ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ‘ಮೋಹನ ಮುರಳಿ’ ಕರೆಯಿತೋ...

By Staff
|
Google Oneindia Kannada News


ಮಳೆ ನಿಂತರೂ ಹನಿ ನಿಲ್ಲದು... ಶಿವು-ಪ್ರವೀಣ್‌-ಪ್ರಾಣೇಶ್‌ರ ಸಂಗೀತದ ಗುಂಗಿನಲ್ಲಿರುವ ‘ವಿಚಿತ್ರಾನ್ನ’ದ ಭಟ್ಟರು, ಈ ವಾರ ಸಂಗೀತ ಲೋಕಕ್ಕೆ ಎಲ್ಲರನ್ನೂ ಕರೆದೊಯ್ದಿದ್ದಾರೆ... ನಿಮಗಾಗಲೇ ಕೇಳಿಸುತ್ತಿರಬಹುದು... ಮೋಹನ ಮುರಳಿ...

  • ಶ್ರೀವತ್ಸ ಜೋಶಿ
Bansuri bajaye koyee…ಬಂಗಾರದ ಹೂವಿಗೆ ಪರಿಮಳ ಸೇರಿಕೊಂಡರೆ ಹೇಗಿದ್ದೀತು? ಕಬ್ಬಿನಜಲ್ಲೆಯ ಮೇಲೆಯೇ ಜೇನುಗೂಡು ಕಟ್ಟಿದರೆ ಹೇಗಿದ್ದೀತು? ಅಥವಾ - ನಾಲಗೆಯನ್ನು ಗಲ್ಲದಲಿಟ್ಟು ಹೇಳುವುದಾದರೆ - ಸ್ನಿಗ್ಧಸೌಂದರ್ಯವುಳ್ಳ ಹೆಣ್ಣು ಸದ್ಗುಣಸಂಪನ್ನೆಯೂ ಆದರೆ ಹೇಗಿರಬಹುದು?

ಆ ಉಪಮೆ-ಪ್ರತಿಮೆಗಳೆಲ್ಲ ಸದ್ಯಕ್ಕೆ ಕಲ್ಪನೆಯಲ್ಲೇ ಇರಲಿ. ಶಾಸ್ತ್ರೀಯಸಂಗೀತದಲ್ಲಿ ಅತ್ಯಂತ ಇಷ್ಟವಾದದ್ದು ಯಾವುದೆಂದು ಕೇಳಿದರೆ ಕೊಳಲುವಾದನವನ್ನಾಲಿಸುವುದು ಎಂದೂ, ಸಂಗೀತದ ಸರಿಗಮವರಿಯದೆಯೇ ಸಂಗೀತಾಭಿಮಾನಿಯಾಗಿ ಗುರುತುಹಿಡಿಯಬಲ್ಲ ರಾಗವೆಂದರೆ ‘ಮೋಹನ’ವೊಂದೇ ಎಂದೂ ಬಲುಹೆಮ್ಮೆಯಿಂದ ಹೇಳುವ ನನಗೆ An enchanting flute jugalbandi in Mohana/Bhoop ಕಾರ್ಯಕ್ರಮವೊಂದಿದೆಯೆಂದು ತಿಳಿದಾಗ ಆದ ಸಂತೋಷ ಎಷ್ಟಿರಬಹುದು! ಊಹಿಸಿಕೊಳ್ಳಿ - ಕೊಳಲುವಾದನ ಕಛೇರಿ... ಆದಿಯಿಂದ ಅಂತ್ಯದವರೆಗೂ ಮೋಹನರಾಗದ್ದೇ ವೈಖರಿ... ಮೇಲೆ ಉಲ್ಲೇಖಿಸಿದ ದ್ವಿಗುಣಸುಖದ ಕಲ್ಪನೆಗಳಿಗಿಂತಲೂ ಹತ್ತುಪಟ್ಟು ಚೇತೋಹಾರಿ... ಬಣ್ಣಿಸಿದರೆ ಖಂಡಿತವಾಗಿಯೂ ನಿಮಗಾಗಬಹುದು ಹೊಟ್ಟೆಯುರಿ.

