• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗದಗಲ ಜಾಲದಲಿ ಹಪ್ಪಳ ಮಾಡಿದ ಸಪ್ಪಳ

By Staff
|

ವಿಚಿತ್ರಾನ್ನದಲ್ಲಿ ಹಲಸಿನ ಹಪ್ಪಳೋಪಾಖ್ಯಾನಕ್ಕೆ ಬಂದ ಪ್ರತಿಕ್ರಿಯೆಗಳು. ಈ ಪತ್ರಗಳು ಬರೀ ಪ್ರಶಂಸೆಯಾಗಿರದೆ ಹಪ್ಪಳದ ನೆಪದಲ್ಲಿ ‘ಬದುಕಿನ ಭಾಗ’ಗಳನ್ನು (slice of life)ಬಿಂಬಿಸಿರುವ ಪರಿಯನ್ನು ಗಮನಿಸಿ. ಇಂತಹ ಪತ್ರಗಳು ಲೇಖಕ-ಓದುಗ ಸಂವಹನ ಮೌಲ್ಯವನ್ನು ವ-ರ್ಧಿಸುತ್ತವೆ. ಪತ್ರಿಸಿದವರೆಲ್ಲರಿಗೂ ಧನ್ಯವಾದಗಳು - ಶ್ರೀವತ್ಸ ಜೋಶಿ.

*

Vichitranna Readers responses to Jackfruit Papadನಾನಂತೂ ಹಲಸಿನ ಹಪ್ಪಳವನ್ನು ಚೆನ್ನಾಗಿ ಸವಿದೆ! ತುಂಬ ಖುಶಿ ಕೊಟ್ಟಿತು. ಹಳ್ಳಿಯ ಜೀವನ ಚಿತ್ರಣ ನನಗೆ ಪ್ರಿಯವಾದ ವಿಷಯ. ಅಂಥದೊಂದು ಚಿತ್ರಣ ಇದರಲ್ಲಿ ಸೊಗಸಾಗಿ ಮೂಡಿದೆ. ಹಪ್ಪಳದ ಕಂಪ್ಲೀಟ್‌ ಲೈಫ್‌ಸೈಕಲ್‌ ಚಿತ್ರಸಂಪುಟದೊಂದಿಗೆ ಸಕತ್ತಾಗಿ ತೋರಿಸಿದ್ದೀರ. ಬಯಲುಸೀಮೆಯವಳಾದ ನನಗೆ ಹಲಸಿನಹಪ್ಪಳದ ಪರಿಚಯವಿಲ್ಲದಿದ್ದರೂ ನನ್ನ ಕಲ್ಪನೆ ಕಣ್ಣಿನ ಮುಂದೆ ಹಪ್ಪಳ ಮಾಡುವಾಗಿನ ಚಿತ್ರಗಳು ಹಾಗೆ ಮೂಡಿ ಬರುತ್ತಿದ್ದವು. ಅಬ್ಬ! ಎಷ್ಟು ಚೆನ್ನಾಗಿತ್ತು ಆ ದಿನಗಳು ಎನಿಸಿ ಹಳ್ಳಿಜೀವನ ಬದಲಾಗುತ್ತಿರುವ ಈಗಿನ ಪರಿಸ್ಥಿತಿ ನೋಡಿ ಬೇಜಾರಾಯ್ತು. ಓದಿದ ನನಗೇ ಬೇಜಾರಾದ್ರೆ ಇನ್ನು ಅದನ್ನು ಅನುಭವಿಸಿದ ನಿಮಗೆಷ್ಟು ಆಗ್ತಿರಬೇಕು.

ನನಗೆ ಬಿ.ಇ ಓದುವಾಗ ಹಾಸ್ಟೆಲ್‌ನಲ್ಲಿ ಇಬ್ಬರು ಸಾಗರ/ಸೊರಬದ ಕಡೆಯ ಹವ್ಯಕ ಗೆಳತಿಯರು ಆಪ್ತರಾಗಿದ್ದರು. ಅವರ ಊರುಗಳಿಗೆ ಹೋಗಿ ವಾರಗಟ್ಟಲೆ ಇದ್ದು ಬರುತ್ತಿದ್ದೆ. ಅಲ್ಲಿ ಹಲಸಿನ ಹಪ್ಪಳದ ರುಚಿ ನೋಡಿದ್ದೆ. ಮೊದಲದಿನ ಬಾಯಲ್ಲಿಡಲಾಗದ ಕೊಬ್ಬರಿಎಣ್ಣೆ ಘಾಟು ವಾರ ಕಳೆಯುವ ಹೊತ್ತಿಗೆ ಇಷ್ಟ ಆಗುತ್ತಿತ್ತು! ಅಲ್ಲಿ ಅಡಿಕೆ ಸುಲಿಯುವ/ಒಣಗಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ನನಗೆ ಅದೇಕೊ ಹಪ್ಪಳ ಮಾಡುವಾಗ ಅಲ್ಲಿರುವ ಅವಕಾಶ ಮಾತ್ರ ಎಂದೂ ಸಿಕ್ಕಿರಲಿಲ್ಲ. ನಿಮ್ಮ ಕಥಾನಕ ಓದಿ ನಾನೇ ಅದರಲ್ಲಿ ಭಾಗವಹಿಸಿದಂತೆ ಅನಿಸಿತು. ತುಂಬ ಚೆನ್ನಾಗಿದೆ!

