೂಟ್ಟುತ್ತಾಪನಂ. ಅದರದೇ ಹೃಸ್ವ ರೂಪ ಕೂಟ್ಟು' ಅಥವಾ ಕೂಟು! Corporationಗೂ ಕೂಟ್ಟು ಎಂಬ ಶಬ್ದಕ್ಕೂ ಏನು ಸಂಬಂಧವಯ್ಯಾ ಅಂತನಿಸಿದರೂ, ಕೂಟು ಎಂದರೆ ವಿವಿಧ ತರಕಾರಿಗಳು ಮತ್ತು ಬೇಳೆಕಾಳು ಬೆರೆತು ತಯಾರಾದದ್ದು ಎಂದು ಅರ್ಥೈಸಿದರೆ ಅದು incorporated ಅಥವಾ corporation ಪದಗಳ ಅರ್ಥವ್ಯಾಪ್ತಿಯೊಳಗೇ ಬರುತ್ತದೆ. ಕೂಡು,ಕೂಟ,ಒಕ್ಕೂಟ ಇತ್ಯಾದಿ ಪದಗಳಿಗೆ ತೀರಾ ಹತ್ತಿರವಾದದ್ದೇ ಕೂಟು/ಕೂಟ್ಟು.

ಹಾಗಿದ್ದರೆ ಸಾಂಬಾರ್‌ನಲ್ಲಿ, ಪಲ್ಯದಲ್ಲಿ, ಅಷ್ಟೇಕೆ ನಮ್ಮನಾಡಿನ ಬಿಸಿಬೇಳೆಭಾತಿನಲ್ಲಿ ವಿವಿಧ ತರಕಾರಿ ಮತ್ತು ಬೇಳೆಗಳು incorporate ಆಗಿಲ್ಲವೇ, ಒಂದುಗೂಡಿಲ್ಲವೇ - ಎಂಬ ಪ್ರಶ್ನೆ ಬರಬಹುದು. ಅಲ್ಲೇ ಇರುವುದು ಕೂಟ್ಟಿನ ಸ್ಪೆಷಾಲಿಟಿ. ಕೂಟ್ಟು ಎಂದರೆ ಸಾಂಬಾರಿನಂತೆ ದ್ರವವೂ ಅಲ್ಲ (ಹೊಟೆಲ್‍ಗಳಲ್ಲಿ, ಹಾಸ್ಟೆಲ್‍ಗಳಲ್ಲಿ ಸಾಂಬಾರ್ ಹೇಗೆ ದ್ರವರೂಪದಲ್ಲಿ ಇರುತ್ತದೆ, ಹೋಳು-ರಸಗಳ ಅನುಪಾತ ಎಷ್ಟಿರುತ್ತದೆ ಎಂದು ನಮಗೆಲ್ಲ ಗೊತ್ತೇ ಇದೆ), ಪಲ್ಯದಂತೆ ಘನವೂ ಅಲ್ಲ - ಅಂತಹ semi-solid semi-liquid consistency ಇದ್ದರೆ ಮಾತ್ರ ಅದು ಕೂಟ್ಟು ಎನಿಸಿಕೊಳ್ಳುತ್ತದೆ. ಕೂಟ್ಟಿನ ಇನ್ನೊಂದು ಲಕ್ಷಣವೆಂದರೆ ಅದಕ್ಕೆ ಹುಣಿಸೆಹುಳಿ ಅಥವಾ ಟೊಮೆಟೊ ಸಹ ಹಾಕಲಿಕ್ಕಿಲ್ಲ. ಸೋರೆಕಾಯಿ, ಹೀರೆಕಾಯಿ, ಚೀನಿಕಾಯಿ, ಪಡುವಲಕಾಯಿ, ಎಳೆಪಪ್ಪಾಯಿ - ಇವೆಲ್ಲ ಕೂಟ್ಟು ಮಾಡಲು ಬಹುಯೋಗ್ಯ ತರಕಾರಿಗಳು, ಚೆನ್ನಾಗಿ ಬೆಂದು ಬೇಳೆಯೊಂದಿಗೆ ಬೆರೆತುಹೋಗುವಂಥವು.

