ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ‘ಮೋಹನ ಮುರಳಿ’ ಕರೆಯಿತೋ...

By Staff
|
Google Oneindia Kannada News


ಪುರಂದರದಾಸರ ದೇವರನಾಮ ‘ಪಿಳ್ಳಂಗೋವಿಯ ಚೆಲ್ವಕೃಷ್ಣನ...’ ಕ್ಕಿಂತ ಮಿಗಿಲಾದುದು ಸಿಕ್ಕೀತೇ ಮೋಹನ ವೇಣುಗಾನನಿನಾದದ ವೈಭವ ಉತ್ತುಂಗಕ್ಕೇರಲು? ಹೌದು, ಚಿನ್ಮಯ ಮಿಷನ್‌ ಸಭಾಂಗಣ ಒಂದೊಮ್ಮೆಗೆ ವೃಂದಾವನವೇ ಆಯಿತು. ಒಬ್ಬನಲ್ಲ ಇಬ್ಬರು ಮುರಲೀಧರರು! ಕೊಳಲಿನ ಕರಾಮತ್ತೇ ಅದು. ನೇರವಾಗಿ ಹೃದಯಕ್ಕೇ ಲಗ್ಗೆಯಿಡುವ ಸಂಗೀತವಾದ್ಯವಿದ್ದರೆ ಅದು ಕೊಳಲು ಮಾತ್ರ! ನವರಸಗಳನ್ನೂ ಸು-್ಫರಿಸುವ ಸಾಮರ್ಥ್ಯವುಳ್ಳ ರಾಗವಿದ್ದರೆ ಅದು ಮೋಹನ ಮಾತ್ರ!

ಸುಮಾರು ಮೂರು ವರ್ಷಗಳ ಹಿಂದೆ ‘ದಿ ಹಿಂದು’ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಬೆಂಗಳೂರಿನಲ್ಲಿ ಕಾಲ್‌ಸೆಂಟರ್‌ನ ಉದ್ಯೋಗಿಯಾಬ್ಬರು ತೀವ್ರವಾದ ತಲೆನೋವು (ಮೈಗ್ರೇನ್‌) ಮತ್ತಿತರ ಒತ್ತಡಗಳಿಂದ ನರಳುತ್ತಿದ್ದರಂತೆ. ವಿಧವಿಧದ ಚಿಕಿತ್ಸೆಗಳ ನಂತರವೂ ಕಾಯಿಲೆಯು ಎಳ್ಳಷ್ಟೂ ಗುಣಮುಖವಾಗದಿದ್ದಾಗ ಅವರು ಶರಣುಹೋಗಿದ್ದು ಸಂಗೀತಚಿಕಿತ್ಸೆಗೆ. ಅಪೊಲೊ ಆಸ್ಪತ್ರೆಯ ವೈದ್ಯೆಯಾಬ್ಬರು ಅವರಿಗೆ ಶಿಫಾರಸು ಮಾಡಿದ್ದು - ದಿನಕ್ಕೆ ನಾಲ್ಕು ಸಲ ತಲಾ 20 ನಿಮಿಷಗಳಷ್ಟಾದರೂ ಅವ-ಧಿಯಲ್ಲಿ ‘ಮೋಹನ’ರಾಗದ ಸಂಗೀತವನ್ನು ಆಲಿಸುವುದು! ಆರು ತಿಂಗಳ ನಂತರ ಮೈಗ್ರೇನ್‌ ಎಲ್ಲ ಮೋಹನದ ಮಾಯೆಯೆದುರು ಮಾಯವಾಗಿ ಹೋಗಿತ್ತಂತೆ!

ಆರೋಗ್ಯಕರವಾಗಿರುವಾಗಲೇ ಮೂರು ಗಂಟೆಗಳ ಡೋಸ್‌ನಲ್ಲಿ ಮೋಹನರಾಗವನ್ನು ಸವಿದ ನಮಗೆಲ್ಲ ಇನ್ನು ಪ್ರಾಯಶಃ ಜನ್ಮವಿಡೀ ಮೈಗ್ರೇನ್‌ ಮಾರಿಯ ಹೆದರಿಕೆ ಬೇಕಾಗಿಲ್ಲ. ಶಿವು-ಪ್ರಾಣೇಶ್‌-ಪ್ರವೀಣ್‌-ಮಧುಸೂದನ್‌ ಆ ಕಾರಣಕ್ಕಾಗಿಯೂ ನಮ್ಮ ಕೃತಜ್ಞತೆಗಳಿಗೆ ಪಾತ್ರರಾಗುತ್ತಾರೆ.