- ವಂದನಾ ಪಟ್ಟಣಶೆಟ್ಟಿ; ಬೆಂಗಳೂರು

*

ಮೊದಲೇ ಹೇಳಿದ್ರೆ ನನ್ನ ಫ‚ೇವರಿಟ್‌ ಹಸಿ ಹಪ್ಪಳದ ಫೊಟೊ ನಿಮಗೆ ಕಳಿಸ್ತಿದ್ದೆ. ಅಂದಹಾಗೆ ಬಾಳೆ ಎಲೆಯಲ್ಲಿ ಹಪ್ಪಳ ಹಾಕುವುದು ಕಷ್ಟ. ನಮ್ಮನೇಲಿ ಚಾಪೆಯಲ್ಲಿ(ಪ್ಲಾಸ್ಟಿಕ್‌ ಅಲ್ಲ, ನಾರಿನ ಚಾಪೆ) ಅಥವಾ ತೆಂಗಿನ ಮಡಲಿನ ‘ತಟ್ಟಿ’ಯಲ್ಲಿ ಹಪ್ಪಳ ಹಾಕ್ತೇವೆ. ಮೊನ್ನೆ ಮೊನ್ನೆ ನನ್ನ ತಂಗಿ ನಮ್ಮೂರು ಮಂಚಿಯಲ್ಲಿ ಹಪ್ಪಳ ಮಾಡುವಾಗ ಫೊಟೊ ತೆಗೆದು ಕಳಿಸಿದ್ದಾಳೆ. ಹೆಚ್ಚುಕಡಿಮೆ ಎಲ್ಲ ಸ್ಟೆಪ್ಸ್‌ ಕವರ್‌ ಮಾಡಿದ್ದಾಳೆ. ಒಂದು ವಿಷಯ ಗೊತ್ತಾ ನಿಮಗೆ? ಮೊದಲನೇ ದಿನ ಚಾಪೆ ಅಥವಾ ತಟ್ಟಿಯಲ್ಲಿ ಒಣಗಿದ ಹಪ್ಪಳ ಮತ್ತೆ ಎರಡು ಮೂರು ದಿನ ಒಣಗುವುದು ಅಜ್ಜಿಯ ಹಳೆ ಸೀರೆಯನ್ನು ಅಂಗಳದಲ್ಲಿ ಹರಡಿ ಅದರ ಮೇಲೆ! (ಕೊನೆಪಕ್ಷ ನಮ್ಮ ಮಂಚಿ ಊರಲ್ಲಿ ಹಾಗೆ!)

ಹಪ್ಪಳ ಹಾಕಲು ತಯಾರಿ ಶುರು ಮಾಡಿದ ದಿನವೇ ಕಾರ್ಮುಗಿಲು ಬಂದು ಹೆದರಿಸುವುದು ವೆರಿ ಕಾಮನ್‌. ಹಪ್ಪಳ ಒತ್ತುತ್ತಾ ಇರುವಾಗ ಇಂಟರ್ವಲ್‌ನಲ್ಲಿ ದಣಿವಾರಿಸಲೆಂದು ಸರ್ವ್‌ ಆಗುವ ಖಾರ ತಂಪು ಮಜ್ಜಿಗೆಯ ರುಚಿ ಕುಡಿದವ್ರಿಗೆ ಮಾತ್ರ ಗೊತ್ತು! ಹಪ್ಪಳದಹಿಟ್ಟಿನ ಉಂಡೆಯನ್ನು ತೆಂಗಿನ ಎಣ್ಣೆಯಲ್ಲಿ ಮುಳುಗಿಸಿ (ಕೊಲೆಸ್ಟ್ರಾಲ್‌ ಬಗ್ಗೆ ಯೋಚನೆ ಮಾಡದೆ) ’ಗುಳುಂ’ಕರಿಸುವುದರಲ್ಲಿ ನನ್ನ ಅಜ್ಜ ಮತ್ತು ನನ್ನ ತಂಗಿಗೆ ಸ್ಪರ್ಧೆ ಇರುತ್ತದೆ! ತಂಗಿ ಅದಕ್ಕೆ ‘ನೊ ಬಾಲ್‌’ ಅಂತ ಹೆಸರಿಟ್ಟಿದ್ದಾಳೆ. ಹಪ್ಪಳದ ಉಂಡೆ ಒತ್ತುವಾಗ ಮಣೆಗಳ ಮಧ್ಯೆ ಒಂದೊಂದು ಪ್ಲಾಸ್ಟಿಕ್‌ ಹಾಳೆ ಇಡಬೇಕಲ್ವೇ ಅದು ಮರೆತು ಹೋದರೆ ಮಜಾ! ಮಣೆಗೆಲ್ಲ ಹಿಟ್ಟು ಮೆತ್ತಿ ಹಿರಿಯರಿಂದ ಬೈಯಿಸಿಕೊಂಡು... ತಂಗಿ ಅದಕ್ಕೆ ‘ವೈಡ್‌ ಬಾಲ್‌’ ಅಂತಾಳೆ.

