ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೂತ್‌ಪೇಸ್ಟು ಇಚ್ಛಾಮರಣಿಯೆ? ಚಿರಂಜೀವಿಯೆ?

By Staff
|
Google Oneindia Kannada News


ಒಂದು ಸ್ಟೋರಲ್ಲಿ ಒಮ್ಮೆ ಕೋಲ್ಗೇಟ್ ಟೂತ್‌ಪೇಸ್ಟ್ ಪ್ಯಾಕ್‌ಗಳು ತಲಾ 49 ಸೆಂಟ್ಸ್‌ಗೆ ಒಂದರಂತೆ ಡಿಸ್ಕೌಂಟ್ ಸೇಲ್‌ನಲ್ಲಿ ಇದ್ದುವು, ಸುಮ್ನೆ ಬಿಡೋದ್ಯಾಕೆ ಎಂದು ಮೂರ್ನಾಲ್ಕು ಪ್ಯಾಕ್ ಖರೀದಿಸಿ ತಂದಿದ್ದೆ (ಮನೆಯಲ್ಲಿ ನನ್ನ ರೆಗ್ಯುಲರ್ ಬ್ರಾಂಡ್ ಪೆಪ್ಸೊಡೆಂಟ್ ಇತ್ತಾದರೂ). ಚೀಪ್ ಎಂದು ತಂದ ಆ ಪ್ಯಾಕ್‌ಗಳನ್ನು ಉಪಯೋಗಿಸಲಿಲ್ಲ, ಬಾತ್‌ರೂಮ್‌ನ ಒಂದು ಕ್ಯಾಬಿನ್‌ನಲ್ಲಿ ಹಾಗೆಯೇ ಭದ್ರವಾಗಿ ಇಟ್ಟಿದ್ದೆ. ಸುಮಾರು ಎರಡು ವರ್ಷಗಳೇ ಕಳೆದಿರಬಹುದು. ಒಂದು ದಿನ ನನ್ನ ಖಾಯಂ ಟೂತ್‌ಪೇಸ್ಟು ಮುಗಿದುಹೋಯಿತು, ಅವತ್ತೇ ಸಂಜೆ ಪಾರ್ಟಿಗೆ ಬೇರೆ ಹೋಗಲಿಕ್ಕೆ ಇತ್ತಾದ್ದರಿಂದ ಟೂತ್‌ಪೇಸ್ಟ್ ಇಲ್ಲದೆ ಹಲ್ಲುಜ್ಜದೆ ಸಾಧ್ಯವೇ ಇಲ್ಲ. ಸರಿ, ವರ್ಷಗಳ ಕೆಳಗೆ ಡಿಸ್ಕೌಂಟ್ ಸೇಲ್‌ನಲ್ಲಿ ತಕೊಂಡಿದ್ದ ಆ ಪ್ಯಾಕ್‌ಗಳು ಅಲ್ಲಿಂದಲೇ ಹಲ್ಕಿರಿಯುತ್ತಿದ್ದವು.

ಒಂದನ್ನೆತ್ತಿಕೊಂಡೆ, ನೋಡುತ್ತೇನಾದರೆ ಅದು ವೆನಿಜುವೆಲಾ ದೇಶದಲ್ಲಿ ತಯಾರಾದ ಕೋಲ್ಗೇಟ್ ಪೇಸ್ಟು! ಪ್ಯಾಕ್‌ನ ಮೇಲೆ ಬರೆದಿರುವುದೆಲ್ಲ ಸ್ಪಾನಿಷ್ ಭಾಷೆಯಲ್ಲಿ. ಎಕ್ಸ್‌ಪೈರಿ ಡೇಟ್ ಅಂತೂ ಇಲ್ಲವೇ‌ಇಲ್ಲ. ಇದನ್ನು ಉಪಯೋಗಿಸುವುದಾ ಬೇಡವಾ? ನನಗೆ ಆರೋಗ್ಯ ಮುಖ್ಯವಾ ಪಾರ್ಟಿಗೆ ಹೋಗುವಾಗ ಉಸಿರಿನ ತಾಜಾತನ ಮುಖ್ಯ? ಕೊನೆಗೂ ಜೈ ಎಂದು ಅದೇ ಟೂತ್‌ಪೇಸ್ಟ್ ಉಪಯೋಗಿಸಿ ಹಲ್ಲು ತಿಕ್ಕಿದ್ದೇ ತಿಕ್ಕಿದ್ದು. ಆ ಪೇಸ್ಟು ನಿಜಕ್ಕೂ ಎಕ್ಸ್‌ಪೈರ್ ಆಗಿರಲಿಲ್ಲವೆಂದುತೋರುತ್ತದೆ, ಏಕೆಂದರೆ ಇದನ್ನು ಬರೆಯುತ್ತಿರುವವರೆಗೆ ನಾನೂ ಎಕ್ಸ್‌ಪೈರ್ ಆಗಿಲ್ಲ ನೋಡಿ!"