ಕೂಟ್ಟಿನ ಬಗ್ಗೆ ಅವತ್ತಿನ ನಮ್ಮ ಚರ್ಚೆಯಲ್ಲಿ ಗುರುಮೂರ್ತಿ ಹೇಳಿದ್ದ ಒಂದು ಪುರಾಣಕಥೆ ನನಗಿನ್ನೂ ಚೆನ್ನಾಗಿ ನೆನಪಿದೆ. ಭಲೇ ರುಚಿಕರವಾಗಿರುವ ಅದನ್ನಿಲ್ಲಿ ನಿಮಗೂ ತಿಳಿಸುತ್ತೇನೆ. ಮುಂದೆಂದಾದರೂ ಕೂಟು ತಿನ್ನುವ ಸಂದರ್ಭ ಬಂದರೆ, ಬಡಿಸಿದ್ದು ಸಾಂಬಾರೂ ಅಲ್ಲ ಪಲ್ಯವೂ ಅಲ್ಲ ಇದ್ಯಾವ ಪದಾರ್ಥದಪ್ಪಾ ಎಂಬ ಸನ್ನಿವೇಶ ಎದುರಾದರೆ ಈ ಕಥೆಯನ್ನು ನೆನಪಿಸಿಕೊಳ್ಳಿ.

ಹಿರಣ್ಯಕಶಿಪು ಕಠೋರ ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರ ಪಡೆದಿದ್ದನಷ್ಟೆ? ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ, ಮನೆಯ ಒಳಗಾಗಲೀ ಹೊರಗಾಗಲೀ, ಮನುಷ್ಯನಿಂದಾಗಲೀ ಪ್ರಾಣಿಯಿಂದಾಗಲೀ, ಭೂಮಿಯ ಮೇಲಾಗಲೀ ಆಕಾಶದಲ್ಲಾಗಲೀ ತನಗೆ ಸಾವು ಬರಬಾರದು ಎಂದು. ಅಂದರೆ ಹೆಚ್ಚುಕಡಿಮೆ ತನಗೆ ಅಮರತ್ವ ಸಿದ್ಧಿಸಿದಂತೆ ಎಂದು ಅವನ ಲೆಕ್ಕ. ಬ್ರಹ್ಮನೇನೋ ತಥಾಸ್ತು ಎಂದ. ಕೊನೆಗೆ ಹಿರಣ್ಯಕಶಿಪುವಿನ ಲೋಕಕಂಟಕತನ ವಿಪರೀತವಾದಾಗ ದೇವತೆಗಳೆಲ್ಲ ವಿಷ್ಣುವಿನ ಮೊರೆಹೋಗಬೇಕಾಯ್ತು. ಮಹಾವಿಷ್ಣು ನರಸಿಂಹಾವತಾರವಾಗಿ ಬಂದು ಹಿರಣ್ಯಕಶಿಪುವಿಗೆ ಬ್ರಹ್ಮ ಕೊಟ್ಟಿದ್ದ ವರಕ್ಕೆ ಯಾವುದೇ ಚ್ಯುತಿ ಬರದಂತೆ ಚಾಲಾಕಿನಿಂದ ಅವನನ್ನು ಕೊಲ್ಲಬೇಕಾಯಿತು ಎಂಬಷ್ಟು ಕಥೆ ನಮಗೆಲ್ಲ ಗೊತ್ತಿದೆ.