- ರಘುನಾಥ್‌ ಎಮ್‌ ಎಸ್‌; ಮಿಷಿಗನ್‌

*

ಹಲಸಿನ ಹಪ್ಪಳ (ಕುರಿತ ವಿಚಿತ್ರಾನ್ನ) ತಿನ್ನಲಿಕ್ಕೆ ತುಂಬ ಚೆನ್ನಾಗಿತ್ತು. ಹಪ್ಪಳ ಮಾಡುವುದರಲ್ಲಿ ಕಷ್ಟಗಳು ಏನು ಎನ್ನುವುದು ನೆನೆಸಿದರೆ ಈಗಲೂ ಅಕ್ಕನಿಗೆ ಫೋನ್‌ ಮಾಡಿ ಜಗಳ ಮಾಡುವಾ ಅನ್ನಿಸುತ್ತದೆ. ಯಾಕೆಂದರೆ ಹಪ್ಪಳ ಮಾಡುವುದರಲ್ಲೂ ಕೆಲವು ಕೆಲಸಗಳು ಸುಲಭ. ಕೆಲವು ಭಾರೀ ಪ್ರಯಾಸದಾಯಕ. ನಾವು ಚಿಳ್ಳೆ ಪಿಳ್ಳೆಗಳು, ಒತ್ತಿದ ಹಪ್ಪಳವನ್ನು ಅಂಗಳಕ್ಕೆ ತೆಗದುಕೊಂಡು ಹೋದರೆ ಅಕ್ಕನಿಗೆ ಬರೀ ಅದನ್ನು ಅಲ್ಲಿ ಚಾಪೆಯ ಮೇಲೆ ಹರಡುವ ಕೆಲಸ.

ತಂದೆಯವರು ಆರಾಮವಾಗಿ ಕುಳಿತುಕೊಂಡು ಹಪ್ಪಳ ಒತ್ತಿದರೆ, ಅಮ್ಮ ಹಿಂದಿನ ದಿನ ಹಿಟ್ಟು ರುಬ್ಬಿ ಸುಸ್ತು ಆದವರೆಂದು ಅವರಿಗೂ ಸುಲಭದ ಕೆಲಸ - ಬರೀ ಉಂಡೆ ಮಾಡಿ ಬಾಳೆಲೆ ಮೇಲಿಡುವುದು. ನಮಗೆ (ಚಿಕ್ಕಮಕ್ಕಳಿಗೆ) ಹೇಳಲಿಕ್ಕೆ ಏನೂ ಗ್ರೇಟ್‌ ಕೆಲಸ ಇಲ್ಲದಿದ್ದರೂ ಜಾಸ್ತಿ ಆಯಾಸ ಆಗುವುದು ನಮಗೇ. ಆದರೆ ಹಪ್ಪಳ ಮಾಡಿದ ಮೇಲೆ ಎಲ್ಲರೂ, ’’ನೋಡು, ಮಮತಾ ಎಷ್ಟು ಚಂದವಾಗಿ ಹಪ್ಪಳ ಒಣಗಿಸಿದ್ದಾಳೆ!’’ ಎನ್ದು ಹೊಗಳುವವರೇ. ಹಾಗಾಗಿ ನೆಕ್ಸ್ಟ್‌ ಟೈಮ್‌ ಹಪ್ಪಳ ಉಂಡೆ ನಾನು ಮಾಡಲಿಕ್ಕೆಂದು ನಾನು ಹಾಗು ನನ್ನ ಅಣ್ಣನ ಜಗಳ. ಮಧ್ಯಾಹ್ನ ಬಿಸಿಲಲ್ಲಿ ಅಂಗಳದಿಂದ ಹಪ್ಪಳ ತರಲಿಕ್ಕೂ ನಾವೇ. ಯಾಕೆಂದರೆ ನಾವು ಸಣ್ಣವರು. ಹಪ್ಪಳ ಸುಲಿಯಲಿಕ್ಕೆ ನಮಗೆ ಬರುವುದಿಲ್ಲ ಎಂದು ದೊಡ್ಡವರ ಅಂಬೋಣ.

ಈಗ ಅವರ ಗುಟ್ಟು ನಮಗೆ ಗೊತ್ತಾಗುತ್ತಿದೆ. ನಮಗೆ ಆದ ಅನ್ಯಾಯಕ್ಕೆ ಯಾರಾದರೂ ಪರಿಹಾರ ಕೊಡಬಲ್ಲರೆ?