ಅಂದಹಾಗೆ ಪಿಳ್ಳಂಗೋವಿಯ... ಕೀರ್ತನೆಯ ಚರಣದಲ್ಲಿ ‘ಅಂದದಾಕಳ ಕಂದಕರುಗಳ ಮಂದೆಮಂದೆಯಲಿ...’ ಎಂದು ಬರುತ್ತದಲ್ಲ? ಆಗ ನನಗೆ ನೆನಪಾದದ್ದು ಮೊನ್ನೆಯಷ್ಟೇ ಶಿವಮೊಗ್ಗ ಸಮೀಪ ರಾಮಚಂದ್ರಾಪುರ ಮಠದಲ್ಲಿ ನಡೆದ ‘ವಿಶ್ವ ಗೋ ಸಮ್ಮೇಳನ’ ಸಂದರ್ಭದಲ್ಲಿ ಬೃಂದಾವನ ವೇಣುನಿನಾದವನ್ನು ಬೊಗಸೆಬೊಗಸೆಯಾಗಿ ಹೀರಿಬಂದ ಸ್ನೇಹಿತ ಶ್ರೀನಿ-ಧಿ ತನ್ನ ಬ್ಲಾಗ್‌ನಲ್ಲಿ ಬರೆದಿದ್ದ ವಾಕ್ಯಗಳು. ಅಲ್ಲಿ ಇದೇ ಪ್ರವೀಣ್‌ ಗೋಡ್ಖಿಂಡಿಯ ಅಪ್ಪ ಹಿರಿಯ ವಿದ್ವಾಂಸ ವೆಂಕಟೇಶ್‌ ಗೋಡ್ಖಿಂಡಿ ಮತ್ತು ಪ್ರವೀಣಪುತ್ರ ನಾಲ್ಕು ವರ್ಷದ ಷಡ್ಜ್‌ ಗೋಡ್ಖಿಂಡಿ ಸೇರಿದಂತೆ ರೋನು ಮುಜುಂದಾರ್‌ ಮತ್ತು ಇನ್ನೂ ಅನೇಕ ಕಲಾವಿದರ ಸಂಗಮದಲ್ಲಿ ಮುರಲಿಮಾಧುರ್ಯದ ರಸಧಾರೆ ಹರಿದಿತ್ತಂತೆ.

ಓರ್ವ ಅನಾಮಧೇಯ ಕೊಳಲ ಗಾರುಡಿಗ ಗೋಧೂಳಿ ಸಮಯ ಮತ್ತು ವಾತಾವರಣದಲ್ಲಿ ‘‘ಧರಣಿ ಮಂಡಲ ಮಧ್ಯದೊಳಗೆ...’’ ಹಾಡನ್ನು ತನ್ನ ಉಸಿರೊಳಗಿಂದ ವೇಣುವಿಗೆ ತಂದು ಕೇಳುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದನಂತೆ! ಪುಣ್ಯಕೋಟಿಯ ಹಾಡೇ ಪ್ರತಿಯಾಬ್ಬ ಕನ್ನಡಿಗನ ಹೃದಯಕ್ಕೆ ತಾಕುವಂಥದ್ದು, ಅದನ್ನು ಕೊಳಲಲ್ಲಿ ಆಲಿಸಿದರೆ ಮತ್ತಿನ್ನೇನು ಬೇಕು?

ಚಿನ್ಮಯ ಮಿಷನ್‌ನ ಸ್ವಾಮೀಜಿಯವರು ಸಂಗೀತಕಛೇರಿಯ ಬಗ್ಗೆ ಮನತುಂಬಿ ಪ್ರಶಂಸಿಸಿದರು, ಎಲ್ಲ ಕಲಾವಿದರಿಗೆ ಸತ್ಕಾರಾಶೀರ್ವಾದ ಮಾಡಿದರು. ಅನಂತರ ಕಾರ್ಯಕ್ರಮದ ಕೊನೆಯಲ್ಲಿ ಮತ್ತೆ ಉಷಾಚಾರ್‌ ಶಿಷ್ಯವೃಂದದವರು ಜತೆಸೇರಿ ಮೋಹನರಾಗದ್ದೇ ಒಂದು ತಿಲ್ಲಾನ ಪ್ರಸ್ತುತಪಡಿಸಿದರು, ಮೋಹನರಾಗದಲ್ಲೇ ಜಯಮಂಗಲಂ ನಿತ್ಯ ಶುಭಮಂಗಲಂ ಹಾಡಿದರು. ಒಂದು ಸುಂದರ ಸಂಜೆಯ ಕಾರ್ಯಕ್ರಮಕ್ಕೆ ತೆರೆ ಬಿತ್ತು.

ನಿಮಗೆ mesmerize ಪದದ ಅರ್ಥ ಗೊತ್ತಲ್ಲ? ‘ಸಮ್ಮೋಹನಗೊಳಿಸು’ ಎಂದು. ಇದು ಬರೀ someಮೋಹನವಲ್ಲ, wholesome ಮೋಹನ. ಸರ್ವರ ಮನಸೂರೆಗೊಂಡ ಸಂಪೂರ್ಣ ಸುಮಧುರ ಮೋಹನ. ಮುರಲೀರವದಲ್ಲಿ ಮಿಂದು ಪುಳಕಗೊಂಡ ಮೈಮನ!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X