ಹಿರಣ್ಯಕಶಿಪು ಸಾಯುವ ಮುನ್ನ ಕೊನೆಯ ಆಸೆಯಾಗಿ ತನ್ನ ಮಾಮೂಲಿ "ಅದೂ ಅಲ್ಲ ಇದೂ ಅಲ್ಲ..." ಸ್ಟೈಲ್‌ನಲ್ಲಿ ಒಂದು ಕೋರಿಕೆ ಸಲ್ಲಿಸಿದ್ದನಂತೆ. ಅದೇನೆಂದರೆ ತನಗೆ ಸಾಂಬಾರೂ ಅಲ್ಲ, ಪಲ್ಯವೂ ಅಲ್ಲ ಅಂಥ ವ್ಯಂಜನವೊಂದು ಉಣ್ಣಲಿಕ್ಕೆ ಬೇಕು ಎಂದು. ಆಗ ಸ್ವಯಂ ಮಹಾವಿಷ್ಣುವೇ ತಯಾರುಮಾಡಿಕೊಟ್ಟ, ಹಿರಣ್ಯಕಶಿಪು ಹೊಟ್ಟೆತುಂಬ ಉಂಡ ಖಾದ್ಯ ಕೂಟ್ಟು'! ಇದು ಯಾವ ಪುರಾಣಗಳಲ್ಲೂ ಉಲ್ಲೇಖಗೊಂಡಿಲ್ಲವಾದರೂ ಹಿರಣ್ಯಕಶಿಪುವಿನ ಚಾಪೆಕೆಳಗೆ ತೂರುವಿಕೆ'ಗೆ ವಿಷ್ಣು ರಂಗೋಲೆಯಡಿಗೆ ತೂರುವ ಚಾಣಾಕ್ಷತೆಯನ್ನು ತೋರಿಸಿದ್ದಕ್ಕೆ ತಾಳೆಯಾಗುವುದಂತೂ ಹೌದು.

ಇಷ್ಟೆಲ್ಲ ಕೂಟು ಪುರಾಣ ಓದಿದ ಮೇಲೆ ಅದರ ರೆಸಿಪಿ ಎಲ್ಲಿದೆ, ಏನೇನು ಪದಾರ್ಥ ಬೇಕು, ಮಾಡೋದು ಹೇಗೆ ಅಂತೆಲ್ಲ ನೀವು ಕೇಳಬಹುದು. ಅಂತರ್ಜಾಲ ಬೃಹದಾರಣ್ಯದಲ್ಲಿ ಅಣಬೆಗಳಂತೆ ಯದ್ವಾತದ್ವಾ ಕಾಣಿಸಿಕೊಂಡಿರುವ ಯಾವುದೇ ಫುಡ್‍ಬ್ಲಾಗ್‌ ತೆರೆಯಿರಿ, ನಿಮಗಲ್ಲಿ ಕೂಟು ರೆಸಿಪಿಗಳು ಸಚಿತ್ರವಾಗಿ, ಬಾಯಲ್ಲಿ ನೀರೂರುವಷ್ಟು ವರ್ಣರಂಜಿತವಾಗಿ, ಧಾರಾಳವಾಗಿ ಸಿಗುತ್ತವೆ. Kootu ಎಂದು ಗೂಗಲ್‌ನಲ್ಲಿ ಕುಟ್ಟಿದರೂ ಸರಿಯೇ, ನೂರಾರು ಪುಟಗಳು ಪಟ್ಟಿಯಾಗುತ್ತವೆ.

ಅಂದಹಾಗೆ ತಮಿಳರಿಗೆಲ್ಲ (ನನ್ನ ಹೈದರಾಬಾದ್ ದೋಸ್ತ್ ಗುರುಮೂರ್ತಿಯೂ ಸೇರಿದಂತೆ) ಕೂಟು ಬಗ್ಗೆ ಅಪಾರ ಹೆಮ್ಮೆ ಎಂದೆನಷ್ಟೆ. ಕನ್ನಡದಲ್ಲೊಂದು ಜನಪ್ರಿಯ ಗಾದೆಯಿದೆ ಕೂತು ತಿನ್ನುವವನಿಗೆ ಕುಡಿಕೆಹೊನ್ನು ಸಾಲದು...' ಎಂದು. ತಮಿಳರ ಕೂಟು ಪ್ರೇಮಕ್ಕೆ ಅನ್ವಯಿಸುವಂತೆ ಅದನ್ನು ಕೂಟು ತಿನ್ನುವವನಿಗೆ ಗಡಿಗೆಅನ್ನ ಸಾಲದು' ಎಂದು ಅಳವಡಿಸಿಕೊಳ್ಳಬಹುದು!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X