- ಡಾ। ಮೇಧಾ ಡೋಂಗ್ರೆ; ವಾರಣಾಸಿ

*

ಊರಿಂದ ಬರುವಾಗ ಊರಿನ ತಿಂಡಿ ತರುವುದು ಸಹಜ ಅಲ್ವಾ? ಹಾಗೆ ಹಲಸಿನ ಹಪ್ಪಳವನ್ನೂ ತಂದಿದ್ದೇವೆ. ಈಗಂತೂ ಊರಿನ ನೆನಪಾದಾಗೆಲ್ಲ ಮೈಕ್ರೊವೇವ್‌ನಲ್ಲಿ ಹಪ್ಪಳ ಸುಟ್ಟು ತಿನ್ನುವುದೇ ಕೆಲಸ. ಇವತ್ತು ಬೆಳಿಗ್ಗೆ ಮೈಕ್ರೊವೇವ್‌ನಲ್ಲಿ ರೆಡಿ ಮಾಡಿದ ಹಪ್ಪಳವನ್ನು ಆಫೀಸ್‌ಗೂ ತಂದಿದ್ದೆ, ಆಮೇಲೆ ತಿನ್ನಲೆಂದು. ಎಂದಿನಂತೆ ಇವತ್ತೂ ದಟ್ಸ್‌ಕನ್ನಡದಲ್ಲಿ ವಿಚಿತ್ರಾನ್ನ ಓದಲು ಹೊರಟರೆ ಅದರಲ್ಲೂ ಹಪ್ಪಳದ ಬಗ್ಗೆ ಲೇಖನ! ನಿಜವಾಗಿ ತುಂಬಾ ಆಶ್ಚರ್ಯವಾಯಿತು. ಹಾಗೆ ಯಾವಾಗಲೂ ಇವತ್ತಿಗಿಂತ ಸ್ವಲ್ಪ ತಡವಾಗಿ ಆಫೀಸಿಗೆ ಬರುವ ಕಾರಣ ಕೂಡಲೆ ಉತ್ತರಿಸಲು ಸಮಯ ಇರುವುದಿಲ್ಲ. ಓದಿಆದ ಮೇಲೆ ಕೆಲಸ ಮಾಡತೊಡಗುತ್ತೇನೆ. ವಿಚಿತ್ರಾನ್ನಕ್ಕೆ ಉತ್ತರಿಸುವುದು ಬಾಕಿಯೇ ಉಳಿಯುತ್ತದೆ. ಇವತ್ತು ಎಲ್ಲ ಕಾಕತಾಳೀಯವೆಂಬಂತೆ ಓದಿದ ಕೂಡಲೆ ಉತ್ತರಿಸಲು ಸಮಯವೂ ಇದೆ. ಮತ್ತೆ ನಾನು ಹಪ್ಪಳ ತಂದಿದ್ದು ಎಲ್ಲ ಸೇರಿ ಕೂಡಲೆ ಉತ್ತರಿಸಿದೆ.

ಅಂದಹಾಗೆ ವಿಚಿತ್ರಾನ್ನ ಓದುವಾಗ ನನ್ನ ಬಾಲ್ಯವೂ ನೆನಪಾಯಿತು. ನೀವು ಹೇಳಿದ ಎಲ್ಲ ಸ್ಟೆಪ್ಸ್‌ ನಾವು ಹಪ್ಪಳ ಮಾಡುವಾಗಲೂ ಮಾಡುತ್ತೇವೆ. ಒಂದೇ ವ್ಯತ್ಯಾಸವೆಂದರೆ ಪ್ರತೀ ಹಪ್ಪಳ ಬಾಳೆ ಎಲೆಯಲ್ಲಿ ಒಣಗಿಸೋದಲ್ಲ. ಚಾಪೆ ಮೇಲೆ ಹಾಕಿ ಒಣಗಿಸೋದು. ಮತ್ತೆ ಅದನ್ನು ಬಾಳೆನಾರಿಂದ ಕಟ್ಟುವುದು, ಅದನ್ನು ಒಣಗಿಸುವುದು ಎಲ್ಲ ಅದೇ ಪ್ರಕಾರ. ಒಟ್ಟಾರೆ ತುಂಬ ಚೆನ್ನಾಗಿತ್ತು ಈ ಲೇಖನ.