‘ಗಂಗಾ-ಕಾವೇರಿ ಸ್ವರಲಯಸಮ್ಮಿಲನ’ವನ್ನು ಅಮೆರಿಕದ ವಿವಿಧೆಡೆಗಳಲ್ಲಿ ಇದೀಗ ಪ್ರಸ್ತುತಪಡಿಸುತ್ತಿರುವ ಬೆಂಗಳೂರಿನ ವಿದ್ವಾನ್‌ ಶಿವು (ಆನೂರ್‌ ಅನಂತಕೃಷ್ಣಶರ್ಮಾ) ಮತ್ತವರ ಶಿಷ್ಯವರ್ಗತಂಡ ನಮ್ಮ ವಾಷಿಂಗ್ಟನ್‌ ಪ್ರದೇಶದಲ್ಲಿ ಎರಡು ಬೇರೆಬೇರೆ ಕಾರ್ಯಕ್ರಮಗಳನ್ನು ಈಗಾಗಲೇ ಕೊಟ್ಟಿತ್ತು. ಮೊನ್ನೆ ಶನಿವಾರ ಸಂಜೆಯದು ಮೂರನೆಯ ಕಾರ್ಯಕ್ರಮ ‘ಏಕರಾಗಸಭಾ’ - ಕರ್ನಾಟಕಶೈಲಿಯ ಮೋಹನರಾಗ ಮತ್ತದರ ಹಿಂದುಸ್ಥಾನಿ ಸಮಾಂತರದ ಭೂಪ್‌ ರಾಗ - ಜುಗಲ್‌ಬಂದಿ.

ವಿದ್ವಾನ್‌ ಪ್ರಾಣೇಶ್‌ ದಕ್ಷಿಣಾದಿಶೈಲಿಯಲ್ಲಿ ಕೊಳಲು, ಸುರಮಣಿ ಪ್ರವೀಣ್‌ ಗೋಡ್ಖಿಂಡಿ ಉತ್ತರಾದಿ ಶೈಲಿಯಲ್ಲಿ ಬಾನ್ಸುರಿ. ಶಿವು ಅವರಿಂದ ಮೃದಂಗ ಪಕ್ಕವಾದ್ಯ, ವಿದ್ವಾನ್‌ ಮಧುಸೂದನ ಅವರಿಂದ ತಬಲಾಸಾಥಿ. ಇಲ್ಲಿನ ‘ಚಿನ್ಮಯ ಮಿಷನ್‌’ನ ಕೈಲಾಸಂ ನಿಲಯದ ಸುಂದರ ಸಭಾಂಗಣದಲ್ಲಿ -ಧೀರಾನಂದ ಸ್ವಾಮೀಜಿಯವರೂ ಸೇರಿದಂತೆ ಕಿಕ್ಕಿರಿದು ನೆರೆದಿದ್ದ ಶ್ರೋತೃವರ್ಗ.