ಆ ಪುಸ್ತಕದಲ್ಲಿ ಮುಂದೆ ಅದೇ ಅಧ್ಯಾಯದಲ್ಲಿ, ಟೂತ್‌ಪೇಸ್ಟ್ ಪ್ಯಾಕ್/ಟ್ಯೂಬ್ ಮೇಲೆ ಎಕ್ಸ್‌ಪೈರಿ ಡೇಟ್ ಇಲ್ಲದಿರುವುದರ ಬಗ್ಗೆ ಅಮೆರಿಕದ ಪ್ರಮುಖ ಟೂತ್‌ಪೇಸ್ಟ್ ಉತ್ಪಾದಕರಾದ ಕೋಲ್ಗೇಟ್ ಪಾಮೊಲಿವ್, ಪ್ರೊಕ್ಟರ್ ಏಂಡ್ ಗ್ಯಾಂಬಲ್, ಯುನಿಲಿವರ್ ಮುಂತಾದ ಕಂಪೆನಿಗಳ ಅಧಿಕೃತ ವಕ್ತಾರರು ಒದಗಿಸಿದ ಅಂಶಗಳನ್ನು ಉಲ್ಲೇಖಿಸಿದ ವಿವರಣೆಯೂ ಇದೆ.

ಟೂತ್‌ಪೇಸ್ಟ್ ಎಂಬುದು ವಿವಿಧ ರಾಸಾಯನಿಕಗಳ ಮಿಶ್ರಣ. ಮುಖ್ಯಧಾತು ಸೋಡಿಯಂ ಫ್ಲೋರೈಡ್ - ದಂತಕುಳಿಗಳಾಗದಂತೆ ನೋಡಿಕೊಳ್ಳಲು; ತೇವಾಂಶಭರಿತ ಸಿಲಿಕಾ - ಹಲ್ಲುಗಳಿಗೆ ಪಾಲಿಶ್ ಮತ್ತು ಸ್ವಚ್ಛತೆ ಒದಗಿಸಲು; ಸೊರ್ಬಿಟಾಲ್ ಅಥವಾ ಗ್ಲಿಸರೀನ್ - ಟೂತ್‌ಪೇಸ್ಟ್ ಗಟ್ಟಿಯಾಗದೆ ನುಣುಪಾಗಿಯೇ ಇರುವಂತೆ; ಸೋಡಿಯಂ ಫಾಸ್ಫೇಟ್ - ಪೇಸ್ಟಿನ ಪಿ‌ಎಚ್ ಮೌಲ್ಯ 7ರಲ್ಲೇ ಇರುವಂತೆ; ಸೋಡಿಯಂ ಲಾರಿಲ್ ಸಲ್ಫೇಟ್ - ನೊರೆ ಬರುವುದಕ್ಕೆ; ಟೈಟಾನಿಯಂ ಡಯೊಕ್ಸೈಡ್ - ಅಪಾರದರ್ಶಕವಾಗಿಸುವುದಕ್ಕೆ; ಸೋಡಿಯಂ ಸ್ಯಾಕರಿನ್ - ರುಚಿ ಬರುವುದಕ್ಕೆ; ಬಣ್ಣ ಮತ್ತು ಪರಿಮಳ ದ್ರವ್ಯಗಳು - ಪೇಸ್ಟ್‌ಗೆ ಆಕರ್ಷಣೆಯೊದಗಿಸುವುದಕ್ಕೆ; ಅಂಟು ಮತ್ತು ನೀರು - ಎಲ್ಲ ಅಂಶಗಳನ್ನು ಸಮ್ಮಿಶ್ರವಾಗಿರಿಸುವುದಕ್ಕೆ. ಇವುಗಳ ಪೈಕಿ ಶುದ್ಧರೂಪದಲ್ಲಿ ಬಳಸಿದರೆ ಯಾವೊಂದು ಪದಾರ್ಥವೂ ಹಾಳಾಗುವಂಥದ್ದಲ್ಲ, ಆದ್ದರಿಂದಲೇ ಟೂತ್‌ಪೇಸ್ಟಿಗೆ ಎಕ್ಸ್‌ಪೈರಿ ಡೇಟ್ ಹಾಕುವ ಕ್ರಮವಿಲ್ಲ.