- ಸುಮನಾ ಭಟ್‌; ನ್ಯೂಯಾರ್ಕ್‌

*

ಹಪ್ಪಳದ ಬಗ್ಗೆ ವಿಚಿತ್ರಾನ್ನ ಸಂಚಿಕೆ ಸ್ವಾರಸ್ಯಕರವಾಗಿದೆ, ಹಪ್ಪಳ ತಯಾರಿ ವಿವರಗಳನ್ನು ಹಂಚಿಕೊಂಡಿದ್ದೀರಿ. ತುಂಬ ಜನರಿಗೆ (ನನ್ನಂತೆ) ಹಲಸಿನಹಪ್ಪಳ ಸ್ನೇಹಿತರ ಮನೆಯಲ್ಲಿ ಅಲ್ಲಿಇಲ್ಲಿ ತಿಂದು ಗೊತ್ತಿದೆಯೇ ವಿನಃ ಮಾಡುವ ವಿಧಾನವೇನೂ ಗೊತ್ತಿಲ್ಲ. ಸುಮಾರು 20 ವರ್ಷಗಳ ಹಿಂದೆ ನಾವೆಲ್ಲ ಸ್ನೇಹಿತರು ಬೆಂಗಳೂರಿಂದ ಕಾರ್ಕಳಕ್ಕೆ ಭೇಟಿ ಕೊಟ್ಟದ್ದು. ಅಲ್ಲಿ ನಮ್ಮ ಮಿತ್ರ ಸುದರ್ಶನ್‌ ಪಟವರ್ಧನ್‌ರ ಮನೆಯಲ್ಲಿ ಅವರಮ್ಮ ಮಾಡಿದ ಹಪ್ಪಳ ಕೊಟ್ಟಿದ್ದು ನಾವೆಲ್ಲ ತಿಂದಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಹಲಸಿನಹಪ್ಪಳದ ರುಚಿಯಂತೂ ಬಹಳ ಚೆನ್ನಾಗಿರುತ್ತದೆ.

- ಜಯಕುಮಾರ್‌; ವರ್ಜೀನಿಯಾ

*

ಕಳೆದ ತಿಂಗಳಷ್ಟೇ ನನ್ನ ನಾದಿನಿ ಹಪ್ಪಳ ತಯಾರಿಕೆಯ ಸಂಪೂರ್ಣ ವಿಧಾನದ ಫೋಟೊ ತೆಗೆದು ನಮಗೆ ಕಳಿಸಿದ್ಲು. ನಾವು ನಿಜವಾಗ್ಲೂ ಅದನ್ನೆಲ್ಲಾ ತುಂಬಾ ಮಿಸ್‌ ಮಾಡಿಕೊಳ್ತಾ ಇದ್ದೇವೆ. ನನ್ನ ಅತ್ತೆ ಮನೆಯಲ್ಲಿ ಈಗಲೂ ಹಪ್ಪಳ ತಯಾರಿ ನಡೆಯುತ್ತದೆ. ಅಜ್ಜಿ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲ ಸೇರಿ ಮಾಡುತ್ತಾರೆ.

- ರಮ್ಯಾ ರಘುನಾಥ್‌; ಡೆಟ್ರಾಯಿಟ್‌

*

ಹಲಸಿನ ಹಪ್ಪಳದ ಬಗ್ಗೆ ನಿಮ್ಮ ಲೇಖನ ಓದಿದೆ. ಒಂದು ಕ್ಷಣ ನಮ್ಮ ಮನೆಯಂಗಳದಲ್ಲಿ ಓಡಾಡಿದ ಅನುಭವವಾಯಿತು. ಧನ್ಯವಾದಗಳು. ಈ ಸಲ ಮನೆಗೆ ಹೋದಾಗ ಹಲಸಿನಹಪ್ಪಳ ಮಾಡುವ ಸಂಭ್ರಮದಲ್ಲಿ ಭಾಗಿಯಾಗಬೇಕೆಂದು ತುಂಬಾ ದಿನದಿಂದ ಕನಸು ಕಾಣುತ್ತ ಇದ್ದೆ, ಆದರೆ ಆ ಅದೃಷ್ಟ ಈಸಲ ನನಗಿರಲಿಲ್ಲ. ಹಲಸು ಬಲಿತಿರಲಿಲ್ಲ. ಆದರೆ ನಾನು ಬರುತ್ತೇನೆಂದು ಅಮ್ಮ ಎಡ್ವಾನ್ಸ್‌ ಆಗಿ ಪ್ಯಾಕ್‌ ಮಾಡಿಟ್ಟ ಹಪ್ಪಳವನ್ನು ಮಾತ್ರ ಜಾಗೃತೆಯಿಂದ ತಂದಿದ್ದೇನೆ.

ನಿಮ್ಮ ಲೇಖನ ಓದಿ, ಬಾಯಲ್ಲಿ ನೀರು ಬಂದು ಒಂದೆರಡು ಹಪ್ಪಳ ತಿಂದದ್ದೂ ಆಯಿತು. ನಾನೇನೊ ಹಪ್ಪಳ ತಂದಿದ್ದೇನೆ, ಆದರೆ ಈ ಲೇಖನ ಓದಿದ ಬಾಕಿ ಕನ್ನಡಿಗರ (ಹೊರದೇಶಗಳಲ್ಲಿರುವ ಕನ್ನಡಿಗರ) ಗತಿ ಏನು?? ಪಾಪ ಅವರೆಲ್ಲಿಂದ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುವುದು? ಇ-ಹಪ್ಪಳದ ಚಿತ್ರ ನೋಡಿ ಸಂತೃಪ್ತಿ ಪಡಬೇಕಷ್ಟೆ ಅವರೆಲ್ಲ! ಈ ಲೇಖನ ಬರೆದು ಅವರೆಲ್ಲರಿಗೂ ಭಾರೀ ಅನ್ಯಾಯ ಮಾಡ್ತಿದ್ದೀರಿ ನೀವು!