ಸಂಗೀತಸಭೆಗೆ ಹೊಸದೊಂದು ಸೊಬಗು ಕೊಡಲಿಕ್ಕೆಂದು ಸಂಯೋಜಕಿ ಉಷಾಚಾರ್‌ ಅವರ ಶಿಷ್ಯವೃಂದದವರಿಂದ ಮೋಹನರಾಗದ ವರ್ಣ ‘ನಿನ್ನು ಕೋರಿ...’ ಮತ್ತು ತ್ಯಾಗರಾಜರ ‘ಮೋಹನ ರಾಮ ಮುಖಜಿತ ಸೋಮ...’ ಕೃತಿಗಳ ಸಮೂಹಗಾಯನದಿಂದ ಕಾರ್ಯಕ್ರಮ ಆರಂಭ. ಅದಾದಮೇಲೆ ಶಿವು-ಪ್ರವೀಣ್‌-ಪ್ರಾಣೇಶ್‌ ಅವರಿಂದ ಮೋಹನ/ಭೂಪ್‌ ರಾಗಗಳ ಬಗ್ಗೆ ಸೋದಾಹರಣ ವಿವರಣೆ. ಸಂಗೀತದಲ್ಲಿ ಅತ್ಯಂತ ಪ್ರಾಚೀನದ್ದೆಂಬ ಖ್ಯಾತಿಯ ರಾಗ ಮೋಹನ; ಹಾಗೆಯೇ ಮನುಷ್ಯನು ಕಂಡುಕೊಂಡ ಸಂಗೀತವಾದ್ಯಗಳ ಪೈಕಿ ಅತ್ಯಂತ ಪ್ರಾಚೀನದ್ದೆಂಬ ಖ್ಯಾತಿಯ ಕೊಳಲು - ಈ ಕಾರ್ಯಕ್ರಮದಲ್ಲಿ ಕೊಳಲಿನಲ್ಲಿ ಮೋಹನರಾಗ!

ಸಭಿಕರಲ್ಲಿ ಸಂಗೀತಜ್ಞಾನವುಳ್ಳವರೂ ಸಂಗೀತಾಭಿಮಾನಿಗಳಷ್ಟೇ ಆಗಿರುವವರೂ ಸಮಪ್ರಮಾಣದಲ್ಲಿದ್ದುದರಿಂದ ಸ್ವರರಾಗಸುಧೆಯ ಹಿತಮಿತವಾದ ಉಪನ್ಯಾಸ ಕೊಟ್ಟ ಶಿವು, ಮೋಹನ/ಭೂಪ್‌ ರಾಗಾಧಾರಿತ ಕೃತಿಗಳನ್ನು ಹೆಸರಿಸಿದರು. ಆಲಾಪನೆ ಸ್ವರಪ್ರಸ್ತಾರಗಳನ್ನು ಹಾಡಿ ತೋರಿಸಿದರು. ತ್ಯಾಗರಾಜರ ಅತಿಜನಪ್ರಿಯ ‘ನನು ಪಾಲಿಂಪ ನಡಚಿ ವಚ್ಚಿತಿವೋ ನಾ ಪ್ರಾಣನಾಥ...’ ಕೃತಿಯ ಒಂದು ತುಣುಕನ್ನು ಪ್ರಾಣೇಶ್‌ ನುಡಿಸಿತೋರಿಸಿದರು. (‘ನನು ಪಾಲಿಂಪ ನಡಚಿ...’ ಕೃತಿಯ ಬಗ್ಗೆ ನನ್ನ ಸಂಗ್ರಹದಲ್ಲಿರುವ ಸ್ವಾರಸ್ಯಕರ ಹೆಚ್ಚುವರಿ ಮಾಹಿತಿಯಾಂದು ಇಲ್ಲಿ ಅಪ್ರಸ್ತುತವಾಗಲಾರದೆಂದುಕೊಳ್ಳುತ್ತೇನೆ.

ತ್ಯಾಗರಾಜರ ಮಗಳ ಮದುವೆಯ ಸಂದರ್ಭದಲ್ಲಿ ಅವರ ಪಟ್ಟಶಿಷ್ಯ ವೆಂಕಟರಮಣ ಭಾಗವತರ್‌ ಎಂಬುವವರು ತನ್ನ ಹಳ್ಳಿಯಿಂದ ತಿರುವೈಯಾರು ಬಲುದೂರವಾದರೂ ನಡೆದುಕೊಂಡೇ ಬಂದು, ತ್ಯಾಗರಾಜರಿಗೆ ಶ್ರೀರಾಮಪಟ್ಟಾಭಿಷೇಕದ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ಕೊಟ್ಟರಂತೆ. ಆ ಕ್ಷಣದಲ್ಲಿ ಅತ್ಯಂತ ಭಾವುಕರಾದ ತ್ಯಾಗರಾಜರು ಆ ವರ್ಣಚಿತ್ರವನ್ನೇ ಆಲಿಂಗಿಸಿಕೊಂಡು ‘ನನ್ನನ್ನು ಕಾಪಾಡಲೆಂದು ಅಷ್ಟು ದೂರ ನಡೆದುಕೊಂಡು ಬಂದೆಯಾ ನನ್ನ ಪ್ರಭು ಶ್ರೀರಾಮಾ...’ ಎನ್ನುವ ಅರ್ಥದಲ್ಲಿ ಆ ಕೀರ್ತನೆಯನ್ನು ರಚಿಸಿದರಂತೆ).