ಆದರೆ ಈಗ ಕಾಲ ಬದಲಾಗಿದೆ. ಇದು ನಂಬಿಕೆಗಳನ್ನು ಕೆಡಿಸುವವರ, ನಂಬಿ ಕೆಡುವವರ ಕಾಲ. ಅಮೆರಿಕದ ಆಹಾರ ಮತ್ತು ಔಷಧಿ ನಿಯಂತ್ರಣ ಸಂಸ್ಥೆಯು ತನ್ನ ನಿಯಮಗಳನ್ನು ಬಿಗಿಗೊಳಿಸಿದೆ. ಈಗ ಎಂತಹ ಶುದ್ಧ ರಾಸಾಯನಿಕಗಳನ್ನುಪಯೋಗಿಸಿದರೂ ಟೂತ್‌ಪೇಸ್ಟ್ ಪ್ಯಾಕ್‌ನ ಮೇಲೆ ಮತ್ತು ಟ್ಯೂಬ್‌ನ ಮೇಲೆ ಎಕ್ಸ್‌ಪೈರಿ ಡೇಟ್ ನಮೂದಿಸಲೇಬೇಕು. ಆಮ್ದಹಾಗೆ ಇದೀಗ ಅಮೆರಿಕದಲ್ಲಿ ಟೂತ್‌ಪೇಸ್ಟ್ ಮತ್ತೆ ಸುದ್ದಿಯಲ್ಲಿದೆ! ಇದಕ್ಕೆ ಕಾರಣ ಇಲ್ಲಿಗೆ ಆಮದಾಗುವ ಮೇಡ್ ಇನ್ ಚೈನಾ ಟೂತ್‌ಪೇಸ್ಟ್‌ಗಳಲ್ಲಿ ದುಬಾರಿ ಗ್ಲಿಸರಿನ್‌ನ ಬದಲು ಅಗ್ಗವಾದ ಡೈ ಇಥಲೀನ್ ಗ್ಲೈಕೋಲ್ಅನ್ನು ಬಳಸಿರುವುದು. ಟೂತ್‌ಪೇಸ್ಟಿನಲ್ಲಿ ಇಂತಹ ವಿಷಕಾರಕ ರಾಸಾಯನಿಕ ಸೇರಿರುವ ಬಗ್ಗೆ ಅಮೆರಿಕನ್ನರೀಗ ಚೈನಾದೇಶದ ವಿರುದ್ಧ ಹಲ್ಲುಮಸೆಯುತ್ತಿದ್ದಾರೆ. ಚೈನಾ ಈ ರಾಸಾಯನಿಕದ ಬಳಕೆಯನ್ನು ಕೂಡಲೇ ನಿಷೇಧಿಸಿ ಆಜ್ಞೆ ಹೊರಡಿಸಿದೆಯೆಂದು ಇತ್ತೀಚಿನ ಸುದ್ದಿ.

ಟೂತ್‌ಪೇಸ್ಟ್ ಕುರಿತ ಈ ಹರಟೆಯಲ್ಲೇ ಇನ್ನೊಂದು ಸ್ವಾರಸ್ಯಕರ ಸಂಗತಿಯನ್ನೂ ಸೇರಿಸಿಬಿಡುತ್ತೇನೆ. www.toothpasteworld.com ಅಂತೊಂದು ವೆಬ್‌ಸೈಟ್ ಇದೆ. ಇದರಲ್ಲಿ ಪ್ರಪಂಚದಾದ್ಯಂತದ ಟೂತ್‌ಪೇಸ್ಟ್‌ಗಳ ವಿವರಗಳೆಲ್ಲ ನಿಮಗೆ ಸಿಗುತ್ತವೆ. ವಿಧವಿಧದ ಪ್ಯಾಕ್ ವಿನ್ಯಾಸಗಳು, ಜಾಹೀರಾತುಗಳು, ವಿಲಕ್ಷಣ ವಿಶೇಷಗಳು, ಸ್ವಾರಸ್ಯಕರ ಸಂಗತಿಗಳು ಇತ್ಯಾದಿಯೆಲ್ಲ ನೋಡಲಿಕ್ಕೆ ಸಿಗುತ್ತವೆ. ಇದೊಂದು ಟೂತ್‌ಪೇಸ್ಟ್ ಇ-ಮ್ಯೂಸಿಯಂ ಎಂದೇ ಹೇಳಬಹುದು.