- ವೈಶಾಲಿ ದಾಮ್ಲೆ; ಲಂಡನ್‌

*

ನಾವು ಹಪ್ಪಳದ ಹಿಟ್ಟನ್ನು ಒರಳಿನಲ್ಲಿ ಗೊಟಾಯಿಸುವಾಗಲೇ ಕೇಳಿ, ಅತ್ತು, ರಂಪ ಮಾಡಿ ತಿನ್ನುತ್ತಾ ಇದ್ದೆವು! ನಾವು ಮಿಜಾರಿನವರು ಮಾಳದವರಿಗಿಂತ ಒಂದು ಕೈ ಮೇಲೆ! ಇಂದು ಬೇಕಷ್ಟು ಸಿಗುತ್ತೆ ಪ್ರೀತಿಯ ಲವಲೇಷ ಇಲ್ಲದ ಮಾರಾಟದ ಧಗ್ಡಾ ಹಪ್ಪಳ! ಅಮ್ಮ ಮಾಡುತ್ತಾ ಇದ್ದ ಆ ತೆಳು ಹಪ್ಪಳ ಈಗೆಲ್ಲಿ? ಹಣ್ಣಾದ ಹಲಸಿನ ‘ಸಿಹಿ ಹಪ್ಪಳ’ ಈಗ ಎಲ್ಲಿ? ನಮ್ಮ ನಿಮ್ಮ ನೆನಪಿನಲ್ಲಿ!

- ಎಸ್‌ ಎಂ ಪೆಜತ್ತಾಯ; ಬೆಂಗಳೂರು

*

ಊರಿಂದ ಬಂದು ಒಂದು ತಿಂಗಳಾಗುತ್ತ ಬಂತು, ಅಷ್ಟರಲ್ಲಿ ಹಲಸಿನ ಹಪ್ಪಳದ ಬಗ್ಗೆ ಓದಿದೆ. ಎರಡು ತಿಂಗಳಿನಿಂದ ದಟ್ಸ್‌ಕನ್ನಡ ಮಿಸ್‌ಮಾಡಿಕೊಂಡಿದ್ದೇನೆ. ಯಾಕೆಂದರೆ ಊರಲ್ಲಿ ಕಂಪ್ಯೂಟರ್‌ ವ್ಯವಸ್ಥೆ ಇಲ್ಲ. ಇಂಟರ್‌ನೆಟ್‌ ಬ್ರೌಸಿಂಗ್‌ ಸೆಂಟರ್‌ಗೆ ಹೋಗಬೇಕು ಅಷ್ಟೆ. ಅದಲ್ಲದೆ ನಾನು ಹೋದಾಗ ಮಾವಿನಕಾಯಿ ಅಪ್ಪೆಮಿಡಿ ಜೀರಿಗೆಮಿಡಿ ಅಂತ ಉಪ್ಪಿನಕಾಯಿಗೆ ಬರುವಷ್ಟಾಗಿತ್ತು. ಅಮ್ಮನ ಕೈಪಾಕವಾದ ರುಚಿಕರ ಉಪ್ಪಿನಕಾಯಿ ಮಾಡಿಸಿಕೊಂಡು ಬಂದಿದ್ದೇನೆ. ಆದರೆ ಹಲಸಿನಕಾಯಿ ಇನ್ನೂ ಬೆಳೆದಿರಲಿಲ್ಲವಾದ್ದರಿಂದ ಹಪ್ಪಳ ಹಾಕಲಿಕ್ಕಾಗಲಿಲ್ಲ. ಹಲಸಿನ ಸಾಂಬಾರ್‌, ಪಲ್ಯ, ಚಕ್ಕೆಪಳದ್ಯ ಮಾಡಿಕೊಂಡು ರುಚಿಕರಿಸಿದ್ದಾಯಿತು. ಅಂತೂ ಮಾರ್ಚ್‌ ಕೊನೆಯಲ್ಲಿ ನನ್ನ ಅತ್ತಿಗೆಯ ತವರುಮನೆಯಲ್ಲಿ ಬೆಳೆದ ಎರಡು ಬಕ್ಕೆ ಹಲಸಿನ ಕಾಯಿಗಳನ್ನು ತರಿಸಿ ಹಲಸಿನಕಾಯಿ ಚಿಪ್ಸ್‌ ಮಾಡಿಕೊಂಡು ಬಂದೆ. ನಂತರ ಅಮ್ಮನ ಮನೆಯಲ್ಲಿ ಹಲಸಿನ ಹಣ್ಣಿನ ಕಡುಬು ಮಾವಿನ ಹಣ್ಣಿನ ರಸಾಯನ ಎಲ್ಲ ಸೇವನೆಯಾಯಿತು. ಆದರೆ ಹಲಸಿನ ಹಪ್ಪಳ ಮಾತ್ರ ಉಳಿಯಿತು. ಅದರ ಸವಿ ಇಂದು ವಿಚಿತ್ರಾನ್ನದಲ್ಲಿ ಸಿಕ್ಕಿತು.