ಅಷ್ಟುಹೊತ್ತಿಗೆಲ್ಲ ಸಂಗೀತಕಛೇರಿಗೆ ಕಳೆಯೇರತೊಡಗಿತ್ತು, ಸಭಿಕರೆಲ್ಲರ ಗ್ರಹಿಕೆಗೆ ರಾಗ ಸರಾಗವೆನಿಸತೊಡಗಿತ್ತು. ತ್ಯಾಗರಾಜರ ‘ಎವರುರಾ ನಿನುವಿನಾ...’ ರಚನೆ ಪ್ರಾಣೇಶ್‌ ಅವರಿಂದ ಮತ್ತು ಅದಕ್ಕೆ ಹೊಂದಿಕೊಂಡು ಭೂಪ್‌ನಲ್ಲೊಂದು ಬಂದಿಶ್‌ ಪ್ರವೀಣ್‌ ಗೋಡ್ಖಿಂಡಿಯವರಿಂದ. ಅದಾದ ಮೇಲೆ ಪ್ರಧಾನ ಅಂಗವಾಗಿ ರಾಗಂ-ತಾನಂ-ಪಲ್ಲವಿ ಮತ್ತು ತನಿಆವರ್ತನ. ಕೊಳಲೊಳಗೆ ಪ್ರಾಣವಾಯುವೂದಿದ ಪ್ರಾಣೇಶ್‌, ಕೊಳಲನ್ನು ವಾಯುವಾದ್ಯವಷ್ಟೇ ಅಲ್ಲ percussion instrument ಆಗಿಯೂ ಬಳಸಬಹುದೆಂಬ ಅದ್ಭುತ ಪ್ರಾವೀಣ್ಯವನ್ನು ಮೆರೆದ ಪ್ರವೀಣ್‌ - ಅಲೆಅಲೆಯಾಗಿ ಕೇಳಿಬರುವ ಕೊಳಲ ಉಲಿಯಲ್ಲೇ ಎಲ್ಲರೂ ತಲ್ಲೀನ. ಒಮ್ಮೆ ಜಲಪಾತದಂತೆ ಭೋರ್ಗರೆಯುತ್ತ, ಒಮ್ಮೆ ಜುಳುಜುಳು ಎಂದು ತಣ್ಣಗಾಗಿ ತೆವಳುತ್ತ, ಇನ್ನೊಮ್ಮೆ ಕಾರಂಜಿಯಂತೆ ಪುಟಿಯುತ್ತ ಮತ್ತೊಮ್ಮೆ ಕಲ್ಲುಬಂಡೆಗಳ ಸವರುತ್ತ ಶಬ್ದಮಾಡಿ ಹರಿವಂತೆ - ಗಂಗೆ ಹರಿಯುತ್ತಿದ್ದಾಳೋ ಕಾವೇರಿ ಹರಿಯುತ್ತಿದ್ದಾಳೋ ಅಥವಾ ಅವೆರಡರ ಸಂಗಮವಾಯಿತೋ ಒಂದೂ ಅರಿಯದ ಮಂತ್ರಮುಗ್ಧ ಸಭಿಕರಿಂದ ಎದ್ದುನಿಂತು ಕರತಾಡನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X