ಟೂತ್‌ಪೇಸ್ಟಿನ ಚರಿತ್ರೆಯನ್ನು ವಿವರಿಸುವಾಗ ಅದೇ ವೆಬ್‌ಸೈಟ್‌ನ ಒಂದು ಪುಟದಲ್ಲಿ, ಮುಖಮಾರ್ಜನದ ಪ್ರಾತರ್ವಿಧಿಯು ಬುದ್ಧನ ಕಾಲದಿಂದಲೂ ಚಾಲ್ತಿಯಲ್ಲಿದೆ ಎಂದಿದೆ. ಬುದ್ಧ ಟೂತ್‌ಬ್ರಷ್ ಮತ್ತು ಟೂತ್‌ಪೇಸ್ಟನ್ನು ಉಪಯೋಗಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ, ಆದರೆ ಮರದ ಕಡ್ಡಿಯಿಂದ ಹಲ್ಲುಜ್ಜಿ ಮುಖತೊಳೆಯುವುದು ಬುದ್ಧನ ದಿನಚರಿಯಲ್ಲಿ ಮೊದಲ ಕೆಲಸವಾಗಿರುತ್ತಿತ್ತು ಎಂದು ಬೌದ್ಧಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆಯಂತೆ. ಖಂಡಿತವಾಗಿಯೂ ಇರಬಹುದು, ಏಕೆಂದರೆ "ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ..." ಎನಿಸಿದ, ಅಥವಾ ವೈ‌ಎನ್ಕೆ ಹೇಳಿರುವಂತೆ "ತಂದೆ ಶುದ್ಧೋದನ, ಮಗ ಎದ್ಹೋದನ..." ಎನಿಸಿದ ಗೌತಮಬುದ್ಧ ರಾತೋರಾತ್ರಿ ಎದ್ದು ಹೊರಟಾಗ ಅವನ ಎಂದಿನ ಒಳ್ಳೆಯ ಅಭ್ಯಾಸದಂತೆ ಅವತ್ತೂ ಹಲ್ಲುಜ್ಜಿಕೊಂಡ ನಂತರವೇ ಪ್ರಯಾಣ ಆರಂಭಿಸಿರಬಹುದಲ್ಲವೇ?

Is there an expiry date for toothpaste?ಈ ಟೂತ್‌ಪೇಸ್ಟ್ ಮ್ಯೂಸಿಯಂನಲ್ಲಿ ನನಗೆ ಇನ್ನೊಂದು ಸ್ವಾರಸ್ಯಕರ ಮಾಹಿತಿಯೂ ಸಿಕ್ಕಿದೆ. ಅದೇನೆಂದರೆ ಭಾರತದಲ್ಲಿ ಹೊಸದಾಗಿ ಅಮರ್ ಬ್ರಾಂಡ್‌ನ ಟೂತ್‌ಪೇಸ್ಟ್ ಬಿಡುಗಡೆಯಾಗಿದೆಯಂತೆ. ನೂರು ಪ್ರತಿಶತ ಆಯುರ್ವೇದಿಕ್ ಮತ್ತು ನೂರು ಪ್ರತಿಶತ ಸಸ್ಯಾಹಾರಿ ಎಂಬ ಘೋಷಣೆ ಬೇರೆ ಅಮರವಾಣಿಯಾಗಿ ಟೂತ್‌ಪೇಸ್ಟ್ ಪ್ಯಾಕ್‌ನ ಮೇಲಿದೆ. ಎಲ್ಲ ಓಕೆ, ಈ ಅಮರ್ ಟೂತ್‌ಪೇಸ್ಟ್ ಪ್ಯಾಕ್/ಟ್ಯೂಬ್ ಮೇಲೆ ಎಕ್ಸ್‌ಪೈರಿ ಡೇಟ್ ನಮೂದಿಸಿದ್ದಿರುತ್ತದೋ ಇಲ್ಲವೋ ಎಂಬ ಕುತೂಹಲ ನನಗೆ. ಏಕೆಂದರೆ ಅಮರ್ ಎಂಬ ಹೆಸರಿದ್ದು ಎಕ್ಸ್‌ಪೈರಿ ಡೇಟ್ ಇರುವುದು ಎಂತಹ ವಿರೋಧಾಭಾಸ!

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X