ನಾನು ಕಳೆದ ವರ್ಷದ ಹಪ್ಪಳವನ್ನು ತಂದು ಇಲ್ಲಿ ಬಿಸಿಲಿನಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿಟ್ಟಿದ್ದೇನೆ. ಜೊತೆಯಲ್ಲಿ ಅಮ್ಮ ಮಾಡಿದ ಉದ್ದಿನಹಪ್ಪಳ, ಮೆಣಸಿನಕಾಯಿ ಬಾಳಕ, ಬಾಳೆಕಾಯಿ ಚಿಪ್ಸ್‌, ಸೇವು-ಖಾರ, ಚಕ್ಕುಲಿ, ಚಟ್ನಿಪುಡಿ, ಸಾಂಬಾರ್‌ಪುಡಿ ಹೀಗೆ ಲಿಸ್ಟ್‌ ಉದ್ದಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ಹಲಸಿನಕಾಯಿ ಹಪ್ಪಳದ ಸವಿಯನ್ನು ನೀಡಿದ್ದಿರ. ಊರಲ್ಲಿ ಹಪ್ಪಳ ಮಾಡಲಿಕ್ಕೆ ಇನ್ನೂ ಸ್ವಲ್ಪ ಲೇಟ್‌ ಇದೆ. ಮೇ ಕೊನೆಗೆ ಸ್ವಲ್ಪ ಮಳೆ ಬೀಳುವುದಕ್ಕೆ ಪ್ರಾರಂಭವಾದ ನಂತರ ಹಪ್ಪಳ ಶುರುವಾಗುತ್ತೆ. ನೀವು ಹೇಳಿದ ಹಾಗೆ ಅಕ್ಕಂದಿರು ಭಾವಂದಿರು, ಅಕ್ಕನ ಮಕ್ಕಳು ಅಣ್ಣಂದಿರು ಅತ್ತಿಗೆಯಂದಿರು ಎಲ್ಲರೂ ಜೊತೆಯಾಗಿ ಸೇರಿ ಹಪ್ಪಳ ಮಾಡುವ ಸೊಗಸೇ ಬೇರೆ ಅಲ್ಲವೆ?

- ವಾಣಿ ಭಟ್‌; ಮಿಷಿಗನ್‌

*

ನಾವು ಬೆಂಗಳೂರಿನವರು, ಆದರೂ ನಿಮ್ಮ ಹಪ್ಪಳ ಚಟುವಟಿಕೆ ಓದಿದಾಗ ನೆನಪಿಗೆ ಬಂದದ್ದು ನಮ್ಮಜ್ಜಿ ಮಾಡುತ್ತಿದ್ದ ಹುರುಳಿ ಹಪ್ಪಳ. ಇದುವರೆಗೂ ಅಂಗಡಿಗಳಲ್ಲಿ (ಗಾಂಧಿ-ಬಜಾರ್‌ನಲ್ಲಿ ಸುಬ್ಬಮ್ಮನ ಅಂಗಡಿಯೂ ಸೇರಿದಂತೆ) ಕಂಡುಬರದಿದ್ದರೂ - ಅದೇ ಟೇಸ್ಟು ಅದೇ ಟೆಕ್ಸ್ಚರ್ರು. ಕೆಂಡದ ಒಲೆಯಲ್ಲಿ ಸುಟ್ಟು ಒಂಚೂರು ತುಪ್ಪ ಸವರಿ ತಿಂದರೆ... ಆಹಾ... ಎಂಥ ರುಚಿ! ಖಾರ ಖಾರದ ರುಚಿ! ನಮ್ಮಜ್ಜಿಯ ಪ್ರೀತಿಭರಿತ ಹಪ್ಪಳಗಳನ್ನು ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

- ಶೈಲಜಾ ಗುಂಡುರಾವ್‌; ಮೇರಿಲ್ಯಾಂಡ್‌

*

ಹೌದು, ಹಪ್ಪಳ ಎಂದರೆ ಹಲಸಿನಕಾಯಿ ಹಪ್ಪಳ. ಇವತ್ತು ಹಪ್ಪಳಾಖ್ಯಾನವನ್ನು ಓದ್ತಾ ನಾವು ಚಿಕ್ಕವರಿದ್ದಾಗ ಅಜ್ಜನ ಮನೆಲಿ ಹಪ್ಪಳ ಮಾಡ್ತಿದ್ದದ್ದು ನೆನಪಾಯ್ತು. ನಮ್ಮಲ್ಲಿ ಹಪ್ಪಳದ ಹಿಟ್ಟು ಹುಳಿಬರಲಿಕ್ಕೆ ಇಡಲ್ಲ, ನನಗೆ ನೆನಪಿರುವಹಾಗೆ. ಮತ್ತೆ ಬರೀಹಿಟ್ಟಿಗೆ ಸ್ವಲ್ಪ ಕೊಬ್ರಿಎಣ್ಣೆ ಹಾಕಿ ತಿನ್ನೊದಕ್ಕೂ ಸಕ್ಕತ್‌ ಇರುತ್ತೆ. ನಾವು ದೊಡ್ಡ ಪ್ಲಾಸ್ಟಿಕ್‌ ಕವರ್‌ ಮೇಲೆ ಹಪ್ಪಳ ಹಚ್ತಾ ಇದ್ವಿ. ಆಮೇಲೆ ಅದನ್ನ ಬಿಸ್ಲಲ್ಲಿ ಇಡೋದು. ನನಗೆ ಹಲಸಿನ ಹಪ್ಪಳಕ್ಕೆ ಜೊನಿಬೆಲ್ಲ ಮತ್ತೆ ಕಾಯಿತುರಿ ಹಾಕಿ ತಿನ್ನೋದು ತುಂಬಾ ಇಷ್ಟ. ಈಗ ಮನೆಯಲ್ಲಿ ಇದ್ದಿದ್ದಿರೆ ತಿನ್ನಬಹುದಿತ್ತು...

- ಸ್ಮಿತಾ ಟಿ ಟಿ; ಬೆಂಗಳೂರು

*

ನನಗೆ ಹಲಸಿನ ಹಪ್ಪಳವೆಂದರೆ ಪಂಚಪ್ರಾಣ. ನಾವು ಮೈಸೂರಿನಲ್ಲಿದ್ದರೂ ಅಪ್ಪ ಸಾಗರಕ್ಕೆ ಹೋಗಿಬಂದು ಮಾಡುತ್ತಿದ್ದುದರಿಂದ ಅಥವಾ ಸಾಗರದಿಂದ ಯಾರಾದರೂ ಬರುವವರಿದ್ದರೆ ಅವರ ಮೂಲಕ ಹಲಸಿನಹಪ್ಪಳ ತರಿಸಿ ತಿಂದು ಆನಂದಿಸುತ್ತಿದ್ದೆವು.

- ಜ್ಯೋತಿ ಜಯಕುಮಾರ್‌; ವರ್ಜೀನಿಯಾ

*

ಲೇಖನ ಓದಿದೆ. ಹಳೆ ದಿನಗಳ ನೆನಪಾಯ್ತು. ತುಂಬಾ ಥ್ಯಾಂಕ್ಸ್‌

- ಮೃಣಾಲಿನಿ ಕುಮಾರ್‌; ನ್ಯೂಜಿಲೆಂಡ್‌

*

ವಿಚಿತ್ರಾನ್ನ ಓದುವಾಗ ಹಲಸಿನಹಪ್ಪಳದ ಘಮ ಹಾಗೇ ಮೂಗಿಗೆ ಬಡಿದಿತ್ತು. ಮಳೆಗಾಲವಾಗಲಿ ಚಳಿಗಾಲವಾಗಲಿ ನಮ್ಮನೆಯಲ್ಲಿ ಸ್ಟಾಂಡರ್ಡ್‌ ಸಂಜೆತಿಂಡಿ ಎಂದರೆ ಅವಲಕ್ಕಿ + ಹಲಸಿನಹಪ್ಪಳ + ‘ಚಾಯ’. ಈಸಲ (ಬಹುಶಃ ಮೇ ಕೊನೆಯಲ್ಲಿ) ಊರಿಗೆ ಹೋದಾಗ ಅಮ್ಮನಿಗೆ ಹಪ್ಪಳ ಸಂಡಿಗೆ ತಯಾರಿಕೆಗೆ ನೆರವಾಗುತ್ತೇನೆ ಎಂದು ಈಗಾಗಲೇ ಹೇಳಿಟ್ಟಿದ್ದೇನೆ. ಹಪ್ಪಳಕ್ಕಿಂತ ಕಷ್ಟದ ಕೆಲ್ಸವೆಂದರೆ ‘ಉಂಡಲಕಾ’ ಅಥವಾ ‘ಉಂಡಲೆಕಾಳು’ ಮಾಡುವುದು. ಒಂದುದಿನ ಕೂತು ನೀರುಸೋಳೆಯನ್ನು ರುಬ್ಬುವುದು, ಆ ಹಿಟ್ಟನ್ನು ಉಂಡೆಗಟ್ಟುವುದು, ಕಾಯಿಸುವುದು... ಇಂಥ ಶ್ರಮ ನೀಡುವ ‘ಉಂಡಲೆ ಕಾಳು’ ತಿನ್ನಲು ಕೂತರೆ ಅರ್ಧ ಗಂಟೆ ಸಾಕು!

- ಸನತ್‌ ಕೊಲಚಿಪ್ಪು; ಮೈಸೂರು

*

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X